ಸಾಮಾನ್ಯವಾಗಿ ಆನೆಗಳನ್ನ ಹೊರತುಪಡಿಸಿದರೆ ನಮ್ಮ ಅಡವಿಗಳಲ್ಲಿ ಅತಿದೊಡ್ಡ ಸಸ್ಯಹಾರಿ ಜೀವಿ ಕಾಡು ಕೋಣಗಳು.ಯಾವ ಮಾಂಸಹಾರಿ ಪ್ರಾಣಿಗಳು ಕಾಡು ಕೋಣಗಳನ್ನ ಭೇಟೆಯಾಡಲು ಮನಸ್ಸು ಮಾಡುವುದಿಲ್ಲ. ಕಾಡು ಕೋಣದ ಕುರಿತು ಇನ್ನಷ್ಟು ಸ್ವಾರಸ್ಯಕರ ವಿಷಯವನ್ನು ಪರಿಸರ ಸಂರಕ್ಷಕ ಗಿರಿವಾಲ್ಮೀಕಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಈ ವರ್ಷದ ಮಾಗಿಯ ಚಳಿಗಾಲ ಹಾಗೂ ರೇಖಾಂಶ, ಅಕ್ಷಾಂಶದ ಬಗ್ಗೆ ಅಲ್ಲೇ ನಿಂತಿದ್ದ RF stone ಕಲ್ಲಿಗೆ ಆತುಕೊಂಡು ನಾನು ವಿಶಾಲ್ ಗಾರ್ಡ್ ಮುಕುಂದಣ್ಣಾ ಸಂಜೆಯ ಹೊತ್ತು ಬರಲಿದ್ದ ಜೀಪಿಗಾಗಿ ಕಾಯುತ್ತ ಮಾತಾನಾಡುತ್ತಿದ್ದೇವು. ಸುತ್ತಲೂ ದಟ್ಡ ಬಿದಿರು ಮೆಳೆ ಹಬ್ಬಿದ ಅಭೇಧ್ಯ ಕಾವಲಿದ್ದ ಕಾಡದು, ವಾಹನ ಬರುವುದು ತಡವಾಗಬಹುದೆಂಬ ಗುಮಾನಿಯಿಂದ ಮೂವರು ಇಲಾಖೆಯ ವಾಹನಗಳು ಅಡ್ಡಾಡಲು ಮಾಡಿದ್ದ ಕಿರುದಾರಿಯನ್ನು ಬಳಸಿ ಮುಂದಿದ್ದ ಏರುದಿಣ್ಣೆಯ ಹತ್ತಿ ಇಳಿದೆವು. ಚಲಿಸುತ್ತಿದ್ದ ನಮ್ಮ ಬಲಕ್ಕೆ ಸುಮಾರು 60-70 ಅಡಿ ಅಂತರದಲ್ಲಿ; ಅಬ್ಬಾ ಒಂದು ದೈತ್ಯ ಕಾಟಿಯ ಶಿರದ ಪಳಿಯುಳಿಕೆ ಬಿದ್ದಿತ್ತು.
ಸುಮಾರು ದಿನಗಳ ಹಿಂದೆಯೇ ಬಿಸಿಲಿಗೆ ಕೊಳೆತು ಒಣಗಿ ಎತ್ತಿಕೊಳ್ಳುವಷ್ಟು ಹಗುರವಾಗಿತ್ತು ಮತ್ತು ಸ್ಥಿತಿಯಲ್ಲಿತ್ತು ಅದು, ನಿಧಾನವಾಗಿ ಸುತ್ತಲಿನ ವಾತಾವರಣ ಮಬ್ಬಾಗುತ್ತಿತ್ತು ನಿತ್ಯದ ಕರ್ತವ್ಯ ಮುಗಿಸಿ ಮರೆಯಾಗಲು ಅನುವಾಗುತ್ತಿದ್ದ ಪಶ್ಚಿಮದ ಪೊಡವಿಯ ಸೂರ್ಯನ ಬೆಳಕು ಕಾಟಿಯ ಖಾಲಿ ಕಣ್ಣುಗಳಲ್ಲಿ ಹಾದು ಹೋಗಿ ಅದಕ್ಕೆ ಜೀವ ಬರಿಸುವಂತೆ ಭಾಸವಾಗುತ್ತಿತ್ತು.
ಸಾಮಾನ್ಯವಾಗಿ ಆನೆಗಳನ್ನ ಹೊರತುಪಡಿಸಿದರೆ ನಮ್ಮ ಅಡವಿಗಳಲ್ಲಿ ಅತಿದೊಡ್ಡ ಸಸ್ಯಹಾರಿ ಜೀವಿ ಕಾಡು ಕೋಣಗಳು,ಬಲಿಷ್ಠ ಅರ್ಧ ಚಂದ್ರರ್ಕಾ ಆಕೃತಿಯ ಕೊಂಬಗಳು ಎಂಥ ಹಸಿದ ಹುಲಿ,ಚಿರತೆ,ಸಿಂಹಗಳನ್ನು ಮಾರಣಾಂತಿಕವಾಗಿ ಘಾಸಿಗೊಳಿಸುವಷ್ಟು ಶಕ್ತವಿರುವ ವಜ್ರದೇಹಿಯಂತ ಸಾಧು ಪ್ರಾಣಿಗಳು.ಹುಲ್ಲು, ಎಳೆಬಿದಿರುನ್ನು ಸಾಮಾನ್ಯವಾಗಿ ಸೇವಿಸುತ್ತದೆ.
ಅಷ್ಟು ಸುಲಭವಾಗಿ ಯಾವ ಮಾಂಸಹಾರಿ ಪ್ರಾಣಿಗಳು ಕಾಡು ಕೋಣಗಳನ್ನ ಭೇಟೆಯಾಡಲು ಮನಸ್ಸು ಮಾಡುವುದಿಲ್ಲ ಅರೆಕ್ಷಣ ಅವುಗಳು ಕೂಡಾ ದಾಳಿಗೂ ಮುಂಚೆ ಯೋಚಿಸಿ ಬೇಟೆಯ ಸಂಚು ರೂಪಿಸುತ್ತವೆ. ಏಕೆಂದರೆ ಅಷ್ಟು ಬಲಿಷ್ಠ ಜೀವಿಗಳು ಯಾಮಾರಿದರೆ ದಾಳಿಕೋರ ಪ್ರಾಣಿಗಳನ್ನು ಯಮಪುರಿಗೆ ಅಟ್ಟಿ ಬಿಡುತ್ತವೆ.
ಆದರೆ ಇಲ್ಲಿಯ ಪಳಿಯುಳಿಕೆ ಮೇಲೆ ಕರಾರುವಕ್ಕಾದ ಸಂಚು ನಡೆದಿದೆ ಭೇಟೆ ಬೀಳಿಸಿಲು ದಾಳಿಕೋರ ಪ್ರಾಣಿಗಳು ಆಯ್ಕೆ ಮಾಡಿಕೊಂಡ ಸ್ಥಿಮಿತ ಪ್ರದೇಶದ ಆಯಾಕಟ್ಟಿನ ಜಾಗ ಮೂಲೆ ಚೌಕಟ್ಟುಗಳು ಯಾವ ಕಾರಣಕ್ಕೂ ಬಲಿಪ್ರಾಣಿ ಮಿಸ್ಸಾಗದಂತೆ ಸ್ಥಳದ ಆಯ್ಕೆ ಇಲ್ಲಿ ನಡೆದಿರುತ್ತದೆ, ಅಲ್ಲದೇ ಮೂರ್ನಾಲ್ಕು ಮಾಂಸಹಾರಿ ಪ್ರಾಣಿಗಳು ದೈತ್ಯಾಕಾರದ ಕಾಟಿಯನ್ನು ಕೆಡುವಿರುವಲ್ಲಿ ಸಂದೇಹವಿಲ್ಲ ಅವುಗಳ ಬೇಟೆಯ ಶಿಸ್ತು ಪಂಜಿನ ಬಲಯುತ ಕೋರೆ ಹಲ್ಲುಗಳ ಹಿಡಿತಕ್ಕೆ ಟನ್ಗಟ್ಟಲೇ ತೂಗುವ ಕಾಟಿ ಒದ್ದಾಡಿ ಕೊಸರಾಡಿಕೊಂಡು ಬಲಿಯಾಗಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು.
ಕಾಟಿಯ ಕಳೇಬರ ನೋಡುತ್ತಾ ಮುಕುಂದಣ್ಣಾನ ಹೆಗಲ ಮೇಲೆ ಕೈ ಹಾಕಿ ಸೃಷ್ಠಿಯಲ್ಲಿ ಸಾವು ಎಲ್ಲಾ ಜೀವಿಗಳಿಗೂ ಬಂದೇ ಬರುತ್ತದೆ. ಆದರೆ ನಿತ್ಯದ ಚಲನಶಕ್ತಿಯನ್ನು ಯಾವ ಜೀವಿಗಳು ತ್ಯಜಿಸಲಾರವೆಂದೂ ಇಲ್ಲಿ ಉಳಿದು ಉಸಿರಾಡುತ್ತಿರುವ ಬದುಕು ಹೇಳುತ್ತಿರುತ್ತದೆ, ಸಾವಿರದ ಜೀವಿಗಳು ಈ ನಿಸರ್ಗದಲ್ಲಿ ಸಿಗಲಾರದೇನೋ ನಿಜ; ಆದರೆ ಈ ಪರಿಸರ ವ್ಯವಸ್ಥೆಯಲ್ಲಿ ಉಸಿರು ಚೆಲ್ಲುವ ಪ್ರತಿಯೊಂದು ಜೀವಿಯ ಹಿಂದೆ ಸಾವಿರ ದುಃಖಗಳಿರುತ್ತವೆ ಸಂಘರ್ಷದ ಕಥೆಗಳಿರುತ್ತವೆ,ಪ್ರಕೃತಿಯಲ್ಲಿ ಎಡಬಿಡದೇ ಬದುಕಲು Genuine ಆದ ನಿರಂತರ ಹೋರಾಟವಿರುತ್ತದೆ.
ಸಾರ್ವಕಾಲಿಕವಾದ ಅಪಾಯ ಅನಿಶ್ಚಿತತೆಗಳು ಬದುಕಿಗೆ ತೊಡರಾಗಿ ಅಂತಿಮವಾಗಿ ಪಾರಿಸಾರಿಕ ವ್ಯವಸ್ಥೆಯಲ್ಲಿ ಸಾವು ವಿಜೃಂಭಿಸಿರುತ್ತದೆ ನೋಡೆಂದು, ಅನುಭವಿ ದಾರ್ಶನಿಕನಂತೆ ಸಂಜೆ ಸೂರ್ಯನ ಹೊನ್ನ ಬೆಳಕಿನ ಹಿನ್ನೆಲೆಯಲ್ಲಿ ಇಬ್ಬರಿಗೂ ಗೀತೋಪದೇಶ ಮಾಡುತ್ತಿದ್ದೆ.
ಆಗ ಇದ್ದಕ್ಕಿದ್ದಂತೆ ಅಲ್ಲಿಂದ ಹೊರಡಲು ತಡ ಮಾಡಿದ್ದಕ್ಕೆ ಕೆಂಡಮಂಡಲನಾದ ಡ್ರೈವರ್ ಸಾಗರ್ ನಮ್ಮನ್ನು ಕೂಗುತ್ತಾ ಕಾಡಿನ ಮೌನ ಮುರಿದು ವಾಹನದ ಕೀ ಇಗ್ನೇಷನ್ ತಿರುವಿದ, ಗಾಡಿ ಸ್ಟಾರ್ಟ್ ಆದ ಸದ್ದಿಗೆ ವಾಸ್ತವಕ್ಕೆ ಬಂದ ನಾವುಗಳು ಚಲಿಸುವ ಜೀಪನ್ನು ಅದರ ಹಿಂದೆ ಓಡುತ್ತಾ ಹತ್ತಿದೇವು ಜೀಪ್ ಕಾಡಿನ ಅಸ್ಪಷ್ಟ ಕತ್ತಲನ್ನು ಸೀಳುತ್ತಾ ಕ್ಯಾಂಪೆನೆಡೆಗೆ ಹೊರಟಿತು..
- ಗಿರಿವಾಲ್ಮೀಕಿ – ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರವಾದಿ.