ಯೋಗದ ಎಂದರೇನು.? – ಲಕ್ಷ್ಮಣ ಗಂಗಾರಾಮ ಬೋಡಕೆ

ಯೋಗ ಎಂದರೆ ಉತ್ತಮವಾದದ್ದನ್ನು ತಲುಪಲಿಕ್ಕಿರುವ ಸಾಧನ.ಯೋಗ ಅಂದರೆ ಸಾಧಿಸಲಾಗದ್ದನ್ನು ಸಾಧಿಸುವುದು,ಶ್ರೀ ವೇದವ್ಯಾಸರು ವಿಷ್ಣುಪುರಾಣದಲ್ಲಿ ಯೋಗದ ಅರ್ಥವಿವರಣೆಯನ್ನು ಹೀಗೆ ವಿವರಿಸುತ್ತಾರೆ, ಮುಂದೆ ಓದಿ…

‘ ತಸ್ಯ: ಬ್ರಹ್ಮಣಿ ಸಂಯೋಗ :

ಯೋಗ: ಇತ್ಯಭಿಧೀಯತೆ.` ಆತ್ಮವನ್ನು ಪರಮಾತ್ಮನ ಜೊತೆಗೆ ಒಂದು ಗೂಡಿಸುವುದೇ ಯೋಗವೆಂದು ಕರೆಯಲ್ಪಡುತ್ತದೆ ಅಥವಾ ನಮ್ಮನ್ನು ಭಗವಂತನ ಸಂಕಲ್ಪಕ್ಕೆ ಅನುಗುಣವಾಗಿ ರೂಪಿಸಿಕೊಳ್ಳುವುದೇ ಯೋಗವೆನಿಸುತ್ತದೆ.ಒಟ್ಟಾರೆ ಹೇಳುವುದಾದರೆ ಶರೀರ, ಮನಸ್ಸು ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಂದಿಗೆ ಸಂಯೋಜಿಸುವುದೇ ಯೋಗ.

‘ ಯೋಗ` ಎಂಬ ಶಬ್ದವು ಸಂಸ್ಕೃತದ ಯುಜ್ ಎಂಬ ಮೂಲ ಧಾತುವಿನಿಂದ ಬಂದಿದೆ.ಕೂಡಿಸು-ಸೇರಿಸು, ಜೋಡಿಸು -ಒಂದಾಗಿಸು ಎಂಬಿತ್ಯಾದಿ ಅರ್ಥ ಬರುತ್ತದೆ.ಅತ್ಯಲ್ಪವಾದ ಜೀವಾತ್ಮನನ್ನು ಅತ್ಯುತ್ಕೃಷ್ಟವಾದ ಪರಮಾತ್ಮನ ಬಳಿ ಕರೆತರುವುದೇ ಯೋಗವೆನಿಸುತ್ತದೆ.ಯೋಗ ಸಾಧನೆಯಿಂದ ಬುದ್ಧಿಯ ಚಾಂಚಲ್ಯವನ್ನು ನಿಯಂತ್ರಣದಲ್ಲಿರಸಬಹುದು; ನೋವು ಮತ್ತು ದುಃಖದಿಂದ ದೂರ ಇರಬಹುದು.ಆದುದರಿಂದ, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಉಂಟಾಗಬೇಕಾದರೆ, ನಿತ್ಯಾನಂದ ಪ್ರಾಪ್ತಿಯಾಗಬೇಕಾದರೆ ಯೋಗ ಮಾರ್ಗವು ಅತ್ಯುನ್ನತವಾದದ್ದಾಗಿದೆ.

ಶ್ರೀಮದ್ಭಗವದ್ಗೀತೆ ಯೋಗದ ಆಧಾರ ಗ್ರಂಥ.ಅದರಲ್ಲಿ ಶ್ರೀ ಕೃಷ್ಣ ಯೋಗವನ್ನು ಹೀಗೆ ನಿರೂಪಿಸುತ್ತಾನೆ.

1. ಯೋಗ: ಕರ್ಮಸು ಕೌಶಲಮ್ – ಕೌಶಲಪೂರ್ಣ ಕೆಲಸವೇ ಯೋಗ.

2. ಸಮತ್ವಂ ಯೋಗ ಉಚ್ಯತೇ – ಸಮಭಾವೇ ಯೋಗ.

3. ದುಃಖ ಸಂಯೋಗ ವಿಯೋಗಂ ಯೋಗ ಸಂಜ್ಞಿತಂ – ದುಃಖದ ಮೂಲದಿಂದ ದೂರ ಇರುವುದೇ ಯೋಗ.

ಮನುಷ್ಯನ ಸರ್ವಾಂಗೀಣ ವಿಕಾಸವೇ ಅವನ ಜೀವನದ ಅಂತಿಮ ಗುರಿ, ಪ್ರತಿಯೊಬ್ಬ ವ್ಯಕ್ತಿಯೂ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ, ಬೌದ್ದಿಕ ಮತ್ತು ಸಾಮಾಜಿಕವಾಗಿ ಬೆಳವಣಿಗೆ ಆಗುವುದೇ ಮನುಷ್ಯನ ಸಮಗ್ರ ವಿಕಾಸವೆಂದು ಮಹರ್ಷಿ ಅರವಿಂದರು ಹೇಳಿದ್ದಾರೆ.

ಸ್ವಾಮಿ ವಿವೇಕಾನಂದರು ” ಯೋಗವೆಂದರೆ ಜೀವನ ವಿಕಾಸ” ಎಂದು ಹೇಳಿದ್ದಾರೆ.ನಮ್ಮ ಜೀವನದಲ್ಲಿ ನಾವುಗಳು ಅನಿವಾರ್ಯವಾಗಿ ಎದುರಿಸುತ್ತಿರುವ ಎಲ್ಲಾ ರೀತಿಯ ಒತ್ತಡದಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಯೋಗಾಭ್ಯಾಸ ಉತ್ತಮವಾದ ಮಾರ್ಗವಾಗಿದೆ.

ಯೋಗಾಭ್ಯಾಸವು ಪೂರ್ಣವಾಯಿತೆಂದು ಹೇಳುವುದು ಕಷ್ಟ ಸಾಧ್ಯ; ಇದಕ್ಕೆ ಕಲಿಕೆಯ ಕಾಲದ ಅವಧಿ ಎಷ್ಟು ಎಂದು ಹೇಳುವಂತಿಲ್ಲ, ಇದು ಜೀವನದುದ್ದಕ್ಕೂ ಶ್ರದ್ಧೆಯಿಂದ ಮಾಡುವ ಸಾಧನೆಯೇ ಆಗಿರುವುದು.ನಿರಂತರವಾದ ಯೋಗ ಸಾಧನೆಯಿಂದ ಶಾಶ್ವತ ಸುಖ ಮತ್ತು ಶಾಂತಿ ಪ್ರಾಪ್ತವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿರದು.ನಮ್ಮ ನೈಜವಾದ ಸ್ವಭಾವ ಅನ್ನಮಯ ಕೋಶ,ಪ್ರಾಣಮಯ ಕೋಶ,ಮನೋಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶವೆಂಬ ಪಂಚ ಆವರಣಗಳಿಂದ ಮುಚ್ಚಲ್ಪಟ್ಟಿದೆ.ಅದರಲ್ಲಿ ಅನ್ನಮಯ ಕೋಶವು ಭೂತತ್ವ,ಜಲತತ್ವ ಮತ್ತು ಅಗ್ನಿತತ್ವದಿಂದ ಮಾಡಲ್ಪಟ್ಟಿದೆ.ಪ್ರಾಣಮಯ ಕೋಶವು ವಾಯುತತ್ವ, ಆಕಾಶ ತತ್ವದಿಂದ ರಚಿತವಾಗಿದೆ.ಮನೋಮಯ ಕೋಶವು ಮನಸ್ತತ್ವ,ಬುದ್ಧತತ್ವ, ಅಹಂಕಾರ ತತ್ವದಿಂದಲೂ ಮತ್ತು ವಿಜ್ಞಾನಮಯ ಕೋಶವು ಚಿತ್ತದಿಂದಲೂ ಹಾಗೂ ಆನಂದಮಯ ಕೋಶವು ಚೇತನದಿಂದಲೂ ನಿರ್ಮಿಸಲ್ಪಟ್ಟಿದೆ.ಆನಂದಮಯ ಕೋಶದ ಒಳಗೆ ಇರುವುದೇ ನಮ್ಮ ಸ್ವರೂಪ.

ಯೋಗಾಭ್ಯಾಸವನ್ನು ಮಾಡಲು ಸಣ್ಣವರು, ದೊಡ್ಡವರು, ವೃದ್ಧರು, ರೋಗಿಗಳು,ಅಶಕ್ತರಾದವರು ಪ್ರತಿಯೊಬ್ಬರೂ ಅರ್ಹರು. ಆದರೆ ಆಲಸ್ಯರಹಿತವಾಗಿ ಅಭ್ಯಾಸ ಮಾಡುವವರು ಮಾತ್ರ ಇದರ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಶ್ರೀಮದ್ಭಗವದ್ಗೀತೆಯು ನಾಲ್ಕು ಕ್ರಮದಲ್ಲಿ ಯೋಗವನ್ನು ವಿಭಾಗಿಸುತ್ತದೆ. ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಹಾಗೂ ರಾಜಯೋಗ. ಈ ನಾಲ್ಕರಲ್ಲಿ ಯಾವುದಾದರೂ ಒಂದರ ಮೂಲಕ ಮಾನವನು ಆನಂದದ ಪರಮೋನ್ನತಿ ಸ್ಥಿತಿಯನ್ನು ತಲುಪಬಹುದು.

ಯೋಗವು ಗುರು ಮುಖೇನವೇ ಅಭ್ಯಾಸಮಾಡಬೇಕಾದ ತಾತ್ವಿಕ ಹಾಗೂ ಪ್ರಾಯೋಗಿಕ ವಿಜ್ಞಾನ. ನಿರಂತರವಾದ ಅಭ್ಯಾಸದಿಂದ ಮಾನವನು ಅಹಂಕಾರವನ್ನು ತೊರೆದು, ಬುದ್ದಿ ಹಾಗೂ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು,ಮನಸ್ಸಿನ ಚಂಚಲತೆ ಕಡಿಮೆಯಾಗಿ, ಭಯದಿಂದ ಮುಕ್ತನಾಗಿ, ಸದಾಕಾಲ ಶಾಂತಚಿತ್ತನಾಗಿ ಇರುವವನು ಯೋಗಿ ಎನಿಸುವವನು.ಇತರರಿಗೆ ಕೇಡು ಬಳಸದಿರುವುದು, ಎಲ್ಲರೊಂದಿಗೂ ಸ್ನೇಹದಿಂದಿರುವುದು,ಇತರರ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ನೆರವಾಗುವುದು,ಇತರರನ್ನು ಸಂತೋಷದಿಂದಿರಿಸುವುದು, ಇತರರು ನಿಶ್ಚಿಂತೆಯಿಂದ ಜೀವನ ಸಾಗಿಸಲು ನೆರವಾಗುವುದು ಯೋಗಿಯ ಧರ್ಮ.

” ಯೋಗ ಮುಕ್ತ,ರೋಗ ಮುಕ್ತ” ಎಂಬ ನಾಣ್ಣುಡಿಯಂತೆ ನಾವುಗಳೆಲ್ಲರೂ ಪ್ರತಿ ದಿನ ಯೋಗಾಭ್ಯಾಸ ಮಾಡುವ ದೃಢ ಸಂಕಲ್ಪದೊಂದಿಗೆ ಮುನ್ನಡೆಯೋಣ.


  • ಲಕ್ಷ್ಮಣ ಗಂಗಾರಾಮ ಬೋಡಕೆ – ಯೋಗ ಶಿಕ್ಷಕರು.

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW