ಪಾಂಡವರನ್ನು ನೋಡಬೇಕೇ ‘ಬನ್ನಿಕೊಪ್ಪ’ಕ್ಕೆ ಬನ್ನಿ!

ಬನ್ನಿಕೊಪ್ಪ ಒಂದು ಪುರಾಣ ಪ್ರಸಿದ್ಧ ಊರು. ಶಿಗ್ಗಾಂವ್‍ನಿಂದ ಹುಲುಗೂರಿಗೆ ಹೋಗುವ ಮಾರ್ಗದ ಮಧ್ಯದಲ್ಲಿದ್ದು, ಬನ್ನಿಕೊಪ್ಪ ಸ್ಥಳದ ಬಗ್ಗೆ ಜನರಲ್ಲಿ ಪೌರಾಣಿಕ ನಂಬಿಕೆಯೊಂದಿದೆ. ಬನ್ನಿಕೊಪ್ಪವು ಪಾಂಡವರು ವನವಾಸಕ್ಕೆ ಬಂದು ನಿಂತಾಗ ಅವರು ನೆಲೆನಿಂತ ತಾಣವೆಂಬುದೇ ಅಲ್ಲಿಯ ಜನ ನಂಬುತ್ತಾರೆ. ಟಿ.ಶಿವಕುಮಾರ್ ಅವರು ಬನ್ನಿಕೊಪ್ಪದ ಕುರಿತು ಬರೆದ ಲೇಖನವನ್ನು ತಪ್ಪದೆ ಓದಿ…

ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ ಏನು ಇವು ಪಾಂಡವರ ಹೆಸರುಗಳು ಅಂತೀರಾ?ಹೌದು, ಇವು ಪಾಂಡವರ ಹೆಸರುಗಳು. ನೀವು ಏನಾದರೂ ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಬನ್ನಿಕೊಪ್ಪಕ್ಕೆ ಭೇಟಿ ನೀಡಲೇಬೇಕು!.

ಬನ್ನಿಕೊಪ್ಪ ಒಂದು ಪುರಾಣ ಪ್ರಸಿದ್ಧ ಊರು. ಶಿಗ್ಗಾಂವ್‍ನಿಂದ ಹುಲುಗೂರಿಗೆ ಹೋಗುವ ಮಾರ್ಗದ ಮಧ್ಯದಲ್ಲಿದೆ. ಬನ್ನಿಕೊಪ್ಪ ಈ ಸ್ಥಳದ ಬಗ್ಗೆ ಜನರಲ್ಲಿ ಪೌರಾಣಿಕ ನಂಬಿಕೆಯೊಂದಿದೆ ಬನ್ನಿಕೊಪ್ಪವು ಪಾಂಡವರು ವನವಾಸಕ್ಕೆ ಬಂದು ನಿಂತಾಗ ಅವರು ನೆಲೆನಿಂತ ತಾಣವೆಂಬುದೇ ಈ ನಂಬಿಕೆ. ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಅಜ್ಞಾತವಾಸಕ್ಕೆ ಹೊರಡುವ ಸಂದರ್ಭದಲ್ಲಿ ಇಲ್ಲಿನ ಬನ್ನಿಗಿಡದಲ್ಲಿ ತಮ್ಮ ಶಸ್ತಾಸ್ತ್ರಗಳನ್ನು ಬಚ್ಚಿಟ್ಟಿದ್ದರೆಂಬ ಮಾತು ಇಲ್ಲಿ ಜನಜನಿತವಾಗಿದೆ.

ಪೂರ್ವ ದಿಕ್ಕಿಗೆ ಮುಖ ಮಾಡಿರುವ ಈ ದೇವಾಲಯವು ಗರ್ಭ ಗೃಹ, ಅಂತರಾಳ ಮತ್ತು ತೆರೆದ ಸಭಾ ಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಒಂದು ಲಿಂಗವಿದೆ. ಅದನ್ನು ಧರ್ಮರಾಯನೆಂದು ಪೂಜಿಸಲಾಗುತ್ತದೆ. ಗರ್ಭಗುಡಿಯ ಒಳಗುಡಿಯಲ್ಲಿ ಕುಂತಿ ಮತ್ತು ದ್ರೌಪದಿಯ ಮೂರ್ತಿಗಳಿವೆ ದೇವಾಲಯದ ಅಂತರಾಳದಲ್ಲಿ ಅರ್ಜುನ ಕೃಷ್ಣ ಮತ್ತು ಗುರುಭೀಷ್ಮಾಚಾರ್ಯರ ಮೂರ್ತಿಗಳಿವೆ. ಸಭಾಮಂಟಪದ ಎಡ-ಬಲ ಕೊಠಡಿಗಳಲ್ಲಿ ಎರಡು ಲಿಂಗಗಳಿವೆ. ಇವುಗಳನ್ನು ನಕುಲ ಸದದೇವ ಎಂದು ಹೇಳಲಾಗುತ್ತದೆ.

This slideshow requires JavaScript.

 

ಪಂಚಪಾಂಡವರ ಈ ದೇಗುಲದಲ್ಲಿ ಧರ್ಮರಾಯ, ಅರ್ಜುನ, ನಕುಲ-ಸಹದೇವರುಗಳು ಇದ್ದರೂ ದೇಗುಲದಲ್ಲೆಲ್ಲೂ ಭೀಮನ ಸುಳಿವಿಲ್ಲ ಇದೇಕೆ ಹೀಗೆ ಎನ್ನುವುದು ಕುತೂಹಲದ ಸಂಗತಿಯಾಗಿದೆ. ದೇವಸ್ಥಾನದಿಂದ ನೀವು ಸ್ಪಲ್ಪ ಮುಂದೆ ನಡೆದರೆ ಅಲ್ಲೇ ಒಂದು ಹೊಲದ ನಡುವೆ ಒಂದು ಚಿಕ್ಕ ಗುಡಿಯಿದೆ. ಇದು ಭಗ್ನಗೊಂಡ ಗರ್ಭಗೃಹ ಹಾಗೂ ಬಿದ್ದು ಹೋಗಿರುವ ಅಂತರಾಳವನ್ನು ಹೊಂದಿದೆ ಗರ್ಭಗೃಹದಲ್ಲಿ ಸುಮಾರು 3-4 ಅಡಿ ಎತ್ತರದ ದೊಡ್ಡಗಾತ್ರದ ಲಿಂಗವಿದೆ ಈ ಲಿಂಗವನ್ನೇ ಭೀಮನೆಂದು ಅರ್ಚಿಸಲಾಗುತ್ತದೆ.

ಪಂಚಪಾಂಡವರ ದೇವಸ್ಥಾನದಿಂದ ಈ ಭೀಮನಗುಡಿ ಏಕೆ ಪ್ರತ್ಯೇಕವಾಗಿದೆ ಎಂಬುದಕ್ಕೆ ಉತ್ತರವಾಗಿ ಜನರಲ್ಲಿ ಒಂದು ಕಥಾರೂಪದ ಕಾರಣವಿದೆ. ಅಜ್ಞಾತವಾಸಕ್ಕೆ ಸನ್ನದ್ಧರಾಗಿ ಪಾಂಡವರು ಹೊರಡುವಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿಟ್ಟಿದ್ದರಷ್ಟೇ? ಹೀಗೆ ಇರಿಸಿ ಹೊರಡುವಾಗ ಧರ್ಮರಾಯನು ಬನ್ನಿ ಮಾಕಾಳಿಗೆ ನಾವು ಮರಳಿ ಬರುವವರೆಗೂ ಭೀಮ ಕೇಳಿದರೆ ಅವನಿಗೆ ಗದೆ ಕೊಡಬೇಡ; ಅವನು ತುಂಬಾ ಕೋಪಿಷ್ಠ ಎಂದನಂತೆ. ಭೀಮನು ಇದರಿಂದ ಕೋಪಗೊಂಡು ಅಣ್ಣ ತನ್ನ ತಮ್ಮಂದಿರಲ್ಲಿಯೇ ತಾರತಮ್ಯ ತೋರುತ್ತಿದ್ದಾನೆ ಎಂದುಕೊಂಡು ಅರ್ಜುನ ಮಾತ್ರ ತಮ್ಮನೇ? ನಾನು ತಮ್ಮನಲ್ಲವೇ? ಎಂದು ಮುನಿಸಿಕೊಂಡು ಹೋದನಂತೆ ಅದಕ್ಕಾಗಿಯೇ ಧರ್ಮರಾಯ, ಅರ್ಜುನ, ನಕುಲ ಸಹದೇವ ಒಂದು ಕಡೆ ಇದ್ದರೆ ಭೀಮನು ಪ್ರತ್ಯೇಕವಾಗಿದ್ದಾನೆ.

ಧರ್ಮರಾಯನ ಗುಡಿಗೆ ಅಭಿಮುಖವಾಗಿ ಸೂರ್ಯನಾರಾಯಣನ ಗುಡಿ ಇದೆ. ಈ ಸೂರ್ಯನಾರಾಯಣ ಪಾಂಡವರಿಗೆ ಆಪತ್ಕಾಲದಲ್ಲಿ ಸಹಾಯಕ್ಕೆ ಬಂದವನು. ಪಾಂಡವರು ವನವಾಸಕ್ಕೆ ಬಂದಾಗ ಕೌರವರು ಪಾಂಡವರನ್ನು ಪರೀಕ್ಷಿಸಲೆಂದು ಕಾಡಿಗೆ ಹೋದರಷ್ಟ? ಆಗ ಉಪಚರಿಸೋಣವೆಂದರೆ ಪಾಂಡವರ ಹತ್ತಿರ ಏನೂ ಇರಲಿಲ್ಲ ಆಗ ಸೂರ್ಯನಾರಾಯಣನು ಪಾಂಡವರಿಗೆ ತನ್ನ ಬಳಿಯಿದ್ದ ಅಕ್ಷಯ ಪಾತ್ರೆಯನ್ನು ನೀಡಿದನಂತೆ ಆ ಪಾತ್ರೆಯಲ್ಲಿ ಒಂದು ಅಗಳು ಅಕ್ಕಿ ಹಾಕಿದರೂ ಪಾತ್ರೆ ತುಂಬಾ ಅನ್ನವಾಗುತ್ತಿತ್ತಂತೆ ಹೀಗೆ ಅಕ್ಷಯ ಪಾತ್ರೆಯ ನೆರವಿನಿಂದ ಕೌರವರನ್ನೆಲ್ಲ ತೃಪ್ತಿಪಡಿಸಲಾಯಿತೆಂಬ ಕಥೆ ಈ ಗುಡಿಯ ಹಿಂದಿದೆ.

ಪಾಂಡವರ ದೇವಸ್ಥಾನ

ಈಗಲೂ ಈ ದೇವಸ್ಥಾನಕ್ಕೆ ಊರಿನ ಜನರು ಮಾತ್ರವಲ್ಲದೆ ಅಕ್ಕಪಕ್ಕದ ಊರಿನವರೂ ನಡೆದುಕೊಳ್ಳುತ್ತಾರೆ. ಮಹಾನವಮಿಯಲ್ಲಿ ಬನ್ನಿಹಬ್ಬದ ದಿನ ಈ ಪಾಂಡವರಿಗೆಲ್ಲ ಬನ್ನಿ ಮುಡಿದು ಹೋಗುತ್ತಾರೆ .ಅಲ್ಲದೆ ಈ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಬಾರಿ ರಥೋತ್ಸವ ಯುಗಾದಿ ಪಾಡ್ಯದ ದಿನ ಧರ್ಮರಾಯನ ತೇರು ಪಂಚಮಿಯಂದು ಕುಂತಿದೇವಿಯ ತೇರು.

ಈ ಗ್ರಾಮದ ವೈಶಿಷ್ಟ್ಯ ಎಂದರೆ ಈ ಊರಿನಲ್ಲಿ ಬಹುಪಾಲು ಜನರ ಹೆಸರು ಪಾಂಡವರದೇ ಧರ್ಮರಾಯ, ಧರ್ಮಪ್ಪ, ಧರ್ಮಗೌಡ, ಭೀಮಪ್ಪ, ಅರ್ಜುನ, ಸಹದೇವ ಇತ್ಯಾದಿ ಈ ಹೆಸರಿನವರೂ ಮನೆಗೊಬ್ಬರಾದರೂ ಸಿಗುತ್ತಾರೆ! ಹೀಗೆ ಈ ಪ್ರದೇಶದಲ್ಲಿ ಹುಟ್ಟಿದ ಮಕ್ಕಳಿಗೆ ಪಾಂಡವರ ಹೆಸರನ್ನು ಇಡುವುದು ವಾಡಿಕೆಯೇ ಆಗಿದೆ. ಪೌರಾಣಿಕವಾಗಿ ಮಾತ್ರವಲ್ಲದೆ ಐತಿಹಾಸಿಕ ಮಹತ್ತ್ವವೂ ಬನ್ನಿಕೊಪ್ಪಕ್ಕೆ ಇದೆ. ಈ ಸ್ಥಳದಲ್ಲಿ ಎರಡು ಶಾಸನಗಳು ದೊರೆತಿದ್ದು. ಅವು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಧರ್ಮರಾಯನ ಗುಡಿಯ ಆವರಣದಲ್ಲಿ ದೊರೆತ ಒಂದು ಶಾಸನ ಬಾದಾಮಿ ಚಾಲುಕ್ಯರ ವಿಜಯಾದಿತ್ಯನ ಕಾಲದ್ದಾಗಿದೆ. ಇದರಲ್ಲಿ ಅರ್ಜುನೀಶ್ವರ ದೇವಾಲಯವನ್ನು ನಿರ್ಮಿಸಿದ ಉಲ್ಲೇಖವಿದೆ.

ಭೀಮನ ಗುಡಿಯ ಹತ್ತಿರ ಕಲ್ಯಾಣ ಚಾಲುಕ್ಯರ ಮೂರನೆಯ ಸೋಮೇಶ್ವರನ ಕಾಲದ ಶಾಸನವೊಂದಿದೆ.ಇದರಲ್ಲಿ ದಂಡನಾಯಕ ಹೂಲಕೇಶಿ ದೇವನು ಬನ್ನಿಯೂರು ತೀರ್ಥದ ಭೀಮೇಶ್ವರ ದೇವಸ್ಥಾನಕ್ಕೆಭೂದಾನ ಮಾಡಿದ ಉಲ್ಲೇಖವಿದೆ ಬನ್ನಿಕೊಪ್ಪದ 1 ಕಿ.ಮೀ ಅಂತರದಲ್ಲಿ ಬನ್ನೂರು ಗ್ರಾಮ ಶಾಸನದ ಕಾಲದಲ್ಲಿ ಬನ್ನಿಯೂರು ಆಗಿತ್ತು.

ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದಿಂದ ಕೂಡಿದ ಬನ್ನಿಕೊಪ್ಪ ಗ್ರಾಮ ಶಿಗ್ಗಾಂವ್ ತಾಲೂಕಿನ ಸಾಂಸ್ಕ್ರತಿಕ ಸಿರಿಯ ಮಹತ್ತ್ವದ ಸ್ಥಳದಲ್ಲಿ ಒಂದಾಗಿದೆ.


  • ಟಿ.ಶಿವಕುಮಾರ್ – ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW