‘ಮನುಜ ನಿನ್ನೊಳಗೆ ನೀನು ತಂತಿ ಮೀಟು ತನನಃ….ಆಗ ತೆರೆದುಕೊಳ್ಳುವ ಬದುಕು ಸರಿಗಮ ರಿಧಂ’… ಮುಂದೆ ಓದಿ ಕವಿ ಪೀರಸಾಬ ನದಾಫ ಜೆ ಅವರ ಸುಂದರ ಕವನ , ತಪ್ಪದೆ ಓದಿ…
ಬದಕಿನ ಸುತ್ತಮುತ್ತ ಹತ್ತು ಹಲವಾರು
ಬಯಕೆಯ ಹೊರೆ ಹೊತ್ತು ನಿಂತ
ಕತ್ತು ಕೊಂಕಿಸಲು ಅನುವಿಲ್ಲ
ಎತ್ತ ಕಣ್ಣ ಹಾಯಿಸಿದರೂ ಮರಳು ಧಗೆ
ಮೇಲೆ ಸೂರ್ಯನ ಸುಡುಬಿಸಿಲ ಕೆಂಡದುಂಡೆ
ಕೆಳಗೆ ಮರ ಮರ ಮರುಳು ಮರುಳೇ ! ಎಲ್ಲಲ್ಲೂ
ಕಾಯ್ದ ಸಂಸಾರದೂಗಿ ಕಾಲಿಡುವುದೆಂತು ?
ಒಳಮನದ ಕದ ತೆರೆದು ಇನ್ನೂ ಒಳನುಗ್ಗಿದರೆ
ಎದೆಯೊಳಗೆ ಅಲ್ಲೊಂದು ಇಲ್ಲೊಂದು
ಕಲ್ಲುಚಪ್ಪಡಿ ಎಳೆದು ಮೌನ ತಾಳಿದ
ಘೋರಿಗಳ ಮಹಾ ಸೂತಕದ ಛಾಯೆ
ಸಾವಿನ ಒಡೆತನದ ರಹಸ್ಯಕ್ಕೆ ಮೂಕ ಆಕಾಶಕ್ಕೆ
ಸಂಕಲ್ಪ ಕಲ್ಪಿಸಲು ಆ ದೇವನಿಟ್ಟ ಅನುಭಾವದ ಕೌದಿ
ಹಾಗೆ ಧಾಂಗುಡಿ ಇಡುವ ಕಾಮನೆಗಳ ಅನುಭವದ ರೌದಿ
ಮನುಜನೊಳಗೆ ತೆಳ್ಳಗೆ ತೆವಳುವ ತಿಳುವಳಿಕೆ ತಿಳಿನೀರು
ಆ ತಿಳಿನೀರ ಝರಿಯಲಿ ತೊಳೆಯಬೇಕು
ಸ್ವಪಚನ ಘಾತುಕ ಪಾತುಕಗಳನು ಹಳೆ ಹಳೇ ಸೂತಕಗಳನು
ಹಾಗೇ ಬದುಕಿನ ಗಟಾರಕ್ಕೆ ಬಿದ್ದ ಗಾಢ ! ಗಸ್ಟು
ಗಾಢ ಬದುಕಿನ ಗಸ್ಟು ರುಚಿ ಏನಿಸಿ ಹೀರಿಬಿಡಬಹುದು ಮನ
ಅರಿವಿರಲಿ ! ಆಗ ಹಠಾತ್ತಗಿ ಹುಟ್ಟಿತು ! ಇನ್ನೊಂದು ಒಳತಲೆ
ಮನುಜ ನಿನ್ನೊಳಗೆ ನೀನು ತಂತಿ ಮೀಟು ತನನಃ
ಆಗ ತೆರೆದುಕೊಳ್ಳುವ ಬದುಕು ಸರಿಗಮ ರಿಧಂ
ಓಹೋ ಆಗೊಮ್ಮೆ ಇಗೊಮ್ಮೆ ಮರಳುಗಾಡಿನ ಓಯಾಸಿಸ್
ಬರೆದೆಯಾದರೇ ಬಾಳ ಪುಟಗಳ ರಿಂಗಣಧಿಂ
ಒಳಗೆ ಓತಪ್ರೋತವಾಗಿ ಹರಿಯುವುದು ನೈಲ್ ನದಿ
ಬರುಡಾದ ಬಾಳಿಗೆ ಜೀವ ಜಲವಿತ್ತು ಕರೆಯುವುದು ಖರೆ !
- ಪೀರಸಾಬ ನದಾಫ ಜೆ