ನಾಗೇಶ್ ಜೆ. ನಾಯಕ ಅವರ “ಕಾಡುವ ಕವಿತೆ”

ನಾಗೇಶ್ ಜೆ. ನಾಯಕ ಅವರ ‘ಕಾಡುವ ಕವಿತೆ’ ಯಲ್ಲಿ ‘ಬಿಟ್ಟೆನೆಂದರೂ ಬಿಡದ ಮೋಹ’ ಎಂಬ ಟ್ಯಾಗ್ ಲೈನ್ ಇದ್ದು, ಸುನಿತಾ ಮೂರಶಿಳ್ಳಿ ಅವರು ಈ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು  ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಕಾಡುವ ಕವಿತೆ
ಲೇಖಕರು : ನಾಗೇಶ್ ಜೆ. ನಾಯಕ
ಪ್ರಕಾರ : ಕವನ
ಪ್ರಕಾಶನ : ಸಹೃದಯ ಸಾಹಿತ್ಯ ಪ್ರತಿಸ್ಥಾನ
ಖರೀದಿ : 9900817716

ಈ ಕಲೆ, ಸಾಹಿತ್ಯಕ್ಕೆ ಎಷ್ಟೊಂದು ಅಗಾಧವಾದ ಶಕ್ತಿ ಇದೆ, ಈ ಲೋಕದ ಬೆಳಕು ಎಲ್ಲಿಯವರೆಗೆ ಇರುವದೊ ಅಲ್ಲಿಯವರೆಗೆ ಈ ಸಾಹಿತ್ಯದ ಹೊನಲು ಎದೆಯಿಂದ ಎದೆಗೆ ಹರಿಯುತ್ತಲೇ ಇರುವದು. ಸೆಂಟಿಪಿಡಿ (ಶತಪದಿ) ಎಂಬ ಒಂದು ಆಂಗ್ಲ ಪಠ್ಯದ ಕವನ ಬಾಲ್ಯದಲ್ಲಿ ಓದಿದ್ದು ಇಂದು ಮತ್ತೆ ನನ್ನ ನೆನಪಿಗೆ ಬರುತ್ತಿದೆ. ಒಂದು ಸೆಂಟಿಪಿಡಿಗೆ ಪ್ರಶ್ನೆ ಕೇಳಲಾಗುತ್ತೆ ನೀನು ಯಾವ ಪಾದ ಮುಂದೆ ಇಡುತ್ತೀಯಾ ಎಂದು ಅದು ಯೋಚಿಸತೊಡಗುತ್ತದೆ ಹೌದು ನಾನು ಯಾವ ಕಾಲು ಮುಂದೆ ಇಡುವೆ ಎಂದು. ಈ ಯೋಚನೆಯಲ್ಲಿ ಅದು ಎಷ್ಟು ಮುಳುಗಿಹೋಗುವುದೆಂದರೆ ಅದು ಪಾದ ಸರಿಸುವುದನ್ನೇ ಮರೆತು ಸ್ಥಬ್ದ ವಾಗಿಬಿಡುವುದು. ಒಂದು ತೀವ್ರ ವಾದ ಆಲೋಚನೆ, ಚಿಂತೆ ಜೀವವನ್ನು ಹೇಗೆ ನಿಷ್ಕ್ರಿಯೆ ಮಾಡಿಬಿಡುವುದು ಎಂದು ಬದುಕಿನ ವಿವಿಧ ಸಂದರ್ಭಗಳಲ್ಲಿ ಈ ಕವನ ನನ್ನ ಆಳದಲ್ಲಿ ನಿಂತು ನನ್ನನ್ನು ಕಾಡುತ್ತಲೆ ಇದೆ.

ಬೇಂದ್ರೆಯವರ ಬೆಳಕು (ಮೂಢಣ ಮರೆಯ ಮುತ್ತಿನ ಹನಿಗಳ) ಕವನ ರಚಿಸಿ ೧೦೪ ವರ್ಷ ಗಳೇ ಕಳೆದರೂ ಇನ್ನೂ ಆ ರವಿಯ ಉದಯದಂತೆ ನಿತ್ಯ ಸಾವಿರಾರು ಹೃದಯಗಳಲ್ಲಿ ಬೆಳಗುತ್ತಲೇ ಇದೆ. ಈಗ ಇಷ್ಟೆಲ್ಲಾ ಹೇಳಲು ಕಾರಣ ಇಷ್ಟೇ ನಿನ್ನೆ ತಾನೆ ನಾಗೇಶ್ ಜೆ. ನಾಯಕ ಅವರ ಕಾಡುವ ಕವನ ಪುಸ್ತಕ ಓದಲು ಸಿಕ್ಕಿತು. ಅವರ ಕಾಡುವ ಕವನದ ಅಂಕಣ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಓದಲು ದಕ್ಕುತ್ತಿದ್ದವು ಒಮ್ಮೆ ಇಲ್ಲ. ಎಷ್ಟೋ ಬಾರಿ ನಾನೇ ಕಳಿಸಲು ಕೇಳಿಕೊಂಡದ್ದೂ ಇದೆ. ಆಗೆಲ್ಲಾ ಇದರ ಒಂದು ಕೃತಿ ಬಂದರೆ ಎಲ್ಲಾ ಒಮ್ಮೆಲೆ ಓದಲು ಅನುಕೂಲವಾಗುವುದು ಎಂಬ ಆಲೋಚನೆ ಬಂದದ್ದೂ ಇದೆ. ಈಗ ಒಮ್ಮೆಲೆ ಕೃತಿ ಪ್ರಕಟವಾಗಿರುವುದು ಗೊತ್ತಾದಾಗ ಬಿಡುಗಡೆಗೆ ಮುನ್ನವೇ ಕಾಯ್ದಿರಿಸಲು ಕೂಡ ಕೇಳಿಕೊಂಡಿದ್ದೆ. ಈಗ ಇದೇ “ಕಾಡುವ ಕವಿತೆ” ಪುಸ್ತಕ ಚೆಂದದ ಬಣ್ಣದ ಕವರನೊಂದಿಗೆ ‘ಬಿಟ್ಟೆನೆಂದರೂ ಬಿಡದ ಮೋಹ’ ಎಂಬ ಟ್ಯಾಗ್ ಲೈನ್ ಜೊತೆಗೆ ಪ್ರಕಟವಾಗಿದ್ದು ನೋಡಿ ತುಂಬಾ ಆನಂದವಾಗಿದೆ.

ಒಂದೊಂದು ಕವನಗಳೇ ಇಷ್ಟೊಂದು ಗಾಢವಾಗಿ ಆವರಿಸಿಕೊಳ್ಳುವಾಗ,ಇಲ್ಲಿರುವದು ಸಮಕಾಲೀನ ಕವಿಗಳ ಐವತ್ತು ಕವನಗಳು. ಪುಟ್ಟದಾದ ಕವಿ ಪರಿಚಯದೊಂದಿಗೆ ಕವನದ ಭಾವವನ್ನೂ ಅತ್ಯಂತ ಸಮರ್ಥವಾಗಿ ಯಾವೊಂದು ಪೂರ್ವಾಗ್ರಹಗಳಿಲ್ಲದೆ ಹಿರಿಯ,ಕಿರಿಯ ಎಲ್ಲ ಕವಿಗಳ ಕವನಗಳನ್ನೂ ಇಲ್ಲಿಯ ಭಾಗವಾಗಿಸಿದ ನಾಗೇಶ್ ಜೆ ನಾಯಕ್ ಅವರ ಸಾಹಿತ್ಯ ಕೈಂಕರ್ಯ ಅಭಿನಂದನೀಯ. ಅಲ್ಲಾಗಿರಿರಾಜ , ಎಚ್.ದುಂಡಿರಾಜ, ಸತೀಶ್ ಕುಲಕರ್ಣಿ,ದೀಪಾ ಹಿರೇಗುತ್ತಿ, ಪ್ರಕಾಶ್ ಗ. ಖಾಡೆ, ಸಂತೆಬೆನ್ನೂರು ಫೈಜ್ನಟ್ರಾಜ್ ಈ ಎಲ್ಲ ಕವಿಗಳೂ ಮೊದಲ ಮಾತಿನಲ್ಲಿ ತಮ್ಮ ಮನದ ನೋಟವನ್ನು ತೆರೆದಿರಿಸಿದ್ದಾರೆ.

ಕವಿತೆ ಎಂದರೆ ‘ಅಂತರಾಳದ ನೋವಿಗೆ ಸಾಥ್ ನೀಡುವ ಸಂಗಾತಿ, ಖುಷಿಗೆ ಸುಖಾಸುಮ್ಮನೆ ಕೈಹಿಡಿಯುವ ದೇವಕನ್ನಿಕೆ’ ಎಂದು ಕವಿತೆಯ ಒಲವನ್ನು ಬಿಟ್ಟೂ ಬಿಡದ ಮಾಯೆಯಂತೆ ಕಾಡಿದ್ದು ಈ ಕೃತಿ ಹೊರ ಬರಲು ಕಾರಣವಾಗಿದೆ ಎಂದು ನಾಗೇಶ್ ನಾಯಕ್ ಅವರು ಕೃತಿಬೆಳಕಿಗೆ ಬಂದ ಕಾರಣವನ್ನು ಹಂಚಿಕೊಂಡಿದ್ದಾರೆ . ಕೆಲವು ಲೋಕದರ್ಶನ ಹಾಗೂ ಕೆಲವು ಉದಯಕಾಲ ಪತ್ರಿಕೆಯಲ್ಲಿ ಈ ಅಂಕಣ ಬರಹಗಳು ಪ್ರಕಟವಾಗಿವೆ.

“ನಿನ್ನ ಮರೆಯಾ ಮಾತು ಮರೆತು ಬಿಡು ನೀನು” ಎಂಬ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕವನ, ಪ್ರೀತಿಯ ಪರಾಕಾಷ್ಟತೆಗೆ ಸಾಟಿಯಿಲ್ಲದೆ, ಎಲ್ಲ ಪ್ರೀತಿಸುವ ಹೃದಯಗಳಲಿ ಕಿಚ್ಚು ಹಚ್ಚಿ ಕಾಡುವಂಥ ಕವಿತೆ.

“ಛಳಿಗಾಲ ಬಂದಾಗ ಎಷ್ಟು ಛಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲಾ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ “ ಎಂಬ ಕೆ.ಎಸ್ ನರಸಿಂಹಸ್ವಾಮಿಯವರು ಈ ಬದುಕು ಹೇಗಿದ್ದರೂ ವಿಷಮತೆಗಳನ್ನೇ ಹುಡುಕುವ ಕೊಂಕು ತೆಗೆವ ಮನುಜನ ಸ್ವಭಾವಕ್ಕೆ ಸಾಣೆ ಹಿಡಿದಿದ್ದಾರೆ.

“ಏನು ಮಾಡಲಿ ಈ ಚರಿತ್ರೆಯೆ ಹಾಗೆ ಮರೆತು ಹೋಗುತ್ತೆ ಪರೀಕ್ಷೆಯಲಿ
ಚರಿತ್ರೆಯನು ಎಲ್ಲರೂ ಮರೆತಿದ್ದಾರೆ”

ಎಂದು ದುಂಡಿರಾಜ್ ಅವರು ಈ ಕವನದಲ್ಲಿ ಎಂತೆಂಥ ಸಾಧಕರನ್ನೂ, ಇತಿಹಾಸ ನಿರ್ಮಿಸಿದವರನ್ನೂ ಈ ಜಗತ್ತು ಮರೆಯುತ್ತೆ, ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲಾರರು ಎಂಬ ಭಾವವನ್ನೆ ವಿಡಂಬನಾತ್ಮಕವಾಗಿ ಹೇಳಿರುವರು.

‘ಕಾಡುವ ಕವಿತೆ’ ಲೇಖಕರಾದ ನಾಗೇಶ್ ಜೆ. ನಾಯಕ

ಸತೀಶ್ ಕುಲಕರ್ಣಿಯವರ “ಕಟ್ಟತೇವ ನಾವು ಒಡೆದ ಮನಸುಗಳ” ಎಂಬ ಸ್ಫೂರ್ತಿ ದಾಯಕ ಕವಿತೆ, ಅಲ್ಲಾಗಿರಿರಾಜ ಅವರ ” ಸರ್ಕಾರ ರೊಕ್ಕ ಮುದ್ರಿಸಬಹುದೆ ಹೊರತು ತುಂಡು ರೊಟ್ಟಿಯನ್ನಲ್ಲ ನೆನಪಿರಲಿ” ಎಂದು ಅನ್ನದಾತನ ಹಿರಿಮೆ ಇಲ್ಲಿ ಧ್ವನಿಸಿದೆ.

ಸಿದ್ಧರಾಮಯ್ಯ ನವರ “ಭಯವಾಗುತ್ತಿದೆ ನನಗೆ ಎರಗಲಿರುವ ಸಾವಿನ ಕುರಿತು ಅಲ್ಲ ಮನುಷ್ಯ ಕಳೆದು ಹೋಗಿರುವ ಬಗ್ಗೆ” ಎಂಬ ಸಾಲುಗಳು ಕಳೆದು ಹೋದ ಮಾನವೀಯತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ,ಇದು ಸಾವಿಗಿಂತಲೂ ಗಂಭೀರವಾಗಿ ಕಾಡುವ ಪ್ರಶ್ನೆ ಎಂಬ ಮಾತನ್ನು ಮನಮುಟ್ಟುವಂತೆ ಈ ಸಾಲುಗಳು ಸಾರಿವೆ.

“ನನ್ನ ಅಕ್ಕ ತಂಗಿಯರನ್ನ ಸೀತೆಯರನ್ನಾಗಿಸಬೇಡ
ಕಳಂಕದ ಬೆಂಕಿಯಲ್ಲಿ
ನಮ್ಮನ್ನ ಬೇಯಿಸಬೇಡ “

ಎಂಬ ಪೀರ್ ಬಾದಷಾ ಅವರ ವಿಷಾದ ನಮ್ಮೆದೆಗೂ ತಟ್ಟದೆ. ಬಸು ಬೇವಿಗಿಡದ ಅವರ ” ದ್ವೇಷಕ್ಕೆ ಬೆನ್ನು ಮಾಡಿ ನಡೆದವನ ಎದೆಬಂಡೆಗೆ ಹೇಗೆ ತಾಕಿತು ಗುಂಡು. ಹೇಗೆ ಸಾಯುವೆ ನೀನು ಮೋಹನದಾಸ ಈ ದೇಶದ ಜನರ ನಿಜ ಮಂದಹಾಸ” ಎನ್ನುವ ಕವನ ಕೋಟಿ ಹೃದಯಗಳಲ್ಲಿ ಕ್ರಾಂತಿಯ ದೀವಿಗೆ ಹಚ್ಚಿದವರಿಗೆ ಸಾವಿಲ್ಲ ಎನ್ನುತ್ತಾ ಮಹಾತ್ಮರು ಅಮರ ಅವರಿಗೆ ಎಂದಿದ್ದಾರೆ.

ದೀಪಾ ಹಿರೇಗುತ್ತಿಯವರ….”ಭೂತದ ಕಲ್ಲುಗಳನ್ನು ಕೂಡಿಸಿ ತಳಪಾಯ ಹಾಕುತ್ತಲೇ ಇರುತ್ತೇವೆ. ಈಗ ತಾನೇ ಕೈಲಿದ್ದ ಈ ದಿನ ನಿನ್ನೆಯಾಗುವದನ್ನು ಹತಾಶೆಯಿಂದ ದಿಟ್ಟಿಸುತ್ತ
ನಾಳೆಗಾಗಿ ಕಾಯುತ್ತ” ಎಂಬ ಕವನ ನಿನ್ನೆ ನಾಳೆಗಳಲ್ಲಿ ಬದುಕು ಕಳೆದುಹೋಗುವ ಮುನ್ನ ವರ್ತಮಾನದಲ್ಲಿ ಬದುಕು ಎಂಬ ಜೀವನ ಪಾಠ ನೆಮ್ಮದಿಯ ಸೂತ್ರವಾಗಿದೆ.

ಹೀಗೆ ಒಂದೊಂದು ಕವನಗಳೂ ಮೌಲಿಕವಾಗಿವೆ. ಎಲ್ಲವನ್ನೂ ಉಲ್ಲೇಖಿಸುವದು ಸಾಧ್ಯವೂ ಇಲ್ಲ ಆದ್ದರಿಂದ ಎಲ್ಲವನ್ನೂ ತಮ್ಮ ಓದಿಗಾಗಿ ಬಿಟ್ಟು ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಿರುವೆ. ಈ ಹೊತ್ತಿಗೆಯ ಎಲ್ಲ ಕವನಗಳೂ ಹತಾಷೆ, ವಿಷಾದ, ಸಂಕಟಗಳನ್ನು ತೆರೆದಿಡುತ್ತಾ ವಿಡಂಬಿಸುತ್ತಾ, ಬದುಕಿನ ಅಗಾಧತೆಗೆ ತನ್ನನ್ನು ಮುಖಾಮುಖಿ ಆಗಿಸುತ್ತಾ,ಕಲಿತು ಕಲಿಸುವ, ಜೀವಕ್ಕೆ ತೋರಣ ಕಟ್ಟುತ್ತಲೇ ಸಾಗುವವು. ಈ ಕವನಗಳ ಮಾಧುರ್ಯವನ್ನ, ಗಾಢ ನೋಟವನ್ನು ನಾಗೇಶ್ ಜೆ. ನಾಯಕ ಅವರು ಒಂದೇ ಸೂತ್ರದಲ್ಲಿ ಈ ಪುಟ್ಟ ಹೊತ್ತಿಗೆಯಲ್ಲಿ ಜೋಡಿಸಿದ್ದು ಸ್ಮರಣೀಯ ಹಾಗೂ ಶ್ಲಾಘನೀಯ ಕಾರ್ಯವಾಗಿದೆ. ಕಾವ್ಯಪ್ರಿಯರು ಸಮಕಾಲೀನ ಸಮಗ್ರ ನೋಟಕ್ಕಾಗಿ ಈ ಪುಸ್ತಕವನ್ನು ಕಾಯ್ದಿರಿಸಲೇ ಬೇಕು ಎಂದು ಮನದ ಮಾತು ಹೇಳುತ್ತಾ, ಇನ್ನಷ್ಟು ಇಂತಹ ಹೊತ್ತಿಗೆಗಳು ನಾಗೇಶ್ ನಾಯಕ ಅವರಿಂದ ಮೂಡಿಬರಲಿ ಎಂದು ಆಶಿಸುವೆ.


  • ಸುನಿತಾ ಮೂರಶಿಳ್ಳಿ, ಧಾರವಾಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW