‘ಕಳೆದ ದಿನಗಳು’ ಕವನ – ದಸ್ತಗಿರಿ ಸಾಬ್

ಅಪ್ಪನು ಬಂದು ಗದರುತ ಎಳೆಯುತ…ಅಮ್ಮನು ಬಿಡಿಸುತ ತುತ್ತನು ತಿನಿಸಿದ… ಕಳೆದ ದಿನಗಳು ಇನ್ನೆಲ್ಲಿ?…ದಸ್ತಗಿರಿ ಸಾಬ್ ಅವರ ನೆನಪಿನಂಗಳದಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಹಳ್ಳಿಯ ಹೊಳೆಯ ನಡುವಿನ ಗದ್ದೆಯ
ಹಸಿರಿನ ಸೊಬಗಲಿ ಮೆರೆದ ದಿನಗಳು
ಹೊಂಗಿನ ತೆಂಗಿನ ಅಡಿಕೆಯ ತೋಟದ
ಗದ್ದೆಯ ಕೆಸರಿನ ಜೋಳದ ಪೈರಲಿ
ಕಳೆದ ದಿನಗಳು ಇನ್ನೆಲ್ಲಿ?

ಎತ್ತಿನಗಾಣವ ನಿತ್ಯವೋ ಸುತ್ತಿದ
ಕಬ್ಬಿನ ಹಾಲಿನ ಸವಿಯನ್ನು ಸವೆದ
ಕಬ್ಬಿನ ಪಾಕದ ಬಿಸಿ ಬಿಸಿ ಬೆಲ್ಲವ
ಕುಣಿಯುತ ನಲಿಯುತ ತಿನ್ನುತ ತೇಗುತ
ಕಳೆದ ದಿನಗಳು ಇನ್ನೆಲ್ಲಿ?

ದನಗಳ ಹಿಂದೆ ಕೇರಿಯ ಸುತ್ತಿದ
ಹುಲ್ಲನು ಕೀಳುತ ಸೌದೆಯ ತಂದ
ಸ್ನೇಹಿತರೊಡನೆ ಕೆಕೆಯ ಹಾಕಿದ
ಹಣ್ಣು ಕಾಯಿ ಮರೆಯಲಿ ತಿಂದ
ಮೆರೆದ ದಿನಗಳು ಇನ್ನೆಲ್ಲಿ?

ಮೋಹರಂ ಕುಣಿತ ವಿಧ ವಿಧ ವೇಷ
ಯುಗಾದಿಯು ವರುಷ ತರುತಿದೆ ಹರುಷ
ದಸರಾ ಉತ್ಸವ ಆನಂದೋತ್ಸವ
ರಂಗ ನಾಟಕಗಳ ಬಯಲೋತ್ಸವ
ಆಡಿದ ದಿನಗಳು ಇನ್ನೆಲ್ಲಿ?

ಸ್ನೇಹಿತರೊಡನೆ ಹಾಡುತ ಪಾಡುತ
ಚಿನ್ನಿಯ ದಾಂಡು ಎಸೆಯುತ ಓಡುತ
ಅಪ್ಪನು ಬಂದು ಗದರುತ ಎಳೆಯುತ
ಅಮ್ಮನು ಬಿಡಿಸುತ ತುತ್ತನು ತಿನಿಸಿದ
ಕಳೆದ ದಿನಗಳು ಇನ್ನೆಲ್ಲಿ?
ಉದಯಿಸಲೊಮ್ಮೆ ಕಳೆದ ದಿನಗಳು?


  • ದಸ್ತಗಿರಿ ಸಾಬ್ – ನಿವೃತ್ತ ಶಿಕ್ಷಕರು, ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading