ಡಾ.ಕಾಳೇಗೌಡ ನಾಗವಾರ ಅವರು ಕತೆಗಾರರಾಗಿ, ಕವಿಯಾಗಿ, ಸಂಪಾದಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೂ ಜಾನಪದ ತಜ್ಞರಾಗಿ ಅವರು ಕನ್ನಡ ಸಾಹಿತ್ಯಲೋಕಕ್ಕೆ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದವರು. ಇಂದು ಅವರ ಜನ್ಮದಿನ. ಅವರ ಕುರಿತು ಲೇಖಕ, ಡಾ.ಕಾಳೇಗೌಡ ನಾಗವಾರ ಅವರ ಶಿಷ್ಯ ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಒಂದು ಪುಟ್ಟ ಲೇಖನ,ತಪ್ಪದೆ ಓದಿ…
೧೯೭೯-೮೧ ರ ಅವಧಿಯಲ್ಲಿ ನಾವು ಕನ್ನಡ ಅಧ್ಯಯನ ಕೇಂದ್ರ ,ಜ್ಞಾನಭಾರತಿಯಲ್ಲಿ ಕನ್ನಡದ ಜ್ಞಾನೋಪಾಸನೆಯ ವಿದ್ಯಾರ್ಥಿಗಳಾಗಿದ್ದಾಗಿನ ಸವಿನೆನಪಿಗಾಗಿ : ೧೭: ಡಾ.ಕಾಳೇಗೌಡ ನಾಗವಾರ: “ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ.
” ಅದೊಂದು ಕುಮಾರವ್ಯಾಸನ ತರಗತಿ. ನಾರದ ರಾಜನಾದ ಧರ್ಮರಾಯನ ಬಳಿಗೆ ಬಂದು ಅವನ ರಾಜ್ಯದ, ಪ್ರಜೆಗಳ ಯೋಗಕ್ಷೇಮವನ್ನು ವಿಚಾರಿಸುತ್ತಾನೆ .ರಾಜ ಒಳ್ಳೆಯವನಾಗದಿದ್ದರೆ ಅದರ ಪರಿಣಾಮ ಪ್ರಜೆಗಳ ಮೇಲೆ ಯಾವ ದುಷ್ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿ ಕೆಳಗಿನ ಪದ್ಯವನ್ನು ಹೇಳುತ್ತಾನೆ: ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಭಿನ್ನಪವ ಇನ್ನಾರು ಕೇಳುವರು, ಉರಿಉರಿಯುತ್ತಿದೆ ದೇಶ, ನಾವಿನ್ನಿರಲು ಬಾರದು” ಎಂದು ಹೇಳುವನು. ಇದನ್ನು ಅದ್ಬುತವಾಗಿ ವಾಚಿಸಿದ ಮೇಷ್ಟ್ರು “ಹೇಳಿ ಇದು ಯಾರನ್ನು ಕುರಿತು ಬರೆದಿರುವುದು?” ಎಂದು ನಮಗೆ ಪ್ರಶ್ನೆ ಕೇಳಿದರು .ಅದಕ್ಕೆ ಉತ್ತರ ಗೊತ್ತಿಲ್ಲದ ನಾವು ತಡವರಿಸಿದೆವು. ಆಗ ಅವರೆ ಕುಮಾರವ್ಯಾಸನ ಕಾಲ ಯಾವುದು? ಎಂದು ಕೇಳಿದರು .ನಾವು ಹದಿನೈದನೇ ಶತಮಾನ ಸರ್ ಎಂದು ಕೂಗಿದೆವು. ಅವನು ಎಲ್ಲಿ ಇದ್ದದ್ದು ?ಎಂದು ಮತ್ತೆ ಪ್ರಶ್ನೆ ಕೇಳಿದರು. ನಾವು: ಗದಗಿನ ಹತ್ತಿರದ ಕೋಳಿವಾಡ ಸರ್ ಎಂದೆವು. ಅದು ಯಾವ ರಾಜ್ಯದ ಆಡಳಿತದಲ್ಲಿ ಇತ್ತು! ಎಂದರು ಮತ್ತೆ ಸರ್ ನಾವು “ನಮ್ಮ ಹೆಮ್ಮೆಯ ವಿಜಯನಗರ ಸರ್” ಎಂದೆವು. “ಅದರ ಬಗ್ಗೆ ವಿದೇಶೀ ಪ್ರವಾಸಿಗರು ಏನು ಬರೆದಿದ್ದಾರೆ “?ಎಂದು ಮತ್ತೆ ಕೇಳಿದರು . ನಾವು ” ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ರಾಶಿ ಹಾಕಿಕೊಂಡು ಮಾರುತ್ತಿದ್ದರು ” ಎಂದು ಹೇಳಿ ಹೆಮ್ಮೆಯಿಂದ ಬೀಗಿದೆವು.
ಕುಮಾರವ್ಯಾಸನ ಮೇಲಿನ ಪದ್ಯವನ್ನು ಮತ್ತೊಂದು ಸಲ ಓದಿ ಈಗ ಹೇಳಿ ಇದರಲ್ಲಿ ಯಾವುದು ನಿಜ? ಎಂದು ಮತ್ತೆ ನಮ್ಮನ್ನು ಕೇಳಿದರು. ಅದು ಇತಿಹಾಸ ಸರ್ ಇದು ಕಾವ್ಯ ಅಲ್ಲವಾ? ಎಂದೆವು. “ಇತಿಹಾಸ ನಿಜಾನೊ? ಕಾವ್ಯ ನಿಜಾನೋ? ಹೊರಗಿನವರು ಬರೆದದ್ದು ನಿಜಾನೊ ಒಳಗಿನವರು ಬರೆದದ್ದು ನಿಜಾನೊ? ಇತಿಹಾಸದ ಸತ್ಯ ಕಾವ್ಯ ಸತ್ಯ ಎರಡನ್ನೂ ಒಟ್ಟಿಗೆ ಇಟ್ಟು ನೋಡಿದಾಗ ಮಾತ್ರ ಪೂರ್ಣ ಸತ್ಯ ನಮಗೆ ದೊರೆಯುವುದು” ಎಂದು ಕಾವ್ಯವನ್ನು ಸಮಕಾಲೀನ ನೆಲೆಯಲ್ಲಿ ಗ್ರಹಿಸುವ ವಿಧಾನವನ್ನು ನಮಗೆ ಅತ್ಯಂತ ಪರಿಣಾಮ ಕಾರಿಯಾಗಿ ಕಲಿಸಿದ ಗುರುಗಳು ಡಾ.ಕಾಳೇಗೌಡ ನಾಗವಾರರು. ಅವರ ಶಿಷ್ಯ ಪ್ರೀತಿ ವಾತ್ಸಲ್ಯಗಳು ಅನುಪಮವಾದುವು . ಇಂದಿಗೂ ಅವು ನಮ್ಮನ್ನು ಪೊರೆಯುತ್ತಿರುವ ಭಾಗ್ಯ ನಮ್ಮದು .ನಾನು ಎಲ್ಲಿಯಾದರೂ ಮೇಲಿನ ಕುಮಾರವ್ಯಾಸನ ಪದ್ಯವನ್ನು ಉಲ್ಲೇಖ ಮಾಡಿದರೆ ಅದರ ಹಿಂದಿನ ಶ್ರೇಯಸ್ಸು ನಮ್ಮ ಮೇಷ್ಟ್ರಿಗೆ ಸೇರಬೇಕು.
ಇಂತಹ ಮೇಷ್ಟ್ರಿಗೆ ಇಂದು ಜನ್ಮದಿನ.ಶುಭಾಶಯಗಳೊಂದಿಗೆ ಅವರ ಬರಹಯಾನ ನಿರಂತರವಾಗಲಿ ಎಂದು ನಾನು ಮತ್ತು ಗಿರಿಜಾ ಹಾರೈಸುತ್ತೇವೆ. ಕಳೆದ ಸಲ ಕನ್ನಡ ವಿ.ವಿ ದಿಂದ ಬಂದ ಪ್ರಾಧ್ಯಾಪಕ ಗೆಳೆಯರನ್ನು ” ವಿಜಯನಗರದಿಂದ ಬಂದಿದ್ದೀರಿ .ನಮಗೆ ಒಂದಷ್ಟು ಮುತ್ತುಗಳನ್ನು ಆರಿಸಿ ತರಬಾರದಾಗಿತ್ತಾ” ಎಂದೆ ಅದಕ್ಕೆ ಅವರು ” ಮುತ್ತುಗಳು ಬೇಕಾ” ಎಂದು ನಕ್ಕರು. ವಿಜಯನಗರಕ್ಕೆ ಜಯವಾಗಲಿ…..
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು