‘ನಿನ್ನ ಮೇಲೆ ಸಿಕ್ಕಾಪಟ್ಟೆ ಪ್ರೀತಿಯಾಗಿದೆ, ಆದರೆ ಹೇಳಿಕೊಳ್ಳಲು ನಾಚಿಕೆಯಾಗಿದೆ’….ಮುಂದೇನಾಯಿತು ಕವಿಯತ್ರಿ ಗೀತಾ ಜಿ ಹೆಗಡೆ ಕಲ್ಮನೆ ಅವರ ಲೇಖನಿಯಲ್ಲಿ ಅರಳಿದ ಹಾಸ್ಯ ಕಿರುಗವನಗಳು ತಪ್ಪದೆ ಓದಿ…
ನೀನೇ ನನ್ನ ಬರಹಕ್ಕೆ ಸ್ಪೂರ್ತಿ
ಹೀಗೆ ಹೇಳಿದ್ದೇನೆ ಎಷ್ಟೋ ಸರ್ತಿ
ಆದರೂ ನೀನು ನಂಬಲಿಲ್ಲ ಪೂರ್ತಿ
ಈಗ ಗೊತ್ತಾಯಿತೇ ನನಗೆ ಬಂದ ಮೇಲೆ ಕೀರ್ತಿ
ಹೋಗೋ…ನೀನು ಬಲೂ ದಡ್ಡಾ
ಈಗಾಲಾದರೂ ಒಪ್ಪಿಕೊ ಪೆದ್ದಾ.
*****
ನನ್ನ ಕನಸಿನ ಅರಮನೆಯ ಸುತ್ತಲೂ
ಕಾವಲಿಗೆ ನಿನ್ನೇ ನೇಮಿಸಬೇಕೆಂದಿರುವೆ ಗೆಳೆಯಾ
ಏಕೆಂದರೆ ನಿನಗಿಂತಲೂ
ನಂಬಿಕೆಯ ವ್ಯಕ್ತಿ ಬೇರೊಬ್ಬರಿಲ್ಲ
ಒಪ್ಪಿಕೊಂಡುಬಿಡು
ದೂಸ್ರಾ ಮಾತಾಡದೇ
ಕಾರಣ ನೀನು ಸಿಕ್ಕ ಮೇಲೆ
ಹುಡುಕುವ ಕಾರ್ಯಕ್ಕೆ
ಅಡ್ಡಿಯಾಗಿದೆ ಈ ಕೊರೋನಾ
ಸಿಕ್ಕಿದ್ದೇ ಸೀರುಂಡೆ
ಎಂಬಂತಾಯಿತಲ್ಲಾ ನನ್ನ ಸ್ಥಿತಿ
ಏನ್ಮಾಡ್ಲಿ?
ಒಟ್ಟಿನಲ್ಲಿ ನಿನ್ನ ಅದೃಷ್ಟ
ಖುಲಾಯಿಸಿತು ಬಿಡು….
ಹೊಡೆದೆ ಚಾನ್ಸ್
*****
ಗಡದ್ದಾಗಿ ನಿದ್ದೆ ಬರಬೇಕಿಂದು
ಬಿದ್ದರೆ ಕನಸೊಂದು
ನೆನಪಾಗುಳಿಯಬೇಕೆಂದೆಂದೂ
ಆದರೆ ಬಡ್ಡಿ ಮಗಂದು
ಕನಸು ಬೆಳಗಾಗುವಷ್ಟರಲ್ಲಿ
ಮರೆತೇ ಹೋಗುವುದು
ಇದಕ್ಕೇನು ಮಾಡುವುದು
ನೀನೇ ಒಸಿ ಹೇಳು.
******
ಕಟ್ಟುವರು
ಒಡಹುಟ್ಟಿದವನೆಂದು
ತಿಳಿದು ರಾಖಿ
ಇನ್ನು ಕೆಲವರು
ಕಟ್ಟುವುದವರ ಶೋಕಿ
ಕ್ರಮೇಣ ಹೇಳುವರು
ಅದು ಬಿಟ್ಟಾಕಿ
ಪ್ರೀತಿ ಮಾಡೋಣ
ಆಗುವೆ ನಾ ನಿನ್ನ ಸಾಕಿ.
*****
ಎನ್ನ ಭಾವನೆಗಳನೆಲ್ಲ
ಸುರಿಯುತ್ತಿರುವೆ
ನಿನ್ನ ಪಾದ ತಳದಲ್ಲಿ
ಒಮ್ಮೆ ನೋಡಲಾರೆಯಾ
ಬಗ್ಗಿ ಬಾಚಿ ತಬ್ಬಿ
ಮನದಿಂಗಿತವ ಅರಿಯಲಾರೆಯಾ
ಕನಸ ಬಿಂದಿಗೆಯ ತುಂಬ
ಸಂತಸವ ತುಂಬಿ
ನಾಳಿನ ಬದುಕಿಗೆ
ನಾಂದಿ ಹಾಡಲಾರೆಯಾ
ನೀನು ಹೀಗೆ ಮೌನವಾದರೆ
ಹುಡುಕಲೇ
ನಾನು ಇನ್ನೊಂದು ಪಾದಾ.
******
ನಿನ್ನ ಮೇಲೆ
ಸಿಕ್ಕಾಪಟ್ಟೆ ಪ್ರೀತಿಯಾಗಿದೆ
ಆದರೆ ಹೇಳಿಕೊಳ್ಳಲು ನಾಚಿಕೆಯಾಗಿದೆ
ಇದು ತಾನಾಗೇ ಗೊತ್ತಾಗುವವರೆಗೂ
ಕಾಯುವ ಸರದಿ ನನ್ನದಾಗಿದೆ
ಕಾದೂ ಕಾದೂ
ಈಗ ಮನಸು ಹೇಳುತಿದೆ
ಬಲೂ ಪೆದ್ದಾ ನೀನು
Geeta G. Hegde
ಅದೆಲ್ಲಿಂದ ಗಂಟ್ಬಿದ್ದೆ ಹೇಳು.
****
ಪ್ರತೀ ಸಲವೂ
ನಾನೇ ಸೋಲಬೇಕೆ?
ಹಾಗಂತ ನಾನೇನ್ ಹೇಳಿಲ್ವಲ್ಲಾ
ಸೋಲು ಗೆಲುವು ಇದ್ದಿದ್ದೇ
ನಾನು ನೀನೆಂಬುದ ಬಿಟ್ಟು
ನಾವು ಎಂಬ ಭಾವನೆ
ಬೇರು ಬಿಟ್ಟರೆ ಸಾಕಲ್ವಾ?
ಯೋಚಿಸೊ ಮಾರಾಯಾ.
- ಗೀತಾ ಜಿ ಹೆಗಡೆ ಕಲ್ಮನೆ