ಇತ್ತೀಚೆಗೆ ಜಾನುವಾರು ಇನ್ಸ್ಯೂರೆನ್ಸ್ ಮಾಡಲು ಮೇಳಿಗೆ ಗ್ರಾಮಕ್ಕೆ ಹೋಗಿದ್ದೆ. ಗೌಡರೊಬ್ಬರು ಅವರ ಮನೆಯ ಸುಧಾರಿತ ಎಮ್ಮೆಯೊಂದಕ್ಕೆ ವಿಮೆ ಮಾಡಿಸುವ ಉದ್ದೇಶ ಹೊಂದಿದ್ದರು. ಅದರ ಹೆಸರು “ಕಾಳಿ” ತಪ್ಪದೆ ಓದಿ, ಡಾ.ಯುವರಾಜ್ ಹೆಗಡೆ ಮೇಗರವಳ್ಳಿ ಅವರ ಕತೆ …
ಮನೆಯಲ್ಲಿ ಹತ್ತಾರು ನಾಟಿ ಜಾನುವಾರು ಜೊತೆಗೆ ಒಂದು ಹಾಲು ಕೊಡುವ ಎಮ್ಮೆ. ಎಮ್ಮೆ ದಿನಕ್ಕೆ ನಾಲ್ಕೈದು ಲೀಟರ್ ಹಾಲು ಕೊಡ್ತಿತ್ತೇನೋ ಉಳಿದಂತೆ ಗಿಡ್ಡ ಹಸುಗಳು ಲೋಟ, ಪಾವು, ಚಟಾಕು ಕೊಡುವವೇ ಇದ್ದವು. ಅದನ್ನೂ ಕರೆಯಬೇಕಾದರೆ ಹತ್ತಿರ ಕುಳಿತವರು ‘ಫುಟ್ ಬಾಲ್ ‘ ಆಗುವುದು ಎಲ್ಲರ ಮನೆಯಂತೆ ಸಾಮಾನ್ಯವೇ ಆಗಿತ್ತು.
ಆ ಮನೆಯ ಗೌಡರು ಕಾಳಿಯನ್ನು ಕೊಟ್ಟಿಗೆಯಿಂದ ಹೊರಗೆ ತಂದು ಕಟ್ಟಿ ನನಗೆ ಫೋಟೋ ತೆಗೆಯಲು ಅನುವು ಮಾಡಿಕೊಟ್ಟರು. ಅದರ ಕಿವಿಗೆ ಟ್ಯಾಗ್ ಮಾಡಿ, ಫೊಟೋ ತೆಗೆದು , ಅಂದಾಜು ವಯಸ್ಸು, ಉದ್ದಳತೆಯನ್ನು ದಾಖಲಿಸಿ, ಅವರ ಆಧಾರ್ ವಿವರ ಪಡೆದು ಹಣ ಕಟ್ಟಿಸಿಕೊಂಡು ಹೊರಡಲು ಸಿದ್ದನಾದೆ. ಅವರ ಮನೆಯ ಹೆಗ್ಗಡತಿ ಸ್ವಲ್ಪ ದೂರದಲ್ಲಿ ನಿಂತು ಮೂಕ ಪ್ರೇಕ್ಷಕರಂತೆ ಎಲ್ಲವನ್ನೂ ಗಮನಿಸುತ್ತಿದ್ದರು. ಅಲ್ಲಿಯವರೆಗೂ ಸುಮ್ಮನಿದ್ದ ಹೆಗ್ಗಡತಿ ಯಾವಾಗ ನಾನು ಹೊರಡಲು ಸಿದ್ದನಾದೆನೋ ಆಗ ಫೀಲ್ಡಿಗೆ ಇಳಿದರು ನೋಡಿ…..
” ಡಾಕ್ಟ್ರೆ ತಡೀರಿ, ಎಲ್ಲಿಗೋಗದು” ಎನ್ನುತ್ತಲೇ ಗೌಡರಿಗೆ ಏರು ಧ್ವನಿಯಲ್ಲಿ ” ಏನ್ರೀ ನಿಮ್ಮ ಕಾಳಿಗೆ ಇನ್ಸ್ಯೂರೆನ್ಸ್ ಮಾಡಿಸ್ತೀರಿ, ನನ್ ಬೋಳಿ ದನಕ್ಕೆ ಮಾಡಿಸಲ್ವ. ಅದ್ಯಾಕೆ ಮಾಡಿಸಲ್ಲ ನೋಡೆ ಬಡ್ತೀನಿ ” ಎನ್ನುತ್ತಲೇ ಕುರುಕ್ಷೇತ್ರದ ಶಂಖನಾದ ಘೀಳಿಟ್ಟಿತು.
( ಆ ದನಕ್ಕೆ ಕೋಡು ಸ್ವಲ್ಪ ಕಡಿಮೆ ಇದ್ದು ತಲೆ ಬೋಳಾಗಿರುವಂತೆ ಕಾಣುತಿದ್ದ ಕಾರಣ “ಬೋಳಿ” ಎಂದು ಹೆಸರಿಟ್ಟಿದ್ದರು)
ಗಂಡ- ಅಲ್ಲಾ ಮಾರಾಯ್ತಿ , ಬೋಳಿ ನಾಟಿ ದನ.ಇಂತವು ಊರಲ್ಲಿ ಸಾವಿರಾರು ಇದಾವೆ. ಅವುಕ್ಕೆಲ್ಲ ಇನ್ಸ್ಯೂರೆನ್ಸ್ ಯಾರೂ ಮಾಡ್ಸಲ್ಲೇ ತಾಯಿ. ಎಮ್ಮೆ ಹಾಲು ಜಾಸ್ತಿ ಕೊಡ್ತದೆ, ಬೆಲೆ ಹೆಚ್ಚು ಇದೆ , ನನ್ನ ಸಾಕಾಣಿಕೆಗೊಂದು ಭದ್ರತೆ ಇರಲಿ ಅಂತ ಡಾಕ್ಟ್ರಿಗೆ ಬರಕ್ಕೇಳಿದ್ದೆ. ನಿನ್ ಬೋಳಿ ದನ ಕೊಡೋದು ಒಂದು ಲೋಟ ಹಾಲು ಅದೂ ವರ್ಷದಲ್ಲಿ ಮೂರು ತಿಂಗಳು. ಅದನ್ನು ಕರೆಯಂಗಾರೂ ಅದ್ಯ “ಒದುಕ್ಲು”, ಮನೆ ಸೇರೋದು ಅಮವಾಸೆ ಹುಣ್ಣಿಮೆಗೆ ಮಾತ್ರ , ಕಾನಲ್ಲೇ ಉಳೀತದೆ,ತೋಟ ಹಾರ್‍ತದೆ ಅದರ ಹುಲಿ ಹಿಡಿಯಾ….. ಎನ್ನುತ್ತಲೇ ಬೋಳಿಯ ಎಲ್ಲಾ ಕೆಟ್ಟ ಚಾಳಿಗಳನ್ನೂ ಲೀಸ್ಟ್ ಮಾಡುತ್ತಾ ಜರಿಯತೊಡಗಿದರು.
ಹೆಗ್ಗಡತಿ- ಅದೆಲ್ಲ ಗೊತ್ತಿಲ್ಲ, ನಿಮಗೆ ಕಾಳಿ ಇಷ್ಟ ಆದ್ರೆ ನಂಗೆ ಬೋಳಿ ಇಷ್ಟ. ಅದು ನಾನ್ ಸಾಕಿದ್ ದನ, ಅದಕ್ಕೆ ನಿಮಗೆ ಸಸಾರ. ಅದಕ್ಕೆ ಓಲೆ ಹಾಕಬೇಕು. ಈಗ ನೀವು ಹಿಡೀತೀರೋ ಇಲ್ವೋ ಯಾರನ್ನಾದರೂ ಕರೀತೀನಿ ಎಂದು ” ಪಾಪಣ್ಣಾ ಪಾಪಣ್ಣಾ ಚೂರ್ ಬಾರೋ ಮಗನೆ ” ಎನ್ನತ್ತಲೇ ಪಕ್ಕದ ಮನೆಯ ಹುಡುಗನನ್ನು ಕರೆಯಲು ದಾವಿಸುವಂತೆ ನಟಿಸಿ ತನ್ನ ಸ್ಪಷ್ಟ ನಿಲುವನ್ನು ಮುಂದಿಟ್ಟರು.
ಗಂಡ- ಯಾರನ್ನಾದರೂ ಕರಿ , ದುಡ್ಡು ಕಟ್ಟೋನು ನಾನೆ ಅಲ್ವಾ. ದನ ಹಿಡಿಯಕ್ಕೆ ಬಂದವನೇನು ಇನ್ಸ್ಯೂರೆನ್ಸ್ ದುಡ್ಡು ಕೊಡ್ತಾನ. ನೋಡನ ಅದೇನು ಮಾಡ್ತೀಯೋ ಮಾಡು ಎಂದು ತನ್ನ ಬಳಿಯಿದ್ದ ಅಲ್ಟಿಮೇಟ್ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾದರು.
ಹೆಗ್ಗಡತಿ- ಏ…ನಿಮ್ ದುಡ್ಡಿಗೆ ಬೆಂಕಿ ಬಿತ್ತು. ನನ್ ಹತ್ರ ಅಪ್ಪಯ್ಯ ಕೊಟ್ಟಿದ್ ಐನೂರು ರೂಪಾಯಿ ದುಡ್ಡಿದೆ. ನೀವು ಮಾಡಿ ಡಾಕ್ಟ್ರೆ ಎನ್ನುತ್ತಾ “ಪ್ರತಿಅಸ್ತ್ರ”ವನ್ನು ಬತ್ತಳಿಕೆಯಿಂದ ತೆಗೆದಿಟ್ಟರು.
ಅಷ್ಟರಲ್ಲಾಗಲೇ ಆಕೆ ನಂಬರ್ ಅಳಿಸಿಹೋದ 1100 ಬೇಸಿಕ್ ಮೊಬೈಲ್ ಸೆಟ್ ನನ್ನ ಕೈಗಿಟ್ಟು ಡಾಕ್ಟ್ರೆ ನನ್ ಮಗ ಬೆಂಗಳೂರಿನಲ್ಲಿ ಇರೋದು .ಅವನಿಗೊಂದು ಫೋನ್ ಮಾಡಿಕೊಡಿ , ನಂಗೆ ನಂಬರ್ ತೆಗೆಯಕ್ಕೆ ಬರಲ್ಲ ಮಾರ್ರೆ.ಇತ್ಯರ್ಥ ಮಾಡ್ದೆ ಬಿಡಲ್ಲ ಈಗ …..

ಕುರುಕ್ಷೇತ್ರ ಮುಂದುವರೆದು ಬೀಕರವಾಗುವ ಸನ್ನಿವೇಶ ಎದುರಾಗುವ ಲಕ್ಷಣಗಳು ಕಂಡುಬಂದವು.
ಈಗ ಸಂಧಾನ ಮಾಡುವ ಪಾತ್ರ ನನ್ನದಾಯಿತು. “ಗೌಡ್ರೆ, ಹೋಗ್ಲಿ ಅತ್ಲಾಗೆ ಬೋಳಿನ ಹಿಡೀರಿ. ಇಲ್ಲಾಂದ್ರೆ ನೀವು ಮನೇಲಿ ಇರಂಗಿಲ್ಲ ಮತೆ. ರಾತ್ರೆ ಇಡೀ ಜಾಗಂಟೆ ಕೇಳಬೇಕಾದೀತು. ಮನೇಲಿ ಇಬ್ರೆ ಇದೀರ ಬೇರೆ ಎಂದೆ.
ಗೌಡರಿಗೆ ಮುಂಬರುವ ಸನ್ನಿವೇಶದ ಸ್ಪಷ್ಟ ಅರಿವಾಯಿತು.ಕೊನೆಗೆ ತಾವೇ ಶರಣಾಗುವುದರೊಂದಿಗೆ ಕುರುಕ್ಷೇತ್ರ ಮುಕ್ತಾಯವಾಯಿತು.ಗೌಡರು ನನ್ನ ಹತ್ತಿರ ಬಂದು
” ಡಾಕ್ಟ್ರೆ, ಕಮ್ಮಿ ದುಡ್ಡಿಗೆ ಇನ್ಸ್ಯೂರೆನ್ಸ್ ಮಾಡಿ ಅತಾ” ಎಂದು ಪಿಸುಗುಟ್ಟಿದರು.
ಅಂತೂ ಕಾಳಿ -ಬೋಳಿ ಎರಡಕ್ಕೂ ಇನ್ಸ್ಯೂರೆನ್ಸ್ ಮಾಡಿ ಗಂಡ ಹೆಂಡಿರ ನಡುವೆ ಯಶಸ್ವಿ ಸಂಧಾನ ಮಾಡಿಸಿ ಹೊರಬಂದೆ.
- ಡಾ.ಯುವರಾಜ್ ಹೆಗಡೆ ಮೇಗರವಳ್ಳಿ (ವೈದ್ಯಕೀಯ ಬರಹಗಾರರು, ಪಶುವೈದ್ಯರು) ತೀರ್ಥಹಳ್ಳಿ
