ಕಾಳೀ ನದಿಯು ಸೂಪಾದಿಂದ ಪೂರ್ವಾಭಿಮುಖವಾಗಿ ದಾಂಡೇಲಿಯ ಕಡೆಗೆ ಹರಿಯುತ್ತದೆ. ಶೂರ್ಪನಖಿಯ ಗುಹೆ ಮತ್ತು ಅಲ್ಲಿಯೇ ಇರುವ ಆಣೆಕಟ್ಟಿನ ಬುನಾದಿ ಜಾಗ ಎರಡೂ ಬೆಟ್ಟಗಳು ದೂರದಿಂದಲೇ ಕಾಣುತ್ತವೆ.
ಇಸ್ವಿ -೧೯೭೦ ಸ್ಥಳ-ಸೂಪಾ ಡ್ಯಾಮ ಸೈಟ.
ಕರೆಂಟು ತಂದವರ ಕತ್ತಲ ಬದುಕು
‘’ಬನ್ನಿ, ಬನ್ನಿ ಚಾಂದಗುಡೇಯವ್ರೇ. ಶೇಖರ್ ಇಲ್ಲೇ ಇದ್ದಾರೆ ನೋಡಿ. ನಾನೇ ಕೂಗಿ ಕರೆಯೋಣಾಂತಿದ್ದೆ. ಅಷ್ಟರಲ್ಲಿ ನೀವೇ ಬಂದ್ರಿ’’ ಚಾಂದಗುಡೆ ಅಂದ ಕೂಡಲೇ ನಾನು ಎದ್ದು ‘ನಮಸ್ಕಾರ’ ಅಂದೆ. ಅವರೂ ನಮ್ಮ ಕಚೇರಿಯವರೇ. ಮೊದಲ ಬಾರಿ ಅವರನ್ನು ನೋಡಿದ್ದು. ಅವರು ಡಿಪಾರ್ಟುಮೆಂಟು ಸೇರಿ ಇಪ್ಪತ್ತು ವರ್ಷ ಆಗಿದೆಯಂತೆ. ಈಗ ಅವರು ವರ್ಕ ಚಾರ್ಜ ಸಿಬ್ಬಂದಿ. ತಿಂಗಳ ಸಂಬಳದವರು.
ಇದಕ್ಕೆ ಮೊದಲು ಕಾಳೀ ನದೀ ತಟದ ಬೊಮ್ಮನಳ್ಳಿ ಪಿಕಪ್ ಡ್ಯಾಮ್ ಕಟ್ಟುವ ಜಾಗದಲ್ಲಿ ಅನ್ವೇಷಣಾ ಕಾರ್ಯದಲ್ಲಿ ಕೆಲಸ ಮಾಡಿದವರಂತೆ. ಸ್ವಲ್ಪ ದಿನ ತಟ್ಟೀಹಳ್ಳ ಡ್ಯಾಮ್ ಕಟ್ಟುವ ಜಾಗದಲ್ಲೂ ಸರ್ವೇ ಕೆಲಸ ಮಾಡಿದ್ದಾರಂತೆ. ೧೯೬೧ ನೇ ಇಸ್ವಿಯಲ್ಲಿಯೇ ಅವರು ದಿಗೂಲಿಯಾಗಿ ಕೆಲಸಕ್ಕೆ ಸೇರಿಕೊಂಡು ನಂತರ ವರ್ಕ ಚಾರ್ಜ ಸಿಬ್ಬಂದಿಯಾಗಿ ಪರಿಗಣಿಸಲ್ಪಟ್ಟರು. ಹೆಚ್ಚೇನೂ ಓದಿದವರಲ್ಲ. ಆಗ ಗುತ್ತಿ ಸುರಂಗದ ಪ್ರವೇಶ ದ್ವಾರದ ಬಳಿ ಮರಾಠೀ ಜನರ ಜೊತೆ ಮನೆ ಮಾಡಿಕೊಂಡು ಕಾಡಿನಲ್ಲಿ ಸಂಸಾರ ಇಟ್ಟುಕೊಂಡು ಯೋಜನೆಗಾಗಿ ಕೆಲಸ ಮಾಡಿದವರು ಅವರು. ಈಗ ಸೂಪಾಕ್ಕೆ ಆಟೋಮ್ಯಾಟಿಕ್ ರೇನ್ ಗೇಜ್ ‘ಇನ್ ಚಾರ್ಜ’ ಆಗಿ ಬಂದಿದ್ದಾರೆ.
(ಲೇಖಕ ಹೂಲಿಶೇಖರ್ ಅವರ ಹಳೆಯ ಫೋಟೋ )
ಯೋಜನೆಯ ಹಲವು ಮುಖಗಳು, ರಾಜ್ಯದ ತಾಂತ್ರಿಕ ವಿನ್ಯಾಸ ಪರಿಣಿತರ ಸೂಚನೆಗಳು ಇತ್ಯಾದಿ.
ಶ್ರೀ ಸಿ.ಎಸ್.ಹೆಬ್ಲಿ ಅವರು ಸಹಾಯಕ ಕಾರ್ಯಪಾಲಕ ಇಂಜನಿಯರ ಆಗಿದ್ದ ಸಿವಿಲ್ ಕಚೇರಿಗೆ ಕೆಲಸಗಳ ದೊಡ್ಡ ಭಾರವಿತ್ತು. ಸೂಪಾ ಯೋಜನಾ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಅಳೆದು ಆಣೆಕಟ್ಟಿನಲ್ಲಿ ಮುಂದೆ ಸಂಗ್ರಹ ಆಗಬಹುದಾದ ನೀರಿನ ಮಟ್ಟ ಮತ್ತು ನಾಶವಾಗುವ ಕಾಡು, ಊರುಗಳನ್ನು ಗುರುತಿಸುವುದು ಕಡ್ಡಾಯವಾಗಿತ್ತು. ಸೂಪಾದಲ್ಲಿ ದಟ್ಟ ಕಾಡು ಮುಳುಗಿ ಹೋಗುತ್ತದೆ ಅನ್ನುವುದೇ ಒಂದು ನೋವಿನ ಸಂಗತಿಯಾದರೂ ದೇಶದ ಪ್ರಗತಿಯ ಕಾರಣಕ್ಕಾಗಿ ಅದು ಅನಿವಾರ್ಯವೂ ಆಗಿತ್ತು. ಆಣೆಕಟ್ಟು ಕಟ್ಟುವ ಮುನ್ನ ಅಲ್ಲಲ್ಲಿ ಹೀಗೆ ರೇನ್ ಗೇಜ್ ಮೀಟರುಗಳನ್ನಿಟ್ಟು ವರ್ಷದಲ್ಲಿ ಬೀಳುವ ಮಳೆಯ ನೀರನ್ನು ಅಳೆಯುವುದು ತಜ್ಞರ ಅನಿವಾರ್ಯದ ನಿರ್ಧಾರವಾಗಿರುತ್ತದೆ. ಬೀಳುವ ಮಳೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಆಣೆಕಟ್ಟಿನ ವಿನ್ಯಾಸ ಮತ್ತು ಅದರ ಮುಂದಿನ ಯೋಜನೆಗಳು ನಿರ್ಧಾರವಾಗುತ್ತವೆ. ಅಲ್ಲದೆ ಆಣೆಕಟ್ಟು ಕಟ್ಟುವ ಸ್ಥಳದಲ್ಲಿ ಕಲ್ಲು ಹೇಗಿದೆ. ಮಣ್ಣು ಹೇಗಿದೆ. ಅಲ್ಲಿ ಕಟ್ಟೆಯನ್ನು ಕಲ್ಲಿನಂದ (Masonary Dam)ಕಟ್ಟುವುದೋ? ಇಲ್ಲಾ ಕಾಂಕ್ರೀಟಿನಿಂದ
ಫೋಟೋ ಕೃಪೆ : DeccanChronicle
ಕಟ್ಟುವುದೋ (Concrete Dam) ಎಂಬ ನಿರ್ಧಾರಗಳು ಸ್ಥಳೀಯ ಭೌಗೋಳಿಕ ಅನ್ವೇಷಣೆಗಳಿಂದಲೇ
ನಿರ್ಧರಿಸಲಾಗುತ್ತದೆ. ರಾಜ್ಯದಲ್ಲಿ ಹಿಂದೆ ಕಟ್ಟಿದ ಕನ್ನಂಬಾಡಿ ಕಟ್ಟೆ, ಲಿಂಗನಮಕ್ಕಿ ಕಟ್ಟೆ, ಹಾರಂಗಿ ಕಟ್ಟೆ, ತುಂಗಭದ್ರಾ ಕಟ್ಟೆಗಳನ್ನು ಕಲ್ಲು- ಸಿಮೆಂಟಿನಿಂದ ಕಟ್ಟಲಾಗಿದೆ. ಕಾಳೀ ಯೋಜನೆಯಲ್ಲಿ ಮುಂದೆ ಕಟ್ಟಲಿರುವ ಸೂಪಾ, ಬೊಮ್ಮನಳ್ಳಿ, ತಟ್ಟೀಹಳ್ಳ, ಕದ್ರಾ ಕಟ್ಟೆಗಳಿಗೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಸರಕಾರದ ‘ತಾಂತ್ರಿಕ ವಿನ್ಯಾಸ ಕಚೇರಿ’ ನಿರ್ಧರಿಸಿತ್ತು. ಆದರೆ ಮುಂದೆ ಸೂಪಾ ಆಣೆಕಟ್ಟನ್ನು ಕಾಂಕ್ರೀಟಿನಿಂದ ಕಟ್ಟಲು ನಿರ್ಧರಿಸಿದ್ದು ಬೇರೆ ವಿಚಾರ. ರಾಜ್ಯದ ವಿನ್ಯಾಸ ಕಚೇರಿಯ ಸೂಚನೆಯಂತೆಯೇ ಯೋಜನಾ ಪ್ರದೇಶದಲ್ಲಿ ಕಾರ್ಯಗಳು ನಡೆಯುತ್ತಿದ್ದವು. ಒಂದು ಕಡೆ ಹೊರಮೈ ಸರ್ವೇ ಕೆಲಸಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು
ಗುರುತಿಸುವ ಕೆಲಸ ನಡೆದಿತ್ತು. ಮತ್ತು ಭೂವಿಜ್ಞಾನಿಗಳ ಸಲಹೆಯಂತೆ ಆಣೆಕಟ್ಟು ಕಟ್ಟುವ ಎರಡೂ ಬೆಟ್ಟಗಳ ಭೂ ಸಾಮರ್ಥ್ಯವನ್ನು ಗುರುತಿಸಲು ಮತ್ತು ಆಣೆಕಟ್ಟೆಯ ಬುನಾದಿಯ ಗಟ್ಟಿತನವನ್ನು ಪರೀಕ್ಷಿಸಲು ಅಲ್ಲಿ ಪರೀಕ್ಷಾರ್ಥ ‘ಟೆಸ್ಬಿಂಗ್ ಡ್ರಿಫ್ಟ್’ ಗಳನ್ನು [ಇನ್ನೂರು ಮುನ್ನೂರು ಅಡಿ ಉದ್ದದ ಗುಹೆಗಳನ್ನು] ಕೊರೆಯುವುದು, ಮತ್ತು ಈ ಡ್ರಿಫ್ಟಗಳ ಮೂಲಕ ಎರಡೂ ಬೆಟ್ಟಗಳ ಗರ್ಭದಲ್ಲಿ ನಡೆದುಕೊಂಡು ಹೋಗಿ ಅಲ್ಲಿರುವ ಕಲ್ಲು ಮಣ್ಣುಗಳ ವಿವರಗಳನ್ನು ಸಂಗ್ರಹಿಸುವುದು ಅನಿವಾರ್ಯದ ಕೆಲಸವಾಗಿತ್ತು. ಒಂದೊಂದು ಬೆಟ್ಟದಲ್ಲಿ ನಾಲ್ಕು-ನಾಲ್ಕು ಇಂಥ ಡ್ರಿಫ್ಬಗಳನ್ನು ತೋಡಲು ಆಗ ಸರಕಾರದಿಂದ ಟೆಂಡರೂ ಆಗಿತ್ತು. ಮುಂಬಯಿಯ ಮೆಸರ್ಸ. ಆರ್.ಜೆ.ಶಾಹ್ ಕಂಪನಿಯು ಈ ಟೆಂಡರನ್ನು ಪಡೆದುಕೊಂಡಿತ್ತು. ಕಾಮಗಾರಿ ಆರಂಭಿಸಲು ಕಂಪನಿ ತುದಿಗಾಲ ಮೇಲೆ ನಿಂತು ಆದೇಶಕ್ಕಾಗಿ ಕಾಯುತ್ತಿತ್ತು. ಮತ್ತು ಇಡೀ ಕಾಳೀ ಜಲವಿದ್ಯುತ್ ಯೋಜನೆಯಲ್ಲಿ ಮೊದಲ ಅಡಿ ಇಡುತ್ತಿರುವ ಕಂಪನಿಯೂ ಆದೇ ಆಗಿತ್ತು.
ಫೋಟೋ ಕೃಪೆ : heritagebunglow.com
ಹಾಗೆಯೇ ಯೋಜನಾ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಅಳೆಯುವುದು, ಆಣೆಕಟ್ಟಿನಲ್ಲಿ ಮುಂದೆ ವಾಸವಾಗುವ ಸಿಬ್ಬಂದಿಗಳಿಗೆ ವಸತಿ ಸಮುಚ್ಛಯ ನಿರ್ಮಿಸಲು ಸ್ಥಳ ಗುರುತಿಸಿ ಅಲ್ಲಿ ಕಾಡು ಸವರುವುದು ಇತ್ಯಾದಿ ಕೆಲಸಗಳು ಸಿವಿಲ್ ವಿಂಗ್ ಪಾಲಿಗೆ ಬಂದರೆ, ಬೋರ್ ಕೊರೆಯುವ ಯಂತ್ರಗಳಿಂದ ಆಣೆಕಟ್ಟು ಮತ್ತು ಯೋಜನೆಯ ಇತರೆ ಗುರುತಿಸಲ್ಪಟ್ಟ ಸ್ಥಳಗಳಲ್ಲಿ ಭೂಗರ್ಭ ದಿಂದ ಕಲ್ಲು ಕೋರ್ ಗಳನ್ನು ಹೊರತಗೆಯುವುದು, ಮುಂತಾದವುಗಳು ಮೆಕ್ಯಾನಿಕ್ ವಿಂಗ್‌ಗೆ ಸೇರಿದ್ದವು. ಇಂಥಅದರ ಅಂಗವಾಗಿ ಇಂಥ ರೇನ್ ಗೇಜ್ ಮೀಟರುಗಳನ್ನು ಕಾಳೀ ಯೋಜನಾ ಪ್ರದೇಶಗಳಾದ ಸೂಪಾ, ಸೂಪಾ ಡ್ಯಾಮ ಸೈಟ್, ಜಗಲಬೇಟ್, ಜೋಯಡಾ, ಕುಂಬಾರವಾಡಾ, ಉಳವಿ, ಗುಂದ, ಅಣಸಿ, ಕದ್ರಾ, ಬೊಮ್ಮನಹಳ್ಳಿ, ತಟ್ಟೀ ಹಳ್ಳ, ಗುತ್ತಿ, ಅಮಗಾ, ಸೈಕ್ಸಪಾಯಿಂಟ, ದಾಂಡೇಲಿ, ಲೋಂಡಾ ಮುಂತಾದ ಕಡೆಗಳಲ್ಲಿ ಇರಿಸಲಾಗಿತ್ತು. ಈ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಆಧರಿಸಿ ಆಣೆಕಟ್ಟಿನ ಎತ್ತರವನ್ನು ನಿರ್ಧರಿಸುವುದೂ ತಜ್ಞರ ಹೊಣೆಗಾರಿಕೆಯಾಗಿತ್ತು. ಮತ್ತು ಈ ಯಂತ್ರಗಳ ಉಸ್ತುವಾರಿಗಾಗಿ
ನಾಲ್ಕು ಜನ ಗೇಜ್ ರೀಡರುಗಳನ್ನು ನೇಮಿಸಲಾಗಿತ್ತು. ಅವರೇ ಈ ಎಲ್ಲಾ ಪ್ರದೇಶಗಳಲ್ಲಿ ಬೀಳುವ ಮಳೆಯ ಅಳತೆಯನ್ನು ದಾಖಲಿಸಬೇಕಾಗಿತ್ತು. ಅವರಲ್ಲಿ ಒಬ್ಬರು ಈ ಆನಂದರಾವ್ ಚಾಂದಗುಡೆಯವರು.
ಶ್ರೀ ಆನಂದರಾವ್ ಚಾಂದಗುಡೆಯವರ ದಿನಚರಿ
ಬೆಳಿಗ್ಗೆ ಆರೂವರೆ ಗಂಟೆಗೆ ಲೋಂಡಾಕ್ಕೆ ಹೋಗುವ ಬಸ್ಸು ಹಿಡಿದು ಜಗಲಬೇಟ್‌ನಲ್ಲಿ ಇಳಿಯುತ್ತಾರೆ. ಅಲ್ಲಿ ಗಣಪತಿ ಗುಡಿ ಮುಂದೆ ಇರಿಸಲಾಗಿದ್ದ ರೇನ್ ಗೇಜ್ ಮೀಟರ್ ಸಂಖ್ಯೆ ನೋಡಿ ಅವತ್ತು ಬಿದ್ದ ಮಳೆ ಪ್ರಮಾಣವನ್ನು ದಾಖಲಿಸಿಕೊಂಡು ಸೂಪಾಕ್ಕೆ ವಾಪಸಾಗುತ್ತಾರೆ. ಎಂಟು ಗಂಟೆಗೆ ಸೂಪಾ ಬ್ರಿಟಿಷ ಬಂಗ್ಲೆಯ ಮುಂದೆ ಇರಿಸಲಾಗಿದ್ದ ಆಟೋಮ್ಯಾಟಿಕ್ ರೇನ್‌ಗೇಜ್ ಮೀಟರ್ ನೋಡುತ್ತಾರೆ. ನಂತರ ಮನೆಗೆ ಬಂದು ತಿಂಡಿ ತಿಂದು ಮನೆಯಿಂದ ಒಂದೂವರೆ ಕಿಲೋಮೀಟರ್ ದೂರ ಇರುವ ಸೂಪಾ ಡ್ಯಾಮ್ ಸೈಟ್ ಗೆ ಹೋಗುತ್ತಾರೆ. ಅಲ್ಲಿ ನದಿಯ ಎಡ ದಂಡೆಯಲ್ಲಿ ಇಟ್ಟಿರುವ ಇನ್ನೊಂದು ಆಟೋಮ್ಯಾಟಿಕ್ ಮಳೆ ನೀರು ಅಳೆಯುವ ಯಂತ್ರದ ಶೀಟು ಬದಲಿಸುತ್ತಾರೆ. ಮಧ್ಯಾನದವರೆಗೆ ಡ್ಯಾಮ್ ಸೈಟಿನಲ್ಲಿದ್ದು ಅಲ್ಲಿ ವಾಸವಾಗಿರುವ ಕೆಲಸಗಾರರೊಂದಿಗೆ ಹರಟೆ, ಮಾತು ಮುಗಿಸಿಕೊಂಡು ಮತ್ತೆ ನಡೆದುಕೊಂಡೇ ಸೂಪಾಕ್ಕೆ ಬರುತ್ತಾರೆ. ಅಲ್ಲಿಗೆ ಅವರ ಅಂದಿನ ಕೆಲಸ ಮುಗಿಯಿತು. ಅಷ್ಟನ್ನೂ ಚಾಚೂ ತಪ್ಪದೆ ಮಾಡುತ್ತಿದ್ದರು.
ಚಾಂದಗುಡೆಯವರದು ತುಂಬಿದ ಸಂಸಾರ. ಅವರಿಗೆ ತಿಂಗಳಿಗೆ ನೂರಾ ಇಪ್ಪತ್ತು ರೂಪಾಯಿ ಸರಕಾರೀ ಸಂಬಳ
(ಆನಂದ ರಾವ್ಚಾಂದಗುಡೆ, ಶ್ರೀಮತಿ ಚಾಂದಗುಡೆ ಮತ್ತು ಪುತ್ರ ಪ್ರತಾಪ್ ಚಾಂದಗುಡೆ )
ಚಾಂದಗುಡೆಯವರಿಗೆ ತಿಂಗಳಿಗೆ ನೂರಾ ಇಪ್ಪತ್ತು ರೂಪಾಯಿ ಸಂಬಳ. ಅದರಲ್ಲಿಯೇ ಮನೆ ಬಾಡಿಗೆ, ಸರಕಾರೀ ಶಾಲೆಗೆ ಹೋಗುವ ಮಕ್ಕಳ ಪುಸ್ತಕ-ಬಟ್ಟೆ ಖರ್ಚು ಮತ್ತು ಇಬ್ಬರು ದಂಪತಿಗಳ ರೇಶನ್ ಖರ್ಚು, ದವಾಖಾನೆಯ ಖರ್ಚು, ಬಟ್ಟೆ-ಬರೆ ಖರ್ಚು ಇತ್ಯಾದಿಗಳನ್ನು ನೀಗಿಸಿಕೊಳ್ಳುತ್ತಿದ್ದರು.ಭೈರಾಚಾರರ ಮನೆಗೆ ಹೊಂದಿಯೇ ಇರುವ ಮನೆಯೇ ಚಾಂದಗೋಡಿಯವರದು. ಅವರದು ಮರಾಠೀ ಕುಟುಂಬ. ಧಾರವಾಡದ ಮರಾಠಾ ಕಾಲೋನಿಯಲ್ಲಿ ಸ್ವಂತ ಮನೆ ಇದೆಯಂತೆ. ಇವರಿಗೆ ಮೂರು ಜನ ಗಂಡು ಮಕ್ಕಳು. ಕೊನೆಯ ಒಬ್ಬಳೇ ಒಬ್ಬಳು ಹೆಣ್ಣು ಮಗಳು. ನಾನು ನೋಡಿದಾಗ ಆಕೆ ಆಗ ಐದು ವರ್ಷದ ಬಾಲಕಿ. ಮನೆಯಲ್ಲಿ ಐವತ್ತು ದಾಟಿದ ಹೆಂಡತಿ. ಪಕ್ಕಾ ಮರಾಠಾ ಶೈಲಿಯಲ್ಲೇ ಸೀರೆ ಉಡುತ್ತಾರೆ. ಹಣೆಗೆ ಮೇಣದ ಕುಂಕುಮ ಹಚ್ಚಿಕೊಳ್ಳುತ್ತಾರೆ. ಒಳ್ಳೆಯ ಜನ. ಚಾಂದಗುಡೆಯವರಿಗೆ ಮಾತಿಗೊಮ್ಮೆ ನಗುವ. ನಗುತ್ತಲೇ ಮಾತಾಡುವ ಅಭ್ಯಾಸ. ಇದರ ಬಗ್ಗೆ ಭೈರಾಚಾರರು ಮೊದಲೇ ನನಗೆ ಸುಳಿವು ಕೊಟ್ಟಿದ್ದರು.
‘’ನಮಸ್ಕಾರೀ ಶೇಖರವರ. ನೀವೂ ನಮ್ ಹೆಬಳೀ ಸಾಹೇಬರ ಆಫೀಸಿಗೆ ಸೇರಿಕೊಂಡೀರಿ ಅಂತ ಗೊತ್ತಾತು. ನೀವು ಸವದತ್ತೀ ಕಡೆಯವರಂತಲಾ. ಅಗದೀ ಚುಲೋ ಆತು. ನಮ್ಮದೂ ಅತ್ಲಾಗ ಧಾರವಾಡರೀ ಹ್ಹಹ್ಹಹ್ಹಾ…’’ನೀವು ಸವದತ್ತೀ ಕಡೆಯವರಂತಲಾ. ಅಗದೀ ಚುಲೋ ಆತು. ನಮ್ಮದೂ ಅತ್ಲಾಗ ಧಾರವಾಡರೀ ಹ್ಹಹ್ಹಹ್ಹಾ…’’ ಅವರು ನಗುತ್ತಲೇ ಮಾತಾಡಿದರು. ಅವರು ನಗುತ್ತಲೇ ಮಾತಾಡಿದರು.
ಫೋಟೋ ಕೃಪೆ : MylaiBazar
ಬರ್ರಿ. ಡ್ಯಾಮ ಸೈಟಿಗೆ ಹೋಗೂನು
‘’ನಾಯಕ್ ಸಾಹೇಬ್ರು ಹೇಳ್ಯಾರಿ. ಈಗ ನೀವೂ ನನ್ನ ಜೋಡೀ ಡ್ಯಾಮ ಸೈಟಿಗೆ ಬರಬೇಕಂತ. ನಡೀರಿ ಹೋಗೂನು. ಒಂಭತ್ತಕ್ಕಂದ್ರ ಅಲ್ಲಿ ರೇನ್ ಗೇಜ್ ರೀಡಿಂಗ್ ದಾಖಲ್ ಮಾಡ್ಕೋಬೇಕು. ನಿಮ್ದು ನಾಷ್ಟಾ ಆತು ಹೌದಲ್ಲೋ ಮತ್ತ’’ ಅಂದರು. ಅಷ್ಟರಲ್ಲಿ ಪರಿಮಳಾ ಅವರು ಮೂರೂ ಜನಕ್ಕೆ ಇಡ್ಲಿ ತಂದು ಮುಂದಿಟ್ಟಿದ್ದರು. ಚಾಂದಗುಡೆಯವರು ಒಮ್ಮೆ ‘ಹ್ಹ ಹ್ಹ ಹ್ಹ…’ ಎಂದು ನಕ್ಕು ಕೂತೇ ಬಿಟ್ಟರು ತಟ್ಟೆಯ ಮುಂದೆ.
‘’ಮತ್ತೆ ಹೈದರಾಬಾದ್ ಟೀಮು ಬರೂದಿತ್ತಲ್ಲರೀ….’’ ಆತಂಕದಿಂದಲೇ ಕೇಳಿದೆ.
‘’ಅವ್ರು ಈಗಾಗ್ಲೇ ಫಾರೆಸ್ಟ ಬಂಗ್ಲೇಕ ಬಂದಾರಂತ. ಧಾರವಾಡ ಆಫೀಸೀನಿಂದ ಜೀಪು ಬಂದು ಬಿಟ್ಟು ಹೋಗೇತಿ. ಇಲ್ಲಿ ಓಡಾಡ್ಲಿಕ್ಕೆ ಬ್ಯಾರೇ ಕಾರು ಭಾಡಗೀ ಹಿಡದಾರಂತ. ನೀವು ಲಗೂನ ನಾಷ್ಟಾ ಮುಗಸ್ರಿ’’
ಅನ್ನುತ್ತಲೇ ಒಂದು ಇಡ್ಲಿಯನ್ನು ಅನಾಮತ್ತಾಗಿ ಬಾಯಿಗೆ ಹಾಕಿಕೊಂಡು ನುರುಸಿದರು. ಪರಿಮಳಾ ಅವರು ಇಡ್ಲಿಯ ದೊಡ್ಡ ತಟ್ಟೆ ಮತ್ತು ಕಾಯಿ ಚಟ್ನಿಯ ದೊಡ್ಡ ಪಾಕತ್ರೆಯನ್ನು ತಂದು ಎಲ್ಲರ ಮುಂದಿಟ್ಟರು.
ಚಾಂದಗುಡೆಯವರು ಒಂದೊಂದೇ ಇಡ್ಲಿಗಳನ್ನು ತಮ್ಮ ತಟ್ಟೆಗೆ ಹಾಕಿಕೊಳ್ಳುತ್ತ ನಗೆಯನ್ನೂ ಬೆರೆಸುತ್ತ – ‘’ಹ್ಹಹ್ಹಹ್ಹ….! ಮೇಡಮ್ಮೋರ ಶ್ರಮಾ ಸಾರ್ಥಕ ಆತು ತಗೋರಿ. ಅಲ್ರೀಪಾ…ಹಿಂಗ್ ಎಲ್ಲಿಂದಾನೋ ಸಾಹಿತಿಗೂಳು ಬರಬೇಕೆಲ್ಲೇ. ಹಿಂಗ್…ಎಲ್ಲಾರೂ ಸೇರಿ ಇಡ್ಲಿ ತಿನಬೇಕೆಲ್ಲೇ. ಅದೂ ಪರಿಮಳಾಬಾಯಿಯವ್ರ ಅಮೃತ ಹಸ್ತ ನಮಗ ದೊರಕಬೇಕೆಲ್ಲೇ…. ಹ್ಹಹ್ಹಹ್ಹ…! ಜನ್ಮ ಸಾರ್ಥಕ ಆತು ನೋಡ್ರಿ ಇವತ್ತ… ‘’ ಎನ್ನುತ್ತ ಬಾಯ್ತುಂಬ ನಕ್ಕರು. ಪರಿಮಳಾ ಅವರಿಗೆ ಖುಶಿಯೋ ಖುಶಿ. ಚಾಂದಗುಡೆಯವರದ್ದು ಜನರನ್ನು ಖುಶಿ ಪಡಿಸುವ ವ್ಯಕ್ತಿತ್ವ ಎಂದು ಆಗಲೇ ಅಂದುಕೊಂಡೆ.
ಅವರು ನಗುತ್ತಲೇ ಹೇಳಿದಾಗ ನನಲ್ಲಿ ಆತಂಕ ಸುರುವಾಯಿತು. ಬೇಗ ನಾನೂ ಡ್ಯಾಮ ಸೈಟಿಗೆ ಹೋಗಬೇಕು ಎಂಬ ಆತುರ ಹೆಚ್ಚಾಯಿತು. ಪಕ್ಕದಲ್ಲೇ ಇದ್ದ ಚಾಂದುಗುಡೆಯವರ ಮನೆಗೂ ಹೋಗಬೇಕಿತ್ತು. ಆದರೆ ಹೋಗಲಿಲ್ಲ. ಸಮಯವಿರದ್ದರಿಂದ ಇಬ್ಬರೂ ಎದ್ದೆವು.
ಸಂಜೀ ಫಳ್ಹಾರಕ್ಕ ನಮ್ಮನೀಗೇ ಬರ್ರಿ ಮತ್ತ
‘’ಸಂಜೀ ಫಳ್ಹಾರಕ್ಕ ಎಲ್ಲಾರೂ ನಮ್ಮ ಮನೀಗನ಼ಽ ಬರಬೇಕರಿ ಮತ್ತ’’
ಎಂದು ಭೈರಾಚಾರಿ ದಂಪತಿಗಳಿಗೆ ಆವ್ಹಾನವಿತ್ತು ಅವರು ಎದ್ದರು. ನಾನೂ ಏಳುವುದನ್ನು ನೋಡಿ ಪರಿಮಳಾ ಅವರು ಕೂಡಲೇ ಹೇಳಿದರು.
‘’ಮತ್ತೆ ಬನ್ನಿ. ಬರೋವಾಗ ನೀವು ಬರೆದ ಕತೆಗಳನ್ನೂ ತನ್ನಿ. ಓದ್ತೀನಿ’’
ನನಗೆ ನಿಜಕ್ಕೂ ಸಂತೋಷವಾಯಿತು. ನಾನು ಹವ್ಯಾಸಕ್ಕಾಗಿ ಆಗಾಗ ಬರೆದ ಕತೆಗಳ ಹಸ್ತಪ್ರತಿಗಳನ್ನು
ಜೋಪಾನವಾಗಿ ಕಟ್ಟಿ ಟ್ರಂಕಿನಲ್ಲಿ ಇಟ್ಟುಕೊಂಡಿದ್ದೆ. ಹೊರಗೇ ತಗೆದಿರಲಿಲ್ಲ. ಆದರೆ ಈಗ ಅವುಗಳನ್ನು ಓದುತ್ತೇನೆ ಅನ್ನುವ ಮೊದಲ ಓದುಗರು ಸಿಕ್ಕರಲ್ಲ ಎಂದು ಸಂಭ್ರಮವೂ ಆಯಿತು.
ನಾನು ಅವರಿಗೆ ಕೈ ಮುಗಿದು ತಲೆಯಾಡಿಸಿದೆ. ಭೈರಾಚಾರಿಯವರಿಗೆ ಏನೋ ತಪ್ಪು ಮಾಡಿದೆ ಎಂದೆನಿಸಿರಬೇಕು. ಅವರ ಮುಖದಲ್ಲಿಯ ಗೆರೆ ಬದಲಾದದ್ದನ್ನು ಗಮನಿಸಿದೆ. ಇಬ್ಬರಿಗೂ ಮತ್ತೊಮ್ಮೆ ನಮಸ್ಕಾರ ಹೇಳಿ ಚಾಂದಗುಡೆಯವರ ಹಿಂದೆ ನಡೆದೆ.
ಸೂಪಾ ಆಣೆಕಟ್ಟು ಸ್ಥಳದತ್ತ ಮೊದಲ ಪಯಣ
ಸೂಪಾದಿಂದ ಕಾಳೀ ನದಿಯು ಪೂರ್ವಾಭಿಮುಖವಾಗಿ ದಾಂಡೇಲಿಯ ಕಡೆಗೆ ಹರಿಯುತ್ತದೆ. ಶೂರ್ಪನಖಿಯ ಗುಹೆ ಮತ್ತು ಅಲ್ಲಿಯೇ ಇರುವ ಆಣೆಕಟ್ಟಿನ ಬುನಾದಿ ಜಾಗ ಎರಡೂ ಬೆಟ್ಟಗಳು ದೂರದಿಂದಲೇ ಕಾಣುತ್ತವೆ. ಅಲ್ಲಿಗೆ ತಲುಪಲು ಕಾಳೀ ನದಿಯ ಎಡದಂಡೆಯ ಕಡೆಯಿಂದ ಎರಡು ಮೈಲಿ ಕಾಡಿನ ಕಿರಿದಾದ ಕಾಲು ಹಾದಿಯಲ್ಲಿ ನಡೆಯಬೇಕು. ನದಿಯ ಎರಡೂ ಪಕ್ಕದಲ್ಲಿ ನಿಂತಿರುವ ಎರಡೂ ಬೆಟ್ಟಗಳು ಆಣೆಕಟ್ಟು ಕಟ್ಟಲು ಹೇಳಿ ಮಾಡಿಸಿದಂತಿವೆ. ಇವುಗಳ ಕೆಳ ಸಂದಿನಲ್ಲಿಯೇ ಕಾಳೀ ನದಿಯು ಹರಿದು ಮತ್ತೆ ಕಾಡಿನಲ್ಲಿಯೇ ಹರಿದು ಹೋಗುತ್ತದೆ. ಅಲ್ಲಿಂದ ಹಾಗೇ ಪೂರ್ವಕ್ಕೆ ಸಾಗುತ್ತ, ದಾಂಡೇಲಿ, ಮೌಳಂಗಿ, ಕೋಗಿಲ ಬನ, ಗುತ್ತಿ, ಬೊಮ್ಮನಳ್ಳಿ ಕಡೆಗೆ ಸಾಗಿ ಮುಂದೆ ಬಲಕ್ಕೆ ತಿರುಗಿ ಪಶ್ಚಿಮಾಭಿಮುಖಿ ಯಾಗುತ್ತದೆ. ಪೂರ್ವಕ್ಕೆ ಹೊರಟ ಕಾಳೀ ನದಿಯು ಪಶ್ಚಿಮಕ್ಕೆ ತಿರುಗಿ ಹರಿಯುವುದೇ ಒಂದು ಸೋಜಿಗ. ಅಲ್ಲಿಂದ ಪಶ್ಚಿಮಕ್ಕೆ ಸಾಗುವ ನದಿಯು ಕೊಡಸಳ್ಳಿ, ಕದ್ರಾ ಕಡೆಗೆ ಸಾಗಿ ಮುಂದೆ ಸದಾಶಿವಗಡದಲ್ಲಿ ಅರಬೀ ಸಮುದ್ರ ಸೇರುತ್ತದೆ. ಇದು ಕಾಳೀ ನದಿಯು ಕಣಿವೆಯಲ್ಲಿ ಸಾಗುವ ದಾರಿ..
ಕಾಳಿಯೊಂದಿಗೆ ಮಿಳಿತವಾದಳು ಶೂರ್ಪನಖಿ
ಹೌದು. ನಾನು ಕೇಳಿದ ಕತೆಯಲ್ಲಿ ಬರುವ ಶೂರ್ಪನಖಿಯ ಗುಹೆ ಇದ್ದದ್ದೇ ಅಲ್ಲಿ. ನದೀಯ ನೀರಿನ ಹೊಂಡವೂ ಅಲ್ಲಿಯೇ ಇರಬೇಕು. ತಡೆಯಲಾಗಲಿಲ್ಲ. ಚಾಂದಗುಡೆಯವರನ್ನು ಕೇಳಿಯೇ ಬಿಟ್ಟೆ.
‘’ಅಲ್ಲಿ ಬೋಳುಗವಿ ಮತ್ತು ಬೋಳುಗುಂಡಿ ಅಂತ ನೀರಿನ ಹೊಂಡ ಇರಬೇಕಲ್ಲ’’
ಅಂದೆ. ನನ್ನ ಮಾತು ಚಾಂದಗುಡೆಯವರಿಗೆ ಅಚ್ಚರಿ ತರಿಸಿತೇನೋ.
ಫೋಟೋ ಕೃಪೆ : ArtStation
‘’ನಿಮಗ ಶೂರ್ಪನಖೀ ಕತಿ ಗೊತ್ತಿರಬೇಕಲ್ಲ. ಶೂರ್ಪನಖಿ ಅಂದ್ರ ರಾವಣನ ತಂಗಿ. ಅಕೀ ಇದ್ದದ್ದೂ ಅಲ್ಲೇ. ಅಕೀ ವಾಸಾ ಮಾಡಿದ ಗವೀನೂ ಅಲ್ಲೇ ಐತಿ. ಅಕೀ ಜಳಕಾ ಮಾಡ್ತಿದ್ದ ಗುಂಡೀನೂ ಅಲ್ಲೇ ಐತಿ. ಅಷ್ಟಽಽ ಅಲ್ಲ. ಮುಂದ ಸರಕಾರದವ್ರು ಕಟ್ಟೂ ಡ್ಯಾಮಿನ ಪಾಯಾನೂ ಅಲ್ಲೇ ಐತಿ. ಆಗ ಇವೆರಡೂ ಹೊಕ್ಕಾವು ನೋಡ್ರಿ. ಗವಿ ಇದ್ದ ಜಾಗಾನ ಒಡೀತಾರು. ಡ್ಯಾಮಿನ ಸೆಂಟ್ರಲ್ ಲೈನು ಸೀದಾ ಅಕೀ ಗವೀಗೇ ಬರತೈತಿ. ನೋಡ್ರೆಲಾ ಅಲ್ಲಿ ಗುಡ್ಡದ ಕಡೆ. ಸುಣ್ಣದ ಲೈನ ಹಾಕೇ ಬಿಟ್ಟಾರು. ಹೊಂಡಂತೂ ಮುಂದ ಪವರ ಹೌಸ ಸಲುವಾಗಿ ಮಾಯ ಆಗೂದನ.’’ ಎಂದು ಹೇಳಿದರು. ನನಗೆ ರೋಮಾಂಚನವಾಯಿತು. ಪರಿಮಳಾ ಅವರು ಹೇಳಿದ್ದು ಸತ್ಯ ಎಂದು ಚಾಂದಗುಡೆಯವರು ಪರೋಕ್ಷವಾಗಿ ಹೇಳಿದರು.
ಫೋಟೋ ಕೃಪೆ : Voyager
ಕಾಳೀ ತಟದ ಕಾಲುದಾರಿಯಲ್ಲಿ
ನನಗೆ ದಾರಿ ಹೊಸದು. ಮುಂದೆ ಅವರು ಹಿಂದೆ ನಾನು. ಜನ ನಡೆದೂ- ನಡೆದೂ ಹೆಜ್ಜೆಗಳೇ ಅಂಕುಡೊಂಕು ಕೆಂಪು ಕಾಲುದಾರಿಯನ್ನು ನಿರ್ಮಿಸಿದ್ದವು. ಸುತ್ತಲೂ ಎತ್ತರದ ಹುಲ್ಲು, ಕಂಟಿಗಳು, ಆಳೆತ್ತರದ ಗಿಡಗಳು ಮೈಗೆ ಪರಚುತ್ತಿದ್ದವು. ಕಾಡಿನಲ್ಲಿ ಹೀಗೆ ನಡೆಯುವುದು ನನಗೆ ಹೊಸದೇನಲ್ಲ. ಕಾಡಿನಲ್ಲಿ ಸರ್ವೇಗಾಗಿ ಸಾಕಷ್ಟು ನಡೆದಿದ್ದರಿಂದ ನನಗೆ ಆಯಾಸವೆನಿಸಲಿಲ್ಲ. ಇಲ್ಲಿ ಲಂವಗದ ಕೆಂಪು, ಹಳದಿ, ಬಿಳೀ ಹೂವುಗಳು ಯತ್ಥೇಚ್ಛವಾಗಿ ಕಾಣುತ್ತಿದ್ದವು. ಅಲ್ಲಿಲ್ಲಿ ಕಾಡು- ಕರಿಬೇವಿನ ಸೊಪ್ಪು ಸುವಾಸನೆ ಬೀರುತ್ತಿತ್ತು. ಇನ್ನೂ ಅಲ್ಲಿ ಯಾವ ಯಾವ ವನಸ್ಪತಿಗಳು ಇದ್ದಾವೋ. ಕಾಡಿನಲ್ಲಿ
ನಡೆದರೆ ಇಲ್ಲಿ ಸುಳಿವ ಗಾಳಿಯೇ ಎಷ್ಟೋ ರೋಗಗಳನ್ನು ನೀಗಿಸಬಲ್ಲುದು.
ಈ ಕಾಲುದಾರಿಗೆ ಹೊಂದಿ ಎಡಕ್ಕೆ ಒಂದು ಜೀಪೂ ಹೋಗುವಸ್ಟು ಅಗಲದ ಕೆಂಪು ಮಣ್ಣಿನ ದಾರಿಯಿತ್ತು. ಅದೂ ಸೀದ ಡ್ಯಾಮ ಸೈಟಿಗೇ ಹೋಗುತ್ತದಂತೆ. ಅದು ಸುತ್ತು ಬಳಸಿ ಹೋಗುವುದರಿಂದ ನಡೆಯವವರಿಗೆ ದೂರವೆ. ಅದಕ್ಕೇ ಸೂಪಾಕ್ಕೆ ಹೋಗಿ ಬರುವವರು ಈ ಕಿರು ಅಗಲದ ಕಾಲು ಹಾದಿಯನ್ನೇ ಬಳಸುತ್ತಾರೆ ಎಂದು ಚಾಂದಗೋಡೆ ನಗುತ್ತ ಹೇಳಿದರು. ಈ ದಾರಿಯಲ್ಲಿ ಮೇಲಿನ ಗುಡ್ಡದಿಂದ ಬರುವ ನೀರಿ ಝರಿಯೊಂದು ಅಡ್ಡಲಾಗಿ ಹರಿಯುತ್ತದೆ. ಅದನ್ನು ದಾಟಿಕೊಂಡೇ ಹೋಗಬೇಕು. ಇಲ್ಲಿ ಬಂದಾಗ ತುಸು ಎಚ್ಚರ ವಹಿಸುವುದು ಒಳ್ಳೆಯದು. ಯಾಕಂದರೆ ಕಾಡು ಪ್ರಾಣಿಗಳು ಈ ಝರಿಯ ನುರು ಕುಡಿಯಲು ಬರುತ್ತವೆ ಅಂದಾಗ ನನಗೇನೂ ಭಯವಾಗಲಿಲ್ಲ. ಒಂಷ್ಟು ಎತ್ತರ ಮರಗಳೂ ಇದ್ದು ಅವುಗಳ ಬುಡದಲ್ಲಿ ಕಾಲು ದಾರಿ ಸಾಗುತ್ತದೆ.
ಸೂಪಾ ಡ್ಯಾಮ ಸೈಟಿನಲ್ಲಿ ಇತ್ತು ತಗಡಿನ ಫೀಲ್ಡ ಆಫೀಸು
ಇಬ್ಬರೂ ಮಾತಾಡುತ್ತ ನಡೆದೆವು. ಈಗ ಡ್ಯಾಮ ಸೈಟಿನಲ್ಲಿ ತಗಡಿನ ನಾಲ್ಕು ಮನೆಗಳಿವೆ. ಅದರಲ್ಲಿ ಬೋರು ಮಶೀನು ಮತ್ತು ಕಾಂಪ್ರೆಸರುಗಳಲ್ಲಿ ಕೆಲಸ ಮಾಡುವ ಹತ್ತನ್ನೆರಡು ಜನ ಇದ್ದಾರೆ. ಯಾರಿಗೂ ಸಂಸಾರಗಳಿಲ್ಲ. ಇದ್ದವರೂ ಒಂಟಿಯಾಗಿಯೇ ಇದ್ದಾರೆ. ಅವರಿಗೆಲ್ಲ ಶ್ರೀ ನರಸಿಂಹಯ್ಯನವರೇ ಹೆಡ್ ಬಾಸು. ಡ್ಯಾಮ ಸೈಟಿನಲ್ಲಿ ಹತ್ತು ಗುಡುಸಲುಗಳಿದ್ದು ಅದರಲ್ಲಿ ಸಿವಿಲ್ ಕೆಲಸಕ್ಕೆ ಅಂತ ಬಂದ ಕೂಲಿ ಕೆಲಸ ಮಾಡುವ ಇಪ್ಪತ್ತು ಜನ ಸಂಸಾರ ಸಮೇತ ಇದ್ದಾರೆ. ಎಲ್ಲರೂ ನಮ್ಮಲ್ಲೇ ದಿನಗೂಲಿ ಮೇಲೆ ಇದ್ದಾರೆ. ಒಂದು ತಗಡಿನ ಫೀಲ್ಡ ಆಫೀಸು ಇದ್ದು ಅದು ನಮ್ಮ ಸಿವಿಲ್ ಆಫೀಸು. ಅದರಲ್ಲಿ ಎಂಟು ಕಬ್ಬಿಣದ ಖುರ್ಚಿ, ಒಂದು ಟೇಬಲ್ಲು, ಸರ್ವೇ ಉಪಕರಣಗಳು, ಹಾರೆ, ಪಿಕಾಸಿ, ಕಬ್ಬಿಣದ ಬುಟ್ಟಿಗಳು, ಹತ್ತಿಪ್ಪತ್ತು ಜತೆ ಗಮ್ ಶೂಗಳು, ಸುರಂಗದೊಳಗೆ ಹೋಗುವವರಿಗೆ ಕೆಲವು ಹೆಲ್ಮೆಟ್ಟುಗಳು, ಸಾಹೇಬರು ಬಂದಾಗ ಅವರ ತಲೆಯ ಮೇಲೆ ಹಿಡಿಯೋದಕ್ಕೆ ಅಂತ ಎರಡು ದೊಡ್ಡ ಮಹಾರಾಜಾ ಕೊಡೆಗಳು, ಒಂದಷ್ಟು ಕೊಯ್ತಾಗಳು ಇವೆ. ಅದರ ಇನ್‌ಚಾರ್ಜೂ ನಾನೇ. ಈಗ ನೀವು ಬಂದೀರಲ್ಲ. ಮುಂದೆ ನಿಮಗೆ ಅದರ ಜವಾಬ್ದಾರಿ ಕೊಟ್ಟರೂ ಕೊಡಬಹುದು. ಯಾಕಂದರೆ ನೀವು ನನಕ್ಕಿಂತ ಹೆಚ್ಚು ಓದೀದಿರಲ್ಲ. ಹಾಂ…ಇಲ್ಲಿ ಶ್ರೀ ವಿ.ವೈ.ನಾಯಕ ಸಾಹೇಬ್ರೇ ನಮಗೆಲ್ಲ ದೊಡ್ಡ ಬಾಸು. ಗೊತ್ತಲ್ಲ. ಅವ್ರು ಈ ಬಾಸುಗಳೆಲ್ಲ ಪಿ.ಡಬ್ಲೂ.ಡಿ. ಇಲಾಖೆಯಿಂದ ಬಂದವ್ರು. ಅಲ್ಲಿ ಒಂದು ಮೆಕ್ಯಾನಿಕ್ ಡಿವಿಜನ್ ನವರ ಸ್ಟೋರು ರೂಮೂ, ಇನ್ನೊಂದು ದೊಡ್ಡದಾದ ಶೆಡ್ಡೂ ಇದೆ. ಅದರಲ್ಲಿ ಭೂಗರ್ಭದಿಂದ ಹೊರಗೆ ತಗೆದ ಕೋರ್ ಕಲ್ಲುಗಳನ್ನು ಕಟ್ಟಿಗೆ ಪೆಟ್ಟಿಗೆಗಳಲ್ಲಿ ಸಂಗ್ರಹಿಸಿ ಇಟ್ಟೀದಾರೆ. ಅದೂ ನರಸಿಂಹಯ್ಯ ಸಾಹೇಬರ ಚಾರ್ಜಿನಲ್ಲಿರೋದೆ. ಚಾಂದಗುಡೆ ಹೇಳಿದರು. ಹೇಳುತ್ತ ಹೋದರು.
ಇಳುವರಸನ್ [ಇರಸನ್] ಎಂಬ ಹಳೇ ಘಟ
‘ಹ್ಹಹ್ಹಹ್ಹ… ಇನ್ನೊಂದು ವಿಷಯ ನಿಮಗೆ ಹೇಳ್ಲಿಕ್ಕೇ ಬೇಕು ನೋಡ್ರಿ. ಡ್ಯಾಮ ಸೈಟಿನಲ್ಲಿ ಒಂದು ದಿಬ್ಬದ ಮೇಲೆ ಹಳೇ ತಗಡಿನ ಸಾಧಾರಣ ದೊಡ್ಡ ಮನೆಯಿದೆ. ನದೀ ದಂಡೆಗೆ ಅಂಟಿಕೊಂಡೇ ಇದೆ. ಅದರಲ್ಲಿ ಇರಸನ್ [ಇಳುವರಸನ್] ಅನ್ನುವ ಡಿಪಾರ್ಮೆಂಟ್ ಲಾರೀ ಚಾಲಕರ ಮನೆ. ಅವರೂ ವರ್ಕಚಾರ್ಜ ಅಪಾಯಿಂಟಮೆಂಟು. ಅವರು ಜೋಗದಲ್ಲಿ ಎ.ಬಿ. ಸೈಟಿನಲ್ಲಿ ಕೆಲಸ ಮಾಡಿ ಬಂದವರು. ಲಿಂಗನಮಕ್ಕಿ ಡ್ಯಾಮು, ಮಹಾತ್ಮಾ ಪವರ ಹೌಸ್ ಕಟ್ಟಿ ಬಂದದ್ದೇ ಅವರಂತೆ. ಅಲ್ಲಿಯೂ ಅವರು ಲಾರೀ ಚಾಲಕರೇ. ಸರಕಾರದ ಒಂದು ಹಳೇ ಫೋರ್ಡ ಲಾರಿ ಇದೆ. ಶರಾವತಿ ಯೋಜನೆಯಲ್ಲಿ ಅದನ್ನು ಓಡಿಸುತ್ತಿದ್ದರಂತೆ. ಭಾರೀ ಘಾಟೀ ಮನುಷ್ಯ. ಶರಾವತಿಯಿಂದ ಅವರನ್ನು ಕಿತ್ತು ಲಾರೀ ಸಮೇತ ಈಗ ಕಾಳೀ ಡ್ಯಾಮಿಗೆ ಹಾಕಿದ್ದಾರೆ. ಡ್ಯಾಮ ಸೈಟಿನಲ್ಲಿ ಮೂರು ಮನೆಗೆ ಆಗೋ ತಗಡನ್ನು ಇವರೊಬ್ಬರ ಮನೆಗೇ ಬಡಿದಿದ್ದಾರೆ. ಯಾರನ್ನೂ ಕೇರ್ ಮಾಡುವುದಿಲ್ಲ ಮನುಷ್ಯ. ನೀವೆಲ್ಲ ಬರೀ ಇಲ್ಲಿಯ ನೀರು ಕುಡಿದಿದ್ರೆ ನಾನು ಶರಾವತಿ, ಹಾರಂಗಿ, ಕನ್ನಂಬಾಡೀ ನೀರು ಕುಡ್ದು ಬಂದೋನು ಅಂತಿರತಾರೆ ಮಾತು ಮಾತಿಗೂ. ಅವರ ಬಗ್ಗೆ
ಹುಷಾರಾಗಿರಿ.
ಫೋಟೋ ಕೃಪೆ : Tripifini
ನದಿಯಲ್ಲಿ ಹರಿಯೋ ನೀರಿನ ಒಳ ಹರಿವು ಅಳತೆ ಮಾಡೋ ಶ್ರೀಧರ್ ಕಾಣಕೋಣ್ಕರ
ಇನ್ನು ನದಿಯ ನೀರಿನ ಒಳ ಹರಿವು ಲೆಕ್ಕ ಹಾಕೋದಕ್ಕೆ ಒಂದು ಮಶೀನು ಅದೆ. ವೆಲಾಸಿಟೀ ಮಶಿನ್ನು. ಅದನ್ನು ಶ್ರೀಧರ್ ಕಾಣಕೋಣ್ಕರ್ ಅನ್ನೋ ಇಪ್ಪತೈದರ ತರುಣ ನೋಡ್ಕೋತಾರೆ. ಅವರಿಗೂ ನಮ್ಮ ಆಫೀಸಿನಿಂದ್ಲೇ ದಿನಗೂಲಿ ಪಗಾರ. ಅವ್ರು ಇಲ್ಲಿಯೇ ಸೂಪಾದವ್ರು. ಹಂಚಿನ ಹಳೇ ಕಾಲದ ಮನೆ ಇದೆ. ಅದರಲ್ಲೇ ಮನೇ ಮುಂದೆ ಒಂದು ಒಣ ಮೀನಿನ ಅಂಗಡಿ, ಅದರ ಜೋಡಿ ಚಹಾದ ಅಂಗಡೀನೂ ಇದೆ. ವ್ಯಾಪಾರ ಇಲ್ಲ. ತುಂಬ ಬಡತನ ಅವ್ರಿಗೆಲ್ಲ.ಈ ಡ್ಯಾಮು ಕೆಲಸ ಬಂದ ಮೇಲೆ ಇಂಥಾ ಹಲವು ಜನಕ್ಕೆ ಕೈಗೆ ಒಂದಷ್ಟು ಕೆಲಸ ಸಿಕ್ತು ಅನ್ರಿ. ಚಾಂದಗುಡೆಯವ್ರು ನನಗೆ ಅಲ್ಲಿಯ ಅನೇಕೆ ಪೂರಕ ಮಾಹಿತಿಗಳನ್ನು ನೀಡುತ್ತ ನಡೆಯುತ್ತಿದ್ದರು. ಅಲ್ಲಿಯ ವ್ಯವಸ್ಥೆಗಳನ್ನು ಅರಿಯಲು ಅದು ನನಗೆ ಸಾಕಷ್ಟು ಸಹಾಯವನ್ನೂ ಮಾಡಿತು. ಕಲ್ಲು ಮಣ್ಣು, ತಗ್ಗು ದಿನ್ನೆಗಳನ್ನು ದಾಟುತ್ತ ಅಂತೂ ಡ್ಯಾಮಸೈಟ್ ಕ್ಯಾಂಪನ್ನು ಪ್ರವೇಶಿಸಿದೆವು.
ಡ್ಯಾಮ್ ಸೈಟಿನಲ್ಲಿ ಚೊಂಬು ದರ್ಶನ
ಅಲ್ಲಿ ನಮಗೆ ಮೊದಲು ಎದುರಾದವನೇ ಫೀಲ್ಡ ಆಫೀಸಿನಲ್ಲಿ ಕಸಹೊಡೆಯುತ್ತ, ಅದೂ-ಇದೂ ಮ್ಯಾನೇಜರಕಿ ಮಾಡುತ್ತಿದ್ದ ನಲವತ್ತು ವಯಸ್ಸಿನ ಕಾಶೀನಾದನ್ ಎಂಬ ವ್ಯಕ್ತಿ. ಆತ ನಾಯಕ ಸಾಹೇಬರ ವಿಶ್ವಾಸದವನಂತೆ. ಕೈಯಲ್ಲಿ ಚೊಂಬು ಹಿಡಿದು ಬಹಿರ್ದೆಸೆಗೆ ಹೊರಟವನು ಚಾಂದಗುಡೆಯವರನ್ನು ಕಂಡದ್ದೇ ತಡ. ಚೊಂಬು ಸಮೇತ ನಮಸ್ಕಾರ ಅಂದ. ’ಬಂದೆ ಚಾಮೀ. ಕೊಂಚ ಅವಸರ ಉಂಡಾದು’’ ಅನ್ನುತ್ತಲೇ ಕಾಡಿನ ಕುಮರಿ ಮರೆಗೆ ಓಡಿ ಹೋದ. ನಾನು ಅವನನ್ನೇ ನೋಡಿದೆ. ಇಲ್ಲಿ ಮೊದಲ ದಿನ ಬಂದವಗೆ ಈತ ಚೊಂಬು ತೋರಿಸಿ ಹೋದನಲ್ಲ ಅನಿಸಿದರೂ ಅದೂ ಶುಭ ಯಾಕಾಗಿರಬಾರದು ಅಂದುಕೊಂಡೆ. ನಾನು ಬಿಟ್ಟ ಕಣ್ಣುಗಳಿಂದ ಅಲ್ಲಿಯೇ ಕಾಣುತ್ತಿದ್ದ ನದಿಯ ಎರಡೂ ಬದಿಯಲ್ಲಿ ಆಕಾಶದೆತ್ತರಕ್ಕೆ ನಿಂತಿದ್ದ ನದಿಯ ಎರಡೂ ಬದಿಯ ಬೆಟ್ಟಗಳನ್ನು ನೋಡಿದೆ. ಇದು ಶೂರ್ಪನಖಿ ಓಡಾಡಿದ ಜಾಗ. ಅವಳ ಹೆಸರನ್ನು ಹೊತ್ತ ಜಾಗ. ಆದಷ್ಟು ಬೇಗ ಅವಳು ವಾಸ ಮಾಡಿದ ಗುಹೆ ಮತ್ತು ಜಳಕ ಮಾಡಿ, ಪುಟಿಯುತ್ತಿದ್ದ ಮೀನು ತಿಂದು, ಅಲ್ಲಿಯೇ ನೀರು ಕುಡಿಯುತ್ತಿದ್ದ ಮಡುವನ್ನು ನೋಡಬೇಕೆಂದು ತವಕಿಸಿದೆ.
ಫೋಟೋ ಕೃಪೆ : FreeImages.com
ಚಾಂದುಗುಡೆಯವರು ನನ್ನನ್ನು ನದಿಯ ದಂಡೆಯ ಮೇಲಿದ್ದ ರೇನ್ ಗೇಜ್ ಮಶೀನ ಹತ್ತಿರ ಕರೆದೊಯ್ದರು.. ಅಲ್ಲಿ ನದಿಗೆ ಅಡ್ಡಲಾಗಿ ಎತ್ತರಕ್ಕೆ ತಂತಿ ಹಗ್ಗ ಬಿಗಿದು ಕಟ್ಟಲಾಗಿತ್ತು. ಅದಕ್ಕೆ ಒಂದು ಮಶೀನು ತೂಗು ಹಾಕಿ ಅದನ್ನು ಹರಿಯುತ್ತಿರುವ ನದಿ ಒಳಗೆ ಇಳಿಬಿಡಲಾಗಿತ್ತು. ನೀರಿನ ಸೆಳೆತಕ್ಕೆ ತಿರುಗುತ್ತಿದ್ದ ಅದರೊಳಗಿನ ಚಕ್ರಗಳು ‘ಗುಂಯ್’ ಅನ್ನುತ್ತ ನೀರಿನ ಒಳ ಹರಿವು ಪ್ರಮಾಣವನ್ನು (velacity) ದಾಖಲಿಸುತ್ತಿತ್ತು. ಚಾಂದಗುಡೆ ಅದರ ಬಗ್ಗೆ ಮಾಹಿತಿ ಕೊಟ್ಟರು.
ನಾನು ನದಿಯಲ್ಲಿ ಮುಳುಗಿದ್ದ ಆ ಮಶೀನ್ನಿನ ಗುಂಯ್ ಶಬ್ದ ಕೇಳುತ್ತ ನಿಂತೆ. ಆಗಲೇ ಇಪ್ಪತೈದು ವರ್ಷದ ಯುವಕ ಮತ್ತು ಅದರ ಇನ್ ಚಾರ್ಜ ಆಗಿದ್ದ ಶ್ರೀಧರ್ ದೂರದ ದಿಬ್ಬದಲ್ಲಿ ನಿಂತು ನಮ್ಮತ್ತ ಕೈ ಮಾಡಿದರು. ನನ್ನ ಹೊಸ ಮುಖ ನೋಡಿ ಅವರಿಗೂ ಅಚ್ಚರಿಯಾಗಿತ್ತೇನೋ. ಚಾಂದಗುಡೆ ಒಮ್ಮೆ ಜೋರಾಗಿ ‘’ಹ್ಹಹ್ಹಹ್ಹ…’’ ಎಂದು ನಕ್ಕರು.
ಹಾಂ….ಈಗ ನಾವು ಪ್ರತ್ಯಕ್ಷ ಸೂಪಾ ಡ್ಯಾಮ ತಳದೊಳಗ ನಿಂತೇವಿ ನೋಡ್ರಿ ಅಂದರು. ಕೂಡಲೇ ನಾನು
ಶೂರ್ಪನಖಿಯ ಬೋಳು ಗುಹೇ ಹತ್ತಿರ ಅನ್ನಿ ಅಂದೆ. ಅವರು ಮತ್ತೆ ಹ್ಹಹ್ಹಹ್ಹಾ…! ಎಂದು ನಕ್ಕಾಗ ನಾನು ವಿಚಿತ್ರವಾಗಿ ಅವರನ್ನು ನೋಡಿದೆ. ‘’ಮತ್ತೆ… ಬೋಳುಗುಂಡಿ ಎಲ್ಲಿದೇರೀ?’’ ಎಂದು ಕೇಳಿದೆ. ತಕ್ಷಣ ಅವರು ನದಿಯ ಪಾತಳಿಯ ಮುಂದೆ ಉದ್ದಕ್ಕೂ ಕೈ ಮಾಡುತ್ತ ಹೇಳಿದರು.
ಅಲ್ಲಿ ಕಾಣುವುದೇ ಶೂರ್ಪನಖಿ ಕಾಲದ ಬೋಳು ಹೊಂಡ ನೋಡ್ರಿ
‘’ಅದ಼ಽಽ… ಅಲೈತಿ ನೋಡ್ರೆಲಾ…’’.
ಎಂದು ಸುಮ್ಮನಾದರು. ನಾನು ಅವರು ಕೈಮಾಡಿದತ್ತ ದೃಷ್ಟಿ ಹೊರಳಿಸಿ ನೋಡಿದಾಗ ಅಲ್ಲೊಂದು ದೊಡ್ಡ ಮತ್ತು ವಿಶಾಲವಾದ ನೀರಿನ ಹೊಂಡ. ಇಡೀ ನೀರು ಕಪ್ಪು ಕಾಳಿಯ ಮೈಬಣ್ಣ. ತುದಿಯ ದಂಡೆಯವರೆಗೂ ನೀರು ತುಂಬಿ ತುಳುಕುತ್ತಿತ್ತು. ದೊಡ್ಡ ತೆರೆಗಳು ಮೇಲೆದ್ದು ಸಾಗಿ ಎರಡೂ ದಡಕ್ಕೆ ಅಪ್ಪಳಿಸುತ್ತಿದ್ದವು. ನನಗೆ ಅಚ್ಚರಿಯಾಯಿತು. ಮುಂದೊಂದು ದಿನ ಈ ಹೊಂಡದ ದಡದಲ್ಲಿಯೇ ಸೂಪಾ ಡ್ಯಾಮಿನ ಕೆಳಗೆ ಜಲವಿದ್ಯುದ್ದಾಗಾರ ತಲೆಯೆತ್ತಿ ನಿಲ್ಲುತ್ತದೆ ಎಂಬ ಕಲ್ಪನೆಯೂ ನಮಗಿರಲಿಲ್ಲ. ಶೂರ್ಪನಖಿಯೇ ಹೊಸ ರೂಪದಲ್ಲಿ ಮೈದಾಳಿ ಇಲ್ಲಿ ಶಕ್ತಿ ದೇವತೆಯಾಗುವಳು ಎಂಬ ಅರಿವು ಯಾರಿಗಿತ್ತು. ಬೋಳು ಹೊಂಡದಲ್ಲಿ ನೀರಿನಿಂದ ಮೇಲೆ ಪುಟಿದು ಮತ್ತೆ ನೀರಿಗೇ ಬೀಳುತ್ತಿದ್ದ ದೊಡ್ಡ ಮೀನುಗಳನ್ನು ನೋಡುತ್ತ ನಿಂತೆ. ಉಳಿದವರಿಗೆ ಅದು ಮಾಮೂಲು ನೋಟವಾಗಿತ್ತು. ನಾನು ಒಂದು ಕ್ಷಣ ಹಾಗೇ ನಿಂತೆ. ಮೀನೊಂದು ಮೇಲಕ್ಕೆ ಪುಟಿದು ಆಯ ತಪ್ಪಿ ದಂಡೆಗೆ ಬೀಳುತ್ತಲೂ ಅದು ನೇರವಾಗಿ ಮೊಸಳೆ ಬಾಯಿ ಸೇರಿದ್ದು ಕಂಡು ದಿಗ್ಮೂಢನಾಗಿ ನಿಂತುಬಿಟ್ಟೆ. ‘’ಏವೂನ ಸಾಹೇಬ್…’’ ಎಂಬ ದನಿ ಎತ್ತರದಲ್ಲಿ ಕೇಳಿದಾಗ ಅತ್ತ ನೋಡಿದೆ. ಶ್ರೀಧರ ಕಾಣ್ಕೋಣಕರ ನಮ್ಮತ್ತ ನೋಡಿ ಕೈ ಮಾಡಿ ಕರೆಯುತ್ತಿದ್ದರು.
[ಮುಂದಿನ ಭಾಗ- ತಪ್ಪದೇ ಓದಿರಿ. ಇದು ಕಾಳೀ ಜಲ ವಿದ್ಯುತ್ ಯೋಜನೆಯಲ್ಲಿ ದುಡಿದು ಮರೆತು ಹೋದವರ ನೆನಪಿನ ಕತೆ. ಪ್ರತಿ ಶನಿವಾರ ನಿಮ್ಮ ಮುಂದೆ. ಕಾಳೀ ಕಣಿವೆಯ ರೋಚಕ ಕತೆಗಳನ್ನು ತಪ್ಪದೇ ಓದಿರಿ]
- ಹೂಲಿಶೇಖರ್
(ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)