ಆಮುಖ : ಕಮಲಾ ಹಂಪನಾ

ಕನ್ನಡ ವಿದ್ವತ್ ಲೋಕದಲ್ಲಿ ಮಿಂಚಿ ಮರೆಯಾದ ದಿ.ಕಮಲಾ ಹಂಪನಾ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿಯೊಂದಿಗೆ, ಅವರ ಪರಂಪರೆ ಮುಂದುವರೆಯಲಿ ಎಂದು ಹಾರೈಸುತ್ತಾ, ರಘುನಾಥ್ ಕೃಷ್ಣಮಾಚಾರ್ ಅವರ ಲೇಖನದಲ್ಲಿ ದಿ.ಕಮಲಾ ಹಂಪನಾ ಅಮರರು… 

ನಾಡೋಜ ಕಮಲಾ ಹಂಪನಾ ಅವರು ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಬೆಂಗಳೂರಿಗೆ ಅಧ್ಯಾಪಕಿಯಾಗಿ ಬಂದು ಸೇರಿದಾಗ (೧೯೬೦), ಅಲ್ಲಿದ್ದ ಕನ್ನಡ ಸಾಹಿತಿಗಳನ್ನು ಒಬ್ಬೊಬ್ಬರನ್ನಾಗಿ ಪರಿಚಯಿಸಿಕೊಳ್ಳತೊಡಗಿದರು. ಅವರು ಕನ್ನಡ ಉಪನ್ಯಾಸಕಿಯಾದ್ದರಿಂದ ಅವರ ಲಕ್ಷ್ಯ ಕನ್ನಡ ಸಾಹಿತಿಗಳ ಕಡೆಗೇ ಹೊರಳಿದ್ದರಲ್ಲಿ ಆಶ್ಛರ್ಯವಿಲ್ಲ. ಆದರೆ ಅವರು ಕೇವಲ ಅಧ್ಯಾಪಕಿ ಮಾತ್ರವಲ್ಲದೆ ಒಬ್ಬ ಪ್ರಜ್ಞಾವಂತ ಮಹಿಳೆಯೂ ಆದ್ದರಿಂದ ಅವರಿಗೆ ಆ ಸಾಹಿತಿಗಳ ಜೀವನದಲ್ಲಿ ಅವರ ಅರ್ಧಾಂಗಿಯರ ಪಾತ್ರಗಳನ್ನು ತಿಳಿದುಕೊಳ್ಳುವ ಕುತೂಹಲ ಮೂಡಿತು. ಅದರ ಪರಿಣಾಮವಾಗಿ ಅವರ ಪರಿಚಯವನ್ನು ಮಾಡಿಕೊಂಡಿದ್ದಲ್ಲದೇ, ಸಾಹಿತಿಗಳ ಸಾಹಿತ್ಯ ರಚನೆಯಲ್ಲಿ ಅವರ ಪಾತ್ರವನ್ನೂ ಅರಿತುಕೊಂಡರು. ಅಲ್ಲದೇ ಅವರ ಇತರ ಸೃಜನಶೀಲ ಚಟುವಟಿಕೆಗಳ ಕಡೆಗೂ ಅವರ ಗಮನ ಹರಿಯಿತು. ಅವರ ವ್ಯಕ್ತಿತ್ವಗಳಿಗೆ ಅದರಿಂದ ಒದಗಿ ಬಂದಿರುವ ಅನನ್ಯತೆಯನ್ನು ಕಂಡಿರಿಸುವ ಪ್ರಯತ್ನದ ಫಲವೇ “ಆಮುಖ” ಬರಹಗಳ ಸಂಕಲನವಾಗಿದೆ.

ಆ ಕಾಲದಲ್ಲಿ ಸಾಹಿತ್ಯ ಲೋಕದ ತಾರೆಯರಂತಿದ್ದ ಮಾಸ್ತಿ, ಕುವೆಂಪು, ಡಿ.ಎಲ್.ಎನ್, ಗೋಕಾಕ್, ಬಿ ಪುಟ್ಟಸ್ವಾಮಯ್ಯ, ಮಿರ್ಜಿ ಅಣ್ಣಾರಾಯರು, ಸಂಶೋಧಕರಾದ ಶಂ.ಭಾ. ಜೋಶಿ, ಕನ್ನಡದ ಕಟ್ಟಾಳು ದೇ.ಜೇ.ಗೌ, ಎಸ್. ವಿ. ರಂಗಣ್ಣ, ಅ.ನ.ಕೃ. ಮುಂತಾದವರ ಸಾಹಿತ್ಯಕ ಸಾಧನೆಗಳನ್ನು ಅಲ್ಲಿಯವರೆಗೆ ಪ್ರಕಟವಾಗಿದ್ದ ಅವರ ಕೃತಿಗಳನ್ನು ಅವರ ಅಪೇಕ್ಷೆಯ ಮೇರೆಗೆ “ಆಮುಖ”ದ ಅನುಬಂಧದಲ್ಲಿ ಕೊಡಲಾಗಿದೆ.

ಆದರೆ ನಮಗೆ ಇಲ್ಲಿ ಮುಖ್ಯವಾಗುವುದು ಮೇಲೆ ಕಾಣಿಸಿದ ಬರಹಗಾರರ ಬದುಕಿನಲ್ಲಿ ಅವರ ಅರ್ಧಾಂಗಿಯರು ವಹಿಸಿದ ಪಾತ್ರ. ಇವುಗಳನ್ನು ಮೂರು ಬಗೆಯಲ್ಲಿ ವಿಂಗಡಿಸಬಹುದು. ಮೊದಲನೆಯದು, ಸ್ವತಃ ಲೇಖಕಿಯರಾಗಿ ರೂಪುಗೊಳ್ಳುತ್ತಿದ್ದ ಶಾರದಾ ಗೋಕಾಕ್ ಮತ್ತು ಶಾಂತಾದೇವಿ ಮಾಳವಾಡ, ವಸಂತಾ ದೇವಿ ಅ.ನ.ಕೃ. ಇವರು ಪರಸ್ಪರ ತಮ್ಮ ಕೃತಿ ರಚನೆಯಲ್ಲಿ ಪಡೆದುಕೊಂಡ ಪ್ರೋತ್ಸಾಹ ಅಂದು ಬೀಜರೂಪವಾಗಿದ್ದುದು ಮುಂದೆ ಹೆಮ್ಮರವಾಗಿ ಬೆಳೆಯಲು ಕಾರಣವಾದುದು.

ಎರಡನೆಯದಾಗಿ, ಲೇಖಕರ ಪ್ರಥಮ ಓದುಗರಾಗಿ ಅವರ ಎಲ್ಲಾ ಕೃತಿಗಳಿಗೂ ಪ್ರಥಮ ಸ್ಪಂದನೆಯನ್ನು ದಾಖಲಿಸಿದ ಶ್ರೇಯಸ್ಸು ಇವರಿಗೆ ಸಲ್ಲಬೇಕು. ಮೂರನೆಯದಾಗಿ, ಮನೆಯ ಅಲಂಕರಣ ಕಸೂತಿ ಇತ್ಯಾದಿಗಳ ಮೂಲಕ ಪ್ರಕಟವಾಗುತ್ತಿದ್ದ ಅವರ ಸೃಜನಶೀಲತೆ.

ಇವುಗಳಿಂದಾಗಿ ಅಂದು ಲೇಖಕರ ಬದುಕಿನಲ್ಲಿ ಅವರು ವಹಿಸಿದ ಪಾತ್ರದೊಂದಿಗೇ ಅವರ ಸ್ವತಂತ್ರ ವ್ಯಕ್ತಿತ್ವವೂ ಪ್ರಕಟವಾಗುತ್ತದೆ. ಹೀಗೆ ತಮ್ಮ ಸಾಹಿತ್ಯವನ್ನು ಲೇಖಕರ ಅರ್ಧಾಂಗಿಯರ ಬಗ್ಗೆ ಲೇಖಕರ ಅಭಿಪ್ರಾಯವೂ ಮನಮುಟ್ಟುವಂತೆ ಈ ಕೃತಿಯಲ್ಲಿ ದಾಖಲಾಗಿದೆ. ಉದಾಹರಣೆಗೆ, ಕುವೆಂಪು ಅವರು ತಮ್ಮನ್ನು ‘ಹೇಮಿಯ ಗಂಡನೆಂದು ಗುರುತಿಸಿಕೊಂಡಾಗ ಮಾತ್ರ ಸ್ವರ್ಗಕ್ಕೆ ಪ್ರವೇಶ ದೊರಕಿತೆಂದು ತಮ್ಮ ಕವಿತೆಯ ಮೂಲಕ ಸಾರಿಕೊಂಡಿದ್ದಾರೆ. ವಸಂತಾ ದೇವಿಯವರನ್ನು ಕುರಿತು ಬರೆದ ಲೇಖನವು ‘ಪ್ರಜಾಮತ’ ಪತ್ರಿಕೆಯಲ್ಲಿ ಪ್ರಕಟವಾದನಂತರ ಅದರ ಪ್ರತಿಯನ್ನು ಅ.ನ.ಕೃ ಅವರಿಗೆ ಮುಟ್ಟಿಸಿದಾಗ ,ಅವರು ಸಾರ್ವಜನಿಕವಾಗಿ ತಮ್ಮ ಪತ್ನಿಗೆ ಕೃತಜ್ಞತೆಯನ್ನು ಅರ್ಪಿಸುವ ಅವಕಾಶ ದೊರೆತದ್ದಕ್ಕೆ ಧನ್ಯತೆಯನ್ನು ಅನುಭವಿಸುತ್ತಾರೆ. ಎಸ್.ವಿ. ರಂಗಣ್ಣನವರಾದರೋ ತಮ್ಮ ಪತ್ನಿ ತಮಗಾಗಿ ಹೆಣೆದಿದ್ದ ಸ್ವೆಟರ್‌ ಅನ್ನು ಅದು ಹರಿದಾಗಲೂ ಬಿಡದೇ ತೊಟ್ಟುಕೊಳ್ಳುವುದರ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಮೇಲಿನ ನಿದರ್ಶನಗಳು ಅವರ ನಡುವೆ ಇದ್ದ ಅನ್ಯೋನ್ಯತೆ ಮತ್ತು ಸಾಮರಸ್ಯಗಳಿಗೆ ಕನ್ನಡಿ ಹಿಡಿಯುತ್ತವೆ. ಕಳೆದ ಶತಮಾನದ ಅರವತ್ತರ ದಶಕದಲ್ಲಿ ಮೂಡಿಬಂದ ಈ ಕೃತಿಗೆ ಒಂದು ಐತಿಹಾಸಿಕ ಮಹತ್ವವಿದೆ. ಅದೆಂದರೆ ಅಲ್ಲಿಯವರೆಗೆ ಯಾರೂ ಲೇಖಕರ ಪತ್ನಿಯರ ಕಡೆಗೆ ಕಣ್ಣೆತ್ತಿಯೂ ನೋಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಅವರ ಸಂದರ್ಶನ ಮಾಡಿ, ಅವರ ವ್ಯಕ್ತಿತ್ವದ ಅನಾವರಣ ಮಾಡುವುದರ ಮೂಲಕ ಅವರ ವ್ಯಕ್ತಿತ್ವವನ್ನು ಕನ್ನಡದ ಜಗತ್ತಿಗೆ ಪರಿಚಯಿಸಿದ್ದು ನವ್ಯದ ಸಂದರ್ಭದಲ್ಲಿ ಬಹುತೇಕ ಮಹಿಳೆಯರನ್ನು ಭೋಗದ ಸಾಮಗ್ರಿಗಳಂತೆ ಚಿತ್ರಿಸುತ್ತಿದ್ದಾಗ ಅದಕ್ಕೆ ವೈದೃಶ್ಯವೋ ಎನ್ನುವಂತೆ ರಕ್ತಮಾಂಸಗಳಿಂದ ಕೂಡಿದ ಜೀವಂತ ವ್ಯಕ್ತಿಗಳಿಗೆ ನಮ್ಮ ಕಣ್ಣನ್ನು ತೆರೆಸಿದ್ದು ಇದರ ವೈಶಿಷ್ಟ್ಯವಾಗಿದೆ.

ಒಮ್ಮೆ ಕಮಲಾ ಹಂಪನಾ ಅಡುಗೆ ಮನೆಯನ್ನು ಹೊಕ್ಕರೆ ಸಾಕು, ಹಂಪನಾ ಅವರು” ಓ ಕಮಲಮ್ಮನ ಕಾರ್ಖಾನೆ ಶುರುವಾಯಿತು ” ಎನ್ನುತ್ತಿದ್ದರು.ಏಕೆಂದರೆ ಒಮ್ಮೆಲೇ ಕುಕ್ಕರ್, ಮಿಕ್ಸ್ ರ್, ಗ್ರೈಂಡರ್ ಗಳ ಆರ್ಭಟ ಶುರುವಾಗುತ್ತಿತ್ತು” – (ಕನ್ನಡದ ಕನ್ನಡಿಯಲ್ಲಿ ಕೃತಿಯ “ಕಮಲಮ್ಮನ ಕಾರ್ಖಾನೆ ಮತ್ತು ಕುಚ್ಚಲಕ್ಕಿ ಅನ್ನ” ಅಂಕಣದಿಂದ)
ಆದರೆ ಇಂದು ಅದು ಸ್ಥಬ್ದಗೊಂಡಿದೆ. ಹಂಪನಾ ಮತ್ತು ಮಕ್ಕಳಿಗೆ ಇದನ್ನು ಭರಿಸುವ ಶಕ್ತಿ ಬರಲಿ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW