ಪದವಿ ತರಗತಿಯಲ್ಲಿ ಕನ್ನಡ ಭಾಷೆಯ ಅನಿವಾರ್ಯತೆ

ಹೊಸ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಗಮನಿಸಿದಾಗ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ನೀತಿಯು ಪ್ರಸಂಶನೀಯ. ಪದವಿ ಹಂತದಲ್ಲಿ ಕೆಲ ವಿಭಾಗ, ಪಿಜಿಯಲ್ಲಿ ಕೋರ್ಸ್‌ಗಳ ಆಯ್ಕೆಗೆ ಅವಕಾಶ ಹಾಗೂ ಪಿಎಚ್‌ಡಿ ಹಂತದಲ್ಲಿ ಮತ್ತಷ್ಟು ಕೋರ್ಸ್‌ಗಳ ಆಯ್ಕೆಗೆ ಅವಕಾಶವಿರುತ್ತದೆ. ಲೇಖಕ ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರ ಈ ಲೇಖನವನ್ನು ತಪ್ಪದೆ ಓದಿ…

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ2020) ಯು ಭಾರತದ ಶಿಕ್ಷಣ ವ್ಯವಸ್ಥೆಯ ಮೂರನೇ ರಾಷ್ಟ್ರೀಯ ಶಿಕ್ಷಣದ ನೀತಿ. ಜನರಲ್ಲಿ ಶಿಕ್ಷಣವನ್ನುಉತ್ತೇಜಿಸಲು ಭಾರತ ಸರ್ಕಾರವು ರೂಪಿಸಿದ ಒಂದು ನೀತಿ. ಈ ನೀತಿಯು ಭಾರತದ ಗ್ರಾಮೀಣ ಮತ್ತು ನಗರ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಒಳಗೊಂಡಿದೆ. 1968 ರಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರಿಂದ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣದ ನೀತಿ ಘೋಷಿಸಲ್ಪಟ್ಟಿತು. 1986 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಎರಡನೇ ಬಾರಿಗೆ ಘೋಷಿಸಲ್ಪಟ್ಟಿತು. ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಉದ್ದೇಶದಿಂದ 2020 ರ ಜುಲೈ 29 ರಂದು ಕ್ಯಾಬಿನೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸುವ ಮೂಲಕ ಪ್ರದಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮೂರನೇ ಶಿಕ್ಷಣ ನೀತಿ ಘೋಷಿಸಿದ್ದಾರೆ.ಇದು ಶಾಲೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ, ಪರಿವರ್ತನೆಯ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ. 2030ಕ್ಕೆ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿ ಮತ್ತು 21ನೇ ಶತಮಾನದ ಅಗತ್ಯಗಳಿಗೆ ಸೂಕ್ತವಾದ ಮತ್ತು ಪ್ರತಿ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯಗಳನ್ನುಹೊರತೆಗೆಯುವ ಗುರಿಯನ್ನು ಇದು ಹೊಂದಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವ, ಬಹುಶಿಸ್ತೀಯವನ್ನಾಗಿ ಮಾಡುವ ಮೂಲಕ ಭಾರತವನ್ನು ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ನಾಯಕನಾಗಿ ಪರಿವರ್ತಿಸುವ ಗುರಿಯನ್ನು ಈ ನೀತಿಯು ಹೊಂದಿದೆ.ಆದರೆಈ ನೂತನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಸರಕಾರ ನಿಗದಿ ಮಾಡಿರುವ ಅವಧಿ 20 ವರುಷಗಳು. ಅಂದರೆ ಈ ನೂತನ ಶಿಕ್ಷಣ ನೀತಿ 2040 ಗೆ ಸಂಪೂರ್ಣವಾಗಿ ಕಾರ್ಯಗತವಾಗಲಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡುವ ಭರವಸೆ ಇಟ್ಟುಕೊಳ್ಳಲಾಗಿದೆ. ರಾಷ್ಟ್ರೀಯ ಮೌಲ್ಯ ಹಾಗೂ ರಾಷ್ಟ್ರೀಯ ಗುರಿಯ ಉದ್ದೇಶದೊಂದಿಗೆ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಕೇವಲ ಸಾಂಪ್ರದಾಯಿಕ ಶಿಕ್ಷಣಕ್ಕೆ ಜೋತು ಬೀಳದೇ ಕೌಶಲ್ಯ ವೃದ್ಧಿಯ ಶಿಕ್ಷಣದ ಮೊರೆ ಹೋಗಿರುವುದು ಈ ಶಿಕ್ಷಣ ನೀತಿಯ ವೈಶಿಷ್ಟ್ಯ.

ಇದಾದ 33 ವರ್ಷ ನಂತರ ಹೊಸ ಶಿಕ್ಷಣ ನೀತಿ ಬರುತ್ತಿದೆ. ಮುಂದಿನ 20 ರಿಂದ 30 ವರ್ಷಗಳಲ್ಲಿದೇಶದ ಶಿಕ್ಷಣ ನೀತಿ ಹೇಗೆ ಇರಬೇಕು, ಯಾವ ದಿಕ್ಕಿನಲ್ಲಿಹೋಗಬೇಕು ಎಂಬುದನ್ನು ಈ ಶಿಕ್ಷಣ ನೀತಿ ಒಳಗೊಂಡಿರುತ್ತದೆ. ಪ್ರಶಿಕ್ಷಣಾರ್ಥಿಗಳು ಈಗ ಕಲಿಯುತ್ತಿರುವುದು ಹಿಂದಿನ ಶಿಕ್ಷಣ ಪದ್ಧತಿಯಲ್ಲಿ, ಕೋರ್ಸ್‌ ಮುಗಿಯುವಷ್ಟರ ವೇಳೆಗೆ ಹೊಸ ಶಿಕ್ಷಣ ನೀತಿ  ಅನುಷ್ಠಾನದಲ್ಲಿರುತ್ತದೆ. ಆ ನೀತಿಯ ಮಾರ್ಗದರ್ಶನದಲ್ಲಿ ಶಿಕ್ಷಕರು ಕೆಲಸ ಮಾಡಬೇಕಿದೆ.

ಫೋಟೋ ಕೃಪೆ : ಅಂತರ್ಜಾಲ

ಹೊಸ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಗಮನಿಸಿದಾಗ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ನೀತಿಯು ಪ್ರಸಂಶನೀಯ. ಇದರಿಂದಾಗಿ ಯುವ ಪೀಳಿಗೆಯು ಯಾವುದೇ ಚಿಂತೆಯಿಲ್ಲದೆ ಸಾಕ್ಷರರಾಗಬಹುದು. ಅನಾದಿ ಕಾಲದಲ್ಲಿ ಜನರು ತಮಗೆ ಇಷ್ಟವೆಂದೆನಿಸಿದ ಕಾರ್ಯವನ್ನು ಕರಗತ ಮಾಡಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಕಾಣುತ್ತಿದ್ದರು. ಅದೇ ರೀತಿಯಾಗಿ ಸರ್ಕಾರ ವೃತ್ತಿಪರ ಶಿಕ್ಷಣದ ಯೋಜನೆಗೆ ಹಸಿರು ನಿಶಾನೆ ನೀಡಿರುವುದು ಶ್ಲಾಘನೀಯ. ಜನರಿಗೆ ಅವರಾಡುವ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಅವರ ಜ್ಞಾನ ವೃದ್ಧಿಯಾಗುತ್ತದೆ ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ವಿದ್ಯಾರ್ಥಿಗಳಿಗೆ ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಪದ್ದತಿಯು ಮೆಚ್ಚುಗೆ ಪಡೆಯಬೇಕಾದ ಅಂಶವಾಗಿದೆ. ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಬೋಧನೆಗೆ ಜೀವನವನ್ನು ಸಮರ್ಥವಾಗಿ ಎದುರಿಸುವ ಕೌಶಲಗಳ ಬೋಧನೆಯೂ ಜಾರಿಗೊಳ್ಳಲಿದೆ. ಪ್ರತಿ ವರ್ಷವೂ ಇಂಥ ವಿಷಯಗಳ ಬೋಧನೆ ಇರಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಕ್ರೀಡೆ, ವೃತ್ತಿಪರ, ಕಲೆ, ವಾಣಿಜ್ಯ, ವಿಜ್ಞಾನದಂಥ ವಿಷಯಗಳಿಗೆ ಸಂಬಂಧಿಸಿದ ಹೆಚ್ಚುವರಿ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ.

ನೂತನ ಶಿಕ್ಷಣ ನೀತಿಯು ಶೈಕ್ಷಣಿಕ ಕ್ರೆಡಿಟ್ ಬ್ಯಾಂಕ್ ಸ್ಥಾಪನೆ, ಬಹು ವಿಷಯಗಳ ಶಿಕ್ಷಣಕ್ಕೆ ಆದ್ಯತೆ, ಒಂದೇ ಕೇಂದ್ರಿಯ ನಿಯಂತ್ರಕ ವ್ಯವಸ್ಥೆ, ಸಾಮಾನ್ಯ ಪ್ರವೇಶ ಪರೀಕ್ಷೆಗಳು ಮೊದಲಾದ ಅಂಶಗಳು ಭಾರತಕ್ಕೆ ಸಮರ್ಥ ಶಿಕ್ಷಣದ ತಳಹದಿಯನ್ನು ಹಾಕುವಲ್ಲಿ ಸಂಶಯವಿಲ್ಲ ಎಂದು ಹೇಳಬಹುದು. ಉತ್ತಮ ಶಿಕ್ಷಣವು ಅತ್ಯುನ್ನತ ಮಾನವ ಸಂಪನ್ಮೂಲಗಳನ್ನು ಬೆಳೆಸಲು ಕಾರಣವಾಗುತ್ತದೆ.

ನೂತನ ಶಿಕ್ಷಣ ನೀತಿ ವಯಸ್ಸಿನ ಆಧಾರದಲ್ಲಿ ಶಿಕ್ಷಣ ನೀಡಲಾಗುವುದು. 3 ವರ್ಷದಿಂದ 18 ವರ್ಷದವರೆಗಿನ ಶಾಲಾ ಶಿಕ್ಷಣವನ್ನು 4 ಹಂತವಾಗಿ ವಿಂಗಡಿಸಿದ್ದು, 1ನೇ ಹಂತವಾಗಿ 3 ವರ್ಷದಿಂದ 8 ವರ್ಷದಲ್ಲಿ2ನೇ ತರಗತಿ, 2ನೇ ಹಂತದಲ್ಲಿ3 ರಿಂದ 5ನೇ ತರಗತಿ), ನಂತರದ ಮೂರು ವರ್ಷಗಳಲ್ಲಿ 6 ರಿಂದ 8ನೇ ತರಗತಿ ಹಾಗೂ ನಂತರ 4 ವರ್ಷದಲ್ಲಿ9ರಿಂ.ದ 12ನೇ ತರಗತಿವರೆಗೆ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ.

ಈಗ ಪಠ್ಯಕ್ಕಷ್ಟೇ ಆದ್ಯತೆ, ಪಠ್ಯೇತರ ಚುಟುವಟಿಕೆಗಳು ಶಾಲೆ ಗೇಟ್‌ನಿಂದಲೂ ಹೊರಗೆ ಎನ್ನುವ ಸ್ಥಿತಿಯಿದೆ. ನೂತನ ನೀತಿಯನ್ವಯ ಪಠ್ಯ ಮತ್ತು ಪಠ್ಯೇತರ ಎಂಬ ವ್ಯತ್ಯಾಸ ಇರುವುದಿಲ್ಲ. 11,12ನೇ ತರಗತಿಗೆ ಕಲೆ, ವಿಜ್ಞಾನ, ವಾಣಿಜ್ಯ, ಶೈಕ್ಷಣಿಕ, ವೃತ್ತಿಪರ ಕೋರ್ಸ್‌ಗಳೆಂಬ ವ್ಯತ್ಯಾಸ ತೆಗೆದುಹಾಕುವ ಮೂಲ ಸೂತ್ರ ಇಟ್ಟುಕೊಳ್ಳಲಾಗಿದೆ. ಪಠ್ಯಕ್ರಮಗಳನ್ನು ಹೆಚ್ಚು ತುರುಕಬಾರದು ಪಠ್ಯಕ್ರಮದ ಗಾತ್ರ ಜಾಸ್ತಿ ಮಾಡುವ ಬದಲು ಯಾವ ಹಂತದಲ್ಲಿಏನು ಬೇಕೋ ಅದನ್ನು ಜೀರ್ಣಿಸಿಕೊಳ್ಳುವ ಶಿಕ್ಷಣ ಪ್ರಸ್ತಾಪಿಸಲಾಗಿದೆ.

ಪದವಿ ಹಂತದಲ್ಲಿ ಕೆಲ ವಿಭಾಗ, ಪಿಜಿಯಲ್ಲಿ ಕೋರ್ಸ್‌ಗಳ ಆಯ್ಕೆಗೆ ಅವಕಾಶ ಹಾಗೂ ಪಿಎಚ್‌ಡಿ ಹಂತದಲ್ಲಿ ಮತ್ತಷ್ಟು ಕೋರ್ಸ್‌ಗಳ ಆಯ್ಕೆಗೆ ಅವಕಾಶವಿರುತ್ತದೆ. ಈಗಿರುವಂತೆ ಬಿಎ. ಬಿಕಾಂ, ಬಿಎಸ್ಸಿ ಇನ್ನಿತರೆ ಪದವಿ ಬದಲು ಬಿಎಲ್‌ಎ ಎಂದು ಕರೆಯಲಾಗುವುದು.

ಪದವಿ ಶಿಕ್ಷಣ ಈಗಿನ 3 ವರ್ಷದಿಂದ 4 ವರ್ಷದ್ದಾಗಲಿದೆ, ಮೊದಲ ವರ್ಷ ಪೂರ್ಣಗೊಳಿಸಿದರೆ ಸರ್ಟಿಫಿಕೇಟ್‌, 2ನೇ ವರ್ಷಕ್ಕೆ ಡಿಪ್ಲೊಮಾ,3ನೇ ವರ್ಷಕ್ಕೆ ಪದವಿ,4ನೇ ವರ್ಷ ಕಡ್ಡಾಯವಲ್ಲ, ಪೂರ್ಣಗೊಳಿಸಿದವರಿಗೆ ಹಾನರ್ಸ್ ನೀಡಲಾಗುವುದು. ವಿದ್ಯಾರ್ಥಿ ಯಾವ ವರ್ಷವಾದರೂ ಕಲಿಕೆಗೆ ಸೇರಿ ಹೊರಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಕಳೆದ ನೂರು ವರುಷಗಳಿಂದ ಪದವಿ ತರಗತಿಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲಾಗುತ್ತಿದೆ.

ಹೊಸ ಶಿಕ್ಷಣ ನೀತಿ ೨೦೨೦ರಲ್ಲಿ ಪದವಿ ತರಗತಿಗಳಲ್ಲಿ ಕನ್ನಡವನ್ನು ಕೇವಲ ಎರಡು ವರ್ಷಕ್ಕೆ ಸೀಮಿತ ಗೊಳಿಸುತ್ತಿದ್ದಾರೆ. ಇದರಿಂದ ಅನ್ನದ ಭಾಷೆಯಾಗದೇ ಕೇವಲ ಕಲಿಕೆಯಾ ಭಾಷೆಯಾಗಿ ಉಳಿಯುವ ಹಂತ ತಲುಪುತ್ತದೆ ಮುಂದೊಂದು ದಿನ ಅವಗಣೆಗೆ ಒಳಗಾಗಿ ಶೈಕ್ಷಣಿಕ ಪ್ರಕ್ರಿಯೆಯಿಂದ ದೂರ ಉಳಿಯುವ ಸಾಧ್ಯತೆಯಿದೆ. ಪದವಿ ತರಗತಿಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲು ಇರುವ ಅನಿವಾರ್ಯತೆ ನೋಡಬೇಕಾಗಿದೆ.

ಕನ್ನಡ ಭಾಷೆ ಸಮುದಾಯಗಳಲ್ಲಿ,ಜನಮಾನಸದಲ್ಲಿ ಇರಬೇಕು ಎಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವನ್ನು ಭಾಷೆಯಾಗಿ ಬದುಕಿಗಾಗಿ ಭಾಷೆಯನ್ನು ಕಲಿಯಬೇಕು, ಕನ್ನಡ ಬರಹದ ಕೌಶಲ, ಓದಿನ ಕೌಶಲ, ಗ್ರಹಿಕೆಯ ಕೌಶಲ, ತರ್ಕಿಸುವ ಕೌಶಲ, ಸ್ವತಂತ್ರವಾಗಿ ಆಲೋಚಿಸುವ ಮತ್ತು ಆಲೋಚಿಸಿದ್ದನ್ನು ಅಭಿವ್ಯಕ್ತಿಸುವ ಕೌಶಲಗಳನ್ನು ಒದಗಿಸಲು ಮತ್ತು ವೃದ್ಧಿಸಲು ಕಲಿಕೆಗೆ ಅನುವು ಮಾಡಿಕೊಡಲು, ಪ್ರಾಥಮಿಕ ಹಂತದಲ್ಲಿ ಮಾತ್ರವಲ್ಲದೆ ಪದವಿ ಹಂತದಲ್ಲಿ ಅವಶ್ಯಕವಾಗಿದೆ .ಏಕೆಂದರೆ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳು. ಹೊಸ ಹೊಸ ಜ್ಞಾನ ವಲಯಗಳು ಬೇರೆ ಬೇರೆ ಭಾಷಿಕ ಅಗತ್ಯಗಳನ್ನು ಬೇಡುವ ಪರಿಸ್ಥಿತಿ ಮತ್ತೆ ಮತ್ತೆ ಸದಾ ಉಂಟಾಗುತ್ತ ಇರುತ್ತದೆ. ಉದಾಹರಣೆಗೆ ಗಣಕ ಸಂಬಂಧಿ ವಲಯದಲ್ಲಿ ಭಾಷೆಯನ್ನು ಶಕ್ತಗೊಳಿಸುವ ಮತ್ತು ಬಳಕೆಗೆ ಸಜ್ಜುಗೊಳಿಸುವ ಕೆಲಸ ಅಗಾಧವಾಗಿ ಇದೆ. ಇದಕ್ಕೆ ತಕ್ಕ ಭಾಷಾ ಕೌಶಲ ಮತ್ತು ಸಾಮರ್ಥ್ಯ ಇರುವವರನ್ನು ನಾವು ತಯಾರು ಮಾಡಬೇಕಿದೆ. ಅದಕ್ಕಾಗಿ ಭಾಷೆಯ ಕಲಿಕೆ ಬೇಕಿದೆ. ಇದನ್ನೆ ವಿಸ್ತರಿಸಿ ಹೇಳುವುದಾದರೆ ವಾಣಿಜ್ಯ ಕನ್ನಡ, ವಿಜ್ಞಾನ ಕನ್ನಡ, ಗಣಕ ಕನ್ನಡ, ಅರ್ಥಶಾಸ್ತ್ರ ಪರಿಭಾಷೆ, ರಾಜ್ಯಶಾಸ್ತ್ರ ಪರಿಭಾಷೆ, ಸಮಾಜಶಾಸ್ತ್ರ ಪರಿಭಾಷೆ ಹೀಗೆ ಹಲವು ಭಾಷೆ ಮತ್ತು ಪರಿಭಾಷೆಗಳನ್ನು ನಾವಿಂದು ಸೃಷ್ಟಿಸುವ ಮತ್ತು ಸೃಷ್ಟಿಸಬಲ್ಲವರನ್ನು ಸೃಷ್ಟಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಭಿನ್ನ ಪದವಿಗಳಲ್ಲಿ ಪ್ರತ್ಯೇಕವಾಗಿ ಕನ್ನಡ ಭಾಷೆಯನ್ನು ಕಲಿಸಬೇಕಿದೆ.

ಫೋಟೋ ಕೃಪೆ : ಅಂತರ್ಜಾಲ

ಒಂದೊಂದು ಪದವಿಗಳೂ ಬೇರೆ ಬೇರೆ ಬಗೆಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತವೆ. ಹಾಗಾಗಿ ನಮ್ಮ ಭಾಷಾ ಕಲಿಕೆ ಸದಾ ಪದವಿ ವಿಶಿಷ್ಟ ಆಗಿ ರೂಪಗೊಳ್ಳಿಸಿ ಕನ್ನಡ ಭಾಷಾ ಕಲಿಕೆಯನ್ನು ಸಾಮಾನ್ಯ ಚೌಕಟ್ಟಿನಲ್ಲಿ ಕಲಿಸಬೇಕಾಗಿದೆ.ಬರಹ ಮತ್ತು ಓದು ಹಾಗೂ ಲಿಖಿತ ದಾಖಲೀಕರಣ ನಮ್ಮಲ್ಲಿ ನಿರಂತರ ನಡೆಯುವ ಪ್ರಕ್ರಿಯೆ. ನಿತ್ಯ ವ್ಯವಹಾರದಲ್ಲಿ ನ್ಯಾಯಾಂಗ, ಆಡಳಿತಾಂಗ-ಕಾರ್ಯಾಂಗ, ಶಾಸಕಾಂಗ, ವ್ಯವಹಾರ, ಆಂತರಿಕ ವ್ಯಾಪಾರ ವಹಿವಾಟು ಸ್ವ ಉದ್ಯೋಗ ಮಾಡುವವರೂ ಸೇರಿದಂತೆ, ಸರ್ಕಾರಿ ಅಥವಾ ಖಾಸಗಿ ವ್ಯವಸ್ಥೆಯಲ್ಲಿ ಸಂಬಳಕ್ಕಾಗಿ ಉದ್ಯೋಗಕ್ಕೆ ಸೇರಬಯಸುವವರು ಇತ್ಯಾದಿಗಳಲ್ಲಿ ಬಳಸುವ ಭಾಷೆ ಕನ್ನಡವೇ ಆಗಿದೆ ಇಲ್ಲಿ ಇಂಗ್ಲೀಷ್ ಅನವಶ್ಯಕ, ಸಂವಹನ ಸಾರ್ವಜನಿಕರು ಅಂದರೆ ಕನ್ನಡಿಗರ ಜೊತೆಗೆ ನಡೆಯುವುದು.ಹಾಗಾಗಿ ಪದವಿಯಲ್ಲಿ ಕನ್ನಡ ಭಾಷೆಯು ಅನಿವಾರ್ಯ. ಅಲ್ಲದೇ ಕರ್ನಾಟಕದಲ್ಲಿ ರಂಗಭೂಮಿ, ಸಿನೆಮಾ, ಕಿರುತೆರೆಯ ನ್ಯೂಸ್ ಚಾನಲ್ ಮಾಧ್ಯಮಗಳು ಇಂದು ಬಹೃತ್ ಉದ್ಯಮವಾಗಿ ಮಾರ್ಪಟ್ಟಿವೆ, ಇದರಿಂದಾಗಿ ಹಲವಾರು ರೀತಿಯ ಉದ್ಯೋಗಗಳು ನಿರಂತರ ಸೃಷ್ಟಿಯಾಗುತ್ತಿವೆ. ಅಲ್ಲಿ ಕಾರ್ಯ ನಿರ್ವಹಿಸಲು ಬೇಕಾಗಿರುವುದು ಕನ್ನಡದ ಬಗ್ಗೆ ತಿಳುವಳಿಕೆ ,ಜ್ಞಾನ ಇರುವಂತವರು ಕನ್ನಡದಲ್ಲಿ ಪದವಿ ಪಡೆದಂತವರು ಬೇಕು.

ಇತ್ತೀಚಿನ ದಿನಮಾನಗಳಲ್ಲಿ ಕನ್ನಡ ಸಮೂಹ ಸಂವಹನ ವಲಯದಲ್ಲಿ ನಿರ್ದಿಷ್ಟವಾಗಿ ಮುದ್ರಣ ಮಾದ್ಯಮದಲ್ಲಿ ಮತ್ತು ಮೊಬೈಲ್‌ (ಆಪ್‌ ಆಧಾರಿತ) ಸುದ್ದಿ ಮಾಧ್ಯಮಗಳನ್ನು ನಮ್ಮಲ್ಲಿ
ಹೆಚ್ಚಾಗಿ ನೋಡುವುದರಿಂದ ಅನೇಕ ವಾರ್ತ ವಾಹಿನಿಗಳು, ಪತ್ರಿಕೆಗಳು, ಮುಂತಾದ ಮಾಧ್ಯಮಗಳು ತಮ್ಮದೇ ಆದಾ ವೆಬ್ ಸೈಟ್ ಗಳನ್ನು ಹೊಂದಿ ಸುದ್ದಿ ಬಿತ್ತರಿಸುತ್ತಿವೆ ಇದರಿಂದ ಉದ್ಯೋಗ ಅವಕಾಶ ಸಾಕಷ್ಟು ಪ್ರಮಾಣದಲ್ಲಿ ಸೃಷ್ಟಿಯಾಗಿವೆ.ಪದವಿ ಮತ್ತು ಉನ್ನತ ಶಿಕ್ಷಣ ದಲ್ಲಿ ಕನ್ನಡ ಪದವಿ ಪಡೆದಿರಬೇಕು, ಸುಲಲಿತವಾಗಿ ಕನ್ನಡ ಮಾತನಾಡುವರು ಬೇಕು ಎಂದೇ ಆಯ್ಕೆ ಮಾಡಿಕೊಳ್ಳವುದು, ಸೃಷ್ಟಿಸುವ, ಸಂಕ್ಷೇಪಿಸುವ, ಪರಿಭಾಷೆಗಳನ್ನು ಸೃಷ್ಟಿಸುವ ಮತ್ತು ನಿತ್ಯ ಸಾಮಾನ್ಯ ಓದುಗರಿಗೆ ಬಳಸಲು ಬೇಕಾದಂತೆ ಭಾಷೆಯನ್ನು ಸೃಜನಶೀಲವಾಗಿ ಸೃಷ್ಟಿಸಿ ನೀಡುವ ಭಾಷಾ ಕೌಶಲದ ಅಗತ್ಯ ಇದೆ. ಇಂದಿನ ಲೋಕದಲ್ಲಿ ಹಲವು ವಲಯಗಳಲ್ಲಿ ಭಾಷೆಯನ್ನು ಸಂವಹನಕ್ಕಾಗಿ ಬಳಸುವ ರೂಢಿಯಿದೆ. ನಾಮಕರಣ, ಮದುವೆ, ಹಬ್ಬ, ಜಾತ್ರೆ ಇತ್ಯಾದಿ ಇತ್ಯಾದಿ ನಾನಾ ದೈನಂದಿನ ವ್ಯವಹಾರಗಳಲ್ಲಿ ಭಾಷೆಯನ್ನು ಭಿನ್ನವಾಗಿ ಬಳಸುವ ಅಗತ್ಯ ಬೀಳುತ್ತದೆ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಭಾಷೆಯ ಬಳಕೆಯ ಕೌಶಲಗಳಿಗೆ ಬೇಡಿಕೆ ಬರಬಹುದು. ಭಾಷೆಯ ಪದಕೋಶ-ಅರ್ಥಕೋಶಗಳು ಸಮಾಜದಲ್ಲಿ ನಿತ್ಯ ಪರಿವರ್ತನೆ ಆಗುವಂಥವು. ನಿತ್ಯ ವ್ಯವಹಾರಕ್ಕೆ ಮನೆಭಾಷೆಯೆ ಬೇರೆ ಮತ್ತು ಹೊರಭಾಷೆಯೆ ಬೇರೆ ಅನ್ನುವ ವಾತಾವರಣ ಇಂದು ಇದೆ. ಆದ್ದರಿಂದ ಪ್ರತಿಯೊಬ್ಬರ ಪದಕೋಶ ಮತ್ತು ಅರ್ಥಕೋಶಗಳು ವೃದ್ಧಿ ಆಗಬೇಕಾದ ಅಗತ್ಯವಿದೆ. ಅದಕ್ಕಾಗಿ ನಾವಿಂದು ನಮ್ಮ ಭಾಷೆಯನ್ನು ಕಲಿಯಬೇಕಿದೆ.

ಹಳಗನ್ನಡ, ನಡುಗನ್ನಡ, ಹೊಸಗನ್ನಡ, ಆಧುನಿಕ ಪ್ರಾಚೀನ, ಶಿಷ್ಟ ಜಾನಪದ ಇತ್ಯಾದಿ ಮತ್ತು ಹಲವು ಹಳ್ಳಿಗಳಿಂದ, ಭಿನ್ನ ಪ್ರಾದೇಶಿಕ ಹಿನ್ನೆಲೆ ಗಳಿಂದ ಅಂದರೆ ಧಾರವಾಡ ಕನ್ನಡ, ಬೆಳಗಾವಿ ಕನ್ನಡ ಕಲ್ಬುರ್ಗಿ ಕನ್ನಡ ಮಂಗಳೂರು ಕನ್ನಡ, ಮೈಸೂರು ಕನ್ನಡ ಮಂಡ್ಯದ ಕನ್ನಡ, ಕುಂದಾಪುರ ಕನ್ನಡ ಹೀಗೆ ಹಲವು ತೊರೆಗಳ ರೂಪಗಳ ಇರುವ ಕನ್ನಡವು ನಂತರ ಒಂದು ನದಿಯಾಗಿ ಅಂದರೆ ಶ್ರೇಷ್ಠ ಕನ್ನಡ ಭಾಷೆಯಾಗಿ ಹರಿಯುತ್ತಿದೆ ಪದವಿ ತರಗತಿಗಳಲ್ಲಿ ಪಠ್ಯವನ್ನು , ಆ ತರಗತಿಯನ್ನು ನೂತನ ಶಿಕ್ಷಣ ನೀತಿಯ ಹೆಸರಲ್ಲಿ ಇಲ್ಲವಾಗಿಸುವ ಕ್ರಮ ಎಷ್ಟು ಸರಿ ಎಂಬುದು ಪ್ರಶ್ನೆ..?

ಮಾತೃಭಾಷೆಯು ನಮ್ಮ ಜೀವನಾಡಿಯಂತೆ. ವೈಯಕ್ತಿಕವಾಗಿ, ಸಾಮೂಹಿಕವಾಗಿ ಮತ್ತು ನಮ್ಮ ಸಂಪ್ರದಾಯಗಳು, ಪದ್ಧತಿಗಳು ಎಲ್ಲದರಲ್ಲೂ ಭಾಷೆಯ ಪಾತ್ರವಿದೆ. ಜನರ ನಡುವೆ ಬಾಂಧವ್ಯವವನ್ನು ಸೃಷ್ಟಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಭಾಷೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಭಾಷಾ ಜನಗಣತಿಯ ಪ್ರಕಾರ ಭಾರತದಲ್ಲಿ 19,500 ಕ್ಕೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳನ್ನು ಇಲ್ಲಿನ ಜನರು ಮಾತೃಭಾಷೆಗಳಾಗಿ ಮಾತನಾಡುತ್ತಾರೆ. ಭಾರತದಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚು ಜನರು ಮಾತನಾಡುವ 121 ಭಾಷೆಗಳಿವೆ.

ಭಾಷೆಗಳು ಎಂದಿಗೂ ಸ್ಥಿರವಾಗಿರುವುದಿಲ್ಲ ಅವು ಕ್ರಿಯಾತ್ಮಕ, ವಿಕಸನ ಹೊಂದುತ್ತಲೇ ಸುತ್ತಲಿನ ಸಾಮಾಜಿಕ-ಆರ್ಥಿಕ ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಭಾಷೆಗಳು ಬೆಳೆಯುತ್ತವೆ, ಕುಗ್ಗುತ್ತವೆ, ರೂಪಾಂತರಗೊಳ್ಳುತ್ತವೆ, ವಿಲೀನಗೊಳ್ಳುತ್ತವೆ. ನಮ್ಮ ದೇಶದ 196 ಭಾಷೆಗಳನ್ನು ಅಳಿವಿನಂಚಿನಲ್ಲಿರುವ ಭಾಷೆಗಳು ಎಂದುವರ್ಗೀಕರಿಸಲಾಗಿದೆಯೆನ್ನುವುದು ಅತ್ಯಂತ ಖೇದಕರ ವಿಷಯವಾಗಿದೆ. ಈ ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಬಾರದು ನಾವು ನಮ್ಮ ಭಾಷೆಗಳನ್ನು ರಕ್ಷಿಸಿ ಕಾಪಾಡಿಕೊಳ್ಳಬೇಕಿದೆ. ಒಂದು ಭಾಷೆಯ ಕಣ್ಮರೆಯೊಂದಿಗೆ ನಮ್ಮ ವಿಶೇಷ ಕೌಶಲ್ಯಗಳು, ಕಲೆಗಳು, ಕರಕುಶಲ ವಸ್ತುಗಳು, ಪಾಕಪದ್ಧತಿ ಮತ್ತು ವ್ಯಾಪಾರದ ಜೊತೆಗೆ ಸಾಂಪ್ರದಾಯಿಕ ಜೀವನೋಪಾಯದ ಮಾದರಿಗಳು ಕೂಡಾ ಕಣ್ಮರೆಯಾಗುತ್ತವೆ.ಭಾಷಾ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಬಹುಮುಖಿ ವಿಧಾನದ ಅಗತ್ಯವಿದೆ.ಸುಪ್ರಸಿದ್ಧ ಬಾಹ್ಯಾಂತರಿಕ್ಷ ವಿಜ್ಞಾನಿ ಪ್ರೊ. ಯು.ಆರ್. ರಾವ್, ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಕಲಿತಿದ್ದು ಕನ್ನಡ ಮಾಧ್ಯಮದಲ್ಲಿ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಶಿಕ್ಷಣ ಮಾಧ್ಯಮ ತಮಿಳು. ಎನ್.ಆರ್. ನಾರಾಯಣಮೂರ್ತಿ ವರು ಮುಂತಾದ ನಾಡಿ ದಿಗ್ಗಜರು ಕನ್ನಡ ಮಾಧ್ಯಮದಲ್ಲಿ ಕಲಿತವರು.

ಕನ್ನಡ ಮಾಧ್ಯಮವಾಗಿರಲಿ. ಇಂಗ್ಲಿಷ್ ಒಂದು ಭಾಷೆಯಾಗಿ ಬರಲಿ . ಕನ್ನಡ ಮಾಧ್ಯಮ ಎಂದಾಕ್ಷಣ ಅದು ಇಂಗ್ಲಿಷ್ ವಿರೋಧಿ ಎಂದೇನೂ ಅಲ್ಲ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕು. ಅದು ಅವಶ್ಯವೂ ಹೌದು ಅನಿವಾರ್ಯವೂ ಹೌದು.

ಪದವಿ ಹಂತದ ಶಿಕ್ಷಣದ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣ ಇಲಾಖೆ, ಸರ್ಕಾರವೂ ವಿದ್ಯಾರ್ಥಿಗಳಿಗೆ ಕೇವಲ ಎರಡು ವರ್ಷಕ್ಕೆ ಸೀಮಿತ ಗೊಳಿಸುವುದರ ಬಗ್ಗೆ ಚಿಂತಿಸುವ, ತಜ್ಞರ ಸಮಿತಿಯನ್ನು ನೇಮಕ ಮಾಡಿ ಪರಿಹಾರ ಕಂಡುಕೊಳ್ಳಬೇಕಿದೆ.


  • ಡಾ.ಗುರುಪ್ರಸಾದ್ ರಾವ್ ಹವಲ್ದಾರ್ –  ಹೊಸಪೇಟೆ (ತಾ) ವಿಜಯನಗರ (ಜಿ)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW