ಆಗ ಹಿಂದಿ ಭಾಷೆ ಇನ್ನೂ ಹುಟ್ಟಿರಲಿಲ್ಲ – ಕೇಶವ ಮಳಗಿ  

ಕನ್ನಡ ಲಿಪಿ, ಭಾಷೆ, ಸಾಹಿತ್ಯ ತನ್ನ ಉತ್ತುಂಗದಲ್ಲಿದ್ದಾಗ, ಕಲ್ಲಿನ ಮೇಲೆ ಕನ್ನಡದ ಅಕ್ಷರಗಳು ಬೆಣ್ಣೆಯಂತೆ ಕರಗಿ ಶಾಸನಗಳಾಗುತ್ತಿದ್ದಾಗ ಹಿಂದಿ ಭಾಷೆ ಇನ್ನೂ ಹುಟ್ಟಿಯೂ ಇರಲಿಲ್ಲ.
ವಣಿಜ ಒಡ್ಡೋಲಗದ ಬಹುಪರಾಕುಗಳೇ, ಕನ್ನಡವನ್ನು ನುಡಿಯಿರಿ, ನುಂಗಬೇಡಿ. ಕನ್ನಡದ ಕೆಂಡ ನಿಮ್ಮ ಕರುಳು ಸುಡುವುದು. – ಕೇಶವ ಮಳಗಿ, ಮುಂದೆ ಓದಿ… 

ಮೊದಲ ಕವಿಯ ಪಿಸುಮಾತು
*
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್‌ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ || ೨೯||

ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦|| 

ಗದ್ಯಭಾಗ : ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.

(ಕೃಪೆ: ವಿಕಿಪೀಡಿಯ)

ಭಾರತೀಯತೆ ಮತ್ತು ಪ್ರಾದೇಶಿಕತೆ
ಆಡುನುಡಿಗಳೇ ಜನರ ಜೀವನಾಡಿ

ಬುದ್ಧನ ವಿಚಾರಗಳನ್ನು ಆತನ ಅನುಯಾಯಿಗಳು ಯಾವ ಭಾಷೆಯಲ್ಲಿ ಪ್ರಚಾರ ಮಾಡಬೇಕು? ಎಂಬ ತಗಾದೆಯೊಂದು ವಿಹಾರದಲ್ಲೊಮ್ಮೆ ಹುಟ್ಟಿತು. ಇಬ್ಬರು ಭಿಕ್ಷುಗಳು ಬುದ್ಧನಲ್ಲಿಗೆ ದೂರನ್ನು ಒಯ್ದರು. ಬೇರೆ ಬೇರೆ ಪ್ರದೇಶಗಳಲ್ಲಿನ ಬುದ್ಧ ಭಿಕ್ಕುಗಳು ಸ್ಥಳೀಯ ಭಾಷೆಗಳನ್ನು ಬಳಸದೆ ಸಂಸ್ಕೃತ (ಛಂದಸ್ಸು) ಬಳಸುವಂತೆ ಮಹಾಗುರು ಆಜ್ಞೆ ನೀಡಬೇಕೆಂದು ಆ ಭಿಕ್ಕುಗಳು ಅಹವಾಲು ಸಲ್ಲಿಸಿದರು. ಬುದ್ಧನೋ ಯಾವುದೇ ಭಾಷೆಗೂ ವಿಶೇಷವಾದ ಮಹತ್ವವನ್ನು ನೀಡುವವನಲ್ಲ! ಭಿಕ್ಷುಗಳು ವಚನಗಳನ್ನು ‘ತಮ್ಮ ತಮ್ಮ ಆಡುಭಾಷೆ’ಯಲ್ಲಿ (ಸಕಾಯ ನಿರುತ್ತಿಯ) ಬೋಧಿಸಬೇಕೆಂಬುದು ಆತನ ನಿಲುವು.

ಆಗ ಇಬ್ಬರು ಭಿಕ್ಕುಗಳಿಗೆ ಬುದ್ಧ ಹೇಳಿದ್ದು:

“ಭಿಕ್ಕುಗಳು ತಮ್ಮ ತಮ್ಮ ಭಾಷೆಗಳನ್ನು ಬಳಸಿ ವಚನಗಳನ್ನು ಪ್ರಚುರಪಡಿಸಬೇಕೆಂದು ನಾನು ಆದೇಶ ನೀಡುತ್ತೇನೆ”.

(ಅನುಜಾನಾಮಿಭಿಕ್ಷುವೆಸಕಾಯಾ-ನಿರುತ್ತಿಯಾ ಬುದ್ಧವಚನಂರೊಯಾಪುಣಿತಂ).

ಪ್ರಬಲ ಭಾಷೆಯನ್ನೇ ಎಲ್ಲರೂ ಬಳಸಬೇಕು ಎಂದು ಆಜ್ಞೆ ನೀಡುವುದಕ್ಕಿಂತ ‘ಜನರಿಗೆ ಯಾವ ಭಾಷೆಯಲ್ಲಿ ಹೇಳಿದರೆ ಧರ್ಮ ಅರ್ಥವಾಗುತ್ತದೋ ಆ ಭಾಷೆಯನ್ನು ಬಳಸಬೇಕು’ ಎಂಬುದು ಬುದ್ಧನ ಅಚಲ ನಿಲುವಾಗಿತ್ತು. ಹೀಗಾಗಿ, ಪ್ರಬಲ ಭಾಷೆ ಸಂಸ್ಕೃತಕ್ಕಿಂತ ಬುದ್ಧವಚನ ಪ್ರಚಾರಕ್ಕೆ ಆತನ ಶಿಷ್ಯರು ಪೈಶಾಚಿ, ಅಪಭ್ರಂಶ, ಸಂಸ್ಕೃತ ಮಾಗಧಿ, ಮಹಾರಾಷ್ಟ್ರೀ ಪ್ರಾಕೃತ, ಕೋಸಲ ಭಾಷೆಗಳನ್ನು ಬಳಸತೊಡಗಿದರು. ಆತನ ವಚನಗಳು ಪಾಲಿ, ಗಾಥಾ, ಸಂಸ್ಕೃತ, ಚೀನಿ ಮತ್ತು ತಿಬ್ಬತಿ ಭಾಷೆಗಳಿಗೂ ಹಬ್ಬಿದವು. ಇನ್ನೂ ವಿಸ್ತಾರಗೊಂಡು, ಮಂಗೋಲ, ನಿಗೂರ, ಸೋಗ್ಡಿಯನ್‌, ಕುಚನೀ ಮತ್ತು ನಾರ್ಡ್‌ ಭಾಷೆಗಳನ್ನೂ ವ್ಯಾಪಿಸಿದವು.

(ಚುಲ್ಲವಗ್ಗ ಮತ್ತು ಬೌದ್ಧಧರ್ಮ ದರ್ಶನ).

ಒಕ್ಕೂಟ ಮತ್ತು ಭಾಷೆಯ ಸ್ಥಾನಮಾನ
“ಕೇಂದ್ರ ಸರ್ಕಾರವು ಎಷ್ಟು ಸಾಧ್ಯವೋ ಅಷ್ಟು ಭಾಷೆಗಳಲ್ಲಿ ಭಾಷಾವಾರು ರಾಜ್ಯಗಳೊಂದಿಗೆ ವ್ಯವಹರಿಸಬೇಕು.”

“ಇಂಗ್ಲಿಷ್ ಭಾಷೆಯನ್ನು ಪಲ್ಲಟಗೊಳಿಸುವ ಭಾಷೆಯನ್ನು ರಾಷ್ಟ್ರೀಯ ನುಡಿಯೆಂದು ಒಪ್ಪಿಕೊಳ್ಳದಿರುವವರಲ್ಲಿ ನಾನೂ ಒಬ್ಬ. ಇಡೀ ದೇಶಕ್ಕೆ ಒಂದೇ ರಾಷ್ಟ್ರೀಯ ಭಾಷೆ ಎಂದು ನೀವು ಹೇಳುತ್ತಿದ್ದರೆ ಅದಕ್ಕೆ ನನ್ನ ವಿರೋಧವಿದೆ. ಭಾರತವು ಒಂದು ರಾಷ್ಟ್ರ. ನಾನು ಭಾರತೀಯ. ನನ್ನ ಭಾಷೆ ಮರಾಠಿ ಎಂಬುದನ್ನು ನಾನು ಒತ್ತಿ ಹೇಳಬೇಕು.”

*

“ಎಲ್ಲಾ ಪ್ರದೇಶಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುತ್ತ ಭಾರತವನ್ನು ಒಂದು ಒಕ್ಕೂಟವೆಂದು ಭಾವಿಸುತ್ತಿದ್ದರೆ, ಆ ಚಿಂತನಾಕ್ರಮವು ಕೆಲಸ ಮಾಡುವುದಿಲ್ಲ. . . ಅಂಥಲ್ಲಿ, ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಯಾವಾಗಲೂ ಹಿಂದಿ ಭಾಷಿಕ ಪ್ರದೇಶಗಳಿಂದಲೇ ಬಂದವರಾಗಿರುತ್ತಾರೆ. ನಾವು ಉತ್ತರ ಮತ್ತು ದಕ್ಷಿಣ ಎಂಬ ಎರಡು ಒಕ್ಕೂಟಗಳನ್ನು ಹೊಂದಿರಬೇಕು. ಮತ್ತು ಈ ಎರಡೂ ಒಕ್ಕೂಟಗಳಿಗೆ ಶಾಸನ ರಚಿಸುವ, ಸಮಾನ ಪ್ರಾತಿನಿಧ್ಯವನ್ನು ಒದಗಿಸುವ ಸಂಯೋಜಿತ ಒಕ್ಕೂಟವೊಂದು ಇರಬೇಕು.”

(ಸಿ.ರಾಜಗೋಪಾಲಾಚಾರಿ ಅವರೊಂದಿಗಿನ ಮಾತುಕತೆಯಲ್ಲಿ)

ಡಾ. ಬಿ.ಆರ್‌. ಅಂಬೇಡ್ಕರ್‌

ಬಹುಭಾಷಾ ಸಂವಹನ ಅರಿವಿನ ದಾರಿ :

“ಇತ್ತೀಚಿನ ಸಂಶೋಧನೆಗಳು ಎರಡರಿಂದ ಎಂಟು ವರ್ಷದ ಮಕ್ಕಳು ಬಲು ಬೇಗ ಭಾಷೆಗಳನ್ನು ಗ್ರಹಿಸಬಲ್ಲರು ಎಂಬುದನ್ನು ಋಜುಪಡಿಸಿವೆ. ಅದೂ ಅಲ್ಲದೆ, ಬಹುಭಾಷೆಗಳ ಕಲಿಕೆಯು ಮಕ್ಕಳ ಗ್ರಹಿಕೆಯನು ಹೆಚ್ಚಿಸಬಲ್ಲದು. ಎಷ್ಟು ಬೇಗ ಮಕ್ಕಳು ಈ ವಯಸ್ಸಿನಲ್ಲಿ ಮೂರು ಭಾಷೆಗಳನ್ನು ಕಲಿಯುತ್ತಾರೋ ಅಷ್ಟು ಶೀಘ್ರವಾಗಿ ಅವರ ಬುನಾದಿಯು ಗಟ್ಟಿಗೊಳ್ಳುವುದು.
ಇದನ್ನು ಅತ್ತ್ಯುತ್ಸಾಹದಲ್ಲಿ ದೇಶಾದ್ಯಂತ ಅನುಷ್ಠಾನಗೊಳಿಸಬೇಕು. ಆ ಮೂಲಕ ಬಹುಭಾಷಿಕ ದೇಶದಲ್ಲಿ ಬಹುಭಾಷಾ ಸಂವಹನವು ದ್ವಿಗುಣಗೊಳ್ಳುವಂತೆ ಮಾಡಬೇಕು. ಆದಾಗ್ಯೂ, ಇದನ್ನು ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ, ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಅನುಷ್ಠಾನಗೊಳಿಸುವುದು ಒಳಿತು. ರಾಷ್ಷ್ರೀಯ ಐಕ್ಯತೆಯ ದೃಷ್ಟಿಯಿಂದ ಹಿಂದಿ ಮಾತನಾಡುವ ರಾಜ್ಯಗಳ ಶಾಲೆಗಳಲ್ಲಿ ಭಾರತದ ಯಾವುದಾದರೂ ಇನ್ನೊಂದು ಭಾಷೆಯನ್ನು ಕಲಿಸಬೇಕು. ಇದರಿಂದ ಭಾರತದ ಎಲ್ಲ ರಾಜ್ಯಗಳ ಭಾಷೆಗಳ ಸ್ಥಾನಮಾನಗಳು ಮೇಲಕ್ಕೇರುವುದು.”

ರವೀಂದ್ರನಾಥ ಠಾಕೂರ

ಇಂಗ್ಲಿಷ್ ಕಲಿಕೆ ವೈಜ್ಞಾನಿಕ ಉನ್ನತಿ :

“ನಾವು ಯಶಸ್ಸನ್ನು ಸಾಧಿಸಲು ಉನ್ನತ ಮಟ್ಟದ ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣವು ಅತ್ಯಗತ್ಯ. ಈ ದೃಷ್ಟಿಯಲ್ಲಿ ಒಂದು ವಿದೇಶಿ ಭಾಷೆಯನ್ನು ತಿಳಿದಿರುವುದು ಅವಶ್ಯಕ. ವಿದೇಶಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಕ್ಷೇತ್ರದಲ್ಲಿನ ಸಾಧನೆಗಳನ್ನು ಅರಿಯಲು ಅಲ್ಲಿನ ವಿಜ್ಞಾನಿಗಳು ಒಂದಕ್ಕಿಂತ ಹೆಚ್ಚಿನ ವಿದೇಶಿ ಭಾಷೆಗಳನ್ನು ಕಲಿತಿರುವುದೇ ಕಾರಣವಾಗಿದೆ.

ಪ್ರಾದೇಶಿಕ ಭಾಷೆಗಳನ್ನು ಬಳಸದ ರಾಜ್ಯಗಳಲ್ಲಿ ಹಿಂದಿ ಭಾಷೆ ಪ್ರಯೋಜನಕಾರಿ. ಉಳಿದ ಪ್ರಾದೇಶಿಕ ಭಾಷೆಗಳಂತೆಯೇ ಹಿಂದಿಯನ್ನು ಶೈಕ್ಷಣಿಕ ಕಾರಣಕ್ಕಾಗಿ ಬಳಸಬಹುದು. ಆದಾಗ್ಯೂ, ಆಧುನಿಕ ಭಾರತೀಯರು, ಒಂದು ವಿದೇಶಿ ಭಾಷೆಯನ್ನು, ಅದರಲ್ಲೂ ಇಂಗ್ಲಿಶನ್ನು ಕಲಿಯುವುದು ಅತ್ಯಂತ ಅಪೇಕ್ಷಿತವಾಗಿದೆ.

ತಂತ್ರಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಹಿಂದಿ ಅಥವ ಬೇರಾವುದೇ ಪ್ರಾದೇಶಿಕ ಭಾಷೆಯಲ್ಲಿ ನೀಡಲು ಸಾಧ್ಯವಿಲ್ಲ. ಹಿಂದಿಯಲ್ಲಿ ಆ ಬಗೆಯ ಪುಸ್ತಕಗಳನ್ನು ಪ್ರಕಟಿಸುವುದು, ನುಡಿಗಟ್ಟುಗಳನ್ನು ಟಂಕಿಸುವುದು ಮುಖ್ಯ. ಆದರೆ, ಅಷ್ಟೇ ಸಾಲದು. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸಬೇಕು. ಈ ಕಾರಣದಿಂದಾಗಿಯೇ ನಾವು  ಇಂಗ್ಲಿಷ್ ನ್ನು ದೊಡ್ಡ ಪ್ರಮಾಣದಲ್ಲಿ ಎರಡನೆಯ ಭಾಷೆಯಾಗಿ ಕಲಿಯಬೇಕು.”

ಜವಹರಲಾಲ್‌ ನೆಹರು


  • ಕೇಶವ ಮಳಗಿ  (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW