ಚಂದನವನದಲ್ಲಿ ಮರೆಯಲಾಗದ ರಾಜನಂದ

ರಾಜಾನಂದರು ಹುಟ್ಟುವಾಗಲೇ ಹೆರಿಗೆ ಸಮಯದಲ್ಲಿ ತಾಯಿ ಸತ್ತಾಗ, ತಂದೆಯವರು ಅಪಶಕುನದ ಮಗುವೆಂದು ಮುಖವನ್ನು ನೋಡಲು ಇಷ್ಟಪಡದೆ ರಾಜಾನಂದರನ್ನು ಯಾವುದಾದರೂ ತಿಪ್ಪೆಗೆ ಬೀಸಾಡಲು ತನ್ನ ಅಕ್ಕನ ಹತ್ತಿರ ಹೇಳುತ್ತಾರೆ. ಆ ಮಗುವನ್ನು ಅಕ್ಕ ತಿಪ್ಪೆಗೆ ಬೀಸಾಡಲು ಹೋಗುತ್ತಾರೆ.

‘ಚಿತ್ರರಂಗದಲ್ಲಾಗಲಿ ಇಲ್ಲಾ,ಜೀವನವೆಂಬ ನೈಜ ಚಿತ್ರದಲ್ಲಾಗಲಿ ಒಬ್ಬ ನಾಯಕ ಯಶಸ್ವಿಯಾಗ ಬೇಕಾದರೆ ಅವರಿಗೆ ಪ್ರೋತ್ಸಾಹಕರಾಗಿ, ಪೋಷಕರಾಗಿ ನಿಂತವರು ಹಾಗೂ ಬೆಂಬಲವಾಗಿ ಬೆನ್ನು ತಟ್ಟಿದವರ ಪಾತ್ರ ತುಂಬಾ ಮುಖ್ಯವಾಗಿರುತ್ತದೆ’. ಅಂತಹ ಒಂದು ಮುಖ್ಯ ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಕನ್ನಡಿಗರ ಜನ-ಮನ ಗೆದ್ದ ನಟರು ರಾಜಾನಂದ್. ಅವರ ಅಭಿನಯ ಶೈಲಿ, ಭಾವಾಭಿನಯ, ನೈಜತೆ ನೋಡಿದಾಗ ಗೊತ್ತಾಗುತ್ತದೆ. ಅವರೊಬ್ಬ ರಂಗಭೂಮಿ ಕಲಾವಿದರೆಂದು ಕಣ್ಣು ಹುಬ್ಬುಗಳನ್ನು ಮೇಲೆರಿಸಿ, ಮೇರು ಧ್ವನಿಯಲ್ಲಿ ಅಬ್ಬರಿಸಿ, ಒಂದೇ ಉಸಿರಿನಲ್ಲಿ ಎಂತಹ ಸಂಭಾಷಣೆಯನ್ನಾದರೂ ಹೇಳಿ ಬಿಡುವ ಅಪರೂಪದ ಚತುರ ಕಲಾವಿದರಾಗಿದ್ದರು ರಾಜಾನಂದರು. ರಾಜನಾಗಿ, ಸೇನಾಧಿಪತಿಯಾಗಿ, ಮಂತ್ರಿಯಾಗಿ, ಸೈನಿಕನಾಗಿ, ಪಂಡಿತನಾಗಿ, ಬ್ರಾಹ್ಮಣನಾಗಿ, ಪೂಜಾರಿಯಾಗಿ, ಮನೆಯ ಯಜಮಾನನ ಪಾತ್ರದಿಂದ ಹಿಡಿದು ಮನೆಯ ಜವಾನನ ಪಾತ್ರದವರೆಗೂ ಅಭಿನಯಿಸಿ ಕೋಟ್ಯಾನು ಕೋಟಿ ಕನ್ನಡಿಗರಿಗೆ ಚಿರ ಪರಿಚಿತರಾದವರು ರಾಜಾನಂದ್. ಆದರೆ ಇವತ್ತು ಅವರು ನಮ್ಮೊಂದಿಗೆ ಇಲ್ಲಾ. ನಮ್ಮೊಂದಿಗಿರುವುದು ರಾಜಾನಂದರ ಕಲಾ ಜೀವನದ ನೆನಪುಗಳು ಮಾತ್ರ. ಅವರ ಜೀವನದ ಕಥೆಗಳನ್ನು ಓದಿದಾಗ- ಕೇಳಿದಾಗ ಅವರ ಜೀವನವೇ ಒಂದು ಚಿತ್ರ ಕಥೆಯಾಗಿ ಬಿಡುತ್ತದೆ.

ಅಪಶಕುನದ ಮಗುವೆಂದು ತಿಪ್ಪೆಗೆ ಬೀಸಾಡುವ
ತುಂಬಾ ನೋವಿನ ದಿನಗಳನ್ನು ಅನುಭವಿಸಿ ಚಿತ್ರರಂಗದಲ್ಲಿ ರಾಜನಂತೆ ಜೀವಿಸಿದಂತಹವರು ರಾಜಾನಂದರು. ಮೂಲತಃ ಹಾಸನದ ಅರಸಿಕೇರೆಯವರಾದ ರಾಜಾನಂದರು, ತಂದೆಯವರಿಗೆ ಎರಡನೇಯ ಹೆಂಡತಿ ಮಗನಾಗಿ ೨ ಡಿಸೆಂಬರ್ ೧೯೨೭ ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಮೊದಲನೆ ಹೆಂಡತಿಗೆ ಮಕ್ಕಳಾಗದ ಕಾರಣ ರಾಜಾನಂದರ ತಂದೆಯವರು ಹೆಂಡತಿಯನ್ನು ವಿರೋಧಿಸಿ ಎರಡನೆ ಮದುವೆಯಾಗುತ್ತಾರೆ. ನಂತರ ರಾಜಾನಂದರು ಹುಟ್ಟುವಾಗಲೇ ಹೆರಿಗೆ ಸಮಯದಲ್ಲಿ ತಾಯಿ ಸಾಯುತ್ತಾರೆ. ಇದರಿಂದ ನೊಂದ ರಾಜಾನಂದರ ತಂದೆಯವರು ಅಪಶಕುನದ ಮಗುವೆಂದು ಮುಖವನ್ನು ನೋಡಲು ಇಷ್ಟಪಡದೆ ರಾಜಾನಂದರನ್ನು ಯಾವುದಾದರೂ ತಿಪ್ಪೆಗೆ ಬೀಸಾಡಲು ತನ್ನ ಅಕ್ಕನ ಹತ್ತಿರ ಹೇಳಿದಾಗ, ಅಕ್ಕ ಆ ಮಗುವನ್ನು ತಿಪ್ಪೆಗೆ ಬೀಸಾಡಲು ಹೋಗುತ್ತಾರೆ. ರಾಜಾನಂದರ ಅತ್ತೆಯಾದ ಅವರಿಗೆ ಮಗುವನ್ನು ಬೀಸಾಡಲು ಮನಸ್ಸಾಗದೆ ಅಲ್ಲಿಯೇ ಹತ್ತಿರವಿದ್ದ ಬಡವರ ಮನೆಯಲ್ಲಿ ಮಗುವನ್ನು ಕೊಟ್ಟು ಸಾಕಲು ಹೇಳಿ ಹೋಗುತ್ತಾರೆ.

ನಂತರ ತಂದೆಯವರು ಮಾನಸಿಕವಾಗಿ ನೊಂದು, ಇದ್ದ ಒಬ್ಬ ಮಗನನ್ನು ಬೀಸಾಡಲು ಹೇಳಿದನಲ್ಲಾ ಎಂದು ಕೊರಗುತ್ತಿರುವಾಗ, ರಾಜಾನಂದರ ಅತ್ತೆ, ಮಗು ಬದುಕಿರುವ ವಿಷಯವನ್ನು ಹೇಳಿ ಆ ಬಡವರ ಮನೆಗೆ ಹೋಗಿ ಹಣವನ್ನು ಕೊಟ್ಟು ಮಗುವಾಗಿದ್ದ ರಾಜಾನಂದರನ್ನು ಮತ್ತೆ ಮನೆಗೆ ಕರೆತರುತ್ತಾರೆ. ತಾಯಿಯಿಲ್ಲದೆ ತಬ್ಬಲಿಯಾಗಿದ್ದ ರಾಜಾನಂದರನ್ನು ಅತ್ತೆಯವರೇ ಸಾಕಿ ಸಲಹುತ್ತಾರೆ.

1

ಫೋಟೋ ಕೃಪೆ : Chitraloka.com

ನಾಟಕದಲ್ಲಿನ ಆಸಕ್ತಿ
ಚಿಕ್ಕಂದಿನಿಂದಲ್ಲೂ ರಾಜಾನಂದರಿಗೆ ಭಜನೆ, ಬಯಲಾಟ, ಕುಣಿತವೆಂದರೆ ತುಂಬಾ ಇಷ್ಟವಾಗಿತ್ತಂತೆ. ಅದಕ್ಕೆ ಬಾಲ್ಯದಲ್ಲಿಯೇ ಬೀದಿ ನಾಟಕಗಳಲ್ಲಿ ಅಭಿನಯ ಪ್ರಾರಂಭಿಸಿದ್ದರಂತೆ. ಭಕ್ತ ಪ್ರಹ್ಲಾದನ ಪಾತ್ರಾಭಿನಯಕ್ಕೆ ಜನರಿಂದ ಆವಾಗ್ಲೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರಂತೆ. ಹೀಗೆ ಬಾಲ್ಯದಲ್ಲಿಯೆ ಪ್ರತಿಭಾನ್ವಿತರಾದ ರಾಜಾನಂದರು, ಒಮ್ಮೆ ಬೀದಿ ನಾಟಕವಾಡುತ್ತಾ ಊರೂರು ಸುತ್ತುವಾಗ, ದುರಾದೃಷ್ಟವೆಂಬಂತೆ ಮನೆಯಲ್ಲಿ ಅವರನ್ನು ಸಾಕಿ ಸಲುಹಿದ ಅತ್ತೆಯವರು ಕೊನೆಯುಸಿರೆಳೆಯುತ್ತಾರೆ. ಇದರಿಂದ ಮನೆಯವರೆಲ್ಲಾ ರಾಜಾನಂದರಿಗೆ ನಾಟಕ, ಕುಣಿತ ಎಲ್ಲಾ ಬಿಟ್ಟು ಮನೆಯಲ್ಲಿಯೆ ಕೆಲಸ ಮಾಡಿ ಕೊಂಡಿರಲು ಹೇಳುತ್ತಾರೆ. ಆದರೆ ಕಲೆಯ ನಂಟಿದ್ದ ರಾಜಾನಂದರು ಮನೆಯವರ ಮಾತಿಗೆ ಒಪ್ಪದ ಕಾರಣ ಅವರನ್ನು ಮನೆಯಿಂದ ಹೊರ ಹಾಕುತ್ತಾರೆ. ಮನೆಯಿಂದ ಹೊರ ಬಂದ ಮೇಲೆ ತಂದೆಯವರ ಬಳಿಗೆ ಹೋಗಲು ಮನಸ್ಸಾಗದ ರಾಜಾನಂದರು ಬೀದಿ ನಾಟಕ ಮಾಡುವವರ ಗುಂಪನ್ನು ಶಾಶ್ವತವಾಗಿ ಸೇರಿಕೊಳ್ಳುತ್ತಾರೆ.

ನಂತರ ಬೀದಿಗಳಲ್ಲಿ ನಾಟಕವಾಡಿ ಹೊಟ್ಟೆಯನ್ನು ತುಂಬಿಸಿ ಕೊಳ್ಳುತ್ತಾರೆ. ಹೀಗೆ ನಾಟಕವಾಡುತ್ತಾ ಅಂದಿನ ಖ್ಯಾತ ರಂಗಭೂಮಿ ಕಲಾವಿದರಾದ ”ಭುವನಪ್ಪ ನಾಗಭರಣ ಕಲಾಕೋಟಿ” ಯವರ “ರಂಗತಂಡ” ವನ್ನು ಸೇರಿಕೊಳ್ಳುತ್ತಾರೆ. ರಂಗ ತಂಡದಲ್ಲಿಯೂ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಮಗನಂತೆ ಬೆಳೆಯುತ್ತಾರೆ. ೩೫೦ ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ, ನಿರ್ದೆಶನ, ಸಂಭಾಷಣೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ. ರಂಗಭೂಮಿಯಲ್ಲಿ ತಮ್ಮ ಸಾಧನೆಗೆ ಅನೇಕ ಪ್ರಶಸ್ತಿಗಳನ್ನೂ ಪಡೆದು ಕೊಂಡಿದ್ದಾರೆ.

ಹೀಗೆ ರಂಗಭೂಮಿಯಲ್ಲಿ ಹೆಸರು ಮಾಡಿ ಬೆಳೆದ ನಂತರ ಒಮ್ಮೆ ಅಂದಿನ ಖ್ಯಾತ ನಿರ್ದೆಶಕರಾದಂತಹ ಎಸ್.ಎನ್ ಸಿಂಗ್(ಎಸ್.ನಾಗರಾಜ್ ಸಿಂಗ್) ರವರು ರಾಜಾನಂದರ ಹಾವಭಾವ, ಸಂಭಾಷಣಾ ಶೈಲಿಯನ್ನು ನೋಡಿ ೧೯೬೭ ರಲ್ಲಿ ಬಂದಂತಹ ‘ಧನಪಿಶಾಚಿ’ ಎಂಬ ಚಿತ್ರದಲ್ಲಿ ಅವಕಾಶ ಕೊಡುತ್ತಾರೆ. ಮೊದಲ ಚಿತ್ರದಲ್ಲಿಯೆ ರಾಜಾನಂದರು ದೀರ್ಘ ಕಾಲಾವಧಿಯ ಒಂದು ಸಂಭಾಷಣೆಯನ್ನು ಒಂದೇ ಟೇಕ್ ನಲ್ಲಿ ಹೇಳಿ ನಿರ್ದೇಶಕರ- ನಿರ್ಮಾಪಕರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಮೊದಲೆ ಹೇಳಿದಂತೆ ಎಷ್ಟೆ ಉದ್ದದ ಸಂಭಾಷಣೆಯನ್ನಾದರೂ ಒಂದೆ ಉಸಿರಿನಲ್ಲಿ ಹೇಳಿ ಭಾವನೆ ವ್ಯಕ್ತ ಪಡಿಸುವ ಅಪರೂಪದ ಕಲಾಪ್ರತಿಭೆ ರಾಜಾನಂದರಲ್ಲಿತ್ತು. ಅವರ ಚಿತ್ರಗಳನ್ನು ನೋಡಿದಾಗ ನಮಗೆ ತಿಳಿಯುತ್ತದೆ. ನಂತರ ದಿನಗಳಲ್ಲಿ ಅವರಿಗೆ ಅವಕಾಶಗಳು ಹುಡುಕಿ ಬಂದವು. ಐತಿಹಾಸಿಕ, ಪೌರಣಿಕ, ಸಾಮಾಜಿಕ ಎಲ್ಲಾ ಥರದ ಚಿತ್ರಗಳಲ್ಲೂ, ಎಲ್ಲಾ ಥರದ ಪಾತ್ರಗಳಲ್ಲೂ, ಎಲ್ಲಾ ಥರದ ನಾಯಕ ನಟರೊಂದಿಗೂ ನೂರಲ್ಲ, ಇನ್ನೂರಲ್ಲ, ಮೂನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಹೆಸರು ಮಾಡಿದರು. ಅಂದಿನ ಕಾಲದ ಎಲ್ಲಾ ತಾರೆಯರೊಂದಿಗೂ ತೆರೆ ಹಂಚಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ರವರೊಂದಿಗೆ ಒಳ್ಳೆಯ ಒಡನಾಟವಿತ್ತು. ಅವರೊಂದಿಗೆ ೩೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಯೂರ ಚಿತ್ರದ ‘ಶಿವಸ್ಕಂದ ವರ್ಮನ’ ಪಾತ್ರ ನಿಜಕ್ಕೂ ಅದ್ಭುತ. ವಿಷ್ಣುವರ್ಧನ್, ರಾಜಾನಂದ್ ಬಾಂಧವ್ಯದ ಜೋಡಿಯಂತೂ ಮರೆಯಲು ಸಾಧ್ಯವಿಲ್ಲಾ. ಗುರು ಶಿಷ್ಯರು ಚಿತ್ರದ ಪೂರ್ಣನಂದಯ್ಯ ಗುರುವಿನ ಪಾತ್ರದಿಂದ ಹಿಡಿದು ತಂದೆಯಾಗಿ, ಆಪ್ತಸಹಾಯಕನಾಗಿ, ಮನೆಯ ಕೆಲಸದವನಾಗಿ, ಜೊತೆಗಾರನಾಗಿ “ವಿಷ್ಣುದಾದ” ರೊಂದಿಗೆ ೪೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜಾನಂದರ ಕೈಯಿಗೆ ಬಲವಾಗಿ ಕಚ್ಚಿದ ಹಾವು
ಒಮ್ಮೆ ರಾಜಾನಂದರು ೧೯೮೨ ರಲ್ಲಿ ನಿರ್ದೆಶಕರಾದ ಹುಣಸೂರು ಕೃಷ್ಣಮೂರ್ತಿ ಯವರ “ಭಕ್ತ ಜ್ಞಾನದೇವ” ಚಿತ್ರದಲ್ಲಿ ನಟಿಸುವಾಗ ಸಾವನ್ನೆ ಗೆದ್ದು ಬಂದಿದ್ದರಂತೆ. ಆ ಚಿತ್ರದಲ್ಲಿ ಅವರು ಮಹಾಋಷಿ “ಚಾಂಗದೇವನ” ಪಾತ್ರ ಮಾಡಿದ್ದರು. ಅದರಲ್ಲಿ ಹುಲಿಯ ಮೇಲೆ ಕುಳಿತು ಕೈಯಲ್ಲಿ ಹಾವನ್ನು ಹಿಡಿದು ಜ್ಞಾನದೇವನ ಮೇಲೆ ಹಾವನ್ನು ಪ್ರಯೋಗ ಮಾಡುವ ದೃಶ್ಯವೊಂದಿದೆ. ಆವತ್ತು ಹಾವಾಡಿಗನೊಬ್ಬ ಚಿತ್ರೀಕರಣಕ್ಕೆಂದು ತಂದ ಹಲ್ಲುಕಿತ್ತ ಹಾವು ದುರಾದೃಷ್ಟವೆಂಬಂತೆ ತಪ್ಪಿಸಿಕೊಂಡಿತಂತೆ. ನಂತರ ಬೇರೆ ಹಾವಿನ ತಯಾರಿಲ್ಲಿದ್ದಾಗ ಅಲ್ಲಿಯೆ ಹತ್ತಿರದಲ್ಲಿದ್ದ ಹುತ್ತದಿಂದ ಹಾವಾಡಿಗನು ಹೇಗೊ ಅವನ ಚಾಣಾಕ್ಷ ಬುದ್ಧಿಯಿಂದ ನಿಜವಾದ ವಿಷದ ಹಾವನ್ನು ಹೊರ ತಂದು ಅದಕ್ಕೆ ಮಂಕು ಬರುವಂತೆ ಮಾಡಿ ರಾಜಾನಂದರ ಕೈಯಲ್ಲಿ ಕೊಟ್ಟನಂತೆ. ಆಮೇಲೆ ಚಿತ್ರೀಕರಣ ಪ್ರಾರಂಭಿಸಿದಾಗ ಹಾವನ್ನು ಕೈಯಲ್ಲಿ ಹಿಡಿದು ಹುಲಿಯ ಮೇಲೆ ಕುಳಿತು ಸಂಭಾಷಣೆ ಮುಗಿಸಿ ಹಾವನ್ನು ಜ್ಞಾನದೇವನ ಮೇಲೆ ಪ್ರಯೋಗ ಮಾಡುವಾಗ ಆ ಹಾವು ಎಚ್ಚರವಾಗಿ ರಾಜಾನಂದರ ಕೈಯಿಗೆ ಬಲವಾಗಿ ಕಚ್ಚಿತಂತೆ, ಆಗ ಅವರು ಎಚ್ಚರ ತಪ್ಪಿ ಕುಳಿತ ಹುಲಿಯ ಮೇಲೆ ಬಿದ್ದಾಗ ಹುಲಿಯು ರೋಷದಿಂದ ಅವರನ್ನು ಕೆಳಗೆ ಬಿಳಿಸಿ ಅವರ ಮೇಲೆ ಆಕ್ರಮಣ ಮಾಡಿ ಮೈಯೆಲ್ಲಾ ಗಾಯ ಮಾಡಿತಂತೆ. ನಂತರ ಮೂರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಾರಾಗಿದ್ದರಂತೆ. ಅದು ಕೂಡ ಆವತ್ತು ಆ ಚಿತ್ರದ ಕೊನೆಯ ದೃಶ್ಯದ ಚಿತ್ರೀಕರಣವಾಗಿತ್ತು. ಆವತ್ತೆ ಆ ಘಟನೆ ನಡೆದಿದ್ದು ಕೂಡ ವಿಪರ್ಯಾಸವೆ. ಕೊನೆಗೆ ಚೇತರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ. ಒಮ್ಮೊಮ್ಮೆ ಕಲಾವಿದರ ಜೀವನ ಪರದೆ ಮೇಲೆ ನಾವು ನೋಡಿದಷ್ಟು ಸುಲಭವಂತೂ ಅಲ್ಲಾ ಎನ್ನುವುದು ಅರಿವಾಗುತ್ತದೆ.

ಸಂದ ಪ್ರಶಸ್ತಿಗಳು
ಇವರ ಕಲಾ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ರಂಗನಾಯಕಿ ಚಿತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ,ಹಾಗೂ ೨೦೦೧ – ೦೨ ರಲ್ಲಿ ಚಿತ್ರರಂಗದ ಜೀವಮಾನದ ಸಾಧನೆಗಾಗಿ ಡಾ.ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬರವಣಿಗೆಯಲ್ಲಿ ಎತ್ತಿದ ಕೈ
ರಾಜಾನಂದರು ಬರಿ ನಟನೆಯಷ್ಟೆ ಅಲ್ಲಾ ಬರವಣಿಗೆಯಲ್ಲೂ ಅಪಾರ ಜ್ಞಾನ ಹೊಂದಿದ್ದರು. ಸಕಲ ಕಲಾವಲ್ಲಭರಾಗಿದ್ದರು. ಒಂದು ಸಾವಿರಕ್ಕೂ ಅಧಿಕ ವಚನಗಳು. ಮೂರು ಸಾವಿರಕ್ಕೂ ಅಧಿಕ ಕವನಗಳು. ಪದ್ಯಗಳು. ಪುಸ್ತಕಗಳನ್ನು ಬರೆದಿದ್ದಾರೆ. ಪುಟ್ಟಣ ಕಣಗಾಲ್ ರವರಿಗೆ ಒಳ್ಳೇಯ ಸ್ನೇಹಿತರಾಗಿದ್ದರು. ಎಷ್ಟೊ ಬಾರಿ ಪುಟ್ಟಣನರವರು ತಮ್ಮ ಚಿತ್ರದ ಸಂಭಾಷಣೆಗಳಲ್ಲಿ ತಪ್ಪುಗಳಿದ್ದರೆ ಅದನ್ನು ತಿದ್ದಿ ಸರಿಪಡಿಸಲು ರಾಜಾನಂದರ ಹತ್ತಿರವೆ ಕೊಡುತ್ತಿದ್ದರಂತೆ. ಸಂದರ್ಶನವೊಂದರಲ್ಲಿ ರಾಜಾನಂದರ ಮಡದಿ ವಿಮಲಮ್ಮಾನವರು ಹೇಳುತ್ತಿದ್ದರು.

ಜೀವನದ ಕೊನೆಯ ದಿನಗಳು
ಹೀಗೆ ರಾಜಾನಂದರು ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕಲಾ ಸೇವೆ ಮಾಡಿದ್ದಾರೆ. ತನ್ನ ಕೊನೆಯ ದಿನಗಳಲ್ಲೂ ಸಹ ನಟನೆ ಮಾಡುತ್ತಿದ್ದರು. ಆದರೆ ರಾಜಾನಂದರ ಕೊನೆಯ ಕ್ಷಣಗಳನ್ನು ಕೇಳಿದಾಗ ತುಂಬಾ ಬೇಸರವಾಗುತ್ತದೆ.

ರಾಜಾನಂದರಿಗೆ ಒಟ್ಟೂ ೩ ಜನ ಮಕ್ಕಳಿದ್ದರು. ೨ ಹೆಣ್ಣು, ೧ ಗಂಡು. ಮೊದಲನೆ ಮಗಳಿಗೆ ಮದುವೆ ಮಾಡಿ ಒಂದು ಗಂಡು ಮಗುವಾಗುತ್ತದೆ. ಆದರೆ ಮಗಳ ಗಂಡ ಕುಡಿತಕ್ಕೆ ದಾಸನಾಗಿ ಮನೆಯನ್ನು ಮಾರಿ ಕೊನೆಗೆ ಕರಳು ಬೇನೆಯಿಂದ ಮರಣವನ್ನಪ್ಪುತ್ತಾರೆ. ಇದು ರಾಜಾನಂದರಿಗೆ ದೊಡ್ಡ ಆಘಾತವಾಗುತ್ತದೆ. ನಂತರ ಗಂಡ ಸತ್ತ ಒಂದು ವರ್ಷದಲ್ಲಿ ಮಗಳು ಕೂಡ ಅನಾರೋಗ್ಯದಿಂದ ಆಸ್ಪತ್ರೆಯಲ್ಲೆ ಸಾವನ್ನಪ್ಪುತ್ತಾರೆ. ಮೊಮ್ಮಗನನ್ನು ಇವರೇ ನೋಡಿಕೊಳ್ಳುತ್ತಾರೆ.

ಆದರೆ ಅದೇ ಸಮಯಕ್ಕೆ ರಾಜಾನಂದರಿಗೆ ದುರಾದೃಷ್ಟವೆಂಬಂತೆ ಶುಗರ್ ಖಾಯಿಲೆ ಹೆಚ್ಚಾಗಿ ಗ್ಯಾಂಗ್ರೀನ್ ಆಗುತ್ತದೆ. ಸ್ವಲ್ಪದಿನದಲ್ಲಿ ಕಣ್ಣು ಕಾಣದಾಗುತ್ತದೆ. ಉಳಿದ ಇಬ್ಬರು ಮಕ್ಕಳಲ್ಲಿ ಇದ್ದ ಒಬ್ಬ ಗಂಡು ಮಗ ಕೂಡ ಅವರನ್ನು ಬಿಟ್ಟು ಹೆಂಡತಿ ಜೊತೆ ಹೋಗುತ್ತಾನೆ. ಇದ್ದ ಒಬ್ಬಳೆ ಮಗಳು ಇವರನ್ನು ನೋಡಿಕೊಳ್ಳುತ್ತಾಳೆ. ಆರ್ಥಿಕವಾಗಿ ತುಂಬಾ ನಷ್ಟವನ್ನು ಅನುಭವಿಸುತ್ತಾರೆ. ಕೊನೆಗೆ ೨೬ ಆಗಸ್ಟ್ ೨೦೦೪ ರಂದು ರಾಜಾನಂದರು ಇಹಲೋಕ ತ್ಯಜಿಸುತ್ತಾರೆ. ಮನೆ ಬಿಟ್ಟು ಹೆಂಡತಿ ಜೊತೆಗೆ ಹೋದ ಇದ್ದ ಒಬ್ಬ ಮಗನು ಸಹ ಸ್ವಲ್ಪ ದಿನದಲ್ಲಿ ಸಾವನ್ನಪ್ಪುತ್ತಾನೆ.

ಇವಾಗ ರಾಜಾನಂದರ ಮಡದಿ ವಿಮಲಮ್ಮಾನವರು ಮಗಳು ಹಾಗೂ ಮೊಮ್ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. ರಾಜಾನಂದರು ತಮ್ಮ ಕೊನೆಯ ಕ್ಷಣದಲ್ಲಿ ವಿಮಲಮ್ಮಾನವರಿಗೆ ಹೇಳಿದ್ದರಂತೆ ನನ್ನ ಬರಹಗಳೆಲ್ಲಾ ಹಾಗೆ ಇದೆ. ನನ್ನ ಕಾಲವಾದ ಮೇಲೆ ಅದನ್ನು ಜನರಿಗೆ ತಲುಪಿಸುವ ಜವಬ್ದಾರಿ ನಿನ್ನದೆಂದು ಹೇಳಿದರಂತೆ. ಇವಾಗ ಸಂಘ ಸಂಸ್ಥೆಗಳ ನೆರವಿನಿಂದ ಅವರ ಕವನಗಳನ್ನು, ಬರಹಗಳನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ ವಿಮಲಮ್ಮನವರು. ಮಾರಾಟ ಮಾಡಲು ಸರ್ಕಾರವು ಸಹಾಯ ಮಾಡುತ್ತಿದೆ ಎಂಬುದನ್ನು ಓದಿದ್ದೇನೆ ಅಷ್ಟೆ. ರಾಜಾನಂದರು ಅಂದು ತಮ್ಮ ಕೊನೆಯ ದಿನಗಳಲ್ಲಿ ತನಗಾಗಿ ಅಲ್ಲದಿದ್ದರೂ ತನ್ನ ಕುಟುಂಬಕ್ಕಾಗಿ ಒಂದು ಮನೆಯನ್ನು ನೀಡಲು ಸರ್ಕಾರಕ್ಕೆ ಎಷ್ಟು ಮನವಿ ಮಾಡಿದರೂ ಸರ್ಕಾರ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲವಂತೆ. ಕೇಳಿದಾಗ ಬೇಸರವಾಗುತ್ತದೆ.

ರಾಜಾನಂದರ ಕುಟುಂಬ ಯಾಕೆ ಹೀಗಾಯ್ತು?
ವಿಮಲಮ್ಮಾನವರು ಜ್ಯೋತಿಷ್ಯ ರಲ್ಲಿ ಕೇಳಿದಾಗ ಒಬ್ಬರು ಹೇಳುತ್ತಾರೆ. ಸ್ತ್ರೀ ದೋಷವಿತ್ತು. ರಾಜಾನಂದರ ತಂದೆಯವರ ಮೊದಲನೆ ಮಡದಿಯವರ ಕಣ್ಣೀರಿನ ಶಾಪವಿತ್ತು ಎನ್ನುತ್ತಾರೆ. ಇನ್ನೊಬ್ಬರು ಹೇಳುತ್ತಾರೆ “ಭಕ್ತ ಜ್ಞಾನದೇವ” ಚಿತ್ರದಲ್ಲಿ ರಾಜಾನಂದರು “ಚಾಂಗದೇವನ” ಪಾತ್ರ ಮಾಡುವಾಗ ಧಾರ್ಮಿಕ ನಿಯಮಗಳನ್ನು ಪಾಲಿಸಲಿಲ್ಲ ಅದೇ ದೋಷವೆಂದು ಹೇಳುತ್ತಾರೆ. ಮತ್ತೊಬ್ಬರು ಹೇಳುತ್ತಾರೆ ತಂದೆಯವರ ಮರಣಾನಂತರ ರಾಜಾನಂದರು ಅವರ ವಿಧಿಕಾರ್ಯಕ್ಕೆ ಹೋಗದಿರುವುದೆ ಕಾರಣ ಎಂದು. ಒಟ್ಟಾರೆ ಒಬ್ಬ ಕಲಾವಿದನ ಕುಟುಂಬ ಜೀವನ ಕೊನೆಯಲ್ಲಿ ದುರಂತವಾಗಿದ್ದು ಮಾತ್ರ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡುತ್ತದೆ.

ಏನೇ ಆದರೂ, ರಾಜಾನಂದರ ಕಲಾಸೇವೆಗಾದರೂ ಆ ಭಗವಂತ ಮೆಚ್ಚಿ ಅವರ ಕುಟುಂಬಕ್ಕೆ ಒಳ್ಳೇಯದು ಮಾಡಲಿ. ಅವರ ಮುಂದಿನ ಜೀವನ ಸುಖವಾಗಿರಲಿ ಎನ್ನುವುದೇ ನಮ್ಮೆಲ್ಲರ ಕೋರಿಕೆ.


  • ನಾಗರಾಜ್ ಲೇಖನ್ (ಹರಡಸೆ, ಹೊನ್ನಾವರ)amma
0 0 votes
Article Rating

Leave a Reply

1 Comment
Inline Feedbacks
View all comments
Udham Singh

Please write in hindi or english we are from punjab our languaga is punjabi
Cant understand your conversation
Thanks, धन्यवाद|

Home
News
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW