ಕಾಳೀ ಕಣಿವೆಯ ಕತೆಗಳು ಭಾಗ – ೧೦

‘ಕೊಕ್‌ ಕೊಕ್‌ ಕುಕ್ಕೂ…’ ಎಂದು ನಾನೇ ವಿಚಿತ್ರವಾಗಿ ಕೂಗುತ್ತ ಕೋಳಿಗಳನ್ನು ಹಿಡಿಯಲು ಹೋದೆ. ಅವುಗಳಿಗೆ ತುಂಬ ತರಬೇತಿಯಾಗಿತ್ತೇನೋ. ಗೊಣಗುತ್ತ ತಲೆಯೆತ್ತಿ ‘ರಿಕಾರ್ಡ ರೂಮ’ನ ಫ್ಯಾನು ಕಡೆ ನೋಡಿದೆ. ಬಾಯಿಂದ ದನಿಯೇ ಹೊರಡಲಿಲ್ಲ. ಮಲಯಾಳೀ ‘ಲಕ್ಕೀ ಹೊಟೆಲ್ಲಿ’ ನಲ್ಲಿ ತಿಂದ ಪರೋಟಗಳು ಹೊರಗೆ ಬರುವುದೊಂದೇ ಬಾಕಿ. ಗಾಬರಿಯಿಂದ ಚೀರುವುದೊಂದೇ ಬಾಕಿಯಿತ್ತು.

ಇಲ್ಲಿಯವರೆಗೆ – ನಾಯಕ ಸಾಹೇಬರು ನನ್ನನ್ನು ಅರಣ್ಯದಿಂದ ಜೀಪಿನಲ್ಲಿ ಹತ್ತಿಸಿಕೊಂಡು, ಸೂಪಾಕ್ಕೆ ಕರೆತಂದು ಬಿಟ್ಟರು. ಮತ್ತು ನನಗೆ ಅಲ್ಲಿಯ ಸಬ್‌ ಡಿವಿಜನ್‌ ಆಫೀಸಿನಲ್ಲಿ ಮೂರು ದಿನದ ಮಟ್ಟಿಗೆ ಮಲಗಬಹುದೆಂದು ಹೇಳಿ ನಡು ರಸ್ತೆಯಲ್ಲಿಯೇ ಬಿಟ್ಟು ಹೋದರು. ಅಲ್ಲಿ ಆಫೀಸಿನ ಹೆಡ್‌ ಕ್ಲರ್ಕು ಭೈರಾಚಾರಿ ನನ್ನನ್ನು ಒಳಗೆ ಬಿಟ್ಟುಕೊಂಡು ಆ ಕಚೇರಿಯ ಪ್ರವರ ಹೇಳಿದರು. ಆಲ್ಲಿಯ ಸಹಾಯಕ ಎಕ್ಸಿಕ್ಯೂಟಿವ್‌ ಇಂಜನೀಯರ್‌ ಶ್ರೀನರಸಿಂಹಯ್ಯನವರು ಬೆಂಗಳೂರಿಗೆ ಹೋಗಿದ್ದರಿಂದ ನೀವು ಇಲ್ಲಿ ಮೂರು ದಿನದ ಮಟ್ಟಿಗೆ ತಂಗಬಹುದು ಅಷ್ಟೇ ಅಂದರು. ಆದರೆ ಅಲ್ಲಿ ಫೈಲುಗಳನ್ನಿಡುವ ರಿಕಾರ್ಡು ರೂಮಿನಲ್ಲಿ ಹತ್ತಾರು ಕೋಳಿಗಳಿದ್ದು ಗದ್ದಲ ಹಾಕುತ್ತಿದ್ದವು. ಭೈರಾಚಾರಿ ಅದಕ್ಕೂ ಒಂದು
ಕತೆ ಹೇಳಿದರು. ಅಂದು ರಾತ್ರಿ ಮಲಯಾಳೀ ಲಕ್ಕೀ ಹೋಟೆಲ್ಲಿಗೆ ಹೋಗಿ ಎರಡು ಪರೋಟ ಮತ್ತು ಸೇರವಾ, ಗೆಣಸು ಪಲ್ಯ ತಿಂದು ಬಂದೆ. ಬ್ರಿಟಿಷ ಕಾಲದ ಆ ದೊಡ್ಡ ಬಂಗಲೆಯಲ್ಲಿ ನಾನೊಬ್ಬನೇ ಮಲಗುವಂತಾಯಿತು. – ಮುಂದೆ ಓದಿರಿ…

3a

ಫೋಟೋ ಕೃಪೆ : The Zoo Review

ಬ್ರಿಟೀಷರ ಕಾಲದ ದೊಡ್ಡ ಬಂಗ್ಲೆಯಲ್ಲಿ ಆ ರಾತ್ರಿ…
ಊಟ ಮಾಡಿ ಲಕ್ಕೀ ಹೋಟೆಲ್ಲಿನಿಂದ ವಾಪಸಾದ ನಾನು ಕಚೇರಿ ಬೀಗ ತಗೆದು ಒಳಗೆ ಕಾಲಿಟ್ಟೆ. ಕಚೇರಿ ಕಾಯಲು ಇಲ್ಲಿ ಯಾವ ವಾಚಮನ್‌ಗಳೂ ಇಲ್ಲ. ರಾತ್ರಿ ಹೊತ್ತು ಶ್ರೀ ಎ.ಇ.ಇ. ನರಸಿಂಹಯ್ಯ ಸಾಹೇಬರೊಬ್ಬರೇ ಮಲಗುತ್ತಾರಂತೆ. ಒಮ್ಮೊಮ್ಮೆ ಅವರು ಬಾ ಅಂದರೆ ಅಡುಗೆ ಕೆಲಸದ ಕಮಲಾಕರ ಮೂರ್ತಿಯೋ ಇಲ್ಲ, ಲಾರೀ ಚಾಲಕ ಪೈಮಾಮನೋ ಬಂದು ಮಲಗಿ ಹೋಗುತ್ತಾರಂತೆ. ಇಂದು ಚಾಲಕ ಪೈಮಾಮ, ಲಾರಿ ತಗೆದುಕೊಂಡು ಲೋಂಡಾ ಸ್ಟೇಶನ್ನಿಗೆ ಹೋಗಿದ್ದಾನಂತೆ. ಅಲ್ಲಿ ರೈಲಿನಿಂದ ಆಫೀಸೀನ ಯಾವುದೋ ಗೂಡ್ಸ ಪಾರ್ಸಲ್‌ ಬಂದಿದೆಯಂತೆ. ಅದನ್ನು ತರಲು ಹೋಗಿದ್ದಾನೆ. ರಾತ್ರಿ ಬರುತ್ತಾನೆ. ಯಾವಾಗ ಬಂದ್ರೂ ಲಾರಿ ಇಲ್ಲಿ ನಿಲ್ಲಿಸಿ ತನ್ನ ಮನೆಗೆ ಹೋಗುತ್ತಾನೆ. ಇಲ್ಲ ಬೆಳಿಗ್ಗೇನೂ ಬರಬಹುದು ಎಂದು ಭೈರಾಚಾರಿ ಹೇಳಿದ್ದರು. ಕಚೇರಿಯ ಬಾಗಿಲು ಬೀಗ ತಗೆಯುತ್ತಲೂ ಕೋಳಿಗಳ ದಂಡು ಬೊಬ್ಬೆ ಹೊಡೆಯುವುದು ಕೇಳಿತು. ಆಗಲೇ ರಾತ್ರಿ ಒಂಭತ್ತೂವರೆ ಗಂಟೆ. ಇಡೀ ಸೂಪಾ ಊರು ಸ್ತಬ್ಧವಾಗಿತ್ತು. ಇಡೀ ದಿನ ಕ್ಯಾಸಲ್‌ರಾಕ್‌, ಸರ್ವೇ ಕ್ಯಾಂಪು, ಕಾಡಿನ ದಾರಿಯ ಪಯಣ ಇತ್ಯಾದಿಗಳಿಂದ ನನಗೂ ಸುಸ್ತಾಗಿತ್ತು. ಮಲಗೋಣವೆಂದರೆ ಕೋಳಿಗಳ ರಗಳೆ. ಅವು ಸ್ಟೋರು ರೂಮಿನ ಒಳಗೆ ಒಂದೇ ಸಮನೆ ‘ಹ್ಹೋ…’ ಅನ್ನುತ್ತಿದ್ದವು. ಕಾಳೋ, ನೀರೋ ಹಾಕಿದರೆ ಸುಮ್ಮನಾಗಬಹುದೆಂದು ಮೆಲ್ಲಗೆ ಹೋಗಿ ಹಾಕಿದ್ದ ಚಿಲಕ ತಗೆದೆ. ಹೆದರಿದ ಕೋಳಿಗಳು ಚೀರಾಡುತ್ತಿದ್ದವು. ಅವುಗಳ ಜೊತೆಗೆ ನಾನೂ ಗಾಬರಿಬಿದ್ದೆ.

3
ಫೋಟೋ ಕೃಪೆ : Pixabay

ಹ್ಹೋ…! ಎಂದು ಬೊಬ್ಬೆ ಹಾಕಿದ್ದೇಕೆ ಕೋಳಿಗಳು
ಇಡೀ ಕೋಳಿಗಳ ದಂಡು ಪಟ ಪಟ ರೆಕ್ಕೆ ಬಡಿಯುತ್ತ ನನ್ನ ಮುಖಕ್ಕೇ ಹಾರಿ ಬಂತು. ಕೆಲವು ತಕ್ಷಣ ರೂಮಿನಿಂದ ಹೊರಬಿದ್ದು ನನ್ನ ಕಾಲು ಬುಡದಲ್ಲೇ ನುಗ್ಗಿ ಹೊರಗೋಡಿದವು. ಇನ್ನು ಕೆಲವು ಫೈಲು ಇಟ್ಟ ಕಪಾಟಿನ ಮೇಲೆ ಪುರ್‌ಎಂದು ಹಾರಿ ಕೂತವು. ನಾನು ಹೊಸಬನೆಂದು ಗಾಬರಿ ಬಿದ್ದಿವೆ ಅಂದುಕೊಂಡೆ. ಕಾಲಿನ ಕೆಳಗೆ ನೆಲದ ತುಂಬ ಹರಡಿದ ಬತ್ತದ ಕಾಳುಗಳು ಅಂಗಾಲಿಗೆ ಅಂಟಿಕೊಂಡವು. ಭೈರಾಚಾರಿ ಯಾವಾಗಲೋ ಕೋಳಿಗಳಿಗೆ ಎಂದು ಇಟ್ಟಿದ್ದ ಕಾಳಿನ ಬುಟ್ಟಿ ಉರುಳಿ ಬಿದ್ದಿತ್ತು. ಅಷ್ಟೇ ಅಲ್ಲ. ಅವು ಕುಡಿಯಲು ಇಟ್ಟಿದ್ದ ನೀರಿನ ಪುಟ್ಟ ಬಕೆಟ್ಟೂ ಬೋರಲು ಬಿದ್ದು ನೆಲವೆಲ್ಲ ನೀರೋ ನೀರು. ಸರಕಾರಿ ಕಚೇರಿಗಳು ಹೀಗೂ ಇರುತ್ತವಲ್ಲ ಎಂದು ನನಗೆ ನಾನೇ ನಕ್ಕೆ. ಏನು ಎತ್ತ ಎಂದು ಸರಿಯಾಗಿಯೂ ತಿಳಿಯದೆ ಗಾಬರಿಯೂ ಆಯಿತೆನ್ನಿ. ಹೊರಗೆ ಓಡಿದ ಕೋಳಿಗಳನ್ನು ಹಿಡಿದು ಮತ್ತೆ ಕೋಣೆಯೊಳಗೆ ತುರುಕಲು ನೋಡಿದೆ. ಇಲ್ಲದಿದ್ದರೆ ಅಲ್ಲಿಯೇ ಇದ್ದ ಸಾಹೇಬರು ಕೂಡುತ್ತಿದ್ದ ಖುರ್ಚಿ, ಟೇಬಲ್ಲು, ಕಚೇರಿ ಫೈಲುಗಳ ಮೇಲೆ ಕೋಳಿಗಳು ಕಕ್ಕ ಮಾಡದೆ ಬಿಡುತ್ತಿರಲಿಲ್ಲ. ಅದೂ ಒಂದು ಆತಂಕವೆ.

ಕೈಗೆ ಸಿಗದ ಕೋಳಿಗಳು
‘ಕೊಕ್‌ ಕೊಕ್‌ ಕುಕ್ಕೂ…’ ಎಂದು ನಾನೇ ವಿಚಿತ್ರ ವಾಗಿ ಕೂಗುತ್ತ ಕೋಳಿಗಳನ್ನು ಹಿಡಿಯಲು ಹೋದೆ. ಅವುಗಳಿಗೆ ತುಂಬ ತರಬೇತಿಯಾಗಿತ್ತೇನೋ. ಕಚೇರಿ ತುಂಬ ಓಡಾಡಿದವು. ಭೈರಾಚಾರಿ ಟೇಬಲ್ಲು, ರಾಮಚಂದ್ರರಾವ್‌ ಎ.ಇ. ಅನ್ನುವ ಹೆಸರಿನ ಟೇಬಲ್ಲು, ಫೈಲು ಕಪಾಟುಗಳನ್ನೆಲ್ಲ ಸುತ್ತು ಹೊಡೆಸಿದವು. ನಾನೇ ಇನ್ನೊಮ್ಮೆ ನೀರು ಕುಡಿಯುವಂತಾಯಿತು. ಕೆಲವು ಅಲ್ಲಲ್ಲಿ ‘ಕಕ್ಕ’ವನ್ನೂ ಮಾಡಿಬಿಟ್ಟವು. ಏನಪ್ಪ ಮಾಡೋದು ಎಂದು ಗೊಣಗುತ್ತ ತಲೆಯೆತ್ತಿ ‘ರಿಕಾರ್ಡ ರೂಮ’ನ ಫ್ಯಾನು ಕಡೆ ನೋಡಿದೆ. ಬಾಯಿಂದ ದನಿಯೇ ಹೊರಡಲಿಲ್ಲ. ಮಲಯಾಳೀ ‘ಲಕ್ಕೀ ಹೋಟೆಲ್ ’ ನಲ್ಲಿ ತಿಂದ ಪರೋಟಗಳು ಹೊರಗೆ ಬರುವುದೊಂದೇ ಬಾಕಿ.

ನುಗ್ಗಿ ಬಂದಿತ್ತು ಎರಡು ಮಾರುದ್ದದ ಹೆಬ್ಬಾವು
ಗಾಬರಿಯಿಂದ ಚೀರುವುದೊಂದೇ ಬಾಕಿಯಿತ್ತು. ಅದು ಬ್ರಿಟಿಷ್‌ ಕಾಲದ ಹಳೆಯ ಫ್ಯಾನು. ಹಂಚಿನ ಮಾಡಿನ ಕೆಳಗೆ ನಾಲ್ಕಡಿ ಉದ್ದವಿತ್ತು. ಫ್ಯಾನಿನ ರಾಡನ್ನು ಸುತ್ತಿಕೊಂಡ ಎರಡು ಮಾರುದ್ದದ ಹೆಬ್ಬಾವೊಂದು ಆಕಡೆ-ಈಕಡೆ ತಲೆಯಾಡಿಸುತ್ತ ನನ್ನನ್ನು ನೋಡಿತು. ತಕ್ಷಣ ಹಾರಿದವನೇ ಬಾಗಿಲ ಹೊರಗೆ ನಿಂತು ಗಡಗಡ ನಡುಗಿದೆ. ಈ ರಾತ್ರಿಯ ಹೊತ್ತು ಯಾರು ಬರುತ್ತಾರೆ ಇಲ್ಲಿ. ಕೂಗಿದರೂ ಹೊರಗೆ ಕೇಳಿಸದಂಥ ತೇಗು ಕಟ್ಟಿಗೆಯ ದೊಡ್ಡ ಬಂಗ್ಲೆ ಅದು. ಹೋಗಿ ಕರೆಯೋಣವೆಂದರೆ ಭೈರಾಚಾರಿಯವರ ಮನೆ ಎಲ್ಲಿದೆಯೋ ಗೊತ್ತಿಲ್ಲ. ಈ ರಾತ್ರಿ ಹೊತ್ತು ಅದನ್ನು ಹುಡುಕುವುದಾದರೂ ಹೇಗೆ? ಇವತ್ತು ತಾನೇ ನಾನು ಈ ಊರಿಗೆ ಬಂದವ. ಯಾರನ್ನು ಸಹಾಯಕ್ಕೆ ಕರೆಯುವುದು?

3
ಫೋಟೋ ಕೃಪೆ : You Tube

ಹೆಬ್ಬಾವಿನ ಬಾಯಲ್ಲಿ ಬಲಿತ ಕೋಳಿ
ಅಬ್ಬಾ..! ಹೆಬ್ಬಾವು ಆಗಲೇ ತುಸು ಬಲಿತ ಕೋಳಿಯೊಂದನ್ನು ಬಾಯಲ್ಲಿ ಕಚ್ಚಿ ಹಿಡಿದು ಅರ್ಧ ನುಂಗಿತ್ತು. ಅದು ಹೊಟ್ಟೆ ಸೇರಿದ ಮೇಲೆ ಇನ್ನೊಂದು ಕೋಳಿಗೆ ಬಾಯಿ ಹಾಕುತ್ತಿತ್ತೇನೋ. ಅದಕ್ಕೇ ಕೋಳಿಗಳ ಈ ರಂಪಾಟ. ತಕ್ಷಣ ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ತುಸು ಹೊತ್ತು ದಂಗು ಬಡಿದು ಹಾಗೇ ನಿಂತು ಬಿಟ್ಟೆ. ಈ ಹಾವನ್ನು ಇಲ್ಲಿಂದ ಹೇಗೆ ಓಡಿಸುವುದು? ಆದರೆ ನನ್ನ ಕಾಡಿನ ಅನುಭವ ನನ್ನ ಕೈ ಬಿಡಲಿಲ್ಲ. ತಲೆ ಓಡಿತು. ಮೊದಲು ಇಳಿದು ಹೋದ ಧೈರ್ಯವನ್ನು ಗಟ್ಟಿ ಮಾಡಿಕೊಂಡೆ. ಸುತ್ತ ನೋಡಿದೆ. ಅಲ್ಲೊಂದು ಡೀಜೈಲ್‌ ಡಬ್ಬ ಕಂಡಿತು. ಹಾಗೇ ತುಸು ದೂರದಲ್ಲಿ ಕಾಟನ್‌ ವೇಸ್ಟ ಇಟ್ಟಿರುವುದು ಇರುವುದು ಗಮನಕ್ಕೆ ಬಂತು. ಮೊದಲೇ ಅದು ಮೆಕ್ಯಾನಿಕ್‌ ಇಂಜನಿಯರರ ಕಚೇರಿ. ಈಗ ನಾನು ಗೆದ್ದೆ ಅಂದುಕೊಂಡೆ. ಓಡಿ ಹೋಗಿ ಕಾಟನ್‌ ವೇಸ್ಟನ್ನು ಒಂದು ಕೋಲಿಗೆ ಸುತ್ತಿಕೊಂಡು ಅದರ ಮೇಲೆ ಡೀಜೈಲ್‌ ಸುರುವಿ ಅದನ್ನು ದೀವಟಿಗೆಯಂತೆ ಮಾಡಿಕೊಂಡೆ. ಬೆಂಕಿ ಪೊಟ್ಟಣ-ಮೊಂಬತ್ತಿ ನನ್ನ ಟ್ರಂಕಿನಲ್ಲೇ ಇತ್ತು. ತಡಮಾಡದೆ ಅದಕ್ಕೆ ಬೆಂಕಿ ಹಚ್ಚಿದೆ. ಡೀಜೈಲ್‌ ದೀಪ ಅದ್ದೂರಿಯಿಂದೇನೂ ಉರಿಯುದಿಲ್ಲ.

ಹೆಬ್ಬಾವಿನ ಮೇಲೆ ನನ್ನ ಹಿಕಮತ್ತು
ಕಾಡಿನಲ್ಲಿ ಇಂಥ ಅದೆಷ್ಟೋ ದೊಂದಿಗಳನ್ನು ಹಿಡಿದು ಓಡಾಡಿದ್ದೇನೆ. ಅದೇ ಧೈರ್ಯ ನನ್ನನ್ನು ಇಲ್ಲಿ ಮುನ್ನುಗ್ಗುವಂತೆ ಮಾಡಿತು. ಹಾಗೇ ಸ್ಟೋರು ರೂಮಿನ ಬಾಗಿಲ ಹತ್ತಿರ ಸರಿದು ಫ್ಯಾನಿಗೆ ನೇತು ಬಿದ್ದಿದ್ದ ಹೆಬ್ಬಾವಿನ ಬಳಿ ಹಿಡಿದು ಬಿಸಿ ಮುಟ್ಟಿಸಿದೆ. ಹೆಬ್ಬಾವಿನ ಬಾಯಲ್ಲಿ ಏನಾದರೂ ಇದ್ದಾಗ ಅದು ಹೆಚ್ಚು ಚುರುಕಾಗಿರುವುದಿಲ್ಲ. ಅದಕ್ಕೂ ಗಾಬರಿಯಾಯಿತೇನೋ. ಹಾಗೇ ಹಿಂದಕ್ಕೆ ಸರಿಯತೊಡಗಿತು. ಬಾಯಲ್ಲಿ ಕಚ್ಚಿ ಹಿಡಿದಿದ್ದ ಕೋಳಿಯನ್ನು ಮಾತ್ರ ಬಿಡಲಿಲ್ಲ. ಕೋಳೀ ಮನೆ ಹಾಳಾಗ. ಹೆಬ್ಬಾವು ಹೋದರೆ ಸಾಕಿತ್ತು ನನಗೆ. ನನ್ನ ಕರಾಮತ್ತು ಫಲಿಸಿತು. ಬೆಂಕಿಗೆ ಹೆದರದವರಾರು. ಅದು ಹಿಂದಕ್ಕೆ… ಇನ್ನೂ ಹಿಂದಕ್ಕೆ ಸರಿಯತೊಡಗಿತು. ಅದು ಸರಿದಷ್ಟೂ ನನ್ನ ಧೈರ್ಯ ಹೆಚ್ಚಾಯಿತು.

3
ಫೋಟೋ ಕೃಪೆ : VedioHive

ಬೆಂಕಿಯನ್ನು ಇನ್ನಷ್ಟು ಮುಂದಕ್ಕೆ ಚಾಚುತ್ತ ಹೋದೆ. ಅಂಥ ದೊಡ್ಡ ಬಂಗಲೆಯಲ್ಲಿ ನಾನು ಮಾಡುತ್ತಿರುವ ಸಾಹಸ ನೋಡಲು ಅಲ್ಲಿ ಜನರಾರೂ ಇರಲಿಲ್ಲ. ಹೆಬ್ಬಾವು ಬಂದ ದಾರಿಯಲ್ಲಿ ಹಿಂದಕ್ಕೆ ಸರಿಯತೊಡಗಿದಾಗ ಇದನ್ನು ಇಷ್ಟಕ್ಕೇ ಬಿಡಬಾರದೆಂದು ನಾನು ಮತ್ತೂ ಮುಂದಕ್ಕೆ ಹೋದೆ. ಮನುಷ್ಯನ ಸ್ವಭಾವವೇ ಹಾಗೆ. ಸರಿದರೆ ಒತ್ತಪ್ಪ. ಒತ್ತಿದರೆ ಸರಿಯಪ್ಪ ತಾನೆ. ಈಗ ಅದಕ್ಕೇ ಭಯ ಸುರುವಾಗಿತ್ತು. ಕೋಳಿಯನ್ನು ಒಂದೇ ಏಟಿಗೆ ಗುಳುಂ ಮಾಡಿ ಬಂದ ದಾರಿಯಲ್ಲಿ ಸರಸರ ಸರಿಯತೋಡಗಿತು. ಹಾವನ್ನು ಕಂಡ ಕೋಳಿಗಳು ಕೊಕ್‌ ಕೊಕ್‌ ಅನ್ನುತ್ತ ಓಡಾಡುತ್ತಲೇ ಇದ್ದವು. ಅವುಗಳಿಗೆ ಒಂದು ಕಡೆಗೆ ಹಾವು, ಇನ್ನೊಂದು ಕಡೆಗೆ ನನ್ನ ಕೈಯಲ್ಲಿಯ ದೀವಟಿಗೆ ನೋಡಿ ಭಯವಾಗಿರಬೇಕು. ಅಂತೂ ಕೋಳಿಯನ್ನು ನುಂಗಿದ ಹೆಬ್ಬಾವು ಕೋಣೆಯ ಎತ್ತರದ ಕಿಟಕಿಯ ಸಂದಿನಿಂದ ಜಾಗ ಮಾಡಿಕೊಂಡು ನಿದ್ದೆ ಹೇಗೆ ಬರುತ್ತದೆ. ಕಣ್ಣ ಮುಂದೆ ಅದೇ ಹೆಬ್ಬವು, ಅದೇ ಕೋಳಿಗಳು. ಹೋದ ಹಾವು ಮತ್ತೆ ಬಂದರೇ..! ಎಂಬ ಹೆದರಿಕೆ. ಇನ್ನೊಂದೆಡೆ ನಾಳೆ ಹೇಗೋ ಅನ್ನುವ ಆತಂಕ. ಕಣ್ಣು ರೆಪ್ಪೆಗಳು ಮುಚ್ಚಿಕೊಳ್ಳಲಿಲ್ಲ. ಕಾಡಿನಲ್ಲಿದ್ದ ಸರ್ವೇ ತಂಡ ಕಣ್ಣು ಮುಂದೆ ಒಮ್ಮೆ ಸುಳಿದು ಹೋಯಿತು. ಹನುಮಂತ್ಯಾ ಹೇಳಿದ ಒಂದು ಮಾತು ಈಗ ನೆನಪಾಯಿತು.

ಸಾಹೇಬರ… ಸೂಪಾದಲ್ಲಿ ನೀವು ಅವಳ ಮನೆಗೆ ಮಾತ್ರ ಹೋಗಬೇಡಿ ಅಂದದ್ದು ಯಾಕೋ. ಏನೋ ಕಾರಣ ಇರಲೇಬೇಕು. ಯೋಚಿಸಿದೆ. ಆಗಾಗ ತಲೆಯ ಮೇಲಿನ ಫ್ಯಾನು, ಕಾಲಸಂದಿಯ ಕೆಳಗಿದ್ದ ಫೈಲು ಕಪಾಟುಗಳನ್ನು ಗಮನಿಸುತ್ತಲೇ ಇದ್ದೆ. ಆ ಒಂದು ಕ್ಷಣ ಹಾವಿನ ಭಯಕ್ಕೆ ಬಿದ್ದ ಪರೀಕ್ಷಿತ ಮಹಾರಾಜನ ಕತೆಯಾಗಿತ್ತು ನನ್ನದು.

97071578_1061252307608487_3798392995531718656_o

ಪರೋಟಾ, ಸೇರವಾ, ಗೆಣಸು ಪಲ್ಯ, ಒಂದು ಲೋಟ ಕುಚ್ಚಲಕ್ಕಿ ಅನ್ನದ ಗಂಜಿಯೇ ಗತಿ ಎಷ್ಟು ಹೊತ್ತಾದರೂ ನಿದ್ದೆ ಸುಳಿಯಲಿಲ್ಲ. ಹಾವಿನ ಭಯವೇ ಹಾಗೆ. ಇಂಥಲ್ಲಿ ಎ.ಇ.ಇ. ಶ್ರೀ ನರಸಿಂಹಯ್ಯ ಸಾಹೇಬರು ಹೇಗೆ ನಿದ್ದೆ ಮಾಡುತ್ತಾರೋ. ಜೊತೆಗೆ ಒಬ್ಬ ಕಾವಲುಗಾರನನ್ನಾದರೂ ಇಟ್ಟುಕೊಳ್ಳಬಾರದೆ ಅಂದುಕೊಂಡೆ. ಕೋಣೆಯಲ್ಲಿದ್ದ ಕೋಳಿಗಳು ಈಗ ಸದ್ದು ಮಾಡುತ್ತಿರಲಿಲ್ಲ. ಅವುಗಳಿಗೂ ನಿದ್ದೆ ಬಂದಿರಬೇಕು. ಮೆದುಳಿಲ್ಲದ ಪ್ರಾಣಿಗಳಿಗೆ ಎದುರು ಸಾವು ಬಂದು ನಿಂತರೂ ಅದು ಸಾವೆಂದು ಗೊತ್ತಾಗುವುದೇ ಇಲ್ಲ. ಹಾಗೆ ನೋಡಿದರೆ ಮನುಷ್ಯನಿಗೆ ಮೆದುಳೂ ಕೂಡ ಒಂದು ಶಾಪವೇ ಸರಿ. ನಾಳೆ ಹೈದರಾಬಾದನಿಂದ ಜಿಯಾಲಜಿ ಟೀಮು ಬರುತ್ತದೆ. ಅವರ ಬಳಿ ತನ್ನ ಕೆಲಸ ಏನಿರುತ್ತದೆಂದು ಗೊತ್ತಾಗುವುದು ನಾಳೆ ಅವರು ಬಂದ ಮೇಲೆಯೇ. ಅವರ ಊಟ ವಸತಿ ಬ್ರಿಟಿಷ ಬಂಗಲೆಯಲ್ಲಿ. ಆದರೆ ನನ್ನದು? ಕಾಡಿನ ಕ್ಯಾಂಪಿನಲ್ಲಿ ಅಡುಗೆ ಮಾಡಿ ಹಾಕಲು ಅಪ್ಪೂ ಕುಟ್ಟಿ ಇದ್ದ. ಆದರೆ ಇಲ್ಲಿ ಬರೀ ಮೀನದೂಟದ ಹೊಟೆಲ್ಲುಗಳು. ಅಲ್ಲಿ ಶಾಖಾಹಾರಿಗಳಿಗೆ ಹೊಂದುವ ಊಟ ಸಿಗುವುದಿಲ್ಲವಂತೆ. ಇರುವದರಲ್ಲಿ ಮಲಯಾಳೀ ಮೂಸಾನ ಹೊಟೆಲ್ಲೇ ಪರವಾಗಿಲ್ಲ ಎಂದು ಭೈರಾಚಾರಿ ಹೇಳಿದ್ದರು. ಪರೋಟಾ, ಸೇರವಾ, ಗೆಣಸು ಪಲ್ಯ. ಬೇಕಂದರೆ ಕುಚ್ಚಲಕ್ಕಿ ಅನ್ನದ ಗಂಜಿಯೂ ಅಲ್ಲಿ ಸಿಗುತ್ತದೆ. ಇಲ್ಲಿ ಹೆಚ್ಚು ಮಡಿವಂತಿಕೆ ಮಾಡಿದರೆ ಹೊಟ್ಟೆಗೆ ಮಣ್ಣು ಹಾಕಿಕೊಳ್ಳಬೇಕಷ್ಟೇ.

ನಡು ರಾತ್ರಿ ಲಾರಿಯಲ್ಲಿ ಬಂದಿಳಿದ ಕೂಲಿಗಾರರ ತಂಡ
ಮತ್ತೂ ಯೋಚನೆಯಾಗಿ ಮಲಗಿದಲ್ಲೇ ಹೊರಳಾಡಿದೆ. ಅಷ್ಟರಲ್ಲಿ ಬಂಗ್ಲೆಯ ಹೊರಗೆ ಅಂಗಳದಲ್ಲಿ ಲಾರಿಯೊಂದು ಬಂದು ನಿಂತ ಸದ್ದಾಯಿತು. ಮಲಗಿದವನು ದಿಗ್ಗನೆದ್ದು ಕೂತೆ. ಲಾರಿ ತಿರುಗಿಸುವಾಗ ಅದರ ಹೆಡ್‌ ಲೈಟು ಬಂಗ್ಲೆಯ ಒಳಗೂ ಬಿತ್ತು. ಮೆಲ್ಲನೆ ಎದ್ದು ಕಿಟಕಿಯ ಮರೆಯಲ್ಲಿ ನಿಂತು ಸಂದಿನಿಂದ ನೋಡಿದೆ. ಹೌದು. ಅದು ಫೋರ್ಡ ಎಂಜಿನ್ನಿನ ಹಳೆಯ ಲಾರಿ. ಆಗ ಸರಕಾರದವರು ಖರೀದಿ ಮಾಡುತ್ತಿದ್ದ ಲಾರಿಗಳೆಲ್ಲ ಫೋರ್ಡ ಕಂಪನಿಯವೇ ಆಗಿರುತ್ತಿದ್ದವು. ಇರುವ ಜೀಪುಗಳೆಲ್ಲ ಫೋರು ವೀಲ್‌ ಡ್ರೈವ್‌ನವು. ಲಾರಿಯ ಚಾಲಕ ಪೈ ಮಾಮ

ತೆವಳುತ್ತ ಹೊರಟು ಹೋಯಿತು.
ಹಿತ್ತಲದ ಕೆಳಗೆಯೇ ಹರಿಯುತ್ತಿದ್ದಳು ಕಾಳಿ ಬಂಗ್ಲೆಯ ಹಿಂದೆ ಆಚೆ ಗಿಡಗಂಟಿಗಳು ಹೆಣೆದುಕೊಂಡ ಕುಮುರಿಯಂಥ ಕಾಡಿದೆ. ಅದಕ್ಕೆ ಹೊಂದಿಯೇ ಕೆಳಗೆ ಕಾಳೀ ನದಿ ಹರಿಯುತ್ತಿದೆ. ಕಪ್ಪು ಕಲ್ಲಿನ ಮೇಲೆ ನದಿ ಹರಿಯುವ ಸದ್ದು ಸಣ್ಣದಾಗಿ ಕೇಳುತ್ತಿತ್ತು. ಬಂಗ್ಲೆಯ ಮುಂಭಾಗದಲ್ಲಿ ಒಂದಷ್ಟು ಬಯಲಿದೆ. ಅಲ್ಲಿ ಸಾಹೇಬರ ಜೀಪು ಹಾಗೂ ಪೈಮಾಮ ತಂದು ನಿಲ್ಲಿಸುವ ಫೋರ್ಡು ಲಾರಿಗಷ್ಟೇ ಜಾಗ ಇದೆ. ಅದರಲ್ಲೇ ಒಂದು ಯಾವಾಗಲೋ ಕಟ್ಟಿದ ಸರಕಾರೀ ಝಂಡಾ ಕಟ್ಟೆ.

3
ಫೋಟೋ ಕೃಪೆ : National Geographic Vedio

ಹಾಗಾದರೆ ಹೆಬ್ಬಾವು ಎಲ್ಲಿ ಹೋಗಿರಬಹುದು? ನನಗೆ ಚಿಂತೆಯಾದರೂ ತಲೆ ಕೆಡಿಸಿಕೊಳ್ಳುವ ಸಮಯವಾಗಿರಲ್ಲಿಲ್ಲ. ಈಗ ಹೊರಗೆ ಕತ್ತಲ ರಾತ್ರಿ. ಜನ ಯಾರೂ ಓಡಾಡುತ್ತಿಲ್ಲ. ಸಧ್ಯ ಇದೊಂದು ರಾತ್ರಿ ಕಳೆದರೆ ಸಾಕು. ನಾಳೆಯೇ ಊರಲ್ಲಿ ರೂಮು ಹುಡುಕಲು ಸುರು ಮಾಡಬೇಕು ಅಂದವನೇ ಮೊದಲು ಕಿಟಕಿಯನ್ನು ಭದ್ರಪಡಿಸಿದೆ. ಹಾವು ಮರಳಿ ಬರಲು ಎಲ್ಲಿಯಾದರೂ ಜಾಗವಿದೆಯೇ ಎಂದು ಹುಡುಕಿ ನೋಡಿದೆ. ಸಂಶಯ ಬಂದ ಕಿಂಡಿಗಳನ್ನು ಕೈಗೆ ಸಿಕ್ಕ ವಸ್ತುಗಳಿಂದ ಮುಚ್ಚಿದೆ. ಧೈರ್ಯ ಬಂತು. ಈಗ ಕಚೇರಿ ತುಂಬ ಓಡಾಡುತ್ತಿದ್ದ ಕೋಳಿಗಳನ್ನು ಒಂದೊಂದಾಗಿ ಹಿಡಿದೂ ಹಿಡಿದು ರಿಕಾರ್ಡ ರೂಮಿನ ಕೋಣೆಗೆ ತುಂಬಿ ಬಾಗಿಲಿನ ಚಿಲಕ ಹಾಕಿದೆ. ಸ್ವಲ್ಪು ಹೊತ್ತು ನೆಲದ ಮೇಲೆ ಸುಮ್ಮನೇ ಕೂತವನು ಕೈಯಲ್ಲಿದ್ದ ವಾಚು ನೋಡಿಕೊಂಡೆ. ಆಗಲೇ ರಾತ್ರಿ ಹತ್ತೂವರೆಯಾಗಿತ್ತು.

ಹಾವು ಹೋದರೂ ಭಯ ಹೋಗಲಿಲ್ಲ
ಟ್ರಂಕಿನಲ್ಲಿದ್ದ ಜಮಖಾನಾ ಮತ್ತು ಹೊದಿಕೆಯನ್ನು ಹೊರಗೆಳೆದುಕೊಂಡು ಅಲ್ಲೇ ನೆಲದ ಮೇಲೆ ಹಾಸಿಕೊಂಡು ಮಲಗಿದೆ. ಹಗಲು ಹೊತ್ತಿನಲ್ಲಿ ಆಫೀಸಿನ ಜನ ತಿರುಗಾಡೋ ವೆರಾಂಡ ಜಾಗ ಅದು. ಕಚೇರಿಯ ಗೂಡ್ಸ ಪಾರ್ಸಲ್ಲು ತರಲು ಲಾರಿಯೊಂದಿಗೆ ಲೋಂಡಾ ರೈಲು ಸ್ಟೇಶನ್ನಿಗೆ ಹೋಗಿದ್ದಾನೆಂದೂ, ರಾತ್ರಿ ಬರುತ್ತಾನೆಂದೂ ಭೈರಾಚಾರಿ ಹೇಳಿದ್ದು ನೆನಪಾಯಿತು. ಲಾರಿಯನ್ನು ಇಲ್ಲಿ ನಿಲ್ಲಿಸಿ ಪೈ ಮಾಮ ಮಲಗಲು ತನ್ನ ಬಾಡಿಗೆ ರೂಮಿಗೆ ಹೋಗುತ್ತಾನೆಂದೂ ಹೇಳಿದ್ದರು. ಸರಿ. ಈ ಪೈ ಮಾಮನ ಮುಖವನ್ನಾದರೂ ನೋಡೋಣ ಎಂದು ಸಂದಿಯಲ್ಲಿ ಕಣ್ಣಿಟ್ಟು ನೋಡಿದೆ. ಲಾರಿ ನಿಂತ ಕೂಡಲೇ ಕೆಳಗಿಳಿದ ಸಪೂರ ಮೈಯ ಎತ್ತರ ನಿಲುವಿನ ವ್ಯಕ್ತಿಯೇ ಈ ಪೈ ಮಾಮ. ಕೆಳಗಿಳಿದ ಆತ ಲಾರಿಯ ಹಿಂದೆ ಕೂತವರನ್ನು ಕೂಗಿ ಎಚ್ಚರಿಸಿದ.

ಜೋಯಡಾ ಇನ್ನೆಷ್ಟು ದೂರ ಅದಾರೀ…?
‘ಏನ್‌… ಇನ್ನೂ ಮಲಗೀರೇನೋ. ಸೂಪಾ ಬಂತು. ಏಳ್ರಿ ಎಲ್ಲಾ…’ ಅಂದ. ಈಗ ಲಾರಿಯಲ್ಲಿ ಕೂತಿದ್ದ ಎಂಟು ಹತ್ತು ಜನ ದುಡು ದುಡು ಮೇಲೆದ್ದರು. ಅವರಲ್ಲಿ ಗಂಡಸರು, ಹೆಂಗಸರು, ಮಕ್ಕಳೂ ಇದ್ದರು. ನಾನು ಅಚ್ಚರಿಯಿಂದ ಕಿಟಗಿಗೆ ಇನ್ನಷ್ಟು ಒತ್ತಿ ನಿಂತೆ.

3

‘’ಆಂ? ಸೂಪಾ ಬಂತರೀ…. ಹೌದು. ನಾವು ಇಲ್ಲೇ ಇಳೀಬೇಕರಿ. ಜೋಯೀಡಾ ಇನ್ನೆಷ್ಟು ದೂರ ಅದಾರೀ?’’

ಲಾರಿಯ ಹಿಂದೆ ಕೂತಿದ್ದ ಕೆಲವು ಗಂಡಸರು ಪೈಮಾಮನನ್ನು ಕೇಳಿದರು. ಅವರು ಆಡುವ ಭಾಷೆ ಬಯಲು ಸೀಮೆಯದ್ದು ಎಂದು ತಕ್ಷಣ ನಾನು ಗುರುತಿಸಿದೆ. ಹೌದು ಬಂದವರು ಬಯಲು ಸೀಮೆಯ ಕೂಲಿಯ ಜನ. ಅಲ್ಲಿ ಈಗ ಬರಗಾಲ. ದನಕರುಗಳು ಎಲ್ಲೆಂದರಲ್ಲಿ ಬಿದ್ದು ಸಾಯೋ ಕಾಲ. ಜನರಿಗೆ ಕೂಳು- ನೀರಿಗೆ ತತ್ವಾರ. ಊರಿಗೆ ಊರೇ ಗುಳೇ ಹೋಗುವುದು ಅಲ್ಲಿ ಹೊಸತಲ್ಲ. ಕೆಲವರು ಗೋವಾ ಕಡೆಗೆ, ಇನ್ನು ಕೆಲವರು ದಾಂಡೇಲಿ ಕಾಡಿನ ಕಡೆಗೆ, ಮತ್ತೆ ಕೆಲವರು ಜೋಗ-ಕಾರ್ಗಲ್‌ ಕಡೆಗೆ ಹೋಗಿದ್ದವರನ್ನು ಊರಲ್ಲಿ ನಾನೂ ನೋಡಿದ್ದೆ. ಇವರೂ ಹಾಗೆ ಬಂದವರೇ. ರಸ್ತೆಯಲ್ಲಿದ್ದ ಒಂದೇ ಕಂಬದಲ್ಲಿ ಮಿಣುಕು ದೀಪ ಉರಿಯುತ್ತಿತ್ತು. ಯಾರ ಮುಖಗಳೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

‘’ಹೌದು. ಇದು ಸೂಪಾ ಊರೋ ಮಾರಾಯಾ. ಇದು ನಮ್ಮ ಆಫೀಸು. ಗಾಡಿ ಮುಂದಕ್ಕ ಹೋಗೂದಿಲ್ಲ ಇನ್ನ. ನೀವು ಜೋಯಿಡಾಕ್ಕೆ ಹೋಗೋದಿದ್ರೆ ಮುಂಜಾನೆ ಬೇಗ ಎದ್ದು ಹೋಗ್ರಿ. ಅದು ಇಲ್ಲಿಂದ ಏಳು ಕಿಲೋಮೀಟರ್‌ ದೂರ ಇದೆ ಅಷ್ಟೇ. ಬೆಳಿಗ್ಗೆ ಆ ಕಡೆಗೆ ಹೋಗೋ ಮರ ಕಡಿಯೋ ಫಾರೆಸ್ಟು ಗಾಡೀ ಸಿಗ್ತವೆ’’

ಪೈಮಾಮ ಕೂಲಿಗಾರರ ಹತ್ತಿರ ರೊಕ್ಕ ಪೀಕಿದ
ಪೈ ಮಾಮ ಗಾಡೀ ಖರ್ಚು ಮಾತಾಡಿಕೊಂಡೇ ಅವರನ್ನು ಇಲ್ಲಿಗೆ ತಂದು ಬಿಟ್ಟಿದ್ದ. ಅವರಲ್ಲೊಬ್ಬ ರೊಕ್ಕ ಕೊಟ್ಟ ಮೇಲೆ ಸುಪ್ರೀತನಾದ ಮಾಮ ಹೇಳಿದ. ‘’ಇವತ್ತು ರಾತ್ರಿ ಇಲ್ಲೇ ಬಂಗ್ಲೇ ಗೋಡೇಗೆ ಮಲಕ್ಕೋರಿ. ಗದ್ಲಾ-ಗಲೀಜು ಮಾಡೂ ಹಂಗಿಲ್ಲ. ಗವರ್ಮೆಂಟು ಆಫೀಸು ಇದು. ಇಲ್ಲೇ ಪಕ್ಕದಲ್ಲಿ ನದೀ ಅದೆ. ಮಕಾ –ಮಸಡಿ ಏನಾದ್ರೂ ಇದ್ರೆ ಅಲ್ಲೇ ಹೋಗಿ ತೊಳಕೊಳ್ಳಿ. ಗೊತ್ತಾಯ್ತಾ.

ಒಬ್ಬೊಬ್ರೇ ರಾತ್ರಿ ಎಲ್ಲೂ ಹೋಗ್ಬೇಡಿ. ಕಾಡು ಇದು. ತಿಳೀತಾ…?’’ ಅವನು ಹಾಗಂದಾಗ ಹೆಂಗಸರು ಕಿಸಕ್ಕನೆ ನಕ್ಕು ಸೆರಗು ಬಾಯಿಗೆ ಹಿಡಿದರು. ಅಷ್ಚು ಹೇಳಿದ ಪೈ ಮಾಮ ಅಲ್ಲಿ ನಿಲ್ಲಲಿಲ್ಲ. ಬೀದಿಯ ಮಂದ ಬೆಳಕಿನಲ್ಲಿ ಕರಗಿ ಹೋದ. ಲಾರಿಯಲ್ಲಿದ್ದ ಲೋಡನ್ನು ಅದರ ಪಾಡಿಗೆ ಬಿಟ್ಟು ಹೋದ. ಉಳಿದ ಗಂಡಸರು- ಹೆಂಗಸರು ತಮ್ಮ ಗಂಟುಗಳನ್ನು ಹೊತ್ತು ಆಗಲೇ ಕೆಳಗಿಳಿದಿದ್ದರು. ನಾನು ಮರುಗಿದೆ. ಪೈಮಾಮ ಇವರ ಹತ್ತಿರ ಹಣ ಕೀಳಬಾರದಿತ್ತು. ಬಡವರು. ಆದರೆ ಹಾಗೆಂದು ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಯಾವ ಕಾಲವಾದರೇನು. ಹಣದ ಮುಂದೆ ಎಲ್ಲರೂ ಕುರುಡರೇ. ಮಕ್ಕಳು ಹಸಿವು ಮತ್ತು ನಿದ್ದೆಯ ಮಂಪರಲ್ಲಿ ತಾಯಂದಿರ ಹೆಗಲ ಮೇಲೆ ಹಾಗೇ ಒರಗಿದ್ದವು.

3

ಮಕ್ಕಳಿಗೆ ಕೌದಿಯ ಹಾಸಿಗೆ. ಹೆಂಗಸರಿಗೆ ಸೀರೆಯ ಸೆರಗೇ ಹೊದಿಕೆ.
ಎಲ್ಲರೂ ಅಲ್ಲೇ ಝಂಡಾ ಕಟ್ಟೆಯ ಬಳಿ ಮಕ್ಕಳಿಗೆ ಕೌದಿ ಹಾಸಿ ಮಲಗಿಸಿದರು. ಹೆಂಗಸರು ಮಕ್ಕಳಿಗೆ ಅಂಟಿಕೊಂಡು ಅವರನ್ನು ಅಮುಕಿ ಹಿಡಿದು ಮುದುರಿ ಮಲಗಿದರು. ಹೊಸ ಜಾಗ. ಸೂಪಾ ಮೊದಲೇ ಶೂರ್ಪನಖಿಯ ಊರು ಎಂಬ ಭಯವಿತ್ತೇನೋ ಅವರಿಗೆ. ಸೀರೆಯ ಸೆರಗೇ ಅವರ ಹೊದಿಕೆಯಾಗಿತ್ತು. ಗಂಡಸರು ಅಲ್ಲೊಬ್ಬರು, ಇಲ್ಲೊಬ್ಬರು ಕೂತು ಕಾವಲುಗಾರರಂತೆ ಬೀಡಿ ಎಳೆದು ತಲಬು ಮೆಲ್ಲಗೆ ಮಾತಾಡತೊಡಗಿದರು.

ನಾನು ಖಿನ್ನನಾಗಿ ಹಾಸಿಗೆಯತ್ತ ಹೊರಳಿದೆ. ಸಧ್ಯ ದೇವರು ದೊಡ್ಡವನು. ನನ್ನ ಜೊತೆಗೆ ಇರಲೆಂದು ಕೆಲವು ಮನುಷ್ಯರನ್ನು ಇಲ್ಲಿ ಕಳುಹಿಸಿದ್ದಾನೆ. ಇನ್ನು ಹಾವಿನ ಭಯವಿಲ್ಲ ಅಂದುಕೊಂಡೆ. ರಾತ್ರಿ ಯಾವಾಗ ನಿದ್ರೆ ಆವರಿಸಿತೋ ಗೊತ್ತಿಲ್ಲ. ಬೆಳಿಗ್ಗೆ ಎದ್ದಾಗ ಹೊರಗೆ ಎಳೆ ಬಿಸಿಲು ಸುತ್ತೆಲ್ಲ ಬಿದ್ದಿತ್ತು. ಕಿಟಕಿಯಿಂದ ಎತ್ತ ನೋಡಿದರೂ ಕಾಡೇ ಕಾಡು. ಅಲ್ಲಲ್ಲಿ ಹಂಚಿನ ಪುಟ್ಟ ಪುಟ್ಟ ಮನೆಗಳು. ಎದುರು ರಸ್ತೆಯಾಚೆ ಬದಿಯಲ್ಲಿ ಪೋಲೀಸು ಸ್ಟೇಶನ್ನು, ತಹಶೀಲದಾರರ ಕಚೇರಿ ಇದ್ದದ್ದು ಕಂಡಿತು. ಗಾಬರಿಯಿಂದ ಗಡಬಡಿಸಿ ಎದ್ದೆ. ತಡವಾಯಿತು. ಆಫೀಸಿನಲ್ಲಿ ಹೀಗೆ ತಡವಾಗಿ ಏಳುವುದಲ್ಲ. ಭೈರಾಚಾರಿ ಬಂದು ಬಯ್ದರೆ ಕಷ್ಟ. ಬಂಗ್ಲೆಯ ಹಿತ್ತಲ ಕಡೆ ಕಚೇರಿಯ ಜನರ ಉಪಯೋಗಕ್ಕಾಗಿ ಎರಡು ಬಾತ್‌ ರೂಮುಗಳಿದ್ದವು. ಅಲ್ಲಿಂದ ಕೆಳಗೆ ಹೋಗುವ ಸೀಳು ದಾರಿಯಲ್ಲಿ ನಡೆದರೆ ನದಿಗೇ ಹೋಗಬಹುದು. ಬೆಳಿಗ್ಗೆಯೇ ಬಂದು ಬಾಗಿಲು ಬಡಿದ ಭೈರಾಚಾರಿ ಬೇಗ ತಯಾರಾದೆ. ಇವತ್ತು ಹೈದರಾಬಾದನಿಂದ ಜಿಯಾಲಾಜಿ ಟೀಮು ಬರುವ ದಿನ. ನದಿಗೆ ಹೋಗಿ ಜಳಕ ಪೂರೈಸಿದೆ. ನದಿಯ ನೀರು ಬೆಳಿಗ್ಗೆ ಬಿಸಿಯಾಗಿ ಇರುತ್ತದೆ ಎಂದು ಹನುಮಂತ್ಯಾ ಹೇಳಿದ ಮಾತು ಸತ್ಯವಾಗಿತ್ತು.

ಬಂಗ್ಲೆಯ ಹೊರಗೆ ಹಣಿಕಿಕ್ಕಿ ನೋಡಿದೆ. ಅಚ್ಚರಿಯಾಯಿತು. ಅಲ್ಲಿ ರಾತ್ರಿ ಪೈಮಾಮನ ಲಾರಿಯಲ್ಲಿ ಬಂದಿದ್ದ ಕೂಲಿಗಾರರು ಒಬ್ಬರೂ ಕಾಣಲಿಲ್ಲ. ಅವರ ಗಂಟೂ ಇಲ್ಲ. ಅವರೂ ಇಲ್ಲ. ಅವರು ಯಾವಾಗಲೋ ಎದ್ದು ತಮ್ಮ ಗಂಟು ಸಮೇತ ಹೋಗಿದ್ದರು. ಅಷ್ಟರಲ್ಲಿ ಬಾಗಿಲಲ್ಲಿ ಭೈರಾಚಾರಿಯವರು ಹಾಜರಾದರು. ಅವರನ್ನು ನೋಡುತ್ತಲೂ ನಾನು- ‘’ನಮಸ್ಕಾರೀ…’’ ಅಂದೆ.

3
ಫೋಟೋ ಕೃಪೆ : ABC news

‘’ನಿದ್ದೆ ಆಯ್ತಾ… ಕೋಳಿಗಳಿಗೆ ಕಾಳೂ ನೀರೂ… ಹಾಕಿದ್ರಾ’’ ಅಂದರು. ನನಗೆ ನಡು ರಾತ್ರಿ ಹೆಬ್ಬಾವು ಬಂದದ್ದು, ಒಂದು ಕೋಳಿಯನ್ನು ನುಂಗಿದ್ದು ಹೇಳುವುದು ಈಗ ಅನಿವಾರ್ಯವಾಯಿತು. ರಾತ್ರಿ ಆದ ರಾದ್ಧಾಂತ ಹೇಳಿದೆ. ಅವರ ಮುಖದಲ್ಲಿ ದಿಗಿಲು ಮೂಡಿತು. ಹಾವು ಬರೋದು ಮಾಮೂಲಿ. ಆದ್ರೆ ಕೋಳಿ ಹೋದದ್ದು ಇವತ್ತೇ ಮೊದ್ಲು. ಸಾಹೇಬರು ಬಂದ್ಮೇಲೆ ಹೇಗೆ ಹೇಳೋದು. ಕೋಳಿ ಅಂದ್ರೆ ಅವ್ರಿಗೆ ಪ್ರಾಣ. ಒಂದು ಕೋಳಿಗೆ ಏನಿಲ್ಲಂದರೂ ಈಗ ಎಂಟು ರೂಪಾಯಿ. ಟೇಬಲ್ಲು ಮೇಲಿನ ಒಂದು ಫೈಲು ಹೋದ್ರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೆ ಕೋಳಿ ಹೋದ್ರೆ ಮಾತ್ರ ಸುಮ್ಮನಿರೋದಿಲ್ಲ’’ ಭೈರಾಚಾರಿಯವರು ನನ್ನನ್ನೇ ಕಳ್ಳನಂತೆ ನೋಡತೊಡಗಿದಾಗ ನನಗೆ ಕಸವಿಸಿಯಾಯಿತು. ಒಮ್ಮೆ ಸಿಟ್ಟೂ ಬಂತು. ಆದರೆ ಈಗ ನಾನು ಅಸಹಾಯಕ. ಕಚೇರಿಯಲ್ಲಿ ಬೇರೆ ಯಾರೂ ನನಗೆ ಗೊತ್ತಿಲ್ಲ. ನಾನು ಸಣ್ಣ ಮೋರೆ ಮಾಡಿದ್ದು ನೋಡಿ ಅವರೇ ಹೇಳಿದರು. ಹೋಗಲಿ ಬಿಡಿ. ನಾನೇ ಏನಾದರೂ ಹೇಳಿಕೊಳ್ತೀನಿ. ನೀವು ಇಲ್ಲಿ ಮಲಗಿರೋದಿ ಗೊತ್ತಾದ್ರೆ ನಿಮ್ಮ ಮೇಲೆ ಬೋರ್‌ ಬಿಟ್ಟು ಕಳ್ಳತನ ಆದದ್ದೂ ಕೇಸೂ ಬರಬಹುದು. ನಾನೆಲ್ಲಾ ಸುಧಾರಿಸ್ತೀನಿ ಅಂದರು. ನನಗೆ ಧೈರ್ಯ ಬಂತು. ಭೈರಾಚಾರಿಯವರು ನನಗೆ ದೇವರಾಗಿ ಕಂಡರು.


[ಮುಂದಿನ ಸಂಚಿಕೆಯಲ್ಲಿ – ಭೈರಾಚಾರಿಯವರು ಬೆಳಗಿನ ತಿಂಡಿಗೆ ನನ್ನನ್ನು ತಮ್ಮ ಬಾಡಿಗೆಯ ಪುಟ್ಟ ಮನೆಗೆ ಕರೆದೊಯ್ದುರು. ಅಲ್ಲಿ ಅವರ ಹೆಂಡತಿ ಪರಿಮಳಾರ ಪರಿಚಯವಾಯಿತು. ಆಕೆ ಕಾದಂಬರಿ ಪ್ರಿಯೆ ಎಂದು ಗೊತ್ತಾದಾಗ ಬರವಣಿಗೆಯ ಆಸಕ್ತಿಯಿದ್ದ ನನಗೆ ಸಂತೋಷವಾಯಿತು. ಅವರ ಮನೆಯಲ್ಲಿಯೇ ನಮ್ಮದೇ ಸಬ್‌ ಡಿವಿಜನ್ನಿನ ಹಿರಿಯ ಸಿಬ್ಬಂದಿ ಶ್ರೀ ಚಾಂದಗೋಡಿಯವರ ಪರಿಚಯವೂ ಆಯಿತು. ಅವರು ನನ್ನನ್ನೇ ಭೇಟಿಯಾಗಲು ಬಂದಿದ್ದರು. ಅವರ ಜೊತೆಗೇ ಡ್ಯಾಮ ಸೈಟಿಗೆ ಹೋಗಲು ನಾಯಕ್‌ ಸಾಹೇಬರು ನನಗೆ ಹೇಳಿ ಕಳಿಸಿದ್ದರಂತೆ. ಸೂಪಾ ಡ್ಯಾಮ ಸೈಟಿನಲ್ಲಿ ನನ್ನ ಮೊದಲ ಹೆಜ್ಜೆ ಅವರೊಂದಿಗೆ ಆಯಿತು. ಅಲ್ಲಿ ಹೈದರಾಬಾದಿನಿಂದ ಸೂಪಾಕ್ಕೆ ಬಂದಿದ್ದ ಸರ್ವೇ ಆಫ್‌ ಇಂಡಿಯಾದ ಭೂಗರ್ಭ ಶಾಸ್ತ್ರಜ್ಞ ಶ್ರೀ ಶೇಷಗಿರಿಯವರ ಪರಿಚಯವಾಗಿ ಅವರು ನನ್ನ ಕೈ ಕುಲುಕಿದರು. ಮುಂದೆ
ಓದಿರಿ. ಓದುತ್ತ ಹೋಗಿರಿ.]

– ಓದಿರಿ ಪ್ರತಿ ಶನಿವಾರ ರೋಚಕ ಕತೆಗಳು


  • ಹೂಲಿಶೇಖರ್
    (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)
    bf2fb3_58479f997cba4852bd3d7a65d4c785a4~mv2.png
0 0 votes
Article Rating

Leave a Reply

1 Comment
Inline Feedbacks
View all comments
Lakshmi Nadagouda

ಜೀವವೇ ಬಾಯಿಗೆ ಬರೋ ಸಂದರ್ಭವನ್ನ ನವಿರು ಹಾಸ್ಯದೊಂದಿಗೆ ವಿವರಿಸಿದ್ದು ಸಖತ್ತಾಗಿತ್ತು… ಅಬ್ಬಾ!!!!

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW