ಕನ್ನಡಿಗರು ಮತ್ತು ಭಾಷಾಭಿಮಾನ

ಈ ದಿನ ಕನ್ನಡಿಗರ ಮಕ್ಕಳೇ ಕನ್ನಡತನವನ್ನು ಉಳಿಸಿಕೊಳ್ಳದಿರಲು ಕಾರಣ ಅವರ ಇಂಗ್ಲೀಷ್ ವ್ಯಾಮೋಹವೇ ಹೊರತು ಅವರ ಜೀವನಶೈಲಿ ಮತ್ತು ವಿಚಾರಗಳು ತಮಿಳು, ತೆಲುಗಿನಿಂದ ಪ್ರಭಾವಿತವಾಗಿಲ್ಲ.ಮಾತೃಭಾಷೆಯಲ್ಲಿ ಕಲಿಯದ ಜ್ಞಾನ ಉತ್ತಮ ಬದುಕನ್ನು ರೂಪಿಸುವಲ್ಲಿ ಸಫಲವಾಗುವುದಿಲ್ಲ. ಡಾ.ಗುರುಪ್ರಸಾದ ರಾವ್ ಹವಲ್ದಾರ್ ಲೇಖನಿಯಲ್ಲಿ ಕನ್ನಡ ಕುರಿತಾದ ಲೇಖನ, ತಪ್ಪದೆ ಮುಂದೆ ಓದಿ…

ಸಾವಿರಾರು ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ದಿನ ಸ್ವತಂತ್ರ ಪೂರ್ವ ,ಸ್ವತಂತ್ರ ನಂತರ ಕೆಲವು ವರ್ಷಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದಾಗಿಸಿದ ದಿನ ,ಮೈಸೂರು ರಾಜ್ಯ ಉದಯಿಸಿದ ದಿನ ಅನೇಕರ ಹೋರಾಟದಿಂದ ಉದಯಿಸಿದ ನಮ್ಮ ಚೆಲುವ ಕನ್ನಡ ನಾಡನ್ನು ನನೆಯುವ ದಿನ ಈ ರಾಜ್ಯೋತ್ಸವ ದಿನ.

ಕನ್ನಡ ಭಾಷೆ, ಸಂಸ್ಕೃತಿಯನ್ನು ಸ್ವಾತಂತ್ರ್ಯ ಪೂರ್ವದಿಂದ ಒಂದು ಪ್ರಜ್ಞಾವಂತ ಸಮುದಾಯ ಹಾಗೂ ಸಾಹಿತಿಗಳು ಜತನದಿಂದ ಕಾದುಕೊಂಡು ಬಂದ ಪರಿಣಾಮ ಅಖಂಡ ಕರ್ನಾಟಕ ರೂಪಗೊಳ್ಳಲು ಸಾಧ್ಯವಾಯಿತು.

ಸಾಮಾನ್ಯವಾಗಿ ಭಾಷಾಭಿಮಾನ ಎಂದ ಕೂಡಲೇ ಎಲ್ಲರೂ ತಮಿಳರನ್ನು ಹೆಸರಿಸುತ್ತೇವೆ. ಕಾರಣ ಪೆರಿಯಾರ್ ನೇತೃತ್ವದಲ್ಲಿ ಆರಂಭವಾದ ದ್ರಾವಿಡ ಸಂಸ್ಕೃತಿಯ ಚಳುವಳಿ ತಮಿಳು ಹೋರಾಟಕ್ಕೆ ತಾತ್ವಿಕ ನೆಲೆ ಕಲ್ಪಿಸುವಲ್ಲಿ ಸಫಲವಾಗಿತ್ತು. ಅದೇ ರೀತಿಯಲ್ಲಿ ಕರ್ನಾಟಕ ಏಕೀಕರಣ ಚಳುವಳಿಯ ನಂತರ ರಾಜ್ಯದ ಪಾಲಿನ ಮತ್ತೊಂದು ಮಹತ್ವದ ಚಳುವಳಿ ಎಂದರೆ ಗೋಕಾಕ್ ಚಳುವಳಿ. ಈ ಚಳುವಳಿಯಲ್ಲಿ ಕನ್ನಡ ಹೋರಾಟಗಾರರು ರಾಜ್ಯದ ಮೂಲೆ ಮೂಲೆಗೆ ಕ್ರಮಿಸಿ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಕಲಿಯಬೇಕು ಎಂದು ಹೋರಾಟವನ್ನು ಸಂಘಟಿಸಿದರು. ವಿ.ಕೃ.ಗೋಕಾಕ್ ಚಳುವಳಿಯ ಮುಂಚೂಣಿ ನಾಯಕರಾದರೂ ಡಾ.ರಾಜ್ಕುಮಾರ್ ಅವರು ಚಳುವಳಿ ಗುರುತಿಸಿ ಕೊಂಡ ನಂತರ ಮತ್ತೊಂದು ಆಯಾಮಕ್ಕೆ ಹೊರಳಿತು. ಈ ಚಳುವಳಿ ಆಡಳಿತ, ಅಧಿಕಾರ ಕನ್ನಡತನವನ್ನು ತಂದಿತು, ಆದರೆ ಇಂದು ಗೋಕಾಕ್ ಹೋರಾಟವನ್ನು ಸಂಘಟಿಸು ಅಥವಾ ರಾಜ್ಕುಮಾರ್ ಸ್ಥಾನವನ್ನು ತುಂಬ ಬಲ್ಲ ಒಬ್ಬೇ ಒಬ್ಬ ನಾಯಕರಿಲ್ಲದಿರುವುದು ವಿರ್ಪಯಾಸ.

ಫೋಟೋ ಕೃಪೆ : google

ನವೆಂಬರ್ ಬಂತೆಂದರೆ ಸಾಕು ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಆಗಮಿಸುವವರು ಕಡ್ಡಾಯ ಕನ್ನಡ ಕಲಿಯಲೇಬೇಕು, ಆಡಳಿತ ಕನ್ನಡದಲ್ಲಿಯೇ ನಡೆಯಬೇಕು. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಉದ್ದುದ್ದ ಭಾಷಣ ಬಿಗಿಯುವ ಇವರು ಉಳಿದ ದಿನಗಳಲ್ಲಿ ಈ ಕುರಿತ ಹೋರಾಟಕ್ಕೆ ಕನಿಷ್ಠ ಒಂದು ರೂಪುರೇಷೆ ಸಿದ್ಧಪಡಿಸಿ ಗೋಕಾಕ್ ಚಳುವಳಿಯಂತೆ ಮತ್ತೊಂದು ಚಳುವಳಿ ರೂಪಿಸುವ,ಸಜ್ಜುಗೊಳಿಸುವ ಕನ್ನಡಿಗರಿಗೆ ಧುಮುಕುವಂತೆ ಮಾಡುವ ಯಾವ ನಾಯಕತ್ವ ಕಾಣುತ್ತಿಲ್ಲ.

ಈ ವರ್ಷ ನಾಡು ಬರಗಾಲ, ನೀರಿನ ಕೊರತೆಯನ್ನು ಕಾಡುತ್ತಿದೆ ಕಾವೇರಿ ಕೊಳ್ಳದಲ್ಲಿ ನೀರಿನ ಅಭಾವ ಕಾಣಿಸಿ ಕೊಂಡಿದೆ ಮತ್ತೆ ತಮಿಳುನಾಡು ನೀರಿನ ಕ್ಯಾತೆ ತೆಗೆದು ಕಾವೇರಿ ಪ್ರಾಧಿಕಾರದ ಮುಂದೆ ವಾದ ಮಂಡಿಸಿ ನೀರಿನ ಪಾಲನ್ನು ಪಡೆಯುತಿದೆ ಅದರೆ ನಮ್ಮಿಂದ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ.

ಮತ್ತೆ ಅದೇ ಬಂದ್, ಜನಸಾಮಾನ್ಯರು ಹೈರಾಣವಾಗುವುದು ಶಾಶ್ವತ ಪರಿಹಾರ ಯಾರಿಗೂ ಬೇಡವಾಗಿದೆ ಇದೇರೀತಿ ಉತ್ತರ ಕರ್ನಾಟಕದ ಮಹಾದಾಯಿ ಯೋಜನೆ ಇದಕ್ಕೂ ಅದೇ ಕಥೆ

ಕನ್ನಡನಾಡು ಔದ್ಯೋಗಿಕವಾಗಿ ದೇಶದಲ್ಲೇ ಹೆಸರು ಮಾಡಿದೆ. ಪ್ರತಿಷ್ಠಿತ ಐಟಿ ಬಿಟಿ, ಇಸ್ರೋ,ಅಪ್ಯಲ್ ಅಂತಹ ಮೊಬೈಲ್ ಕಂಪನಿಗಳು, ಟಾಟಾ, ಟೊಯೋಟಾ ದಂತಹ ಆಟೋಮೊಬೈಲ್ಸ್ ಕಂಪನಿಗಳು ಜಿಂದಲ್, ಸುಜನಾಲ್ ಎರ್ನಾಕೋದಂತಹ ಪವನ ಸೌರವಿದ್ಯುತ್ ಕಂಪನಿಗಳು ನೆಲೆ ನಿಂತಿವೆ ಜೊತೆಗೆ ಉದ್ಯೋಗಾವಕಾಶ ಸಿಗುವಂತೆ ಮಾಡಿವೆ
ಈ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಅರಸಿ ನೆರೆರಾಜ್ಯದವರು ಬಹು ಹಿಂದೆಯೇ ಬೆಂಗಳೂರಿಗೆ ವಲಸೆ ಬಂದು ನೆಲೆಸಿದರು. ಪರರಾಜ್ಯದವರಿಗೆ ಇಲ್ಲಿನ ಹಿತಕರವಾದ ಹವೆ, ಕೈತುಂಬ ಸಂಬಳ ಕೊಡುವ ಉದ್ಯೋಗಾವಕಾಶ, ಕನ್ನಡ ಕಲಿಯದೆ ಬದುಕಬಹುದಾದ ಅನುಕೂಲಕರ ಸನ್ನಿವೇಶ ಎಲ್ಲಾ ಸೇರಿ ಬೆಂಗಳೂರು ವಲಸಿಗರಿಗೆ ಸ್ವರ್ಗವಾಗಿದೆ.

ಈ ರೀತಿಯಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾದಂತೆ ಇಲ್ಲಿನ ವ್ಯಾಪಾರ-ವಾಣಿಜ್ಯ ವ್ಯವಹಾರಗಳೂ ಹೆಚ್ಚಾದವು. ಪರರಾಜ್ಯದ ವ್ಯಾಪಾರಿಗಳ ವಲಸೆಯೂ ಹೆಚ್ಚಾಯಿತು. ಒಂದರ ಮೇಲೊಂದು ಬಹುಮಹಡಿ ಅಪಾರ್ಟ್ಮೆಂಟ್ಗಳು, ವಾಣಿಜ್ಯ ಮಳಿಗೆಗಳು ತಲೆ ಎತ್ತಿದವು. ಈ ಕಟ್ಟಡಗಳ ಕೆಲಸಗಳ ಕಾಮಗಾರಿಗಳಿಗೂ ಪರರಾಜ್ಯದವರು ಬಂದರು. ಮೇಲೆ ತಿಳಿಸಿದಂತೆ ನಮ್ಮ ರಾಜ್ಯದಲ್ಲಿನ ಜನದಟ್ಟನೆ ಬಹಳ ಕಡಿಮೆ. ಆದ್ದರಿಂದ ಇಲ್ಲಿ ಒಂದು ರೀತಿಯ ನಿರ್ವಾತ ಸೃಷ್ಟಿಯಾಗಿತ್ತು. ಇದಕ್ಕೆ ವಿರುದ್ಧವಾಗಿ ನೆರೆರಾಜ್ಯಗಳಲ್ಲಿನ ಜನಸಂಖ್ಯಾ ದಟ್ಟನೆ, ವ್ಯಾಪಾರ ಮತ್ತು ಉದ್ಯೋಗದ ಅವಕಾಶಗಳ ಕೊರತೆ, ಬಡತನ ಇತ್ಯಾದಿ ಕಾರಣಗಳಿಂದ, ಇದು ನಗರದ ಕಥೆಯಾದರೆ, ಇನ್ನು ನಮ್ಮ ಹಳ್ಳಿ ,ಊರು, ನಗರ ,ಪಟ್ಟಣಗಳನ್ನದೇ ಪರಭಾಷಿಕರು ತಮ್ಮ ಜೀವನ ನೆಲೆ ಕಂಡುಕೊಳ್ಳುತ್ತಿದ್ದರೆ, ನೀವು ಯಾವುದೇ ಊರುಗಳಿಗೆ ಹೋದ ಸಂದರ್ಭದಲ್ಲಿ ಗಮನಿಸಿ  ಪಾನಿ ಪೂರಿಯಂತಹ ಸಣ್ಣ ಅಂಗಡಿಯಿಂದ ಸೂಪರ್ ಮಾರ್ಕೆಟ್ ಅಂತಹ ದೊಡ್ಡ ಪ್ರಮಾಣದ ಅಂಗಡಿಗಳಲ್ಲಿ ಮತ್ತು ರಾಜ್ಯದ ಯಾವುದೇ ದೊಡ್ಡ ದೊಡ್ಡ ಮಾಲ್ ಗಳು ರೆಸ್ಟೋರೆಂಟ್ಗಳು, ಐಷಾರಾಮಿ ಹೋಟೆಲ್ ಗಳಲ್ಲಿ ಹಾಗೆಯೇ ಹೆದ್ದಾರಿಗಳ ಪಕ್ಕದಲ್ಲಿರುವ ಹೋಟೆಲ್, ಡಾಬಾಗಳ  ಮಾಲೀಕತ್ವ ವನ್ನು ಹೊರ ರಾಜ್ಯದವರು ಹೊಂದಿದ್ದರೆ ಇಡೀ ಅರ್ಥವ್ಯವಸ್ಥೆಯ ಹಿಡಿತ ಹೊಂದುವ ಹಾದಿಯಲ್ಲಿ ಇದ್ದಾರೆ. ಅಲ್ಲದೇ ಸ್ಥಾಪಿಸಲಾದ ಕೈಗಾರಿಕೆಗಳಲ್ಲಿ ಇರುವ ದುಡಿಯುವ ವರ್ಗದವರೆಲ್ಲರೂ ಬಿಹಾರ, ಛತ್ತಿಸಘಡ,ಜಾರ್ಖಂಡ್, ಒರಿಸ್ಸ, ಮಧ್ಯಪ್ರದೇಶ, ಮುಂತಾದ ಹೊರ ರಾಜ್ಯದಿಂದ ಬಂದಂತಹ ಕಾರ್ಮಿಕರೇ ಆಗಿದ್ದಾರೆ, ಹಾಗಾದರೆ ನಮ್ಮವರಿಗೆ ಏಕೆ ಇಲ್ಲ?

ಫೋಟೋ ಕೃಪೆ : google

ಈ ದಿನ ಕನ್ನಡಿಗರ ಮಕ್ಕಳೇ ಕನ್ನಡತನವನ್ನು ಉಳಿಸಿಕೊಳ್ಳದಿರಲು ಕಾರಣ ಅವರ ಇಂಗ್ಲೀಷ್ ವ್ಯಾಮೋಹವೇ ಹೊರತು ಅವರ ಜೀವನಶೈಲಿ ಮತ್ತು ವಿಚಾರಗಳು ತಮಿಳು, ತೆಲುಗಿನಿಂದ ಪ್ರಭಾವಿತವಾಗಿಲ್ಲ. ಇಂದು ವಲಸೆ ಬರುತ್ತಿರುವವರಲ್ಲಿ ಹೆಚ್ಚಿನವರು ಮಾಹಿತಿ ತಂತ್ರಜ್ಞಾನ ಉದ್ಯೋಗಾಕಾಂಕ್ಷಿಗಳು ಎಂದಿರಿ ಸರಿ. ಇವರು ವಿದ್ಯಾವಂತರು. ಸಮಸ್ಯೆ ಇದಲ್ಲ ಅಥವಾ ತೆಲುಗು,ತಮಿಳಿನ ಕೂಲಿ ಕಾರ್ಮಿಕರಲ್ಲ. ಈ ವಿದ್ಯಾವಂತರು ಮತ್ತು ನಮ್ಮ ಕನ್ನಡ ನಾಡಿನ ’ವಿದ್ಯಾವಂತರಿಗೆ’ ಇಂಗ್ಲೀಷ್ ಗೊತ್ತಿದೆ. ಕೇವಲ ಗೊತ್ತಿದ್ದರೂ ಸಮಸ್ಯೆ ಇರುತ್ತಿರಲಿಲ್ಲ. ಈವತ್ತು ಜಗತ್ತಿನಲ್ಲಿ ಬದುಕಬೇಕೆಂದರೆ ಇಂಗ್ಲಿಷೊಂದೇ ಮಾರ್ಗ ಎನ್ನುವ ಭ್ರಮೆ .ಪ್ರಪಂಚದ ಯಾವುದೇ ಜ್ಞಾನವನ್ನು ಮಾತೃಭಾಷೆಯಲ್ಲಿ ಕಲಿತರೆ ಮಾತ್ರ ಅದನ್ನು ನಾವು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯ.

ಮಾತೃಭಾಷೆಯಲ್ಲಿ ಕಲಿಯದ ಜ್ಞಾನ ಉತ್ತಮ ಬದುಕನ್ನು ರೂಪಿಸುವಲ್ಲಿ ಸಫಲವಾಗುವುದಿಲ್ಲ. ಇಂದು ಇಡೀ ಸಮಾಜ ಇಂಗ್ಲೀಷ್ ವ್ಯಾಮೋಹಕ್ಕೆ ಸಿಲುಕಿ ಮಕ್ಕಳನ್ನು ಆಂಗ್ಲ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ ಪ್ರೌಢ ಶಿಕ್ಷಣ ಮುಗಿಸಿ ಹೊರಬರುವ ಮಕ್ಕಳು ಆಂಗ್ಲವನ್ನು ಸಂಪೂರ್ಣವಾಗಿ ಕಲಿಯದೆ ಭೌದ್ಧಿಕತೆಯನ್ನೂ ಬೆಳೆಸಿಕೊಳ್ಳದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.ಕನ್ನಡ ಕೇವಲ ಅಭಿಮಾನದ ಪ್ರಶ್ನೆಯಾಗದೆ ಅನ್ನದ ಪ್ರಶ್ನೆಯಾದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ.

ಸರ್ಕಾರದ ಭಾಗವಹಿಸುವಿಕೆ ಇಲ್ಲದೆ ಇಂದು ಖಾಸಗಿ ಕಂಪನಿ ದೇಶದ ಯಾವುದೇ ಮೂಲೆಯಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸುವಷ್ಟು ಸ್ವಾತಂತ್ರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲಾಗಿದೆ. ಒಂದು ಕಂಪನಿ ಯಾವುದೇ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದರೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು. ಆದರೆ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರವನ್ನೇ ನಿಯಂತ್ರಿಸಬಲ್ಲಷ್ಟು ಶಕ್ತಿ ಪಡೆದಿವೆ. ಇಲ್ಲಿ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ರಾಜ್ಯದ ಯುವಜನತೆ ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ.

ಇಂಗ್ಲೀಷ್ ಭಾಷೆ ಕಲಿತರೆ ಮಾತ್ರ ಇಲ್ಲಿನ ಐಟಿಬಿಟಿ ಉದ್ಯಮಗಳಲ್ಲಿ ಕೆಲಸ ಪಡೆಯುವುದು ಸಾಧ್ಯ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಚಿಂತೆಯಿಂದ ಶಾಲಾ ದಿನಗಳಿಂದಲೇ ಇಂಗ್ಲೀಷ್ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಹಾಗಾಗಿ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲು ಸೌಲಭ್ಯ ನೀಡಿದಂತೆ , ಬಹುರಾಷ್ಟ್ರೀಯ ಕಂಪನಿಗಳಲ್ಲೂ ಮೀಸಲಾತಿ ನೀಡಬೇಕು. ಈ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ಇರಬೇಕು. ಖಾಸಗಿ ಉದ್ದಿಮೆಗಳಲ್ಲಿ ಹಂತ ಹಂತವಾಗಿ ಶೇ.100ರಷ್ಟು ಕನ್ನಡಿಗರಿಗೆ ಅವಕಾಶ ನೀಡಬೇಕು.

ಫೋಟೋ ಕೃಪೆ : google

ಕನ್ನಡ, ಯುವಕರಿಗೆ ಉದ್ಯೋಗಾವಕಾಶ ಲಭಿಸಿದರೆ ಕನ್ನಡದಿಂದ ಅನ್ನ ಲಭಿಸಿದರೆ, ಸಾಮಾನ್ಯವಾಗಿ ಕನ್ನಡದ ಉಳಿವಿನ ಪ್ರಶ್ನೆ ತೆರೆಯ ಮರೆಗೆ ಸರಿಯಲಾರಂಭಿಸುತ್ತದೆ.
ಕೇಂದ್ರ ಸರ್ಕಾರ ರೈಲ್ವೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿದೆ, ಅದರೆ ನಮ್ಮ ಉದ್ಯೋಗಾಂಕ್ಷಿಗಳಿಗೆ ತತ್ಸಾರ.
ನೀವು ಗಮನಿಸಿ ಬಹುದು ರಾಜ್ಯದಲ್ಲಿ ಇರುವ ಕೇಂದ್ರ ಸರ್ಕಾರದ ಆಡಳಿತ ಸಂಸ್ಥೆಗಳಲ್ಲಿ ಅಂದರೆ ರೈಲ್ವೆ, ಬ್ಯಾಂಕ್, ಪೋಸ್ಟ್ ಆಫೀಸ್, ಕೇಂದ್ರಿಯ ಮೀಸಲು ಪಡೆ ಮುಂತಾದ ಸಂಸ್ಥೆಗಳಲ್ಲಿ ಪರಭಾಷಿಕರೆ ತುಂಬಿ ಹೊಗಿದ್ದಾರೆ.

ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡುವತ್ತ ಸರ್ಕಾರ ಗಂಭೀರವಾದ ಚಿಂತನೆ ಮಾಡಲಿ ಇಲ್ಲವಾದರೇ ನಮ್ಮಲ್ಲ ಕೆಲಸಗಳು ,ಅರ್ಥವ್ಯವಸ್ಥೆಯು ಎಲ್ಲವನ್ನು ಅವರ(ಪರಭಾಷಿಕರ) ದಾಕ್ಷಿಣ್ಯತೆಯಲ್ಲಿ ಬದುಕುವ ಸಮಯದ ಅಂಚಿನಲ್ಲಿ  ತಲುಪವುದು ದೂರವೇನೂಲ್ಲ ಹತ್ತಿರದಲ್ಲಯೇ ಇದ್ದೇವೆ,ಅವರು ಯಾರು ನಮ್ಮ ಭಾಷೆ ಮಾತನಾಡುವ ಅನಿವಾರ್ಯತೆ ಅವರಿಗಿಲ್ಲ ನಾವೇ ಅವರ ಭಾಷೆಯಲ್ಲಿ ಮಾತನಾಡುವ ವಿಶಾಲ ಮನಸ್ಸಿನವರು ,ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತ ಸರಿಯಲ್ಲ. ಭಾರತದಂಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಕಲ್ಯಾಣ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ.

ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ, ಉನ್ನತ ವಿದ್ಯಾಭ್ಯಾಸ ಅಥವಾ ಜೀವನೋಪಾಯಕ್ಕಾಗಿ ಪರರಾಜ್ಯ&ಪರದೇಶಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದರೂ, ಕನ್ನಡತನಕ್ಕೆ ಸಂಚಕಾರ ಒದಗದಂತೆ ನೋಡಿಕೊಳ್ಳುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ಸಮರ್ಥವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ &ಪರಂಪರೆಗಳ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವ ಯತ್ನಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಆಗಬೇಕಿದೆ, ಮತ್ತು ಈ ನಿಟ್ಟಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕಿದೆ.

ಏಕೆಂದರೆ, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಂಗತಿ. ಹಲವು ಒಳಿತು, ಶ್ರೇಷ್ಠತೆಗಳ ಸಂಗಮ. ಕನ್ನಡದ ಅಂತಸತ್ವವನ್ನು ಹೆಚ್ಚಿಸುವ ಸಂಕಲ್ಪ ನಮ್ಮದಾಗಲಿ. ವಿಜ್ಞಾನ&ತಂತ್ರಜ್ಞಾನದಲ್ಲೂ ಕನ್ನಡದ ವ್ಯಾಪ್ತಿ ಇನ್ನಷ್ಟು ಮತ್ತಷ್ಟು ಹೆಚ್ಚಾಗಬೇಕು. ಜೊತೆಗೆ ಮನೆ  ಮನೆಗಳಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕು. ಅಷ್ಟೇ ಅಲ್ಲ, ನಮ್ಮ ಚಿಂತನೆಗಳ ಅಭಿವ್ಯಕ್ತಿಗೂ ಮಾತೃಭಾಷೆ/ರಾಜ್ಯಭಾಷೆ ಹೆಚ್ಚು ಸಮರ್ಥ ಎಂಬುದು ಗೊತ್ತಿರುವಂಥದ್ದೇ. ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಕನ್ನಡ ಭಾಷೆಯ ಸ್ಥಿತಿಗತಿ, ಸಮಾಜದ ವಿವಿಧಕ್ಷೇತ್ರಗಳಲ್ಲಿನ ಕನ್ನಡದ&ಕನ್ನಡತನದ ಅಸ್ತಿತ್ವ, ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇತ್ಯಾದಿ ವಿಷಯಗಳ ಕುರಿತಾದ ಚರ್ಚೆಗಳಿಗೆ ಸೀಮಿತಗೊಳಿಸದೆ ಶಾಸನ ಕಾನೂನುಗಳಾಗಿ ಜಾರಿಗೆ ತರಬೇಕಿದೆ.

ರಾಜ್ಯೋತ್ಸವ ದ ಸಂಭ್ರಮಾಚರಣೆಯ ಜತೆ ಜತೆಗೆ ಆತ್ಮಾವಲೋಕನದ ದಿನವೂ ಆಗಬೇಕಾದ್ದು ಇಂದಿನ ಅನಿವಾರ್ಯತೆ. ಏಕೀಕರಣದ ಆಶಯಗಳು ಈಡೇರಿವೆಯೇ, ಅಭಿವೃದ್ಧಿಯ ಕನಸುಗಳು ನನಸಾಗಿವೆಯೇ ಎಂಬ ಚಿಂತನೆಗೆ ತೊಡಗಿಕೊಳ್ಳಬೇಕಿದೆ. ಕಾಲಟ್ಟ ಬದಲಾದಂತೆ ಹೊಸ ಸ್ವರೂಪದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲೂ ಗಮನ ಹರಿಸಬೇಕಿದೆ. ಅದು ಕನ್ನಡದ, ಕರ್ನಾಟಕದ ಮತ್ತು ಕನ್ನಡಿಗರ ಉಜ್ವಲ ಭವಿಷ್ಯಕ್ಕೆ ಸಮರ್ಥ ಚಿಮ್ಮುಹಲಗೆಯಾಗಿ ಪರಿಣಮಿಸಬೇಕಾಗಿದೆ.


  • ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW