ಕನ್ನಡಿಗರು ಮರೆತ ನಾಟ್ಯಭೂಷಣ

– * ಆಕೃತಿ ನ್ಯೂಜ್

ಚಲಿಸುವ ರಂಗಭೂಮಿಯೆಂದೇ ಕರೆಯಲ್ಪಡುತ್ತಿದ್ದ ಪ್ರಖ್ಯಾತ ರಂಗನಟ ನಾಡೋಜ ಏಣಗಿ ಬಾಳಪ್ಪನವರು ಕಣ್ಮರೆಯಾಗಿ ಇದೇ ಜೂನ ೧೮ ಕ್ಕೆ ಒಂದು ವರ್ಷವಾಯಿತು. ಸ್ತ್ರೀ ಪಾತ್ರಧಾರಿಯಾಗಿ, ಪುರುಷ ಪಾತ್ರಧಾರಿಯಾಗಿ, ನಾಟಕ ಕಂಪನಿ ಕಟ್ಟಿ ಅದರ ಮಾಲೀಕರಾಗಿ, ಕರ್ನಾಟಕ, ಮಹಾರಾಷ್ಟ್ರದಾದ್ಯಂತ ಸಂಚರಿಸಿ ನಾಟಕಗಳನ್ನಾಡಿ, ವೃತ್ತಿ ರಂಗಭೂಮಿಗೆ ಗೌರವವನ್ನು ತಂದುಕೊಟ್ಟವರು ಅವರು. ಏಣಗಿ ಬಾಳಪ್ಪನವರು ಕನ್ನಡ ರಂಗಭೂಮಿಯ ಪವಾಡ ಪುರುಷರೇ ಆಗಿದ್ದರು. ವಿಲಾಸ ರಂಗಭೂಮಿಯಲ್ಲಿದ್ದರೂ ಶುದ್ಧ ಶಾಖಾಹಾರಿಗಳಾಗಿದ್ದ ಬಾಳಪ್ಪನವರದು ಶಿಸ್ತುಬದ್ದ ಜೀವನ. ಚಹಾ ಕೂಡ ಕುಡಿಯುತ್ತಿರಲಿಲ್ಲ. ಅವರು ಸ್ಥಾಪಿಸಿದ ಕಲಾ ವೈಭವ ನಾಟ್ಯ ಸಂಘ ನೂರಾರು ವೃತ್ತಿ ರಂಗ ಕಲಾವಿದರಿಗೆ ಆಶ್ರಯ ಕೊಟ್ಟಿತ್ತು. ಅರವತ್ತರ ದಶಕದಲ್ಲಿ ಅವರು ಆಡುತ್ತಿದ್ದ ಜಗಜ್ಯೋತಿ ಬಸವೇಶ್ವರ, ಮಾವ ಬಂದ್ನಪೋ ಮಾವ, ಹಳ್ಳೀ ಹುಡುಗಿ, ಕುಂಕುಮ ಮುಂತಾದ ನಾಟಕಗಳು ಜನಪ್ರಿಯವಾಗಿದ್ದವು. ಅವರ ಕಲಾವಿದೆ ಪತ್ನಿ ಶ್ರೀಮತಿ ಲಕ್ಷ್ಮೀಬಾಯಿ ಅವರ ಕಂಪನಿಯಲ್ಲಿ ಅದ್ಭುತ ನಟಿಯಾಗಿದ್ದರು. ಈ ದಂಪತಿಗಳಿಗೆ ಜನಿಸಿದ ಪುತ್ರನೇ ಏಣಗಿ ನಟರಾಜ. ನಟರಾಜ ಹುಟ್ಟಿದ್ದು ಕಲಾ ವೈಭವ ನಾಟಕ ಕಂಪನಿಯಲ್ಲಿ. ಅಬೆಗಾಲಿಕ್ಕಿದ್ದು ಅದೇ ರಂಗಭೂಮಿಯ ಅಟ್ಟದಲ್ಲಿ. ಬಾಳಪ್ಪನವರು ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗಿಬ್ಬರಿಗೂ ಕರ್ನಾಟಕ ಸರಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ ದೊರೆತಿದೆ. ಇವರ ಪುತ್ರ ಏಣಗಿ ನಟರಾಜ ಅದ್ಭುತ ನಟರಾಗಿ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಹೆಸರು ಮಾಡಿದವರು.

ಒಂದು ನೂರಾ ಮೂರು ವರ್ಷ ಬದುಕಿದ ಬಾಳಪ್ಪನವರ ಜೀವನದಲ್ಲಿ ರಂಗಭೂಮಿಯನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ವೃತ್ತಿ ನಾಟಕ ಕಂಪನಿಯಲ್ಲಿ ಬಾಲ ನಟರಾಗಿ, ತಮ್ಮ ಬದುಕಿನ ಸಂಪೂರ್ಣ ದಿನಗಳನ್ನು ರಂಗಭೂಮಿಗಾಗಿಯೇ ಕಳೆದಿದ್ದ ಬಾಳಪ್ಪನವರನ್ನು ನೆರೆಯ ಮರಾಠಿಯ ಜನ ನೆನಪಿಸಿಕೊಳ್ಳುತ್ತಾರೆ. ಮರಾಠಾ ಸಂಸ್ಕೃತಿ ಸಚಿವರೂ ನೆನಪಿಸಿಕೊಳ್ಳುತ್ತಾರೆ. ಗಡಿನಾಡಿನ ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಕನ್ನಡ ನಾಡಿನ ನೂರಾರು ರಂಗ ಸಂಘಟನೆ ಗಳಿಗೆ, ಅಕಾಡೆಮಿಗಳಿಗೆ, ಸಂಸ್ಕೃತಿ ಇಲಾಖೆಗೆ ಅವರ ನೆನಪಾಗುವುದಿಲ್ಲ. ಅವರ ಮೊದಲ ಪುಣ್ಯತಿಥಿ ಇವರ್ಯಾರಿಗೂ ನೆನಪಿನ ಸಂಗತಿಯೇ ಅಲ್ಲ. ಅದನ್ನು ನೆಪವಾಗಿಟ್ಟುಕೊಂಡು ಬಾಳಪ್ಪನವರ ವೃತ್ತಿ ರಂಗ ಜೀವನವನ್ನು ನೆನಪಿಸುವ ಕಾರ್ಯ ಮಾಡುವುದಿಲ್ಲ. ಸರಕಾರದ ಅನುದಾನಗಳನ್ನು ಹೆಕ್ಕಿಕೊಳ್ಳುವುದರಲ್ಲಿ, ಸರಕಾರದ ಸಾಧನೆಗಳನ್ನು ಹೊಗಳಿ- ಹೊಗಳಿ ರಂಗಿನಾಟ ಆಡುವುದರಲ್ಲೇ ಎಲ್ಲವನ್ನೂ ಮರೆತು ಬಿಟ್ಟಿರುತ್ತಾರೆ. ರಾಜ್ಯದಲ್ಲಿರುವ ರಂಗಾಯಣಗಳು ಪ್ರಚಾರಕ್ಕಾಗಿ ಪ್ರಸಿದ್ಧರ ನಾಟಕಗಳನ್ನು ಆಡುತ್ತ ತಾವೂ ಜಗತ್ಪ್ರಸಿದ್ಧರು ಎಂದು ಆತ್ಮರತಿಯಲ್ಲಿ ತೊಡಗಿಕೊಂಡಿರು ತ್ತಾರೆ. ಅಲ್ಲಿಗೆ ಅವರ ಜೀವನ ಸಾರ್ಥಕ.

ಆದರೆ ಬಾಳಪ್ಪನವರ ತುಂಬು ಕುಟುಂಬ ಅವರನ್ನು ಮರೆತಿಲ್ಲ. ಅದಕ್ಕಾಗಿಯೇ ಕುಟುಂಬದವರೆಲ್ಲ ಸೇರಿ ”ನಾಟ್ಯಭೂಷಣ ಏಣಗಿ ಬಾಳಪ್ಪ ಪ್ರತಿಷ್ಠಾನ” ಮಾಡಿಕೊಂಡಿದ್ದಾರೆ. ಅದರ ವತಿಯಿಂದ ಮೊನ್ನೆ ಸವದತ್ತಿಯಲ್ಲಿ ಕುಟುಂಬದವರೆಲ್ಲ ಸೇರಿ ಬಾಳಪ್ಪನವರ ಸ್ಮರಣೆ ಕಾರ್ಯಕ್ರಮ ಮಾಡಿದರು. ಅದಕ್ಕೆ ಶಾಸಕ ಶ್ರೀ ಆನಂದ ಮಾಮನಿಯವರ ಶ್ರೀ ಸಿ.ಎಂ. ಮಾಮನಿ ಚಾರಿಟೇಬಲ್‌ ಟ್ರಸ್ಟ್‌ ಸಹಕಾರ ಕೊಟ್ಟಿತ್ತು. ನೂರಾರು ಜನ ಬಾಳಪ್ಪನವರ ಅಭಿಮಾನಿಗಳು ಅಂದು ಸೇರಿ ಹೃದಯ ತುಂಬಿ ಅಗಲಿದ ಮಹಾನ್‌ ಕಲಾವಿದನನ್ನು ನೆನಪಿಸಿಕೊಂಡರು.

ನಾಟಕಕಾರ ಹೂಲಿ ಶೇಖರ್‌ ಕಾರ್ಯಕ್ರಮ ಉದ್ಘಾಟಿಸಿದರು. ಬೆಳಗಾವಿಯಿಂದ ಬಂದಿದ್ದ ಖ್ಯಾತ ಸಾಹಿತಿ ಡಾ. ಬಸವರಾಜ ಜಗಜಿಂಪಿ, ರಂಗ ಮಾಹಿತಿಗಾರರಾದ ಡಾ. ರಾಮಕೃಷ್ಣ ಮರಾಠೆ, ನಾಟಕಕಾರ ಡಾ. ಡಿ.ಎಸ್‌.ಚೌಗುಲೆ, ಸಾಹಿತಿ ಶ್ರೀ ಶಿರೀಷ್‌ ಜೋಶಿ, ಕಾದಂಬರಿಕಾರ ಸಾಹಿತಿ ಶ್ರೀ ಯ.ರು.ಪಾಟೀಲ ರಂಗ ಸಂಘಟಕರೂ ಆಡಳಿತಾಧಿಕಾರಿ ಗಳೂ ಆದ ಶ್ರೀ ರವಿ ಕೊಟಾರಗಸ್ತಿ ಅಗಲಿದ ಬಾಳಪ್ಪನವರ ಕುರಿತು ಮಾತನಾಡಿದರು. ಬೈಲ ಹೊಂಗಲ ಶಾಸಕರಾದ ಶ್ರೀ ಮಹಾಂತೇಶ ಕೌಜಲಗಿ, ಮಾಜೀ ಶಾಸಕರಾದ ವಿಶ್ವನಾಥ್‌ ಪಾಟೀಲರು ಅತಿಥಿಗಳಾಗಿದ್ದರು. ಡಾ. ಹನುಮಂತ ಗೌಡರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಾಳಪ್ಪನವರ ಮಕ್ಕಳಾದ ಬಸವರಾಜ ಏಣಗಿ, ಮೋಹನ ಏಣಗಿ, ಸುಭಾಸ ಏಣಗಿ, ಆನಂದ ಏಣಗಿ ಮತ್ತು ಅವರ ಕುಟುಂಬದವರೆಲ್ಲ ಭಾಗವಹಿಸಿದ್ದರು.

ರಂಗ ದೃಶ್ಯಾವಳಿಗಳು

#ಆಕತನಯಸ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW