ವಿಮರ್ಶಕರು, ಲೇಖಕರು ಆದ ಡಾ. ಎಚ್ ಎಸ್ ಸತ್ಯನಾರಾಯಣ ಅವರ ‘ಕಣ್ಣೋಟ’ ಪುಸ್ತಕದ ಕುರಿತು ಕವಿತಾ ಹೆಗಡೆ ಅಭಯಂ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ.
ಪುಸ್ತಕ : ಕಣ್ಣೋಟ
ಲೇಖಕರು : ಡಾ. ಎಚ್ ಎಸ್ ಸತ್ಯನಾರಾಯಣ
ಪ್ರಕಾಶಕರು : ಅಲಂಪು ಪ್ರಕಾಶನ ಮಾಲೂರು
ಬೆಲೆ : ೨೫೦.೦೦
ಅವರ ವಿಮರ್ಶಾ ಲೇಖನಗಳ ಎರಡನೇ ಸಂಕಲನ. ಕನ್ನಡದ ಸಮಕಾಲೀನ ಬರಹಗಾರರಲ್ಲಿ ತಮ್ಮ ವಿಭಿನ್ನ ಹಾಗೂ ಪ್ರಬುದ್ಧ ಶೈಲಿಯ ಬರಹಗಳಿಗೆ ಖ್ಯಾತರಾದ ಲೇಖಕರೊಬ್ಬರ ಪುಸ್ತಕವೊಂದು ಕೈಸೇರಿದ ಹರುಷದಲ್ಲಿದ್ದೇನೆ. ಅತ್ಯುತ್ತಮ ಉಪನ್ಯಾಸಕರೂ ಅದ್ಭುತ ಲೇಖಕರೂ ಆದ ಸತ್ಯನಾರಾಯಣ ಅವರು ತಮ್ಮ ಅಪೂರ್ವ ಲೇಖನಶೈಲಿಯಿಂದ ಕನ್ನಡದ ಪ್ರಮುಖ ವಿಮರ್ಶಕರು ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಅವರು ವಿಜಯ ಕರ್ನಾಟಕದಲ್ಲಿ “ಅನುದಿನ ಕಾವ್ಯ” ಎಂಬ ಅಂಕಣದಲ್ಲಿ ಕನ್ನಡದ ಕವಿತೆಗಳಿಗೆ ಬರೆಯುವ ವಿಶ್ಲೇಷಣೆಯಂತೂ ಅತ್ಯಂತ ಜನಪ್ರಿಯತೆ ಗಳಿಸಿದೆ. ಕನ್ನಡದ ಕಾವ್ಯದ ರುಚಿಯನ್ನು ಪತ್ರಿಕೆಯ ಓದುಗರಿಗೆ ಪ್ರತಿನಿತ್ಯ ಪರಿಚಯಿಸುವ ಅವರ ಶ್ರದ್ಧೆ ಹಾಗೂ ಆಲೋಚನಾ ಕ್ರಮ ಬೆರಗು ಹುಟ್ಟಿಸುತ್ತದೆ.

“ಕಣ್ಣೋಟ” ಅವರ ನಿರಂತರ ಹಾಗೂ ಶಿಸ್ತುಬದ್ಧಾದ ಓದಿನ ಫಲ. ಅವರು ಹಲವಾರು ಕೃತಿಗಳನ್ನು ಓದಿ, ತದನಂತರ ಅವರಲ್ಲಿ ಮೂಡಿಬಂದ ವಿಚಾರಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಇಲ್ಲಿ ದಾಖಲಿಸಿದ್ದಾರೆ. ಹಲವಾರು ಲೇಖಕರ ಕೃತಿಗಳ ವಿಮರ್ಶೆ ಒಂದೇ ಕಡೆ ಸಿಕ್ಕಿದ ಸಂಭ್ರಮವಂತೂ ಓದುಗರಿಗೆ ಖಚಿತ. ಮೂರು ತಲೆಮಾರಿನ ಲೇಖಕರ ಕೃತಿಗಳನ್ನು ತಾಳ್ಮೆಯಿಂದ ಆಳವಾಗಿ ಓದಿ ಬರೆದ ಅವಲೋಕನವನ್ನಿಲ್ಲಿ ಕಾಣಬಹುದು. ಒಂದೇ ಪುಸ್ತಕದಲ್ಲಿ ಹಿರಿಯ ಹಾಗೂ ಕಿರಿಯ ಲೇಖಕರ ಪುಸ್ತಕಗಳ ವಿಮರ್ಶೆ ನಡೆದಿರುವುದು ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿಯನ್ನು ಕೂಡ ಅರಿಯಲು ಸೂಕ್ಷ್ಮವಾಗಿ ನೆರವಾಗುತ್ತದೆ.
ಪರಿವಿಡಿಯಂತೂ ಕನ್ನಡವನ್ನು ಸಮೃದ್ಧವಾಗಿಸಿದ ಹಲವು ಪುಳಕ ಹುಟ್ಟಿಸುವ ಲೇಖಕರ ಹೆಸರುಗಳಿಂದ ಮುಂದಿನ ಸೊಗಸನ್ನು ಸಾರುತ್ತದೆ. ತಿರುಮಲೇಶ್ ಅವರ “ಇದುವರೆಗಿನ ಕಾವ್ಯ”, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಭೈರಪ್ಪನವರ “ಉತ್ತರಕಾಂಡ”, ವಾಸುದೇವ ನಾಡಿಗ್ ಅವರ “ಅನುಕ್ತದ ಕವಿ”, ಬಿ ಜನಾರ್ದನ ಭಟ್ ಅವರ “ಕಲ್ಲು ಕಂಬವೇರಿದ ಹುಂಬ”, ಡುಂಡಿರಾಜ್ ಅವರ “ಹನಿಗವಿತೆಗಳ ಕವಿ” ಕೆಲವು ಉದಾಹರಣೆಗಳಷ್ಟೇ. ಇಂಥ ಹಲವಾರು ಪಕ್ವ ಫಲ ಸಂಪನ್ನ ಹೊತ್ತಿಗೆಯಿದು.

ಹಿರಿಯ, ಕಿರಿಯ ಅಥವಾ ಸಮಕಾಲೀನ ಲೇಖಕರ ಕೃತಿಗಳು ಸತ್ಯನಾರಾಯಣ ಅವರ ಕೈಯಲ್ಲಿ ಆಪ್ತವಾಗಿ ವಿಶ್ಲೇಷಣೆಗೆ ಒಳಗಾಗುವ ಪರಿಯೇ ಸುಂದರ. ಮೆಚ್ಚುವ ಗುಣಗಳನ್ನೂ ದುರ್ಬಲತೆಯನ್ನೂ ನಿರೀಕ್ಷೆಯನ್ನೂ ಅತ್ಯಂತ ಸಂಯಮಭರಿತ ಶೈಲಿಯಲ್ಲಿ ಸೂಚಿಸಿದ್ದು ಗಮನ ಸೆಳೆಯುತ್ತದೆ. ಒಂದು ಸಾರ್ಥಕ ಓದಿಗಾಗಿ ಈ ಪುಸ್ತಕವನ್ನು ಕಾಪಿಟ್ಟುಕೊಂಡು ಬೇಕಾದಾಗ ಬೇಕಾದ ಬರಹಗಾರರ ಕೃತಿಗಳ ಅಧ್ಯಯನ ಮಾಡಲು ಸೂಕ್ತವಾಗಿದೆ. ಇಷ್ಟವಾದರೆ ಆ ಪುಸ್ತಕಗಳನ್ನು ಕೊಳ್ಳಲು ಕೂಡ ಪ್ರೇರೇಪಣೆ ನೀಡುವ ಮಹತ್ವಪೂರ್ಣ ಪುಸ್ತಕವಿದು. ವೈಚಾರಿಕತೆಯೊಂದಿಗೆ ಕನ್ನಡದ ಓದನ್ನು ಗಟ್ಟಿಗೊಳಿಸುವ ಇಂಥ ಪುಸ್ತಕಕ್ಕೆ ಸತ್ಯನಾರಾಯಣ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಈ ಪುಸ್ತಕವಂತೂ ಸಂಗ್ರಹಯೋಗ್ಯ ಅನ್ನುವುದರಲ್ಲಿ ಅನುಮಾನವಿಲ್ಲ. ಪುಸ್ತಕಕ್ಕಾಗಿ ಧನ್ಯವಾದಗಳು. ಮತ್ತೆ ಮತ್ತೆ ಇಂಥ ನೋಟ ಬೀರುತ್ತಿರಿ ಸತ್ಯನಾರಾಯಣ ಸರ್.
- ಕವಿತಾ ಹೆಗಡೆ ಅಭಯಂ
