ಶಕ್ತಿ ದೇವತೆಗಳು ಮೈಮೇಲೆ ಬರುವುದು, ಮಲೆನಾಡಿನಲ್ಲಿ ಬೆಳೆದವರಿಗೆ ಹೊಸದಲ್ಲ. ಕರಾವಳಿಯ ಊರುಗಳಲ್ಲಿ ಬ್ಯಾವರ್ಸಿ, ಹಡಬೆ ಮುಂತಾದವುಗಳು ಯಾವುದೇ ಸೆನ್ಸಾರ್ ಇಲ್ಲದೆ ಯಥೇಚ್ಚವಾಗಿ ಬಳಸಲ್ಪಡುವ ಪದಗಳು. ವಿಚಿತ್ರ ಸದ್ದುಗಳು ಮತ್ತು ಧ್ವನಿಗಳು ಕುರಿತಾದ ಕಥೆಗಳನ್ನು ಕೇಳಿದೇವೆ.ಲೇಖಕ ಮಾಕೋನಹಳ್ಳಿ ವಿನಯ್ ಮಾಧವ್ ಅವರು ತಾವು ಕಂಡು ಅನುಭವಿಸಿದ ಕೋಲ ಮತ್ತು ಕಾಂತಾರ ಸಿನಿಮಾದ ಕುರಿತು ಒಂದು ಸುಂದರ ಲೇಖನ…
ʻನೀನು ನೆನ್ನೆ ಬರಬೇಕಿತ್ತು ಕಣೋ… ಕೊಲ್ಲೂರು ಯಕ್ಷಗಾನ ಇತ್ತು. ಮಹಿಷಾಸುರ ಎಂಟ್ರಿ ನೋಡಬೇಕಿತ್ತು. ಗದ್ದೆಯ ಆ ಕಡೆ ರಬ್ಬರ್ ತೋಟ ಇದೆಯಲ್ಲ, ಅಲ್ಲಿಂದ ಬೆಂಕಿಯನ್ನು ಗಾಳಿಯಲ್ಲಿ ಹಾರಿಸಿಕೊಂಡು ಬಂದ ಅಬ್ಬರಕ್ಕೆ, ಎಲ್ಲರೂ ಹೆದರಿ ಹೋಗಿದ್ದರು,ʼ ಅಂತ ವಾತ್ಸಲ್ಯಕ್ಕ ಹೇಳುವಾಗ, ನಾನು ಮೌನವಾಗಿ ಗದ್ದೆಯ ಮಧ್ಯದಿಂದ ಮನೆಗೆ ಬರುವ ದಾರಿಯನ್ನೇ ನೋಡುತ್ತಿದ್ದೆ.
ಅದೊಂದು ರಮಣೀಯ ದೃಷ್ಯ. ಪುತ್ತೂರಿನ ಸಮೀಪದ ಕಾಣಿಯೂರಿನಿಂದ ಏಳೆಂಟು ಕಿಲೋಮೀಟರ್ ದೂರದಲ್ಲಿರುವ, ಚಾರ್ವಕಕ್ಕೆ ಹೊಂದಿಕೊಂಡಿರುವಂತೆ ಇರುವ ಅರುವಗುತ್ತು ಚಂದ್ರಕಲಕ್ಕನ (ದೊಡ್ಡಮ್ಮನ ಮಗಳು) ಮನೆ. ಮನೆಯ ಭೂತನಿಗೆ ಹೊಸ ಗುಡಿ ಕಟ್ಟಿಸಿ, ಪ್ರತಿಷ್ಠಾಪನೆಯ ಪ್ರಯುಕ್ತ ಒಂದು ವಾರದ ಕಾಲ ಪೂಜೆ, ಭೂತಾರಾಧನೆ ಸಮಾರಂಭ. ಮೂರನೇ ದಿನ ಅಂತ ಕಾಣುತ್ತೆ, ಅಪ್ಪ, ಅಮ್ಮನನ್ನು ಕರೆದುಕೊಂಡು ಹೋಗಿದ್ದೆ.

ಹೋದ ತಕ್ಷಣ ನಾನು ಕೇಳಿದ ಮೊದಲ ಪ್ರಶ್ನೆ: ʻಕೊರಗಪ್ಪ ಎಲ್ಲೀ?ʼ ಅಂತ.
ʻಕೊರಗಪ್ಪ ಹೋದ ವರ್ಷ ತೀರಿ ಹೋದ,ʼ ಎಂದು ಚಂದ್ರಕಲಕ್ಕ ಹೇಳಿದಾಗ, ʻನನಗೆ ಏಕೆ ಹೇಳಲಿಲ್ಲ? ನಾನೂ ಬರ್ತಾ ಇದ್ದೆ,ʼ ಎಂದು ಹೇಳಿದೆ.
ʻನೀನು ಬರ್ತೀಯಾ ಅಂತ ಗೊತ್ತಾಗಲಿಲ್ಲ ಕಣೋ. ಇಲ್ಲದೇ ಹೋಗಿದ್ದರೆ ಹೇಳುತ್ತಿದ್ದೆ,ʼ ಎಂದು ಚಂದ್ರಕಲಕ್ಕ ಹೇಳಿದಾಗ, ನನಗೆ ಏನೋ ಪಿಚ್ಚೆನಿಸಿತು. ಹೋದ ಸಲ ಬಂದಾಗ ಭಾವ ಇರಲಿಲ್ಲ, ಈ ಸಲ ಕೊರಗಪ್ಪ. ಅಂದ ಹಾಗೆ, ಸುಮಾರು ಮೂವತ್ತೈದು ವರ್ಷಗಳ ಕೆಳಗೆ ನನಗೆ ಜೀಪ್ ಡ್ರೈವಿಂಗ್ ಹೇಳಿಕೊಟ್ಟಿದ್ದೇ ಈ ಕೊರಗಪ್ಪ. ಜಯರಾಮ ಭಾವನ ಬಲಗೈ ತರಹ ಇದ್ದ ಮತ್ತು ನನಗೆ ಬಹಳ ಇಷ್ಟವಾಗುತ್ತಿದ್ದ.
ಅರುವಕ್ಕೆ ನಾನೇನೂ ಪ್ರತೀ ವರ್ಷ ಹೋಗುತ್ತಿದ್ದೆ ಅಂತಲ್ಲ. ಆದರೂ, ಹೋದಾಗಲೆಲ್ಲ ಏನೋ ಒಂಥರಾ ನೆಮ್ಮದಿ ಸಿಕ್ಕಿದ ಹಾಗಾಗುತ್ತಿತ್ತು. ಒಂಟಿಯಾಗಿರುವ ಅಕ್ಕನ ಮನೆ, ಮನೆಯ ಹಿಂದುಗಡೆ ಕಾಡು, ಎದುರು ಗದ್ದೆ, ಅದಕ್ಕಿಂತ ಸ್ವಲ್ಪ ಹಿಂದೆ ತೋಟ, ಅವುಗಳನ್ನು ದಾಟಿ ಹೋದರೆ ವರ್ಷವಿಡೀ ಹರಿಯುವ ಕುಮಾರಧಾರ ನದಿ. ಊರು ಬಹಳಷ್ಟು ಬದಲಾವಣೆಗಳನ್ನು ಕಂಡರೂ, ಈ ಮನೆಯ ಮೂಲ ಸ್ವರೂಪ ಮಾತ್ರ ಬದಲಾಗಿಲ್ಲ. ಆದರೂ, ಕೊರಗಪ್ಪ ಇಲ್ಲ ಎನ್ನುವುದು ಏಕೋ ಕೊರೆಯುತ್ತಿತ್ತು.

ಅಷ್ಟರೊಳಗೆ ಭೂತದ ಕೋಲ ಕಟ್ಟುವವರು ತಯಾರಿ ಮಾಡಿಕೊಳ್ಳುವ ಜಾಗದ ಹತ್ತಿರ ಹೋದೆ. ಅದನ್ನು ನೋಡುವುದೇ ಒಂದು ಚಂದ. ತೆಂಗಿನ ಗರಿ ಮತ್ತು ಬಾಳೆ ದಿಂಡಿನಲ್ಲಿ ಅವರು ಮಾಡಿಕೊಳ್ಳುವ ವಿವಿಧ ಅಲಂಕಾರಗಳು ಮತ್ತು ಅವರ ಬಣ್ಣಗಳು ನನಗಂತೂ ಬಹಳ ಇಷ್ಟ. ಕೋಲ ಕಟ್ಟುವವರು ಸಾಧಾರಣವಾಗಿ ಮಾತು ಕಡಿಮೆ. ಪಂಜುರ್ಲಿ, ಜಟ್ಟಿಗ, ಗುಳಗ, ಕ್ಷೇತ್ರಪಾಲ ಮುಂತಾದ ಪದಗಳ ಬಳಕೆ ಕೋಲದ ಸಮಯದಲ್ಲಿ ಯಥೇಚ್ಚವಾಗಿ ಕೇಳಿ ಬರುತ್ತವೆ.
ನಾನು ಮುಂಚೆ ಕೋಲ ನೋಡಿದ್ದರೂ ಸಹ, ಸಂಪೂರ್ಣವಾಗಿ ನೋಡಿರಲಿಲ್ಲ. ನಿಧಾನವಾಗಿ ಒಂದೊಂದೇ ದೈವಗಳ ಆಗಮನವಾಗುತ್ತಿತ್ತು. ಮರುದಿನ ಮಧ್ಯಾಹ್ನದ ಹೊತ್ತಿಗೆ ಗುಳಿಗ ಬರುವ ಸಮಯವಾಗಿತ್ತು. ಅಲ್ಲಿಯವರೆಗೆ ನಾನು ಗುಳಿಗ ಕೋಲವನ್ನು ನೋಡಿರಲಿಲ್ಲ. ಗುಳಿಗ ಏಳುವ ಹೊತ್ತಿಗೆ ಆ ಕಡೆಗೆ ಹೋದ ನಾನು, ಅದು ಅಬ್ಬರಿಸಿ ನುಗ್ಗಿದ ರಭಸಕ್ಕೆ ಬೆಚ್ಚಿಬಿದ್ದೆ. ಫೋಟೋ ತೆಗೆಯಲು ಹಿಡಿದುಕೊಂಡಿದ್ದ ಕ್ಯಾಮೆರಾ, ಕೈಯಲ್ಲಿ ಹಾಗೆಯೇ ಇತ್ತು. ಸಾವರಿಸಿಕೊಂಡು ಫೋಟೋ ತೆಗೆಯುವ ಹೊತ್ತಿಗೆ, ಮಣ್ಣಿನಿಂದೆದ್ದ ಗುಳಿಗ, ಆಳೆತ್ತರಕ್ಕೆ ಚಿಮ್ಮಿತ್ತು. ಅದೇ ಆರ್ಭಟ…ʻವಾ…..ವ್.
ಇಲ್ಲೊಂದು ಜೀವನ. ಬೇಸಿಗೆಯಲ್ಲಿ ಕುಮಾರಧಾರ ಶಾಂತವಾಗಿ ಹರಿಯುತ್ತಿರುತ್ತದೆ. ಚಳಿಗಾಲದಲ್ಲಿ ಮುದ ನೀಡುತ್ತಾ, ಮೈತುಂಬಿ ಹರಿಯುತ್ತದೆ. ಮಳೆಗಾಲದಲ್ಲಿ ಅಬ್ಬರಿಸಿ ಹರಿಯುತ್ತದೆ. ಹಾಗೆಯೇ, ಇಲ್ಲಿ ಜೀವನ ಶಾಂತವಾಗಿ ಹರಿಯುತ್ತಾ, ಮನಸ್ಸಿಗೆ ಮುದಗೊಡುವ ಸಣ್ಣ-ಪುಟ್ಟ ಘಟನೆಗಳೊಂದಿಗೆ ನಡೆಯುತ್ತಿರುತ್ತದೆ. ಭೂತದ ಕೋಲಗಳ ಸಮಯದಲ್ಲಿ ಅಬ್ಬರ, ಭಕ್ತಿಯ ಮಹಾಪೂರವೇ ಇರುತ್ತದೆ. ಕಂಬಳಗಳಲ್ಲಿ ಸಂಬ್ರಮದ ಮಹಾಪೂರ.

ಶಕ್ತಿ ದೇವತೆಗಳು ಮೈಮೇಲೆ ಬರುವುದು, ಮಲೆನಾಡಿನಲ್ಲಿ ಬೆಳೆದ ನಮಗೇನೂ ಹೊಸದಲ್ಲ. ಸುಗ್ಗಿ ಹಬ್ಬಗಳಲ್ಲಿ ಗಣ ಬರುವುದು ಸಾಧಾರಣ. ಆದರೆ, ಸುಗ್ಗಿಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ನನ್ನ ಅಜ್ಜಿ ಮನೆಯಾದ ಸೋಮವಾರಪೇಟೆಯ ನೇಗಳ್ಳೆ-ಕರ್ಕಳ್ಳಿ ದೇವಸ್ಥಾನದಲ್ಲಿ ಶಿವರಾತ್ರಿಯ ಮಾರನೇ ದಿನ, ವೀರಭದ್ರ ಊರ ಹುಡುಗರ ಮೇಲೆ ಬರುತ್ತದೆ. ನಮ್ಮ ಊರಿನ ಶಕ್ತಿ ದೇವತೆಗಳಾದ ಚೌಡಿ, ಮಾರಮ್ಮಗಳ ಹತ್ತಿರ ಹೋಗಲು ಎಲ್ಲರೂ ಹೆದರುತ್ತಾರೆ. ನಮ್ಮೂರ ಮೆಣಸೆಹರ ಮಾರಮ್ಮನ ಸಹವಾಸವನ್ನು ನಮ್ಮ ಕುಟುಂಬದವರು ಬಿಟ್ಟು ಮೂರ್ನಾಲ್ಕು ತಲೆಮಾರುಗಳೇ ಕಳೆದು ಹೋಗಿದೆ. ರಾತ್ರಿಯ ಹೊತ್ತು, ಈ ಸ್ಥಳಗಳಲ್ಲಿ ವಿಚಿತ್ರ ಸದ್ದುಗಳು ಮತ್ತು ಧ್ವನಿಗಳು ಬರುವ ಬಗ್ಗೆ ಕಥೆಗಳನ್ನು ಕೇಳಿದ್ದೇನೆ. ಆದರೆ, ನನಗೆ ಯಾವತ್ತೂ ಕೇಳಿಸಿಲ್ಲ. ಪ್ರತೀ ಕಲ್ಲುಗಳಿಗೂ ಅವುಗಳದೇ ಆದ ಸ್ಥಳ ಪುರಾಣ ಇರುತ್ತದೆ.
ಆದರೆ, ನಮ್ಮ ಮಲೆನಾಡಿನ ಆಚರಣೆಗಳು ಕರಾವಳಿಯ ಕೋಲದಷ್ಟು ವರ್ಣರಂಜಿತವಾಗಿರುವುದಿಲ್ಲ. ಹೆಚ್ಚಿನ ಭೂತಾರಾಧನೆಗಳು ಇಲ್ಲಿ ಹಗಲು ಹೊತ್ತಿನಲ್ಲಿ ನಡೆದರೆ, ಭೂತದ ಕೋಲಗಳು ಹಗಲು-ಇರುಳೆನ್ನದೆ ನಡೆಯುತ್ತವೆ. ಯಾವುದೇ ರಾಜ್ಯದ ಸಂಸ್ಕೃತಿಯ ಪ್ರಚಾರಕ್ಕೆ ಅಲ್ಲಿನ ವರ್ಣರಂಜಿತ ಕಲೆಗಳನ್ನು ಉಪಯೋಗಿಸುತ್ತಾರೆ. ಆದರೆ ಭೂತದ ಕೋಲವನ್ನು ಉಪಯೋಗಿಸಿದ್ದು ನಾನು ಎಲ್ಲಿಯೂ ಕಂಡಿಲ್ಲ. ಏಕೆಂದರೆ, ಕೋಲ ಕಟ್ಟುವವರು ಪಾಲಿಸುವ ʻನೇಮʼಗಳು. ಥೇಟ್ ಕಾಂತಾರದ ಗುರುವನಂತೆ. ದೈವದ ಕೆಲಸಕ್ಕಲ್ಲದೆ ಯಾವ ಕಾರಣಕ್ಕೂ ಕೋಲ ಕಟ್ಟಲು ಒಪ್ಪುವುದಿಲ್ಲ. ಅವರು ಬದುಕುವ ನೀತಿಯ ಬದುಕನ್ನು ನನಗೆ ಊಹಿಸಲೂ ಅಸಾಧ್ಯ. ಸಾಧಾರಣ ಜೀವನದಲ್ಲಿ ತಣ್ಣಗೆ ಇರುವ ಇವರು, ಕೋಲ ಕಟ್ಟಿದಾಗ ಅವರ ಉನ್ಮಾದ, ಆವೇಶ ಮತ್ತು ಅಬ್ಬರಗಳನ್ನು ನೋಡಿದಾಗ, ನಾವು ಬೇರೆ ದಿನ ನೋಡುತ್ತಿದ್ದ ವ್ಯಕ್ತಿಗಳು ಇವರೇನಾ ಎಂದೆನಿಸುತ್ತದೆ. ಕೆಲವೊಮ್ಮೆ ರಿಶಭ್ ಶೆಟ್ಟಿಯ ಮೇಲೆ ಬಂದ ಗುಳಗದಂತೆ, ಅಬ್ಬರಿಸಿದಾಗ, ಕಾಂತಾರದಲ್ಲಿಯೇ ಮೊದಲ ಬಾರಿಗೆ ಕೋಲವನ್ನು ನೋಡಿದವರು ಗಾಭರಿಯಾಗುವಂತೆ ನಮಗೂ ಆಗುತ್ತದೆ.
ಕರಾವಳಿಯಲ್ಲಿ ಐದು ವರ್ಷ ಓದಿದ ನನಗೆ ಕಾಂತಾರ ಚಿತ್ರ ಒಂದು ಬದುಕಾಗಿ ಕಂಡಿತೇ ಹೊರತು, ಚಲನಚಿತ್ರವಾಗಿ ಅಲ್ಲ. ಏಕೆಂದರೆ, ಅದು ದಂತಕಥೆಯಾಗಿ ಆರಂಭವಾಗಿದ್ದರೂ, ಅದರಲ್ಲಿ ತೋರಿಸಿರುವ ಜೀವನ ನೈಜವೇ. ಅಲ್ಲಿನ ಜನರ ಜೀವನ ಮತ್ತು ತೊಂದರೆಗಳನ್ನು ನಾನಂತೂ ಪ್ರತ್ಯಕ್ಷವಾಗಿ ನೋಡಿದ್ದೇನೆ. ಶಿವ, ರಾಂಪಣ್ಣ ಅಥವಾ ಅರಣ್ಯಾಧಿಕಾರಿಗಳು ನನಗೆ ಹೊರಗಿನವರಂತೆ ತೋರಲಿಲ್ಲ. ಆ ಚಿತ್ರದಲ್ಲಿ ಬರುವ ಬ್ಯಾವರ್ಸಿ, ಹಡಬೆ ಮುಂತಾದ ಪದಗಳನ್ನು ಯಾವುದೇ ಸೆನ್ಸಾರ್ ಇಲ್ಲದೆ ಯಥೇಚ್ಚವಾಗಿ ಉಪಯೋಗಿಸಿದ್ದೇನೆ. ಯಾವುದೇ ಪಾತ್ರದಲ್ಲಿ ಕೃತ್ರಿಮತೆ ಇಲ್ಲ. ಅಂತಹ ಪಾತ್ರಗಳೆಲ್ಲವೂ ಕರಾವಳಿಯ ಊರುಗಳಲ್ಲಿ ಸಹಜವಾಗಿ ಇರುತ್ತಾರೆ. ಈ ಪಾತ್ರಗಳೆಲ್ಲವೂ ಸೇರಿದಾಗ ಮಾತ್ರ ಅಲ್ಲಿಯ ಜೀವನ. ಓಂಥರಾ, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಇದ್ದ ಹಾಗೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ.

ಕಾಂತಾರ ಚಿತ್ರವನ್ನು ನೋಡಲು ಇನ್ನೊಂದು ಕಾರಣವಿತ್ತು. ಲೀಲಾಳು ಈಟಿಯನ್ನು ಜಾವೆಲಿನ್ ನಂತೆ ಎಸೆದಾಗ ಮುಗುಳ್ನಕ್ಕಿದ್ದೆ. ಸಪ್ತಮಿಯನ್ನು ಕಡೆಯ ಸಲ ನೋಡಿದ್ದು ಅವಳು ಹತ್ತನೇ ತರಗತಿಯಲ್ಲಿ ಇದ್ದಾಗ ಅಂತ ಕಾಣುತ್ತೆ. ಅವಳ ತಂದೆ ಉಮೇಶ್ ಮತ್ತು ನಾನು ಹಳೇ ಸ್ನೇಹಿತರು. ನ್ಯಾಷನಲ್ ಸ್ವಿಮ್ಮಿಂಗ್ ತರಬೇತಿ ಹೇಗೆ ನಡೆಯುತ್ತಿದೆ? ಎಂದು ಕೇಳಿದಾಗ, ಮುಗ್ದವಾಗಿ ನಕ್ಕಿದ್ದಳು. ʻಎಷ್ಟೇ ಕಷ್ಟವಾದರೂ ಪರವಾಗಿಲ್ಲ ಉಮೇಶ್, ಇವಳನ್ನು ಇಂಟರ್ ನ್ಯಾಷನಲ್ ಸ್ವಿಮ್ಮರ್ ಮಾಡಬೇಕು,ʼ ಅಂತ ಹೇಳಿದ್ದೆ. ಆದರೆ, ಮುಂದಿನ ವರ್ಷ ವಿಜ್ಞಾನ ತೆಗೆದುಕೊಂಡ ಮೇಲೆ, ಈಜುವುದು ಕಡಿಮೆಯಾಗಿದೆ ಅಂತ ಉಮೇಶ್ ಹೇಳಿದರು. ʻಅದೇನೋ ಮಾಡಬಹುದು ವಿನಯ್, ಆದರೆ, ಓದೂ ಇಲ್ಲ ಅದೂ ಇಲ್ಲ ಅಂತ ಆಗಬಾರದು ನೋಡಿ,ʼ ಅಂತ ಉಮೇಶ್ ಹೇಳಿದ್ದರು.
ಅಲ್ಲಿಂದಾಚೆ ಸಪ್ತಮಿಯನ್ನು ನೋಡಿಲ್ಲ. ಉಮೇಶ್ ಜೊತೆ ಒಡನಾಟ ಮುಂದುವರೆದರೂ, ಹೊರಗಡೆ ಮಾತ್ರ. ಮುಂದೆ ಸಪ್ತಮಿಯ ಬಗ್ಗೆ ಕೇಳಿದಾಗ, ಅವಳು ಚಲನಚಿತ್ರದಲ್ಲಿ ನಟಿಸಿ, ಅವಾರ್ಡ್ ಗೆದ್ದಳೆಂದು ಗೊತ್ತಾಯಿತು. ಸಪ್ತಮಿಯ ಮುಂದೆ ʻಗೌಡʼ ಎನ್ನುವ ಪದವೂ ಸೇರಿಕೊಂಡಿತ್ತು. ಆ ಸಿನೆಮಾ ನೋಡಲಾಗಲಿಲ್ಲ. ಈ ಸಿನೆಮಾದಲ್ಲಿ ನೋಡುವಾಗ, ನಮ್ಮ ಪುಟ್ಟ ಸಪ್ತಮಿ, ಎದೆಯೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಕರಾವಳಿ ಸಂಸ್ಕೃತಿ ಅವಳಿಗೆ ಎಷ್ಟು ಅರ್ಥವಾಗಿದೆಯೋ ಗೊತ್ತಿಲ್ಲ, ಆದರೆ ಲೀಲಾಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾಳೆ ಅನ್ನಿಸಿತು. ನಾವು ಕಾಲೇಜಿನಲ್ಲಿ ಓದುವಾಗ, ಕಣ್ತುಂಬಾ ಕನಸುಗಳನ್ನು ಹೊತ್ತುಕೊಂಡು, ಕಾಲೇಜಿನಲ್ಲಿ ಓಡಾಡುತ್ತಿದ್ದ ಹುಡುಗಿಯರಲ್ಲಿ ಒಬ್ಬಳು ಅನ್ನಿಸಿತು. ಆದರೂ, ಅವಳು ನನಗೆ ಪುಟ್ಟ ಸಪ್ತಮಿಯೇ.
ಕಾಂತಾರ ಒಂದು ದಂತ ಕಥೆ ಅಥವಾ ಚಲನಚಿತ್ರ ಎಂದು ನನಗೆ ಅನ್ನಿಸಲಿಲ್ಲ. ಅದೊಂಥರಾ ಆತ್ಮಶೋಧನೆ. ಆತ್ಮಶೋಧನೆಗೆ ಹೊರಟಾಗ ಬಹಳಷ್ಟು ಪ್ರಶ್ನೆಗಳು ಏಳುತ್ತವೆ. ಅರ್ಥವಾಗದ ವಿಷಯವನ್ನು ನಾವು ಸಾರಾಸಗಟಾಗಿ ಟೀಕಿಸುತ್ತೇವೆ. ಕರಾವಳಿ ಬದುಕಿನ ಆತ್ಮ ಅರಿವಾಗದಿದ್ದವರಿಗೆ ಬಹಳಷ್ಟು ಪ್ರಶ್ನೆಗಳು ಏಳುವುದು ಸಹಜ. ಆದರೆ, ನಂಬಿಕೆಗೆ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಧ್ಯವಿಲ್ಲ. ದಂತ ಕಥೆಯಿಂದ ಆರಂಭವಾದ ಈ ಚಲನಚಿತ್ರವನ್ನು ಮುಕ್ತ ಮನಸ್ಸಿನಿಂದ ನೋಡಿದಾಗ, ಯಾವುದೋ ಅದ್ಭುತಯಾನದಂತೆ ಅನ್ನಿಸುತ್ತದೆ. ಬೆಲ್ ಬಾಟಮ್, ಕಿರಿಕ್ ಪಾರ್ಟಿ, ಗರುಡ ಗಮನ, ವೃಷಭ ವಾಹನ ಚಿತ್ರಗಳ ನಂತರ, ರಿಶಭ್ ಶೆಟ್ಟಿ ನನ್ನ ಮನಸ್ಸನ್ನು ಮತ್ತೊಮ್ಮೆ ತಟ್ಟಿ ಹೋಗಿದ್ದಾರೆ…
- ಮಾಕೋನಹಳ್ಳಿ ವಿನಯ್ ಮಾಧವ್ (ಪತ್ರಕರ್ತರು,ಲೇಖಕರು, ವಿಮರ್ಶಕರು) ಬೆಂಗಳೂರು
