ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)

ಮಾನ್ಯ ಕವಿ ವೆಂಕಟೇಶಮೂರ್ತಿಯವರ ಪ್ರಕೃತಿಯ ಸೂಕ್ಷ್ಮಾವಲೋಕನ ಹಾಗೂ ಅದರೊಳಗೂ ತೂರಿ ಬಿಡುವ ‘ಕಾಯುವ ದೈವ’ವನ್ನು ಪ್ರಸ್ತಾಪಿಸುವ ಅಧ್ಯಾತ್ಮಿಕತೆ. ಡಾ. ಎಚ್. ಎಸ್. ವೆಂಕಟೇಶಮೂರ್ತಿವರ ಅವರ ‘ಭಾವದಲ್ಲಿ ಬೆರೆತು ಹೋದ ಕಾವ್ಯ ಯಾನ’ದ ಕುರಿತು ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರು ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು ಅಂಕಣದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಯಾಕೋ ಗೊತ್ತಿಲ್ಲಾ…ಹಾಡಿನ ಮಾಧುರ್ಯವೋ… ಸಾಹಿತ್ಯದ ಗಟ್ಟಿತನವೋ….ಈ ಸಾಲುಗಳು ಕಿವಿಗೆ ಬಿದ್ದಾಗ….ಭಾವ ಲೋಕ ವಿಹಾರಿಯಾಗಿಬಿಡುತ್ತೇನೆ ನಾನು..

ಕವಿದ ಇರುಳ ಹಾದಿಯಲ್ಲಿ ನಿನ್ನದೇ ಆಲಂಬ
ನನ್ನ ಬೊಗಸೆ ತುಂಬ ನಗುವ
ನೀನು ಚಂದ್ರಬಿಂಬ
***
ತೋಳ ತೆಕ್ಕೆಯಲ್ಲಿ ಸಿಕ್ಕಿತು ಒಂದು ಮಿಂಚುಬಳ್ಳಿ
ಬೆಳಕಿನಾಟವೆಲ್ಲ ಒಂದು ಕವಿದ ಇರುಳಿನಲ್ಲಿ….

ಅರ್ಥವನ್ನು ಆರೋಪಿಸಿಕೊಳ್ಳಬೇಕೋ…ಇರುವುದನ್ನೇ ಗ್ರಹಿಸಿಕೊಳ್ಳಬೇಕೋ..ಮಥಿತಾರ್ಥವನ್ನು ಪಾತಾಳಗರುಡ ಹಾಕಿ ಹೊರತೆಗೆಯಬೇಕೋ ತಿಳಿಯದ ಸಂವೇದನೆ…ಈ ಸಾಲುಗಳಿಗೆ…. !

ಇನ್ನೊಂದು ಕವನ:

‘ಹಸಿರೋ ಹಸಿರಿನ ಹೆಸರಿಲ್ಲದ ಮರ
ಹರಿಯದಿರೋ ಅದರೆಲೆಯ
ಆ ನೆಲೆಯಲ್ಲೇ ಮಲಗಿರಬಹುದು ನಮ್ಮನು ಕಾಯುವ ದೈವ’

ಈ ನಾಲ್ಕು ಸಾಲುಗಳನ್ನೇ ಆರಿಸಿಕೊಂಡು ಮಾನ್ಯ ಕವಿ ವೆಂಕಟೇಶಮೂರ್ತಿಯವರ ಪ್ರಕೃತಿಯ ಸೂಕ್ಷ್ಮಾವಲೋಕನ, ಹಾಗೂ ಅದರೊಳಗೂ ತೂರಿ ಬಿಡುವ ‘ಕಾಯುವ ದೈವ’ವನ್ನು ಪ್ರಸ್ತಾಪಿಸುವ ಅಧ್ಯಾತ್ಮಿಕತೆ. ಎಂತಹ ಸೊಗಸು ನೋಡಿ. ಅವರ ಪ್ರಕೃತಿಪ್ರಿಯತೆಯ ಜಾಯಮಾನ ಇಲ್ಲಿ ಸುವ್ಯಕ್ತವಾಗುವುದಿಲ್ಲವೇ….?

ಅವರ ಅನುರಾಗ ಗೀತೆಯೊಂದು ಹೀಗಿದೆ…

‘ನೀ ಬಳಿ ಬಂದಾಗ /ಹಾಡಿಗಿಳಿದು ರಾಗ
ಕಣ್ಣ ತುಂಬ ಚಂದ್ರಬಿಂಬ
ಹುಣ್ಣಿಮೆ ಬೆಳಕೀಗ….’

ಹೌದಲ್ಲ ! ಏನೂ ಸರ್ಕಸ್ ಮಾಡದೆಯೇ ಈ ರಾಗ ಎಷ್ಟು ಸರಾಗ….!
ಕನ್ನಡ ಭಾಷೆಯ ಉಳಿವಿನ ಬಗೆಗೆ ಅವರ ತಳಮಳ ಹೇಗೆ ವ್ಯಕ್ತಗೊಂಡಿದೆ ನೋಡಿ….

‘ಪರಭಾಷೆಯ ಬದಲು ಕನ್ನಡ ನುಡಿ ತೊದಲು
ಎಳೆನಾಲಿಗೆ ಮೇಲೆ ವರ್ಣಾಕ್ಷರ ಮಾಲೆ
ಅಮ್ಮಾ ಉಳಿದೀತೇ ಕಳವಳಿಸಿದೆ ಗೀತೆ….’

ಯಾವ ಗೂಢವೂ ಇಲ್ಲದೆ ತಮ್ಮ ಕಾಳಜಿಯನ್ನು ನೇರವಾಗಿ ತೋಡಿಕೊಂಡಿದ್ದಾರೆ ಕವಿ….
ಅದನ್ನು ಬೆಳೆಸುವ ವಿಧಾನವನ್ನೂ ಅವರೇ ಚಿಂತಿಸಿದ್ದಾರೆ…

‘ಬೇರ ಮಣ್ಣಿಗೆ ಊರಿ ಬೆರಳು ಬಾನಿಗೆ ತೂರಿ
ಹರೆಹರೆಗೆ ಲಕ್ಷಕುಡಿ ವೃಕ್ಷದೀಪ
ಈ ನಾಡ ಮಣ್ಣಿನಲ್ಲಿ ಕನ್ನಡದ ಕಣ್ಣಿನಲ್ಲಿ
ಆತ್ಮ ಸಾಕ್ಷಾತ್ಕಾರಿ ದಾರಿದೀಪ’

ಆತ್ಮ ಸಾಕ್ಷಾತ್ಕಾರವೇ ದಾರಿದೀಪವಾಗಬೇಕು…ಆಗ ಮಾತ್ರ ಹರೆಹರೆಗೆ ಲಕ್ಷಕುಡಿ ವೃಕ್ಷ ದೀಪ ಬೆಳಗುತ್ತದೆ.ಬೇರನ್ನು ಮಣ್ಣಿಗೆ ಊರಿ…ಬೆರಳನ್ನು ಬಾನಿನೆಡೆಗೆ ತೂರಬೇಕು.’ಘನವಾದ ಉದ್ದೇಶ….ಮಣ್ಣಿನ ಸಖ್ಯ’ ಎರಡೂ ಮೇಳೈಸಿರುವ ಪ್ರಯತ್ನ ಸಾಗಬೇಕು…

ಭಾವೈಕ್ಯ ಗೀತೆಗಳೂ ಎಷ್ಟು ಸೊಗಸಾಗಿವೆ ಇಲ್ಲಿ….

ಐದು ಬೆರಳು ಸೇರಿ ಒಂದು ಮುಷ್ಠಿಯು
ಹಲವು ಮಂದಿ ಸೇರಿ ಒಂದು ಸಮಷ್ಠಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಸೇರಿ ಹಾಡಿದಾಗ ಜಯವು ಗೀತೆಗೆ
ಭರತಮಾತೆಗೆ /ಭರತಮಾತೆಗೆ//
*
‘ಸುರಿಯುವ ಮಳೆ ಕೊರೆಯುವ ಚಳಿ
ಉಸಿರೊತ್ತುವ ಎತ್ತರದಲ್ಲಿ
ಮುಷ್ಠಿಯಲ್ಲಿ ಜೀವ ಹಿಡಿದು
ಬಾಂದಳಕ್ಕೆ ತೂರಿದಂಥ
ನಾಡಿಗಾಗಿ ಹೋರಿದಂಥ
ಪರಮ ಧೀರರು ನಮ್ಮ ವೀರ ಯೋಧರು…
ಸಿಡಿ ಗುಂಡಿಗೆ ಜಗ್ಗದಂಥ
ಮೃತ್ಯು ಮುಖಕ್ಕೆ ನುಗ್ಗಿದಂಥ
ಏಕಾಗ್ರದ ‘ಜೀವದೀಪ’
ಆಕಾಶಕೆ ತೂರಿದಂಥ
ಮುಗಿಲೆತ್ತರ ಏರಿದಂತ
ಪರಮ ಧೀರರು
ನಮ್ಮ ವೀರ ಯೋಧರು…

ದೇಶ ಕಾಯುವ ವೀರಯೋಧರ ಪರಾಕ್ರಮ ಇಲ್ಲಿ ಹೇಗೆ ಮೂಡಿಬಂದಿದೆ ನೋಡಿ..
*
ಅವರು ಹದಿಹರೆಯದವರ ಸಮಗ್ರ ನಾಡಿಮಿಡಿತವನ್ನು ಸೆರೆ ಹಿಡಿದಿರುವ ‘ಹುಚ್ಚು ಕೋಡಿ ಮನಸು’ ತಲ್ಣಣಗೊಳಿಸದಿರುವ ವ್ಯಕ್ತಿಗಳೇ ಇಲ್ಲವೇನೋ. ಹಾಗೆಯೇ ಶಿಶು ಗೀತೆಗಳ ನಾಡಿಮಿಡಿತವನ್ನು ಅರಿತ ಬಲ್ಲಿದ ಇವರು ..ಒಂದೇ ಒಂದು ಗೀತೆಯನ್ನು ಇಲ್ಲಿ ಉದ್ಧರಿಸಲು ಇಚ್ಛಿಸುತ್ತೇನೆ.

‘ಹೂವಿಗೆ ರೆಕ್ಕೆಯ ಕಟ್ಟಿ ಹಾರಿಸುವೆನು ಮೇಲೆ
ಬರೆಯುವೆ ನಾನು ಹಕ್ಕಿಯ ಸಾಲಲಿ
ಚಂದಿರನಿಗೆ ಓಲೆ

ಚಂದಿರ ಮಾಮ ಚಕ್ಕುಲಿಮಾಮ
ತಾ ಮುತ್ತಿನ ಗಿಂಡಿ
ಬೇಕಾದಷ್ಟಿದೆ ಅಡುಗೆ ಮನೆಯಲಿ
ನಿನ್ನಷ್ಟದ ತಿಂಡಿ

ಓಡುವುದೇಕೋ ರಾತ್ರಿಯ ಛಳಿಯಲಿ
ಒಬ್ಬನೇ ಬಾನೊಳಗೆ
ಉಣ್ಣೆಯ ಕೋಟು ಕುಲಾವಿ ಕೊಡುವೆ
ಬಾರೋ ನೀ ಬಳಿಗೆ

ಮೂಡಲ ಸೂರ್ಯ ಮೂಡೋ ಮೊದಲು
ಕಳಿಸುವೆ ನಾನಿನ್ನ
ಪತ್ರವನೋದಿ ಮರೆಯದೆ ಬರೆಯೋ ಮಾರುತ್ತರವನ್ನ’

ಇದರೊಂದಿಗೆ ಕಥನ ಗೀತೆಗಳು ,ನಾಟಕಗಳು,ಕವಿಸೂರದಾಸರಿಂದ ಪ್ರಭಾವಿತವಾದ ಕೃಷ್ಣನ ಬಾಲಲೀಲೆಗಳ ಸೊಗಸಾದ ವರ್ಣನೆ ವೆಂಕಟೇಶಮೂರ್ತಿಯವರ ಹಸುಳೆತನದ ಮನೋಭಾವವನ್ನು ಕನ್ನಡಿಸುತ್ತವೆ…

ಇಂದು ನಮ್ಮನ್ನಗಲಿದ ಈ ಗಣ್ಯ ಕವಿಗೆ ಅವರದೇ ಕವಿತೆಯೊಂದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಸಲ್ಲಿಸುತ್ತಿದ್ದೇನೆ..

ಊರೇ ಉರಿದರು ಬೆಂಕಿಯ ಆರಿಸೆ ಕಣ್ಣಲಿ ನೀರುಂಟು/
ಧಾರಾಕಾರ ಸುರಿದರು ಮಳೆಯು ಕಾಯೋ ಸೂರುಂಟು//

ಗುರಿಯೇ ಇಲ್ಲದ ದಾರಿಯ ತುದಿಗೆ
ಹೊಸ ಊರಿನ ನಿರ್ಮಾಣ/
ಕನಸಿನ ಮುಕ್ತಿಗೆ ಕಣ್ಣಿನ ಧ್ಯಾನ
ಇಡೀ ಜೀವಮಾನ//

ಕತ್ತಲು ದಾಹಕೆ ಬೆಳಕಿನ
ಬೊಗಸೆ
ಒತ್ತುವ ಇರುಳಿನಲಿ/
ಹೂವಿನ ಮುಕ್ತಿಗೆ ಬೇರಿನ ತಲ್ಲಣ
ನೋಯುವ ಕರುಳಿನಲಿ//

ಮುಚ್ಚಿದ ಬಾಗಿಲು ಬಿಚ್ಚಲು ಕಾದಿದೆ
ಕಾಣದ ಕೀಲಿಯ ಕೈ/
ಕುಸಿದರು ಬಾನು ಆತುಕೊಳ್ಳಲಿದೆ
ಕೆಳಗಡೆ ಮಣ್ಣಿನ ಮೈ//

ಅಗ್ನಿ ಪರ್ವತದ ನೆತ್ತಿಯ ಮೇಲೆ
ಹುಣ್ಣಿಮೆ ಚಂದ್ರನ ದಾರಿ/
ಸೇರಲೇಬೇಕು ದೂರದ ಊರು ಮುಳುಗಿದ ದೋಣಿಯನೇರಿ//

ಎಂತಹ ದಾರ್ಶನಿಕತೆಯಿದ್ದರೂ ಎಂತಹ ಮುಂಗಾಣ್ಕೆಯಿದ್ದರೂ ನಾವು ತೆರಳಬೇಕಾದ ಅಂತಿಮ ನಿಲ್ದಾಣ ಮಾತ್ರ ನಮ್ಮ ಊಹೆಗೂ ನಿಲುಕದ್ದು.ಇದೇ ಬಾಳಿನ ವೈಚಿತ್ರ್ಯ. ಕ್ಷಣ ಕ್ಷಣದ ಬಾಳಿನ ಪುಟಗಳನ್ನು ಅತ್ಯಂತ ಬೆರಗಿನಿಂದ ತೆರೆದುನೋಡಿದ ಕವಿ, ಇಂದು ಅವರ ಸಂದೇಹಗಳನ್ನು ನಮ್ಮ ಮುಂದೆ ಚೆಲ್ಲಿ ಬಾರದ ಲೋಕದತ್ತ ಪಯಣಿಸಿರುವುದು..ನಮಗೂ ಒಂದು ಎಚ್ಚರವೇ ಸರಿ…ಹೌದು ನಾವು ಈ ವಿಲಯಕಾರಿ ಬದುಕಿನ ಕ್ಷಣಕ್ಷಣವನ್ನೂ ಬದುಕಿ ಬಿಡಬೇಕು ಅಲ್ಲವೇ….?

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW