ಸ್ನೇಹದ ನಿರ್ವಹಣೆ ಅಷ್ಟು ಸುಲಭವೆ?. ತಾನು ಸಂತೋಷಪಡುವ ಪ್ರತಿ ಘಳಿಗೆಯಲ್ಲೂ ಸ್ನೇಹಿತರ ನೆನಪಾಗುತ್ತದೆ. ಅವರಿಂದ ಅಗಲುವ ಸಂದರ್ಭದಲ್ಲಿಯಂತೂ ಅನಾಥಪ್ರಜ್ಞೆ ಕಾಡುತ್ತದೆ. ಸ್ನೇಹಿತ ಕುರಿತು ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ಅರ್ಥಪೂರ್ಣವಾಗಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
‘ಕಷ್ಟದಲಿ ಸುಖದಲ್ಲಿ
ನೋವು ನಲಿವುಗಳಲ್ಲಿ
ಒಡನೆ ಬರುವನು
ಗೆಳೆಯ ನೆರಳಾಗಿ…
ಬಾಳ ಬಿಸಿಲಿನ ಹಾದಿಗೆ
ಕೊಡೆಯಾಗಿ…’
ಗೆಳೆಯನೋ ಗೆಳತಿಯೋ ನೀಡುವ ಸ್ನೇಹದ ಆಸರೆಯಿಂದಾಗಿ ಆ ಬಂಧುತ್ವಕ್ಕೆ ವಿಶೇಷ ಅರ್ಥ, ಮಹತ್ವಗಳಿವೆ. ಅದು ಚಿರ ಸಂವೇದಿ. ತನ್ನ ಹಿತವನ್ನು ಬಲಿಕೊಟ್ಟಾದರೂ ಸ್ನೇಹದ ಬೆಸುಗೆಯನ್ನು ಉಳಿಸಿಕೊಳ್ಳುವ ಔದಾರ್ಯ ಈ ಬಾಂಧವ್ಯಕ್ಕೆ ಇರುತ್ತದೆ.
ಮಹಾಭಾರತದ ಲೋಕೈಕವೀರರೆಲ್ಲರ ಧರ್ಮಪತ್ನಿಯಾಗಿದ್ದರೂ, ತನ್ನ ಮಾನವನ್ನು ಕಾಪಾಡಿಕೊಳ್ಳಲು ಹತಾಶಳಾದ ದ್ರೌಪದಿ, ಕೊನೆಗೆ ತುಂಬಿದ ರಾಜಸಭೆಯಲ್ಲಿ ತನ್ನ ಮಾನ ರಕ್ಷಣೆಗಾಗಿ ಅಂತಿಮವಾಗಿ ಮೊರೆಹೋಗುವುದು ಶ್ರೀಕೃಷ್ಣನನ್ನೇ. ಏಕೆಂದರೆ ಅವಳ ಪ್ರಾರ್ಥನೆ ಆಲಿಸಿದಾಗಲೆಲ್ಲ ಸಹಾಯಹಸ್ತ ನೀಡಿದ ಆಪದ್ಬಂಧು ಕೃಷ್ಣ…ಸದಾ ಅವಳನ್ನು ಗೆಳತಿ ಎಂದೇ ಸಂಬೋಧಿಸುತ್ತಿದ್ದ.

ಗೆಳೆತನವನ್ನು ನಿಭಾಯಿಸುವಾಗ ಎದುರಾಗುವ ಸವಾಲುಗಳು ಒಂದೆರಡಲ್ಲ. ‘ಎರಡು ದೇಹ ಒಂದೇ ಆತ್ಮಗಳೆಂದು’ ಒಪ್ಪಿಕೊಂಡರೂ… ಜನ್ಮಜಾತವಾಗಿ ಬಂದ ಗುಣಗಳ ಅಂತರ ಹಾಗೂ ಭಿನ್ನ ಅಭಿರುಚಿಗಳು ಅವರ ನಡುವೆ ಇದ್ದೇ ಇರುತ್ತದೆ. ಅದು ಮಾನಸಿಕವಾಗಿ ಹಲವು ಬಾರಿ ಅರಿಯದಂತೆಯೇ ತ್ರಸ್ತತೆಯನ್ನೂ ಉಂಟು ಮಾಡುವುದು ಸುಳ್ಳಲ್ಲ.
ಕೃಷ್ಣ ಬಾಲ್ಯದ ಗೆಳೆಯನಾದರೂ, ಆತ ರಾಜನಾದ ನಂತರ ಕುಚೇಲನಿಗೆ ತನ್ನ ಬಡತನದ ಸ್ಥಿತಿಯನ್ನು ದ್ವಾರಕಾಧಿಪತಿ ಕೃಷ್ಣನ ಎದುರು ಪ್ರದರ್ಶಿಸಲು ಮನಸ್ಸು ಒಪ್ಪಲಿಲ್ಲ. ಸ್ವಾಭಿಮಾನದ ವ್ಯಕ್ತಿತ್ವ ನೇರವಾಗಿ ಅವನ ಸಹಾಯ ಪಡೆಯಲು ನಿರಾಕರಿಸುತ್ತದೆ.ಆದರೆ ತನ್ನ ಅಂತಸ್ತು, ತನ್ನ ಘನತೆಯನ್ನು ಉತ್ತುಂಗದಲ್ಲಿ ಪ್ರದರ್ಶಿಸಿದ್ದರೂ ಅದರಿಂದ ಯಾವ ವ್ಯತ್ಯಾಸವೂ ಆಗದ ಶ್ರೀಕೃಷ್ಣನ ಸರಳತೆ ಅವರ ಭೇಟಿಯನ್ನು ಎಷ್ಟೊಂದು ಹಾರ್ದಿಕವಾಗಿಸುತ್ತದೆ…! ಹಾಗೂ ಲೋಕೋತ್ತರವಾಗಿಸುತ್ತದೆ ಎಂಬುದೇ ಇಲ್ಲಿ ನಾವು ಕಲಿಯಬೇಕಾದ ಆದರ್ಶ.
ಕರ್ಣ ದುರ್ಯೋಧನರ ಅಪೂರ್ವ ಮೈತ್ರಿಯಾಗಲಿ, ಕೃಷ್ಣಾರ್ಜುನರ ನಡುವೆ ಇದ್ದ ಬಂಧುತ್ವವನ್ನು ಮೀರಿದ ಸ್ನೇಹವಾಗಲಿ. ಶ್ರೀರಾಮ ಹನುಮರ ನಡುವೆ ಇದ್ದ ಭಕ್ತ ಭಗವಂತನ ಸಂಬಂಧವನ್ನೂ ಮೀರಿ ನಿಂತ ಮೈತ್ರಿಯ ಬೆಸುಗೆಯಾಗಲಿ ಎಲ್ಲವೂ ತಮ್ಮ ಅನುಸರಣೀಯ ಮೌಲ್ಯಗಳಿಂದ ಸದಾ ಮನನೀಯವೇ…ಅದಕ್ಕೇ ನಮ್ಮ ಪುರಾಣಗಳು ಸದಾ ಅಭ್ಯಾಸ ಯೋಗ್ಯವಾಗಿ ಉಳಿದಿರುವುದು.
***
ಈಗ ನಾವು ಸಮಕಾಲೀನ ಮೈತ್ರಿಯ ಸ್ವರೂಪವನ್ನು ವಿಶ್ಲೇಷಣೆ ಮಾಡೋಣ. ಸ್ನೇಹದ ಗಂಧಗಾಳಿ ಸುಳಿಯುವ ಎಲ್ಲಾ ಹೃದಯಗಳೂ ಪ್ಲಫುಲ್ಲಿತವೇ… ಹಿರಿಯರಲ್ಲಿ ಬಿಚ್ಚಿಡಲಾಗದ ಸಹಪಾಠಿಗಳಲ್ಲಿ ಬಹಿರಂಗಗೊಳಿಸಲಾರದ, ತನ್ನ ಬಾಳಸಂಗಾತಿಯಲ್ಲೂ ವ್ಯಕ್ತಪಡಿಸಲಾಗದ ನೂರು ನೋವುಗಳ ಸುತ್ತ ಈ ಬಾಳು ಹುತ್ತಗಟ್ಟಿರುತ್ತದೆ.
ನಿಜವಾದ ಸ್ನೇಹಿತನೇ ಇಂತಹ ಒಳತೋಟಿಗಳನ್ನು,ಮುಖಚರ್ಯೆಯಿಂದ ಅವನ/ಳ ಅಂತರ್ಮುಖಿ ನಡವಳಿಕೆಗಳಿಂದ ಗುರುತಿಸಬಲ್ಲ.
ಅಷ್ಟೇ ಅಲ್ಲ. ಅವನು ಪರಿಹಾರವೂ ಆಗಬಲ್ಲ. ‘ಗೆಳೆಯ’ /ಗೆಳತಿ ಬಾಳಹಾದಿಯ ಕ್ರಮಣಕ್ಕೆ ಆ ಭಗವಂತನೇ ಒಲಿದಿತ್ತ ಚುಕ್ಕಾಣಿ.ಈ ಚುಕ್ಕಾಣಿ ನಮ್ಮನ್ನು ನಂಬಿಕೆಯ ನೆಲೆಗಟ್ಟಿನಲ್ಲಿ ಸಾಗಿಸುತ್ತದೆ.
ಮುಳುಗುವ ಭಯದಿಂದ ಮೇಲೆತ್ತುತ್ತದೆ. ಬಾಳ ಜಲಧಿಯ ಆಂತರ್ಯದ ಅಪಾರ ಗೂಢಕ್ಕೆ ದಿಕ್ಕೆಡದಂತೆ ಮಾಡುತ್ತದೆ. ಒಟ್ಟಿನಲ್ಲಿ ನಿರಾಳತೆಯನ್ನು ತುಂಬುತ್ತದೆ.
ಎಂದಿಗೆ ಸ್ನೇಹಪಾಶದಲ್ಲಿ ನಾವು ಬಿಗಿಯಲ್ಪಡುತ್ತೇವೋ…ಅದು ರೇಶಿಮೆಯ ದಾರದಲ್ಲಿ ಬೆಸೆಯಲ್ಪಟ್ಟ ನಯವಾದ ಸಂಬಂಧದಂತೆ ಅನಿಸಿ ಮನಸ್ಸಿಗೆ ಆಹ್ಲಾದವನ್ನು ತುಂಬುತ್ತದೆ. ತನ್ನ ಏಕತಾನತೆಯನ್ನು ನೀಗಿಸುತ್ತದೆ. ಬಾಳಿಗೆ ಒಂದು ಹೊಸ ನೋಟವನ್ನು ನೀಡಿ ಅರಿವಿನ ಹಾದಿಯನ್ನು ತೆರೆದುಕೊಡುತ್ತದೆ.
*
ಮೈತ್ರಿಯ ಪಥದಲ್ಲಿ ಅಡಿಯಿರಿಸಿದ ವ್ಯಕ್ತಿಗೆ ಯಾವುದೇ ಸಮಸ್ಯೆಯೂ ಅಗಾಧವೆನಿಸುವುದಿಲ್ಲ. ಏನೇ ಬರಲಿ ಎದುರಿಸುವ ಹುಮ್ಮಸ್ಸು ಮೂಡುತ್ತದೆ. ಹಂಚಿಕೊಳ್ಳುವ ಅವಕಾಶವು ಮನಸ್ಸಿನ ಒತ್ತಡವನ್ನು ನಿವಾರಿಸಿ ಜೀವನ್ಮುಖಿ ನೋಟವನ್ನು ಅಂಕುರಿಸುತ್ತದೆ.
ನಂಬಿಕೆಯ ತಳಹದಿಯ ಮೇಲೆ ನಿಂತ ಸ್ನೇಹ ಸದಾ ಬಾಳಿಗೆ ಊರುಗೋಲು…
*
ಆದರೆ ಇದನ್ನು ನಿಭಾಯಿಸುವುದು ಅಷ್ಟು ಸುಲಭವೇ. ಭಾವಿಸಿದಷ್ಟು ಸುಲಭವಲ್ಲ. ಒಂದು ಮನಸ್ಸಿನಲ್ಲಿ ಬಿತ್ತಿದ ಸ್ನೇಹದ ಸಸಿ ದಾಂಗುಡಿಯಿಡಲು, ಅದಕ್ಕೆ ಅವಶ್ಯಕವಾದ ಪರಿಕರಗಳು ಬೇಕೇ ಬೇಕು. ಬಿತ್ತಿದ ಬೀಜಗಳು ಆರೈಕೆಯಿಲ್ಲದೆ ನಳನಳಿಸವು. ಸರಿಯಾದ ಜತನವಿಲ್ಲದೆ ಉಳಿಯವು.
ಪರಪೀಡಿತವಾಗದಂತೆ,ಕೀಟಗಳು ಕೊರೆಯದಂತೆ,ಅಪೌಷ್ಟಿಕತೆಯಿಂದ ನರಳದಂತೆ,ಅದರ ಪುಷ್ಟಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ
ದೊರಕಿಸಬೇಕು.ಇದು ಪರಸ್ಪರ ಆಗಬೇಕಾದ ಕೆಲಸ. ನಮ್ಮ ಧ್ಯಾನವನ್ನು, ನಮ್ಮ ಸುಖ ಸಂತೋಷಗಳನ್ನು, ನಮ್ಮ ನಿರಂತರ ಕಾಳಜಿಯನ್ನು ಒಟ್ಟಾಗಿ ಬೇಡುವ ಕ್ರಿಯೆ..! ಆದರೆ ಅದು ಹೆಮ್ಮರವಾದಾಗ ಅದರ ಲಾಭ ಸಿಗುವುದು ಮಾತ್ರ ಕೇವಲ ಪರಸ್ಪರರಿಗಲ್ಲ. ಲೋಕಕ್ಕೆ…! ಸ್ನೇಹದ ಆಶಯ ಫಲಿಸಿ ಅದು ಹೆಮ್ಮರವಾಗಿ ಪುಷ್ಪಿಸಿ, ಫಲಿಸಿ, ಸಾವಿರಾರು ಮೃಗ ಪಕ್ಷಿಗಳ ಹಸಿವು ಹಿಂಗಿಸಿ ತಣ್ಣೆಳಲು, ತಂಪುಗಾಳಿಯ ಕೊಡುಗೆ ನೀಡಿ ಪ್ರಫುಲ್ಲಗೊಳಿಸುವುದಿದೆಯಲ್ಲ. ಈ ಸೃಷ್ಟಿಕಾರ್ಯಕ್ಕೆ ಸಿಗುವ ಸಾರ್ಥಕ ಸುಖ ಇದೆಯಲ್ಲ. ಅದಕ್ಕೆ ಬೆಲೆ ಕಟ್ಟಲಾದೀತೇ… ಖಂಡಿತಾ ಇಲ್ಲ.
*
ಆದರೆ ಈ ಸ್ನೇಹದ ಸುಖ ಅಷ್ಟು ಸುಲಭವಾಗಿ ದಕ್ಕುವುದೇ… ? ನನ್ನ ಮಟ್ಟಿಗೆ ಇಲ್ಲ….!
ಈ ಸ್ನೇಹದ ವ್ಯಾಪಾರ ನಮ್ಮದೇ ಆದ ಸಮಯವನ್ನು ಕಬಳಿಸಿ ಬಿಡುತ್ತದೆ. ಜೊತೆಯಾಗಿ ಓದುವ, ಆಲಿಸುವ, ಮನರಂಜನೆಗಳಲ್ಲಿ ಭಾಗವಹಿಸಿ ಚರ್ಚಿಸುವ, ಕಾರ್ಯಕ್ರಮಗಳನ್ನು ವೀಕ್ಷಿಸಿ ಅಭಿಪ್ರಾಯಗಳನ್ನು ವಿನಿಮಯಿಸಿಕೊಳ್ಳುವ, ಪ್ರವಾಸ, ಹೊರಸಂಚಾರಗಳ ಸುಖವನ್ನು ಹೇಗೆ ದಕ್ಕಿಸಿಕೊಡುತ್ತದೋ, ಸಮಾನಾಭಿರುಚಿಯನ್ನು ಹೇಗೆ ವೃದ್ಧಿಸುತ್ತದೋ ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಕಾಡುವ ಕೆಲಸವನ್ನೂ ಮಾಡುತ್ತದೆ.
ತಾನು ಸಂತೋಷಪಡುವ ಪ್ರತಿ ಘಳಿಗೆಯಲ್ಲೂ ಗೆಳತಿಯ/ಗೆಳೆಯನ ಪರಿಸ್ಥಿತಿ ನೆನಪಾಗುತ್ತದೆ. ಅವನ/ಳ ಸಂಕಷ್ಟಗಳು ನಮ್ಮ ನೆಮ್ಮದಿಗೆ ಮಾರಕವಾಗುತ್ತವೆ. ಅವನ/ಳ ಬಾಳಿನ ವಿಫಲತೆ ನಮಗೆ ವೇದನೆಯ ಸಾಧನವಾಗುತ್ತದೆ. ಅವನು/ಳು ಆಧರಿಸಿದ ಕುಟುಂಬದ ಪ್ರತಿ ವ್ಯಕ್ತಿಯ ಕ್ಷೇಮಕ್ಕಾಗಿ ಮನಸ್ಸು ಸದಾ ಮಿಡಿಯುತ್ತದೆ. ಅವರಿಂದ ಅಗಲುವ ಸಂದರ್ಭ ಅನಾಥಪ್ರಜ್ಞೆಗೆ ಎಡೆಮಾಡಿಕೊಡುತ್ತದೆ.
*
ಸ್ನೇಹದ ಸಲಿಗೆ ಆತಂಕಕಾರಿಯೂ ಹೌದು. ಅದು ಎಲ್ಲವನ್ನೂ ಸ್ವಾಗತಿಸಲು ಕೆಲವೊಮ್ಮೆ ಅಹಮಿಕೆ ಅಡ್ಡಿ ತರುತ್ತದೆ. ಅಹಂ ಘಾಸಿಗೊಂಡಾಗ ಅದನ್ನು ಸ್ಪಷ್ಟಪಡಿಸಲು ಮನಸ್ಸು ಹೆಣಗುತ್ತದೆ. ಸ್ನೇಹದ ತಂತೇನಾದರೂ ಈ ಕಾರಣಕ್ಕೆ ಕಡಿದುಹೋದರೆ ಎಂಬ ಭಯ ಅದನ್ನು ಸದಾ ಉಳಿಸಿಕೊಳ್ಳುವ ಹಪಾಹಪಿಯಲ್ಲಿ ರಾಜಿಮಾಡಿಕೊಳ್ಳಲು ಸದಾ ಸನ್ನದ್ಧರಾಗಿರುವಂತೆ ಎಚ್ಚರಿಸುತ್ತಲೇ ಇರುತ್ತದೆ.
ಪರಸ್ಪರ ಹಿತಾಸಕ್ತಿಗಾಗಿ, ನಮ್ಮ ಸ್ವಂತ ಹಿತಾಸಕ್ತಿಯನ್ನು ತ್ಯಜಿಸಬೇಕಾಗುತ್ತದೆ. ಮನಸ್ತಾಪಗಳಾಗುವ ಸಂದರ್ಭ ಸ್ನೇಹವೃಕ್ಷಕ್ಕೆ ಕುಠಾರವಾಗಲೂ ಬಹುದು. ಆಗ ಪರಸ್ಪರ ಒಳಿತನ್ನೇ ಹಾರೈಸಿ ಪೋಷಿಸಿದ ಮರ ಸೊರಗಲೂ ಬಹುದು.
ಸ್ನೇಹವನ್ನು ನಿಭಾಯಿಸುವುದು, ಕತ್ತಿಯ ಹಲುಗೆಯ ಮೇಲೆ ನಡೆದಂತೆ. ಸದಾ ಜಾಗೃತಿಯನ್ನು ಬೇಡುತ್ತದೆ. ಕರ್ಣನಂತೆ ತನ್ನದೆಲ್ಲವನ್ನೂ ಸ್ನೇಹಕ್ಕಾಗಿ ತ್ಯಾಗ ಮಾಡುವ ಆತ್ಮಾಹುತಿಯನ್ನೂ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಮುಂದಿರಿಸಿ ಸತ್ವಪರೀಕ್ಷೆಗೆ ಒಳಪಡಿಸುತ್ತದೆ.
ಆದರೂ ಸ್ನೇಹದ ಅಮೃತ ಪಾನ ಮಾಡಿದವನಿಗೆ ಬದುಕು ಬಹಳ ಸುಂದರವಾಗಿ ಕಾಣುವುದರಲ್ಲಿ ಸಂದೇಹವೇ ಇಲ್ಲ. ಹೃದಯಗಳ ಅನನ್ಯತೆಯ ಬೆಳಕಿನಲ್ಲಿ ಸ್ನೇಹದ ನಂದಾದೀಪ ಸದಾ ಪ್ರಜ್ವಲಿಸುತ್ತಿರಲಿ.
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೮)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೨೦)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕೊಡಗು
