ಈಗ ಓದುವವರೇ ಇಲ್ಲ ಎನ್ನಲಾರೆ, ಇ-ಪುಸ್ತಕಗಳ ಓದು ಈಗ ಕ್ರಾಂತಿಕಾರಕವಾದ ಮಾಹಿತಿ ಭಂಡಾರವಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ನಮ್ಮೆದುರು ಸುರಿದುಬಿಡುವ ಆ ಜ್ಞಾನ ಭಂಡಾರ ನಮಗೆ ಮಾಹಿತಿಯನ್ನು ಒದಗಿಸುತ್ತದೆಯೇ ಹೊರತು ಆ ಧ್ಯಾನಸ್ಥ ಸುಖವನ್ನು ನೀಡಲಾರದೆಂಬುದು ಎಂದು ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಧ್ಯಾನದ ಸುಖ ನೀಡುವ ಅಧ್ಯಯನ’ ದಲ್ಲಿ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಪ್ರಶಾಂತವಾದ ಪರಿಸರ. ಪತ್ರಿಕೆ ಹಾಗೂ ಪುಸ್ತಕದ ಪುಟಗಳನ್ನು ತಿರುವುವ ಶಬ್ದ ಬಿಟ್ಟರೆ ಉಸಿರಾಟದ ಸದ್ದೂ ಕೇಳಿಸದಷ್ಟು ಮೌನ’ … ಕಾಲವೇ ಇಲ್ಲಿ ಕಾಲು ಮುರಿದು ಬಿದ್ದಿದೆಯೇನೋ’ ಎನ್ನುವ ಭ್ರಮೆ ಹುಟ್ಟಿಸುವ ತಾದಾತ್ಮ್ಯ.’ಓದುವಿಕೆಯೋ.
ಮಾಹಿತಿ ಸಂಗ್ರಹಣೆಯ ಕಾರ್ಯವೋ ಮುಗಿಯುತ್ತಾ ಬಂತು ‘ ಎನ್ನುವಷ್ಟರಲ್ಲಿ ಬಾಹ್ಯದ ಪ್ರಜ್ಞೆ ಮೂಡಿ ಸಮಯ ನೋಡಿಕೊಳ್ಳುತ್ತೇನೆ. ಸಂಜೆ ಅವಧಿ ಮೀರಿ ಮತ್ತೂ ಅರ್ಧಗಂಟೆ ದಾಟಿ ಹೋಗಿದೆ. ದಡಬಡಿಸಿ ಎದ್ದು’ ಓ ಆಗಲೇ ಗ್ರಂಥಾಲಯ ಮುಚ್ಚುವ ವೇಳೆಯಾಗಿ ಅರ್ಧಘಂಟೆಯೇ ಕಳೆದಿದೆ. ನೀವ್ಯಾಕೆ ನನ್ನನ್ನು ಎಚ್ಚರಿಸಲಿಲ್ಲ ‘ಎಂದು ಗ್ರಂಥಪಾಲಕರನ್ನು ಕೇಳಿದೆ. ಅವರು ನಗುತ್ತಲೇ ಉತ್ತರಿಸಿದರು…’ನೀವು ಧ್ಯಾನಸ್ಥ ಸ್ಥಿತಿಯಲ್ಲಿದ್ದಿರಿ.ಅದಕ್ಕೆ ಭಂಗ ತರಬಾರದೆಂದು ಸುಮ್ಮನಿದ್ದೆ’.
ನಾನು ಕ್ಷಮೆಯಾಚಿಸಿ, ಧನ್ಯವಾದ ತಿಳಿಸಿ ಹೊರಬಂದೆ. ಬಹುಶ: ನಾನು ಜಗತ್ತಿನಲ್ಲಿ ಅಪಾರವಾಗಿ ಪ್ರೀತಿಸುವ ಸ್ಥಳಗಳಲ್ಲಿ ಅತ್ಯಂತ ಪ್ರಶಸ್ತವಾದುದು :
ಮೊದಲನೆಯದು – ಗ್ರಂಥಭಂಡಾರ
ಎರಡನೆಯದು – ನದೀತೀರ
ಮೂರನೆಯದು – ಬೆಟ್ಟ ಕಾಡು
*
ಓದುವಿಕೆಯ ಕಾಲ ಒಂದು ವಿಸ್ಮೃತಿ. ಚಿಕ್ಕಮಕ್ಕಳು ಆಟಿಕೆಯ ಅಂಗಡಿಯನ್ನು ಹೊಕ್ಕು ತನಗಿಷ್ಟವಾದ ಆಟಿಕೆಯೊಂದಿಗೆ ಜಗತ್ತನ್ನೇ ಮರೆತು ಬಿಡುವಂತೆ…ನಾನೂ ಆ ಅಧ್ಯಯನ ಸುಖದ ಚಾತಕ. ಅದನ್ನು ಚೆನ್ನಾಗಿ ತಿಳಿದಿದ್ದ ಆ ಗ್ರಂಥಪಾಲಕರಿಗೆ, ‘ಸಮಯ ಮೀರಿ’ದರೂ ನನ್ನ ಧ್ಯಾನಭಂಗ ಮಾಡುವ ಮನಸ್ಸಾಗಲಿಲ್ಲ.ಇಂತಹವರೂ ವಿರಳವೇ..! ಕ್ಲುಪ್ತ ಸಮಯಕ್ಕೆ ತಮ್ಮ
ಕರ್ತವ್ಯ ಮುಗಿಸಿ ತೆರಳುವ ಅವಸರದಲ್ಲಿರುವವರ ನಡುವೆ ಆಸಕ್ತರಿಗಾಗಿ ತಮ್ಮ ಸಮಯ ವಿಸ್ತರಿಸಿ ಕಾಯುವ ಸಹನೆಯೂ ಸಂಸ್ಕಾರವಂತ ಮನಸ್ಥಿತಿ ಇರುವವರಿಗಷ್ಟೇ ಇರಲು ಸಾಧ್ಯ…
*
ಅಬ್ಬಾ ! ಪುಸ್ತಕ ಓದುವ ಸುಖವಿದೆಯಲ್ಲ. ಅದು ಪದಗಳಿಗೆ ನಿಲುಕದ್ದು. ನಾವು ಕಾಣದ ಲೋಕಕ್ಕೆ ಕೈಹಿಡಿದು ಕರೆದೊಯ್ದು…ಹೊಸತೊಂದು ಅನುಭೂತಿಯನ್ನು ನೀಡುತ್ತದೆ.ನಮ್ಮದೇ ಕಲ್ಪನೆಯ ವೇಷ ತೊಡಿಸಿ ಪಾತ್ರಗಳನ್ನು ಕುಣಿಸುತ್ತದೆ. ಚಿತ್ರಶಾಲೆಯನ್ನು ತೆರೆದು ಬೆರಗು ಮೂಡಿಸುತ್ತದೆ.

ಕವಿತೆಯ ಲೋಕಕ್ಕೆ ಬರಮಾಡಿಕೊಂಡು ರಸದೌತಣ ನೀಡುತ್ತದೆ. ಜಗದ ನಾಟಕರಂಗದಲ್ಲಿ ತರಹ ತರಹದ ಪಾತ್ರಗಳನ್ನು ನಿರ್ವಹಿಸಬೇಕಾದ ನಮಗೆ, ನಮ್ಮದೇ ಆದ ತೀರಾ ಖಾಸಗಿಯಾದ ಕ್ಷಣಗಳನ್ನು ದಯಪಾಲಿಸುತ್ತದೆ.
ಏಕಾಂತದ ಸುಖ ಇದೆಯಲ್ಲಾ… ಅದು ಅರಿವಿನ ಪರಿಧಿಯನ್ನು ದಿಗಂತಕ್ಕೆ ವಿಸ್ತರಿಸುವ… ಜಾದೂಗಾರ… ಮನಸ್ಸನ್ನು ಸ್ವಚ್ಛಗೊಳಿಸುವ ಜಲಗಾರ…ಸಮಯಕ್ಕೆ ಅಮೂಲ್ಯತೆಯ ಸ್ಪರ್ಶ ನೀಡುವ ಗಾರುಡಿಗ… ಚಿಂತನ ಮಂಥನದಿಂದ ವಿಚಾರ ಪ್ರಬುದ್ಧಗೊಳಿಸುವ ಜೊತೆಗಾರ. ಕಲ್ಪನೆಗಳ ಗರಿಗೆದರಿಸುವ ಕಲಾಕಾರ, ಜ್ಞಾನಕ್ಕೆ ಕಾಯಕಲ್ಪ ನೀಡುವ ಪ್ರವಾದಿ,ತಾನಾಗೇ ಅರಿವಿನ ದೀಪ ಹೊತ್ತಿಸುವ ಮಹಾಗುರು. ನಾವು ಕೇವಲ ನಾವಾಗಿ ಉಳಿಯಲು ಸನ್ನದ್ಧಗೊಳಿಸುವ…ಓಜ…
*
ಸಾಹಿತಿಗಳೆಂದರೆ ಮರುಸೃಷ್ಟಿಕರ್ತರು.ವಿಭಿನ್ನ ಅನುಭವಗಳು ಹಾಗೂ ದೃಷ್ಟಿಕೋನಗಳ ನೆಲೆಯಲ್ಲಿ, ವಿಭಿನ್ನ ವಿಚಾರಗಳೊಂದಿಗೆ ಅವರು ಅಭಿವ್ಯಕ್ತಗೊಳ್ಳುತ್ತಾರೆ. ಅವರ ದಾರ್ಶನಿಕತೆಯ ಪ್ರಭಾವ ನಮ್ಮ ಮನಸ್ಸಿನ ಮೇಲೂ ಆಗುತ್ತದೆ. ಓದುವಿಕೆಯಿಂದ ನಮ್ಮ ನೆಲೆ ಮತ್ತಷ್ಟು ವೈಚಾರಿಕ ವಿಸ್ತಾರವನ್ನು ಪಡೆಯುತ್ತಾ ಹೋಗುತ್ತದೆ. ವಿಶ್ವವ್ಯಾಪಕತೆ ನಮ್ಮಲ್ಲಿರುವ ಅಲ್ಪತೆಯನ್ನು ಹೋಗಲಾಡಿಸುತ್ತದೆ.ಅರಿವು ಒಂದು ಬೆರಗು. ಅದರ ಗ್ರಹಿಕೆಯಲ್ಲಿ ಮಕ್ಕಳು ಆಟಿಕೆಯೊಂದಿಗೆ ಇಹದ ಪ್ರಜ್ಞೆಯನ್ನು ಕಳೆದುಕೊಂಡು ಅವರದೇ ಲೋಕವನ್ನು ಕಟ್ಟಿಕೊಂಡು ವಿಹರಿಸುವಂತೆ ಹೊಸದೊಂದು,ಕಲ್ಪನೆ,ಭಾವನೆ ಹಾಗೂ ಜ್ಞಾನ ಪ್ರಪಂಚದಲ್ಲಿ ನಾವು ಪಯಣಿಸುತ್ತೇವೆ. ಇದು ನಮಗೆ ಬದುಕುವ ದಿಕ್ಕುತೋರಿಸುತ್ತದೆ. ನೋವುಗಳನ್ನು ಮರೆಸುವ ಸಾಧನವಾಗುತ್ತದೆ. ತೂಗುಯ್ಯಾಲೆಯಲ್ಲಿ ಮನವನ್ನು ತೂಗಿ ರಮಿಸುತ್ತದೆ.ಎಲ್ಲ ವೇದನೆಗಳ ಕೂಪದಿಂದ ಮನಸ್ಸನ್ನು ಹೊರತರುತ್ತದೆ.ನಮ್ಮನ್ನು ಉದಾತ್ತ ರನ್ನಾಗಿಸುತ್ತದೆ. ಮತ್ತೂ ಮತ್ತೂ ಪ್ರಜ್ಞಾವಂತರನ್ನಾಗಿ ಪರಿವರ್ತಿಸುತ್ತದೆ.
*
ಓದು ನಮಗೆ ಹೇಗೆಲ್ಲಾ ಪ್ರಯೋಜನಕಾರಿ ನೋಡಿ…
“ಓದಿನಿಂದ ವಿಕಾಸ,ಓದಿನಿಂದಲೆ ಶಾಂತಿ
ಓದು ಅರಿವಿಗೆ ದಾರಿ,ದಿವ್ಯತೆಗೆ ಕೊಂಡಿ/
ಈ ಬಾಳ ಕ್ಲಿಷ್ಟತೆಗೆ ಪರಿಹಾರ ಓದುವಿಕೆ
ಅಧ್ಯಯನ ಪರಮಗುಣ-ಮುದ್ದುರಾಮ/”
*
ಮೊನ್ನೆ ನನ್ನ ಸಾಹಿತ್ಯ ಗೆಳತಿಯನ್ನು ಯಾರೋ ಒಬ್ಬರು ಪ್ರಶ್ನಿಸಿದರಂತೆ…
‘ನೀವು ಇಂತಹ ಸಮಾರಂಭಗಳೆಂದರೆ
ಎಷ್ಟು ಸಂಭ್ರಮದಿಂದ ಓಡಿಬಿಡುತ್ತೀರಿ…
ಇದರಿಂದ ನಿಮಗಾಗುವ ಲಾಭವಾದರೂ ಏನು’ ಎಂದು…
ಇದಕ್ಕೆ ನಾನು ಏನು ಉತ್ತರಿಸಲಿ…? ಅಲ್ಲಿ ಹೋದರೆ ನನ್ನ ಮನಸ್ಸಿಗೆ ಖುಷಿ ಕೊಡುವ ಸಂಗತಿಗಳು ಸಿಗುತ್ತವೆ. ನಮ್ಮಂತಹ ಅಭಿರುಚಿ ಇರುವವರೊಂದಿಗೆ ಒಳ್ಳೆಯ ವಿಚಾರಗಳಲ್ಲಿ ಮಾತುಕತೆ ನಡೆಯುತ್ತದೆ.ನಮ್ಮ ಹೊಟ್ಟೆಗಲ್ಲ..ನಮ್ಮ ಮೆದುಳಿಗೆ ಪುಷ್ಟಿಕೊಡುವ ಸರಕು ಅಲ್ಲಿ ದೊರೆಯುತ್ತದೆ. ಅದಕ್ಕೆ ಇಂತಹ ಕಾರ್ಯಕ್ರಮಗಳಿಗೆ ನಾನು ಹಾಜರಾಗಲು ತವಕಿಸುತ್ತೇನೆ’ ಎಂದರಂತೆ.ಅವರು,ಇವರ ಉತ್ತರ ಕೇಳಿ ಮಕಮಕನೆ ಮುಖವನ್ನೇ ನೋಡಿ ಸುಮ್ಮನಾದರಂತೆ.
ನಾನೂ ಇಂತಹ ಪ್ರಶ್ನೆಗಳನ್ನು ಹಲವು ಬಾರಿ ಎದುರಿಸಿದ್ದೇನೆ. ಏನೆಂದು ಹೇಳಲಿ…’ಇದು ನನ್ನ ಮನಸ್ಸಿಗೆ ತುಂಬಾ ಖುಷಿಕೊಡುತ್ತದೆ.ಅದಕ್ಕೇ ಹೋಗುತ್ತೇನೆ’ ಎನ್ನುತ್ತೇನೆ. ನನ್ನ ಬದುಕಿನ ಮಹತ್ವದ ಘಟ್ಟಗಳಲ್ಲಿ ಅಧ್ಯಯನದ ಸಂಗಾತಿ ನನಗೆ ದಾರಿ ತೋರಿ ಕೈಹಿಡಿದು ನಡೆಸಿದ್ದಾಳೆ.
ಭಗವಂತನ ಧ್ಯಾನದ ಸುಖ ಕರುಣಿಸಿ ಬೆಳಕು ತೋರಿದ್ದಾಳೆ.ನೋವಿನ ಪ್ರಖರತೆಯನ್ನು ಸಾಂತ್ವನಗೊಳಿಸಿದ್ದಾಳೆ.ಮುಖ್ಯವಾಗಿ ನಾನು ನಾನೇ ಆಗಿರಲು,ನನಗಿಷ್ಟವಿಲ್ಲದ ಕ್ಷೇತ್ರಗಳಲ್ಲಿ ಕಳೆದು ಹೋಗದಂತೆ ಎಚ್ಚರಿಸಿದ್ದಾಳೆ.
*
ಬದುಕಿಡೀ ಭದ್ರತೆಗಾಗಿ ದುಡಿದು ಉಳಿಸಿದ ಹಣದ ಒಂದು ಪಾಲು ಯಾವುದೋ ಅವಿವೇಕಿಗಳ ಪಾಲಾಯಿತು.ಬದುಕಿನ ಅನಿರೀಕ್ಷಿತ ಆಘಾತಗಳಿಂದ ಹೊರಬರಲು ಹಣ ಆಸರೆ ನೀಡಿತು.ಆದರೆ ಸರಿಯಾದ ನೆಲೆಗೊಯ್ಯಲು ಸೋತಿತು. ಈಗ ಏನಿಲ್ಲದಿದ್ದರೂ ಹಣವಿಲ್ಲದ ದಾರಿದ್ರ್ಯ ನನ್ನನ್ನು ಕಾಡುತ್ತಿಲ್ಲ. ಅಂದು ಹಗಲಿರುಳೂ ಓದಿನಿಂದ ದಕ್ಕಿಸಿಕೊಂಡ ಸಂಸ್ಕಾರ ಅನ್ಯರ ಕಣ್ಣೊರೆಸುವ ಸಾಧನವಾಗಿಯೂ ಬಳಕೆಯಾಗುತ್ತಿರುವುದು ಅಧ್ಯಯನ ವಿಸ್ತರಿಸಿದ ಸಮಾಜಮುಖೀ ನೋಟದಿಂದಲೇ ಎಂಬ ನಂಬಿಕೆ ನನ್ನದು.
*
ಜಾತ್ಯತೀತ ತಳಹದಿಯಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಪ್ರಜಾಪ್ರಭುತ್ವ ಸಂವಿಧಾನ ಇಂದು ಬಣ್ಣಗೆಟ್ಟು ಅದರ ಮೌಲ್ಯಗಳನ್ನೇ ಹಿಮ್ಮೆಟ್ಟಿಸಿ ಅಧಿಕಾರಶಾಹಿಗಳ ಕೈಗೊಂಬೆಯಾಗಿರುವ ಪ್ರಸಕ್ತ ಕಾಲಘಟ್ಟದಲ್ಲಿ,ಒಂದು ಸಾವಿರ ವರ್ಷಗಳ ಹಿಂದೆ,’ಆದಿಕವಿ ಪಂಪ’ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದಿದ್ದ. ಇಪ್ಪತ್ತನೇ ಶತಮಾನದಲ್ಲಿ ‘ವಿಶ್ವಮಾನವತೆ’ಯ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪುರವರು ಇದರ ಅನಿವಾರ್ಯತೆಯನ್ನು ಸಾರಿ ಸಾರಿ ಹೇಳಿದರು.’ಪುಸ್ತಕಜ್ಞಾನ ಅರಿವಿನ ಕಿಂಡಿಯಿಂದ ಜಗದ ಎಲ್ಲ ವಿಚಾರಗಳನ್ನೂ ಅಂತರಂಗಕ್ಕೆ ಸ್ವಾಗತಿಸುತ್ತದೆ ‘ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ‘ತನ್ನಂತೆ ಪರರ ಬಗೆದೊಡೆ ಕೈಲಾಸ ನೆರೆಮನೆಯಕ್ಕು’ ಎಂದು ಸರ್ವಜ್ಞ ಹೇಳಿದ್ದೂ ಇದನ್ನೇ…
“ಧೀರೇ ಧೀರೇ ರೇ ಮನಾ ಧೀರೇ ಸಾಬ್ ಕುಛ್ ಹೋಯ್
ಮಾಲಿ ಸೀಂಚೈ ಸೌ ಘಡಾ ಋತು ಆವೇ ಫಲ್ ಹೋಯ್…”
ಕಬೀರದಾಸರ ಈ ಸಾಲುಗಳಲ್ಲಿ ಬದುಕಿನ ಬಗೆಗೆ ಎಲ್ಲದರಲ್ಲಿಯೂ ಸಾವಧಾನವಿರಬೇಕು ಎಂಬ ನೀತಿ ಇದೆಯಲ್ಲವೇ?. ತೋಟದ ಮಾಲಿ ನೆಟ್ಟಗಿಡಕ್ಕೆ ಒಮ್ಮೆಲೇ ನೂರು ಕೊಡ ನೀರು ಸುರಿದರೂ ಅದು ಋತುಮಾನಕ್ಕೆ ಅನುಸಾರವಾಗಿಯೇ ಫಲ ಕೊಡುವುದಲ್ಲದೆ ಅವನು ಒಂದೇ ಸಲ ಸುರಿದ ನೂರು ಬಿಂದಿಗೆ ನೀರಿಗಲ್ಲ.
ಗ್ರಂಥಗಳು ಅನುಭವದ ಕಣಜಗಳು,ಅನುಭಾವದ ಬೆಳುವೊಲಗಳು,ಬದುಕಿಗೆ ಮಾರ್ಗದರ್ಶಿಗಳು, ಗುರುಗಳು, ಗೆಳೆಯರು ಆದುದರಿಂದಲೇ ಇವುಗಳ ಒಡನಾಟ ನಮ್ಮನ್ನು ಕೆಟ್ಟ ವಿಚಾರಗಳಿಂದ ದೂರವಿರಿಸುತ್ತದೆ. ಮಹಾಭಾರತ,ರಾಮಾಯಣಗಳಲ್ಲಿ ಇಂತಹ ಆದರ್ಶ ತತ್ವಗಳಿವೆ. ದುಷ್ಟರಿಗೆ ಶಿಕ್ಷೆ
ಶಿಷ್ಯರಿಗೆ ರಕ್ಷೆ ನೀಡುವ ಆಶ್ವಾಸನೆಯಿದೆ.
ಕೃಷ್ಣ ಹೇಳಿದಂತೆ,
“ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಷು ಕದಾಚನ”
ಕರ್ಮಮಾಡುವುದಷ್ಟೇ ನಮ್ಮ ಕೆಲಸ…
ಅದರ ಫಲಾಫಲಗಳು ದೈವೇಚ್ಛೆ..”
ಪುಣ್ಯಕೋಟಿಯ ಕತೆಯಲ್ಲಿ,
‘ಕೊಟ್ಟ ಭಾಷೆಗೆ ತಪ್ಪಿ ನಡೆಯದ’ ನೀತಿಯಿಂದ ದುಷ್ಟವ್ಯಾಘ್ರನೂ ಪರಿವರ್ತನೆ ಹೊಂದುವ ಸಂಸ್ಕಾರವಿದೆ. ಪಂಚತಂತ್ರದ ಕತೆಗಳಲ್ಲಿ ಒಂದೊಂದು ಕತೆಯೂ, ಮಕ್ಕಳ ಬೌದ್ಧಿಕತೆಯನ್ನು ಹರಿತಗೊಳಿಸಿ,ಮಕ್ಕಳನ್ನು ವಿವೇಕಿಗಳನನ್ನಾಗಿ ಮಾಡುವ ತಂತ್ರವನ್ನು ಬೋಧಿಸುತ್ತವೆ.
‘ಅರೇಬಿಯನ್ ನೈಟ್ಸ್’ ಕತೆಯು ಬುದ್ಧಿವಂತಿಕೆಯಿಂದ ಎಂತಹ ಪ್ರಾಣಾಪಾಯದ ಸಂದರ್ಭದಲ್ಲೂ ಪಾರಾಗಬಹುದು ಎಂಬುದನ್ನು ತಿಳಿಸುತ್ತದೆ. ನಿತ್ಯ ಮಾರ್ಗದರ್ಶಕವೂ, ಕಲ್ಪನಾ ದಿಗಂತವನ್ನು ವಿಸ್ತರಿಸುವಂತಹ ಕತೆಗಳೂ ಓದುಗರ ಸಂವೇದನಾಶೀಲತೆಗೆ ಲಗ್ಗೆಯಿಟ್ಟು ಭಾವಗಳನ್ನು ಪ್ರಚೋದಿಸುತ್ತವೆ. ಜೀವನದ ತತ್ವ ಹಾಗೂ ಸಿದ್ಧಾಂತಗಳನ್ನು ಮನದಟ್ಟು ಮಾಡಿಸುತ್ತವೆ.

ವಿದೇಶದಲ್ಲಿರುವ ನನ್ನ ವಿದ್ಯಾರ್ಥಿಯೊಬ್ಬ ನನಗೆ ಕರೆಮಾಡಿ ಮಾತನಾಡುತ್ತಾ ನೀವು ನನ್ನ ವಿದ್ಯಾರ್ಥಿ ದೆಸೆಯಲ್ಲಿ ಉದ್ದೀಪಿಸಿದ ನನ್ನ ಪುಸ್ತಕ ಓದುವ ಗೀಳು,ನನ್ನನ್ನು ಎಂತಹ ಒತ್ತಡಗ
ಳಿಂದಲೂ ಪಾರುಮಾಡುವ ಸಂಜೀವಿನಿಯಾಗಿದೆ. ಸದಾ ಕಾಲ ನಾನು ಯಾವುದಾದರೂ ಪುಸ್ತಕಗಳ ಸಾಂಗತ್ಯದಲ್ಲಿರುತ್ತೇನೆ.ಆಗ ಯಾವಾಗಲೂ ನಿಮ್ಮ ನೆನಪಾಗುತ್ತದೆ.
ಇದೇ ಸುಖವನ್ನು ನನ್ನ ಮಗನಿಗೆ ವರ್ಗಾಯಿಸುವುದು ಹೇಗೆ ಮೇಡಂ…ಏಕೆಂದರೆ ಹೆಂಡತಿಯಲ್ಲಾಗಲಿ ,ನನ್ನ ಮಗನಲ್ಲಾಗಲಿ ಆ ಅಭಿರುಚಿಯೇ ಇಲ್ಲ. ಇದರಿಂದ ಏನು ಲಾಭ”ಎಂದು ನನ್ನನ್ನೇ ಪ್ರಶ್ನಿಸುತ್ತಾಳೆ” ಎಂದು ಹಂಬಲಿಸುತ್ತಾನೆ.
ಜೇನುಹುಳುವಿಗೆ ಮಾತ್ರ ಮಕರಂದದ ನೆಲೆ ಗೊತ್ತು. ಅದನ್ನು ಸ್ವಾದಿಷ್ಟವಾಗಿಸುವ ಕಲೆ ಗೊತ್ತು. ಸತತ ಪರಿಶ್ರಮ, ಅನ್ವೇಷಣೆ ಹಾಗೂ ಕಲೆ, ಕೌಶಲ ಅಭಿರುಚಿ ಎಲ್ಲವೂ ಮೇಳೈಸಿದಾಗ ಇಂತಹ ಒಂದು ಅದ್ಭುತ ಮಧು ತಯಾರಾಗುವುದು. ಅದು ರೋಗಗಳಿಗೂ ದಿವ್ಯೌಷಧಿ. ಅಷ್ಟೇ ಅಲ್ಲ ಜಿಹ್ವೆಗೂ ಸ್ವಾದಿಷ್ಟವಾಗುವುದು.
ಹಾಗೆಂದ ಮಾತ್ರಕ್ಕೆ ಈಗ ‘ಓದುವವರೇ ಇಲ್ಲ ‘ಎಂದು ಅರ್ಥವಲ್ಲ. ಇ-ಪುಸ್ತಕಗಳ ಓದು ಈಗ ಕ್ರಾಂತಿಕಾರಕವಾದ ಮಾಹಿತಿ ಭಂಡಾರವಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ನಮ್ಮೆದುರು ಸುರಿದುಬಿಡುವ ಆ ಜ್ಞಾನ ಭಂಡಾರ ನಮಗೆ ಮಾಹಿತಿಯನ್ನು ಒದಗಿಸುತ್ತದೆಯೇ ಹೊರತು ಆ ಧ್ಯಾನಸ್ಥ ಸುಖವನ್ನು ನೀಡಲಾರದೆಂಬುದು ನನ್ನ ಅನಿಸಿಕೆ. ಆಲಿಸುವಿಕೆ, ಗ್ರಹಿಸುವಿಕೆಯಲ್ಲ. ಸಾವಧಾನವಿಲ್ಲದೆ ಓದುವುದು ಅದು ನಿಜವಾದ ಸುಖವನ್ನು ದಕ್ಕಿಸಿಕೊಡಲಾರದು.ಮೊಬೈಲ್ ಅಥವಾ ಟಿ.ವಿ.ಪರದೆಗಳ ಮೇಲೆ ಮೂಡುವ ಅಕ್ಷರಗಳು ಬಹುಕಾಲ ನಮ್ಮ ಮನ:ಪಟಲದಲ್ಲಿ ಉಳಿಯುವ ಸಾಧ್ಯತೆಯೂಕಡಿಮೆ. ಓದು, ಮನನ, ಚಿಂತನಗಳಿಂದ ಮನದಲ್ಲಿ ಮಂಥನಗೊಳ್ಳುವ ವಿಚಾರವನನೀತ ಓದುಗನ ಹೃದಯಕ್ಕೆ ತಂಪೆರೆಯುತ್ತದೆ.ಸಂಗಾತಿಯಾಗಿ ಆಗಾಗ ಮಿಂಚಿ ಹೊಸತೊಂದು ಆಲೋಚನೆಯನ್ನು ಪ್ರೇರೇಪಿಸುತ್ತದೆ.
ಎಲ್ಲರಿಗೂ ಈ ಅಧ್ಯಯನ ಸುಖ ದಕ್ಕಲಿ.
ಅದು ಬಾಳನ್ನು ಮತ್ತಷ್ಟು ಉಜ್ವಲಗೊಳಿಸಲಿ.
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೮)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೨೦)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೪)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು , ಕೊಡಗು.
