ಹೆಣ್ಣಿಗೆ ಸಿಕ್ಕ ಸ್ವಾತಂತ್ರ್ಯದ ಹುಚ್ಚಿನಲ್ಲಿ ಸ್ವಂತ ದುಡಿಮೆಯ ಅಮಲಿನಲ್ಲಿ, ಯಾವು ಯಾವುದೋ ಕ್ರೂರ ಜಾಲಕ್ಕೆ ಸಿಲುಕಿ ಹೊರ ಬರಲಾಗದೆ ಹತಾಶರಾಗಿ ವ್ಯವಸ್ಥೆಯ ಬಲಿ ಪಶುವಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿಯೇ ಇದೆ ಅಲ್ಲವೇ?..ತಪ್ಪದೆ ಮುಂದೆ ಓದಿ, ನಿವೃತ್ತಿ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ಅಂಕಣ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’
ಕೇಸರಿ ಹಸಿರು ಕಪ್ಪು ಬಳೆಗಳನ್ನು ಧರಿಸಿದ ಸುಂದರವಾದ ಕರಗಳು! ಹಳ್ಳಿ ಕೆಲಸಗಳಲ್ಲೂ ಮಾಸದ ಮುದ್ದುತನ ಮೊಗದ ನವನೀತದಲ್ಲಿ ಹೊಮ್ಮಿದ ಮಣಿಮುಕ್ತಕಗಳು ಕಣ್ಣಿನಲ್ಲಿ ಧಾರಾಕಾರವಾಗಿ ಒಸರುತ್ತಿರುವ ಅಶ್ರುಬಿಂದುಗಳು…ಮದುವೆಯೇನೋ…ಅನ್ನಿಸಬಹುದು ಮೇಲಿನ ಪ್ರಸಂಗ ನೋಡಿ, ಏಕೆಂದರೆ ತಲೆತುಂಬಾ ಮುಡಿದ ಹೂವು…ಮದುವೆಯ ರೇಷ್ಮೆಸೀರೆ… ದೇಹಕ್ಕೆ ಕೊನೆಯ ಅಲಂಕಾರವೆಂಬಂತೆ, ಕೊರಳಿಗೆ ಹಾರ, ಒಡವೆ, ತೊಡುಗೆ, ಕೆನ್ನೆಗೆ ಬಳಿದ ಅರಶಿನ, ಹಣೆಗೆ ಎಗ್ಗಿಲ್ಲದೆ ಮೆತ್ತಿದ ಕುಂಕುಮ! ಥೇಟ್ ಹರಕೆಯ ಕುರಿಯಂತೆ ! ಇದ್ದುದು…ಮಸಣದಲ್ಲಿ…ತನ್ನ ಪ್ರೀತಿಯ ಪತಿ ದೇಶ ಸೇವೆಯಲ್ಲಿ ಹುತಾತ್ಮನಾದ ಆಸ್ಫೋಟಕ ದು:ಖದ ನಡುವೆ! ಎಲ್ಲರಿದ್ದರೂ….ಯಾರೂ ಇಲ್ಲದಂತಿರುವ ಕುರುಡು ಕಟ್ಟಳೆಯ ಕವಿದ.. ತಮಸ್ಸಿನಲ್ಲಿ.
*
ಚಿಕ್ಕವಳು ಆಗ ತಾನು, ಬರೀ ವೀಕ್ಷಿಸುವುದಷ್ಟೇ !ಮಾತನಾಡಿದರೂ….ಅಲ್ಲಿರುವ ಯಾರೂ…ಲೆಕ್ಕಿಸದೆ…ಮೂರ್ಖಪ್ರಶ್ನೆಯೆಂದು ತಳ್ಳಿ ಹಾಕಿ ತನ್ನ ಮುಗ್ಧತೆಯ ಬಗೆಗೆ ನಕ್ಕು
ಹಗುರಾಗಿ ಬಿಡುವ, ಆಚರಣೆಯನ್ನೇ ಚಾಚೂ ತಪ್ಪದೆ ಪಾಲಿಸುವ ಬದ್ಧತೆಯಿರುವ….ದೃಷ್ಟಿ ಗುರುಡರ ನಡುವೆ!
*
ಅಲ್ಲಿ ಕುಳಿತವಳು ತನ್ನಕ್ಕ!ಪ್ರೀತಿ, ಜಗಳ, ಊಟ, ತಿಂಡಿ, ಹಾಸಿಗೆ ಎಲ್ಲವನ್ನೂ ಜೊತೆಗೇ ಹಂಚಿಕೊಂಡು ಬೆಳೆದ ತನ್ನ ಮುದ್ದಿನ ನಳಿನಕ್ಕ!
*
ಮನಸ್ಸು ಜಾತ್ರೆಯಲ್ಲಿ ಅಲೆಯತೊಡಗಿತು. ಅದೂ ಇದು, ರಾಟೆ ಚಕ್ರ, ಆಟ ವಿನೋದ ಎಲ್ಲ ಆದ ಮೇಲೆ… ಇಷ್ಟದ ವಸ್ತುಗಳನ್ನು ಖರೀದಿಸುವ ಸಮಯ! ಅಕ್ಕನ ಕೈಯನ್ನು ಹಿಡಿದೇ ನಡೆಯುತ್ತಿದ್ದ ಭಾವ, ‘ನಳಿನೀ…ಬಾ..ಬಳೆ ತೊಡುಸ್ತೀನಿ…ನಿಮಗಿಬ್ಬರಿಗೂ’ ಎನ್ನುತ್ತಾ..ಬಳೆಯಂಗಡಿಯ ಸಾಲಿಗೆ ಎಳೆದೊಯ್ದರು. ಅಕ್ಕನಿಗೋ ಗಾಜಿನ ಬಳೆಗಳೆಂದರೆ ಪ್ರಾಣ ! ನನಗೂ ಅಷ್ಟೆ! ಕೆಳಗೆ ಚಾಪೆಯಲ್ಲಿ ಕುಳಿತು ದಿಂಡಿನಲ್ಲಿದ್ದ ಗಿಲೀಟು ಬಳೆಗಳಲ್ಲಿ ಇಷ್ಟವಾದುದನ್ನು ಆರಿಸಿ…ಒಂದೊಂದು ಕೈಗೂ ಒಂದೊಂದು ಡಜನ್ ಬಳೆತೊಟ್ಟೆವು.ಅಕ್ಕ ಎರಡೂ ಕೈಗಳನ್ನು ಮುಂಚಾಚಿ ಭಾವನೆದುರಿಗೆ ಹಿಡಿದಾಗ…ಅವರ ಕಣ್ಣುಗಳು ಕೆಂದಾವರೆಯಂತೆ ಅರಳಿ ಅವಳ ಖುಷಿಯನ್ನು ಹೀರಿಕೊಂಡದ್ದು ಸಣ್ಣವಳಾದರೂ ತನಗೆ ಅರ್ಥವಾಗಿತ್ತು.
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
*
ಈಗ ಭಾವನ ನೋಟ ಸ್ತಬ್ಧವಾಗಿದೆ.ಅಕ್ಕನ ಮುಂಚಾಚಿದ ಹಸ್ತದಲ್ಲಿರುವ ಬಳೆಗಳು, ‘ಅದರ ಮೇಲಿನ ಹಕ್ಕೆಲ್ಲವೂ ಈಗ ತಮ್ಮದೇ ಏನೋ ‘ಎಂಬಂತೆ ಕಟ್ಟಳೆಗಳ ಹಕ್ಕು ಚಲಾಯಿಸಲು ಬಂಧುಗಳು ನೆರೆದಿದ್ದಾರೆ ನಿರ್ಭಾವುಕರಾಗಿ. ಅಪ್ಪ ಅಮ್ಮನಿಗೆ ಮಗಳ ದೌರ್ಭಾಗ್ಯಕ್ಕೆ ಕಣ್ಣೀರು ಸುರಿಸುವುದೊಂದನ್ನು ಬಿಟ್ಟು ಬೇರೆ ದಾರಿ ಕಾಣದೆ ಹತಾಶರಾಗಿದ್ದಾರೆ, ಅವಳ ಬದುಕು ಮುಂದೆಂತು…ಎಂಬ ದು:ಖದಲ್ಲಿ!
*
ಒಂದು ಕಿರುಗತ್ತಿ ಅವಳ ಬಳೆಗಳ ಅವಸಾನದ ಹಕ್ಕನ್ನು ಬೆಲೆತೆರದೇ ಗುತ್ತಿಗೆ ಪಡೆದಿದೆ.ಛಿದ್ರಿಸುವವನ ಹಸ್ತಕ್ಕೆ ರಣೋತ್ಸಾಹ…ಈ ದು:ಖವನ್ನು ತನ್ನ ಆಲಿಂಗನದಲ್ಲಿ ಮರೆಸಬೇಕಾಗಿದ್ದವನು… ‘ತನ್ನ ಬಾಳಿನ ಭರವಸೆ’ ಎಂದು ನಂಬಿಕೊಂಡಿದ್ದವನು ಈಗ…ಧರೆಗೊರಗಿದ್ದಾನೆ…. ‘ಅಯ್ಯೋ! ಯಾರಲ್ಲಿ ಹೇಳಲಿ? ಏನುಮಾಡಲಿ’….ಒರತೆ ಬತ್ತಿದ ಕಣ್ಣಲ್ಲಿ…ಕತ್ತಲೆಯ ದಾರಿ…
*
ಅಪ್ಪ ಅಮ್ಮ ಬಾಲ್ಯದಲ್ಲೇ ತೊಡಿಸಿ ಹಬ್ಬಹರಿದಿನಗಳ ಮೊದಲ ಸಂಭ್ರಮವೇ ಆಗಿದ್ದ ಬಳೆಗಳು..ಹೆಣ್ಣುಮಕ್ಕಳ.ಹಸಿರು ಕನಸುಗಳನ್ನು ಉದ್ದೀಪಿಸುವ ಈ ಕಿಣಿ ಕಿಣಿ ಕಂಕಣಗಳು..
ಹೀಗೆ..ನೊಂದ ಹೃದಯದ ನೆತ್ತರನ್ನು ಮತ್ತೂ ಚಿಮ್ಮಿಸುತ್ತಾ…ಖಾಲಿತನವನ್ನುಏಕೆ ತುಂಬಬೇಕು..
ಬಾಳಹಾದಿಯಲ್ಲಿ ನಡುವೆ ಎಂದೋ ಜೊತೆಗೂಡುವ ಸಂಗಾತಿಗೆ..ತನ್ನ ನಿರ್ಗಮನದೊಂದಿಗೆ ಹೆಣ್ಣಿನ ಎಲ್ಲಾ ಸೌಭಾಗ್ಯವನ್ನೂ ಕೊಂಡೊಯ್ಯುವ ಹಕ್ಕನ್ನು ನೀಡಿದವರಾರು? ಅವಳು ಅಮಂಗಳೆಯ ರೂಪದಲ್ಲಿ ಜಗಜ್ಜಾಹೀರಾಗಿ,ಈ ಕ್ರೂರ ವ್ಯವಸ್ಥೆಯ ಜಾಲದಲ್ಲಿ ಬಲಿಪಶುವಾಗದೆ ಬದುಕುವುದಾದರೂ ಹೇಗೆ…
*
ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡು ಹೆಣ್ಣುಗಳಿಬ್ಬರಿಗೂ ಸಮಾನ ಪಾಲುದಾರಿಕೆಯಿದೆ. ಹಾಗಾದರೆ…. ಗಂಡು ಮಾತ್ರ ಏಕೆ ತನ್ನ ವಿಧುರತ್ವದ ಲಕ್ಷಣಗಳಿಂದ ಹೊರತಾಗಿರಬೇಕು?
ಮದುವೆಯಾದ ಮೇಲೆ ಹೊಸದಾಗಿ ಹೆಣ್ಣಿಗೆ ದೊರೆಯುವ ಸೌಭಾಗ್ಯ ಕೇವಲ ಕಾಲುಂಗುರ ಹಾಗೂ ಮಾಂಗಲ್ಯ! ಉಳಿದಂತೆ ಬರಿಗೈಯಲ್ಲಿ ಅವಳನ್ನು ಬಾಳಿಸುವ ಹಕ್ಕನ್ನು ‘ಮಾನವೀಯ’ವೆಂದಾದರೂ ಕರೆದವರು ಯಾರು…?
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
*
ಮದುವೆಯ ಶಾಸ್ತ್ರದಲ್ಲಿ ವರನ ಕಡೆಯವರು ತಂದ ಮಂಗಳದ್ರವ್ಯಗಳ ಚಿತ್ರ ತೇಲಿ ಬಂತು! ಕಾಲುಂಗುರ, ಕಾಲುಗೆಜ್ಜೆ,ಒಡ್ಯಾಣ, ತೋಳಬಂಧಿ, ಬಳೆ, ತಾಳಿಸರ, ಮೂಗುತಿ… ಅರಿಶಿನ ಕುಂಕುಮ… ಬಂಧಿಗಳೆಲ್ಲವೂ…ಬಂಧನದ ಸಂಕೇತ ತಾನೆ! ಅಂದರೆ ಪರಿಧಿ…..! ಪರಿಧಿ ಮೀರದಂತೆ ವಿಧಿಸುವ ದಿಗ್ಬಂಧನ ! ಆದರೆ ಇಂದು ಹೆಣ್ಣಿನ ಪರಿಧಿ ದಿಗ್ದಿಗಂತಗಳನ್ನೂ ಮೀರಿ ವ್ಯಾಪಿಸಿದೆಯಲ್ಲ…ಬಾಹ್ಯಾಕಾಶಕ್ಕೂ ಲಗ್ಗೆಯಿಡುವಂತೆ ! ತೆಕ್ಕೆಯಲ್ಲಿ ನಿಭಾಯಿಸಲು ಸಾಧ್ಯವೇ ಭೋರ್ಗರೆಯುವ ಈ ಜೀವನೋತ್ಸಾಹದ ಪ್ರವಾಹವ? ಹರಿಯಲಿ ಬಿಡಿ ಲೋಕೋದ್ಧಾರಕ್ಕಾಗಿ ! ತನ್ನ ಜೀವವನ್ನೇ ಪಣಕ್ಕಿಟ್ಟು ತಾಯ್ತನದ ಪಟ್ಟದಲ್ಲಿ ಮರುಹುಟ್ಟಿಗೆ,ಭಾಜನಳಾಗುವ ಹೆಣ್ಣಿಗೆ..ಅದನ್ನು ಮೀರಿದ ಸವಾಲೇನಾದರೂ ಇದೆಯೇ ಜಗತ್ತಿನಲ್ಲಿ! ಈ ಅದ್ಭುತ ಸೃಷ್ಟಿಶಕ್ತಿಯಿಂದ ತನ್ನ ಅಸಾಮಾನ್ಯ ಸಾಮರ್ಥ್ಯವನ್ನು ಸಾಬೀತು ಪಡಿಸುವ ಹೆಣ್ಣು ಜನಮನದ ಆರಾಧ್ಯ ದೇವತೆಯಾಗಬೇಕು.ತನ್ನ ಪಾವಿತ್ರ್ಯದ ಅರಿವು ಅವಳಿಗೂ ಇರಬೇಕು ! ಈ ಕಾರಣದಿಂದಲೇ ಸೃಷ್ಟಿಯೂ ಪೂಜ್ಯವಾಗುವುದು! ಸಹನಾ ಮೂರ್ತಿಯಾದ ಧರಿತ್ರೀ ಹೆಣ್ಣಿನ ರೂಪದಲ್ಲಿ,ಜಗತ್ತಿನ ಜೀವಿಗಳಿಗೆಲ್ಲ ‘ತಾಯಿ’ಯ ಸ್ಥಾನದಲ್ಲಿದ್ದು ಆರಾಧಿಸಲ್ಪಡುವುದು. ಸಪ್ತಪದಿ ತುಳಿಯುವಾಗ, ‘ಧರ್ಮೇಚ,ಅರ್ಥೇಚ,ಕಾಮೇಚ ನಾತಿಚರಾಮಿ’ ಎಂಬ ತನ್ನ ಕೈಹಿಡಿದ ಪತಿಯ ಆಶ್ವಾಸನೆಯೊಂದಿಗೆ ಅಗ್ನಿಸಾಕ್ಷಿಯಾಗಿ ದಾಂಪತ್ಯ ಬದುಕಿಗೆ ಅಡಿಯಿರಿಸುವ ಹೆಣ್ಣು ಬರೀ ಅವನ ನೆರಳಾಗಿರುವುದಿಲ್ಲ.’ಕಾರ್ಯೇಷು ದಾಸಿ,ಕರಣೇಷು ಮಂತ್ರಿ,ಭೋಜ್ಯೇಷು ಮಾತಾ, ಶಯನೇಷು ರಂಭಾ..ಹೀಗೆ ನಾನಾ ರೂಪಗಳಲ್ಲಿ ಅವನ ಜೀವನದ ಹಡಗು ಮುಳುಗದಂತೆ ಸದಾ ಕಣ್ಗಾವಲಾಗಿ,’ಮುಳುಗೋನ್ ಬೆನ್ನಿಗೆ ಬೆಂಡಾಗಿ’ ಜೊತೆಜೊತೆಯಲ್ಲೇ ಸಾಗಿಬರುತ್ತಾಳೆ.ಆಧುನಿಕ ಸಂದರ್ಭದಲ್ಲಿ ಈ ಪವಿತ್ರ ಸಂಬಂಧದ ಬಂಧನದ ಮಧುರಾನುಭೂತಿಯಲ್ಲಿ ಅಲ್ಲಲ್ಲಿ ಅಪಸ್ವರ ಕೇಳಿಬರುತ್ತಿದೆಯಾದರೂ.. ಸನಾತನತೆಯ ಸಾಂಸ್ಕ್ರತಿಕ ಬಂಧನವೂ ಇದೇ ಕಾರಣಕ್ಕಾಗಿ ಬೆಸೆಯಲ್ಪಡುತ್ತಿತ್ತು. ಅದು, ‘ಭದ್ರತೆಯನ್ನೂ, ಮಂಗಳಕರ ಬದುಕಿಗೆ ರಕ್ಷಣೆಯನ್ನೂ ಒದಗಿಸಲಿ’ ಎಂಬ ಮಹೋದ್ದೇಶದಿಂದ…! ಮನು ತನ್ನ ‘ಸ್ಮೃತಿ’ಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ,’ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:’ಎಂಬುದು ಕೂಡ ಇಂತಹ ಸುರಕ್ಷಿತ ಬಂಧನದ ಮಧುರ ದಾಂಪತ್ಯದ ಪರಿಣಾಮವನ್ನು ಗಣಿಸಿಯೇ…ಇರಬಹುದಲ್ಲವೇ?
*
ಆದರೆ ಹೆಜ್ಜೆ ಹೆಜ್ಜೆಗೆ ವಿರೋಧಿಸಲ್ಪಡುವ ,ಆಕ್ರೋಶಕ್ಕೆ ಪ್ರಚೋದನೆ ನೀಡುತ್ತಿರುವ ಅವನ ಈ ಮತ್ತೊಂದು ಹೇಳಿಕೆಯನ್ನೂ ಗಮನಿಸಿ.
‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’
‘ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಅವಳು ಬಾಲ್ಯದಲ್ಲಿ, ತಂದೆ ತಾಯಿಗಳ ಆಸರೆಯಲ್ಲಿ, ಯೌವನದಲ್ಲಿ ಪತಿಯ ಆಶ್ರಯದಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿರಬೇಕು’. ಒಂದು ಸುಸಂಬದ್ಧ ಸಮಾಜದ ಸುಂದರ ಪರಿಕಲ್ಪನೆ ಇಲ್ಲವೇ ಈ ಆಶಯದಲ್ಲಿ! ಈಗ ನಾವೇ ನೋಡುತ್ತಿರುವಂತೆ, ಮುಕ್ತತೆಯ ಅಪಾಯವನ್ನು ಲೆಕ್ಕಿಸದೆ, ಸ್ವಂತ ಸಂಪಾದನೆಯ ಉತ್ಸಾಹದಲ್ಲಿ
ಯಾರ ಎಚ್ಚರಿಕೆಯ ಮಾತುಗಳಿಗೂ ಬೆಲೆ ನೀಡದೆ ಬದುಕಿನ ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ ಅಲ್ಲವೆ? ಅಷ್ಟೇ ಅಲ್ಲ, ಸ್ವಾತಂತ್ರ್ಯದ ಹುಚ್ಚಿನಲ್ಲಿ ಸ್ವಂತ ದುಡಿಮೆಯ ಅಮಲಿನಲ್ಲಿ, ಯಾವು ಯಾವುದೋ ಕ್ರೂರ ಜಾಲಕ್ಕೆ ಸಿಲುಕಿ ಹೊರಬರಲಾಗದೆ ಹತಾಶರಾಗಿ ವ್ಯವಸ್ಥೆಯ ಬಲಿಪಶುವಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿಯೇ ಇದೆ ಅಲ್ಲವೇ?.
ಹದಿಹರಯದ ಅದೆಷ್ಟೋ ಹೆಣ್ಣುಮಕ್ಕಳು ಸುಲಭ ಗಳಿಕೆಯ ವ್ಯಾಮೋಹದಿಂದಲೋ, ಪ್ರಚಾರಪ್ರಿಯತೆಯಿಂದಲೋ, ಕೀರ್ತಿಶನಿಯ ಬೆನ್ನಟ್ಟಿ ಮುಂದಿನ ಸುಂದರ ಬದುಕಿಗೆ
ಅರ್ಹತೆಯಿಲ್ಲದೇ ನಿರಸನಹೊಂದಿ ಅಮಲುಗಳ ದಾಸರಾಗುತ್ತಿದ್ದಾರೆ.ಹಲವೊಮ್ಮೆಸ್ವತಂತ್ರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವುದರಲ್ಲಿ ಎಡವಿ ತಮ್ಮ ಪ್ರಾಣಕ್ಕೇ ಅಪಾಯ ತಂದುಕೊಳ್ಳುವ ಸ್ಥಿತಿಗೆ ತಲುಪುತ್ತಾರೆ.ಅದಕ್ಕಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯ ಮೂಡುವವರೆಗೆ ಹೆಣ್ಣುಮಕ್ಕಳು,ಹೆತ್ತವರ ರಕ್ಷಣೆಯಲ್ಲಿ,ಮಾರ್ಗದರ್ಶನ
ದಲ್ಲಿ ಇರಬೇಕೆಂದು ‘ಮನು’ ಬಯಸಿರುವುದರ ಆಶಯ ಉತ್ತಮವಾಗಿಯೇ ಇದೆ ಅನಿಸುವುದಿಲ್ಲವೇ?
*
‘ಬಳೆಗಾರ ಬಂದಿದ್ದಾನೆ, ಬಳೆ ತೊಡಗಿಸಿಕೊಳ್ಳಿ, ನಾಡಿದ್ದು ಮದುವೆಯ ಶಾಸ್ತ್ರ ಇದೆಯಲ್ಲ!’ ಒಳಗಿನಿಂದ ಬಂತು ಅಮ್ಮನ ಧ್ವನಿ. ಬಳೆಗಾರ ಮನೆಗೆ ಬರುವುದೇ ಶುಭ ಲಕ್ಷಣದ ಸಂಕೇತ ! ಬಣ್ಣ ಬಣ್ಣದ ಬಳೆಮಲಾರಗಳು, ಊರೂರಿನ ಸುದ್ದಿ ಬಿತ್ತರಿಸುವ ಅವನ ಆತ್ಮೀಯತೆ,ಹೆಂಗಳೆಯರೆಲ್ಲ ಚಪ್ಪರದಡಿ ಕಿಲಕಿಲ ನಗುತ್ತಾ, ಮದುಮಗಳ ಕಂಗಳಲ್ಲಿ ಕಾಮನಬಿಲ್ಲಿನ ರಂಗುಗಳನ್ನು ಮೂಡಿಸುತ್ತಾ,ತಾವೂ ಸಂಭ್ರಮಿಸುವ ಸುಂದರ ಆಚರಣೆ!
ಅಲ್ಲಿ ನಿಷಿದ್ಧವಿದ್ದ ಕಂಗಳಲ್ಲಿ ಬತ್ತಿಹೋದ ಕನಸುಗಳು ಮೌನಶರಧಿಯನ್ನು ಒಡಲಿನಲ್ಲಿ ಹುದಗಿಸಿ ಯಾರ ಗಮನಕ್ಕೂ ಬಾರದೆ ಬಿಕ್ಕುತ್ತಾ ಇರುವುದೇ ಒಂದು ದುರಂತ ! ನಳಿನಿ ಅಮಂಗಳೆ ಬೇಗ ತನ್ನ ಗಂಡನನ್ನು ತಿಂದುಕೊಂಡಳು. ಅವಳು ಅಲ್ಲಿರುವುದು ಬೇಡ,ಮದುಮಗಳಿಗೆ ಶುಭವಲ್ಲ! ತನ್ನದೇ ಹೆತ್ತವರ ಮಾತು. ನಿಟ್ಟುಸಿರಲ್ಲದೆ ಬೇರೇನು ಬರಲು ಸಾಧ್ಯ..?
ಫೋಟೋ ಕೃಪೆ : google ಸಾಂದರ್ಭಿಕ ಚಿತ್ರ
*
ಬಳೆ ಹಾಕದಿರುವುದೇ ಜೀನ್ಸ್ ಧಾರಿಗಳಿಗೆ ಒಂದು ಫ್ಯಾಷನ್ ಆಗಿರುವಾಗ ಇದಕ್ಕೆಲ್ಲ ಅರ್ಥವಿದೆಯೇ ಎಂದೂ ಅನ್ನಿಸುವುದಂಟು. ಆದರೆ ಮೊನ್ನೆ ಅಲ್ಲೆಲ್ಲೋ ಮದುವೆಯಾದ ಭಾರತೀಯ ಕಟ್ಟಾ ಸಂಪ್ರದಾಯವಾದಿ ವಿದೇಶೀ ಹೆಂಡತಿ, ನಮ್ಮಂತೆ ಜರತಾರಿ ಸೀರೆಯುಟ್ಟು ಆ ಅಚ್ಚ ಬಿಳುಪು ಕೈಗಳಿಗೆ,ಬಣ್ಣಬಣ್ಣದ ಬಳೆಗಳನ್ನು ಧರಿಸಿ,ತಲೆ ತುಂಬಾ ಹೂಮುಡಿದು ಸಾಂಪ್ರದಾಯಿಕವಾಗಿ ವಿವಾಹ ಮಂಟಪ ಪ್ರವೇಶಿಸಿದ್ದು ಭಾರತೀಯ ಸಂಪ್ರದಾಯದ ಗೆಲುವು ತಾನೆ?
*
ಆಭರಣಗಳನ್ನು ಧರಿಸುವುದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳಿರುವಾಗ…ಅದರ ನಾದ ಲಹರಿಯಲ್ಲಿ..ದಾಂಪತ್ಯದ ನಾವೆ..ಹಿತವಾಗಿ ತೇಲುವಾಗ
ಆನಂದಕಾರಣವಾದ ಇಂತಹ ಸಾಧನಗಳನ್ನು ಅದರಿಂದ ವಂಚಿತರಾದ ಹೆಣ್ಣು ಮಕ್ಕಳೂ ಧರಿಸುವ ಔದಾರ್ಯವನ್ನು ತೋರಿಸುವಷ್ಟು ಜನರ ಮನೋಭಾವ ಬದಲಾಗಲಿ ಎಂಬ ಹಾರೈಕೆ ಪ್ರತಿ ಸಾಮಾಜಿಕ ಚಿಂತಕರದೂ ಹೌದು.ಬದುಕಿನ ಅನಿವಾರ್ಯತೆಗಾಗಿ ಹೊರಗೆ ದುಡಿಯಲು ಹೊರಟ ಹೆಣ್ಣಿನ ಸೌಭಾಗ್ಯ ಚಿಹ್ನೆಗಳೇ ಅವಳ ಅಸುರಕ್ಷಿತತೆಗೆ ರಕ್ಷಾಕವಚವೂ
ಆಗುತ್ತದೆ ಅಲ್ಲವೇ. ತನಗೆ ಪರಿಚಯವಿರುವ ಹೆಣ್ಣು ಮಗಳೊಬ್ಬಳ ನಿಲುವು ಧುತ್ತನೆ ನೆನಪಾಗುತ್ತದೆ ಶ್ಯಾಮಲಾಳಿಗೆ! ಎಲ್ಲಿಗೋ ಹೊರಟು ಸರ್ರನೆ ಡ್ರಾಯರ್ ಎಳೆದು, ನನ್ನೆದುರೇ
ಕರಿಮಣಿಯೊಂದನ್ನು ಕುತ್ತಿಗೆಗೆ ನೇತು ಹಾಕಿ ನಡೆಯಿರಿ ಬರುತ್ತೇನೆ ‘ಎಂದಾಗ,ಅವಳ ಕಣ್ಣಿನಲ್ಲಿ ಮಿಂಚಿದ ವಿಷಾದದ ಛಾಯೆಗೆ ದಿಗ್ಭಾಂತಳಾಗಿದ್ದೆ.
ಹೌದು ಮಂಗಳಸೂತ್ರ ತೊಡುವಂತಿಲ್ಲ.ಆದರೆ ‘ಇಮಿಟೇಟಿಂಗ್ ಜ್ಯುವೆಲ್ಲರಿ’ ತೊಡಬಹುದಲ್ಲ. ಇದು ಸಮಾಜದ ಕೆಟ್ಟ ಕಣ್ಣಿನಿಂದ ಪಾರಾಗಲು ತಾನೇ ಕಂಡು ಕೊಂಡ ತಂತ್ರ ಅಷ್ಟೆ !
ತನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಪತಿಯನ್ನು ಉಳಿಸಿಕೊಳ್ಳಲು ತಾವು ಗಳಿಸಿದ್ದೆಲ್ಲ ಸಂಪತ್ತೂ ಸೋರಿಹೋಯಿತು.ವಾಸವಿದ್ದ ಮನೆಯೂ ಜಲಸ್ಫೋಟದಿಂದ ರೊಟ್ಟಿ ಡಬ್ಬಿಯಂತೆ ಕೊಚ್ಚಿ ಹೋಯಿತು,ಸಾಮಾನು ಸರಂಜಾಮುಗಳ ಸಹಿತ!
ಮಕ್ಕಳಿಬ್ಬರನ್ನೂ ಅಪ್ಪಕೊಳ್ಳುವುದರ ಹೊರತಾಗಿ ತಾನೇನೂ ಮಾಡುವಂತಿರಲಿಲ್ಲ. ಮನೆ ಕುಸಿಯುತ್ತಿರುವ ಮೊದ ಸೂಚನೆ ಕೊಟ್ಟು ಬೆಳ್ಳಂಬೆಳಿಗ್ಗೆ. ತನ್ನ ನೆರೆಯವರನ್ನೆಲ್ಲ ಎಚ್ತರಿಸಿದವಳು ತಾನೇ. ಆದರೆ ಅವರಿಗೆಲ್ಲ ನೆರವಿನ ಹಸ್ತ ನೀಡಲೂ ಇಡೀ ಸಮೂಹವೇ ನೆರೆದಿತ್ತು.ತಾನು ಮಾತ್ರ ಅಸಹಾಯಕಳಾಗಿ ನೋಡುತ್ತಲೇ ಇದ್ದೆ….ಮಾನವೀಯತೆ ಸುತ್ತು ಬಿಟ್ಟಿತ್ತು. ಆಗಲೇ… ಬದುಕಬೇಕೆಂಬ ಕೆಚ್ಚು ಮೂಡಿತು.ಅಲ್ಲಿ ಇಲ್ಲಿ ಆಶ್ರಯ ದೊರೆಯಿತು.ತವರಿನವರು ಸ್ವಲ್ಪ ಕಾಲನೆರವು ನೀಡಿದರು.ನಾನೇ ಬದುಕುವ ನಿರ್ಧಾರ ಮಾಡಿ ಹೊರಬಂದೆ.ವೈಧವ್ಯ ನನ್ನನ್ನು ಸಮಾಜದಲ್ಲಿ ದುರ್ಬಲಗೊಳಿಸಬಾರದೆಂಬ…ಎಚ್ಚರಿಕೆಯಿಂದ ನಾನು ಇವುಗಳನ್ನು ಧರಿಸಲೇ ಬೇಕಾಗಿದೆ.ಮರುಮದುವೆಗಳ ಪ್ರಸ್ತಾಪವನ್ನೆಲ್ಲ ತಿರಸ್ಕರಿಸಿದೆ.ನನ್ನ ಪತಿ ನನಗೆ ಅಲ್ಪಕಾಲದಲ್ಲಿಯೇ ದಾಂಪತ್ಯದ ಆನುರಾಗವನ್ನು ಧಾರೆಯೆರೆದಿದ್ದರು.ಅವರ ನಿರ್ಮಲವಾದ ಅಮೃತದಂತಹ ಪ್ರೀತಿಯನ್ನು ಸಕ್ಕರೆಯ ಸವಿಗೆ ಬಲಿಕೊಡುವುದು ತರವಲ್ಲ. ಅವರು ನೆನಪೇ ನನಗೆ ಶ್ರೀರಕ್ಷೆ. ಬದುಕನ್ನು ಗೆದ್ದಿದ್ದೇನೆ.ಮಕ್ಕಳೀಗ ಶಿಕ್ಷಣ ಮುಗಿಸಿ ಸ್ವಾವಲಂಬಿಗಳಾಗಿದ್ದಾರೆ.
ಆರ್ಥಿಕ ಭದ್ರತೆ ಲಭಿಸಿದೆ. ದಾರಿ ಇನ್ನೂಮುಂದಿದೆ ಗೆಲುವು ಛಲ ಎದೆಯಲ್ಲಿದೆ ಎಂದು ಅವಳು ನಿರ್ಭಾವುಕ ಮಾಡಿ ಹೇಳುವಾಗ, ಭಾರತೀಯ ಕೌಟುಂಬಿಕ ಪರಂಪರೆಯ ಬಗ್ಗೆ ಹೆಮ್ಮೆ ಎನಿಸಿತು ಅದಕ್ಕೆ ಬದ್ಧವಾಗಿರುವ ,ಇನ್ನೂ ಮದುವೆ ಆಗದಿರುವ ತರುಣಿಯಂತಿರುವ ಅವಳ ಕರ್ತವ್ಯ ಪ್ರಜ್ಞೆ ! ಸ್ವೇಚ್ಛೆಗೂ ಸಂಯಮಕ್ಕೂ ಇರುವ ಅಂತರ ಇದ್ದೇ ಅಲ್ಲವೇ…
ಸಾಮಾಜಿಕ ಮನಸ್ಸುಗಳು ಈ ನಿಟ್ಟಿನಲ್ಲಿ ಉದಾರವಾಗಲಿ, ಜಾಲದಲ್ಲಿ ಬದುಕುವ ಜೀವಚೈತನ್ಯಗಳನ್ನು ಪ್ರಜ್ವಲಿಸುವಂತೆ ಮಾಡಿ ಸಮಾಜೋಪಯೋಗಿಗಳನ್ನಾಗಿ
ಮಾಡಲು ಪ್ರೋತ್ಸಾಹಿಸಲಿ ಎಂಬುದು ಎಲ್ಲಾ ಪ್ರಜ್ಞಾವಂತ ಮನಸ್ಸಿನ ಕಳಕಳಿಯಾಗಲಿ ಎಂಬುದೇ ನನ್ನ ಹಾರೈಕೆ !
ಅರುಂಧತಿಯು ಸಾಹಸಗಾಥೆಯ ಆಲೋಚನಾ ಲಹರಿಯಲ್ಲಿ ತನ್ನ ಮನಸ್ಸನ್ನು ತೇಲಿಬಿಟ್ಟ ಶ್ಯಾಮಲಾಳನ್ನು…ಅರಗಿಳಿಯ ಕರೆಯೊಂದು ಎಚ್ಚರಿಸಿತು.
ಫೋಟೋ ಕೃಪೆ : google
*
ಹೊರಗಿನಿಂದ ಸಂಭ್ರಮದಿಂದ ಓಡಿ ಬಂದ ಕಂದ ಶುಭಾ ‘ಅಮ್ಮಾ’… ಎನ್ನುತ್ತಾ ಧಾವಿಸಿ ಮೇಲೇರಿ ಕೊರಳು ಬಳಸಿ ಕೆನ್ನೆಗೊಂದು ಹೂಮುತ್ತನ್ನಿತ್ತಳು. ತನ್ನ ಕೈಗಳನ್ನು ಮುಂದೆ ಚಾಚಿ
ಝಣತ್ಕರಿಸುತ್ತಾ, ನೃತ್ಯ ಭಂಗಿಯಲ್ಲಿ ನಲಿದಾಡಿದಾಗ, ‘ಯಾರೇ ಹಾಕಿಸಿದ್ದು?’ ಎನ್ನುವ ಪ್ರಶ್ನೆಗೆ ‘ನಾಳೆ ನನ್ನ ಹುಟ್ಟುಹಬ್ಬವಲ್ವಾ ಅಮ್ಮಾ,ಪಕ್ಕದ ಮನೆ ಆಂಟಿ ತಂದಿದ್ರು ತೊಡಿಸಿಕೊಂಡು ಬಂದೆ’ ಎನ್ನುತ್ತಾ ‘ಅಪ್ಪನಿಗೆ ಅಣ್ಣನಿಗೆ’ ತೋರಿಸಿಬರುತ್ತೇನೆ ಎನ್ನುತ್ತಾ ಹಾರು ನಡಿಗೆಯಲ್ಲಿ ಒಳಕೋಣೆಗೆ ಧಾವಿಸಿದಳು.
ತಾನು ನೋಡುತ್ತಲೇ ನಿಂತಿದ್ದೆ…ಅದೇಕೋ ಅಷ್ಟು ವರುಷಗಳ ಹಿಂದಿನ ನಳಿನಿಯ ಪ್ರಸಂಗ ನೆನಪಾಗಿ ಸಣ್ಣಗೆ ಎದೆ ನಡುಗಿತು.
ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? –(ಭಾಗ ೨)
- ಅದೊಂದು ಸರಕಾರೀ ಶಾಲೆ ! -(ಭಾಗ ೩)
ಮುಂದೆ ಭೇಟಿಯಾಗೋಣ ಒಂದು ವಿಶೇಷ ಅನುಭೂತಿಯೊಂದಿಗೆ
- ಶಿವದೇವಿ ಅವನೀಶಚಂದ್ರ, ಕೊಡಗು