ಚಿಕ್ಕಮ್ಮನ ಪ್ರೀತಿಯಲ್ಲಿ ಮುದ್ದಾಗಿ ಬೆಳದಿದ್ದ ಸ್ವಾತಿಗೆ ಆಗತಾನೆ ಚಿಗುರೊಡೆದಿದ್ದ ಕಿರಣ್ ನ ಮೇಲಿನ ಪ್ರೀತಿ ಹೆಚ್ಚಾಗಿ ಕಾಣುತ್ತದೆ, ಅವನನ್ನು ಬಿಟ್ಟು ಬದುಕಲಾರೆ ಎಂದು ಪ್ರೀತಿಯಿಂದ ಸಾಕಿದ ಚಿಕ್ಕಮ್ಮನಿಗೆ ಬೆನ್ನು ತೋರಿಸಿ ಕಿರಣ್ ಹಿಂದೆ ಹೋಗುವ ಸ್ವಾತಿಗೆ ಮುಂದೆ ಏನಾಗುತ್ತದೆ. ಕಿರಣನ ಪ್ರೀತಿಯ ಬೆಚ್ಚುಗೆಯಲ್ಲಿ ಸ್ವಾತಿ ಪ್ರಪಂಚ ಮರೆಯುತ್ತಾಳಾ ಅಥವಾ ಕಿರಣನ ವಾಸ್ತವ ಗುಣದಿಂದ ಬೇಸತ್ತು ತನ್ನನ್ನು ಸಾಕಿ ಸಲುಹಿದ ಚಿಕ್ಕಮ್ಮನ ಆಶ್ರಯ ಪಡೆಯುತ್ತಾಳಾ…ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರ ಅಂಕಣವನ್ನು ತಪ್ಪದೆ ಮುಂದೆ ಓದಿ…
‘ಮೇಡಂ, ನಿಮ್ಮೊಡನೆ ಮಾತಾಡಬೇಕು’… ಎಂಬ ಧ್ವನಿ ಕೇಳಿಯೇ ಕೋಪ ನೆತ್ತಿಗೇರಿತ್ತು. ‘ಎಷ್ಟು ಸಾರಿ… ಹೇಳೋದು ನಿಮಗೆ ಎಲ್ಲಾ ಗೋಜಲುಗಳನ್ನು ಬಿಡಿಸಿಕೊಟ್ಟು ನೆಮ್ಮದಿ ಜೀವನ ಮಾಡಲಿ ಎಂದು ಒಂದ್ದೊಳ್ಳೆಯ ದಾರಿಯನ್ನು ತೋರಿಸಿದ್ರು, ಪುನಃ… ಅಂತಹದ್ದೆ ಬದುಕನ್ನು ಬೇಕೆಂದು ಆರಿಸಿಕೊಂಡಿರುವ ನಿಮ್ಮ ಮಗಳ ವಿಚಾರವನ್ನು ದಯವಿಟ್ಟು ನನಗೆ ಪದೆ ಪದೆ ಹೇಳಿ ತೊಂದರೆ ಕೊಡಬೇಡಿ. ನನಗೆ ಆಫೀಸ್ಗೆ ಲೇಟ್ ಆಗ್ತಿದೆ’.. ಎಂದು ಕರೆ ಕಟ್ ಮಾಡಿ ಆಫೀಸ್ಗೆ ಹೊರಡಲು ಅನುವಾದೆ.
ಆಫೀಸ್ ಮುಂದಿನ ಪಾರ್ಕಿಂಗ್ನಲ್ಲಿ ಗಾಡಿ ನಿಲ್ಲಿಸಿ, ಆಫೀಸ್ ಕಡೆಗೆ ನೋಡಿದರೆ ಬಾಗಿಲ ಬಳಿಯಲ್ಲೆ ಸುಶೀಲಾ ನಿಂತಿದ್ರು, ಬರುವ ಕೋಪವನ್ನು ತಡೆದುಕೊಂಡು ಕಛೇರಿ ಒಳಗೆ ಹೋಗಿ ದೇವರಿಗೆ ದೀಪ ಹಚ್ಚಿ ಆಕೆಯನ್ನು ಒಳಗೆ ಕರದೆ. “ನನಗೆ ಗೊತ್ತು ಮೇಡಂ… ನಿಮಗೆ ಕೋಪ ಇದೆ ಅಂತ, ನೀವು ನಮ್ಮ ಒಳ್ಳೆಯದಕ್ಕೆ ಅಷ್ಟೆಲ್ಲಾ ರಿಸ್ಕ್ ತಗೊಂಡು ಕೆಲಸ ಮಾಡಿ ಕೊಟ್ಟಿದ್ರಿ..ಆದರೆ ಆ ಮನೆಹಾಳಿ ಎಲ್ಲಾ ಹಾಳು ಮಾಡಿಬಿಟ್ಲು, ತಾನು ಹಾಳಾಗೋದು ಅಲ್ಲದೆ ನಮ್ಮನ್ನು ಸಂಕಟಕ್ಕೆ ತಳ್ಳಿದ್ಲು!! ಈಗ ಇವ್ರು ಅವಳನ್ನು ಮನೆಗೆ ಸೇರಿಸಲ್ಲಾ ಅಂತಾರೆ… ನಾನೇನು ಮಾಡಲಿ, ಅವಳನ್ನು ಸಾಕಿದ ತಪ್ಪಿಗೆ ಮನೆತನದ ಮಾನ ಮರ್ಯಾದೆ ಕಳ್ಕೊಂಡು ಸಂಬಂಧಿಕರ ಕಣ್ಣಿನಲ್ಲಿ, ಯಾಕೇ… ಸ್ವತಃ ನನ್ನ ಗಂಡನ ದೃಷ್ಟಿಯಲ್ಲೂ ಕೆಟ್ಟವಳಾಗಿರುವೆ. ಆದರೂ ಏನಾದರೂ ಸಹಾಯ ಮಾಡಲು ಸಾಧ್ಯವಾ ? ಮತ್ತೆನಾದರೂ ಪರಿಹಾರ ಇದೆಯಾ..?? ಎಂದು ಕೇಳಲು ಬಂದೆ’… ನೋಡು ನೋಡುತ್ತಾ ಅವಳ ಬದುಕು ಚಿಂದಿ ಚಿತ್ರಾನ್ನ ಆಗೋದನ್ನ ಹೇಗೆ ನೋಡಿಕೊಂಡು ಸುಮ್ನಿರಲಿ ಎಂದು ಒಂದೇ ಸಮನೆ ಕಣ್ಣೀರು ಇಟ್ಟ ಸುಶೀಲಾರನ್ನು ನೋಡಿ ಅಯ್ಯೋ ಪಾಪ ಅನಿಸಿತು.
ಫೋಟೋ ಕೃಪೆ : The indian express
ಸ್ವಾತಿಯ ಅಪ್ಪ- ಅಮ್ಮ ಅವಳ ತಮ್ಮ ಹುಟ್ಟಿದ ಒಂದು ವರ್ಷಕ್ಕೆ ಸಂಸಾರದಲ್ಲಿ ಜಗಳ ಮಾಡಿಕೊಂಡು ಇಬ್ಬರನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು. ಅನಾಥವಾಗಿದ್ದ ಅಕ್ಕನ ಪುಟ್ಟ ಮಕ್ಕಳನ್ನು ಸುಶೀಲಾ ಕರೆದುಕೊಂಡು ಬಂದು ತಮ್ಮ ಒಬ್ಬ ಮಗನೊಂದಿಗೆ ಈ ಇಬ್ಬರು ಮಕ್ಕಳನ್ನು ಬೆಳಸೋದಕ್ಕೆ ಶುರುಮಾಡಿದ್ರು ಸ್ವಾತಿಯ ಅಮ್ಮನಿಗೆ ಸುಶೀಲಾಳನ್ನು ಕಂಡರೆ ತುಂಬಾ ಪ್ರೀತಿ ಪುಟ್ಟ ತಂಗಿ ಕಷ್ಟ ಸುಖಕ್ಕೆ ಆಸರೆ ಆಗುವವಳು ಅಂತ ಈಕೆಗೂ ಅಷ್ಟೇ ಅಕ್ಕನ ಮೇಲೆ ವಿಪರೀತ ಮಮಕಾರ, ತನ್ನ ಮಗನ ಜೊತೆಗೆ ತಂಗಿಯ ಇಬ್ಬರು ಮಕ್ಕಳನ್ನು ತಾನು ಹಡೆದ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಸಾಕಿದ್ರು. ಆದರೆ ಸ್ವಾತಿಯ ತಮ್ಮ ಸ್ವಲ್ಪ ಬುದ್ಧಿಮಾಂದ್ಯನಾಗಿದ್ದರಿಂದ ಸುಂಟಿಕೊಪ್ಪದ ಸ್ವಾಸ್ಥ ಕೇಂದ್ರದಲ್ಲಿ ಬಿಟ್ಟು ಸಲುಹುತ್ತಿದ್ದರು. ಸ್ವಾತಿಯನ್ನು ಒಳ್ಳೆಯ ಕ್ವಾನೆಂಟಿನಲ್ಲಿ ವಿದ್ಯಾಭ್ಯಾಸ ಮಾಡಿಸಿ ಪದವಿಯನ್ನು ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮಾಡಿಸಿದ್ರು. ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಸುಶೀಲಾರ ಗಂಡ ಸಾಕಷ್ಟು ಸ್ಥಿತಿವಂತರು ಆಗಿದ್ದು ಇಪ್ಪತೈದು ಎಕರೆಯಷ್ಟು ಕಾಫಿ ತೋಟ ,ಜೊತೆಗೆ ಆರೇಳು ಬಾಡಿಗೆ ಮನೆ, ಸಾಕಷ್ಟು ಅಂಗಡಿಮಳಿಗೆಗಳನ್ನು ಹೊಂದಿರುವ ಒಂದು ಕಾಂಪ್ಲೆಕ್ಸನ್ನು ಹೊಂದಿದ್ದು ಬಡ್ಡಿ ವ್ಯವಹಾರವನ್ನು ಮಾಡುತ್ತಿದ್ರು. ಸುಶೀಲಾರಿಗೆ ಅಕ್ಕನ ಮಗಳೆ ತನ್ನ ಮಗಳಾಗಿದ್ದರಿಂದ ಅವಳ ಮದುವೆಯನ್ನು ಅದ್ದೂರಿಯಾಗಿ ಒಂದೊಳ್ಳೆಯ ಮನೆತನದ ವಿದ್ಯಾವಂತ ಗುಣವಂತ ಹುಡುಗನ ಜೊತೆಗೆ ಮದುವೆ ಮಾಡಿಕೊಡಬೇಕು ಎಂದು ಸುಶೀಲಾ ಮತ್ತು ಅವಳ ಗಂಡ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.
ಪದವಿ ಮುಗಿಸಿ ಮನೆಗೆ ಬಂದಿದ್ದ ಸ್ವಾತಿ ತನ್ನ ಚಿಕ್ಕಮ್ಮನೊಂದಿಗೆ ಹೊರಗಡೆ ಸುತ್ತಾಡೋಕೆ ಹೋಗೋದು ಬಿಟ್ಟರೆ ಮತ್ತೆ ಎಲ್ಲಿಗೂ ಹೊರಗೆ ಹೋಗುವ ಅಭ್ಯಾಸವಿರಲಿಲ್ಲಾ. ಆದರೆ ಇವರದೆ ಕಾಂಪ್ಲೆಕ್ಸ್ನಲ್ಲಿ ಕಾಮಾಕ್ಷಿ ಎನ್ನುವ ಮಹಿಳೆಯೊಬ್ಬರು ಟೈಲರಿಂಗ್ ಮಾಡಿಕೊಂಡು ಇದ್ದರೂ ಚಿಕ್ಕ ವಯಸ್ಸಿನಲ್ಲೆ ವಿಧವೆಯಾಗಿದ ಆಕೆ ತನಗಿದ್ದ ಒಬ್ಬ ಮಗನನ್ನು ಚನ್ನಾಗಿ ಓದಿಸಿದ್ರು. ಕಿರಣ್ ಸಹ ಓದಿನಲ್ಲಿ ತುಂಬಾ ಚುರುಕು ಮಾತ್ರವಲ್ಲ ಎಲ್ಲಾ ವಿಚಾರದಲ್ಲೂ ಬಹಳ ಚೂಟಿ ಇದ್ದ, ಬೆಂಗಳೂರಿನಲ್ಲಿ ಯಾವುದೊ ಒಂದು ಕಂಪನಿಯಲ್ಲಿ ಸಾಧಾರಣ ಸಂಬಳದ ಕೆಲಸ ಮಾಡುತ್ತಿದ್ದ. ನೋಡಲು ಸುರದ್ರೂಪಿ ಆಗಿದ್ದ ಕಿರಣ್ ಬಳಿ ಎಲ್ಲಾ ತರಹದ ದುರ್ಗುಣಗಳಿಗೇನೂ ಬರವಿರಲಿಲ್ಲಾ..
ಸ್ವಾತಿ ಎಂಟನೇ ತರಗತಿ ಓದುವಾಗ ಟೈಪಾಯಿಡ್ ಬಂದು ಜ್ವರ ಮೆದುಳಿಗೆ ಏರಿದ ಪರಿಣಾಮ ಬುದ್ಧಿ ಮಂಕಾಗುತ್ತ ಬರುತ್ತದೆ. ಇದಕ್ಕೆ ವೈದ್ಯರು ಅವಳಿಗೆ ಜೀವನ ಪರ್ಯಂತ ಒಂದೆರಡು ತರಹದ ಮಾತ್ರೆಗಳನ್ನು ಸಲಹೆ ನೀಡಿ, ದಿನ ತಪ್ಪದೆ ನುಂಗಲು ತಿಳಿಸಿದ್ದರು. ಸ್ವಾತಿ ನೋಡಲು ತುಂಬಾ ಸುಂದರಿ, ಹಾಲ್ಬಣದ ಎತ್ತರದ ನಿಲುವು, ಎತ್ತರಕ್ಕೆ ತಕ್ಕಂತೆ ದೇಹದಕಾಯ, ದುಂಡು ಮುಖ, ಉದ್ದನೆ ಕೇಶರಾಶಿ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನುವ ಚೆಲುವು. ಇಂತಹ ಸುಂದರಿಗೆ ಆರೋಗ್ಯದ ಸಮಸ್ಯೆಯನ್ನು ಒಂದು ಇಟ್ಟಿದ್ದ ಭಗವಂತ. ಈ ಕಾರಣದಿಂದ ಸುಶೀಲಾ ಸ್ವಾತಿಯನ್ನು ಬಹಳ ಜತನದಿಂದ ನೋಡಿಕೊಂಡು ಅವಳನ್ನು ಅಷ್ಟೆ ಜೋಪಾನವಾಗಿ ನೋಡಿಕೊಳ್ಳುವ ಶಾಂತ ಸ್ವಭಾವದ ಹುಡುಗನಿಗೆ ಕೊಟ್ಟು ಮದುವೆ ಮಾಡ್ಬೇಕು ಅಂದುಕೊಂಡಿದ್ರು.
ಒಂದು ದಿನ ಕಾಮಾಕ್ಷಿ ಬಳಿ ಹೊಲಿಯಲು ಕೊಟ್ಟಿದ್ದ ಸುಶೀಲಾರ ಬಟ್ಟೆಯನ್ನು ಕೇಳಲು ಹೋದಾಗ ಕಾಮಾಕ್ಷಿ ಅಂಗಡಿಯಲ್ಲಿ ಇಲ್ಲದೆ ಇದ್ದರಿಂದ ಅವರು ಬರುವರೆಗೂ ಅಲ್ಲೆ ಕಾಯ್ದುಕೊಂಡು ಕೂರುತ್ತಾಳೆ. ಬೆಂಗಳೂರಿನಿಂದ ಬಂದಿದ್ದ ಕಿರಣನ ಪರಿಚಯವಾಗಿದೆ. ಆ ಪರಿಚಯ ಸಲುಗೆ ಆಗಿ ಪರಸ್ಪರ ಪೋನ್ ನಂಬರ್ ಬದಲಾಗಿದೆ. ಅದೆಷ್ಟು ವೇಗವಾಗಿ ಇವರಿಬ್ಬರ ನಡುವೆ ಚಾಟಿಂಗ್ ಶುರುವಾಗಿ ಪರಿಚಯ ಆಗಿ, ಹದಿನೈದು ದಿನಕ್ಕೆ ಅವನ ಮೋಹದ ಬಣ್ಣ ತುಂಬಿದ ಎಲ್ಲಾ ಮಾತುಗಳಿಗೆ ಮರುಳಾಗಿ ಮನೆಬಿಟ್ಟು ಅವನೊಂದಿಗೆ ಓಡಿ ಹೋಗುವಷ್ಟು ಮುಂದುವರೆದು ಬಿಡುತ್ತಾಳೆ. ಅವನಿಗೆ ಚಿಕ್ಕ ಸಂಬಳ ಇದ್ದರು ಅದು ಅವನ ಕೆಟ್ಟ ಚಾಳಿಗೆ ಸಾಕಾಗದೆ ಕಾಮಾಕ್ಷಿ ಅವರಿವರ ಬಟ್ಟೆ ಹೊಲಿದು ಕೂಡಿಟ್ಟಿದ್ದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ. ಇಂತಹವನ ಹಿಂದೆ ಸಾಕಿ ಸಲುಹಿದ ಚಿಕ್ಕಮ್ಮನ ಮಾತು ಕೇಳದೆ ಅವನ ಹಿಂದೆ ಓಡಿಹೋಗುತ್ತಾಳೆ .
ಇತ್ತ ಓಡಿ ಹೋದ ಮಗಳನ್ನು ವಾಪಸ್ಸು ಮನೆಗೆ ಕರೆತರುವ ಎಲ್ಲಾ ಪ್ರಯತ್ನಗಳು ನಡೆಯುತ್ತದೆ. ಠಾಣೆಗೆ ದೂರು ನೀಡಿದ್ದರ ಪರಿಣಾಮ ಇಬ್ಬರನ್ನು ಪೋಲೀಸರು ಹುಡುಕಿ ಕರ್ಕೊಂಡು ಬಂದರು. ಇಬ್ಬರು ಪ್ರಾಪ್ತ ವಯಸ್ಸಿನವರು ಆಗಿದ್ದರಿಂದ ಪೋಲಿಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆಯುತ್ತದೆ. ಹುಡುಗಿಗೆ ಎಲ್ಲರೂ ಬುದ್ಧಿ ಹೇಳಿ ನೋಡುತ್ತಾರೆ. ಅಲ್ಲಿಯವರೆಗೆ ಚಿಕ್ಕಮ್ಮನ ಪ್ರೀತಿಯಲ್ಲಿ ಮುದ್ದಾಗಿ ಬೆಳದಿದ್ದ ಸ್ವಾತಿಗೆ ಕಿರಣನ ಪ್ರೀತಿ ಇನ್ನೂ ಹೆಚ್ಚು ಚಂದವಾಗಿ ಕಾಣುತ್ತದೆ. ಕಿರಣನನ್ನು ಬಿಟ್ಟು ಬರಲಾರೆ ಎಂದು ಸಾಕಿದವರಿಗೆ ಬೆನ್ನು ತಿರುಗಿಸಿ ಹೊರಟೇ ಬಿಡುತ್ತಾಳೆ.
ಫೋಟೋ ಕೃಪೆ : pinterest
ಸುಶೀಲಾ ಸಹ ಸರಿ ಹೋಗುವುದಿದ್ದರೆ ಹೋಗು… ಇನ್ನೆಂದಿಗೂ ಮನೆಗೆ ಬರಬಾರದು… ಎಂದು ಹೇಳಿ ಮಡುಗಟ್ಟಿದ ದುಖಃವನ್ನು ತಡೆದುಕೊಂಡು ಬರುತ್ತಾಳೆ. ಉಟ್ಟ ಬಟ್ಟೆಯಲ್ಲಿ ಕಿರಣನ ಹಿಂದೆ ಓಡಿ ಹೋಗುವಾಗ ಅವಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಹಾಕಿದ್ದ ಒಂದೆರಡು ಲಕ್ಷ ಹಣದ ಪಾಸ್ಬುಕ್, ಅವಳ ಕತ್ತಿನಲ್ಲಿ ಇಪ್ಪತ್ತು ಗ್ರಾಂ ತೂಕದ ಬಂಗಾರದ ಸರ, ಕೈ ಬೆರಳಿನಲ್ಲಿ ಪುಟ್ಟ ಪುಟ್ಟ ಬಂಗಾರದ ನಾಲ್ಕು ಉಂಗುರ, ಕೈಯಲ್ಲಿ ಹತ್ತು ಗ್ರಾಂ ನ ಬ್ರೆಸ್ಲೇಟ್, ಕಿವಿಯಲ್ಲಿ ಪುಟ್ಟ ಓಲೆ ಇತ್ತು. ಇದರ ಹೊರತಾಗಿ ಮತ್ತೇನೂ ಸಿಗುವುದಿಲ್ಲ ಎಂಬುದು ಸ್ವಾತಿಗೂ ಖಾತರಿ ಇತ್ತು. ಅವಳಿಗೆ ಕಿರಣನ ಪ್ರೀತಿಯ ಮುಂದೆ ಮತ್ಯಾವುದು ಬೇಕಿರಲಿಲ್ಲ. ಓಡಿ ಹೊದವರು ರಾಮನಾಥಪುರದ ದೇವಸ್ಥಾನದಲ್ಲಿ ಅರಿಶಿನ ಕೊಂಬು ಕಟ್ಟಿಕೊಂಡು ಮದುವೆ ಶಾಸ್ತ್ರ ಮುಗಿಸಿ ಕೊಣನೂರಿನಲ್ಲಿ ಒಂದು ಪುಟ್ಟ ಮನೆ ಮಾಡಿ ಮಧುಚಂದ್ರವನ್ನು ಮುಗಿಸಿ ಬಂದು ತಮ್ಮ ಪುಟ್ಟ ಸಂಸಾರ ಶುರುಮಾಡುತ್ತಾರೆ. ಮನೆಮಾಡಲು, ಪಾತ್ರೆ ಪಡಗು ಖರೀದಿಸಲು, ಮಧುಚಂದ್ರಕ್ಕೆ ಹೋಗಿ ಬರಲು ಖರ್ಚು ಮಾಡಿದ್ದು ಸ್ವಾತಿಯ ಅಕೌಂಟ್ನಲ್ಲಿದ್ಥ ಹಣ, ಕುಳಿತು ತಿನ್ನುವವನಿಗೆ ಕುಡಿಕೆ ಹಣವು ಸಾಲುವುದಿಲ್ಲ ಎಂಬ ಮಾತಿನಂತೆ ಸ್ವಾತಿಯ ಖಾತೆಯಲ್ಲಿದ್ದ ಹಣವೆಲ್ಲಾ ಬರಿದಾಗುತ್ತಿದ್ದಂತೆ ಕಿರಣನನ್ನು ಬೆಂಗಳೂರಿಗೆ ಹೋಗಿ ಮತ್ತೆ ಕೆಲಸಕ್ಕೆ ಸೇರುವಂತೆ ಸ್ವಾತಿ ಪೀಡಿಸುತ್ತಾಳೆ. ಜೊತೆಗೆ ತಾನು ಬಿ.ಕಾಂ ಓದಿರುವುದರಿಂದ ಕೆಲಸಕ್ಕೆ ಸೇರುವೆ ಇಬ್ಬರು ಬೆಂಗಳೂರಿಗೆ ಹೋಗೋಣ. ಅಲ್ಲದೆ ತನಗೆ ಆರೋಗ್ಯ ಸಮಸ್ಯೆ ಇರುವುದರಿಂದ ಪ್ರತಿನಿತ್ಯ ಮಾತ್ರೆಯನ್ನು ತಗೋಳುವ ವಿಚಾರವನ್ನು ತಿಳಿಸುತ್ತಾಳೆ. ಕಿರಣನಿಗೆ ಅವಳ ಮೇಲೆ ಪ್ರೀತಿ ಇದ್ದರು ಅದು ಅವಳ ಚಿಕ್ಕಮ್ಮನ ಮನೆಯಲ್ಲಿ ಆಸ್ತಿ ಮತ್ತು ಸ್ವಾತಿಯ ತಂದೆ-ತಾಯಿ ಬಿಟ್ಟು ಹೋಗಿರಬಹುದಾದ ಆಸ್ತಿಯ ಬಗ್ಗೆ ವ್ಯಾಮೋಹ ಹೆಚ್ಚಾಗಿ ಸ್ವಾತಿಯ ಮೇಲಿನ ಪ್ರೀತಿಗಿಂತ ಆಸ್ತಿಯ ಮೇಲಿನ ಪ್ರೀತಿಯೇ ಹೆಚ್ಚಾಗಿ ಕುಳಿತಲ್ಲೇ ಕೋಟ್ಯಾಧಿಪತಿ ಆಗುವ ಹುಂಬ ಕನಸು ಕಾಣುತ್ತಾ, ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರಿ ದುಡಿಮೆ ಮಾಡುವ ಇಂಗಿತವನ್ನು ಕೈ ಬಿಟ್ಟು.. ದೇವಸ್ಥಾನದಲ್ಲಿ ಆಗಿದ್ದ ಮದುವೆಯನ್ನು ನೊಂದಣಿ ಕಛೇರಿಯಲ್ಲಿ ನೊಂದಾಯಿಸಿ ಅಧಿಕೃತವಾಗಿ ಕಾನೂನಿನ ಅಡಿಯಲ್ಲಿ ಸತಿ ಪತಿ ಎಂಬ ಮುದ್ರೆಯನ್ನು ಪಡೆಕೊಂಡು ಅದರ ಒಂದು ಕಾಪಿಯನ್ನು ಸುಶೀಲಾರ ಮನೆಗೆ ಒಂದು ಪತ್ರದೊಂದಿಗೆ ಪೋಸ್ಟ್ ಮಾಡುತ್ತಾನೆ.
ನಿಮ್ಮ ಮಗಳನ್ನು ನಾನು ಕಾನೂನುಬದ್ದವಾಗಿ ಮದುವೆ ಆಗಿದ್ದೀನಿ. ಅವಳಿಗೆ ಸೇರಬೇಕಾದ ಆಸ್ತಿಯನ್ನು ವರ್ಗಾಯಿಸಬೇಕು.. ಇಲ್ಲದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳವೇ… ಎಂದು.
ಮುಂದುವರೆಯುತ್ತದೆ …
********
‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕಥೆಗಳು’ ಹಿಂದಿನ ಸಂಚಿಕೆಗಳು :
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ೧)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ ೨)
- ಮತ್ತೆ ಬೆಸೆದ ಬೆಸುಗೆ ಕತೆ
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು