ಮಕ್ಕಳ ಉತ್ತಮ ಬೆಳವಣಿಗೆಗೆ ಮನೆಯೇ ಮೊದಲ ಪಾಠಶಾಲೆ, ಅಜ್ಜ ಅಜ್ಜಿ, ತಂದೆ- ತಾಯಿಯೇ ಮೊದಲ ಗುರುಗಳು. ಮಕ್ಕಳ ಬೌದ್ಧಿಕ ವಿಕಾಸದ ಕುರಿತು ನಾಗಶ್ರೀ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಮನೆಯೇ ಮೊದಲ ಪಾಠಶಾಲೆ. ಹುಟ್ಟಿನಿಂದಲೇ ಮಕ್ಕಳಲ್ಲಿ ಅಳುವುದಾಗಲೀ ತೆವಳುವುದಾಗಲೀ ನಿಂತು ನಡೆಯುವುದು ಸಕ್ರಿಯವಾಗಿ ಸಕಾಲದಲ್ಲಿ ತಾವಾಗಿಯೇ ಕಾಣುತ್ತ ಬೆಳವಣಿಗೆಯಲ್ಲಿ ದೈಹಿಕ ಮಾನಸಿಕ ಶಕ್ತಿಗಳು ಪಕ್ವವಾಗುತ್ತವೆ. ಯಾವುದೇ ವಸ್ತುವಿಗೆ ಒಂದು ರೂಪ ಬರಬೇಕಾದರೆ ಅದಕ್ಕೆ ಸರಿಯಾದ ಉಳಿಪೆಟ್ಟು ಬೀಳಬೇಕು.
ಮಕ್ಕಳ ಬೆಳವಣಿಗೆ ಕಲಿಕೆ ಮನೆಯಿಂದಲೇ ಅಜ್ಜಿ, ತಾತ, ತಂದೆ- ತಾಯಿಯರಿಂದ ಪ್ರಾರಂಭ. ಸುತ್ತಲಿನ ವಾತಾವರಣ ಗೆಳೆತನವೂ ಬಹಳಷ್ಟು ಮಕ್ಕಳ ಮೇಲೆ ಪ್ರಭಾವ ಬೀರುವುದುಂಟು. ಮುಂಚಿನಿಂದಲೇ ಮಕ್ಕಳಿಗೆ ಉತ್ತಮ ಹವ್ಯಾಸ ಆಸಕ್ತಿ ಸಾಮಾನ್ಯ ಜ್ಞಾನಗಳ ಬಗ್ಗೆ ತಿಳುವಳಿಕೆ ಮೂಡಿಸಿ ಬಗೆ ಬಗೆಯ ಪುಸ್ತಕಗಳನ್ನು ಓದುವ ಅಭಿರುಚಿ ಮೂಡಿಸಬೇಕು. ಅವರ ಆಸಕ್ತಿಗೆ ಪ್ರತಿಭೆಗಳಿಗನುಗುಣವಾಗಿ ಆ ವಿಷಯಗಳ ಸರಿಯಾದ ಮನದಟ್ಟು ಮಾಡಿಸಿ ಪ್ರೋತ್ಸಾಹಿಸಬೇಕು. ಎಂಥಹುದೇ ಕಲ್ಲನ್ನು ಒಬ್ಬ ಶಿಲ್ಪಿ ಒಂದು ಸುಂದರ ವಿಗ್ರಹ ಮಾಡುವಲ್ಲಿ ಯಶಸ್ವಿಯಾಗುವಂತೆ ಮಕ್ಕಳ ಬುದ್ದಿ ಬೆಳವಣಿಗೆಗೆ ಅನುಕೂಲಕರವಾದ ಮಾತು ವಾತಾವರಣದ ಸೃಷ್ಟಿ ನಮ್ಮ ಕೈಯಲ್ಲಿದೆ. ಮಕ್ಕಳ ಕಲಿಕೆಯ ರೂಪುರೇಷೆಗಳನ್ನು ಚಿಕ್ಕಲ್ಲಿನಿಂದಯೇ ತಿದ್ದುತ್ತ ಮಾರ್ಗದರ್ಶನ ನೀಡುತ್ತ ಅವರೊಡನೆ ವಿಚಾರ ಭಾವನೆಗಳನ್ನು ಹಂಚಿಕೊಳ್ಳಬೇಕು. ಅವರ ಕಲಿಕೆಯ ಜ್ಞಾನ ವೃದ್ಧಿಸಿ ರಚನಾತ್ಮಕ ಶೈಲಿಯಲ್ಲಿ ಮಕ್ಕಳ ಬುದ್ದಿ ಸೂಕ್ಷ್ಮತೆಗನುಸಾರವಾಗಿ ಭೋದನೆ ಅತ್ಯಗತ್ಯ.
ಫೋಟೋ ಕೃಪೆ : google
ಚಿಕ್ಕಂದಿನ ಆಟಗಳಾದ ಕುಂಟೆ, ಬಿಲ್ಲೆ, ಲಗೋರಿ, ಜೂಟಾಟ, ಕೊಕ್ಕೊ, ಕ್ರಿಕೆಟ್ ಗುಂಪು ನಿರ್ವಹಣೆ ಸಂವಹನ ಹಾಗೂ ಪ್ರತಿನಿಧಿತ್ವದಂತಹ ಅಮೂಲ್ಯ ಶಿಕ್ಷಣದ ಶಿಸ್ತು ಹಾಗೂ ಸಾಮಾಜಿಕ ಕೌಶಲ್ಯವನ್ನು ಮೂಡಿಸುತ್ತದೆ. ಬೆದರಿಕೆ ಹೋಲಿಕೆಗಳ ಪರಿಣಾಮ ಮಕ್ಕಳ ಕಲಿಕೆಯ ಪ್ರಕ್ರಿಯೆಯಲ್ಲಿ ಕುಂಠಿತವಾಗಬಹುದು.
ತಿಳಿವು ನೈಪುಣ್ಯ ಹಾಗೂ ವರ್ತನೆಯ ವಿಕಾಸದಿಂದ ಮಕ್ಕಳಲ್ಲಿ ಕಲಿಕೆ ಅನುಕರಣೆ ಸ್ವ ಪ್ರಯತ್ನಗಳ ಮೂಲಕ ಧನಾತ್ಮಕ ಕಲಿಕೆಯು ಚಿಗುರುವುದು. ಮನಸ್ಸಿದ್ದಲ್ಲಿ ಮಾರ್ಗದಂತೆ.
- ನಾಗಶ್ರೀ ಪ್ರಸಾದ್