ಲೇಖಕ ಜಗದೀಶ ಶರ್ಮಾ ಸಂಪ ಅವರ ‘ಬಾಲಕಾಂಡ’ ಪುಸ್ತಕದ ಕುರಿತು ಸುವರ್ಣಿನೀ ಕೊಣಲೆ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಕೃತಿ: ಬಾಲಕಾಂಡ (ಸ್ಫೂರ್ತಿ ರಾಮಾಯಣ-೧)
ಕರ್ತೃ: ಜಗದೀಶ ಶರ್ಮಾ ಸಂಪ
ಪ್ರಕಾಶನ: ಸಾವಣ್ಣ ಪ್ರಕಾಶನ
ಪುಟಗಳು : ೧೧೨
ಬೆಲೆ : ೧೩೫.೦೦
ರಾಮಾಯಣ ಯಾರಿಗೆ ಗೊತ್ತಿಲ್ಲ? ರಾಮನ ಕಥೆ ಹೇಳುವುದರಲ್ಲಿ ಹೊಸತೇನಿದೆ? ಆದರೂ ರಾಮಯಾಣ ಬರೆದ ಕವಿಗಳ ಭಾರದಿಂದಾಗಿ ಫಣಿರಾಯ ಒದ್ದಾಡುತ್ತಾನಂತೆ! ಅದೆಷ್ಟೋ ಲಕ್ಷ ಬಾರಿ ಲಕ್ಷಾಂತರ ಜನ ರಾಮಾಯಣವನ್ನು ಮತ್ತೆ ಮತ್ತೆ ಹೇಳಿರಬಹುದು. ಬೇರೆ ಬೇರೆ ಭಾಷೆಯಲ್ಲಿ, ಬೇರೆ ಬೇರೆ ಭಾವದಲ್ಲಿ. ಅದನ್ನು ಕೋಟಿ ಕೋಟಿ ಜನ ಮತ್ತೆ ಕೋಟಿ ಕೋಟಿ ಬಾರಿ ಓದಿರಬಹುದು ಅಥವಾ ಕೇಳಿರಬಹುದು. ಆದರೆ ಪ್ರತಿ ಬಾರಿ ಓದಿದಾಗಲೂ, ಕೇಳಿದಾಗಲೂ ಏನಾದರೊಂದು ಹೊಸ ಹೊಳಹು ಸಿಗುವುದೇ ರಾಮಾಯಣದ ವಿಶೇಷತೆ. ಅದಕ್ಕೇ ಅದು ರಾಮಾಯಣ, ಅವನು ರಾಮ.
ರಾಮನ ಬದುಕೇ ಆದರ್ಶ. ಆದರೆ ‘ಅವನು ಮಾಡಿದಂತೆ ನಾವು ಮಾಡಲಾದೀತೇ? ಅದೂ ಈ ಕಾಲದಲ್ಲಿ’ ಎಂದು ಗೊಣಗುವ ನಮ್ಮಂತವರಿಗಾಗಿಯೇ ರಾಮಾಯಣವನ್ನು ಕಡೆದು ಸ್ಫೂರ್ತಿಯ ಬೆಣ್ಣೆಯನ್ನು ಕೊಡುತ್ತಿದ್ದಾರೆ ಲೇಖಕರು ಈ ಕೃತಿಸರಣಿಯಲ್ಲಿ. ಈ ಮೊದಲ ಭಾಗದಲ್ಲಿ ಬಾಲಕಾಂಡದ ಕಥೆಗಳ ಎಳೆಗಳನ್ನು ಬಿಡಿಸಿ, ಅವುಗಳಿಂದ ನಮ್ಮ ಬದುಕಿಗಾಗಿ ನಾವು ಪಡೆಯಬಹುದಾದ ಸ್ಫೂರ್ತಿಯನ್ನು ಹುಡುಕಿಕೊಟ್ಟಿದ್ದಾರೆ. ಪುಟ್ಟ ಪುಟ್ಟ ಕಥೆಗಳು ಮತ್ತು ಸರಳ ಭಾಷೆ ಈ ಕೃತಿಯ ವಿಶೇಷತೆ. ಆದರೆ ಅದಕ್ಕಿಂತ ಮುಖ್ಯವಾದ ಅಂಶವೆಂದರೆ ಈ ಕೃತಿ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದು.
ರಾಮಾಯಣವನ್ನು ಹಲವರು ಬರೆದಿರಬಹುದು. ಆದರೆ ಮೊದಲಿನದ್ದು ವಾಲ್ಮೀಕಿ ಮಹರ್ಷಿಗಳದ್ದು. ಅವರು ಕಂಡದ್ದು ರಾಮಾಯಣ. ಕಂಡದ್ದನ್ನು ಕಂಡಂತೆಯೇ ಬರೆದಿದ್ದಾರೆ. ಹಾಗಾಗಿ ಅದುವೇ ಮೂಲ ರಾಮಾಯಣ. ಈ ಕೃತಿಗೆ ಅದುವೇ ಅಡಿಪಾಯ.
ಮನುಷ್ಯನ ಬದುಕಿನ ಕೊರತೆಯೇನು? ಅವನೇಕೆ ಸೋಲುತ್ತಾನೆ? ಅದಕ್ಕೆ ಕಾರಣ ಒಳಿತನ್ನು ಮಾಡುವ, ಒಳಿತನ್ನು ಕಾಣುವ ಮನಸ್ಥಿತಿಯ ಕೊರತೆ. ಹಾಗಾದರೆ ವ್ಯಕ್ತಿ ಒಳಿತನ್ನು ಕಾಣಬೇಕಾದರೆ, ಒಳಿತನ್ನು ಮಾಡಬೇಕಾದರೆ, ಅವನಿಗೆ ಒಳಿತಾಗಬೇಕಾದರೆ ಏನಾಗಬೇಕು? ಅದಕ್ಕೆ ಅವನಿಗೊಂದಷ್ಟು ಸ್ಫೂರ್ತಿ ಬೇಕು. ಆ ಬೆಳಕಿನ ಕಿಂಡಿ ಇಲ್ಲಿದೆ.
- ಸುವರ್ಣಿನೀ ಕೊಣಲೆ