ಕಾರವಾರದ ಕಾಳಿ ಸೇತುವೆ 40 ವರ್ಷಗಳಿಂದ ನೀರಲ್ಲಿ ನಿಂತು ತನ್ನ ಎದೆಯ ಮೇಲೆ ಓಡಾಡಲು ಜಾಗ ಕೊಟ್ಟ ಸೇತುವೆಯ ಕಾಲುಗಳು ಸೋತಿರಬಹುದು, ಭುಜಗಳು ನೋಯುತ್ತಿರಬಹುದು.ಹಾಗಾಗಿ ಇಂದು ಕುಸಿದು ಬಿದ್ದಿದೆ.ಹಲವಾರು ನೆನಪಿನ ಬುತ್ತಿ ಈ ಸೇತುವೆ ಮೇಲಿದ್ದು, ಅದರ ಕುರಿತು ಲೇಖಕಿ ನೂತನ ದೋಶೆಟ್ಟಿ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಹತ್ತನೇ ತರತಿಯಲ್ಲಿದ್ದಾಗ ಕಾರವಾರಕ್ಕೆ ಭಾಷಣ ಸ್ಪರ್ಧೆಗೆ ಹೋಗಿದ್ದೆ. ಆಗಿನ್ನೂ ಕಾಳಿ ಸೇತುವೆ ನಿರ್ಮಾಣ ಹಂತದಲ್ಲಿತ್ತು. ರಭಸದಿಂದ ನದಿ ಕಣ್ಣಳತೆಯ ದೂರದಲ್ಲೇ ಸಮುದ್ರವನ್ನು ಸೇರುವ ಅಪೂರ್ವ ದೃಶ್ಯವನ್ನು ನೋಡಿ ಮೈ ಮರೆತಂತೆ, ಆ ವಿಸ್ತಾರವಾದ ನದಿಗೆ ಸೇತುವೆ ಕಟ್ಟುತ್ತಿದ್ದ ಗ್ಯಾಮಾನ್ ಇಂಡಿಯಾ ಕಂಪನಿಯ ಬಗ್ಗೆ ಗೌರವ ಹೆಚ್ಚಿತ್ತು. ನಿರ್ಮಾಣವಾಗಿದ್ದ ಸೇತುವೆಯ ಭಾಗದ ಅಂಚಿನಲ್ಲಿ ನಿಂತು ಕೆಳಗೆ ಬಗ್ಗಿ ನೀಡಿದ್ದಾಗ ನೀರಿನೊಡನೆ ನಾನೂ ತೇಲಿದಂತಾಗಿ ತಲೆ ಸುತ್ತಿ ಬಂದಂತಾಗಿತ್ತು. ಭಯದಿಂದಲೇ ಹಿಂದೆ ಸರಿದು ನಾವು ಉಳಿದುಕೊಂಡಿದ್ದ ಹೋಟೆಲ್ಲಿಗೆ ಅಣ್ಣನೊಡನೆ ಹಿಂತಿರುಗಿದ್ದೆ. ಇದು ಕಾಳಿ ನದಿ ಹಾಗೂ ಸೇತುವೆಯ ಮೊದಲ ಭೇಟಿ.

ಒಂದು ದಶಕದ ನಂತರ ಅದೇ ಊರಿಗೆ ವರ್ಗಾವಣೆಯಾದಾಗ ಸೇತುವೆ ಚೈತನ್ಯದ ಚಿಲುಮೆಯಾಗಿತ್ತು. ಕರ್ನಾಟಕ, ಮಹಾರಾಷ್ಟ್ರ, ಗೋವಾ ( ಆಗ ರಾಜ್ಯವಾಗಿರಲಿಲ್ಲ)ರಾಜ್ಯಗಳ ವ್ಯಾಪಾರವನ್ನು ಬೆಸೆಯುವ ಕೊಂಡಿಯಾಗಿತ್ತು. ಊರಿನಿಂದ ಯಾರೇ ಬಂದರೂ ಅಲ್ಲಿಗೆ ಭೇಟಿ ಸಾಮಾನ್ಯವಾಗಿತ್ತು. ಸದಾಶಿವಗಡದ ಬೆಟ್ಟವನ್ನು ಬೇಧಿಸಿ ರಸ್ತೆ ನಿರ್ಮಾಣವಾದ ಮೇಲೆ ಸಾಗಾಟ ದುಪ್ಪಟ್ಟಾಯಿತು. ಬೆಟ್ಟದ ಎರಡೂ ಕಡೆಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿ ಮೇಲೆ ವ್ಯೂ ಪಾಯಿಂಟ್ ಮಾಡಲಾಗಿತ್ತು. ಅಲ್ಲಿಂದ ಸಿಗುತ್ತಿದ್ದ ವಿಹಂಗಮ ನೋಟವನ್ನು ಸವಿದ ಭಾಗ್ಯ ನನ್ನದು.
ಮದುವೆಯ ನಂತರ ಸದಾಶಿವಗಡದಲ್ಲಿ ನೆಲೆಸಿದಾಗ ಸೇತುವೆಯನ್ನು ದಿನವೂ ದಾಟಿಯೇ ಬರಬೇಕಾಗಿತ್ತು. ಎಡಕ್ಕೆ ನದಿ, ಬಲಕ್ಕೆ ಸಮುದ್ರ, ಅಲ್ಲಲ್ಲಿ ಕಾಣುವ ನಡುಗಡ್ಡೆಗಳು, ಕಣ್ಣು ಹಾಯುವಷ್ಟು ದೂರ ಎರಡೂ ಕಡೆ ನೀರು..ನೀರು. ಅಂಚಿನಲ್ಲಿ ಮುಗಿಲು ಮುಟ್ಟುವ ಬೆಟ್ಟಗಳು. ಕಾಶ್ಮೀರದ ದಾಲ್ ಲೇಕ್ ನಂತೆಯೇ ಕಾಣುವುದರಿಂದಲೇ ರವೀಂದ್ರನಾಥ ಟ್ಯಾಗೋರ್ ಅವರು ಇದನ್ನು ದಕ್ಷಿಣದ ಕಾಶ್ಮೀರ ಎಂದು ಕರೆದಿರಬೇಕು.
ನಂತರದ ಅಭಿವೃದ್ಧಿ ಭರಾಟೆಯಲ್ಲಿ ಇನ್ನೊಂದು ಸೇತುವೆ, ಐತಿಹಾಸಿಕ ಬೆಟ್ಟವನ್ನು ಒಡೆದು ಹಾಕಿದ್ದು ಏನೆಲ್ಲ ನಡೆದವು. ಸಾಗಾಟದೊಂದಿಗೆ ಪ್ರವಾಸೋದ್ಯಮದ ಹೆಸರಿನಲ್ಲಿ ಈ ಭಾಗಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿತು. ಬೆಟ್ಟವನ್ನು ಒಡೆದಾಗ ಮೊದಲಿದ್ದ ಮೆಟ್ಟಿಲುಗಳು ನಾಶವಾದವು. ನನ್ನ ಮಗ 8 ತಿಂಗಳಿನವನಿದ್ದಾಗ ಅದರ ಕೊನೆಯ ಮೆಟ್ಟಿಲ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದೆ. ಅದೇ ಹೊತ್ತಿಗೆ ಭಾವನಾ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಕಾಯ್ಕಿಣಿ ಅವರು ನನ್ನ ಮೊದಲ ಕತೆ “ಮುತ್ತೆ ಮಣ್ಣಾಗಬೇಡ..” ವನ್ನು ಪ್ರಕಟಿಸಲು ವಿಭಿನ್ನವಾಗಿರುವ ಫೋಟೋ ಕಳಿಸು ಎಂದು ಪತ್ರ ಬರೆದಿದ್ದರು. ಅದಕ್ಕೆ ಆ ಫೋಟೋವನ್ನೇ ಕಳಿಸಿದ್ದೆ. ಅದು ಪ್ರಕಟವಾಯಿತು.

ಈಗ ಬೆಂಗಳೂರಿಂದ ಊರಿಗೆ ಹೋದಾಗಲೆಲ್ಲಾ ಬೆಳಗಿನ 6 ಗಂಟೆಗೆ ಸೇತುವೆ ತಲುಪಿ ವಾಕಿಂಗ್ ಮಾಡಿ ಸೂರ್ಯೋದಯ ನೋಡಿಕೊಂಡು ಮನೆಗೆ ನಡೆದು ಬರುವುದು ನನ್ನ ಅಭ್ಯಾಸ. ಸೇತುವೆಯ ಮೇಲಿಂದ ಕಂಡ ಮೀನುಗಾರರ ಬದುಕು, ಸೂರ್ಯಾಸ್ತ, ಅಲ್ಲಿಯ ಶಾಂತತೆ ..ಕವನಗಳನ್ನು , ಕಥೆಗಳನ್ನು ಬರೆಸಿವೆ.
ನನ್ನ ಪತಿ ಸಂಕ್ರಾಂತಿಯಂದು ಸಂಗಮದಲ್ಲಿ ಸ್ನಾನ ಮಾಡುವ ಸ್ಥಳ ಇದು. ಮಗ ಬುಲೆಟ್ ಏರಿ ಇಲ್ಲಿನ ಸುಂದರ, ಸ್ನಿಗ್ಧ ಬೆಳಗನ್ನು ಅಲ್ಲಿದ್ದಾಗ ಪ್ರತಿ ದಿನ ಆಸ್ವಾದಿಸುತ್ತಾನೆ.
ಹೀಗೆ ಬದುಕಿನ ಭಾಗವೇ ಆಗಿರುವ ಸೇತುವೆ ಇಂದು ಅಧೀರವಾದದ್ದು ಕಾಲದ ಹೊಡೆತದಿಂದ ಮಾತ್ರವಲ್ಲ. ಮನುಷ್ಯನ ದುರಾಸೆಯಿಂದ. ಹೆವಿ ವಾಹನಗಳು ಇಲ್ಲಿ 24/7 ಸಂಚರಿಸುವುದರಿಂದ. ಅಭಿವೃದ್ಧಿಯ ಮಂತ್ರ ಜಪಿಸುವುದಾದರೆ ಇವುಗಳನ್ನು ಸೆರಗಿಗೆ ಕಟ್ಟಿಕೊಂಡೇ ನೀರಿಗಿಳಿಯಬೇಕು.
ಟಿವಿ9 ನ ರಂಗನಾಥ್ ಒಂದು ಸೇತುವೆ ಕಟ್ಟಿದ್ರು. ಇನ್ನೊಂದು ಕಟ್ಬಾರದಿತ್ತೆ? ಎಂಥ ಅಯೋಗ್ಯರು ಅಂತೇನೋ ಮುತ್ತು ಉದುರಿಸುವುದನ್ನು ಕೇಳಿ ಪ್ರಕೃತಿಯ ಬಗ್ಗೆ ಇಷ್ಟು insensitive ಆಗಬಾರದು ಅಂತ ಹೇಳಬೇಕು ಅನ್ನಿಸ್ತು.
ಸತತವಾಗಿ 40 ವರ್ಷಗಳ ನೀರಲ್ಲಿ ನಿಂತು ತನ್ನ ಎದೆಯ ಮೇಲೆ ಓಡಾಡಲು ಜಾಗ ಕೊಟ್ಟ ಸೇತುವೆಯ ಕಾಲುಗಳು ಸೋತಿರಬಹುದು, ಭುಜಗಳು ನೋಯುತ್ತಿರಬಹುದು. ಸರಿಯಾದ ವೈದ್ಯರು ಪರೀಕ್ಷೆ ಮಾಡಬೇಕಿದೆ.
ಸುಂದರ ನೆನಪುಗಳನ್ನು ನೀಡಿದ, ಬದುಕ ಹಾಯಿ ದೋಣಿಯನ್ನು ನಡೆಸಿದ, ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಕಾರಣವಾದ ಸೇತುವೆಗೀಗ 40 ರ ನಡು ವಯಸ್ಸು. ಅದರ ಮರ ಮತ್ತು ಸರಿಯಾಗಿ ಆಗಿ ದುಡಿಯುವ ಕೈಗಳ ಹಿಡಿದು ನಡೆಸಲಿ ಎಂದು ಅಲ್ಲಿನ ನದಿ, ಸಾಗರ, ನಡುಗಡ್ಡೆಗಳ ದೇವರುಗಳು, ಬೆಟ್ಟದ ಮೇಲಿನ ದುರ್ಗಾದೇವಿಯನ್ನು ಭಕ್ತಿ – ಭಾವಗಳಿಂದ ಕೇಳಿಕೊಳ್ಳುತ್ತೇನೆ.
- ನೂತನ ದೋಶೆಟ್ಟಿ
