ಹೊನ್ನಾವರದಿಂದ ಸುಮಾರು 15 ಕಿಲೋಮೀಟರ್ ಅಂತರದಲ್ಲಿ “ಕರಿಕಾನ ಪರಮೇಶ್ವರಿ” ದೇವಾಲಯವಿದ್ದು, ಈ ದೇವಿಯ ದೇವಸ್ಥಾನದ ಬೆಟ್ಟದ ಮೇಲೆಯೇ ಒಂದಡಕೆ “ಶಂಭುಲಿಂಗ “ಎಂಬ ಉದ್ಭವ ಶಿವದೇವಾಲಯವಿದ್ದು ಜನರು ಓಡಾಡಿದ ಕಾಲುದಾರಿ ಇದೆ.”ಕರಿಕಾನ ಪರಮೇಶ್ವರಿ” ಮಹಿಮೆಯ ಕುರಿತು ಆತ್ಮ.ಜಿ.ಎಸ್. ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಸುತ್ತಲೂ ಹಸಿರು ಆಚ್ಚಾದಿತ ದಟ್ಟವಾದ ಕಾಡು.ಸಂಜೆಯ ವೇಳೆಗೆ ಎದುರು ನಿಂತವರು ಕಣ್ಣಿಗೆ ಕಾಣದ ರೀತಿಯಲ್ಲಿ ಸುರಿವ ಮಳೆ.ಇವು ಪಶ್ಚಿಮ ಘಟ್ಟದ ಕಾಡಿನ ಹಳ್ಳಿ ಪ್ರದೇಶದ ಚಿತ್ರಣ.ಇಂಥದ್ದೇ ಪರಿಸರದ ಬೆಟ್ಟದ ತುದಿಯಲ್ಲಿರುವ ದೇವಾಲಯದ ಅರ್ಚಕರು ಸಂಜೆಯಾದರೂ ಕೊಟ್ಟಿಗೆಗೆ ಮರಳದ ಗೋವುಗಳ ಹಾದಿ ಕಾಯುತ್ತಾ , ದೇವಾಲಯದ ಪ್ರಾಂಗಣದಲ್ಲಿ ಶತಪಥ ತಿರುಗುತ್ತಿದ್ದರು.ಮನೆಗೆ ಹಿಂತಿರುಗದ ಗೋವುಗಳ ಕುರಿತು ದೇವಿಯಲ್ಲಿ ಪ್ರಾರ್ಥಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಕೊಟ್ಟಿಗೆಯ ಬಳಿ ದನಕರುಗಳು ಬಂದ ಸೂಚನೆ ಸಿಕ್ಕಾಗ ಕೊಟ್ಟಿಗೆಯಲ್ಲಿ ಕಟ್ಟಿ ಪೂಜೆಗೆ ಬೇಕಾಗುವಷ್ಟು ಹಾಲನ್ನು ಕರೆದು ಪೂಜೆ ಮುಗಿಸುತ್ತಾರೆ. ಸಂಜೆಯ ಪೂಜೆ ಸಾಂಗವಾಗಿ ನೆರವೇರಿದ ತೃಪ್ತಿಯಲ್ಲಿ ಮಲಗಿದ್ದ ಅರ್ಚಕರಿಗೆ ಮಾರನೇದಿನ ಬೆಳಗ್ಗೆ ಕೊಟ್ಟಿಗೆಗೆ ತೆರಳಿದಾಗ ಭಯ ಮಿಶ್ರಿತ ಅಚ್ಚರಿ ಕಾದಿತ್ತು.
ಹಿಂದಿನ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳ ಜೊತೆಯಲ್ಲಿಯೇ ಹೆಬ್ಬುಲಿಯನ್ನು ಕಟ್ಟಿ ಹಾಕಿದ್ದು ತಮ್ಮ ಅರಿವಿಗೆ ಬಂದಿರಲಿಲ್ಲ.ಆದರೆ ಆ ಹುಲಿ ಇತರ ದನಗಳ ಜೊತೆಯಲ್ಲಿಯೇ ಸಾಧು ಸ್ವಭಾವದಿಂದ ಮಲಗಿತ್ತು.ಮತ್ತೆ ದೇವಿಗೆ ಮೊರೆ ಹೋದ ಅರ್ಚಕರು ಆಕೆಯ ಮೇಲೆ ಭಾರ ಹಾಕಿ ಹುಲಿಯ ಹತ್ತಿರ ಹೋಗಿ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಹೊರ ನಡೆಯಲು ಅವಕಾಶ ಮಾಡಿಕೊಟ್ಟರು , ದೇವಾಲಯದ ಬಳಿ ಬಂದ ಹುಲಿ ಒಂದು ಕ್ಷಣ ದೇವಿಯನ್ನು ನೋಡಿ , ಮತ್ತೆ ಕಾಡಿನ ಜಾಡನ್ನು ಹಿಡಿದು ಹೊರಟಿತು.ಅದರ ನಂತರದಲ್ಲಿ ಹುಲಿಗೂ ಸಹ ದೇವರ ಸ್ಥಾನ ಸಿಕ್ಕಿದ್ದು “ಹುಲಿಯಪ್ಪನ ಕಟ್ಟೆ” ದೇವಿಯ ಮುಂದೆ ಸ್ಥಾಪಿಸಲಾಗಿದ್ದು ನಿತ್ಯವೂ ಇದಕ್ಕೆ ಪೂಜೆ
ಸಲ್ಲಿಸುವ ಪರಿಪಾಠವಿದೆ.

ಫೋಟೋ ಕೃಪೆ : google
ಬಾಲ್ಯದಲ್ಲಿ ಮಕ್ಕಳಿಗೆ ಹೇಳುವ ಕಥೆಯಂತೆ ಕೇಳಿದ ತಕ್ಷಣ ಭಾಸವಾದರೂ ,ಇದು ನಡೆದ ಘಟನೆ ಎಂದು ಊರಿನ ಹಿರಿಯರು ಹೇಳಿದಾಗ ನಂಬದೇ ಇರಲು ಆಗುವುದಿಲ್ಲ.ದೇವರು ನಿರಾಮಯ ನಿರ್ವಿಕಾರ ಎಂಬುದು ಎಸ್ಟು ಸತ್ಯವೋ ,ದೈವ ಸಾನಿಧ್ಯದಲ್ಲಿ ನಡೆಯುವ ಘಟನೆಗಳು ತರ್ಕಕ್ಕೆ ಮೀರಿದ್ದು ಎಂಬುದು ಅಷ್ಟೇ ಸತ್ಯ.ಕೇಳಿದರೆ ಮೈ ನವಿರೇಳಿಸುವ ಈ ದೇವಿಯ ಸ್ಥಳ ಇರುವುದು ಹೊನ್ನಾವರ ತಾಲೂಕಿನ ನೀಲಕೋಡು ಗ್ರಾಮದಲ್ಲಿ. ಕರಿಕಾನ ಪರಮೇಶ್ವರಿ ಅಮ್ಮನವರು ಎಂಬ ಹೆಸರಿನಿಂದ ಪೂಜೆ ಮಾಡುತ್ತಿರುವ ಈ ದೇವಿಯ ಕುರಿತು ಇನ್ನೂ ಬೇರೆ ಬೇರೆ ರೀತಿಯ ಕಥೆಗಳನ್ನು ಹಿರಿಯರು ಹೇಳುತ್ತಾರೆ.

ಫೋಟೋ ಕೃಪೆ : Honnavar- Untouched Heaven
ಉತ್ತರ ಕನ್ನಡವೆಂದರೆ ಹೇಳಿ ಕೇಳಿ ಘಟ್ಟದ ಪ್ರದೇಶ.ಇಲ್ಲಿ ಒಂದೆಡೆ ಅರಬ್ಬಿ ಸಮುದ್ರವಿದ್ದು ಕರಾವಳಿಯ ಬಿಸಿಲಿನ ಧಗೆಯೂ ಇದೆ,ಮತ್ತೊಂದೆಡೆ ಘಟ್ಟದ ಮೇಲಿರುವ ಈ ದೈವ ಸನ್ನಿಧಿಯಲ್ಲಿ ತಂಪಾದ ವಾತಾವರಣ ಸಹ ಇದೆ. ದೇವಾಲಯದ ಸುತ್ತಲೂ ದಟ್ಟವಾದ ಕಾಡು,ಏಕಶಿಲೆಯಲ್ಲಿ ದೇವಿಯು ಉದ್ಭವವಾಗಿದ್ದು, ಆ ಬೆಟ್ಟದಲ್ಲಿ ಹೆಚ್ಚಾಗಿ ಕಪ್ಪು ಕಲ್ಲುಗಳು ದೊರೆಯುವುದರಿಂದ ಕರಿಕಾನ ಪರಮೇಶ್ವರಿ ಎಂಬ ಹೆಸರು ಬಂದಿರಬಹುದು.ಇಲ್ಲಿನ ಸುತ್ತಮುತ್ತಲಿನ ಜನರಿಗೆ ಅಮ್ಮನವರು ಎಂದರೆ ಭಕ್ತಿಯ ಭಾವದ ಜೊತೆಯಲ್ಲಿಯೇ ತಾಯಿಯಂತೆ ಸಲಹುವ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವ ನಂಬಿಕೆಯಿದ್ದು, ಹೆಚ್ಚಿನವರು ಹರಕೆಗೆ ಅರಿಶಿಣವನ್ನು ಒಪ್ಪಿಸುವ ಹಾಗೂ ದೇವಿಯನ್ನು ನಿತ್ಯವೂ ಅಲಂಕರಿಸುವುದು ಅರಿಶಿಣ ದಿಂದಲೇ. ಉಗ್ರರೂಪದಂತೆ ದೇವಿ ಕಂಡರೂ , ಅಲಂಕರಿಸಿದ ಸಮಯಕ್ಕೆ ದೇವಿಯನ್ನು ದರ್ಶನ ಮಾಡಿದರೆ ಮನಸ್ಸಿಗೆ ಸಮಾಧಾನ ನೀಡುವುದನ್ನು ನಾವೇ ಗುರುತಿಸಬಹುದು., ಉಗ್ರ ಸ್ವರೂಪಿಯಾಗಿದ್ದ ಅಮ್ಮನವರು ನೆಲೆಸಿದ್ದ ಜಾಗದಲ್ಲಿ ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸನ್ನು ಆಚರಿಸಿ ಸಾತ್ವಿಕತೆಯನ್ನು ತುಂಬಿದ್ದರು.ಇಂದಿಗೂ ಮೊದಲ ಬಾರಿ ದೇವಿ ನೋಡಿದಾಗ ಉಗ್ರತೆ ಅನ್ನಿಸಿದರೂ,ಎಲ್ಲರಿಗೂ ಅಭಯ ನೀಡುತ್ತಾ ಭಕ್ತಾದಿಗಳ ಕಷ್ಟ ಪರಿಹಾರ ಮಾಡಿ ನೆಮ್ಮದಿ ನೀಡುತ್ತಿದ್ದಾಳೆ.
1954 ರಲ್ಲಿ ವರದಹಳ್ಳಿಯ ಶ್ರೀಧರ ಸ್ವಾಮಿಗಳು ಇಲ್ಲಿನ ಬೆಟ್ಟದಲ್ಲಿ ಕುಳಿತು ತಪಸ್ಸು ಮಾಡಿದ ನಂತರ ಈ ದೇಗುಲವನ್ನು ಪುನರುತ್ಥಾನ ಮಾಡಿದ್ದಾರೆ.ಸಹಜವಾಗಿ ದೇವಿಗೆ ಎಲ್ಲಾ ಕಡೆ ಅರ್ಪಿಸುವ ಹಾಗೆ ಬಳೆ ಸೀರೆ ಕುಂಕುಮ ಹರಕೆಗೆ ಒಪ್ಪಿಸುವುದರ ಜೊತೆಯಲ್ಲಿಯೇ ಅರಿಶಿಣ ಮಂಡಿಗೆ ( ಕಾಮಾಲೆ) ಬಂದವರು ಅರಿಶಿಣ ಹರಕೆ ಹೇಳಿಕೊಂಡರೆ ಬೇಗ ಗುಣಮುಖವಾಗುವುದು ಎಂಬ ನಂಬಿಕೆಯಿದೆ.

ಫೋಟೋ ಕೃಪೆ : google
ತಲುಪುವುದು ಹೀಗೆ :
ತಾಲೂಕು ಕೇಂದ್ರ ಹೊನ್ನಾವರದಿಂದ ಸುಮಾರು 15 ಕಿಲೋಮೀಟರ್ ಅಂತರದಲ್ಲಿ ಈ ದೇವಾಲಯವಿದ್ದು,ಅರೆಯಂಗಡಿ ಎಂಬ ಸ್ಥಳದಲ್ಲಿ ಇಳಿದು ಬೆಟ್ಟದ ಮೇಲಿರುವ ಈ ದೇವಾಲಯಕ್ಕೆ ಭೇಟಿ ನೀಡಬಹುದು.ಮೊದಲೆಲ್ಲ ರಸ್ತೆಯ ಸಂಪರ್ಕವೂ ಇಲ್ಲದೆ ಜನರು ನಡದೇ ಹೋಗುತ್ತಿದ್ದರು.ಈಗ ಟಾರು ರಸ್ತೆ ಮಾಡಿದ್ದು ಬೆಟ್ಟದ ಬುಡದ ಊರಾದ ಅರೆಯಂಗಡಿಯಲ್ಲಿ ಜೀಪು ಆಟೋ ಗಳ ವ್ಯವಸ್ಥೆ ವಿಶೇಷ ದಿನಗಳಲ್ಲಿ ಇರುತ್ತದೆ. ಬೆಟ್ಟದ ಸುತ್ತಲೂ ದಟ್ಟ ಕಾಡುಗಳು,ಸಮುದ್ರ ಮಟ್ಟಕ್ಕಿಂತ ಎತ್ತರದ ಸ್ಥಳದಲ್ಲಿ ಈ ದೇವಾಲಯವಿರುವುದರಿಂದ ಸುತ್ತಲೂ ಕಾಣುವ ದೃಶ್ಯಗಳನ್ನು ನೋಡುವುದೇ ಕುಶಿ. ಮೇಲಿನಿಂದ ನಿಂತು ಕೆಳಗೆ ನೋಡಿದಲ್ಲಿ ಹೊನ್ನಾವರ ಪಟ್ಟಣದ ಕೆಲವು ಭಾಗಗಳು,ತಣ್ಣಗೆ ಹರಿಯುವ ಶರಾವತಿ, ಬೆಟ್ಟ ಇಳಿದಂತೆ ಧಗೆ ಹೆಚ್ಚಿಸುವ ಸೂರ್ಯಾಸ್ತವನ್ನು ವೀಕ್ಷಿಸಬಹುದು.
ಈ ದೇವಿಯ ದೇವಸ್ಥಾನದ ಬೆಟ್ಟದ ಮೇಲೆಯೇ ಒಂದಡಕೆ “ಶಂಭುಲಿಂಗ “ಎಂಬ ಉದ್ಭವ ಶಿವದೇವಾಲಯವಿದ್ದು ಜನರು ಓಡಾಡಿದ ಕಾಲುದಾರಿ ಇದೆ. ಇದೇ ದಾರಿ ಹಿಡಿದು ಸಾಗಿದಲ್ಲಿ ದೇವರ ದರ್ಶನ ಪಡೆಯಬಹುದು. ಈ ದಟ್ಟಾರಣ್ಯದಲ್ಲಿ ಸಿಂಗಲೀಕ,ಅಪರೂಪಕ್ಕೆ ಹುಲಿಯ ದರ್ಶನ ಮಾಡಿದ ಸ್ಥಳೀಯರು ಈ ಪ್ರಾಂತ್ಯದಲ್ಲಿ ಇದ್ದಾರೆ.ಸರಕಾರದ ರಕ್ಷಿತಾರಣ್ಯಕ್ಕೆ ಈ ಕಾಡು ಸೇರಿದ್ದು ಅಮೂಲ್ಯ ಅರಣ್ಯ ಸಂಪತ್ತು, ಅಪರೂಪದ ಔಷದ ಸಸ್ಯ ಸಂಪತ್ತು ದೊರೆಯುತ್ತದೆ.
ನವರಾತ್ರಿ ಎಂದರೆ ದೇವಿಯ ಆರಾಧನೆ ಶಕ್ತಿ ಸ್ವರೂಪಿಣಿಯಾದ ಇಲ್ಲಿಯೂ ನವರಾತ್ರಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ..ಪ್ರತಿ ವರ್ಷವೂ ಚಂಡಿ ಹವನ ಮಾಡಿಸುವ ಹರಕೆ ಹೇಳಿಕೊಂಡವರು ಪೂಜೆ ಮಾಡಿ ತಮ್ಮ ಸೇವೆಯನ್ನು ಸಲ್ಲಿಸಿದರೆ,ಇನ್ನೂ ಕೆಲವರು ಅಮ್ಮನವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ತೆರಳುತ್ತಾರೆ. ನವರಾತ್ರಿ ಹೊರತು ಪಡಿಸಿ ಬಾಕಿ ದಿನಗಳಲ್ಲಿ ದೇವಿಯ ದರ್ಶನ ,ಆಶೀರ್ವಾದ ಪಡೆದು ಎಲ್ಲರ ಇಷ್ಟಾರ್ಥಗಳು ನೆರವೇರುವಂತಾಗಲಿ.
- ಆತ್ಮ.ಜಿ.ಎಸ್. ಬೆಂಗಳೂರು.
