‘ಕತ್ತಲೆಕಾನು’ ಕೃತಿ ಪರಿಚಯ

ಸಿದ್ದಾಪುರ ತಾಲ್ಲೂಕಿನ ಪತ್ರಕರ್ತರೂ ಹಾಗೂ ಲೇಖಕರಾದ ಗಂಗಾಧರ ಕೊಳಗಿಯವರು ಮೂಲತಃ ಕೃಷಿಕರು. ಇದು ಅವರ ಐದನೇ ಪ್ರಕಟಿತ ಕೃತಿ. ಮಲೆನಾಡಿನ ಗ್ರಾಮೀಣ ಪರಿಸರದ ಹಿನ್ನಲೆಯಲ್ಲಿ ಬೆಳೆದ ಇವರ ಬರಹದಲ್ಲಿ ಹಳ್ಳಿಗಳ ಜನ ಜೀವನದ ನೈಜವಾದ ಚಿತ್ರಣವಿದೆ. ಅವರ ‘ಕತ್ತಲೆಕಾನು’ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಕತ್ತಲೆಕಾನು
ಲೇಖಕರು: ಗಂಗಾಧರ ಕೊಳಗಿ.
ಇಂದಿರಾ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೬.
ಪುಟಗಳು: ೧೩೨.
ಬೆಲೆ: ರೂ. ೯೦.

ಕಾಡೆಂದರೆ ನಿಗೂಢ ವಿಸ್ಮಯದ ಒಡಲು. ಮನುಷ್ಯ ಸಮುದಾಯ ಮತ್ತು ಪ್ರಕೃತಿಯ ಸಂಬಂಧದ ಹಿನ್ನಲೆಯಲ್ಲಿ ರಮಣೀಯತೆಯ ಜೊತೆಗೇ ಅದರ ಪ್ರಯೋಜನವನ್ನೂ ಪಡೆಯುವ ಬಗ್ಗೆ ಇಲ್ಲಿ ಉಲ್ಲೇಖವಿದೆ.

ಆದಿವಾಸಿಗಳ ಸಮುದಾಯದ ‘ಕತ್ತಲೆಕಾನು’ ಎಂಬ ಊರು ನಾಗರೀಕತೆಯ ಸ್ಪರ್ಶವಿಲ್ಲದೇ ಇದ್ದರೂ, ಪ್ರಶಾಂತವಾಗಿತ್ತು. ಕುಲದೇವರಾದ ಬೀರಪ್ಪನಿಗೆ ವಾರ್ಷಿಕ ಹಾಲು ಹಬ್ಬ ಆಚರಣೆ ಮಾಡುವುದು, ದೇವರ ಮುಖವಾಡ ಕೆತ್ತುವ ಗಣಪು, ಊರಿಗೆ ಅಪರೂಪಕ್ಕೆ ವ್ಯಾಪಾರಕ್ಕೆ ಬರುವ ಕುಂಬಾರರು, ಬಳೆಗಾರರು, ಕಮ್ಮಾರರೂ ಇವರೆಲ್ಲರ ಬಗ್ಗೆ ವಿವರಿಸಿದ ರೀತಿ ಸಹಜತೆಯಿಂದ ಮೆಚ್ಚುಗೆಯಾಗುತ್ತದೆ.

ಕಂದಾಯ ಇಲಾಖೆಯಿಂದ ಕಾಡಿನ ಸರ್ವೇ ನಡೆಯುತ್ತದೆ. ಪ್ಯಾಟೆ ಹುಡುಗರು ಕಾಡಿನಲ್ಲಿ ‘ಸಿಂಗಳಿಕ’ನನ್ನು ಹುಡುಕಲು ಬರುವುದು ಇವರಿಗೆ ವಿಚಿತ್ರವೆನಿಸುತ್ತದೆ.ಯಾರೋ ಅಲ್ಲಿ ರೆಸಾರ್ಟ್, ರಸ್ತೆ ಎಲ್ಲಾ ಮಾಡುತ್ತಾರೆ ಊರು ನಾಶವಾಗುತ್ತದೆ ಎಂಬ ಸಂಶಯದ ನಡುವೆಯೂ , ಪರಿಹಾರದ ಹಣ ಸಿಗುತ್ತದೆ ಎಂಬ ಆಸೆ ಜನರ ಚಂಚಲ ಮನಸ್ಸಿನ ಪ್ರತೀಕವಾಗಿಯೂ ಗೋಚರವಾಗುತ್ತದೆ. ಇದರಿಂದ ಸಮುದಾಯದ ಜನರ ನಡುವೆಯೇ ಜಗಳ-ಭಿನ್ನಾಭಿಪ್ರಾಯಗಳೂ ಉಂಟಾಗುತ್ತದೆ.

ಇಲ್ಲಿ ಎರಡನೇ ಭಾಗವಾಗಿ ನಾಗಪ್ಪ ಮಾಸ್ತರ ಮತ್ತು ಅವರ ಮಗನ ಕಥೆ ಇದೆ. ಈಗ ರಾಜ್ಯ ಸರ್ಕಾರದ ಪ್ರತಿಷ್ಠಿತ ಹುದ್ದೆಯಲ್ಲಿರುವ ಮಾಸ್ತರ ಮಗ ನಾಗಭೂಷಣ ರಾವ್ ಅವಮಾನಗಳನ್ನು ಸಹಿಸಿ, ಕಷ್ಟದಿಂದ ಓದಿ ಈ ಹಂತಕ್ಕೆ ಬಂದಿದ್ದ. ಬೆಂಗಳೂರಿನ ಕೋಕಿಲಾಳೊಂದಿಗೆ ಅವನದು ಅಂತರ್ಜಾತೀಯ ಪ್ರೇಮ ವಿವಾಹ. ಅವರ ಒಬ್ಬನೇ ಮಗ ಪ್ರತೀಕ.

ಮಗನ ಮದುವೆ ಸಂದರ್ಭದಲ್ಲಿ ನಾಗಪ್ಪ ಮಾಸ್ತರ ಮತ್ತವರ ಹೆಂಡತಿಯ ಮನಸ್ಥಿತಿ, ಹೆಂಡತಿ ತೀರಿ ಹೋದ ಮೇಲೆ ನಾಗೇಶ ಮಾಸ್ತರ ಒಂಟಿ ಜೀವನ, ಕುಮಟಾದ ಮನೆ ಬಿಟ್ಟು ಮಗನ ಮನೆಯಲ್ಲಿ ಮೊಮ್ಮಗನ ಜೊತೆ ಕಳೆದ ದಿನಗಳು, ನಂತರ ವೃದ್ಧಾಶ್ರಮದಲ್ಲಿ ವಾಸ್ತವ್ಯ, ಮಗನ ಸಂಸಾರದ ಒಡಕು ಅವರ ಹಿಂದಿನ ಜೀವನ ಇವೆಲ್ಲವೂ ಇಲ್ಲಿ ಬಹಳ ಸೊಗಸಾಗಿ ಮೂಡಿದೆ.

ನಾಗಭೂಷಣ ರಾವ್ ಮತ್ತು ಕೋಕಿಲಾರಿಗೆ ಮಗ ಪ್ರತೀಕ ಹೊರ ದೇಶದಲ್ಲಿ ಓದಲಿ ಎಂಬಾಸೆ ಇದ್ದರೂ, ಆತ ತನ್ನ ಸುತ್ತಲಿನ ಪರಿಸರಕ್ಕೆ ಹೊರತಾದ ಮನಸ್ಥಿತಿಯಲ್ಲೇ
ಬೆಳೆದಿದ್ದ. ತಾತನನ್ನು ಹಚ್ಚಿ ಕೊಂಡಿದ್ದ ಪ್ರತೀಕ ಅವರ ಸಾವಿನ ನಂತರ ಕುಗ್ಗಿದ್ದ.

ಮುಂದೆ ಜೀವ ಜಗತ್ತಿನಲ್ಲಿ ವೈಶಿಷ್ಟ್ಯವಾದ ‘ಲೈನ್ ಟೇಲಡ್ ಮೊಕ್ಯಾಕೊ'(ಸಿಂಗಳಿಕ) ಪ್ರಾಣಿಯ ಕುರಿತು ವಿಸ್ತೃತವಾದ ಅಧ್ಯಯನಕ್ಕಾಗಿ ಕತ್ತಲೆ ಕಾನಿಗೆ ಬರುವ ಪ್ರತೀಕ ಎದುರಿಸುವ ನಾನಾ ಬಗೆಯ ಸಮಸ್ಯೆಗಳು, ಆಗ ಸಹಾಯ ಮಾಡುವ ಆದಿವಾಸಿ ಗಣಪನ ಮಗಳು ಗೌರಿಯನ್ನು ಪ್ರೀತಿಸಿ, ತನ್ನೊಡನೆ ಕರೆದೊಯ್ಯುವುದು ಇಂತಹ ಸನ್ನಿವೇಶಗಳ ನಿರೂಪಣೆ ಕಥೆಗೊಂದು ಹೊಸ ಬಗೆಯ ತಿರುವು ನೀಡುತ್ತದೆ.

ಕೆಲವೇ ದಿನಗಳ ಹಿಂದೆ ಮನುಷ್ಯರ ಮಾತುಗಳೇ ಕೇಳದಿದ್ದ ಕತ್ತಲೆ ಕಾನಿನಲ್ಲಿ ಈಗ ಶಬ್ದಗಳದ್ದೇ ಕೋಲಾಹಲ. ಎಂಬ ಸಾಲುಗಳಲ್ಲಿ ನಾಗರೀಕತೆಯ ಹೆಸರಿನಲ್ಲಿ ಪ್ರಕೃತಿಯ ವಿನಾಶದ ಕುರಿತ ತೀವ್ರ ಕಳಕಳಿ ಇಲ್ಲಿ ಕಾಣುತ್ತದೆ.

ಕಾಲ ಕ್ರಮೇಣ ದಟ್ಟಅರಣ್ಯ ನಾಶವಾಗಿ ಊರು ನಗರೀಕರಣವಾಗುತ್ತಾ, ಮನುಷ್ಯರ ಜೀವನಕ್ರಮವೂ ಬದಲಾಗುತ್ತಾ ಸಾಗುವ ಪರಿಯನ್ನು ಲೇಖಕರು ಇಲ್ಲಿ ಮನೋಜ್ಞವಾಗಿ ವಿವರಿಸಿ ಬರೆದಿದ್ದಾರೆ. ಮನುಷ್ಯ ಸ್ವಭಾವದ ಸಂಕಟ- ನೋವು -ನಲಿವಿನ ಕುರಿತು ಸನ್ನಿವೇಶಕ್ಕೆ ತಕ್ಕ ಹಾಗೆ ಉತ್ತಮ ರೀತಿಯಲ್ಲಿ ಕಥನ ಕಟ್ಟುವ ಕಲೆಗಾರಿಕೆಯನ್ನು ನಾವಿಲ್ಲಿ ಕಾಣಬಹುದು.
ಈ ಸೊಗಸಾದ ಕೃತಿಯನ್ನು ನೀವೂ ಓದಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW