“ಕಾವ್ಯ ಕುಸುರಿ” ಪುಸ್ತಕ ಪರಿಚಯ

ಸರ್ವಮಂಗಳ ಜಯರಾಂ ಅವರ “ಕಾವ್ಯ ಕುಸುರಿ” ಕವನ ಸಂಕಲನದಲ್ಲಿ ಚಂದದ 62 ಕವನಗಳಿವೆ. ಕೃತಿಯ ಕುರಿತು ಸೂರ್ಯಸಖ ಪ್ರಸಾದ್ ಕುಲಕರ್ಣಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕ – ಕಾವ್ಯ ಕುಸುರಿ
ಲೇಖಕರು – ಸರ್ವಮಂಗಳ ಜಯರಾಂ.
ಪ್ರಕಾಶಕರು – ಶ್ರೀನಿಧಿ ಪ್ರಕಾಶನ. ಗೌರಿಬಿದನೂರು.
ಬೆಲೆ – 100 ರೂ.

ಮನೋಮಂಥನ ನಡೆಸುವ ಹಲವಾರು ವಿಚಾರಗಳು ಲೇಖನಿಯ ದೆಸೆಯಿಂದ ಕಾವ್ಯವಾಗುವ ಕಲೆಯೇ ಒಂದು ಅಚ್ಚರಿ. ಆ ಕಾವ್ಯಗಳಲ್ಲಿ ಕುಸುರಿತನ ಕಾಣಬೇಕಾದರೆ ಬರೆವವರು ಆಗಬೇಕಾಗುತ್ತದೆ ಭಾವಗಳ, ಕಲ್ಪನೆಗಳ ಬಸುರಿ. ಒಂದೋ ಎರಡೋ ವಿಷಯಗಳಾದರೆ ಬರೆದು ಬಿಡಬಹುದೇನೋ, ಆದರೆ ಹಲವಾರು ಆಯಾಮಗಳಿರುವ, ಹಲವಾರು ಮುಖಗಳಿರುವ, ಹತ್ತಾರು ಕೈಗಳಿರುವ ವಿಭಿನ್ನ ವಿಷಯವಸ್ತುಗಳನ್ನು, ವಿವಿಧ ಸಂಗತಿಗಳನ್ನು ನಿತ್ಯ ಧೇನಿಸದೇ ಹೋದರೆ ಆಗದು ಕಾವ್ಯ ಕುಸುರಿ. ಅಂತಹ ಒಂದು ಕಲೆಯನ್ನು ಕುಸುರಿಗೊಳಿಸಿದ ಪುಟ್ಟ ಚಕೋರಿಯೇ ಸರ್ವಮಂಗಳ ಜಯರಾಂ ಹೆಣೆದಿರುವ “ಕಾವ್ಯ ಕುಸುರಿ”.

ಇಲ್ಲಿ ಚಂದದ 62 ಕವನಗಳಿಗೆ ನಾಜೂಕಾದ ಪದಗಳ ಕಲೆಯೊದಗಿಸಿ , ಅವನ್ನು ಅಕ್ಷರಗಳ ಉಳಿಯಲ್ಲಿ ನವಿರಾಗಿ ಕುಸುರಿ ಮಾಡಿದ್ದಾರೆ ಕವಿಯತ್ರಿ. ಇವರ ಕವನಗಳು ನಮ್ಮ ಮನಸನ್ನು ಬಾನಾಡಿಯಾಗಿಸುವಲ್ಲಿ ಗೆದ್ದಿದೆ.

“ಸ್ಪಂದನ” ಎಂಬ ಒಂದು ಮಧುರ ವಿನಂತಿಯೊಂದಿಗೆ ಪ್ರಾರಂಭವಾಗುವ ಕವಿತೆ ಸಮಾಜಮುಖಿಯಾಗಿ ತೆರೆದುಕೊಳ್ಳುತ್ತ ಸಾಗುತ್ತದೆ. ದೇಶ , ಭಾಷೆ , ಧರ್ಮ , ಬಾವುಟಗಳ ಬಗ್ಗೆ ಅಭಿಮಾನ ಮತ್ತು ಶ್ರದ್ಧೆಯಿಂದ ಕೂಡಿದ ಕವಿತೆಗಳು ಇಲ್ಲಿವೆ.ಪ್ರೀತಿ , ಪ್ರೇಮ , ದಾಂಪತ್ಯ ,ಸ್ನೇಹ , ನಂಬಿಕೆಗಳ ಬಗ್ಗೆ ಕವಿಯತ್ರಿಗೆ ಎಂತಹ ಧನಾತ್ಮಕ ಅಭಿಪ್ರಾಯವಿದೆ ಎಂದು ಕೆಲವು ಕವಿತೆಗಳು ಸಾರಿದರೆ , ಲೋಕದ ಕೆಲವು ನಡಾವಳಿಯ ಬಗ್ಗೆ ಕವಿ ಮನಸ್ಸು ಪ್ರತಿಕ್ರಿಯಿಸಿದ ರೀತಿಯನ್ನು ಒಂದೆರಡು ಕವಿತೆಗಳು ಕುಳಿತು ಮಾತನಾಡಿವೆ. ಸಂಸ್ಕಾರ , ಸಂಸ್ಕೃತಿ , ಸ್ತ್ರೀ , ಅಮ್ಮ , ಗುರು – ಹಿರಿಯರು , ಆದರ್ಶ ವ್ಯಕ್ತಿಗಳ ಬಗ್ಗೆ ಕವಿಗಿರುವ ಅಭಿಮತ ಓದಿದಾಗ ನಮ್ಮಲ್ಲೂ ಒಂದು ಗೌರವದ ಭಾವ ಮೂಡುತ್ತದೆ.

ನಿಸರ್ಗದಲ್ಲಾಗುವ ಹಲವು ಬದಲಾವಣೆಗಳು , ಸೂರ್ಯೋದಯ – ಸೂರ್ಯಾಸ್ತಗಳು , ಮೂಡುವ ಕಾಮನ ಬಿಲ್ಲು , ಜಾರುವ ಮಳೆ ಹನಿ , ಬೀಸುವ ಆಷಾಢ , ಹಬ್ಬಗಳ ತರುವ ಶ್ರಾವಣ, ಭೂರಮೆಯ ಸಂಭ್ರಮ, ನದಿಯ ಹರಿವು , ನಿಸರ್ಗದಿಂದಾಗುವ ಒಳಿತು , ಆಗಾಗ ಮಾಡುವ ಕೆಡಕುಗಳು, ಬದಲಾದ ಕಾಲಮಾನ , ಮನುಷ್ಯನ ಮಾನಸಿಕ ಸ್ಥಿತಿಗತಿ…ಮುಂತಾದ ಜರಿ ಹೆಣೆಯುವ ಕೆಲಸದಲ್ಲಿ ಗೆದ್ದಿದೆ ಕಾವ್ಯ ಕುಸುರಿ.

ಜಗದ ರೀತಿ ನೀತಿಗಳಿಗೆ ಇಲ್ಲಿನ ಕೆಲ ಕವಿತೆಗಳು ದನಿಯಾಗಿವೆ.ಬಡತನ , ಅಜ್ಞಾನ , ಮೌಢ್ಯದ ನೆರಳಿನಲ್ಲಿ ನಲುಗಿವೆ.ವಾಸ್ತವದ ಘೋರತೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿವೆ.

ಸಹಜವಾಗಿ ಇಷ್ಟವಾಗಬಹುದಾದ , ಕವಿತೆ ಮತ್ತು ಸಾಲುಗಳ ಉಲ್ಲೇಖಿಸಬೇಕೆಂದರೆ,

” ಹಿಂಗ ನೋಡಬ್ಯಾಡ ಗಾಂಧಿ ” ಎಂಬ ಕವಿತೆಯಲ್ಲಿನ ಕೊನೆಯ ಸಾಲುಗಳು ….

ಹೊರಟು ಬಿಡು ಗಾಂಧಿ ಮತ್ತೆ ನೋಡಬೇಡ
ನೋಡಿ ಮನ ನೊಂದುಕೊಳ್ಳಬೇಡ
ಅವ್ಯವಸ್ಥೆಯ ಆಗರವಾಗಿದೆ ನಿನ್ನ ದೇಶ
ಜನ ನಾಯಕರು ಧರಿಸಿಹರು ಸಭ್ಯರಂತೆ ಹಗಲು ವೇಷ

ಇದು ಇಂದಿನ ಭಾರತ ದರ್ಶನ.ಇಲ್ಲಿ ಕವಿಯತ್ರಿ ಈ ಮಾತು ಗಾಂಧಿಗಷ್ಟೇ ಹೇಳಿಲ್ಲ…ಪ್ರಾಮಾಣಿಕವಾಗಿ ದೇಶಪ್ರೇಮ ಮೆರೆವ ಎಲ್ಲ ಶಾಂತಿ , ಸತ್ಯಪ್ರಿಯರಿಗೆ ಹೇಳಿದ ಮಾತಾಗಿದೆ.

“ಜುಮುಕಿ” ಕವಿತೆ ಬಹುಶಃ ನನ್ನದೊಂದು ಕವಿತೆಯ ಪ್ರೇರಣೆ ಇಂದ ಬರೆದಿರಬಹುದೆನಿಸಿತು.ಅದರ ಶ್ರೇಯಸ್ಸು ನನಗೇನು ಸಲ್ಲಬೇಕಿಲ್ಲ.ಈ ಜುಮುಕಿ ಕನಕ ಕುಂದನದ್ದು.ಹೀಗಾಗಿ ಈ ಕವಿತೆ ಪ್ರೇರಣೆಯಿಂದ ಮೂಡಿದ್ದರೂ ಸ್ವತಂತ್ರವಾಗಿದೆ. ಚಂದವಾಗಿದೆ.

“ನಗುವ ಮನಸ್ಸು ಅರಳುವ ಕನಸು” ಎಂಬ ಕವಿತೆಯಲ್ಲಿ ಬಡತನ ಮತ್ತು ಬಡತನದಲ್ಲೂ ಬಡವರಿಗಿರುವ ಭರವಸೆ ಮತ್ತು ಆಶಾದಾಯಕ ಭಾವವನ್ನು ವ್ಯಕ್ತ ಪಡಿಸುವ ಈ ಸಾಲುಗಳು ಓದುಗನಲ್ಲೂ ನಾಳೆ ನಮ್ಮದೆನ್ನುವ ಭಾವ ಮೂಡಿಸುತ್ತವೆ.

ಒಂದು ಹೊತ್ತಿನ ಕೂಳಿಗೂ ತತ್ವಾರ
ದಿನವೂ ದುಡಿದರೆ ಮಾತ್ರ ಅನ್ನಾಹಾರ
ಕಂದಮ್ಮನ ಮುಗ್ದ ನಗುವಿನ ದರ್ಶನ
ಜೀವನಕೆ ಅದುವೆ ಉತ್ಸಾಹದ ಸಿಂಚನ…

“ಆತ್ಮ ಬಂಧನ” ಎಂಬ ಪ್ರೇಮ ಕವಿತೆ ನನಗೆ ವೈಯಕ್ತಿಕವಾಗಿ ಬಹಳ ಇಷ್ಟ.ಕಾರಣ…ಇದನ್ನು ನಾನು ವಾಚಿಸಿದ್ದೆ.ಈರನಗೌಡ ಹಂದಿಗನೂರು ಎಂಬ ಸಹೃದಯಿ ಕವಿವರ್ಯರು ಇದನ್ನು ನನ್ನಿಂದ ವಾಚಿಸಿ , ಚಂದದ ದೃಶ್ಯ ಸಂಯೋಜನೆ ಮಾಡಿದ್ದರು. ಏನೇ ಹೇಳಿ ಮನಗಳ ಮಿಲನ ಯಾವಾಗಲೂ ಮಧುರ.

ಅನ್ನದ ಮಹತ್ವ ಸಾರುವ “ಎಸೆಯದಿರಿ ತುತ್ತು” ಎಂಬ ಕವನ , ಸಿರಿವಂತಿಕೆಯ ಗತ್ತಿನಲ್ಲಿ ಅನ್ನದ ಮೌಲ್ಯ ಅರಿಯದವರ ಕಣ್ತೆರೆಸುವಂಥದ್ದು.ಮತ್ತೊಂದು ಅಂಶ ನಾ ಗಮನಿಸಿದ್ದೆಂದರೆ ಕವಿಯತ್ರಿಯ “ಸೌಂದರ್ಯ” ಪರಿಕಲ್ಪನೆ ಬಹು ವಿಧವಾದದ್ದು.ಪ್ರೀತಿಯ ಸೌಂದರ್ಯ, ಮಮತೆಯ ಸೌಂದರ್ಯ, ಮುಗ್ಧತೆಯ ಸೌಂದರ್ಯ, ಸ್ನಿಗ್ದ ಸೌಂದರ್ಯ, ಕೊನೆಗೆ ನಿರ್ಮಲ ಮನಸ್ಸಿನ ಮುಖ ಭಾವದಿ ಗೋಚರಿಸುವ ಶಾಶ್ವತ ಸೌಂದರ್ಯ.

ಪ್ಲೇಟೋ ಹೇಳ್ತಾನೆ….ಸೌಂದರ್ಯ ಎಂಬುದು ಎಲ್ಲ ವಸ್ತುಗಳಲ್ಲಿಯೂ ತರತಮವಾಗಿ ಪ್ರಕಾಶನಗೊಳ್ಳುವ ಒಂದು ದಿವ್ಯಶಕ್ತಿ…. ಎಂದು. ಕವಿಯತ್ರಿ ತನ್ನ ಕವನದಲ್ಲಿ ಇದನ್ನು ನಿರೂಪಿಸಿದ್ದಾರೆ.

“ಚಂದ್ರ ಮುಖಿ” ಕವಿತೆಗೆ ಬೇಂದ್ರೆಯವರ ಪ್ರಭಾವಲಿಯ ನೆರಳಿದೆ.

“ನನ್ನೊಳಗಿನ ನಾನು” ಎಂಬ ಕವಿತೆ “ನಾನು” ತನದ ಮಹತ್ವ ಸಾರಿದರೆ, “ಏಕಾಂಗಿ” ನಾನುವಿನ ನಶ್ವರತೆಯ ಸಾರಿದೆ. ಇದೇ ಕವಿಗಿರುವ ಶಕ್ತಿ.ನಮಗೆ ಎರಡೂ ಸರಿ ಅನಿಸುವಂತೆ ಬರೆಯುವ ಶಕ್ತಿಯೇ ಕ್ರಿಯಾಶೀಲತೆ.

“ಭಾವಯಾನ” ಮತ್ತು “ಮನದ ಬಯಕೆ ” ಎಂಬ ಎರಡೂ ಕವಿತೆಗಳ ಆಶಯ ಒಂದೇ ಆಗಿದೆ.ಹೀಗಿದ್ದರೂ ತನ್ನ ನಿರೂಪಣಾ ಶೈಲಿ ಮತ್ತು ಬಳಸಿದ ಪದ ವೈವಿಧ್ಯತೆಯಿಂದ ಎರಡೂ ಬೇರೆ ಬೇರೆ ಕವನವಾಗಿಯೇ ಓದಿಸಿಕೊಳ್ಳುತ್ತದೆ.

ಒಟ್ಟಿನಲ್ಲಿ ಕವಿಯತ್ರಿ ತಮ್ಮ ಆತ್ಮಸಂತೋಷಕ್ಕೆಂದು ಬರೆದಿರುವ ಈ ಕವಿತೆಗಳು ಓದುಗನಿಗೂ ಆ ಸಂತೋಷ ನೀಡುತ್ತವೆ. ವ್ಯಾಕರಣ, ಛಂದಸ್ಸು, ಅಲಂಕಾರಗಳ ಉದ್ಧೇಶಪೂರಕ ಹೇರಿಕೆ ಇರದ ಸರಳ ಸುಂದರ ಕವನ ಸಂಕಲನ ಇದು.

ಈ ಪುಸ್ತಕದ ಮೂಲಕ ಕವಿಯತ್ರಿ ಸಾಹಿತ್ಯ ಲೋಕಕ್ಕೆ ಅಡಿಯಿರಿಸಿದ್ದಾರೆ. ಸಾಹಿತ್ಯ ಕ್ಷೇತ್ರ ಇವರನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ. ಕವಿಯತ್ರಿಗೆ ಶುಭವಾಗಲಿ. ಅವರಿಂದ ಮತ್ತಷ್ಟು ಕೃತಿಗಳು ಹೊರಬರಲಿ. ಪುಸ್ತಕಗಳ ಕೊಂಡು ಓದುವ ಪ್ರೀತಿ ನಮ್ಮದಾಗಲಿ.


  • ಸೂರ್ಯಸಖ ಪ್ರಸಾದ್ ಕುಲಕರ್ಣಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading