ಖ್ಯಾತ ಸಾಹಿತಿಗಳಾದ ಕೆ. ರಾಜಕುಮಾರ್ ಅವರ ಪ್ರಕಾರ ಕಾವ್ಯವೆಂದರೆ ಭ್ರಮೆಯಲ್ಲ, ಭ್ರಾಂತಿಯಲ್ಲ, ಪ್ರಾಸಬದ್ಧ ಪದಜೋಡಣೆಯೂ ಅಲ್ಲ. ವಾಸ್ತವದೊಂದಿಗಿನ ಮುಖಾಮುಖಿ. ತಪ್ಪದೆ ಮುಂದೆ ಓದಿ…
ಕಾವ್ಯ ನನಗೆ ಒಲಿಯಲಿಲ್ಲ. ಒಲಿದಿದ್ದು ಗದ್ಯ. ಆ ಗದ್ಯಕ್ಕೇ ಕಾವ್ಯದ ಪೋಷಾಕು ತೊಡಿಸಿ ಸಂಭ್ರಮಿಸುತ್ತೇನೆ. ಗದ್ಯಕ್ಕೆ ಹೂಮುಡಿಸಿ, ಬಳೆತೊಡಿಸಿ, ಬೊಟ್ಟಿಟ್ಟು, ಕಾಡಿಗೆ ತೀಡಿ ಅದರ ಕಾಲಿಗೆ ಗೆಜ್ಜೆಕಟ್ಟಿ ಕುಣಿಸುವ ಪ್ರಯತ್ನ ಮಾಡುತ್ತೇನೆ. ಕಾವ್ಯ ನನಗೆ ಎಟುಕದಿದ್ದರೂ, ಅದನ್ನು ಹುಳಿ ದ್ರಾಕ್ಷಿ ಎಂದು ದೂಷಿಸಲಾರೆ. ಅದು ನನ್ನ ಪಾಲಿಗೆ ಮುಗಿಲ ಮಲ್ಲಿಗೆ; ಗಗನದ ತಾರೆ. ಅದರ ಬಗೆಗಿನ ಸಮ್ಮೋಹವಂತೂ ಅಳಿದಿಲ್ಲ. ಕಾವ್ಯದ ಜೊತೆಗೆ ಅನುಸಂಧಾನದ ಬಯಕೆ. ಸಂಕೀರ್ಣ ಕಾವ್ಯ ನನಗೆ ಕಬ್ಬಿಣದ ಕಡಲೆ. ಸರಳ, ಆರ್ದ್ರ, ಆಪ್ತ ಕಾವ್ಯ ಮಾತ್ರ ನನ್ನ ಗ್ರಹಿಕೆಗೆ ನಿಲುಕುತ್ತದೆ. ಅದು ನನ್ನ ಮಿತಿ.
ಸಲೀಸಾಗಿ, ಸರಸರನೆ ಚೆಂದದ ಪದ್ಯ ರಚಿಸುವ ಕವಿಗಳನ್ನು ಕಂಡರೆ ನನಗೆ ಅಚ್ಚರಿ ಮತ್ತು ಅತೀವ ಗೌರವ. ಅವರು ನನಗೆ ಸದಾ ‘ತಾರೆ ಝಮೀನ್ ಪರ್!’ ಸೃಜನಶೀಲ ಕಾವ್ಯ ಒಂದು ನಾಡಿನ ಸ್ವಾಸ್ಥ್ಯದ ಸಂಕೇತ. ಅದು ಸಂವೇದನಾಶೀಲ ಸಮುದಾಯವೊಂದರ ಲಬ್ ಡಬ್, ಲಬ್ ಡಬ್ ಎಂಬ ಎದೆಯ ಬಡಿತ.
ಇಂತಹ ಹಿನ್ನೆಲೆಯ ನನಗೆ ಕಾವ್ಯ ಕಂಡ ಪರಿಯನ್ನು ಇಲ್ಲಿ ಕಂಡರಿಸುವ ಪ್ರಯತ್ನ ಮಾಡಿದ್ದೇನೆ. ಎಂದಿನಂತೆ ಒಪ್ಪಿಸಿಕೊಳ್ಳಿ. ನಿಮ್ಮ ಸಮ್ಮತಿ, ತಕರಾರನ್ನು ಮುಕ್ತವಾಗಿ ಅಕ್ಷರಗಳ ಮೂಲಕ ಮಾತ್ರ ಹಂಚಿಕೊಳ್ಳಿ:
ಕಾವ್ಯವೆಂದರೆ ಭ್ರಮೆಯಲ್ಲ, ಭ್ರಾಂತಿಯಲ್ಲ, ಪ್ರಾಸಬದ್ಧ ಪದಜೋಡಣೆಯೂ ಅಲ್ಲ. ವಾಸ್ತವದೊಂದಿಗಿನ ಮುಖಾಮುಖಿ. ಅದರ ಅಭಿವ್ಯಕ್ತಿ ಕಲಾತ್ಮಕವಾಗಿದ್ದರೆ ಆಪ್ತವಾಗುತ್ತದೆ; ಎದೆಗೆ ತಾಕುತ್ತದೆ. ಅಭಿವ್ಯಕ್ತಿ ಹಸಿಹಸಿಯಾಗಿದ್ದರೆ ಬೇಗನೆ ಹುಸಿಹೋಗುತ್ತದೆ.

ಸರಳವೋ, ಸಂಕೀರ್ಣವೋ; ಸತ್ತ್ವವಿದ್ದರೆ ಅದು ಉಳಿಯುತ್ತದೆ. ಪ್ರಾಸ ಅಥವಾ ಪ್ರತಿಮೆಗಳಲ್ಲಿ ಅದನ್ನು ಅದ್ದಿ ತೆಗೆಯಬೇಕೆಂದಿಲ್ಲ. ಸರ್ವಾಲಂಕಾರ ಭೂಷಿತವಾಗಿಸಬೇಕು ಎಂದಿಲ್ಲ. ಆದರೆ ನಿಯತಗತಿಯ ಲಯವಿರಬೇಕು; ಅರ್ಥವಿರಬೇಕು. ಅದು ನಿರಾಡಂಬರವಾಗಿದ್ದರೂ,ನಿಸ್ಸಂಕೀರ್ಣವಾಗಿದ್ದರೂ ಪಾರದರ್ಶಕವಾಗಿದ್ದರೂ ಅದರ ಮಹತ್ತ್ವ, ಅಗ್ಗಳಿಕೆ ಕಡಿಮೆಯಾಗದು. ಕಾವ್ಯ ಆ ಕ್ಷಣದ ಸತ್ಯವೂ ಹೌದು; ಅನುಕ್ಷಣದ ಸತ್ಯವೂ ಹೌದು. ಅದು ಅಲ್ಪಾಯುಷಿಯೂ ಆಗಬಹುದು. ಅದು ಶತ ಶತಮಾನಗಳನ್ನು ಕ್ರಮಿಸಿ ನಮ್ಮ ಬುದ್ಧಿ-ಭಾವವನ್ನು ಇಂದಿಗೂ ಪ್ರಭಾವಿಸುವ ದೀರ್ಘಾಯುಷಿಯೂ ಆಗಬಹುದು.
ಕಾವ್ಯವು ಚೌಕಟ್ಟನ್ನು ಮೀರಿದ ಚಿತ್ರ. ಅದರ ಎಲ್ಲೆ ಮತ್ತು ವ್ಯಾಖ್ಯೆಗಳನ್ನು ನಿರ್ದಿಗಂತವಾಗಿ ವಿಸ್ತರಿಸಬಹುದು. ಅದು ಮಿರಮಿರ ಮಿಂಚಿ, ಗುಡುಗುಡುಗಿ ಆರ್ಭಟಿಸುವ ಮೇಘಮಾಲೆ ಆಗಬಹುದು. ಅಥವಾ ಅನಾದಿ ಕಾಲದ ಆಕಾಶದಂತೆ ಮೌನವಾಗಿ ಇರಬಹುದು.
ಕಾವ್ಯವೆಂದರೇನು ಎಂಬ ಪ್ರಶ್ನೆಗೆ ಸರಿಯುತ್ತರ ಏನಾದರೂ ಆದೀತು! ಆಯಾ ಉತ್ತರಕ್ಕೊಂದು ಸಮರ್ಥನೆಯಿರುತ್ತದೆ; ನಿದರ್ಶನವಿರುತ್ತದೆ. ಏಕೆಂದರೆ ಅದು ಮುದುಡಿಕೊಂಡೂ ಇರಬಲ್ಲದು; ವಿಜೃಂಭಿಸಲೂಬಲ್ಲದು! ಯಾವುದಾದರೂ ಸಾಹಿತ್ಯ ಪ್ರಕಾರವನ್ನು ಕುರಿತು ಇದಮಿತ್ಥಂ ಎಂದು ಹೇಳಲಾಗದು ಎಂದರೆ ಅದು ಕಾವ್ಯಕ್ಕೆ ಮಾತ್ರ. ಅದಕ್ಕೆ ಅಳತೆಗೋಲು ಗಳಿಲ್ಲ. ಸ್ವತಃ ಕಾವ್ಯವೇ ಒಂದು ಮಾನದಂಡ. ಕಾವ್ಯವು ಬುದ್ಧಿ-ಭಾವದ ಹದವರಿತ ಪಾಕ. ಅದು ನಿಚ್ಚಂ ಪೊಸತು. ಪೊಸಪೊಸತು. ನವನವೋನ್ಮೇಷಶಾಲಿ!
ಯಾವುದೇ ಪಂಥ, ಪಕ್ಷ, ಪಂಗಡ, ಸಿದ್ಧಾಂತದವರಿರಲಿ ಕಾವ್ಯವನ್ನು ಉಪೇಕ್ಷಿಸಿಲ್ಲ. ಕಾವ್ಯದಲ್ಲಿ ರಂಜಕ ಗುಣವಿದ್ದರೆ ಸಾಕು ಎಂದವರುಂಟು. ಖಡ್ಗವಾಗಲಿ ಕಾವ್ಯ ಬಡವರ ನೋವಿಗೆ ಮಿಡಿವ ಪ್ರಾಣಮಿತ್ರ ಎಂದವರೂ ಇದ್ದಾರೆ. ಕಾವ್ಯವನ್ನೇ ಖಡ್ಗವಾಗಿ ಝಳಪಿಸಿದವರೂ ಇಲ್ಲದಿಲ್ಲ. ಕಾವ್ಯ ವೈವಿಧ್ಯ ಮತ್ತು ವೈರುಧ್ಯಗಳ ಒಟ್ಟು ಮೊತ್ತ. ಕಾವ್ಯಕಾರಣದಿಂದಲೇ ಜಿನುಗಿದ ಭಾವವಿದು. ಅದಕ್ಕಾಗಿಯೇ ಒಸರಿದ ಅಕ್ಷರಗಳಿವು. ಅದು ಸುಲಭವಾಗಿ ತರ್ಕಕ್ಕೂ ನಿಲುಕದ ತುಂಟ-ತರಲೆ. ಕೆಲವೊಮ್ಮೆ ಅಸೀಮರೂಪಿ ಅಂಬರ. ಮಗದೊಮ್ಮೆ ಎಲ್ಲೆ ದಾಟದ ಮುದ್ದು ಬಾಲೆ.
ನಮಗೆ ತುಂಬಾ ಪ್ರಿಯರಾದವರನ್ನು ನಾನಾ ಹೆಸರುಗಳಿಂದ ಕರೆಯುತ್ತೇವೆ. ಕಾವ್ಯ ನಮಗೆ ಪ್ರಿಯ. ಹಾಗಾಗಿ ಅದಕ್ಕೆ ಹಲವು ವ್ಯಾಖ್ಯಾನಗಳು. ಕಾವ್ಯವೂ ಅಷ್ಟೇ; ಲಾಲಿಸಿದರೆ ಮಗು, ಪೂಜಿಸಿದರೆ ದೇವರು! ಯಾವ ವ್ಯಾಖ್ಯಾನಕ್ಕೂ ಹೊಂದಿಕೊಳ್ಳಬಲ್ಲದು. ಪ್ರತಿಕೂಲ ಸಂದರ್ಭಗಳಲ್ಲೂ ಉಳಿಯಬಲ್ಲ ತಾಕತ್ತು ಅದಕ್ಕೆ ಉಂಟು. ಏಕೆಂದರೆ ಅದು ನಮ್ರವಾದುದು. ಅದು ಬದಲಾಗುವ ಸಂದರ್ಭಕ್ಕೆ, ಕಾಲಕ್ಕೆ ತಕ್ಕಂತೆ ಇಂತೇದನಗೊಳ್ಳುತ್ತ ಸಾಗುತ್ತದೆ. ಅದಕ್ಕೆ ಬಾಳಿಕೆಯ ಗುಣವುಂಟು. ಹುಲ್ಲಾಗಿ ಬಾಗುವಂತಹ #ನಮ್ಯತೆಯೂ ಉಂಟು. ಎದ್ದುನಿಲ್ಲುವ ಧೀಮಂತಿಕೆಯೂ ಉಂಟು. ಈ ಸ್ವಭಾವ ದಿಂದಾಗಿಯೇ ಅದರದು ಸದಾ ಸಮೃದ್ಧ ಫಸಲು. ಒಂದಷ್ಟು ಸಹಜಕೃಷಿ, ಇನ್ನಷ್ಟು ಸಾವಯವ ಕೃಷಿ, ಮತ್ತಷ್ಟು ರಾಸಾಯನಿಕ ಕೃಷಿ! ಕಾವ್ಯವು ಜಂಗಮ ಸ್ವರೂಪಿಯಾದುದು. ಸ್ಥಾವರಕ್ಕಳಿವುಂಟು; ಕಾವ್ಯಕ್ಕಳಿವಿಲ್ಲ. ಅದು ಚಿರಂತನ. ಮನಮನದ ತಂನಂತನನ. ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ಬಂಡಾಯ, ಭಾವಗೀತೆ, ಮಹಾಕಾವ್ಯ ಅದರದು ಏನೆಲ್ಲ ವಿಪುಲ ರೂಪಧಾರಣೆಗಳು! ಇದನ್ನು ಅರಿತೇ ನಮ್ಮ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ಹಾಡಿದ್ದು:
ಪ್ರಕೃತಿಯಂತೆ ಕವಿಯ ಮನಸ್ಸು ವಿಪುಲ ರೂಪಧಾರಿಣಿ.
ಬೊಮ್ಮನೆದೆಯ ಕನಸಿನಂತೆ ಭಾವಮೇಘಚಾರಿಣಿ.
ಕನ್ನಡವೂ, ಕಾವ್ಯವೂ ಒಂದೇ. ಅದು ದ್ವೈತವಲ್ಲ; ಅದ್ವೈತ. ಒಂದೇ; ಬೇರೆ ಬೇರೆಯಲ್ಲ! ಚೆನ್ನವೀರ ಕಣವಿಯವರ ಈ ಸಾಲುಗಳಲ್ಲಿ ಅದು ಅಭಿವ್ಯಕ್ತವಾಗಿದೆ:
ತ್ರಿಪದಿಯಿಂದ ಸಾಸಿರಪದಿ ಸ್ವಚ್ಛಂದದ ಉಲ್ಲಾಸ.
ಭಾವಗೀತೆ ಮಹಾಕಾವ್ಯ ವೀರ-ವಿನಯ ಸಮರಸ.
ಕಾವ್ಯವೆಂಬುದು “ಕವಿಯ ಮಧುರ ಕಲ್ಪನ, ಸುರಮ್ಯ ಶೃಂಗಾರ, ಸಜೀವ ಸಾಕಾರ, ತಳೆದುನಿಂತ ಭಾವನ”ದಿಂದ ಹಿಡಿದು “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು”ತನಕ ಹರಿದುಬಂದ ವಾಸ್ತವ.
ನನ್ನ ಈ ಟಿಪ್ಪಣಿಗೆ ಕನ್ನಡ ಕಾವ್ಯದಿಂದಲೇ ಆಯ್ದ ಉದಾಹರಣೆಗಳನ್ನು ಸಮರ್ಥನೆಗಾಗಿ ನೀಡಿದರೆ ಅಹುದಹುದೆನ್ನುವ ಲೇಖನವಾಗಬಹುದು. ಇಲ್ಲದಿದ್ದರೆ ಬೀಸು ಹೇಳಿಕೆಯಾಗಬಹುದು. ಮುಂದಿನ ದಿನಗಳಲ್ಲಿ ಆ ಪ್ರಯತ್ನ ನಡೆಸುವೆ. ಇಲ್ಲದಿದ್ದರೆ ಇದು “ಎಲ್ಲೆಲ್ಲೊ ಓಡುವ ಮನಸೆ, ಏಕಿಂತ ಹುಚ್ಚುಚ್ಚು ವರಸೆ” ಎಂಬ ಸಿನಿಗೀತೆಯಾಗಿ ಅಣಕಿಸುತ್ತದೆ; ಅನುರಣಿಸುತ್ತದೆ. ಕಾವ್ಯಂ ಲೋಕಪೂಜ್ಯಂ. ಹೌದು. ವಾಕ್ಯಂ ರಸಾತ್ಮಕಂ ಕಾವ್ಯಂ.
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.
