‘ರಂಗ ವಿಲಾಸ ಬಂಗಲೆಯ ಕೊಲೆಗಳು’ ಕೃತಿ ಪರಿಚಯ

ನಮ್ಮ ರಾಜಧಾನಿಯಲ್ಲೇ ಬಹಳ ಹಿಂದೆ ನಡೆದ ಈ ನೈಜ ಘಟನೆಯ ಬಗ್ಗೆ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು ‘ರಂಗ ವಿಲಾಸ ಬಂಗಲೆಯ ಕೊಲೆಗಳು’ ಕೃತಿಯಲ್ಲಿ ರೋಚಕವಾಗಿ ಬರೆದಿದ್ದಾರೆ. ಈ ಕೃತಿಯ ಕುರಿತು ವಾಣಿಶ್ರೀ ಕೊಂಚಾಡಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು: ರಂಗ ವಿಲಾಸ ಬಂಗಲೆಯ ಕೊಲೆಗಳು
ಲೇಖಕರು: ರವಿ ಬೆಳಗೆರೆ
ಪ್ರಕಾಶಕರು: ಭಾವನಾ ಪ್ರಕಾಶನ
ಬೆಲೆ: ೧೨೦ ರೂ/

ಸಾಹಿತ್ಯ ಲೋಕದಲ್ಲಿ ರವಿ ಬೆಳಗೆರೆಯವರು ಎಲ್ಲರಿಗೂ ಚಿರಪರಿಚಿತರು.ಪತ್ರಿಕೋದ್ಯಮಿ ಮತ್ತು ಸಾಹಿತಿಯಾದ ಇವರು ಉಪನ್ಯಾಸಕರೂ ಕೂಡ. ಆನೇಕ ಕೃತಿಗಳನ್ನು ಕನ್ನಡಕ್ಕೆ ಸಾಹಿತ್ಯ ಲೋಕಕ್ಕೆ ಕೊಟ್ಟಿರುವ ಇವರು ಬೆಂಗಳೂರಿನ ‘ ಪ್ರಾರ್ಥನಾ ‘ ಶಾಲೆಯ ಸ್ಥಾಪಕರೂ ಹೌದು. ಇವರ ‘ಹಾಯ್ ಬೆಂಗಳೂರು ‘ ಪತ್ರಿಕೆಯಲ್ಲಿ ಈ ‘ ರಂಗ ವಿಲಾಸ ಬಂಗಲೆಯ ಕೊಲೆಗಳು ‘ ಎಂಬ ನೈಜ ಘಟನೆಯ ಕಥೆಯು ೧೪೫ ಸಂಚಿಕೆಯ ಲೇಖನ ಮಾಲೆಯಾಗಿ ಪ್ರಕಟವಾಗಿತ್ತು.

ಆ ನಂತರ ‘ ಈ ಟಿವಿ’ ಯಲ್ಲಿ ಬರುತ್ತಿದ್ದ ‘ಕ್ರೈಂ ಡೈರಿ’ ಯಲ್ಲೂ ಪ್ರಸಾರವಾಗಿತ್ತು. ಕೊನೆಗೆ ೨೦೧೨ ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಎಲ್ಲರಿಗೂ ಓದುವಂತಾಯಿತು.
ಬೇಲೂರು ಶ್ರೀನಿವಾಸ್ ಅಯ್ಯಂಗಾರರು ಖ್ಯಾತ ವಕೀಲರಷ್ಟೇ ಆಗಿರಲಿಲ್ಲ. ಅಂದಿನ ಮೈಸೂರು ಪ್ರಜಾ ಪರಿಷತ್ ಸದಸ್ಯರು, ಸಮಾಜದಲ್ಲಿ ಅತ್ಯಂತ ಗೌರವಾನ್ವಿತರೂ ಆಗಿದ್ದರು. ಅಪಾರ ಆಸ್ತಿ , ಲೆಕ್ಕವಿಲ್ಲಷ್ಟು ಒಡವೆಗಳು ಎಲ್ಲವೂ ಇದ್ದುವು. ಆದರೂ ಅವರ ಮನೆಯನ್ನು , ಕಾಯುತ್ತಿದ್ದ ನಾಯಿಯನ್ನು ಸೇರಿಸಿ,ಎಲ್ಲಾ ಸದಸ್ಯರ ಕೊಲೆ ಒಂದು ರಾತ್ರಿಯಲ್ಲಿ ನಡೆಯಿತು.ಆಗ ಅವರ ಪ್ರಾಯ ೭೪. ವೃತ್ತಿಯಿಂದ ನಿವೃತ್ತರಾಗಿದ್ದ ಅವರಿಗೆ ವಯೋಸಹಜ ಮುಪ್ಪು ಆವರಿಸಿರುತ್ತದೆ. ಬಿದ್ದು ಕಾಲಿಗೆ ಪೆಟ್ಟಾಗಿ ಸ್ವಂತ ಕೆಲಸ ಮಾಡುವ ಸ್ಥಿತಿಯಲ್ಲಿರುವುದಿಲ್ಲ.

ಬೇಲೂರು ಶ್ರೀನಿವಾಸ ಅಯ್ಯಂಗಾರರು ಕಾನೂನು ಪದವಿಯನ್ನು ಓದುತ್ತಿದ್ದಾಗ, ಆಗಿನ್ನೂ ಚಿಕ್ಕ ವಯಸ್ಸು. ಈ ಸಂದರ್ಭದಲ್ಲಿ ಆಗರ್ಭ ಶ್ರೀಮಂತರಾದ ಭಾಷ್ಯಂ ಅಯ್ಯಂಗಾರರ ಕಣ್ಣಿಗೆ ಬೀಳುತ್ತಾರೆ. ಅವರಿಗೆ ಮಹಾಲಕ್ಷ್ಮಮ್ಮ, ಶೆಲ್ಲಮ್ಮ ಮತ್ತು ರಂಗಮ್ಮ ಎಂಬ ಮೂವರು ಹೆಣ್ಣುಮಕ್ಕಳ ಜೊತೆಗೆ ಇಬ್ಬರು ಗಂಡು ಮಕ್ಕಳೂ ಇರುತ್ತಾರೆ.

ಆದರೆ ಕೊನೆಯ ಮಗಳಾದ ರಂಗಮ್ಮನ ಮೇಲೆ ಅದೇನೋ ವಿಶೇಷ ಪ್ರೀತಿ. ಹಾಗಾಗಿ ಆಕೆಯನ್ನು ಈ ಬೇಲೂರು ಶ್ರೀನಿವಾಸ ಅಯ್ಯಂಗಾರರಿಗೇ ಕೊಟ್ಟು ಮನೆ ಅಳಿಯನನ್ನಾಗಿ ಮಾಡುತ್ತಾರೆ. ಆಗಿನ ಕಾಲದಲ್ಲಿ ಬೆಂಗಳೂರಿನ ಬಡಾವಣೆ ಎಂದೇ ಕರೆಯಲಾಗುತ್ತಿದ್ದ ಗಾಂಧಿ ನಗರದಲ್ಲಿ ಅನಾಮತ್ತು ಎರಡು ಎಕರೆ ಜಾಗದ ಜೊತೆ,ಮೂರು ತಲೆಮಾರಿನವರು ಕುಳಿತುಉಂಡರೂ ಕರಗಲಾಗದಷ್ಟು ಜಮೀನು, ಬಂಗಾರಗಳನ್ನು ಕೂಡಾ ಅಳಿಯನಿಗೆ ಕೊಡುತ್ತಾರೆ.ಹಾಗೆ ಕೊಟ್ಟ ಜಾಗದಲ್ಲಿ ಮತ್ತೆ ಎದ್ದು ನಿಂತದ್ದೇ ಈ ‘ರಂಗ ವಿಲಾಸ ಬಂಗಲೆ’. ಆ ಬಂಗಲೆಗೆ ಹೆಂಡತಿ ರಂಗಮ್ಮನವರ ಹೆಸರನ್ನೇ ಇಡುತ್ತಾರೆ . ಮುಂದೆ ಎರಡನೆಯ ಪತ್ನಿಯ ಸಂತಾನವಾದ ರಂಗಲಕ್ಷ್ಮಿಗೂ ಇದೇ ಹೆಸರು ಇಡುತ್ತಾರೆ.

ಏನೂ ಇಲ್ಲದ ಬೇಲೂರರ ಬದುಕಿನ ಭಾಗ್ಯದ ಬಾಗಿಲನ್ನು ತೆರೆದ ಈ ರಂಗಮ್ಮ ಮೊದಲು ಗಂಡು ಮಗು ಆಮೇಲೆ ಸಾಲಾಗಿ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ. ಮೊದಲ ಮಗ ಮುತ್ತಣ್ಣನಿಗೆ ಬಾಲ್ಯದಿಂದಲೇ ರೋಗ , ಫಿಟ್ಸ್ ಕಾಯಿಲೆಯಿಂದ ಬಳಲಿ ಆಮೇಲೆ ಅದು ಹುಚ್ಚಿಗೆ ತಿರುಗುತ್ತದೆ. ಆನಂತರ ಶಾರದಮ್ಮ ಮತ್ತು ಇಂದಿರಮ್ಮ. ಅವರಿಬ್ಬರಿಗೆ ಮದುವೆಯೂ ಆಗುತ್ತದೆ. ಶಾರದಮ್ಮನವರ ಪತಿಯೂ ವಕೀಲನೇ .ಆದರೆ ಎರಡನೆಯ ಮಗಳು ಇಂದಿರನ ಮದುವೆಗೆ ಸ್ವಲ್ಪ ದಿನಗಳಿರುವಾಗ ಆ ಮನೆಯಲ್ಲಿ ಮಗಳ ಚಿನ್ನದ ಆಭರಣ ಕಾಣೆಯಾಗುತ್ತದೆ. ಸಹಜವಾಗಿ ಮನೆಯವರೆಲ್ಲರೂ ಅಲ್ಲಿ ಅವರ ಜೊತೆಯಲ್ಲ ವಾಸವಾಗಿದ್ದ ರಂಗಮ್ಮನವರ ಅಕ್ಕನ ಮಗನಾದ ಶ್ರೀನಿವಾಸನ ಮೇಲೆ ಸಂಶಯ ಪಡುತ್ತಾರೆ. ಆದರೆ ಆತನೋ ಸಂಭಾವಿತ. ಅವನೆಷ್ಟು ತಾನಲ್ಲವೆಂದು ಹೇಳಿದರೂ, ಕೇಳದೆ ಪೋಲಿಸರಿಂದ ವಿಚಾರಣೆ ನಡೆಸುತ್ತಾರೆ. ನಡೆಸಿದ ಮರುದಿನ ನಾಪತ್ತೆಯಾದ ಆತ ಮರುದಿನ ರಂಗ ವಿಲಾಸ ಬಂಗಲೆಯ ಕೌಂಪೌಂಡಿನಲ್ಲಿರುವ ಕೊಳದಲ್ಲಿ ಹೆಣವಾಗಿ ಸಿಗುತ್ತಾನೆ. ಮದುವೆಗೆ ಸ್ವಲ್ಪ ದಿನ ಮುಂಚೆ ಹೀಗಾದದ್ದು ತನ್ನ ಹೆಸರಿಗೆ ಕಳಂಕ ಎಂದು ತಿಳಿದು ಅಯ್ಯಂಗಾರರು ಹುಡುಗನ ಅಮ್ಮನ ಬಳಿ ಕ್ಷಮೆ ಕೇಳುತ್ತಾರೆ. ಮತ್ತೆ ತನ್ನ ಬಲದಿಂದ ಪ್ರಕರಣವನ್ನು ಮುಚ್ಚಿ ಬಿಡುತ್ತಾರೆ.

ಇದಾದ ಕೆಲ ಸಮಯದಲ್ಲಿ ಅವರ ಹೆಂಡತಿಯೂ ತೀರಿ ಹೋಗುತ್ತಾರೆ.ಆಗ ಶ್ರೀನಿವಾಸ ಅಯ್ಯಂಗಾರರ ಪ್ರಾಯ ಕೇವಲ ೪೦. ಆ ನಂತರ ಅವರು ವಿಧವೆ ವೆಂಗಡಮ್ಮನವರ ಕೈಹಿಡಿಯುತ್ತಾರೆ. ಎರಡನೆಯ ಪತ್ನಿಯಾದರೂ ಒಳ್ಳೆಯ ಗುಣ ಹೊಂದಿದ್ದ ವೆಂಗಡಮ್ಮ ಮಕ್ಕಳೊಡನೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುತ್ತಾರೆ. ತಾಯಿ ಸಿಂಗಮ್ಮನೂ ಇವರ ಜೊತೆಗೆ ಇರುತ್ತಾರೆ. ಮುತ್ತಣ್ಣನಿಗೆ ಮನೋರೋಗ ಇರುವ ಕಾರಣ ಆತನನ್ನು ಮನೆಯ ಹೊರಗಿನ ಕೋಣೆಯಲ್ಲಿ ಕೂಡಿ ಹಾಕಿ ಪ್ರತ್ಯೇಕವಾಗಿ ಇರಿಸುತ್ತಾರೆ. ವೆಂಗಡಮ್ಮನಿಗೂ ಕ್ರಮೇಣ ಮಕ್ಕಳಾಗುತ್ತವೆ, ಸಂಪತ್ ಕುಮಾರ್ ರಂಗಲಕ್ಷ್ಮಿ, ರತ್ನ, ಪ್ರಸನ್ನ ಮತ್ತೆ ಅವಳಿ ಗಂಡು ಮಕ್ಕಳಾದ ಲವ- ಕುಶ. ಇವರ ಮೊದಲ ಮಗ ಸಂಪತ್ ಕಾಲೇಜು ಓದುತ್ತಿರುವಾಗ ಅಚಾನಕ್ಕಾಗಿ ಸಾಯುತ್ತಾನೆ. ಕೊಟ್ಟ ಕಾರಣ ಫುಡ್ ಪಾಯಿಸನ್.ಆದರೆ ಅದು ಹೇಗಾಯ್ತು? ಯಾಕಾಯ್ತು? ಕಾರಣ ಯಾರಿಗೂ ತಿಳಿಯುವುದಿಲ್ಲ.

ಅಂದು ೧೯೫೬ ರ ಜೂನ್ ೫ ರಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ‘ರಂಗವಿಲಾಸ ಬಂಗಲೆ’ಯಲ್ಲಿ ೭೪ ವರುಷದ ವೃದ್ಧ ವಕೀಲರಾದ ಬೇಲೂರು ಶ್ರೀನಿವಾಸ ಅಯ್ಯಂಗಾರ್ ,
ಹೆಂಡತಿ ವೆಂಗಡಮ್ಮ, ಅತ್ತೆ ಸಿಂಗಮ್ಮ, ಹೆಣ್ಣು ಮಕ್ಕಳಾದ ರಂಗಲಕ್ಷ್ಮಿ, ರತ್ನ ಪ್ರಸನ್ನ, ಲವ- ಕುಶ ಮಧ್ಯರಾತ್ರಿಯಲ್ಲಿ ನಿದ್ರಿಸುತ್ತಿರುತ್ತಾರೆ. ಅಯ್ಯಂಗಾರರು ಇತ್ತೀಚೆಗಷ್ಟೇ ಬಚ್ಚಲಿನಲ್ಲಿ ಬಿದ್ದು ಕಾಲು ಮುರಿದುಕೊಂಡ ಕಾರಣ ನಿಸ್ಸಹಾಯಕನಾಗಿರುತ್ತಾರೆ. ಎಂದಿನಂತೆ ಕಾವಲಿಗೆ ಕಾವಲುಗಾರ ರಾಮಲಿಂಗಮ್ ಹಾಗೂ ದೊಡ್ಡ ನಾಯಿಯೂ ಇರುತ್ತದೆ. ಆದರೂ ಸುಮಾರು ಮಧ್ಯರಾತ್ರಿಯಲ್ಲಿ ಕೋಣೆಯಲ್ಲಿ ಮಲಗಿದ ರತ್ನ ಹಾಗೂ ಪ್ರಸನ್ನ ಹಾಗೂ ಪ್ರತ್ಯೇಕ ಕೋಣೆಯಲ್ಲಿದ್ದ ಮುತ್ತಣ್ಣ ಇವರನ್ನು ಹೊರತುಪಡಿಸಿ ಉಳಿದ ಆರೂ ಜನರ ಕೊಲೆಯಾಗುತ್ತದೆ. ನಮಗೆಲ್ಲಾ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಮಾರಣ ಹೋಮವು ನಡೆಯುತ್ತದೆ.

ರಾಮಲಿಂಗಂ ನ ಮುಖ ಕತ್ತು ಹಾಗು ತಲೆಯ ಮೇಲೆ ದಾರುಣವಾದ ಹೊಡೆತ ಬಿದ್ದು ನೆತ್ತಿ ಒಡೆದು ಹೋಳಾಗಿರುತ್ತದೆ. ಕುತ್ತಿಗೆಯನ್ನು ಕೊಯ್ದು ಹಾಕಿ ರಕ್ತದ ನಡುವಿನಲ್ಲಿ ಬಿದ್ದಿರುತ್ತಾನೆ.
ವೆಂಗಡಮ್ಮನವರ ತಲೆ ಮತ್ತು ಹಣೆಯನ್ನು ಕಬ್ಬಿಣದ ಹಾರೆಯಿಂದ ಭೀಕರವಾಗಿ ಬಡಿದು ನೆತ್ತಿಯ ಚಿಪ್ಪು ಒಡೆದಿದ್ದರೆ, ಸಿಂಗಮ್ಮನವರ ತಲೆ ಒಡೆದಿರುತ್ತದೆ.ಇಬ್ಭಾಗವಾಗಿದ್ದ ತಲೆಯಿಂದ ಸುರಿದ ರಕ್ತ ಕಣ್ಣುಗಳಲ್ಲಿ ಮಡುವಾಗಿ ನಿಂತಿರುತ್ತದೆ .ಹಂತಕ ಬೀಸಿದ ಹಾರೆಯ ಹೊಡೆತಕ್ಕೆ ಲವನ ಮುಖ ಛಿದ್ರವಾಗಿ ಹೋಗಿ ಅವನ ಅಷ್ಟೂ ಹಲ್ಲುಗಳು ಗಂಟಲಿನಲ್ಲಿ ಬಿದ್ದು ಹರಡಿಕೊಂಡಿರುತ್ತದೆ.. ಕುಶನು ಮಾತ್ರ hammer ನ ಒಂದೇ ಹೊಡೆತಕ್ಕೆ ಕೊನೆಯುಸಿರೆಳೆದಿರುತ್ತಾನೆ. ಇನ್ನು ರಂಗಲಕ್ಷ್ಮಿ ಅರೆಜೀವವಾಗಿ ಸಣ್ಣಗೆ ಉಸಿರಾಡುತ್ತಿದ್ದರೆ ಅಯ್ಯಂಗಾರರ ೭೪ ವರ್ಷದ ವೃದ್ಧ ದೇಹ ಉಳಿದೆಲ್ಲರ ದೇಹಗಳಿಗಿಂತ ಭಯಾನಕವಾಗಿ ಜರ್ಜರಿತ ಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುತ್ತದೆ. ಅವರ ಕುತ್ತಿಗೆ ಹಾಗೂ ಎದೆಯನ್ನು ಚಾಕುವಿನಿಂದ ಇರಿದರೆ, ತಲೆಯನ್ನು ಹಾರೆಯಿಂದ ಜಜ್ಜಲಾಗಿರುತ್ತದೆ.

ಅಬ್ಬಾ ಇದು ನಡೆದ ಘಟನೆಯೇ? ಅಥವಾ ಸಿನೆಮಾ ಕಥೆಯೇ? ಈ ಘಟನೆ ನಡೆದು ಇಂದಿಗೆ ಸುಮಾರು ೫೭ ವರುಷಗಳು ಸಂದರೂ ಓದಿ ಅರಗಿಸಿಕೊಳ್ಳಲಾಗುವುದಿಲ್ಲವೆಂದರೆ, ಆ ಸಮಯದಲ್ಲಿ ಬೆಂಗಳೂರಿನ ಜನರೆಷ್ಟು ಹೆದರಿರಬಹುದು? ಬೆಚ್ಚಿ ಬಿದ್ದಿರಬಹುದು? ಇಂಥ ಭೀಕರ ಕೃತ್ಯವನ್ನು ಮಾಡಿದವರು ಯಾರು? ಒಬ್ಬರ ಕೆಲಸವಂತೂ ಅಲ್ಲ. ಹಾಗಿದ್ದರೆ ಬಂದ ಹಂತಕರು ಎಷ್ಟು ಜನ? ಹತ್ಯೆ ನಡೆದ ಬಳಿಕ ಅಯ್ಯಂಗಾರರು ಹುದಗಿಸಿಟ್ಟ ಅಪಾರ ಧನ ಬಂಗಾರ ,ಎಲ್ಲವೂ ಹಂತಕರ ಪಾಲಾಗುತ್ತದೆ,ಸರಿ.ಅದರ ಹೊರತಾಗಿ ಮೂರು ತಲೆಮಾರು ಕುಳಿತು ತಿಂದರೂ ಕರಗದ ಆಸ್ತಿಯನ್ನು ಹೊಂದಿದ್ದರು ಅಯ್ಯಂಗಾರರು.ಅದರ ಮೇಲೆ ಯಾರ ಕಣ್ಣಿತ್ತು? ಈ ಕೊಲೆಯನ್ನು ಮಾಡಿದ್ದ ಹಂತಕರ ಹಿಂದೆ ಇದ್ದ ಕೈ ಯಾರದು?
ಹಾಗಾದರೆ ಇದು ಆಸ್ತಿಗಾಗಿ ಮಾಡಿದ ಕೊಲೆಯೇ? ಹಂತಕರು ಏನಾದರು? ಪೋಲೀಸ್ ಪಡೆ ಕೊನೆಗೂ ಹಂತಕರನ್ನು ಸೆರೆ ಹಿಡಿದರೆ? ಅಯ್ಯಂಗಾರರ ಮೊದಲ ಹೆಂಡತಿಯ ಮಕ್ಕಳಾದ ಶಾರದಮ್ಮ ಹಾಗೂ ಇಂದಿರಮ್ಮನವರಿಗೆ ಕೊಲೆಯ ಹಿಂದಿನ ಕಾರಣದ ಅರಿವು ಇತ್ತೇ? ಮುತ್ತಣ್ಣ ಏನಾದ? ಅರೆ ಜೀವಾಗಿದ್ದ ರಂಗಲಕ್ಷ್ಮಿ ಕೊನೆಗೂ ಬದುಕುಳಿದಳೇ?
ರತ್ನ ಹಾಗೂ ಪ್ರಸನ್ನಳ ಬದುಕು ಏನಾಯ್ತು? ಕೆಲವು ಕೊನೆಗೂ ಪ್ರಶ್ನೆಗಳಾಗಿ ಕಾಡಿದರೂ ಇನ್ನೂ ಕೆಲವಕ್ಕೆ ಉತ್ತರ ಸಿಗುತ್ತವೆ.

ನಮ್ಮ ರಾಜಧಾನಿಯಲ್ಲೇ ಬಹಳ ಹಿಂದೆ ನಡೆದ ಈ ನೈಜ ಘಟನೆಯ ಬಗ್ಗೆ ತಿಳಿಯುವ ಕುತೂಹಲವಿದೆಯೇ? ಇದು ಕೇವಲ ಭಯಾನಕ ಕೊಲೆಗಳ ಕಥೆಯಲ್ಲ.ಇದರಲ್ಲಿ ಅನೇಕ ರೋಮಾಂಚಕ, ಆಶ್ಚರ್ಯಕರ ಘಟನೆಗಳ ವಿವರಗಳಿವೆ. ಖಂಡಿತವಾಗಿಯೂ ಓದಲೇ ಬೇಕಾದ ಪುಸ್ತಕ.

ಈ ಪುಸ್ತಕದ ಬಗ್ಗೆ ತಿಳಿಸಿದ ಬಳಗದ ಸದಸ್ಯರಿಗೆ ತುಂಬಾ ಧನ್ಯವಾದಗಳು.
ಧನ್ಯವಾದಗಳೊಂದಿಗೆ


  • ವಾಣಿಶ್ರೀ ಕೊಂಚಾಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading