ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವಿ ಬಾಲಸುಬ್ರಹ್ಮಣ್ಯನ್ ಅವರ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಸಂಧ್ಯಾ ರಾಣಿ ಅವರು, ಕೃತಿಯ ಕುರಿತು ಹಿರಿಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಲ್ಯಾಣ ಕೆಡುವ ಹಾದಿ
ಮೂಲ : ಬಾಲಸುಬ್ರಹ್ಮಣ್ಯನ್
ಅನುವಾದ: ಸಂಧ್ಯಾ ರಾಣಿ
ಪ್ರಕಾರ : ಆತ್ಮ ಚರಿತ್ರೆ
ಬಂಡುಕೋರ ಐ ಎ ಎಸ್ ಅಧಿಕಾರಿಯ ಆತ್ಮ ಚರಿತ್ರೆ :
ಇಲ್ಲಿಯವರೆಗೆ ಬಂದ ಸರ್ಕಾರದ ಅಧಿಕಾರಿಗಳ ಆತ್ಮ ಚರಿತ್ರೆಗಳಲ್ಲಿ ಇದು ಅನನ್ಯವಾಗಿದೆ. ಅದಕ್ಕೆ ಕಾರಣ ಅವರೆಲ್ಲರೂ ಮೇಲ್ವರ್ಗದ ಜನರ ಅನುಭವ ಕಥನಗಳು. ಬಹುಶಃ ಮೊದಲ ಬಾರಿಗೆ ಕೆಳವರ್ಗಕ್ಕೆ ಸೇರಿದ ಸರ್ಕಾರದ ಉನ್ನತ ಅಧಿಕಾರಿಯ ಆತ್ಮಚರಿತ್ರೆ ಎಂದರೆ ಇದೊಂದೇ. ಮೂಲತಃ ತಮಿಳುನಾಡಿಗೆ ಸೇರಿದ ಇವರು, ಕಿರಿಯ ವಯಸ್ಸಿನಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿ, ಉನ್ನತ ಅಧ್ಯಯನಕ್ಕೆ ತಮ್ಮ ತಂದೆಯವರು ಇದ್ದ ರಂಗೂನ್ ಗೆ ತೆರಳುತ್ತಾರೆ. ತಮಿಳುನಾಡಿನಲ್ಲಿ ಇದ್ದಾಗಲೇ ಪೆರಿಯಾರ್ ಅವರ ವೈಚಾರಿಕತೆಯ ಪ್ರಭಾವಕ್ಕೆ ಒಳಗಾಗುತ್ತಾರೆ. ರಂಗೂನ್ ನಲ್ಲಿ ಅವರು ತೆರೆದು ಕೊಂಡ ಆಧುನಿಕ ಅರ್ಥಶಾಸ್ತ್ರ ಅದರಲ್ಲೂ ಮಾರ್ಕ್ಸವಾದ ಇವರನ್ನು ದಟ್ಟವಾಗಿ ಪ್ರಭಾವಿಸುತ್ತದೆ.ಅದರ ಪರಿಣಾಮವಾಗಿ ಸ್ವತಃ ಲೇವಾದೇವಿ ವ್ಯವಹಾರ ನಡೆಸುವ ತಮ್ಮ ತಂದೆಯವರ ವಿರುದ್ಧವೇ ಬಂಡೇಳುತ್ತಾರೆ. ಅದೇ ಮುಂದೆ ಅವರ ವೃತ್ತಿಜೀವನದಲ್ಲಿ ನಿರಂತರವಾಗಿ ಮುಂದುವರೆಯುತ್ತದೆ. ಅದಕ್ಕೆ ಸಾಧನವಾಗಿ ಅವರು ತೇರ್ಗಡೆ ಹೊಂದಿದ ಐ.ಎ.ಎಸ್ ಪರೀಕ್ಷೆ ಒದಗಿ ಬರುತ್ತದೆ.

ಸದಾ ಶೋಷಿತ ವರ್ಗದ ಜನರ ಪರ ನಿಲ್ಲುವ ಇವರಿಗೆ, ಎದುರಾಳಿಗಳಾಗಿರುವವರು ಮೂರು ವರ್ಗದ ಜನರು.ಅವರುಗಳು ಮೇಲ್ವರ್ಗದ ಜನರು, ಜೊತೆಯ ಭ್ರಷ್ಟ ಅಧಿಕಾರಿಗಳು. ಅವರ ಜೊತೆ ಶಾಮೀಲಾಗಿ ನಿಲ್ಲುವ ರಾಜಕಾರಣಿಗಳು. ಅವರಿಗೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಅದರಿಂದಾಗಿ ಅವರು ಮೇಲೆ ಉಲ್ಲೇಖಿಸಿದ ಮೂರು ವರ್ಗದ ಜನರ ಜೊತೆ ನಡೆಸಿದ ಹೋರಾಟದ ಸವಾಲುಗಳನ್ನು ,ಎಳೆ ಎಳೆಯಾಗಿ ಬಿಡಿಸಿ ಇಟ್ಟು ,ಆಧುನಿಕ ಕರ್ನಾಟಕದ ಏಳುಬೀಳುಗಳನ್ನು (ಅವರಿದ್ದ ಮೊದಲ ಮೂವರು ಮುಖ್ಯಮಂತ್ರಿಗಳದು ಏರು ಕಾಲವಾದರೆ, ಉಳಿದವರದು ನೈತಿಕ ಅಧ: ಪತನದ ಕಾಲ.)ಇದನ್ನು ವಸ್ತುನಿಷ್ಠವಾಗಿ ದಾಖಲಿಸಲಾಗಿದೆ.ಅವರ ವಿರುದ್ಧ ಹೋರಾಟ ಮಾಡಲು ಇವರಿಗೆ ಇದ್ದ ಅಧಿಕಾರ, ಆಳವಾದ ಕಾನೂನು ಅರಿವು , ಅಧ್ಯಯನಶೀಲತೆ ಮತ್ತು ಅನುಭೂತಿಗಳು ನೆರವಿಗೆ ಬಂದವು.
“ಹಿರಿಯರು ಲಕ್ಷ್ಮಿಯ ಆರಾಧಕರು “ಎನ್ನುವ ಅಲ್ಲಮನ ಮಾತೊಂದು ಇದೆ. ಅದು ನಮ್ಮ ರಾಜಕಾರಣಿಗಳಿಂದ ಮೊದಲುಗೊಂಡು, ನಮ್ಮ ನಾಡಿನ ಪ್ರಾಕೃತಿಕ ಸಂಪತ್ತು ಲೂಟಿ ಮಾಡುವ ಎಲ್ಲರಿಗೂ ಅನ್ವಯವಾಗುತ್ತದೆ. ಅದನ್ನು ಈ ಕೃತಿಯಲ್ಲಿ ಸಾಧಾರವಾಗಿ ರುಜುವಾತು ಪಡಿಸಿದ್ದಾರೆ. ಅವರ ವಿರುದ್ಧ ಬಂಡೆದ್ದು ಅವರ ಕೋಪತಾಪಗಳಿಗೆ ಒಳಗಾಗಿ ವರ್ಗಾವಣೆಯ ಶಿಕ್ಷೆ ಅನುಭವಿಸಿದ್ದಾರೆ. ಆದರೆ ಅದು ಇವರ ಹೋರಾಟದ ಪ್ರವೃತ್ತಿಯನ್ನು ನಂದಿಸದೆ ಮತ್ತಷ್ಟು ಉಜ್ವಲವಾಗಿ ಬೆಳಗಿಸಿದೆ. ಇದರ ಫಲವಾಗಿ ನಿವೃತ್ತಿಯ ನಂತರ ಕೂಡ ಅವರಿಗೆ ಸರ್ಕಾರದಿಂದ ಬಂದ ಅವಕಾಶಗಳು ನಿದರ್ಶನ. ಮತ್ತು ವಕೀಲರೊಬ್ಬರು, ಇವರ ಎಂಬತ್ತರ ಹುಟ್ಟಿದ ದಿನದಂದು, ಐದು ದಶಕದ ಹಿಂದೆ ಇವರ ಕಲ್ಬುರ್ಗಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದುದನ್ನು , ನೆನಪು ಮಾಡಿಕೊಂಡು ” ಹುಟ್ಟಿದ ದಿನದ ಶುಭಾಶಯಗಳನ್ನು ಹೇಳಬಹುದಾದ ಏಕೈಕ ಅಧಿಕಾರಿ ನೀವು” ಎಂದು ದೂರವಾಣಿ ಕರೆ ಮಾಡಿ ಅಭಿನಂದಿಸಿದಾಗ ಇವರಿಗೆ ಸಾರ್ಥಕ ಭಾವ ಮೂಡುತ್ತದೆ.

ಲೇಖಕಿ ಸಂಧ್ಯಾ ರಾಣಿ
ಸಾರ್ವಜನಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ಉಳ್ಳವರೆಲ್ಲರೂ ಕೊಂಡು ಓದಲೇಬೇಕಾದ ಪುಸ್ತಕ.ಇದನ್ನು ಕನ್ನಡಕ್ಕೆ ತರುವ ಮೂಲಕ ಕನ್ನಡ ಓದುಗರಿಗೆ ಉಪಕಾರ ಮಾಡಿದ್ದಾರೆ ಸಂಧ್ಯಾರಾಣಿ. ಮನೆಗೇ ಬಂದು ತಂದುಕೊಟ್ಟ ಅವರ ಸೌಜನ್ಯ ಮತ್ತು ಔದಾರ್ಯಗಳಿಗೆ ಮಾರುಹೋದೆ.ವಂದನೆ ಅಭಿನಂದನೆಗಳು.
ಸಾಧನೆಗಳು:
೧: ಸೈದ್ದಾಂತಿಕ ಅರಿವು ಮತ್ತು ಬದ್ದತೆ
೨ ಅಧ್ಯಯನಶೀಲತೆ ಮತ್ತು ಪ್ರಯೋಗ ಶೀಲತೆ
೩. ಸಾಮಾನ್ಯ ಜನರ ಹಿತ ಕಾಪಾಡಲು ಬದ್ದ.
೪ ಅದಕ್ಕಾಗಿ ನಿರಂತರ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಲು ಹಿಂಜರಿಯದ ಪ್ರವೃತ್ತಿ.
೫: ಸಾರ್ವಜನಿಕ ಆಡಳಿತದಲ್ಲಿ ಹಾಸುಹೊಕ್ಕಾಗಿರುವ ಜಾತೀಯತೆಯನ್ನು ಬಯಲುಗೊಳಿಸಿರುವುದು. ಪಾಲಕ್ಕಾಡ್ ಬ್ರಾಹ್ಮಣ ಅಧಿಕಾರಿಗಳಿಂದ ವೈಯಕ್ತಿಕವಾಗಿ ಎದುರಿಸಿದ ನೋವುಗಳ ನಡುವೆ ಕೂಡ ,ಅಪವಾದಗಳನ್ನು ಉಲ್ಲೇಖ ಮಾಡಿರುವುದು ಅವರ ವಸ್ತುನಿಷ್ಠತೆಗೆ ಸಾಕ್ಷಿ.
೬: ಅವರನ್ನು ರೂಪಿಸಿದ ಕಾರ್ಯದರ್ಶಿಗಳಾದ ಜಿ.ವಿ.ಕೆ ರಾವ್ ಮುಂತಾದ ಪ್ರಾಮಾಣಿಕ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವುದು.
ಕೆಲವು ಭಾಷಿಕ ಮಿತಿಗಳು ಇಲ್ಲಿ ಉಲ್ಲೇಖನೀಯ. ಅವು:
೧: ಹಲವಾರು ಇಂಗ್ಲಿಷ್ ಶಬ್ದಗಳು,ವಾಕ್ಯ ವೃಂದ ಹಾಗೆ ಉಳಿದಿವೆ.ಇದರಿಂದ ಸಂವಹನ ಶೀಲತೆಗೆ ತೊಡಕು ಉಂಟು ಮಾಡುತ್ತದೆ.
೨: ತಪ್ಪು ಪದಪ್ರಯೋಗ: ಪರಿಣಾಮಕಾರಿ ಬದಲಿಗೆ ಪರಿಣಾಮಾತ್ಮಕ, ಆಸಕ್ತಿದಾಯಕ ಬದಲಿಗೆ ಆಸಕ್ತಿಕರ.ಇತ್ಯಾದಿ
೩. ಮಹಾಪ್ರಾಣಗಳು ಇರಬೇಕಾದ ಕಡೆ ಮಾಯವಾಗಿವೆ.
೪: ಹಲವಾರು ಲಿಪಿ ಸ್ಖಾಲಿತ್ಯಗಳು ಇಡಿಕಿರಿದಿವೆ.
೫ ಇಸವಿಗಳು ತಪ್ಪಾಗಿವೆ ( ೧೯೮೦ ರ ಬದಲು ೧೮೮೦)
ಮುಂದಿನ ಮುದ್ರಣಗಳಲ್ಲಿ ಇವುಗಳನ್ನು ಸರಿಪಡಿಸಲು ಅವಕಾಶ ದೊರೆಯುತ್ತದೆ ಎಂದು ಆಶಿಸೋಣ. ಸರ್ಕಾರಿ ಅಧಿಕಾರಿಗಳು ಭ್ರಷ್ಟರು ಎಂದು ಇರುವ ಸಾರ್ವತ್ರಿಕ ಅಭಿಪ್ರಾಯಕ್ಕೆ ಇದೊಂದು ಅಪವಾದವಾಗಿರುವುದು ಈ ಕೃತಿಯ ವೈಶಿಷ್ಟ್ಯ.
- ರಘುನಾಥ್ ಕೃಷ್ಣಮಾಚಾರ್
