ನೆರೆಮನೆಯವರನು ಬಿಡದೆ ಹಬ್ಬಕ್ಕೆ ಕರೆದು ಹುಗ್ಗಿ-ಹೋಳಿಗೆ ಉಣಿಸುವವಳು ನನ್ನತಾಯಿ ! ಪ್ರೊ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹಡೆದ ತಾಯಿಯ ಪಡೆದ ನಾನು
ಧನ್ಯವಂತನು ಭುವಿಯಲಿ !
ಅವಳ ಮಡಿಲ ಮಗುವಾಗಿ ಬೆಳೆದು
ಎದೆಹಾಲು ಕುಡಿದ ಗಂಡುಗಲಿ ಈ ಜಗದಲಿ !!
ಕಷ್ಟನೂರು ಬಂದರೇನು
ಕೊರಗಲಿಲ್ಲ ಮರಗಲಿಲ್ಲ ಕೇಳು !
ಅವಳೇ ನನ್ನ ದೇವತೆ ಬೇರೆ
ಯಾವ ದೇವರು ನನಗೆ ಬೇಕು ಹೇಳು !!
ಅಪ್ಪನಂತಹ ಆಲಸಿಗೂ ತಪ್ಪದೇ
ಮಗುವಿನಂತಹ ಪ್ರೀತಿ ತೋರಿ !
ಪೊರೆಯುವವಳು ನನ್ನ ತಾಯಿ
ಅವಳ ಮಮತೆಗೆ ಸಾಟಿ ಯಾವುದು ಹೇಳಿರಿ !!
ನೆರೆಮನೆಯವರನು ಬಿಡದೆ ಹಬ್ಬಕ್ಕೆ ಕರೆದು
ಹುಗ್ಗಿ-ಹೋಳಿಗೆ ಉಣಿಸುವವಳು ನನ್ನತಾಯಿ !
ಅವಳ ಪ್ರೀತಿಗೆ ಮೂಕವಿಸ್ಮಿತರಾಗಿಹರವರು
ಎಲ್ಲ ಕರುಣೆಗಳ ಮೊತ್ತ ಅವಳು ಭೂಮಿತಾಯಿ !!
ಹೊಲಗದ್ದೆಗಳಲ್ಲಿ ಹಗಲಿರುಳು ಬಿಡದೆ
ದುಡಿಯುವ ಕಾಯಕ ಜೀವಿ ನನ್ನ ತಾಯಿ !
ಅವಳಿಗೆ ಅವಳೇ ಸಾಟಿ ಬೇರೇನು ಹೇಳಲಿ
ಅವಳೇ ನನ್ನ ಪ್ರಪಂಚ ಹೆತ್ತು-ಹೊತ್ತ ತಾಯಿ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ (ಕಾವ್ಯನಾಮ – ಚಿರಂಜೀವಿ ) – ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು.
