ನಾನು ಧರಿಸುವ ಕೆಂಪು ವಸ್ತ್ರವನ್ನು ಕುರಿತು ಮತ್ತು ಅದರ ಮಹಿಮೆ-ಮಹತ್ವಗಳನ್ನು ಕುರಿತು ತಿಳಿದುಕೊಳ್ಳುವ ಕುತೂಹಲದಿಂದ, ನನ್ನ ಅನೇಕ ಗೆಳೆಯರು ಆಗಾಗ ಪ್ರಶ್ನಿಸುತ್ತಲೇ ಇರುತ್ತಾರೆ. ನನ್ನನ್ನು ಅಲಂಕರಿಸಿ ನನ್ನ ವ್ಯಕ್ತಿತ್ವಕ್ಕೊಂದು ವಿಶಿಷ್ಟ ಛಾಪು ಮೂಡಿಸಿರುವ ಈ #ಕೆಂಪು ವಸ್ತ್ರವನ್ನು ನಾವು ಗಿಣಿವಸ್ತ್ರ ಅಥವಾ #ಗಂಗವಸ್ತ್ರ ಅಥವಾ #ಕರಗವಸ್ತ್ರ ಎನ್ನುತ್ತೇವೆ. ಇದು ದಕ್ಷಿಣ ಭಾರತದ ಅನೇಕ ತಳಸಮುದಾಯಗಳ ಕಟ್ಟೆಮನೆ ಯಜಮಾನರ ಸಾಂಸ್ಕೃತಿಕ ಲಾಂಛನವಾಗಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರು ಅಣ್ಣಮ್ಮನ ಜಾತ್ರೆಯ ಪೂಜಾರಿಗಳು, ಧರ್ಮರಾಯನ ಕರಗದ ಪಾರುಪತ್ತೇಗಾರರು, ಮೈಸೂರು ಕರಗದ ವೀರಕುಮಾರರು ಹಾಗೂ ಬೆಂಗಳೂರು ದ್ರೌಪತಿ ಕರಗ ಶಾಕ್ತ್ಯೋತ್ಸವ ನಡೆಸುವ ತಿಗಳ (ಅಗ್ನಿವಂಶ ಕ್ಷತ್ರಿಯ ಅಥವಾ ವಹ್ನಿಕುಲ) ಸಮುದಾಯದ ವೀರಕುಮಾರರು ಹಾಗೂ ಪಟ್ಟೇಗಾರರು ಮಿಕ್ಕೆಲ್ಲ ಜನರಿಗಿಂತಲೂ ಹೆಚ್ಚುಗಟ್ಟಳೆ ಧರಿಸುವ ವಸ್ತ್ರ ಇದು. ಅವರು ಇದನ್ನು ಕರಗವಸ್ತ್ರವೆಂದು ಕರೆಯುತ್ತಾರೆ. ಪೂರ್ವಿಕರ ಯಾವ ಕುಲಹಕ್ಕು ನಿಬಂಧನೆಯೋ ಏನೋ ತಿಳಿದಿಲ್ಲ ಕೋಲಾರ ಮತ್ತು ಬೆಂಗಳೂರು ಸೀಮೆಯ ಮಗ್ಗದ ಹೊಲೆಯರು ಈ ವಸ್ತ್ರವನ್ನು ನೇಯ್ದು ಕೊಡುತ್ತಿದ್ದರೆಂದು ಪ್ರಖ್ಯಾತ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ನನಗೆ ತಿಳಿಸಿದರು. ರಾಮಯ್ಯನವರ ಉತ್ತರದಿಂದ ಸಮಾಧಾನಗೊಳ್ಳದ ನಾನು, ಮಗ್ಗದ ಹೊಲೆಯರ ಹಿರಿತಲೆಗಳನ್ನು ವಿಚಾರಿಸಿ ಕೇಳಲಾಗಿ ಬೆಂಗಳೂರು- ದೊಡ್ಡಬಳ್ಳಾಪುರ ಸೀಮೆಯ ದೇವಾಂಗಶೆಟ್ಟಿ ಅಥವಾ ನೇಯ್ಗೆಯವರು ಈ ವಸ್ತ್ರವನ್ನು ನೇಯುತ್ತಿದ್ದರೆಂದೂ ಕೋಲಾರ ಮತ್ತು ಬೆಂಗಳೂರು ಸೀಮೆಯ ಹೊಲೆಯರ ಒಂದು ಗುಂಪು, ದೇವಾಂಗ ಶೆಟ್ಟಿಗಳೊಂದಿಗೆ ಸಂಪರ್ಕ ಸಾಧಿಸಿ ಉದ್ಯೋಗ ಗಿಟ್ಟಿಸಿಕೊಂಡು ನೇಯ್ಗೆಯ ಕಲೆಯನ್ನು ಕಲಿಯುವುದರೊಂದಿಗೆ, ಕ್ರಮೇಣವಾಗಿ ಸ್ವತಂತ್ರ ಮಗ್ಗಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲಗೊಂಡು ಹೊಲೆಯರಲ್ಲಿಯೇ ಸೂಪರ್ ಹೊಲೆಯರಾಗಿ ತಮ್ಮನ್ನು ಮಗ್ಗದ ಹೊಲೆಯರೆಂದು ಗುರುತಿಸಿಕೊಂಡರೆಂದು ತಿಳಿದುಬಂದಿತು.
ಮುಖ್ಯವಾಹಿನಿಯ ಕನ್ನಡ ಭಾಷಿಕ ಹೊಲೆಯರ ಒಂದು ಪ್ರಭೇದವಾಗಿರುವ ಮಗ್ಗದ ಹೊಲೆಯರು ಸಂಖ್ಯಾ ದೃಷ್ಟಿಯಿಂದಲೂ ಅಧಿಕವಾಗಿದ್ದಾರೆ. ಕುಶಲಕರ್ಮಿ ಹೊಲೆಯರಾಗಿದ್ದ ಇವರು ತಮ್ಮಲ್ಲೇ ಇರುವ ಅರೆಹೊಲೆಯ ಅಥವಾ ಅರವ ಹೊಲೆಯರೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿ ಅರೆಹೊಲೆಯರ ಮೂಲಕ ಗಿಣಿವಸ್ತ್ರದ ಕ್ರಯವಿಕ್ರಯ ವಹಿವಾಟು ನಡೆಸುತ್ತಿದ್ದರೆಂದು ತಿಳಿದುಬಂತು. ಅರವ ಎಂದರೆ ತಮಿಳು ಎಂದರ್ಥ. ವ್ಯಾಪಾರಿ ವರ್ಗದ ಅರವಹೊಲೆಯರನ್ನು ಅರವಪತಮೆ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತಿದೆ. ಇವರ ಮನೆಭಾಷೆ ‘ತಿಗಳ ತಮಿಳು’. ವಹ್ನಿಕುಲ ಅಥವಾ ಅಗ್ನಿವಂಶ ಕ್ಷತ್ರಿಯರೆಂದು ಕರೆದುಕೊಳ್ಳುವ ತಿಗಳ ಸಮುದಾಯದ ಮೂಲಿಗರು ತಾವೆಂದು ತಮ್ಮ ಕುಲದ ಹುಟ್ಟನ್ನು ಕುರಿತು ಹಾಗೂ ತಿಗಳರೊಂದಿಗೆ ತಮಗಿರುವ ಸಾಮಾಜಿಕ- ಸಾಂಸ್ಕೃತಿಕ ಬಾಂಧವ್ಯವನ್ನು ಕುರಿತು ಅನೇಕ ನೆನಪುಗಳನ್ನು ಅರವಹೊಲೆಯರು ಸಂಗೋಪಿಸಿಕೊಂಡು ಬಂದಿದ್ದಾರೆ. ಇವರು ತಮ್ಮನ್ನು ತಿಗಳ ಹೊಲೆಯರೆಂದೇ ಗುರುತಿಸಿಕೊಂಡಿದ್ದಾರೆ.

‘ಕನ್ನಡ ಕಸ್ತೂರಿ – ತೆಲುಗು ತೇಟ – ಅರವ(ತಮಿಳು) ಅಮೃತ’ ಎನ್ನಿಸಿಕೊಂಡಿರುವ ಮೂರು ಭಾಷೆಗಳು ಹೊಲೆಯರಲ್ಲಿ ಬಳಕೆಯಲ್ಲಿವೆ. ಸಮಾಜದ ಮುಖ್ಯವಾಹಿನಿಯಲ್ಲಿ ಮಗ್ಗದ ಹೊಲೆಯರೆಂದು ಗುರುತಿಸಿಕೊಂಡಿರುವ ಕೇರಿಯ ಹೊಲೆಯರು, ತೆಲುಗು ಮನೆಭಾಷಿಕರಾಗಿರುವ ಸಾವು ಹೊಲೆಯರನ್ನು ಮತ್ತು ತಮಿಳು ಮನೆಭಾಷಿಕರಾಗಿರುವ ತಮಿಳ್ಹೊಲೆಯರನ್ನು ಸಾಮಾಜಿಕ ಶ್ರೇಣಿಯಲ್ಲಿ ತಮಗಿಂತಲೂ ಕೆಳಗಿನವರೆಂದು ಕೀಳುಗಾಣುವ ವಿದ್ಯಮಾನಗಳು ಮಗ್ಗದಹೊಲೆಯ ಪ್ರಭೇದದ ಸದಸ್ಯರ ಒಳಗೊಳಗೇ ವ್ಯಕ್ತವಾಗುತ್ತಿವೆ. ಇವರು ಅಗಸ ಅಥವಾ ಮಡಿವಾಳರನ್ನು ತಮ್ಮ ಕುಲಪೋಷಕರೆಂದೂ ತಾವು ಅಗಸರ ಹಳೆಮಕ್ಕಳೆಂದೂ ಗುರುತಿಸಿಕೊಂಡಿದ್ದಾರೆ. ಪಾರ್ವತಿಯು ಮುಟ್ಟಾದ ಕೆಂಪು ಹೊಲೆ ಬಟ್ಟೆಯಲ್ಲಿ ಹುಟ್ಟಿದವರು ತಾವೆಂದು ಇಂತಹ ಹೊಲೆಬಟ್ಟೆಯನ್ನು ಒಗೆದು ಮಡಿ ಮಾಡಿಕೊಡುವ ಮಡಿವಾಳರಿಗೂ ತಮಗೂ ಈ ಕೆಂಪು ಗಿಣಿವಸ್ತ್ರ ಸಲ್ಲುವಂಥದ್ದೇ ಹೊರತು ಮತ್ತಾರಿಗೂ ಸಲ್ಲತಕ್ಕದ್ದಲ್ಲವೆಂದು ಮೌಖಿಕರ ಪುರಾಣ ಕಥನವನ್ನು ಮುಂದೊಡ್ಡಿ ಹಕ್ಕು ಸ್ಥಾಪಿಸುತ್ತಾರೆ.
ದಕ್ಷಿಣ ಕರ್ನಾಟಕದಲ್ಲಿ ಹುಳ್ಳಿ ತಿಗಳರು ಮತ್ತು ಅರವ ತಿಗಳರು ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಹುಳ್ಳಿ ತಿಗಳರು ರೈತಾಪಿ ಒಕ್ಕಲುಮಕ್ಕಳಂತೆ ಅನ್ನ ಬೆಳೆಯುವ ಉತ್ಪಾದನಾ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅರವ ತಿಗಳರು ಹೂವು ತರಕಾರಿ ತೆಂಗುಕಂಗು ವೀಳ್ಯದೆಲೆ ಮುಂತಾದ ತೋಟಗಾರಿಕೆಯ ವಾಣಿಜ್ಯ ಬೆಳೆಗಳನ್ನು ಬೆಳೆದು ವಹಿವಾಟು ನಡೆಸುವ ವ್ಯಾಪಾರ ವೃತ್ತಿಯನ್ನು ಅವಲಂಬಿಸಿದ್ದಾರೆ. ಈ ವ್ಯಾಪಾರ ವೃತ್ತಿಯೇ ಅರವ ತಿಗಳರನ್ನು ಅರವಹೊಲೆಯರೊಂದಿಗೂ, ಮಗ್ಗದ ಹೊಲೆಯರೊಂದಿಗೂ, ಹುಳ್ಳಿತಿಗಳ ಕುಲಸ್ತರೊಂದಿಗೂ ಗಾಢ ನಂಟು ಬೆಸೆದಿದೆ. ಹೊಲೆಯ ಮತ್ತು ತಿಗಳರ ಎಲ್ಲಾ ಒಳಪ್ರಭೇದಗಳ ಹಿರಿಯ ಗಂಡಸರು ಗಿಣಿವಸ್ತ್ರವನ್ನು ಕಡ್ಡಾಯವಾಗಿ ಬಳಸುತ್ತಿದ್ದರು. ಇವರಷ್ಟೇ ಮಾತ್ರವಲ್ಲದೆ ಲಿಂಗಾಯತರು, ಕುರುಬರು, ಕುಂಬಾರರು, ಕುಂಚಿಟಿಗರು, ನಾಯಕರು, ಮಾದಿಗರು, ಒಕ್ಕಲಿಗರು, ಪೆದ್ದಟ್ಟಿಗೊಲ್ಲರು ಮುಂತಾದ ಸಮುದಾಯಗಳ ಜನರು ಕೆಂಪು ಗಿಣಿವಸ್ತ್ರವನ್ನು ತಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆಯ ಸಂಕೇತವಾಗಿ ಬಳಸುತ್ತಿದ್ದರು.

ದಕ್ಷಿಣ ಕರ್ನಾಟಕದ ಮಧ್ಯಕಾಲೀನ ಯುಗದ ಅವಳಿ ಸಾಂಸ್ಕೃತಿಕ ನಾಯಕರಾದ ಮಾದಾರಿ ಮಾದಯ್ಯ ಮತ್ತು ಮಂಟೇಸ್ವಾಮಿ ಇಬ್ಬರೂ ಸತ್ತೆಮ್ಮೆ ಕರುವಿನ ಚಕ್ಕಳವನ್ನು ತಮ್ಮ ಲಾಂಛನವನ್ನಾಗಿ ಮೈಮೇಲೆ ಧರಿಸಿದವರು. ಒಂದು ಕಾಲಕ್ಕೆ ಮಂಟೇಸ್ವಾಮಿ ಪರಂಪರೆಯ ನೀಲಗಾರರು ಮತ್ತು ಮಲೆಯ ಮಹದೇಶ್ವರನ ಪರಂಪರೆಯ ದೇವರಗುಡ್ಡರು ಕೆಂಪು ಗಿಣಿವಸ್ತ್ರವನ್ನು ಕಡ್ಡಾಯವಾಗಿ ಧರಿಸುತ್ತಿದ್ದರು. ಮಂಟೇಸ್ವಾಮಿಯ ಶಿಶುಮಗನಾದ ರಾಚಪ್ಪಾಜಿಯ ಹೆಂಡತಿಯಾದ ದೊಡ್ಡಮ್ಮ ತಾಯಿಯು ಮುಟ್ಟಾದ ಮಡಿವಸ್ತ್ರದ ಸಂಕೇತವಾಗಿ ನೀಲಗಾರರು ಕೆಂಪು ಗಿಣಿವಸ್ತ್ರ ಧರಿಸುವುದಾಗಿ ಹೇಳಿಕೊಳ್ಳುತ್ತಿದ್ದರು. ಅಂತೆಯೇ ಮಠಪೀಠ ಆಶ್ರಮಗಳ ಸ್ವಾಮಿಗಳು ಸನ್ಯಾಸಿಗಳು ಧರಿಸುವ ಕೆಂಪು ಕಾಷಾಯ ವಸ್ತ್ರಗಳು ಸಹ ದೊಡ್ಡಮ್ಮತಾಯಿಯು ಮುಟ್ಟಾದ ಕೆಂಪುವಸ್ತ್ರಗಳ ಸಂಕೇತವೆಂದು ಹೇಳುತ್ತಾರೆ.
ಮಾದಾರ ಮಾದಪ್ಪನ ದೇವರ ಗುಡ್ಡರು ಕೂಡ ಇಂಥದ್ದೇ ಪುರಾಣಿಮ ಕಥನದ ಸಾಕ್ಷಿಯನ್ನೊಡ್ಡಿ ತಾವು ಕೆಂಪು ಗಿಣಿವಸ್ತ್ರ ಧರಿಸುವ ಹಕ್ಕುದಾರರೆಂದು ಸಮರ್ಥಿಸಿಕೊಳ್ಳುತ್ತಾರೆ. ದೇವರಗುಡ್ಡರು ಹೇಳುವ ಪ್ರಕಾರ, ಸಮಗಾರ ಹರಳಯ್ಯನ ತಿಪ್ಪೆಗುಂಡಿಯಲ್ಲಿದ್ದ ಮಾದಾರ ಮಾದೇವನನ್ನು ಬಸವಣ್ಣ ಮತ್ತು ಅವನ ಹೆಂಡತಿಯಾದ ನೀಲಮ್ಮನವರು ಕಲ್ಯಾಣಪಟ್ಟಣಕ್ಕೆ ಕರೆದೊಯ್ಯವ ಸಂದರ್ಭದಲ್ಲಿ ಮಾದಾರ ಮಾದಯ್ಯನ ಕೈಕಾಲಿಡಿದು ಮೇಲೆತ್ತಲು ಅವನ ಕೈಕಾಲುಗಳೆಲ್ಲಾ ಕಿತ್ತು ಬಂದು ಇಡೀ ದೇಹ ಮೂಳೆಮಾಂಸಗಳ ಗುಪ್ಪೆಯಾಗುತ್ತದೆ. ಇದನ್ನು ವಸ್ತ್ರದಲ್ಲಿ ಸುತ್ತಿ ಗಂಟು ಕಟ್ಟಿಕೊಂಡು ತಲೆ ಮೇಲೆ ಹೊತ್ತು ನಡೆವಾಗ ವಸ್ತ್ರವೆಲ್ಲಾ ರಕ್ತದಿಂದ ಕೆಂಪಾಯಿತು. ಆ ಕೆಂಪು ರಕ್ತದ ಸಂಕೇತವಾಗಿ ಕೆಂಪು ಗಿಣಿವಸ್ತ್ರವನ್ನು ತಾವು ಧರಿಸುವುದಾಗಿ ದೇವರಗುಡ್ಡರು ಸಮರ್ಥನೆ ನೀಡುತ್ತಾರೆ.

ಕೆಂಪು ಗಿಣಿವಸ್ತ್ರವನ್ನು ತಮ್ಮ ಸಾಂಸ್ಕೃತಿಕ ಲಾಂಛನವನ್ನಾಗಿ ಧರಿಸುವ ಮಾದಿಗರು, ಗಿಣಿವಸ್ತ್ರದ ಸಾಂಸ್ಕೃತಿಕ ಮಹತ್ವ ಮತ್ತು ಈ ವಸ್ತ್ರವನ್ನು ಧರಿಸಲು ತಮಗಿರುವ ಪಾರಂಪರಿಕ ಹಕ್ಕುದಾರಿಕೆಯ ಬಗ್ಗೆ ಭಿನ್ನವಾದ ಮತ್ತು ಕುತೂಹಲಕರವಾದ ಅಂಶಗಳನ್ನು ತಮ್ಮದೇ ಆದ ಮೌಖಿಕ ಕುಲಕಥನ ಮತ್ತು ಆಚರಣೆಗಳ ಮೂಲಕ ಪ್ರತಿಪಾದಿಸುತ್ತಾರೆ.
(ಮುಂದುವರೆಯುತ್ತದೆ…..)
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)
