ಲೇಖಕಿ ಕಮಲಾ ಹೆಮ್ಮಿಗೆಯವರ ‘ಕಿಚ್ಚಿಲ್ಲದ ಬೇಗೆ’ ಕೃತಿಗೆ ಮಾಸ್ತಿ ಕಾದಂಬರಿ ಪುರಸ್ಕಾರ ದೊರಕಿದೆ. ಪುರಾಣದ ಜಮದಗ್ನಿ ಮುನಿಯ ಪತ್ನಿ ರೇಣುಕೆಯ ಬದುಕೇ ಇದರ ಕಥಾ ವಸ್ತುವಾಗಿದ್ದು, ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಕಿಚ್ಚಿಲ್ಲದ ಬೇಗೆ
ಲೇಖಕರು: ಕಮಲಾ ಹೆಮ್ಮಿಗೆ
ವಸಂತ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ: ೨೦೧೦
ಪುಟಗಳು: ೧೨೪
ಬೆಲೆ: ರೂ. ୭೫
ಪುರಾಣದ ಜಮದಗ್ನಿ ಮುನಿಯ ಪತ್ನಿ ರೇಣುಕೆಯ ಬದುಕೇ ಇದರ ಕಥಾ ವಸ್ತು. ರಾಜ ಕುಮಾರಿಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ರೇಣುಕೆ ಮುನಿಯ ಪತ್ನಿಯಾಗಿದ್ದೇ ಅವಳ ತಂದೆಯು ಕೊಟ್ಟ ಒಂದು ಮಾತು ಉಳಿಸಲು.!!
ಇಪ್ಪತ್ತು ವರ್ಷಗಳು ನರ್ಮದಾ ನದಿಯ ದಡದ ಮೇಲಿರುವ ಆಶ್ರಮದಲ್ಲಿ ಜಮದಗ್ನಿ ಮುನಿಯ ಸೇವೆ ಮಾಡುತ್ತಾ,ರಾಗ -ಮೋಹಗಳನ್ನು ತೊರೆದು ಜೊತೆಗೆ ಅವರ ಕೋಪವನ್ನು ಸಹಿಸಿಕೊಂಡು,ನಾಲ್ಕು ಮಕ್ಕಳನ್ನು ಹೆತ್ತು ರೇಣುಕೆ ಬದುಕು ಸಾಗಿಸುತ್ತಿದ್ದಳು. ಮದುವೆಯಾಗಿ ಮುನಿಯ ಜೊತೆ ಹೋದ ತರುವಾಯ ಹೆತ್ತವರ ಸಂಪರ್ಕವೇ ಅವಳಿಗಿರಲಿಲ್ಲ.
ನಸುಕಿನಲ್ಲಿ ಎದ್ದು ಅಂತರ್ಮುಖಿಯಾಗಿ ಮಲಾಪಹಾರಿ ನದಿಯ ನೀರು ತರಲು ದಿನವೂ ಕೊಡ ಹೊತ್ತು ನಡೆಯುವಾಗಲೆಲ್ಲಾ ಅಶಕ್ತಿಯಿಂದ ನಿರುತ್ಸಾಹ ಗೊಳ್ಳುತ್ತಿದ್ದಳು. ಮಕ್ಕಳಾದ ಸುಲೋಚನ, ವಿಲೋಚನ, ಬೃಹಲ್ಲೊಚನ ಹಾಗೂ ಭಾರ್ಗವರು ತಂದೆಯೊಂದಿಗೆ ಹೋಮಕುಂಡದ ಬಳಿ ಕೂತು ಯಜ್ಞದ ತಯಾರಿ ನಡೆಸುತ್ತಿದ್ದರು.

ಮುನಿಗಳು ಹೋಮ ಮುಗಿದ ಮೇಲೆ ಶಾಂತಿ ಮಂತ್ರವನ್ನು ಹೇಳುತ್ತಿದ್ದರು. ಆಗೆಲ್ಲಾ ‘ಪತಿಧರ್ಮ ಪಾಲನೆ ಮಾಡದವರು ದೇಶದ ರಾಜ ಧಾರ್ಮಿಕನಾಗಿರಲೆಂದು ಹರಸುವ ತಮ್ಮವರಿಗೆ ಉಪದ್ರವವಾಗದಂತೆ ನಡೆದು ಕೊಳ್ಳಲು ತಿಳಿಯದ ಇವರು ದೇಶದ ಒಳಿತಿಗಾಗಿ ಪ್ರಾರ್ಥಿಸುವುದು ಆಕೆಗೆ ಆಷಾಢಭೂತಿತನ ಎನಿಸುತ್ತಿತ್ತು.
ಒಮ್ಮೆ ನೀರು ತರಲು ಹೋದಾಗ ಗುಡಿಸಲಲ್ಲಿ ದಂಪತಿಗಳ ಸರಸ ಸಲ್ಲಾಪ ಕಂಡು ಒಂದರೆಕ್ಷಣ ರೇಣುಕೆ ಮೈಮರೆತಿದ್ದ ತಪ್ಪಿಗೆ ಜಮದಗ್ನಿ ಕೋಪದಿಂದ ಉಗುಳಿ ಕೆಂಡವಾಗಿದ್ದ. ವಿಷ ಮೂಲಿಕಾ ಮಿಶ್ರಿತ ನೀರನ್ನು ಅವಳ ಮೇಲೆ ಸೋಕಿ ಕುರೂಪಗೊಳಿಸಿದ್ದ. ಆಗ’ ಇಷ್ಟು ವರ್ಷ ನಿಷ್ಠೆಯಿಂದ ನಿನ್ನ ಸೇವೆ ಮಾಡಿದ್ದಕ್ಕೆ ನೀನು ಕೊಟ್ಟ ಪ್ರತಿಫಲ ಇದೇನೇ?….
ಎಂದು ಅವಳ ಹೃದಯ ಚೀರಿಡುತ್ತಿತ್ತು.
ಆ ಸಮಯದಲ್ಲಿ ಸಹಾಯಕ್ಕೆ ಬಂದವಳು ಮಾತಂಗಿ. ಕೀಳು ಜಾತಿಯವಳೆಂದು ದೂರವಿಟ್ಟ ಆಕೆಯ ಮನೆಯಲ್ಲೇ ಊಟ ವಾಸ್ತವ್ಯ ಎಲ್ಲವೂ. ಜೋಗನಾಥರ ಆಶ್ರಮದಲ್ಲಿ ಮೂಲಿಕಾ ಚಿಕಿತ್ಸೆಯ ಫಲವಾಗಿ ರೇಣುಕೆ ಚೇತರಿಸಿ ಕೊಂಡಳು. ಮುಂದೆ ನಾರುಡುಗೆ ತೊಟ್ಟು ರೇಣುಕಾಶ್ರಮ ನಿರ್ಮಿಸಿಕೊಂಡು ನಿರ್ಭಿಡೆಯಿಂದ ಒಬ್ಬಳೇ ಇರುವುದು ತಿಳಿದ ಜಮದಗ್ನಿ ಏನು ಮಾಡಿದ?.
ತನ್ನನ್ನು ತೊರೆದು ತಂದೆಯ ಮನೆಗೂ ಹೋಗದೇ ಅವಳು ವಿರುದ್ಧ ಪಂಥೀಯರ ಜೊತೆ ಸೇರಿ ತನ್ನ ಮೇಲೆ ಪ್ರತೀಕಾರ ತೆಗೆದು ಕೊಂಡಳೆ?… ಎಂದು ಚಿಂತಿಸಿದ್ದ. ಅವಳು ಹೋದ ಮೇಲೆ ಆಶ್ರಮದಲ್ಲಿ ತನಗೆ ತೊಂದರೆಯಾಗಿದ್ದಂತೂ ಸತ್ಯ! ಎಂತಹ ಇಕ್ಕಟ್ಟಿನಲ್ಲಿ ಸಿಕ್ಕಿಸಿ ಬಿಟ್ಟಳು! . ಎಂದು ಸಿಟ್ಟಾದ ಜಮದಗ್ನಿ. ಮುಂದೆ ಕ್ಷತ್ರೀಯರೊಡನೆ ನಡೆದ ಯುದ್ಧದಲ್ಲಿ ಜಮದಗ್ನಿ ಮುನಿಯ ಆಶ್ರಮ ದ್ವಂಸವಾಗಿ ಅವರು ಕಾಣೆಯಾಗಿದ್ದರು. ಮುನಿಗಳೆಲ್ಲ ಆತಂಕಗೊಂಡಿದ್ದರು. ಕಡೆಗೂ ಅವರು ಮೃತ್ಯುವಿನಿಂದ ಪಾರಾಗಿದ್ದರು.

ಮಗ ಪರಶುರಾಮ ತಾಯಿಯನ್ನು ಹುಡುಕಿ ಕೊಂಡು ಬಂದಿದ್ದ. ಅವನ ಗುರಿ ಏನಾಗಿತ್ತು?…
ರೇಣುಕೆ ಜಮದಗ್ನಿಯಿಂದ ಶೋಷಿತಳು ಎನ್ನುವುದಕ್ಕೆ ಇಲ್ಲಿ ಹಲವಾರು ನಿದರ್ಶನಗಳಿವೆ. ಪುರಾಣ ಪಾತ್ರಗಳ ಒಳತೋಟಿಯನ್ನು ಲೇಖಕಿ ಬಹಳ ಚೆನ್ನಾಗಿ ಅರ್ಥೈಸಿ, ಸಮಕಾಲೀನ ಸಂದರ್ಭದಲ್ಲಿ ಬರೆಯಲೆತ್ನಿಸಿದ್ದಾರೆ. ಕೊನೆಯಲ್ಲಿ ರೇಣುಕೆ ಪತಿ ಜಮದಗ್ನಿಯನ್ನು ತೊರೆದು ಸ್ವತಂತ್ರವಾಗಿ ಬಾಳಲು ಬಯಸಿ ಮನೆಯನ್ನು ತೊರೆದು ಹೋಗುತ್ತಾಳೆ. ಎಲ್ಲ ಹಂಗನ್ನೂ ಮೀರಿ ಬೇರೊಂದು ಕುಟೀರದಲ್ಲಿ ಇರಲು ನಿಶ್ಚಯಿಸುತ್ತಾಳೆ.
ಅಂತ್ಯದಲ್ಲಿ ಪಕ್ವಗೊಂಡ ರೇಣುಕೆ, ವೈರಾಗ್ಯ ಭಾವ ತಳೆದು ಕುಟುಂಬ ವ್ಯವಸ್ಥೆಯನ್ನೇ ತಿರಸ್ಕರಿಸುವುದು ಮಹತ್ವದ ಅಂಶ. ಈ ನಡುವೆ ಜಾತೀಯತೆಯನ್ನು ಬದಿಗೊತ್ತಿ ಗಿರಿಜನರ ಮಾತಂಗಿಯೊಂದಿಗೆ ಆಶ್ರಯ ಪಡೆದು ಆ ಜನರನ್ನು ಸಂಘಟಿಸುವುದು ಅವಳ ಹೊಸ ದಾರಿಯನ್ನು ತೋರುತ್ತದೆ. ಒಡಲೊಳಗಿನ ಕಿಚ್ಚು ಹೊರ ನೋಟಕ್ಕೆ ಕಾಣಿಸುವುದಿಲ್ಲ. ಕಿಚ್ಚಿಲ್ಲದ ಬೇಗೆ ಎಂಬ ಕಥೆಯು ಇದನ್ನು ಧ್ವನಿಸುತ್ತದೆ. ಅಪರೂಪದ ಘಟನಾವಳಿಗಳನ್ನು ಹೊಂದಿದ ಈ ಕೃತಿಯನ್ನು ಓದಿ….
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
