ಚಂಪಾವತಿ ಎಚ್ ಎಸ್ ಅವರ ಕಾದಂಬರಿ “ತಲ್ಲಣಗಳು” ಮತ್ತು ಸ್ತ್ರೀವಾದದ ಇತರ ತುಣುಕು ವಿಚಾರಗಳಾಗಿದ್ದು, ಕಾದಂಬರಿಯ ಕುರಿತು ಹಿರಿಯ ಲೇಖಕಿ ಡಾ.ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
1989 ರಲ್ಲಿ ನಾನು ಸ್ತ್ರೀವಾದೀ ಅಧ್ಯಯನ ಕೈಗೊಂಡಾಗ ಕನ್ನಡದಲ್ಲಿ ಒಂದು ಪುಸ್ತಕವೂ ಇರಲಿಲ್ಲ. ಜರ್ಮನ್ ಗ್ರೀರ್, ಷುವಾಲ್ಟರ್, ಕೇಟ್ ಮಿಲೆಟ್, ಸಿಮೊನ್ ದ ಬೊವಾ ಹೀಗೆ ಇಂಗ್ಲಿಷಿನಲ್ಲಿ ಓದಿಕೊಂಡು ಕನ್ನಡಿಸಿ ವೈಚಾರಿಕ, ಅಸ್ತಿತ್ವವಾದೀ, ಮಾರ್ಕ್ಸ್ವಾದಿ ಸ್ತ್ರೀವಾದ ಎಂದೆಲ್ಲಾ ವಿಭಾಗಿಸಿಕೊಂಡು ವಿಜಯಾ ದಬ್ಬೆಯವರ ಮುಂದೆ ಇಟ್ಟಿದ್ದೆ. ಅವರು ಸರಿ ಎಂದು ಬೆನ್ನು ತಟ್ಟಿದ್ದರು. ಈಗ ೩೫ ವರುಷಗಳ ನಂತರ ಕಾದಂಬರಿಗಳೇ ಬರುತ್ತಿವೆ. ಈ ಬೆಳವಣಿಗೆ ಖುಷಿ ತಂದಿದೆ. ಚಂಪಾವತಿಯವರಿಗೆ ಅಭಿನಂದನೆಗಳು.
ಈ ಕಾದಂಬರಿಯನ್ನು ಓದಿದಾಕ್ಷಣ ಯೇಟ್ಸ್ ನ ಸೆಕೆಂಡ್ ಕಮಿಂಗ್ ಸಾಲುಗಳು “Things fall apart centre cannot hold” ನೆನಪಾದವು. ಎಲ್ಲ ಚಳವಳಿಯ ಸ್ವರೂಪವೂ ಇಲ್ಲಿ ಚಲ್ಲಪಿಲ್ಲಿಯಾಗಿವೆ. ಒಂದು stabilty ಮತ್ತು order ಇಲ್ಲವಾಗಿದೆ. ಈ ಕಾದಂಬರಿ ಪ್ರಾರಂಭವಾಗುವುದೇ ಒಂದು Shattered, scattered ಆದ ಸ್ಥಿತಿಯಿಂದ, ಬದುಕಿಗೆ ಒಂದು ಚೌಕಟ್ಟು ಇಲ್ಲ ಎನ್ನುವ ಅರಿವಿನ ಆಸ್ಫೋಟದ ಭ್ರಮ ನಿರಸನ ಸ್ಥಿತಿಯಿಂದ, ಈ ತಲ್ಲಣಗಳು ಗೊಂದಲಗಳು ಹೊಸಕಾಲದ ಮುನ್ಸೂಚನೆಯೂ ಇತಬಹುದು. ಚೌಕಟ್ಟು ಹರಿದುಕೊಂಡರೆ ಬಯಲೇ ತಾನೇ? ಫ್ಲೇವಿಯಾ ಈ ಹೋರಾಟವನ್ನು ಒಂದು ರೀತಿ ಹೋಲಿಸ್ಟಿಕ್ ಆಗಿ ನೋಡಬೇಕು ಎನ್ನುತ್ತಾರೆ.

ಇದು The conflict between powerful and the powerless. ಎನ್ನುತ್ತಾರೆ. ಯಾಕೆಂದರೆ ಗಂಡಾಳಿಕೆ ಎಂದಾಕ್ಷಣ ಅದು ಪುರುಷನೇ ಆಗಬೇಕಾಗಿಲ್ಲ. ಇಲ್ಲಿ ಬರುವ ಪಲ್ಲವಿ ಅವಳು ಪಿತೃಪ್ರಧಾನತೆಯ ಸಂಕೇತವೇ ಆಗಿದ್ದಾಳೆ. ಹೀಗಾಗಿ ಹೋರಾಟ ಚಳವಳಿ ಎನ್ನುವುದು ಇದು ಲಿಂಗ ಜಾತಿ ವರ್ಣ ವರ್ಗವನ್ನು ಮೀರಿದ್ದು. ಲೇಖಕಿ ಚೌಕಟ್ಟು ಇಲ್ಲ ಎನ್ನುವುದು ಆ ಚೌಕಟ್ಟನ್ನು ಹರಿದು ಕೊಳ್ಳುವ ಪ್ರಕ್ರಿಯೆಯೇ ಆಗಿದೆ. ಎಲ್ಲ ಹೋರಾಟಗಳ ಮೂಲ ಒಂದೇ. ಎಂದು ಅಖಂಡವಾಗಿ ನೋಡುವುದೇ. ಚಲ್ಲಾಪಿಲ್ಲಿಯಾಗಿ ಚದುರಿಹೋಗಿರುವ ವಿವಿಧ ಸಂಘಟನೆಗಳನ್ನು ಒಗ್ಗೂಡಿಸುವುದಾಗಿದೆ. ಆಮೂಲಕವೇ ಒಂದು ಅರ್ಥಪೂರ್ಣ ಹೋರಾಟ ಸಾಧ್ಯ ಎಂದು ಗ್ರಹಿಸಬಹುದಾಗಿದೆ.
ಈ ಕಾದಂಬರಿ ಓದಿದಾಕ್ಷಣ ನನಗೆ ಇದರಲ್ಲಿ ಸ್ತ್ರೀಪರವಾದ ಚಳವಳಗಳ ಜೋಷ್ ಕಾಣಿಸಿತು. ಅದರ ಜೊತೆಗೆ ವಿಷಾದವೂ ಸೇರಿಕೊಂಡಿದೆ. ಚಳವಳಿಯ ಸ್ವರೂಪ, ಮುಂಗಾಣ್ಕೆ, ಅದರ ಬಿಕ್ಕಟ್ಟುಗಳು, ಅದರ ದುರುಪಯೋಗ, ಪ್ರಾಯೋಗಿಕ ಸಮಸ್ಯೆಗಳು, ಪರ್ಯಾಯಗಳು ಎಲ್ಲವೂ ಲಲಿತಾ ಮತ್ತು ಸುನೀತಾ ಎಂಬ ಎರಡು ಪಾತ್ರಗಳ ಮೂಲಕ ಇಲ್ಲಿ ಚರ್ಚಿತವಾಗಿವೆ. ಶಿವಗಂಗಾದಲ್ಲಿಯೇ ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ ಎನಿಸಿತು. ಇಲ್ಲಿ ಇದು loud ಆಗಿದೆ.
೯೦ ರ ದಶಕದಿಂದಾಚೆಗೆ ಸ್ತ್ರೀವಾದದಲ್ಲಿ ಒಂದು paradigm shift ನ್ನು ಕಾಣುತ್ತೇವೆ. ಅದೇನೆಂದರೆ victim mode ನಿಂದ survivor mode ಗೆ ತಿರುವನ್ನು ಪಡೆದುಕೊಂಡಿದ್ದು. ೩೫ ವರುಷಗಳ ನಂತರ ಈಗ ಸ್ತ್ರೀವಾದ ಇನ್ನೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಕಾಲ ಹದವಾಗಿದೆ ಎನಿಸುತ್ತದೆ.
ಈ ಸ್ತ್ರೀಪರ ಹೋರಾಟಕ್ಕೆ ಈಗ ಅನೇಕ ಧಾರೆಗಳು LGBTQ, ಲೈಂಗಿಕ ಕಾರ್ಯಕರ್ತರು (ಮಹಿಳಾ ಮತ್ತು ಪುರುಷ)ಮುಸ್ಲಿಂ ಮುಂತಾದ ಅಲ್ಪಸಂಖ್ಯಾತರು ಸೇರಿಕೊಂಡು ಚಳವಳ ಹುರಿಗೊಂಡಿದೆ. ಈ ಕಾದಂಬರಿ ಕ್ವಚಿತ್ ಆಗಿ, ಲೈಂಗಿಕ ಕಾರ್ಯಕರ್ತೆಯರು ಮತ್ತು ತೃತೀಯ ಲಿಂಗಿಗಳ ಬಗೆಗೆ ಪಾಸಿಂಗ್ ಆದ ರೆಫೆರೆನ್ಸ್ ನ್ನು ಹೊಂದಿದೆ. ಆದರೂ ಎಲ್ಲಿಯೂ ಅದು ಇಡಿಯಾಗಿ ಒಂದು ಅನುಭವವಾಗಿ ದಕ್ಕುವುದಿಲ್ಲ. ಹೀಗೆ ದಕ್ಕದೇ ಇರುವುದೇ ಇಂದಿನ ವಾಸ್ತವವೇನೋ. ಲಲಿತಾ ಸುನೀತ ಶಬುನಂ, ಈಶ್ವರ್, ಶಶಾಂಕ, ಇವರೆಲ್ಲಾ ಚಲ್ಲಾಪಿಲ್ಲಿಯಾದ ವಿವಿಧ ಸ್ತರದ ಹೋರಾಟದ ಪ್ರತೀಕಗಳು.

ಇಲ್ಲಿ ಕುಟುಂಬವನ್ನು ಒಪ್ಪಿಕೊಂಡಿರುವವರು, ಅದನ್ನು ನಿರಾಕರಿಸಿದವರು, ಕುಟುಂಬ ಮತ್ತು ಸಂಘಟನೆ ಎರಡರಲ್ಲೂ ಹೋರಾಡುತ್ತಿರುವವರು, ವಿಸ್ತೃತ ಕಟುಂಬದ ಮೂಲಕ ಹೊಸ ಕುಟುಂಬದ ಪರಿಕಲ್ಪನೆಯನ್ನು ರೂಪಿಸಿಕೊಂಡವರು ಇದ್ದಾರೆ- ಈ ಎಲ್ಲರ ಸಮಸ್ಯೆಗಳು ಚರ್ಚೆಗೆ ಒಳಪಟ್ಟಿವೆ ಒಂದಕ್ಕೊಂದು ಮುಖಾಮುಖಿಯಾಗಿವೆ. ಈ ಎಲ್ಲವೂ ಒಂದು ಏಕೀಕೃತ ಗ್ರಹಿಕೆಯ ಒಳಗೆಬರಬೇಕು ಎನ್ನುವುದನ್ನು ಈ ಕೃತಿ ಹೇಳುತ್ತಿರಬಹುದು.
ಸಂಬಂಧಗಳನ್ನು ನಿರಾಕರಿಸಿ ಬದುಕಲು ಸಾಧ್ಯವಿಲ್ಲ. ಸಂಬಂಧಗಳಲ್ಲಿ ಬದುಕುವುದು ಅನಿವಾರ್ಯ. ( ಶಶಿ ದೇಶಪಾಂಡೆ) ಮದುವೆ ಅಥವಾ ಗಂಡನನ್ನು ನಿರಾಕರಿಸಿದಾಕ್ಷಣ ಪಿತೃಪ್ರಧಾನತೆಯ ಬಿಗಿ ಹಿಡಿತದಿಂದ ಬಿಡುಗಡೆ ಸಿಕ್ಕಿಬಿಡುವುದಿಲ್ಲ. ಯಾಕೆಂದರೆ ಮದುವೆಯ ವ್ಯವಸ್ಥೆಯ ಆಚೆಗೂ ಗಂಡಾಳಿಕೆ ಎನ್ನುವುದು ಇದೆ. (ಗಂಡಾಳಿಕೆ ನಡೆಸುವವರು ಪುರುಷರೇ ಆಗಬೇಕೆಂದಿಲ್ಲ, ಆ ಮಾದರಿಯನ್ನು ಅನುಸರಿಸುವವರೆಲ್ಲಾ ಗಂಡಾಳಿಕೆಯ ವರ್ತುಲದಲ್ಲೇ ಬರುತ್ತಾರೆ. ಉದಾ: ಪಲ್ಲವಿ)
ಇದು ಕಾದಂಬರಿ ಆಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು ಈ ಪುಸ್ತಕ ಎತ್ತುವ ಪ್ರಶ್ನೆಗಳ ಕಡೆಗೆ ಗಮನ ಹರಿಸುವುದಾದರೆ ಇದಕ್ಕೆ ತನ್ನದೇ ಆದ ಸಾಮಾಜಿಕ ಮಹತ್ವವಿದೆ. ಸಾಹಿತ್ಯಕ ಮಹತ್ವದ ಬಗ್ಗೆ ನಾನು ಏನೂ ಹೇಳಲಾರೆ. ಇದು ಕಾದಂಬರಿಯಾಗಿ ಯಶಸ್ವಿಯಾಗಿದೆಯೇ? ಪ್ರಣಾಳಿಕೆಗಳ ಸಂಕಲನವೇ? ಎನ್ನುವ ಪ್ರಶ್ನೆಗೆ ಉತ್ತರ ಬೇರೆ ನೆಲೆಯಲ್ಲಿಯೇ ಹುಡುಕಬೇಕಾಗಿದೆ. ಇಂತಹ ಕೃತಿಗಳು ಕಾದಂಬರಿಯ ಹೊಸವ್ಯಾಖ್ಯೆಗೆ ಕಾಯುತ್ತಿವೆಯೇ ಅಥವಾ ಸಾಹಿತ್ಯದ ಹೊಸ ಪ್ರಕಾರವನ್ನಾಗಿಯೇ ಗುರುತಿಸಬೇಕೇ? ಗೊಂದಲ ನನಗೆ. ಕಾಲವಷ್ಟೇ ನಿರ್ಧರಿಸಬಲ್ಲುದು.

ಗೇ ಗಳಲ್ಲಿ ಕೂಡ ಒಬ್ಬ ಹೆಣ್ಣು ಭೂಮಿಕೆಯನ್ನು ನಿಭಾಯಿಸಿದರೆ ಇನ್ನೊಬ್ಬ ಗಂಡು ಭೂಮಿಕೆಯನ್ನು ನಿಭಾಯಿಸುವುದನ್ನು ನಾನು ನೋಡಿದ್ದೇನೆ. ಭೂಮಿಕೆಗಳಿಗೆ ಅಂಟಿಕೊಂಡಿರುವ ತಾರತಮ್ಯ ಭಾವನೆ ಹೋಗಬೇಕು – ಇಂತಹ ಸೈದ್ಧಾಂತಿಕ ಗೊಂದಲಗಳ ನಡುವೆ ನಾವು ಹಾದು ಹೋಗುತ್ತಿದ್ದೇವೆ. ಈ ಗೊಂದಲವನ್ನು ತಲ್ಲಣಗಳು’ ಭಾಷಾಂತರಿಸುತ್ತಿವೆ.
ಭೂಮಿಕೆಗಳು ಅದಲು ಬದಲಾಗುವುದಾದರೆ ನಾವು ಹೆಣ್ಣು ಮಕ್ಕಳೇ ಸಿದ್ಧರಾಗುವುದಿಲ್ಲ . ಮದುವೆಯಾಗುವ ಗಂಡು ತನಗಿಂತ ಒಳ್ಳೆಯ ಉದ್ಯೋಗ, ಸಂಬಳ, ತನಗಿಂತ ಎತ್ತರ ಇರಬೇಕೆಂದೇ ಹೆಣ್ಣು ಮಕ್ಕಳು ಬಯಸುತ್ತಾರೆ. Home maker ಹುಡುಗನಿಗೆ ಯಾರಾದರೂ ಹೆಣ್ಣು ಕಟ್ಟಾರೆಯೇ? ಅನಕೂಲಸ್ಥ ಪುರೋಹಿತರನ್ನಾಗಲೀ , ರೈತರನ್ನಾಗಲೀ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವ ಕೊರಗು ಇತ್ತೀಚೆಗೆ ಕಂಡು ಬರುತ್ತಿದೆ. ಈ ಎಲ್ಲವನ್ನೂ ಸ್ತ್ರೀವಾದ ಸಂಹಿತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯವಿದೆ.
ಮಹಿಳೆಯರ ಪರವಾದ ಕಾನೂನುಗಳು ಜಾರಿಗೆ ಬಂದಿವೆ ನಿಜ. ಅದು ಹೆಚ್ಚು ಅನ್ವಯವಾಗುತ್ತಿಲ್ಲ. ಬಲಿಪಶುಗಳಾದ ಹೆಣ್ಣುಮಕ್ಕಳಿಗೆ ಅದಕ್ಕೆ access ಸಿಗುತ್ತಿಲ್ಲ ಎನ್ನುವುದು ಒಂದು ಕಡೆಗಾದರೆ ಇನ್ನೊಂದು ಕಡೆ ವಿದ್ಯಾವಂತ ಹೆಣ್ಣುಮಕ್ಕಳು ಇದನ್ನು misuse ಮಾಡಿಕೊಳ್ಳುತ್ತಿರುವ ಕೇಸ್ ಗಳು ಗಮನಕ್ಕೆ ಬರುತ್ತಿವೆ. ಇದರಿಂದಾಗಿ ನಿಜವಾಗಿ ಅಗತ್ಯವಿರುವ ಹೆಣ್ಣುಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತಿದೆ.
ಸ್ತ್ರೀವಾದಿಗಳು ಇಂತಹ ಕಾನೂನು ದುರುಪಯೋಗ ಮಾಡಿಕೊಳ್ಳುವ ಮಹಿಳೆಯರ ವಿರುದ್ಧವಾಗಿಯೂ ಮಾತನಾಡಬೇಕಾಗಿದೆ. ಇದು ಸ್ತ್ರೀಯರ ಪ್ರಶ್ನೆ ಮಾತ್ರವಲ್ಲ ಇಡೀ ಸಮಾಜದ ಸಂಸ್ಕೃತಿಯ ಪ್ರಶ್ನೆ. ಆದುದರಿಂದ ಇದನ್ನು holistic ಆಗಿಯೇ ನೋಡಬೇಕಾಗಿದೆ. ಸ್ತ್ರೀವಾದದ ವ್ಯಾಪ್ತಿ ವಿಸ್ತೃತವಾಗ ಬೇಕಾಗಿದೆ.
- ಡಾ.ಗಿರಿಜಾ ಶಾಸ್ತ್ರಿ
