ರಾಜಾಸ್ಥಾನದ ಕಿರಾಡು ದೇವಾಲಯಗಳು – ವಸಂತ ಗಣೇಶ್



ರಾಜಾಸ್ಥಾನದ ಬಾರ್ಮರ್ ಜಿಲ್ಲೆಯ ಕಿರಾಡು ದೇವಾಲಯಗಳು. ಬೆಳಗ್ಗೆ ದೇವಾಲಯ ಎಷ್ಟು ಸುಂದರವಾಗಿ ಕಾಣುತ್ತದೆಯೋ… ರಾತ್ರಿ ಹೊತ್ತಿನಲ್ಲಿ ಅಷ್ಟೆ ಭಯಾನಕತೆಯಿಂದ ಕೂಡಿದೆ. ದೇವಾಲಯದ ಬಗ್ಗೆ ಲೇಖಕಿ ತಾವು ಕಂಡು ಅನುಭವಿಸಿದ ಸಾಕಷ್ಟು ವಿಷಯಗಳನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಸಾಮಾನ್ಯವಾಗಿ ಜನರು ಮನಶಾಂತಿಗಾಗಿ, ಭಕ್ತಿಯಿಂದ ದೇವಾಲಯಕ್ಕೆ ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ದೇವಾಲಯವಿದೆ. ಅಲ್ಲಿ ಹೋಗಿ ಅಕಸ್ಮಾತ್ ರಾತ್ರಿ ಉಳಿದರೆ ಮನುಷ್ಯರು ಕಲ್ಲಾಗುತ್ತಾರಂತೆ. ಅದ್ಯಾವ ದೇವಾಲಯ ಎಂದಿರಾ?… ಅದೇ ರಾಜಾಸ್ಥಾನದ ಬಾರ್ಮರ್ ಜಿಲ್ಲೆಯ ಕಿರಾಡು ದೇವಾಲಯಗಳು. ಇಲ್ಲಿ ಬೆಳಗ್ಗೆ ದೇವಾಲಯ ಎಷ್ಟು ಸುಂದರವಾಗಿ ಕಾಣುತ್ತದೆಯೋ ರಾತ್ರಿ ಹೊತ್ತಿನಲ್ಲಿ ಅಷ್ಟೆ ಭಯಾನಕತೆಯಿಂದ ಕೂಡಿದೆ.

ಫೋಟೋ ಕೃಪೆ : skymetweather

ಇದು ಥಾರ್ ಮರುಭೂಮಿಯಿಂದ ೩೫ ಕಿ.ಮೀ ಬಾರ್ಮರ್ ಮತ್ತು ಜೈಸಲ್ಮೇರ್ ನಿಂದ ಸುಮಾರು ೧೬೦ ಕಿ.ಮೀ ದೂರದಲ್ಲಿ ಇದೆ. ಇದನ್ನು “ದೇವಾಲಯಗಳ ನಗರ ” “ರಾಜಾಸ್ಥಾನದ ಖುಜಾರಹೋ” ಎಂದು ಕರೆಯಲಾಗುತ್ತದೆ.

ಇದೊಂದು ಹಿಂದೂ ದೇವಾಲಯಗಳ ಗುಂಪಾಗಿದ್ದು, ಈಗ ಎಲ್ಲವೂ ನಾಶವಾಗಿ ಮುಖ್ಯವಾಗಿ 5 ದೇವಾಲಯಗಳ ಅವಶೇಷಗಳು ಮಾತ್ರ ಸಂರಕ್ಷಿಸಲ್ಪಟ್ಟಿವೆ. ಇವುಗಳಲ್ಲಿ ಸೋಮೇಶ್ವರ ದೇವಾಲಯ,ಮತ್ತೊಂದು ವಿಷ್ಣು ದೇವಾಲಯ ಹಾಗೂ ಈ ಎರಡೂ ದೇವಾಲಯಗಳ ನಡುವೆ ಇನ್ನು ಮೂರು ಶಿವದೇವಾಲಯಗಳು ಇವೆ.

ಇದನ್ನು ೧೧, ೧೨ ನೇಯ ಶತಮಾನದಲ್ಲಿ ಚಾಲುಕ್ಯ (ಸೋಲಂಕಿ) ದೊರೆಗಳ ವಾಸಹಾತುಗಾರರಿಂದ ನಿರ್ಮಿತವಾದುದು ಎನ್ನುವ ಪುರಾವೆ ಇದೆ. ಪರ್ಸಿ ಬ್ರೌನ್ ಎನ್ನುವ ಕಲಾಇತಿಹಾಸಕಾರ ಈ ವಾಸ್ತುಶಿಲ್ಪ ಶೈಲಿಯನ್ನು “ಸೋಲಂಕಿ ಮೊಡ್” ಎಂದು ಕರೆದರೆ, ಈಗ ಈ ವಾಸ್ತುಶಿಲ್ಪ ಶೈಲಿಯನ್ನು #ಮರುಗರ್ಜರಾವಾಸ್ತುಶಿಲ್ಪ ಎಂದು ಕರೆಯುತ್ತಾರೆ. ಕ್ರಿ. ಶ ೧೧೫೩- ೧೧೭೮ ರ ಶಾಸನಗಳು ಇಲ್ಲಿ ದೊರಕಿದ್ದು, ಇದರ ಆಧಾರದ ಮೇಲೆ ಇತಿಹಾಸಕಾರ ಗೌರಿ ಶಂಕರ್ ಓಜಾ ಇದು ೧೧ ನೆಯ ಶತಮಾನಕ್ಕೆ ಸೇರಿದ್ದು ಎಂದರೆ ಮತ್ತೆ ಕೆಲವು ಇತಿಹಾಸಕಾರಾದ ರತ್ನ ಚಂದ್ರ ಅಗರ್ವಾಲ್, ಸ್ಟೆಲ್ಲಾ ಕ್ರಾಂಮ್ರಿಷ್, ಪರ್ಸಿ ಬ್ರೌನ್ ಹಾಗೂ ಮಧುಸೂಧನ್ ಇವರುಗಳು ೧೨ ಶತಮಾನಕ್ಕೆ ಸೇರಿದ್ದು ಎನ್ನುತ್ತಾರೆ. ತೀರಾ ಇತ್ತೀಚೆಗೆ ಮೈಕಲ್ ಎನ್ನುವ ಇತಿಹಾಸಕಾರರು ಸೋಮೇಶ್ವರ ದೇವಾಲಯ ೧೦೨೦ ನೆಯವರ್ಷದ್ದು ಎಂದೂ ಮತ್ತು ಪಕ್ಕದಲ್ಲಿ ಇರುವ ವಿಷ್ಣು ದೇವಾಲಯ ೧೦ ನೆಯ ಶತಮಾನದ ಆರಂಭ ಕಾಲದ್ದು ಎಂದೂ ಹೇಳುತ್ತಾರೆ.

ಫೋಟೋ ಕೃಪೆ : patrika

ಕಿರಾಡು ಅನ್ನು ಮೂಲತಃ ಕಿರಟಕುಪ ಎಂದು ಕರೆಯಲಾಗುತ್ತಿತ್ತು. ೧೨ ನೇ ಶತಮಾನದಲ್ಲಿ, ಇದನ್ನು ಹಲವಾರು ಸಣ್ಣ ರಾಜವಂಶಗಳು ಆಳುತ್ತಿದ್ದರು, ಇದು ಚೌಲುಕ್ಯರ ವಾಸಹಾತುಗಾರರಿದ ಆಳಲ್ಪಟ್ಟಿತು. ೧೧೫೦ ರ ದಶಕದಲ್ಲಿ, ನಡ್ಡುಲ ಚಹಮಾನ ಆಡಳಿತಗಾರ ಅಲ್ಹಾನಾ (ಚೌಲುಕ್ಯ ವಸಾಹತುಗಾರ ಕೂಡಾ ಆಗಿದ್ದವನು) ಕಿರಾಡು ರಾಜ್ಯಪಾಲನಾಗಿ ನೇಮಕಗೊಂಡಿದ್ದನೆಂದು ಕ್ರಿ.ಶ ೧೧೫೨ ರ ಶಾಸನವೊಂದು ದೃಡ ಪಡಿಸುತ್ತದೆ . ೧೧೬೦ ರ ಹೊತ್ತಿಗೆ ಈ ಪ್ರದೇಶವನ್ನು ಪರಮಾರ ವಂಶದ ರಾಜ ಸೋಮೇಶ್ವರ ಪುನರ್ನಿರ್ಮಾಣ ಮಾಡಿದ್ದನಾದರೂ ಹದಿಮೂರು ಮತ್ತು ಹದಿನಾಲ್ಕನೆಯ ಶತಮಾನದಲ್ಲಿ ಉದ್ರಿಕ್ತ ಜನರು ಹಾಳುಗೆಡಹಿದರು ಎನ್ನಲಾಗಿದೆ.

ಸೋಮೇಶ್ವರ ದೇವಾಲಯದ ಶಿಖರದ ಭಾಗವು ಕುಸಿದು, ಮೇಲ್ಛಾವಣಿ ಕೂಡಾ ಶಿಥಿಲವಾಗಿದೆಯಾದರೂ ಶಿಲ್ಪಕಲೆ ಮಾತ್ರ ಅಚ್ಚಳಿಯದೆ ಉಳಿದಿದೆ. ಗೋಡೆಗಳು ಹಾಗೂ ಕಂಬಗಳ ಕೆತ್ತನೆ ಮನಸೂರೆ ಗೊಳ್ಳುವಂತೆ ಇವೆ, ದೇವಾನು ದೇವತೆಗಳು, ಪೌರಾಣಿಕ ಕಥೆಗಳು, ಮಾನವರ ಹಾಗೂ ಪ್ರಾಣಿಗಳ ಕಲಾಕೃತಿಗಳಿವೆ. ವಿಷ್ಣು ದೇವಾಲಯದ ಮಂಟಪ ಸ್ಥಿರವಾಗಿದೆ.



ಇದೆಲ್ಲ ಅಲ್ಲಿನ ಐತಿಹಾಸಿಕ ವಿಷಯ ಈಗಿನ ಚಿತ್ರಣ ಆದರೆ ಇಲ್ಲಿನ ಮತ್ತೊಂದು ವಿಶೇಷ ವಿಷಯ ಎಂದರೆ ಇಲ್ಲಿಗೆ ಹೋದ ಯಾವುದೇ ಮನುಷ್ಯರಾದರೂ ಸೂರ್ಯಾಸ್ತದ ನಂತರ ಅಲ್ಲಿ ಉಳಿದರೆ ಅವರು ಕಲ್ಲಾಗಿ ಹೋಗುತ್ತಾರೆ ಎನ್ನುವ ಪ್ರತೀತಿ ಇದೆ. ಇದಕ್ಕೆ ಅಲ್ಲಿನ ಜನರು ಹಲವಾರು ಕಥೆಗಳನ್ನು ಹೇಳುತ್ತಾರೆ ಅದರಲ್ಲಿ ಮುಖ್ಯವಾದ ಕಥೆ ಹೀಗೆ ಇದೆ.

ಹಿಂದೆ ಋಷಿ ಓರ್ವರು ತಮ್ಮ ಶಿಷ್ಯರೊಂದಿಗೆ ಕಿರಾಡುವಿನ ದೇವಾಲಯಕ್ಕೆ ಬರುತ್ತಾರೆ. ಅಲ್ಲಿ ಸ್ವಲ್ಪ ದಿನಗಳು ತಂಗಿದ ನಂತರ ಶಿಷ್ಯರನ್ನು ಅಲ್ಲಿಯೇ ಬಿಟ್ಟು ತಾವು ಮಾತ್ರ ದೇಶ ಪರ್ಯಟನೆ ಹೊರಡುತ್ತಾರೆ. ಈ ವೇಳೆಯಲ್ಲಿ ಶಿಷ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.ಆದರೆ ಅಲ್ಲಿನ ಹತ್ತಿರದ ಜನರು ಯಾರೂ ಶಿಷ್ಯರ ಸಹಾಯಕ್ಕೆ ಬರುವುದಿಲ್ಲ. ಅ ಸಮಯದಲ್ಲಿ ವಾಪಸ್ ಬಂದ ಋಷಿಗಳು ಶಿಷ್ಯರ ಸ್ಥಿತಿಯನ್ನು ನೋಡಿ ಸಿಟ್ಟಿಗೆದ್ದು, ನಿಮ್ಮ ಮನಸ್ಸು ಎಷ್ಟು ಕಲ್ಲಾಗಿದೆ, ನನ್ನ ಶಿಷ್ಯರನ್ನು ಇಂತಹ ಸ್ಥಿತಿಯಲ್ಲಿ ನೋಡಿಯೂ ಯಾವುದೇ ಸಹಾಯ ಮಾಡದ ಕಲ್ಲು ಮನಸ್ಸಿನ ನೀವುಗಳು ಸಂಜೆಯ ನಂತರ ಇಲ್ಲಿ ಬಂದರೆ ಕಲ್ಲುಗಳಾಗಿ ಎಂದು ಶಾಪ ಕೊಡುತ್ತಾರೆ. ಇದನ್ನು ಪರೀಕ್ಷಿಸಲು ಹೋದ ಮುದುಕಿ ಒಬ್ಬಳು ದೇವಾಲಯದ ಸಮೀಪದ ಹಳ್ಳಿಯಲ್ಲಿ ಕಲ್ಲಾಗಿದ್ದು ಆ ಕಲ್ಲನ್ನು ಇಂದಿಗೂ ಅಲ್ಲಿನ ಜನರು ತೋರಿಸುತ್ತಾರೆ ಎನ್ನುತ್ತಾರೆ.

ಏನೇ ಆದರೂ ನಮ್ಮ ದೇಶದ ಶಿಲ್ಪಕಲೆ ಮಾತ್ರ ನಮಗೆಲ್ಲ ಹೆಮ್ಮೆ ಪಡುವಂಥ ವಿಷಯ. ಅವುಗಳನ್ನು ಕೆಲವು ಮನುಜರು ಹಾಳುಗೆಡವಿ ಪೈಶಾಚಿಕ ತೃಪ್ತಿ ಅನುಭವಿಸಿರುವುದು ನಿಜಕ್ಕೂ ಶೋಚನೀಯ. ಅಳಿಯದೆ ಉಳಿದಿರುವಷ್ಟಾನ್ನಾದರೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿದರೆ ಮುಂದಿನ ನಾಲ್ಕಾರು ತಲೆಮಾರುಗಳ ಮನುಜರು ನೋಡಿ ಸಂತಸ ಪಡಬಹುದು. ಇಲ್ಲವಾದರೆ ಹಿಗಿತ್ತಂತೆ ಹಾಗಿತ್ತಂತೆ ಎಂದು ಪುಸ್ತಕಗಳಲ್ಲಿ ಓದಿ,  ಯು ಟ್ಯೂಬ್ ನಲ್ಲಿ ನೋಡಿ ತೃಪ್ತಿ ಪಡಬೇಕಾಗುತ್ತದೆ.


  • ವಸಂತ ಗಣೇಶ್ (ಸಾಹಿತಿಗಳು, ಲೇಖಕರು)

 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW