‘ಕೊಬ್ಬರಿ ಚಿನ್ನಿ’ – ಮಂಜಯ್ಯ ದೇವರಮನಿ



ಲೇಖಕರು ಮಂಜಯ್ಯ ದೇವರಮನಿ ಅವರು ಬಾಲ್ಯದಲ್ಲಿ ನೀರಿಳಿಸುತ್ತಿದ್ದ ಕೊಬ್ಬರಿ ಚಿನ್ನಿಯ ಸುತ್ತಲಿನ ಹಳೆಯ ನೆನಪುಗಳ ಹಂದರವನ್ನು ಬರಹದಲ್ಲಿ ಕಟ್ಟಿ ಓದುಗರ ಮುಂದೆ ಇಟ್ಟಿದ್ದಾರೆ. ನಿಮಗೂ ಕೊಬ್ಬರಿ ಚಿನ್ನಿಜೊತೆಗಿನ ನೆನಪುಗಳಿವೆಯೇ? ಹಾಗಿದ್ದರೆ ಹಂಚಿಕೊಳ್ಳಿ…

ಕೊಬ್ಬರಿ ಚಿನ್ನಿ ನಮ್ಮ ಭಾಗದ ಜನಪ್ರಿಯ ಸಿಹಿತಿನಿಸು. ಬೇಕರಿ ಅಥವಾ ಸ್ವೀಟ್ ಹಾಲ್ ಮುಂದೆ ನಿಂತಾಗ ನನ್ನ ಮನಸ್ಸು ನಮ್ಮೂರಿನ ಕೊಬ್ಬರಿ ಚಿನ್ನಿಯ ಮೇಲೆ ನೋಣದಂತೆ ಹಾರಿಹೋಗಿ ಕೂರುತ್ತದೆ. ಪಟ್ಟನೆ ಬಾಯಲ್ಲಿ ನೀರೂರುತ್ತದೆ.

ಕೊಬ್ಬರಿ, ಕಡ್ಲೆಹಿಟ್ಟು, ಬೆಲ್ಲ, ಸಕ್ಕರೆ ಹಾಕಿ ಕೊಬ್ಬರಿ ಚಿನ್ನಿ ಮಾಡುತ್ತಾರೆ. ಸಣ್ಣ ಮಕ್ಕಳಿಂದ ಮುದುಕರಾದಿಯಾಗಿ ಎಲ್ಲರೂ ಇಷ್ಟಪಡುವರು. ಕೊಬ್ಬರಿ ಚಿನ್ನಿಯನ್ನು ಮಾರುವುದನ್ನೆ ಒಂದು ವ್ಯಾಪಾರವನ್ನಾಗಿ ಮಾಡಿಕೊಂಡವರು ಬಹಳ ಜನರಿದ್ದಾರೆ ಅವರಲ್ಲಿ ತುಮ್ಮಿನಕಟ್ಟಿ ಮರ್ದಂಸಾಬ್, ಕುಡುಪಲಿಯ ಕರೀಂಸಾಬ್, ಕುಪ್ಪೆಲೂರಿನ ಭುವಣ್ಣ ಪ್ರಮುಖರು. ಇವರು ಮಾಡುವ ಕೊಬ್ಬರಿ ಚಿನ್ನಿಯನ್ನು ತಿನ್ನದ ಬಾಯಿಗಳಿಲ್ಲ. ಹೊಸದಾಗಿ ಲಗ್ನವಾಗಿ ಬಂದ ಹೆಣ್ಣು ಮಕ್ಕಳು ಕೂಡಾ ಅವರಿವರ ಬಾಯಿಯಲ್ಲಿ ನೀರಾಡುತ್ತಿದ್ದ ಕೊಬ್ಬರಿ ಚಿನ್ನಿಯ ಮಾತು ಕೇಳಿ ಆಸೆಯಿಂದ ಮನೆಯಲ್ಲಿದ್ದ ಜೋಳವನ್ನೋ, ಹಂಡಿಗೆಯಲ್ಲಿನ ಹತ್ತಿಯನ್ನೋ ಕದ್ದು ಮುಚ್ಚಿ ಹಾಕಿ ಕೊಬ್ಬರಿ ಚಿನ್ನಿ ಕೊಂಡುಕೊಂಡು ತಿನ್ನುತ್ತಿದ್ದರು. ಅಷ್ಟರ ಮಟ್ಟಿಗೆ ನಮ್ಮ ಭಾಗದಲ್ಲಿ ಕೊಬ್ಬರಿ ಚಿನ್ನಿ ಘಮಾಡುತಿತ್ತು.

ರಾತ್ರಿ ಕೊಬ್ಬರಿ ಚಿನ್ನಿ ಹೊಯ್ದು, ಹಾರಿದೋಗೆದು, ಬೆಳಿಗ್ಗೆ ಪಳಕಿ ಎಬ್ಬಿ ತೆಗೆದು ಕೋಟೆಯಂತೆ ಪೇರಿಸಿ ದಾರದಿಂದ ಕಟ್ಟಿ ತಮ್ಮ ಹಳೆಯದಾದ ಟಿ. ವಿ. ಎಸ್ ಎಕ್ಸೆಲ್ ಬೈಕ್ ಅಲ್ಲಿ ಊರುರಿಗೆ ಮಾರಲು ಹೋಗುತ್ತಿದ್ದರು. ಚಿನ್ನಿ ಮಾರಲು ಬಂದರೆಂದರೆ ಯಾರ ಬಾಯಲ್ಲಾದರೂ ನೀರೂರುತಿತ್ತು.

ಫೋಟೋ ಕೃಪೆ : google

ಹಠಮಾಡಿ ಆಳುವ ಮಕ್ಕಳಿಗೆ ತಾಯಂದಿರು “ಲಾಲಿ ಲಾಲಿ… ದೂರಿ ದೂರಿ… ದೂರೆಮ್ಮ ದೂರಿ ದೂರಿ… ಲಾಲೆಮ್ಮ ಲಾಲಿ ಲಾಲಿ.. ಯಾಕಪ್ಪ ಅಳುತಿಯಾ ಬೇಕಾದ್ದ ನಾ ಕೊಡುವೆ… ನಾಕೇಮ್ಮಿ ಕರೆದ ನೋರೆಹಾಲು… ನಾಕೇಮ್ಮಿ ಕರೆದ ನೋರೆ ಹಾಲು ಸಕ್ಕರೆ… ನೀ ಕೇಳಿದಾಗ ನಾ ಕೊಡುವೆ…. ಭುವಣ್ಣ ಕೊಟ್ಟ ಚಿನ್ನಿ ಕೊಬ್ಬರಿಯ… ಭುವಣ್ಣ ಕೊಟ್ಟ ಚಿನ್ನಿ ಕೊಬ್ಬರಿಯ ನಿನ್ನ ಚಿನ್ನದಂತ ಬಾಯಿಗೆ ನಾ ಹಾಕುವೆ… ಲಾಲೆಮ್ಮ ಲಾಲಿ ಲಾಲಿ… ದೂರೆಮ್ಮ ದೂರಿ ದೂರಿ” ಎಂದು ತೊಟ್ಟಿಲು ತೂಗಿ ಹಾಡುತ್ತಿದ್ದರೆ ಅಳುವ ಕೂಸು ಕಿಲ ಕಿಲ ಅಂತಾ ಹೂನಗು ಬೀರುತ್ತಿತ್ತು.

ಪ್ರತಿದಿನ ಕೆಂಪಿಂಡಿ ರೊಟ್ಟಿ, ರಾಗಿಮುದ್ದೆ ತಿಂದ ಹಲ್ಲಿಲ್ಲದ ಮುದುಕರ ಬಾಯಿಗಳು ಕೂಡಾ ಸೋಮವಾರಕ್ಕೊಮ್ಮೆ ಬರುವ ತುಮ್ಮಿನಕಟ್ಟಿ ಮರ್ದಂಸಾಬನ ಕುಟು ಕುಟು ಟಿ. ವಿ. ಎಸ್ ಬೈಕ್ ಬರುವ ದಾರಿಯನ್ನು ಕಾಯುತ್ತಿದ್ದವು. ಮೆತ್ತೆನೇಯ ಕೊಬ್ಬರಿ ಚಿನ್ನಿ ವಸಡಲ್ಲಿ ಮೆಲ್ಲಡುತ್ತಾ ದಿನ ನೂಕುತ್ತಿದ್ದವು. ಅಷ್ಟಾದರೂ ಸುಖವಿತ್ತು ಅವರಿಗೆ ಆ ಬೆಂಗಾಡ ಸೀಮೆಯಲ್ಲಿ.



ಏರೆ ಜಮೀನುಗಳಲ್ಲಿ ಬಿತ್ತಿದ ಹತ್ತಿಯನ್ನು ಬಿಡಿಸುವ ಸುಗ್ಗಿಯ ಕಾಲದಲ್ಲಿ ಕೊಬ್ಬರಿ ಚಿನ್ನಿ ವ್ಯಾಪಾರ ಬಲು ಜೋರು. ಹಿಂಗಾರಿಗೆ ಬಿತ್ತಿದ ಹತ್ತಿಕಾಯಿ ಹೊಡೆದು ಹೊಲವೆಂಬ ಹೊಲವೆಲ್ಲ ಮೊಸರು ಚೆಲ್ಲಿದಂತೆ ಕಾಣುತ್ತಿರಲು ರೈತರು ಹುರುಪುಗೊಳ್ಳುತ್ತಿದ್ದರು. ಆಕಾಶದಲ್ಲಿಯ ಮೋಡಗಳೇ ಕಳಚಿ ಭೂಮಿಗೆ ಬಿದ್ದಿವೆ ಎಂಬಂತೆ ಹತ್ತಿ ಉಣ್ಣೆಗಳು ಹೊಲದ ತುಂಬೆಲ್ಲ ಹೊಡೆದು ಬೆಳ್ಳಿ ತೊಟ್ಟಿಲು ತೂಗುತ್ತಿದ್ದವು.

ಈ ಸಂದರ್ಭದಲ್ಲಿ ಹತ್ತಿ ಬಿಡಿಸಲು ಅಧಿಕ ಸಂಖ್ಯೆಯಲ್ಲಿ ಕೂಲಿ ಅಳುಗಳು ಬೇಕಾಗುತ್ತದೆ. ಆಳುಗಳ ಅಭಾವ ಹೆಚ್ಚಾದಾಗ ಮಾಲಕರು ಪಜೀತಿಗೆ ಬೀಳುತ್ತಿದ್ದರು. ಒಂದೆರಡು ದಿನದಲ್ಲಿ ಹತ್ತಿ ಬಿಡಿಸದಿದ್ದರೆ. ಹತ್ತಿಯೆಲ್ಲಾ ಮಣ್ಣುಪಾಲಾಗುತಿತ್ತು. ಆದ್ದರಿಂದ ಮಾಲಕರು ಆಳುಗಳಿಗೆ ಕೊಬ್ಬರಿ ಚಿನ್ನಿ ಆಸೆ ತೋರಿಸಿ ತಮ್ಮ ಹೊಲಗಳಿಗೆ ಕೂಲಿ ಮಾಡಲು ಬರುವಂತೆ ಪುಸಲಾಯಿಸುತ್ತಿದ್ದರು. ಆಗಲ್ಲ ಕೊಬ್ಬರಿ ಚಿನ್ನಿ ಮಾರುವವರು ಊರು ಬಿಟ್ಟು ಹೊಲ ವಾರೆಗಳಗೆ ಲಗ್ಗೆ ಹಾಕುತಿದ್ದರು. ಮೈತುಂಬಾ ಕೆಲಸವಿದ್ದ ದಿನಗಳಲ್ಲಿ ಊರು ಬಿಕೋ ಎನ್ನುತಿತ್ತು. ವಯಸ್ಸಾದ ಮುದುಕರು ಮುಂಡರು ಪಡೀಜಂತಿ ಮುಂಡುಗಿಯಿಡಿದು ಕುಳಿತಿರುತ್ತಿದ್ದರು. ಹೊಲಗಳು ಕೂಲಿಯಾಳುಗಳಿಂದ ತುಂಬಿ ನಗುತ್ತಿದ್ದವು. ಆದ್ದರಿಂದ ಕೊಬ್ಬರಿ ಚಿನ್ನಿ ಮಾರುವವರು ಮಧ್ಯಾಹ್ನದ ಊಟದ ಹೊತ್ತಿಗೆ ಹತ್ತಿ ಹೊಲಗಳಲ್ಲಿ ಹಾಜರಾಗುತ್ತಿದ್ದರು. ಒಂದು ಕೆಜಿ ಕೊಬ್ಬರಿ ಚಿನ್ನಿಗೆ ಇಂತಿಷ್ಟು ಕೆಜಿ ಹತ್ತಿ ಎಂಬ ವಸ್ತು ವಿನಿಮಯ ಪದ್ಧತಿಯಿತ್ತು. ‘ಕಾಯಿ ಹಳ್ಳಿ ಹೊಡಿಲಿ… ಕೈಯಲ್ಲಿ ಹತ್ತಿ ಹಿಡಿಲಿ; ಬಾಯಿ ಕೊಬ್ಬರಿ ಚಿನ್ನಿ ಕಡಿಲಿ’ ಎನ್ನುವ ಮಾತು ಸಾಮಾನ್ಯವಾಗಿತ್ತು.

ಫೋಟೋ ಕೃಪೆ : google

ಅಪ್ಪನ ಅಂಗಡಿಯಲ್ಲಿ ಅಮ್ಮ ಮಾಡಿದ ಕೊಬ್ಬರಿ ಚಿನ್ನಿಗೆ ಮೊದಲ ಪ್ರಾಶಸ್ತ್ಯ. ಟೇಬಲ್ಲಿನ ಮೇಲೆ ಭದ್ರವಾಗಿ ಕಟ್ಟಿದ ಕೋಟೆಯಂತೆ ವಿರಾಜಮಾನವಾಗಿರುತ್ತಿತ್ತು. ನಿಂಬೆಹುಳಿ ಪೇಪರ್ಮೆಂಟ್, ಶುಂಠಿ ಪೇಪರ್ಮೆಂಟ್, ರಸಗುಲ್ಲ, ಮೈಸೂರು ಪಾಕಗಳಿಗೆ ಸಡ್ಡು ಹೊಡೆದು ತನ್ನ ರುಚಿಯನ್ನು ಸಾರುತ್ತಿತ್ತು. ಅಪ್ಪ ಮಾಡುತ್ತಿದ್ದ ಗುರು ಗುರು ಮಂಡಕ್ಕಿ ಜೊತೆಗೆ ಅಮ್ಮನ ಪಳಕಿ ಪಳಕಿ ಕೊಬ್ಬರಿ ಚಿನ್ನಿ ಇಲ್ಲದಿದ್ದರೆ ಹೇಗೆ? ಗಿರಾಕಿಗಳು ಗುರು ಗುರು ವಗ್ಗಣ್ಣಿ ಮಂಡಕ್ಕಿ ಜೊತೆ ಮುಣು ಮುಣು ಕೊಬ್ಬರಿ ಚಿನ್ನಿ ನೆಂಚಿಕೊಂಡು ತಿನ್ನುತ್ತಿದ್ದರೆ “ಹತ್ತಿ ಹಂಡಿಗೆ ಖಾಲಿಯಾಗಲಿ, ಹೊಲ ಹೋಗಿ ಬದು ಉಳಿಯಲಿ, ಲೆಕ್ಕದ ಬುಕ್ಕು ತುಂಬಿ ತುಳುಕಲಿ” ಚಿಂತೆಯಿಲ್ಲ ಎನ್ನುತ್ತಿದ್ದರು.

ಮಾಳಗಿಮನಿ ಕರಿಬಸಯ್ಯ, ಪುಳುಕಿ ಬಸಣ್ಣ, ಪೆಲ್ಲಪ್ಪರ ಭರಮಗೌಡ ಕೊಬ್ಬರಿ ಚಿನ್ನಿಗೆ ಇನ್ನಿಲ್ಲದಂತೆ ಆಸೆವು ಮಾಡುತ್ತಿದ್ದರು. ತಾಯಿ ಗಿರಿಜವ್ವ “ಈ ವಾರ ಯಾಕೋ ಮರ್ದಂಸಾಬ್ ಬರಲಿಲ್ಲ. ಅವ್ನ ಹೆಣ ಎತ್ತ… ಹಾಳಾಗಿ ಹತ್ತಿಬಿತ್ತ…. ಅವ್ನ ನಂಬಿದ್ರೆ ಹಾಗೋಲ್ಲ… ನೀನೇ ಬೇಷ್ಯಾಗಿ ಕೊಬ್ರಿ ಅಡುವುಗಾಕಿ ಮೆತ್ತಗ ಮಾಡಿಬಿಡವ್ವ” ಎಂದು ಅಮ್ಮನನ್ನು ಕೇಳುತಿದ್ದರು.

ಅಪ್ಪ “ರಾತ್ರಿ ಸಕ್ಕರಿ ಪಾನಕ ಹೊಯ್ಯಿ ಕೊಬ್ರಿ ಚಿನ್ನಿ ಮಾಡಿದ್ರಾತು” ಎಂದು ಕಡ್ಲೆಹಿಟ್ಟು, ಒಣ ಕೊಬ್ರಿ ಜೋಡಿಸಿಕೊಳ್ಳುತಿದ್ದ. ಅಪ್ಪ-ಅಮ್ಮ ಸೇರಿದರೆ ಯಾರಿಗೂ ಕಡಿಮೆ ಇಲ್ಲದಂತೆ ರುಚಿಯಾಗಿ ಕೊಬ್ಬರಿ ಚಿನ್ನಿ ಮಾಡುತ್ತಿದ್ದರು. ಅಪ್ಪ ಸಕ್ಕರೆ ಪಾನಕದ ಹದ ಹಿಡಿಯುತ್ತಿದ್ದ, ಅಮ್ಮ ಕೊಣಭಿಯಲ್ಲಿ ಹೊಯ್ಯಿತಿದ್ದಳು. ಊರಿಗೆ ಊರೇ… ಕೊಬ್ಬರಿ ಚಿನ್ನಿಯ ಪಾಕದಲ್ಲಿ ಮುಳುಗಿರುತ್ತಿತ್ತು.


  • ಮಂಜಯ್ಯ ದೇವರಮನಿ, (ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು) ಸಂಗಾಪುರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW