ಕೊಡಗಿನಲ್ಲಿ ಬೇರೆ ಬೇರೆ ಊರುಗಳಲ್ಲಿ ನಡೆಯುವ ಕೋಲಗಳ ವಿಶೇಷತೆಯ ಕುರಿತು ಕೊಡಗಿನ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….
ಇಲ್ಲಿ ಕೊಡಗಿನಲ್ಲಿ ಬೇರೆ ಬೇರೆ ಊರುಗಳಲ್ಲಿ ನಡೆಯುವ ಕೋಲಗಳು ವಿಶೇಷ. ಮದುವೆ, ಹರಿ ಸೇವೆ, ಹಬ್ಬಗಳು, ಉತ್ಸವಗಳು ಬೇಸಗೆಯ ರಜೆಯ ಬಿಡುವಿನ ದಿನಗಳಲ್ಲಿ ಜನರನ್ನು, ಬಂಧು ಬಾಂಧವರನ್ನು ಪರಸ್ಪರ ಪರಿಚಯಿಸುವ ಹಾಗೂ ಒಂದುಗೂಡಿಸುವ ಅವಕಾಶವನ್ನು ಒದಗಿಸುತ್ತವೆ. ಹಾಗೆಯೇ ನಾವು ನಿನ್ನೆ ದಿನ ನಮ್ಮ ಅತ್ತೆಯ ತವರು ಮನೆಯಲ್ಲಿ ಒಟ್ಟುಗೂಡಲು ಒಂದು ಒಳ್ಳೆಯ ಅವಕಾಶವನ್ನು ಒದಗಿಸಿತ್ತು.
ಅಲ್ಲಿ ಮೂರು ನಾಲ್ಕು ದೈವಗಳ ‘ಕೋಲ’ಗಳನ್ನು ಏರ್ಪಡಿಸಲಾಗಿತ್ತು. ಸುಲಭವಾಗಿ ತಲುಪಲಾಗದ ಆ ಪ್ರದೇಶಕ್ಕೆ ಅನುಕೂಲಕರ ದಾರಿಯಿಲ್ಲದೆ ನೆಗೆಸಿ ಬೀಳಿಸುವ ಆ ಬೆಟ್ಟದ ಬುಡದ ಏರುದಾರಿಯಲ್ಲಿ ಸಾಗಬೇಕಾಗಿತ್ತು. ವಾಹನ ಸಮಸ್ಯೆಯಿಂದಾಗಿ ನಾವು ತಲುಪುವುದು ತಡವಾಗಿ ಅಲ್ಲಿ ಊಟದ ಹೊತ್ತಿಗೆ ಒಂದು ವಿರಾಮಾವಧಿ ಏರ್ಪಟ್ಟಿತ್ತು. ದೈವ ದರ್ಶನವಾಗಿ ದೇವರ ಆಶೀರ್ವಾದ ಪಡೆದು ನಾವು ಬಂಧುಗಳನ್ನು ಮಾತನಾಡಿಸುತ್ತಾ ಮುಂದುವರೆಯುತ್ತಿದ್ದೆವು.
ಆ ಹಳೆಯ ಕಾಲದ ಪೊನ್ನೆಟ್ಟಿ ಐನ್ ಮನೆಯ ಪ್ರಾಂಗಣದಲ್ಲಿ ನಿಂತು ಸುತ್ತಲಿನ ಮನೋಹರ ದೃಶ್ಯವನ್ನು ಕಣ್ಣ್ ತುಂಬಿಕೊಳ್ಳುತ್ತಾ, ಸೆರೆ ಹಿಡಿಯುತ್ತಾ ಮೈಮರೆತಿರುವಾಗ
ಒಳಗಿನಿಂದ ಅವರ ಚಿಕ್ಕಮ್ಮನೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾಗಿದ್ದ ನನ್ನ ಪತಿ,ನನ್ನನ್ನು ಕರೆದು,ಬೇಗ ಬಾ ನಿನಗೊಂದು ವಿಶೇಷವನ್ನು ತೋರಿಸುತ್ತೇನೆ, ಎಂದು ಮತ್ತೆ ಮತ್ತೆ ಕರೆಯತೊಡಗಿದರು. ಏನೆಂದು ಕುತೂಹಲದಿಂದ ಒಳಹೋದಾಗ, ‘ಇದು ನಾನು ಹಾಗೂ ನನ್ನ ತಮ್ಮಂದಿರು ಹುಟ್ಟಿದ ಕೋಣೆ’ ಎಂದು ಭಾವುಕರಾದರು.ಅವರ ಖುಷಿಯನ್ನು ಕಂಡು,’ಅಲ್ಲೇ ನಿಲ್ಲಿ ಕೆಮರಾದಲ್ಲಿ ಸೆರೆ ಹಿಡಿಯುತ್ತೇನೆ ‘ ಎಂದೆ. ಎಷ್ಟು ಖುಷಿ!ಮುಖದಲ್ಲಿ ಸಹಸ್ರ ಕಿರಣ ಗಳೂ ಹೊಮ್ಮುತ್ತಿದ್ದುವು.
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
