ಸುಮಾರು ಮುವ್ವತ್ತು – ನಲವತ್ತು ವರ್ಷ ಹಿಂದಿನ ನೆನಪು. ಹಾವೇರಿಯಲ್ಲೊಬ್ಬ ಸುಶಿಕ್ಷಿತ ಹುಚ್ಚನಿದ್ದ. ಹುಚ್ಚರು, ಅರೆ ಹುಚ್ಚರು, ಕುಡುಕರು (ಕುಡಿದಾಗ) ಪ್ರಾಮಾಣಿಕರಾಗಿರುತ್ತಾರೆ. ತಪ್ಪದೆ ಮುಂದೆ ಓದಿ, ಕೋರಗಲ್ ವಿರೂಪಾಕ್ಷಪ್ಪ ನಿವೃತ್ತ ಗಣಿತ ಪ್ರಾಧ್ಯಾಪಕರು, ಅವರು ಗ್ರಾಮೀಣ ಭಾಷೆಯಲ್ಲಿ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣ…
ಹುಚ್ಚರು, ಅರೆ ಹುಚ್ಚರು, ಕುಡುಕರು (ಕುಡಿದಾಗ) ಪ್ರಾಮಾಣಿಕರಾಗಿರುತ್ತಾರೆ. ಅಂದರೆ ಅವರ ಅಂತರಂಗಲ್ಲಿ ಕಪಟವೆನ್ನುವುದು ಇರುವುದಿಲ್ಲ. ಇನ್ನೊಬ್ಬರಿಗೆ ಮೋಸ ಮಾಡುವ ಲಪಟಾಯಿಸುವ ಗುಣದಿಂದ ದೂರವಿರುತ್ತಾರೆ. ಪ್ರಾಮಾಣಿಕ ಹುಚ್ಚನೆಂದರೆ ಏನು ಅರ್ಥ ಎಂದು ಅನ್ನಬುಹುದು. ಆದರೆ ನನ್ನ ಸಂಪರ್ಕಕ್ಕೆ ಬಂದ ಒಬ್ಬ ಹುಚ್ಚ ಚಿಂತಕ ಮತ್ತು ಪ್ರಾಮಾಣಿಕನೂ ಆಗಿದ್ದನೆಂದರೆ ಯಾರಿಗೆಯೇ ಆಗಲಿ ಆಶ್ಚರ್ಯವಾಗಬಹುದು. ಕೆಟ್ಟ ನೆನಪು, ಒಳ್ಳೆಯ ನೆನಪು ಆಗ ತಪ್ಪು ಮಾಡಿ ಈಗ ಹಳ ಹಳಿಸುವಂತಹ ನೆನಪು ನಮ್ಮ ನೆನಪಿನಂಗಳದ ರಂಗವಲ್ಲಿಯ ಕೆಳಗಿನಿಂದ ಎದ್ದು ಬಂದು ಈಗ ಕಚಗುಳಿಯಾಗಿ ಕಾಡುತ್ತವೆ. ಇದು ಸುಮಾರು ಮುವ್ವತ್ತು – ನಲವತ್ತು ವರ್ಷ ಹಿಂದಿನ ನೆನಪು.
ಹಾವೇರಿಯಲ್ಲೊಬ್ಬ ಸುಶಿಕ್ಷಿತ ಹುಚ್ಚನಿದ್ದ. ಅವನ ಹೆಸರೇನೆಂದು ಗೊತ್ತಿಲ್ಲ. ಅವನೊಬ್ಬ ಬ್ರಾಹ್ಮಣನಾಗಿದ್ದುದರಿಂದ ‘ಹುಚ್ಚ ಭಟ್ಟ’ ಎಂದು ಎಲ್ಲರೂ ಕರೆಯುತ್ತಿದ್ದರು. ಅವನು ಹೆಸರು ತಿಳಿದುಕೊಳ್ಳಲಿಕ್ಕೆ ಪ್ರಯತ್ನಿಸಿ ನಾನು ಸೋತಿದ್ದೇನೆ. “ನಿನ್ನ ಹೆಸರೇನೋ ಭಟ್ಟ” ಎಂದು ಕೇಳಿದರೆ,”ಯಾಕ ನನ್ನ ಮದುವಿ ಮಾಡಬೇಕಂತ ಮಾಡಿರೇನು?” ಎಂದು ಮರು ಪ್ರಶ್ನೆ ಹಾಕಿ ನಮ್ಮ ಬಾಯಿ ಮುಚ್ಚಿಸುತ್ತಿದ್ದ. ಅವನು ಯಾವಾಗಲೂ ಬರಿ ಮೈಯಲ್ಲಿರುತ್ತಿದ್ದ. ಒಂದು ಅರ್ಧ ಚೊಣ್ಣ, ಹೆಗಲ ಮೇಲೊಂದು ಗೋಣಿ ತಟ್ಟು. ಇಷ್ಟು ಮಾತ್ರ ಅವನ ಉಡುಪು. ಅವನು ಭಿಕ್ಷೆ ಬೇಡುತ್ತಿರಲಿಲ್ಲ. ಯಾರಾದರೂ ಹಣ ಕೊಡಲಿಕ್ಕೆ ಬಂದರೆ “ಯಾಕ ನಾನೇನು ಹನುಮಂತ ದೇವರ ಪೂಜಾರಿ ಅಂತಾ ಮಾಡಿರೇನು?” ಎಂದು ಹೇಳಿ ನಿರಾಕರಿಸುತ್ತಿದ್ದ. ಗಾಂಧಿ ರಸ್ತೆಯಲ್ಲಿ ಈ ತುದಿಯಿಂದ ಆ ತುದಿಯ ವರೆಗೆ ಅಡ್ಡಾಡುತ್ತಿದ್ದ.
ಅದು ಎಮರ್ಜನ್ಸಿಯ ಸಮಯ. ಅಂಗಡಿಗಳ ಮುಂದೆ ನಿಂತು,“ಈಗ ಎಮರ್ಜನ್ಸಿ ಐತೆ. ಒಬ್ಬೊಬ್ಬರಿಗೆ ನಾಕು ನಾಕು ಗೂಟಾ ಬಡ್ದರೂ ಯಾರೂ ಬಿಡಿಸಿಕೊಳ್ಳಾಕ ಬರೋದಿಲ್ಲ.ಹುಶಾರಿಲೆ ಬಾಳ್ವಿ ಮಾಡ್ರಿ” ಎಂದು ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಡುತ್ತಿದ್ದ. ಯಾರೊಬ್ಬರಿಗೂ ಹಾನಿ ಮಾಡುತ್ತಿದ್ದಿಲ್ಲ. ಅವನು ಹಮಾಲಿ ಮಾಡಿ ಜೀವನ ಸಾಗಿಸುತ್ತಿದ್ದ. ಕೆಲಸವಿಲ್ಲದಿದ್ದಾಗ ರಸ್ತೆಯಲ್ಲಿರುವ ಅಂಗಡಿಕಾರರನ್ನು, ಕೆ.ಇ.ಬಿ ಯವರನ್ನು, ಸರಕಾರಿ ಅಧಿಕಾರಿಗಳನ್ನು ಬಯ್ಯುತ್ತಾ ಅಡ್ಡಾಡುತ್ತಿದ್ದ. ಯಾವ ಹೆಣ್ಣು ಮಕ್ಕಳನ್ನೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅಂಗಡಿಗೆ ಹೋಗಿ ನಾಲ್ಕಾಣೆ ಕೊಟ್ಟು ಅಕ್ಕಿ ಕೊಳ್ಳುತ್ತಿದ್ದ. ಅಲ್ಲಿಯೇ ಸ್ವಲ್ಪ ಉಪ್ಪು ಬೇಡಿ ಇಸಗೊಳ್ಳುತ್ತಿದ್ದ. ಈಗ ಸುವರ್ಣ ಬ್ಯಾಂಕ ಇರುವಲ್ಲಿ ಆಗ ಕೃಷಿ ಇಲಾಖೆಯ ಕಛೇರಿಯಿತ್ತು. ಆ ಕಛೇರಿಯ ಗೋಡೆಗೆ ಒಲೆ ಹೂಡಿ ಅನ್ನಾ ಬೇಯಿಸಿಕೊಳ್ಳುತ್ತಿದ್ದ. ಕೃಷಿ ಇಲಾಖೆಯ ಅಧಿಕಾರಿಗಳು ಅವನಿಗೆ ಸಹಕಾರ ಕೊಡುತ್ತಿದ್ದರು. ರಾತ್ರಿ ಎಲ್ಲಿಯೋ ಮಲಗುತ್ತಿದ್ದ. ವಿನಾಯಕ ಹೋಟಲಿನಲ್ಲಿ ಒಂದಾಣೆ ಕೊಟ್ಟು ಸಾಂಬಾರು ತಂದು ಅನ್ನವನ್ನು ಉಂಡು ಡಬರಿಯನ್ನು ಅಲ್ಲಿಯೇ ಡಬ್ಬು ಹಾಕಿ ಹೆಗಲಿಗೆ ತಟ್ಟು ಹಾಕಿಕೊಂಡು ಹೋಗಿ ಬಿಡುತ್ತಿದ್ದ. ಇದು ಅವನ ದಿನಚರಿ.
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)
ಒಮ್ಮೆ ನಾನು ಸದಾನಂದ ಮಹಾರಾಜಪೇಟಿಯವರ ಅಂಗಡಿಯಲ್ಲಿ ತಿಂಗಳ ದಿನಸಿ ಖರೀಧಿಗೆ ಹೋಗಿದ್ದೆ. ಆಗ ಈಗಿನಂತೆ ರಿಕ್ಷಾಗಳಿರಲಿಲ್ಲ. ಇಂಥಾ ಸಣ್ಣ ಪುಟ್ಟ ಸಾಮಾನುಗಳನ್ನು ಮನೆಗೆ ಸಾಗಿಸುವ ಹಮಾಲರಿರುತ್ತಿದ್ದರು. ಒಂದು ರೂಪಾಯಿ ಕೊಟ್ಟರೆ ಮನೆಗೆ ತಂದು ಕೊಡುತ್ತಿದ್ದರು. ಸದಾನಂದನ ಅಂಗಡಿಗೆ ಅದೇ ಸಮಯಕ್ಕೆ ಆ ಭಟ್ಟ ಬಂದಿದ್ದ. ಸದಾನಂದ ಅವನಿಗೆ ದಿನಸಿಗಳನ್ನು ಹೊತ್ತುಕೊಂಡು ಹೋಗಿ ನಮ್ಮ ಮನೆಗೆ ಮುಟ್ಟಿಸಿ ಬರಲಿಕ್ಕೆ ಹೇಳಿದ. ಭಟ್ಟನಿಗೋ ಹಸಿವೆಯಾಗಿತ್ತು.ಅವನು ಅವರ ಅಂಗಡಿಯಿಂದ ಅಕ್ಕಿ ತೆಗೆದುಕೊಳ್ಳಲಿಕ್ಕೆ ಬಂದಿದ್ದ.
“ಮೊದ್ಲು ಅಕ್ಕಿ ಕೊಡು ಹೊಟ್ಟಿ ಹಸದೈತೆ. ಹಸ್ದ ಬ್ರಾಹ್ಮಣನ್ನ ತಡವು ಬಾರದು ಅಂತಾರ ಗೊತ್ತೆತಿಲ್ಲ.” ಎಂದ. ಅಕ್ಕಿಯನ್ನು ಕೊಟ್ಟ ಮೇಲೆ ಎಲ್ಲಾ ಅಂಗಡಿಕಾರರು ಕೇಳುವಂತೆ ಸದಾನಂದ “ಮತ್ತೇನು ಬೇಕು “ ಎಂದು ರೂಢಿಗತವಾಗಿ ಕೇಳುವಂತೆ ಕೇಳಿದ. ಭಟ್ಟನ ಬಾಯಿಂದ ತಟ್ಟನೇ ಉತ್ತರ ಬಂತು.
“ಮತ್ತೇನೂ ಬ್ಯಾಡ.ಏನಾರಾ ಬೇಕಾದರ ಮನಿಗೆ ಹೋಗಿ ಪತ್ರಾ ಬರೀತೀನಿ. ಒಂಚೂರು ಉಪ್ಪು ಕೊಡು” ಎಂದು. ಅಂದರೆ ಅವನಿಗೆ ಒಳ್ಳೆಯ ಪ್ರಸಂಗಾವಧಾನವಿತ್ತು. ಯಾವುದೇ ಮಾತಿಗೆ ಪಟ್ಟನೇ ಉತ್ತರ ಕೊಡುತ್ತಿದ್ದ. ಹುಚ್ಚ ಭಟ್ಟ ನನ್ನ ಹಮಾಲಿಯನ್ನೂ
ಬಿಡಲಿಕ್ಕೆ ತಯಾರಿರಲಿಲ್ಲ. ಅಕ್ಕಿ ಹಾಕಿಸಿಕೊಂಡ ಡಬರಿಯನ್ನು ಅಂಗಡಿಯ ಒಂದು ಮೂಲೆಯಲ್ಲಿಟ್ಟು ನನ್ನ ಚೀಲವನ್ನು ತಲೆಯ ಮೇಲಿಟ್ಟುಕೊಂಡ.ಅವನ ಜೊತೆ ಹೋಗಲಿಕ್ಕೆ ನಾನು ಅನುಮಾನ ಪಡುತ್ತಿರುವಂತೆಯೇ “ಏನೂ ಚಿಂತಿ ಮಾಡಬ್ಯಾಡ ರ‍್ರಿ. ನಾನು ಅಷ್ಟು ಹುಚ್ಚಿಲ್ಲ.ಎಂದು ನನ್ನ ಉತ್ತರಕ್ಕೂ ಕಾಯದೆ ಹೊರಟು ಬಿಟ್ಟ.
ಚೀಲವನ್ನು ತಂದು ನಮ್ಮ ಮನೆಗೆ ಮುಟ್ಟಿಸಿದ ಮೇಲೆ ಸಾಮಾನ್ಯ ಹಮಾಲರಿಗೆ ಕೊಡುವಂತೆ ಒಂದು ರೂಪಾಯಿ ಕೊಟ್ಟೆ. ಭಟ್ಟ “ಏ! ತಗಾಳ್ರಿ” ಎಂದು ಒಂದು ರೂಪಾಯಿ ವಾಪಸ್ಸು ಕೊಟ್ಟು “ಯಾಕ ಇಷ್ಟ್ಯಾಕ್ ?”ಎಂದ. ಹೆಚ್ಚು ಅಪೇಕ್ಷಿಸುತ್ತಾನೆಂದು ನಾನು ಭಾವಿಸಿ ನಿಂತಿರುವಂತೆಯೇ “ನಾನೇನು ನಿಮ್ಮ ಸೋದರ ಮಾವನ ಮಗನೇನು ಒಂದು ರೂಪಾಯಿ ಕೊಡಲಿಕ್ಕೆ. ಎಂಟಾಣೆ ಕೊಡ್ರಿ ಎಂಟಾಣೆ” ಎಂದ. ಅವನಿಗೆ ಪ್ರಾಮಾಣಿಕನೆನ್ನದೆ ಮತ್ತೇನೆನ್ನುತ್ತೀರಿ? ಇಂಥ ಮನುಷ್ಯನನ್ನು ಮರೆಯುವದು ಅಸಾಧ್ಯ.
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು ಗುಡಾರ – (ಭಾಗ ೩)
- ಕೊರಗಲ್ಲ ವಿರೂಪಾಕ್ಷಪ್ಪ, ಹಾವೇರಿ