ಸಮುದಾಯದ ಸೈಕಾಲಜಿ -ವಿರೂಪಾಕ್ಷಪ್ಪ ಕೊರಗಲ್ಲ

ವ್ಯಕ್ತಿಗೆ ಹೇಗೆ ಮನಸ್ಸು ಇರುತ್ತದೆಯೋ ಹಾಗೆಯೇ ಸಮುದಾಯಕ್ಕೂ ಒಂದು ಮನಸ್ಸು ಇರುತ್ತದೆ. ನಾಯಕನಿಲ್ಲದ ಒಂದು ಜನ ಸಮುದಾಯಕ್ಕೆ ಗೊತ್ತು ಗುರಿ ಎಂಬುದೊಂದು ಇರುವುದಿಲ್ಲ. ಹಿರಿಯ ಸಾಹಿತಿಗಳಾದ ವಿರೂಪಾಕ್ಷಪ್ಪ ಕೊರಗಲ್ಲ ಅವರ ಸಮುದಾಯದ ಸೈಕಾಲಜಿ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ವ್ಯಕ್ತಿ ಮತ್ತು ಸಮುದಾಯದ ಸೈಕಾಲಜಿಗಳು ಬೇರೆ ಬೇರೆಯಾಗಿರುತ್ತವೆ.ವ್ಯಕ್ತಿಯ ಸೈಕಾಲಜಿಯನ್ನು ಗುರುತಿಸಬಹುದು, ಅದು ರೋಗಗ್ರಸ್ಥವಾದರೆ ತಜ್ಞ ವೈದ್ಯರಾದವರು ಗುಣಪಡಿಸಲೂ ಬಹುದು. ಆದರೆ ಸಮುದಾಯದ ಮನೋವ್ಯಾಧಿಯನ್ನು ಯಾವ ವೈದ್ಯನಿಂದಲೂ ಗುಣಪಡಿಸಲಿಕ್ಕೆ ಸಾಧ್ಯವಿಲ್ಲವೆಂದು ನನ್ನ ಅಭಿಪ್ರಾಯವಾಗಿದೆ. ವ್ಯಕ್ತಿಗೆ ಹೇಗೆ ಮನಸ್ಸು ಇರುತ್ತದೆಯೋ ಹಾಗೆಯೇ ಸಮುದಾಯಕ್ಕೂ ಒಂದು ಮನಸ್ಸು ಇರುತ್ತದೆ.

ಸಾವಿರಾರು ಜನರು ಒಂದು ಕಡೆಗೆ ಜಮಾವಣೆಗೊಂಡರೆ, ಆ ಪರಿಷೆಗೆ ಒಬ್ಬ ನಾಯಕನಿದ್ದರೆ, ಆ ನಾಯಕ ಅಲ್ಲಿ ಸೇರಿದ ಜನ ಸಮುದಾಯವನ್ನು ನಿಗ್ರಹಿಸಬಲ್ಲ ನಾಯಕನಾಗಿದ್ದರೆ, ಆ ನಾಯಕನ ಮನೋಭಿಲಾಷೆಯೇ ಆ ಸಮುದಾಯದ ಮನೋಭಿಲಾಷೆಯಾಗಿರುತ್ತದೆ. ಆ ಜನರ ನಾಯಕ ಅವರ ಆಳರಸನಾಗಿರುತ್ತಾನೆ. ರಾಜ ಹೇಳಿದಂತೆ ಪ್ರಜೆಗಳು ಕೇಳುತ್ತಾರೆ. ನಾಯಕನಿಲ್ಲದ ಒಂದು ಜನ ಸಮುದಾಯಕ್ಕೆ ಗೊತ್ತು ಗುರಿ ಎಂಬುದೊಂದು ಇರುವುದಿಲ್ಲ ಪ್ರಚೋದನೆ ಇಲ್ಲದಿದ್ದರೆ, ಅದು ಅಡ್ಡ ದಾರಿ ಹಿಡಿಯದಿರಬಹುದು. ಪ್ರಚೋದನೆ ಇಲ್ಲದೆಯೂ ಅದು ಅನಾಚಾರಕ್ಕೆ ಇಳಿಯಬಹುದು. ಈಗ ನಾವು ನೋಡುತ್ತಿರುವ ಹರತಾಳಗಳು, ಬಂದಗಳು ಅಡ್ಡ ದಾರಿ ಹಿಡಿದು ಸಾಕಷ್ಟು ಸಾರ್ವಜನಿಕ ಅಸ್ತಿ-ಪಾಸ್ತಿಯನ್ನು ಹಾಳು ಮಾಡುತ್ತಿದ್ದರೂ ಈ ಹರತಾಳಗಳಿಗೆ ಕರೆ ಕೊಡುವವರು ಈ ಬಗ್ಗೆ ಚಿಂತಿಸುವುದೇ ಇಲ್ಲ.

ಐವತ್ತು ವರ್ಷಗಳ ಹಿಂದಿನ ಒಂದು ದ್ರಶ್ಯ ತಮ್ಮ ಮುಂದಿಡುತ್ತೇನೆ. ಆಗ ನಾವು ಕೊನೆಯ ವರ್ಷದ ಎಂ.ಎ ದಲ್ಲಿದ್ದೆವು. ಹೋಳಿಯ ಸಂಭ್ರಮ. ವಿಶ್ವವಿದ್ಯಾಲಯದ ಕ್ಯಾಮ್ಫಸ್ಸಿನಲ್ಲಿ ಅಹಿತಕರ ಘಟನೆಗಳು ತೀರಾ ಅಪರೂಪ. ನಾನು ನಿಜಲಿಂಗಪ್ಪ ಹಾಸ್ಟೆಲಿನಲ್ಲಿದ್ದೆ. ಹುಣ್ಣಿಮೆಯ ಹಿಂದಿನ ದಿನದ ಚೇಲು ಬೆಳುದಿಂಗಳು ಯುವಕರನ್ನು ಕುಣಿಯಲಿಕ್ಕೆ ಹಚ್ಚಿತ್ತು. ಬಹಳವೆಂದರೆ ನಾವು 4೦-5೦ ಜನರೀರಬೇಕು. ಅಂದು ವಿಚಿತ್ರ ವಿಚಿತ್ರ ಪೋಷಾಕು ಧರಿಸಿರುತ್ತಾರೆ. ಪ್ಯಾಂಟು ಹರಿಯದಿದ್ದರೂ ಉದ್ದಕ್ಕೆ ಹರಿದು ಹಾಕಿಕೊಂಡಿರುತ್ತಾರೆ. ಕೆಲವರು ಹುಡುಗೀಯರ ಪೋಷಾಕಿನಲ್ಲಿ ಕುಣಿಯುತ್ತಿರುತ್ತಾರೆ. ಹಲಗೆಗಳು ಉನ್ಮಾದಕ್ಕೆ ಪ್ರೋತ್ಸಾಹಿಸುತ್ತಿರುತ್ತವೆ. ಪ್ರತಿ ವರ್ಷ ಲೇಡೀಜ ಹಾಸ್ಟೆಲಿನ ಮುಂದೆ ಹತ್ತು ನಿಮಿಷವಾದರೂ ಹೊಯ್ಯಕೊಳ್ಳದಿದ್ದರೆ ಹೋಳಿ ಹುಣ್ಣಿಮೆಗೆ ಸಾರ್ಥಕತೆ ಬರುವುದಿಲ್ಲ. ಅಂದು ಹತ್ತು ನಿಮಿಷಗಳ ಕಾಲ ಅಲ್ಲಿ ಕುಣಿದದ್ದಾಯಿತು. ಒಳಗಿರುವವರು ಕಿಡಿಕಿಯಲ್ಲಿ ನಿಂತು ನೋಡುವುದೇ ನಮ್ಮನ್ನು ಕುಣಿಯಲಿಕ್ಕೆ ಪ್ರಚೋದಿಸುವ ಕಾರಣ. ಅದಾಗ್ಲೇ ಮಧ್ಯ ರಾತ್ರಿಯಾಗಿತ್ತು. ಗುಂಪಿನ ಸಂಖ್ಯೆಯೋ ಕಡಿಮೆಯಾಗಿತ್ತು. ನಾವೆಲ್ಲಾ ಕುಣಿಯುವುದು, ಒದರುವುದನ್ನು ಬಿಟ್ಟು ಹಾಸ್ಟೆಲಿನತ್ತ ಹೆಜ್ಜೆ ಹಾಕುತ್ತಿದ್ದೆವು.

ಅಂದು ಪ್ರತಿಷ್ಠಿತರ ಒಂದು ತಂಡ ಬೆಳದಿಂಗಳ ಊಟಕ್ಕೆ ಬಂದವರು ಮನೆಯತ್ತ ಹೊರಟಿದ್ದರು. ಅವರು ಏಳೆಂಟು ಕಾರಿನ ಜನ ಇದ್ದರು. ಪ್ರತಿಯೊಂದು ಕಾರು ಹೋಗುವಾಗ ನಮ್ಮ ಗುಂಪು ಒಂದು ಕೂಗು ಹಾಕುತ್ತಾ ಎಂಥದೋ ಒಂದು ಪದಾ ಹಾಡುತ್ತಿತ್ತು. ಕಾರಿನವರು ಅವರಷ್ಟಕ್ಕೆ ಅವರು ಹೊರಟು ಹೋದರು. ಅದು ಕೊನೆಯ ಕಾರು. ಆ ಕಾರಿನ ಯಜಮಾನನಿಗೆ ನಮಗೊಂದಿಷ್ಟು ಉಪದೇಶ ಮಾಡುವ ಮನಸ್ಸಾಗಿತ್ತು ಅಂತಾ ಕಾಣುತ್ತಿತ್ತು. ಅವರು ಕಾರು ನಿಲ್ಲಿಸಿ “ನಿಮಗೇನಾದರೂ ಬುದ್ದಿ ಐತಾ. ನೀವು ಏನು ಕಲಿಯುತ್ತಿದ್ದಿರಿ ಎಂಬ ಅರಿವಾದರೂ ಐತಾ?” ಎಂದು ನಮ್ಮನ್ನೆಲ್ಲ ತರಾಟೆಗೆ ತೆಗೆದುಕೊಂಡರು.ಅಲ್ಲಿ ಪಿನ್ ಡ್ರಾಅಪ್ ಸೈಲೆನ್ಸ ಇತ್ತು. ಅಷ್ಟಕ್ಕೇ ಅವರು ಹೋಗಿ ಬಿಡಬೇಕಾಗಿತ್ತು. ಹತ್ತು ನಿಮಿಷ ಅವರ ಭಾಷಣವನ್ನು ಗದ್ದಲ ಮಾಡದೆ ಕೇಳಿಸಿಕೊಂಡೆವು. ಅವರು ಮತ್ತೆ ಮುಂದುವರಿಸಿದರು. ನಮ್ಮಲ್ಲಿ ಯಾವನೋ ಒಬ್ಬನ ತಾಳ್ಮೆಯ ಕಟ್ಟೆ ಒಡೆಯಿತು. ಅವನು ಮೌನ ಮುರಿದು ಮೆಲ್ಲಗೆ “ಹೂಮ್” ಅಂದ. ಅದೇ ಪ್ರಚೋದನೆಯಾಯಿತು. ಆ ಕೂಡಲೇ ಹಲಗೆಗಳು ಘರ್ಜಿಸಿದವು. ಕಾರನ್ನು ಸುತ್ತು ಹಾಕಿ ಕುಣಿಯಲಿಕ್ಕೆ ಹತ್ತಿದರು. ಚಾಲಕನಿಲ್ಲದೆ ಓಡುವ ವಾಹನವನ್ನು ತಡೆಯಲಿಕ್ಕೆ ಹೋಗಬಾರದು. ಗುಳೆ ಕಿತ್ತು ಬಂದ ಬುದ್ದಿ ಇಲ್ಲದ ಗುಂಪನ್ನು ತಡವಲಿಕ್ಕೆ ಹೋಗಬಾರದು.


  • ವಿರೂಪಾಕ್ಷಪ್ಪ ಕೊರಗಲ್ಲ , ಹಾವೇರಿ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading