ಪ್ರಜ್ಞಾ ಮಾರ್ಪಳ್ಳಿಯವರ ಚಿಟ್ಟೆಯಾಗಿಹ ಈ ಕಾವ್ಯ

ಕವಿಯತ್ರಿ ಪ್ರಜ್ಞಾ ಮಾರ್ಪಳ್ಳಿ ಅವರ ‘ಚಿಟ್ಟೆಯಾಗಬೇಕಿದೆ ನನಗೆ’ ಕವನ ಸಂಕಲನಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಟಿ.ಪಿ.ಉಮೇಶ್ ಅವರು ಬರೆದ ಮುನ್ನುಡಿಯನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಅಂತರಂಗದಿಂದ ಹಾರಿ ಬಂದಿಹುದು ಹೊಸ ಕಾವ್ಯ…ಪ್ರಜ್ಞಾ ಮಾರ್ಪಳ್ಳಿಯವರ ಚಿಟ್ಟೆಯಾಗಿಹ ಈ ಕಾವ್ಯ…

ಕವಿತೆ ಅಂತರಂಗದ ಧ್ವನಿ. ಕವಿತೆಯ ಪ್ರತಿ ಶಬ್ಧ ಅಭಿವ್ಯಕ್ತಿಯೂ ವಿಶಿಷ್ಟ ವಿಭಿನ್ನ. ವ್ಯಕ್ತಿ ಹಾಗು ವ್ಯಕ್ತಿತ್ವದ ಬಹುಮುಖಿ ಸಂಚಲನೆಯ ಪ್ರತೀಕ ಕಾವ್ಯ. ಮಾನವ ಕಂಡುಕೊಂಡ ಅನೇಕ ಸೃಜನಶೀಲ ಕಲೆಗಳಲ್ಲಿ ಕಾವ್ಯ ಅತಿ ಉತ್ಕೃಷ್ಟವಾದುದು. ಕಾವ್ಯೇಷು ನಾಟಕಂ ರಮ್ಯಂ ಎಂದು ಕಾಳಿದಾಸನ ಶಾಕುಂತಲ ನಾಟಕದ ಕುರಿತ ಅನಾಮಿಕ ಸಾಹಿತ್ಯ ಮೀಮಾಂಸಕರ ಮಾತೊಂದಿದೆ. ನಾಟಕ ಕಾವ್ಯರೂಪದಿ ಅಭಿವ್ಯಕ್ತವಾಗುತ್ತಿದ್ದ ಕಾಲದ ಮಾತಿದು. ನಾಟಕ ರಂಗದ ಮೇಲಿನ ಕಾವ್ಯ. ಕಾವ್ಯವೋ ಮನ ಮನಗಳ ತುಡಿತ ಮಿಡಿತಗಳ ದಿವ್ಯ. ಸಾಹಿತ್ಯ ಸೃಷ್ಟಿಯಲ್ಲಿ ಕಾವ್ಯದ ಪಾಲೇ ಹೆಚ್ಚಿನದು. ಪುರಾತನರ ಜೀವನವೆಲ್ಲ ಸಾಹಿತ್ಯದ ಒಂದು ಪ್ರಕಾರವಾದ ಕಾವ್ಯದ ಮೂಲಕ ಅಭಿವ್ಯಕ್ತಿ ಪಡೆದದ್ದೇ ಹೆಚ್ಚು. ನಮ್ಮ ಸಂಸ್ಕೃತಿ ಪರಂಪರೆಯ ವೇದ ಉಪನಿಷತ್ತುಗಳು ಮಹಾಕಾವ್ಯಗಳು ಪುರಾಣಗಳು; ಪಂಪನಾದಿಯಾಗಿ ಕುವೆಂಪು ಅಡಿಗರವರೆಗಿನ ಕನ್ನಡದ ಅಗಣಿತ ಸಾಹಿತ್ಯ ಪರಂಪರೆ ಕಾವ್ಯದ ಮೂಲಕವೇ ತನ್ನ ತಾನು ವಿಶ್ವಕ್ಕೆ ತೆರೆದುಕೊಂಡಿದೆ. ಎಲ್ಲ ಬರಹಗಾರರ ಮೊದ ಮೊದಲ ಅಕ್ಕರೆ ಪ್ರೀತಿ ಕವಿತೆಯೇ ಆಗಿರುತ್ತದೆ. ಕರಾವಳಿಯ ಪ್ರಜ್ಞಾ ಮಾರ್ಪಳ್ಳಿಯವರು ಮೊದ ಮೊದಲು ಗದ್ಯದ ಅನನ್ಯ ಪ್ರಕಾರ ಕಾದಂಬರಿಗೆ ಒಲಿಯುವ ಮೂಲಕ ತಮ್ಮ ಅಂತರಂಗದ ಭಾವನೆಗಳನ್ನ ಟಂಕಿಸಿದರು. ‘ತೆರೆ’ ಕಾದಂಬರಿ ನಮ್ಮ ಕೌಟುಂಬಿಕ ಹಾಗು ಶೈಕ್ಷಣಿಕ ಚಿಂತನೆಗಳ ವಿಸ್ತಾರಗೊಳಿಸಿರುವುದು ಸತ್ಯ. ಈಗ “ಚಿಟ್ಟೆಯಾಗಬೇಕಿದೆ ನನಗೆ” ಕಾವ್ಯ ಸಂಕಲನದಿ ತಮ್ಮ ಅಂತರಂಗ ಬಹಿರಂಗದ ಅನುಭವ ಮತ್ತು ಅನುಭಾವ, ವಾಸ್ತವ ಮತ್ತು ಕಲ್ಪನೆಗಳನ್ನು ಬಣ್ಣ ಬಣ್ಣದ ಹಾಡುಗಳಾಗಿಸಿ ಹಾರಿಸುವ ಮೂಲಕ ಕಾವ್ಯ ಸಾಹಿತ್ಯದ ಮಧುವನ್ನು ನಮಗೆಲ್ಲ ಉಣಬಡಿಸುತ್ತಿದ್ದಾರೆ.

ಪ್ರಜ್ಞಾರವರು ಸಾಹಿತ್ಯ ಯಾವುದೇ ಇರಲಿ ಸಮಾಜದ ನೈತಿಕ ಸಾತ್ವಿಕ ಅಭ್ಯುದಯಕ್ಕೆ ಅದನ್ನು ಹೊಸೆಯುತ್ತಿರುವುದನ್ನು ಅವರ ಗದ್ಯ ಪದ್ಯ ಸಾಹಿತ್ಯ ಅವಲೋಕಿಸಿದವರೆಲ್ಲರಿಗು ಮನಗಾಣುತ್ತದೆ. ಪ್ರಜ್ಞಾ ಮಾರ್ಪಳ್ಳಿಯವರು ಈಗಾಗಲೇ ತೆರೆ ಕಾದಂಬರಿ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರೆಂಬುದು ನಮಗೆಲ್ಲ ತಿಳಿದಿದೆ. ಉಪನ್ಯಾಸಕರಾಗಿ ಕರಾವಳಿಯ ಅಸ್ಮಿತೆಯ ಸಂಕೇತವಾಗಿ ಕಂಡು ಬರುವ ಇವರ ಗದ್ಯದಂತೆ ಪದ್ಯವೂ ಕಾಡು ಕಡಲ ಧ್ಯಾನಿಸುವ, ದೇಶಭಕ್ತಿ ಶಕ್ತಿ ಗೌರವಿಸುವ, ಸಂಬಂಧಗಳ ಔನ್ನತ್ಯ ಸಾರುವ ಭಾವಸ್ಥಿರತೆ ಹೊಂದಿವೆ. ಕಡಲು ಸದಾ ಸಂಚಾರಿ. ಅಂತೆಯೇ ಕಾಡು ಸದಾ ಋತು ವೈಪರೀತ್ಯಗಳಿಗೆ ಸದಾ ಮುಖಾಮುಖಿಯಾಗುವಂತಹದ್ದು. ಅವುಗಳ ವಿಭಿನ್ನ ಜೀವನ್ಮುಖಿ ಸಂಕೇತಗಳ ಪ್ರಜ್ಞಾರವರ ಕಾವ್ಯ ಹಿಡಿದಿಟ್ಟಿದೆ.

“ಜೀವನ್ಮುಖಿ ಮನಸುಗಳು ಒಳನೋವಿಗೆ ಸಮಧಾನ ನೀಡಲು ಒದಗದೆ ಇದ್ದಾಗ; ಮತ್ತೆ ಮತ್ತೆ ಕರೆಯುವುದು ಇದೇ ಪ್ರಕ್ಷುಬ್ಧ ಕಡಲ ತೀರ” ಎಂದು ಕಡಲನ್ನೇ ತಮ್ಮ ಮನಸ್ಸಿನ ಅಲ್ಲೋಲ ಕಲ್ಲೋಲಗಳಿಗೆ ರೂಪಕವಾಗಿಸುತ್ತಾ….

“ನಿಂತು ನೋಡುತ ಉರಿಹೃದಯವು ತಂಪಾಗುವುದು!” ಎಂಬ ಸಾಲು ಛಾಪಿಸುವ ಮೂಲಕ ನೋವು ನಲಿವುಗಳ ನಿರ್ಲಿಪ್ತ ಮನೋಭಾವದಿ ಎದುರಿಸಿದರೆ ಬದುಕು ಸಾಂಗವಾಗಿ ನಡೆಯುವುದೆಂದು ಮನಗಾಣಿಸುವಲ್ಲಿ ಅವರ ಪ್ರಕೃತಿಯಲ್ಲಿನ ಸಮಾಧಾನದ ಜೀವನ ದೃಷ್ಟಿ ಕಾಣುತ್ತದೆ.

“ಹಸಿರೆ ಉಸಿರಾಗಲಿ ಭುವಿಯು ಹಸನಾಗಲಿ; ನೆಲಜಲದ ಪ್ರೀತಿಯೆ ಸಾವಿರ ಸಾವಿರವಾಗಲಿ”

“ಇಳೆಗೆ ಮಳೆ ಮುತ್ತಾಗಿ ಸುಡುವೆದೆಯು ತಂಪಾಗಿ; ಹಗುರಾಗು ಹುಲ್ಲಿನೊಲು ಬದುಕು ಕಗ್ಗಂಟಲ್ಲ” ಕವಿತೆಯ ಸಾಲುಗಳು ಪ್ರೀತಿಯುಳ್ಳ ಸರಳ ಬದುಕಿನ ನೀತಿ ರೀತಿಗಳ ಜೀವನಯಾನವೇ ಸಮಾಜ ಒಪ್ಪುವ ಮಾರ್ಗವೆಂದು ತೋರ್ಪಡಿಸುತ್ತವೆ. ಸರಳ ಸುಸಂಸ್ಕೃತ ಸೌಜನ್ಯರೂಪಿ ಪ್ರಜ್ಞಾರವರು ತಮ್ಮ ಕಾವ್ಯದ ಸಾಲುಗಳಲ್ಲಿಯೂ ಆದರ್ಶಗಳ ಬದುಕಿನ ಮಹತ್ವವನ್ನು ಕಾಣಿಸುತ್ತಾರೆ. ಸ್ನೇಹ, ಬಂಧು ಬಳಗ, ನೆರೆಹೊರೆ, ಸಮುದಾಯ ಸಮಾಜದ ಜೊತೆಗಿನ ಒಡನಾಟ ಸೌಹಾರ್ಧಯುತವಾಗಿರಬೇಕೆಂದು ನವಿರಾದ ಸಾಲುಗಳ ಮೂಲಕ ತಿಳಿಸುತ್ತಾರೆ.

“ನಾನು ನೀನೆಂಬುದು ಜೀವಜ್ಯೋತಿಗೆ ಹೊರೆಯು; ನನ್ನಂತೆ ನೀನೆಂಬ ಭಾವವದುವೇ ಹಿರಿದು”
“ಬಿದ್ದಲ್ಲೆ ಮತ್ತೆದ್ದು ಸೆಟೆದು ನಿಲ್ಲಲಿ ಬಾಳು; ಇಟ್ಟ ಹೆಜ್ಜೆಯ ಗುರುತು ಕಾಯುವುದು ನಾಳೆಗು”
“ರಕ್ತ ಬಂಧಕು ಮೀರಿ ಪೊರೆವ ಸಂಬಂಧಗಳು; ಬಾಳಿನುದ್ದಕು ಸೇರಿ ಬೆಸೆವ ಮನಸುಗಳು”

“ತಿರುಗಿ ನೋಡದಿರು ಬಂದ ದಾರಿಯನ್ನು; ಹಜ್ಜೆ ಬದಲಾಗುವುದು ಘಳಿಗೆಗೊಂದು” ಈ ಕಾವ್ಯದ ಪ್ರತಿ ಸಾಲುಗಳಲ್ಲಿಯ ಜೀವನ ಮತ್ತು ಅದರ ಮಹತ್ವ, ಸಂಬಂಧಗಳು ಮತ್ತು ಅದರ ಅಗತ್ಯ, ಭವಿಷ್ಯ ಮತ್ತು ಅದಕ್ಕಾಗಿ ಮಿಡಿತ ಗೋಚರವಾಗುತ್ತಿದೆ ಜೊತೆಗೆ ಕವಿಯತ್ರಿಯವರ ಅದಮ್ಯ ಜೀವನೋತ್ಸಾಹ ಮತ್ತು ಅದನ್ನು ಹಂಚುವ ಹಂಬಲ ವ್ಯಕ್ತವಾಗುತ್ತಿದೆ.

ಇಂದಿನದು ಬಲು ಧಾವಂತದ ಬದುಕು. ಸಂಬಳ ಗಿಂಬಳವೆಂಬ ಬರೀ ಹಣದ ಲೆಕ್ಕಾಚಾರದ ಬದುಕು. ಅದಕ್ಕಾಗಿ ಕಲಿವ ಕಲಿಸುವ ಭಾಷೆ ಯಾವುದಾದರೇನು ಹಣ ತರುವ ಭಾಷೆಯೆಡೆಗೆ ಆಕರ್ಷಣೆ ಅತ್ಯಧಿಕವಾಗಿದೆ. ನಮ್ಮ ಮಾತೃಭಾಷೆ ಕೇವಲ ಮನೆ ಭಾಷೆಯಾಗುವ ಅಪಾಯದ ಈ ಕಾಲಘಟ್ಟದಲ್ಲಿ ಪ್ರಜ್ಞಾ ಮಾರ್ಪಳ್ಳಿಯವರು ಆಂಗ್ಲ ಮಾಧ್ಯಮದ ಶಿಕ್ಷಣದ ಅನಿವಾರ್ಯತೆಯೆಡೆಗೆ ಭಾರತದ ಎಲ್ಲ ರಾಜ್ಯ ಭಾಷಿಕರ ಮಕ್ಕಳು ಸಾಗುವ ಈ ಸಂಕ್ರಮಣ ಕಾಲದಿ ಹಿಂದೊಮ್ಮೆ ಕನ್ನಡ ಭಾಷೆಯ ಪ್ರೌಢಿಮೆ ತೋರುವ, ಕನ್ನಡ ಶಾಲೆಗಳ ಹಿರಿಮೆ ಸಾರುವ “ಕಲ್ಪವೃಕ್ಷ : ಕನ್ನಡ ಶಾಲೆ” ಕಿರುಚಿತ್ರವನ್ನು ರೂಪಿಸಿದ್ದರು. ಈ ಅಸಾಧಾರಣ ಕಾರ್ಯ ಇವರ ಕನ್ನಡ ಭಾಷೆಯೆಡೆಗಿನ ಪ್ರೇಮ ಹಾಗು ಮಾತೃಭಾಷೆ ಉಳಿಸಿ ಬೆಳೆಸುವ ಅಪಾರ ಸಂಯಮ ಹೊಂದಿರುವುದರ ದ್ಯೋತಕ. ಕನ್ನಡ ಭಾಷೆಯನ್ನ ಶಿಕ್ಷಣ ಮತ್ತು ಆಡಳಿತದ ಎಲ್ಲಾ ಹಂತಗಳಲ್ಲಿ ಜಾರಿ ಮಾಡಲು ಗೋಕಾಕ ಚಳವಳಿ ಸಂಘಟಿಸಿ ಯಶಸ್ವಿಯಾದ ಮಹನೀಯರಿದ್ದ ಈ ನಾಡಿನಲ್ಲಿ ಈಗ ಸರ್ಕಾರವೇ ಪಬ್ಲಿಕ್ ಶಾಲೆಗಳ ಮೂಲಕ ಆಂಗ್ಲ ಮಾಧ್ಯಮದಿ ಶಿಕ್ಷಣ ನೀಡಲು ಮುಂದಾಗಿರುವುದು ವಿಪರ್ಯಾಸ. ಖಂಡಿತ ಇದು ಹೀಗೆ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆಯ ಕಾವ್ಯ ಸಾಹಿತ್ಯವನ್ನು ಆಂಗ್ಲದಲ್ಲಿಯೇ ಕಲಿಸಿ ಮತ್ತು ಕಲಿಯಬೇಕೆನ್ನುವ ಶೋಚನೀಯ ಕಾಲ ಬರುವುದು ದೂರವಿಲ್ಲ.

ಕಲ್ಪವೃಕ್ಷ ಕನ್ನಡ ಶಾಲೆ ಎಂಬ ಸಾಕ್ಷ್ಯಚಿತ್ರ ಮಾರ್ಪಳ್ಳಿಯವರ ಕನ್ನಡತನದೆಡೆಗಿನ ಪರಿಶ್ರಮ ಮನಗಾಣಿಸುತ್ತದೆ. ನೆಲ ಜಲ ಸಂಸ್ಕೃತಿ ಭಾಷೆ ನಮ್ಮ ಅಸ್ತಿತ್ವದ ಸಂಕೇತಗಳು. ಅವುಗಳಿಗೆ ತೊಂದರೆಯಾದಾಗ ಸುಮ್ಮನಿರಲು ಸಾಧ್ಯವಿಲ್ಲ. ರಚನಾತ್ಮಕ ಪ್ರತಿಕ್ರಿಯೆ ಜಾಗೃತ ಮನಸ್ಸುಗಳಿಗೆ ಮಾತ್ರ ಸಾಧ್ಯ. ಅಂತೆಯೇ ಬದುಕಿನ ಅನೇಕ ಏರಿಳಿವುಗಳ ಕಂಡುಂಡ ಪ್ರಜ್ಞಾರವರು ಎಲ್ಲ ಸಮಸ್ಯೆಗಳ ಎದುರಿಸುವ ನಿವಾರಿಸುವ ಸಂಕಲ್ಪವನ್ನು ಇಟ್ಟುಕೊಂಡಿರುವುದು ನಮ್ಮ ಕನ್ನಡ ಪರಂಪರೆಯ ಪುಣ್ಯವೇ ಸರಿ.

“ಕನ್ನಡ ಎಂದರೇ ಕಲ್ಪವೃಕ್ಷ; ಕನ್ನಡ ಶಕ್ತಿ; ಅನ್ನ ಪ್ರೀತಿ ಸಹಿಷ್ಣುತೆ…” ಎಂದೇ ಕವಿತೆಯಲ್ಲು ಧ್ಯಾನಿಸುತ್ತಾರೆ!

“ಸದಾ ಸಂಕಲ್ಪ ಬದ್ಧ ಎದುರಾಗುವ ಪ್ರತಿ ತಿರುವುಗಳನ್ನೆದುರಿಸಲು ನಾನಂತು ಕ್ಷಣಕ್ಷಣವೂ ಸಿದ್ಧ” ಎಂಬ ಅವರ ಕವಿತೆಯ ಸಾಲುಗಳು ಬದುಕಿನ ಯಾವುದೇ ಸಮಸ್ಯೆಗಳ ಎದುರಿಸುವ ಛಲ ಇರುವುದನ್ನು ದೃಢಪಡಿಸುತ್ತವೆ. ಓದುಗರಲ್ಲು ಅಪೂರ್ವವಾದ ಈ ಬಾಳಿನೆಡೆ ಉತ್ಸಾಹ ಹುಮ್ಮಸ್ಸು ತುಂಬುತ್ತವೆ.

ಕೆ ಎಸ್ ನರಸಿಂಹಸ್ವಾಮಿಯವರ ಲಾಲಿತ್ಯಪೂರ್ಣ ಮಲ್ಲಿಗೆ ಕವಿತೆಗಳ ಘಮವನ್ನು, ಅಡಿಗರ ರೂಪಕಗಳ ನಿಬಿಡ ಘಾಟನ್ನು, ಕುವೆಂಪುರವರ ಕಾನನದ ಸಿರಿಯನ್ನು ಏಕಕಾಲದಿ ನಮಗಿಲ್ಲಿ ಪ್ರಜ್ಞಾರವರ ಕವಿತೆಗಳು ಕಾಣಿಸುತ್ತವೆ. ಶಬ್ಧಗಳ ಬಳಸುವ ಕೌಶಲ, ಪದಗಳ ಜೋಡಿಸುವ ತಂತ್ರ, ಸಾಲುಗಳ ಪೋಣಿಸುವ ಕಸುಬುಗಾರಿಕೆ, ಭಾವ ಅನುಭಾವ ತುಂಬುವ ಧ್ಯಾನಸ್ಥ ಮನೋಭಾವದ ಪರಿಣಿತಿಯನ್ನು ಕಾವ್ಯದಲ್ಲಿ ಮಾರ್ಪಳ್ಳಿಯವರು ಸಾಧಿಸಿದ್ದಾರೆ.

ಕಾವ್ಯವೆನ್ನುವುದು ಕಣ್ಣಿಗೂ ಕಣ್ಣಾಗಿ ಕಣ್ಣಲ್ಲಿಹುದು ಎಂಬ ದ.ರಾ.ಬೇಂದ್ರೆಯವರ ನುಡಿಯಂತೆ ಕಾವ್ಯ ಕೇವಲ ಪದಗಳ ಆಡಂಬರವಲ್ಲ. ಓದುಗರ ರಂಜನೆಯಲ್ಲ. ಬರಹಗಾರರ ಅಹಂಕಾರವಲ್ಲ. ಅದು ಲೋಕದಾ ಕಣ್ಣು. ಲೋಕಕ್ಕೇ ಕಣ್ಣು! ಲೋಕದ ಸೃಷ್ಟಿಯ ರಸ ಸದೃಶ ರೂಪವೇ ನಾವಾದಾಗ ಮಾತ್ರ ಕಾವ್ಯ ಸೃಷ್ಟಿ ನೈಜತೆ ಪಡೆದುಕೊಳ್ಳಲು ಸಾಧ್ಯ. ಸೃಷ್ಟಿಯೇ ನಾವೆಂದುಕೊಂಡಾಗ, ನಾವಾದಾಗ ಕಾವ್ಯ ಸೃಷ್ಟಿ ಕೃತಕತೆಯಿಂದ ಹೊರಬರಲು ಸಾಧ್ಯ. ಇಂತಹ ಸಹಜ ಅನನ್ಯ ಅದಮ್ಯ ಕವಿತೆಗಳನ್ನ ಈ ಸಂಕಲನದಲ್ಲಿ ಮಾರ್ಪಳ್ಳಿಯವರು ನಮಗೆಲ್ಲ ನೀಡಿದ್ದಾರೆ.

“ಕಲಿಯುವವಗೆ ಕ್ಷಣಕ್ಷಣವು ಪಾಠ ಬಗೆವರಾರು ಅವನಾಟ; ಕತ್ತಲಿಗೆ ಹೆಜ್ಜೆ ಕಾಣದು ಬೆಳಕು ಕರೆದಿದೆ ಇನ್ನಿಲ್ಲ ಹೋರಾಟ” ಸದಾ ಧನಾತ್ಮಕ ಚಿಂತನೆಯ ಶುಭ್ರ ಬೆಳಕಲ್ಲೆ ನಡೆಯುವ ಛಾತಿಯೊಂದಿಗೆ ಓದುಗರನ್ನು ಆ ನಿಟ್ಟಿನಲ್ಲಿ ಪ್ರೇರೇಪಿಸುವ ಗುಣ ಇಲ್ಲಿ ಕಾವ್ಯದ ನಿಜ ಸತ್ವವಾಗಿದೆ. ನಿತ್ಯ ಜೀವನದ ಪಾಠಗಳ ಅರ್ಥಮಾಡಿಕೊಂಡವರಿಗೆ ಸೋಲು ಗೆಲುವು ಬದುಕಿನ ಸಾರ್ಥಕತೆಯೆಡೆಗೆ ಸಾಗುವ ಊರುಗೋಲುಗಳು ಎಂದೆನ್ನುವ ಭಾವದ ಕಾವ್ಯದಿ ಚಿಟ್ಟೆಯಾಗಿಹ ಮಾರ್ಪಳ್ಳಿಯವರು ಮಾಧವನ ನೆನೆಯುವ ಮೋಹದ ಜೊತೆಗೆ ಗೀತೆಯ ಅನುಸರಿಸುವ ಗುರಿಯ ಕಂಡುಕೊಂಡಿದ್ದಾರೆ. ಜನನಿ ಜನ್ಮಭೂಮಿಯ ಪವಿತ್ರ ಪ್ರೀತಿಯ ಜೊತೆಗೆ ಮಾನವತೆಯ ಒಡನಾಡಿಗಳ ಹುಡುಕುವ ಕಡೆಗೆ ನೀತಿವಂತ ಬದುಕಿನ ದಾರಿಯ ಸದಾ ಕಾಣುವ ಹುಮ್ಮೇದು ಕವಿತೆಗಳ ಪ್ರತಿ ಸಾಲಲ್ಲು ಅನುರಣಿಸುತ್ತಿವೆ.

ರೆಕ್ಕೆಗಳ ತುಂಬ ಕಣ್ಣು ಕೋರೈಸುವ ಬಣ್ಣಗಳ ತುಂಬಿಕೊಂಡ ಚಿಟ್ಟೆ ಸರ್ವರನ್ನು ಸರ್ವ ಕಾಲಕ್ಕು ಸೆಳೆಯುವುದು. ಕವಿತೆಗಳ ತುಂಬ ಆದರ್ಶಗಳ ತುಂಬಿಕೊಂಡಿರುವ “ಚಿಟ್ಟೆಯಾಗಬೇಕಿದೆ ನಾನು” ಕವಿತೆಗಳ ಸಂಕಲನ ಕನ್ನಡ ಸಾಹಿತ್ಯ ಸಹೃದಯರ ಸದಾ ಆಕರ್ಷಿಸುವುದು. ಕರಾವಳಿಯ ಕ್ರಿಯಾಶೀಲ ಕನ್ನಡತಿ ಪ್ರಜ್ಞಾರವರ ಸಾಹಿತ್ಯ ಕೃಷಿ ಉನ್ನತೋನ್ನತವಾಗಿ ಸಾಗಲಿ ಎಂದು ಈ ಬಯಲು ಸೀಮೆಯ ಮೇಷ್ಟ್ರ ಶುಭ ಹಾರೈಕೆಗಳು.


  • ಟಿ.ಪಿ.ಉಮೇಶ್ – ಶಿಕ್ಷಕರು, ರಾಜ್ಯ ಪ್ರಶಸ್ತಿ ಪುರಸ್ಕೃತರು, ಲೇಖಕರು, ತುಪ್ಪದಹಳ್ಳಿ, ಹೊಳಲ್ಕೆರೆ .ತಾ. ಚಿತ್ರದುರ್ಗ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading