ಲೇಖಕರಾದ ಬ್ರಹ್ಮದೇವ ಹದಳಗಿ ಅವರ ಮೊದಲ ಎರಡು ಕೃತಿಗಳಿಗೆ ‘ರಾಜ್ಯಪ್ರಶಸ್ತಿ’ ದೊರಕಿದ್ದು, ಇವರು ಬರೆದ ಮೂರನೆಯ ಕಾದಂಬರಿ ‘ಮೂರನೇ ಹೆಂಡತಿ’. ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರ ಈ ಕೃತಿಯ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಮೂರನೇ ಹೆಂಡತಿ
ಲೇಖಕರು: ಬ್ರಹ್ಮದೇವ ಹದಳಗಿ
ದೀಪ್ತಿ ಬುಕ್ ಹಸ್ ಮಸೂರು
ಮುದ್ರಣದ ವರ್ಷ: ೨೦೧೫
ಪುಟ:೧೭೨.
ಬೆಲೆ: ರೂ. ೧೦೫.
ಮನುಷ್ಯನ ಜೀವನದ ಕೊನೆಯ ಹಂತ ವೃದ್ಧಾಪ್ಯ. ತನ್ನ ಪ್ರಾಯಕಾಲದಲ್ಲಿ ದುಡಿದ ಮನುಷ್ಯ ಹಣ್ಣಾಗಿ ದೈಹಿಕ ಮತ್ತು ಮಾನಸಿಕವಾಗಿ ಸೋತು ಹೋದಾಗ ಬಯಸುವುದು ಕೊಂಚ ಪ್ರೀತಿ ಮತ್ತು ಭದ್ರತೆ. ಅದನ್ನು ನೀಡಬೇಕಾದ ಮಕ್ಕಳು ತಮ್ಮ ಹೆತ್ತವರನ್ನು ಪೊರೆಯದಿದ್ದರೆ ಅವರಿಗೆ ಇನ್ಯಾರು ಆಸರೆಯಾಗುತ್ತಾರೆ?.. ಎಲ್ಲಾ ಮಕ್ಕಳು ಕೆಟ್ಟವರಾಗಿರುವುದಿಲ್ಲ ಹಾಗೇ ಎಲ್ಲರೂ ಒಳ್ಳೆಯವರೂ ಆಗಲು ಸಾಧ್ಯವಿಲ್ಲ. ನಾವು ಒಳ್ಳೆಯ ದಾರಿಯಲ್ಲಿ ನಡೆದರೆ ಮಕ್ಕಳು ಕಿಂಚಿತ್ತಾದರೂ ನಮ್ಮನ್ನು ಅನುಸರಿಸುತ್ತಾರೆ. ಎಲ್ಲಾ ಇದ್ದೂ ಕೂಡ ಕೆಲವು ಸಲ ದುರದೃಷ್ಟ ಹೆತ್ತವರದ್ದು.
ಕೆಲವರಿಗೆ ವಯಸ್ಸಿದ್ದಾಗ ದುಡಿದು ದಣಿದ ದೇಹ ವಯಸ್ಸಾದಾಗ ರೋಗಗಳ -ಅನಾರೋಗ್ಯದ ಗಣಿಯೇ ಆಗಿರುತ್ತದೆ. ಆಗ ಅವರ ಸೇವೆ ಮಾಡುವವರು ಯಾರು?…ಈಗಿನ ದಿನಗಳಲ್ಲಿ ವಿದ್ಯೆ- ಉದ್ಯೋಗವೆಂದು ಹೊರಗೇ ಇರುವ ಮಕ್ಕಳು ಹೆತ್ತವರ ಹೊರೆಯನ್ನು ಹೊರಲಾರದ ಅನಿವಾರ್ಯತೆಯೂ ಇದೆ. ನಮ್ಮ ಹೆತ್ತವರು ನಮ್ಮ ಜವಾಬ್ದಾರಿ ಎನ್ನುವ ಕರ್ತವ್ಯ ಪ್ರಜ್ಞೆ ಪ್ರೀತಿ ಇದ್ದ ಮಕ್ಕಳು ವೃದ್ಧಾಪ್ಯದಲ್ಲಿ ಹೆತ್ತವರನ್ನು ದೂರದೇ, ದೂರಮಾಡದೇ ಪಾಲಿಸುತ್ತಾರೆ. ಇಷ್ಟುದಿನ ಸಂಸಾರವೆಂಬ ಮರದಲ್ಲಿ ನೆರಳಾಗಿದ್ದ ಹಣ್ಣೆಲೆಗೆ ಬಣ್ಣ ತುಂಬುತ್ತಾರೆ.
ಹಾವೇರಿ ಜಿಲ್ಲೆಯ ಬ್ರಹ್ಮದೇವ ಹದಳಗಿ ಇವರು ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರು. ಇವರು ಈಗಾಗಲೇ ಬರೆದ ಮೊದಲ ಎರಡು ಕೃತಿಗಳಿಗೆ ‘ರಾಜ್ಯಪ್ರಶಸ್ತಿ’ ದೊರಕಿದೆ. ಇವರು ಬರೆದ ಮೂರನೆಯ ಕಾದಂಬರಿ ‘ಮೂರನೇ ಹೆಂಡತಿ’.

ಸಂತೋಷ ವೃತ್ತಿಯಲ್ಲಿ ಒಬ್ಬ ಪತ್ರಕರ್ತ. ಮಧ್ಯಮ ವರ್ಗದ ಅವನ ಸಂಸಾರವೆಂದರೆ ತಾಯಿ,ಹೆಂಡತಿ ಸಹನಾ ಹಾಗೂ ಪುಟ್ಟ ಮಗಳು ಸುಜನಾ. ಅವನ ತಾಯಿ ಲಲಿತಮ್ಮ ಕೆಲವು ದಿನಗಳ ಹಿಂದೆ ಮಗಳು ಸುಮಿತ್ರಳ ಮನೆಗೆಂದು ಹೋಗಿದ್ದವರು ವಿಚಿತ್ರವಾಗಿ ವರ್ತಿಸುತ್ತಿದ್ದರು. ಏನೇನೋ ಅಸಂಬದ್ಧ ಮಾತಾಡುತ್ತಾ ಕಾರಣವಿಲ್ಲದೇ ಅಳುತ್ತಿದ್ದರು. ಅವರಿಗೆ ಮನೋರೋಗ ಉಂಟಾಗಿತ್ತು. ಹಾಗಾಗಿ ಮೊಮ್ಮಗ ಅಜ್ಜಿಯನ್ನು ವಾಪಸ್ ಇಲ್ಲಿಗೆ ಕಳಿಸಿ ಹೋಗಿದ್ದ.
ಅವರನ್ನು ನೋಡಲು ಬಂದ ನೆರೆ -ಹೊರೆಯವರು ಆಕೆಗೆ ದೆವ್ವ ಬಡಿದಿದೆ, ಗಾಳಿ ತಾಗಿದೆ…ಎಂದು ಹೇಳಿದ ಮಾತನ್ನು ಸಹಿಸದೆ ಸಂತೋಷ ತಾಯಿಯನ್ನು ಸಮಾಧಾನಿಸುತ್ತಾ ಅವರಿಗೆ ವಿಶ್ರಾಂತಿ ಬೇಕೆಂದು ಎಲ್ಲರನ್ನೂ ಸಾಗಹಾಕಿದ್ದ.
ಪಾಪ ಈ ವಯಸ್ಸಲ್ಲಿ ಅತ್ತೆಗೆ ಹೀಗಾಗಿದೆ ಎಂದು ಸಹನಾ ಕೂಡ ಬೇಸರಿಸಿದ್ದಳು. ಸಂತೋಷನನ್ನು ಪ್ರೀತಿಸಿ ಮದುವೆಯಾದ ಅವಳು ಒಳ್ಳೆಯ ಸಂಸ್ಕಾರವುಳ್ಳ ಹೆಣ್ಣು. ಅತ್ತೆಯನ್ನು ತಾಯಿಯಂತೆ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದಳು. ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ವಯಸ್ಸಾದ ಮಾವನಿಗೆ ಮೂರನೇ ಹೆಂಡತಿಯಾಗಿ ಬಂದಾಗ ಅತ್ತೆಗೆ ಹದಿನಾರರ ಪ್ರಾಯ! . ಮೊದಲ ಹೆಂಡತಿಯ ಇಬ್ಬರು ಗಂಡು ಮಕ್ಕಳು ಲಲಿತಮ್ಮನ ವಯಸ್ಸಿನವರು.!!
ಎರಡನೇ ಹೆಂಡತಿಯ ಒಂದು ಹೆಣ್ಣು ಹಾಗೂ ಗಂಡು ಮಗ ತಾವು ಹೆತ್ತ ಇಬ್ಬರು ಗಂಡು ಇಬ್ಬರು ಹೆಣ್ಣು ಮಕ್ಕಳ ಚಾಕರಿ ಮಾಡಿಕೊಂಡು ಸವತಿಯರ ಜೊತೆ ಬದುಕಿದವಳು. ಮಾವನ ಇಳಿ ವಯಸ್ಸಲ್ಲಿ ಸೇವೆ ಮಾಡಿದವಳು. ಎನ್ನುವುದನ್ನು ಗಂಡನಿಂದ ಕೇಳಿ ತಿಳಿದಿದ್ದ ಸಹನಾಳಿಗೆ ಅತ್ತೆಯ ಬಗ್ಗೆ ಕನಿಕರವಿತ್ತು. ಈಗ ಸಂತೋಷನ ಅಣ್ಣಂದಿರು ಸ್ವಂತ ಮನೆ ಮಾಡಿಕೊಂಡು ಅದೇ ಊರಲ್ಲಿ ಬೇರೆ ಇದ್ದರೂ ಯಾರೂ ತಾಯಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿಲ್ಲ. ಮೃದು ಮನಸ್ಸಿನ ಕಿರಿಮಗ ಸಂತೋಷ ಅಣ್ಣಂದಿರಷ್ಟು ಅನುಕೂಲವಂತನಲ್ಲದಿದ್ದರೂ ಹೃದಯವಂತ. ವಯಸ್ಸಾದ ತನ್ನ ತಾಯಿಯನ್ನು ಸಲಹುತ್ತಿದ್ದ.
ವರ್ಷಗಳ ಹಿಂದೆ ಇಬ್ಬರು ಗಂಡು ಮಕ್ಕಳನ್ನು ಅನಾಥರನ್ನಾಗಿಸಿ ತೀರಿಹೋದ ತನ್ನ ಹಿರಿಯ ಮಗಳು ಸಾವಿತ್ರಿ, ಅಳಿಯ, ತನ್ನ ಮುದುಕ ಗಂಡ ಇವರನ್ನೆಲ್ಲಾ ನೆನಪಿಸಿಕೊಂಡು ಪಿಟಿಗುಡುತ್ತಾ ಅಮ್ಮ ಏನೇನೋ ಹೇಳುತ್ತಿದ್ದಳು. ಗೋಡೆ ಜೊತೆ ಮಾತಾಡುತ್ತಾ ಅಳುತ್ತಿದ್ದ ಲಲಿತಮ್ಮನನ್ನು ಮರುದಿನವೇ ಡಾಕ್ಟರ ಬಳಿ ಕರೆದೊಯ್ದರು. ಪರೀಕ್ಷಿಸಿ ಅವರು ಒಂದಷ್ಟು ಮಾತ್ರೆ ಕೊಟ್ಟು ಮತ್ತೆ ಆಗಾಗ ಆಸ್ಪತ್ರೆಗೆ ಬರುತ್ತಿರ ಬೇಕೆಂದಿದ್ದರು.
ಮಾತ್ರೆಗಳ ಪ್ರಭಾವದಿಂದ ಲಲಿತಮ್ಮ ವಿಪರೀತ ನಿದ್ರೆ ಮಾಡುತ್ತಿದ್ದಳು. ಆಕೆ ಹಾಸಿಗೆಯಲ್ಲೇ ಮಲ ಮೂತ್ರ ಮಾಡುತ್ತಿದ್ದರೂ ಸಂತೋಷ ಅವರ ಸೇವೆಗೆ ನಿಂತಿದ್ದ. ಈಗ ಸಹನಾ ಎರಡನೇ ಮಗುವನ್ನು ಹೊತ್ತಿದ್ದಳು. ಹೀಗೆ ದಿನೇ ದಿನೇ ಹದಗೆಡುತ್ತಿರುವ ತಮ್ಮ ಮನೆಯ ವಾತಾವರಣದಲ್ಲಿ ಬೆಳೆಯಬೇಕಾದ ತನ್ನ ಮಕ್ಕಳ ಮುಂದಿನ ಭವಿಷ್ಯ ನೆನೆದು ಬೇಸರಿಸುತ್ತಾ ಚಿಂತಿಸುತ್ತಿದ್ದಳು. ಆ ಸಮಯದಲ್ಲಿ ಅವಳ ತಂದೆ- ತಾಯಿ ಮನೆಗೆ ಬಂದು ಮಗಳಿಗೆ ಸಮಾಧಾನಿಸಿ ಸಹಾಯ ಮಾಡುವುದು ಮೆಚ್ಚುಗೆಯಾಗುತ್ತದೆ.

ಹೆಂಡತಿ ಸಹನಾ ಹೆರಿಗೆಗೆ ತವರಿಗೆ ಹೋದಾಗ ಸಂತೋಷ ಮಗುವಿನಂತೆ ತನ್ನ ತಾಯಿಯನ್ನು ನೋಡಿ ಕೊಳ್ಳುತ್ತಾನೆ. ಅವಳ ಬಟ್ಟೆ ತೊಳೆದು, ಹೊತ್ತಿಗೆ ಸರಿಯಾಗಿ ಊಟ ಮಾಡಿಸಿ, ಮಾತ್ರೆ ಕೊಟ್ಟರೂ ತಾನು ಹೊರಗೆ ಕೆಲಸಕ್ಕೆ ಹೋದಾಗ ಆತಂಕವಾಗುತ್ತದೆ. ಆದರೆ ಆತನಿಗೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಆದರೂ ಕಿವಿ ಕೇಳದ, ಬುದ್ಧಿ ಭ್ರಮಣೆಯಾದ ತಾಯಿ ಮಾಡುವ ಎಡಬಟ್ಟುಗಳನ್ನು ತಾಳ್ಮೆಯಿಂದ ಸರಿ ಪಡಿಸುತ್ತಿದ್ದ. ಮಮತೆಯಿಂದ ಚಿಕ್ಕ ಮಕ್ಕಳಂತೆ ಆಕೆಯನ್ನು ಜೋಪಾನ ಮಾಡುತ್ತಿದ್ದ.
ಮಗನ ಉಪಚಾರ ಹಾಗೂ ಹೆಚ್ಚಿನ ಚಿಕಿತ್ಸೆಯಿಂದ ಕೊಂಚ ಚೇತರಿಸಿ ಕೊಂಡ ಮೇಲೆ ಅವನು ಮನೆ ಕಟ್ಟುವಾಗ ತಾಯಿ ತನ್ನ ಒಡವೆ ತೆಗೆದು ಕೊಡುತ್ತಾಳೆ. ಸಂತೋಷನಿಗೆ ಗಂಡು ಮಗುವಾದಾಗ ಆಕೆ ಖುಷಿ ಪಡುವುದು,ಹೊಸಮನೆಯ ಕೆಲಸ ಮಾಡುವಾಗ ಅವನ ಅಣ್ಣಂದಿರು ಹಣವಂತರಾದರೂ ಕಷ್ಟದಲ್ಲಿ ಸಹಾಯ ಮಾಡದೇ ಇರುವುದು…ಇತ್ಯಾದಿಯಾಗಿ ಕಥೆಯಲ್ಲಿ ಸಹಜ ವಾಸ್ತವದ ವಿಷಯಗಳಿವೆ.
ಕೊನೆಯಲ್ಲಿ ಸಂತೋಷನ ಮನೆಗೆ ‘ತಾಯಿಯ ಋಣ’ ಎಂದು ಹೆಸರಿಡುವುದು ಹಾಗೂ ಅವನ ಮನದ ಭಾವಗಳು ಇಲ್ಲಿ ಚೆನ್ನಾಗಿ ಮೂಡಿದೆ. ಜನ್ಮ ಜನ್ಮಾಂತರದ ತಾಯಿಯ ಋಣವನ್ನು ಒಬ್ಬ ಮಗ ಹೇಗೆ ತೀರಿಸಿದ ಎನ್ನುವುದೇ ಈ ಕಥೆಯಲ್ಲಿ ಬರುವ ಪ್ರಧಾನವಾದ ಅಂಶವಾಗಿದೆ. ಇಲ್ಲಿ ಸಂತೋಷ ತಾಯಿಯನ್ನು ತಟ್ಟಿ ಮಲಗಿಸುವುದು, ಅಕ್ಕರೆಯಿಂದ ಊಟ ಮಾಡಿಸುವುದು, ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸುವುದು ಇವೆಲ್ಲಾ ಘಟನೆಗಳು ಓದುಗರ ಹೃದಯವನ್ನು ಆರ್ದ್ರಗೊಳಿಸುತ್ತದೆ.
ವಯಸ್ಸಾದವರ ಅಭದ್ರತೆಯ ಬದುಕು, ಕಾಯಿಲೆ,ನೋವು ಹಾಗೂ ಅಸಂಗತ ಮನುಷ್ಯ ಸಂಬಂಧದ ಬಿಕ್ಕಟ್ಟುಗಳು ಇಲ್ಲಿ ಹೆಪ್ಪುಗಟ್ಟಿದೆ. ಇಂತಹ ಒಳ್ಳೆಯ ಮಕ್ಕಳು ಎಲ್ಲರಿಗೂ ಸಿಗುವಂತಾದರೆ ಎಷ್ಟು ಚೆನ್ನ… ಎನಿಸಿತು. ವೃದ್ಧಾಪ್ಯದಲ್ಲಿ ಯಾರ್ಯಾರ ಅವಸ್ಥೆ ಹೇಗೋ ಏನೋ…ಎಂಬಂತೆ ಕಾಡುವ ಕಥೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ನೂಪುರಗಾನ’ ಕೃತಿ ಪರಿಚಯ
- ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು ಕೃತಿ ಪರಿಚಯ …
- ತಮ್ಮಣ್ಣ ಬೀಗಾರ ಅವರ ಕೃತಿ ಪರಿಚಯ
- ‘ಮೂಡು ಮಜಲು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
