ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು ಗುಡಾರ – (ಭಾಗ ೩)

ಮೂರು ದಶಕಗಳಿಗಿಂತ ಹೆಚ್ಚು ಕಾಲ ಒಂದು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ ನನ್ನ ಹತ್ತಿರ ಪದವಿ ಪ್ರಮಾಣ ಪತ್ರವೇ ಇಲ್ಲವೆಂಬುದು ಸತ್ಯ ಸಂಗತಿ.ನಾನು ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಮುಂದೇನಾಯಿತು ತಪ್ಪದೆ ಓದಿ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೋರಗಲ್ ವಿರೂಪಾಕ್ಷಪ್ಪ ಅವರ ಅಂಕಣ…

ಈಗೀಗ ಶಿಕ್ಷಣದ ಗುಣ ಮಟ್ಟ ಕುಸಿದು ಹೋಗಿರುವುದರಿಂದ ನಾವು ಗಳಿಸುವ ಪದವಿಗಳಿಗೆ ಯಾವುದೆ ಕಿಮ್ಮತ್ತು ಇಲ್ಲವೆಂದು ಹೇಳುತ್ತಾರೆ. ಆದರೆ ನಾನು ಗಳಿಸಿದ ಸ್ನಾತಕೋತ್ತರ ಪದವಿಯ ಪ್ರಮಾಣ ಪತ್ರವನ್ನು ಬರಿ ಒಂದು ಗುಡಾರಕ್ಕೆ ಕೊಟ್ಟು ಕೊಂಡು ಇನ್ನೊಂದು ಗುಡಾರ ಇಲ್ಲದಿದ್ದುದಕ್ಕೆ ಪದವಿಯನ್ನೇ ತೆಗೆದುಕೊಂಡಿಲ್ಲವೆಂದರೆ ನೀವು ನಂಬಲಿಕ್ಕಿಲ್ಲ. ಮೂರು ದಶಕಗಳಿಗಿಂತ ಹೆಚ್ಚು ಕಾಲ ಒಂದು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ ನನ್ನ ಹತ್ತಿರ ಪದವಿ ಪ್ರಮಾಣ ಪತ್ರವೇ ಇಲ್ಲವೆಂಬುದು ಸತ್ಯ ಸಂಗತಿ. ನಾನು ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ. ಆಗ ನಮ್ಮ ತಂದೆಯವರು ಅವರ ಅಣ್ಣ ತಮ್ಮಂದಿರೊಡನೆ ಬೇರೆಯಾಗಿ ಆಸ್ತಿಯ ಹಂಚಿಕೆ ಮಾಡಿಕೊಂಡರು. ‘ಸಾವಿರ ವರ್ಷವಿದ್ದರೂ ಸಾವು ತಪ್ಪಿದ್ದಲ್ಲ; ನೂರು ವರ್ಷವಿದ್ದರೂ ಬೇರೆಯಾಗುವುದು ತಪ್ಪಿದ್ದಲ್ಲ’ ಎಂದು ಗಾದೆ ಮಾತಿದೆ. ಅದಕ್ಕೆ ಒಂದು ದಿವಸ ಬೇರೆ ಬೇರೆ ಆದರು.

ಹೊಲ ಮನೆಗಳನ್ನು ಪಾಲು ಮಾಡುವಾಗ ಯಾವುದೇ ಜಗಳ ಬರಲಿಲ್ಲವಂತೆ. ಆದರೆ ಮನೆಯ ಸಾಮಾನುಗಳನ್ನು ಪಾಲು ಮಾಡುವಾಗ ಒಂದೊಂದು ಮೊಳೆ, ರಂಟೆ, ಕುಂಟೆಗಳಿಗೆ ರಾದ್ದಾಂತವಾಯಿತೆಂದು ನಮ್ಮ ತಂದೆ ಹೇಳಿದರು. ಪಾಲು ಮಾಡಿಕೊಂಡಾಗ ನಾನು ಹಾವೇರಿಯಲ್ಲಿದ್ದೆ.

ಎಲ್ಲಾ ಪಾಲು ಮುಗಿದ ಮೇಲೆ ನಮ್ಮ ಊರ ಜಾತ್ರೆ ಬಂತು. ಆ ಜಾತ್ರೆಯ ಸಮಯದಲ್ಲಿ ನಾವು ಪ್ರತಿ ವರ್ಷ ಹೋಗುತ್ತಿದ್ದಂತೆ, ಆ ವರ್ಷವೂ ಊರಿಗೆ ಹೋದೆವು. ನಮ್ಮ ಮನೆಯ ಪಕ್ಕದಲ್ಲಿಯೇ ನಮ್ಮ ಚಿಕ್ಕಪ್ಪನ ಮನೆ. ನಮಗೆ ಒಟ್ಟಿಗೆ ಮೂರು ಮನೆಗಳಿದ್ದುದರಿಂದ ಚಿಕ್ಕಪ್ಪ ತನಗೆ ಹೊಸ ಮನೆ ಬೇಕೆಂದು ಆರಿಸಿಕೊಂಡಿದ್ದ. ನಮ್ಮ ದೊಡ್ಡಪ್ಪನಿಗೆ ಮೂರು ಜನ ಮಕ್ಕಳಾದದ್ದರಿಂದ ಆತ ತನಗೆ ಏಳು ಅಂಕಣದ ದೊಡ್ಡ ಮನೆ ಬೇಕೆಂದು ಆಯ್ಕೆ ಮಾಡಿಕೊಂಡಿದ್ದ. ಉಳಿದದ್ದು ನಮ್ಮ ಅಜ್ಜ ಕಟ್ಟಿಸಿದ ಹಳೆಯ ಮನೆ. ಅದೇ ನಮ್ಮ ಪಾಲಿಗೆ ಬಂದಿತ್ತು. ಆಗ ಜಾತ್ರೆಗೆ ಹೋದ ಸಂದರ್ಭದಲ್ಲಿ ನನ್ನ ಪದವಿ, ಸ್ನಾತಕೋತ್ತರ ಪದವಿಯ ಪ್ರಮಾಣ ಪತ್ರಗಳ ಬಗ್ಗೆ ಕೇಳಿದೆ. ನಮ್ಮ ಚಿಕ್ಕಪ್ಪನ ಪಾಲಿಗೆ ಹೋದ ಹೊಸ ಮನೆಯ ಬಾಗಿಲ ಮುಂದೆ ತೂಗು ಹಾಕಿದ್ದ ಆ ಎಲ್ಲಾ ಪ್ರಮಾಣ ಪತ್ರಗಳು ಆತನ ಪಾಲಿಗೆ ಹೋಗಿ ಬಿಟ್ಟಿದ್ದವು. ಒಂದು ಪದವಿಯದ್ದು, ಒಂದು ಕನ್ನಡ ಎಂ.ಎ.ಯದ್ದು ಮತ್ತೊಂದು ಗಣಿತ ಎಂ.ಎ ಯದ್ದು ಹೀಗೆ ಎರಡು ಎಂ.ಎ ದ ಪ್ರಮಾಣ ಪತ್ರಗಳಲ್ಲದೆ, ಮೂರು ಹಿಂದಿ ಪರೀಕ್ಷೆಯ ಪ್ರಮಾಣ ಪತ್ರಗಳು ಹೀಗೆ ಆರೂ ಪ್ರಮಾಣ ಪತ್ರಗಳನ್ನು ನಮ್ಮ ಚಿಕ್ಕಪ್ಪ ತೆಗೆದುಕೊಂಡು ಬಿಟ್ಟಿದ್ದ. ಆ ಪ್ರಮಾಣ ಪತ್ರಗಳನ್ನು ಕೊಡಬೇಕೆಂದು ನಮ್ಮ ತಂದೆಯವರು ಕೇಳಿದರು.

ನಮ್ಮ ಚಿಕ್ಕಪ್ಪ ನಾಲ್ಕು ತನ್ನ ತರ್ಕವನ್ನು ಮುಂದಿಟ್ಟು ಆ ಪ್ರಮಾಣ ಪತ್ರ ಕೊಡಲಿಕ್ಕೆ ಬರುವುದಿಲ್ಲವೆಂದು ಹೇಳಿ ಬಿಟ್ಟಿದ್ದರು. ಆ ತರ್ಕವೇನು ಅಂದರೆ ನಾನು ನನ್ನ ಶಿಕ್ಷಣ ಮುಗಿಸಿದ್ದು ಮೂರೂ ಜನ ಅಣ್ಣ ತಮ್ಮಂದಿರು ಕೂಡಿ ಇದ್ದ ಸಂದರ್ಭದಲ್ಲಿ. ಆಗ ನನ್ನ ಶಿಕ್ಷಣಕ್ಕಾಗಿ ಖರ್ಚಾದ ಹಣದಲ್ಲಿ ಮೂರೂ ಜನರ ಪಾಲೂ ಸೇರುತ್ತದೆ. ಆದ್ದರಿಂದ ಎಲ್ಲಾ ಪ್ರಮಾಣ ಪತ್ರಗಳನ್ನು ಸಾರಾ ಸಗಟಾಗಿ ಕೊಡಲಿಕ್ಕೆ ಬರುವುದಿಲ್ಲ. ನ್ಯಾಯವಾಗಿ ಹೇಳಬೇಕೆಂದರೆ ಆ ಪ್ರಮಾಣ ಪತ್ರಗಳನ್ನು ಮೂರೂ ಜನರಲ್ಲಿ ಸರಿಯಾಗಿ ಹಂಚಬೇಕೆಂದು ನಮ್ಮ ಚಿಕ್ಕಪ್ಪ ಹೇಳಿದ. ನಾನು ಪ್ರಮಾಣ ಪತ್ರಗಳಿಗೆ ಹಾಕಿದ ಗ್ಲಾಸುಗಳನ್ನು ತೆಗೆದುಕೊಂಡು ಪ್ರಮಾಣ ಪತ್ರಗಳ ಹಾಳೆಗಳನ್ನು ಕೊಡಬೇಕೆಂದು ಹೇಳಿದೆ. ಅವರು ಅದಕ್ಕೆ ಒಪ್ಪಲಿಲ್ಲ. ಅಲ್ಲಿ ಒಟ್ಟು ಹದಿನೆಂಟು ಫೋಟೋಗಳಿದ್ದವು. ಅವುಗಳಲ್ಲಿ ಆರು ಸೆರ್ಟಿಫಿಕೇಟ್ ಇದ್ದವು. ಪಾಲು ಮಾಡುವುದು ಸುಲಭವಾಯಿತು. ಒಬ್ಬೊಬ್ಬರಿಗೆ ಆರು ಫೋಟೋಗಳು ಬರುತ್ತವೆ ಎಂದೂ ನಮ್ಮ ಚಿಕ್ಕಪ್ಪ ಎಲ್ಲರಿಗಿಂತಲೂ ಚಿಕ್ಕವನಾಗಿದ್ದುದರಿಂದ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಆತನಿಗೆ ಕೊಡಲಾಯಿತು. ನನ್ನ ಪದವಿ ಮತ್ತು ಸ್ನಾತಕೋತ್ತರ ಫೋಟೋಗಳು ಅಗಲವಿದ್ದು ಮತ್ತು ಉಳಿದೆಲ್ಲವುಗಳಿಗಿಂತ ದೊಡ್ಡವಿದ್ದವು. ನಮ್ಮ ಚಿಕ್ಕಪ್ಪ ದೊಡ್ಡವಿದ್ದ ನನ್ನ ಪದವಿ ಸರ್ಟಿಫಿಕೇಟುಗಳನ್ನು,ಹುಲಿಗೆಮ್ಮನ ಫೋಟೋ,ಗೋಕರ್ಣದ ಫೋಟೋ ಮುಂತಾಗಿ ಆರು ಫೋಟೋ ಅಯ್ದುಕೊಂಡು ಒಳಗೆ ತೆಗೆದುಕೊಂಡು ಹೋಗಿ ಬಿಟ್ಟ.

ಉಳಿದವುಗಳಲ್ಲಿ ಹಿಂದಿ ಪರೀಕ್ಷೆಯ ಮೂರು ಮತ್ತು ಕನ್ನಡ ಎಂ.ಎ ಪರೀಕ್ಷೆಯ ಒಂದು ಹೀಗೆ ನಾಲ್ಕು ಪ್ರಮಾಣ ಪತ್ರ , ಮತ್ತು ನಾನು ಪದವಿ ಪಡೆಯಲಿಕ್ಕೆ ಹೋದಾಗ ಗೌನು ಮತ್ತು ಹುಡ್ ಹಾಕಿ ತೆಗೆಯಿಸಿದ ಒಂದು ಫೋಟೋ ನಮಗೆ ಕೊಟ್ಟರು. ಆ ಗೌನು ಹಾಕಿ ತೆಗೆಯಿಸಿದ ಒಂದು ಫೋಟೋ ಮತ್ತು ಕನ್ನಡ ಎಂ.ಎ ದ ಪ್ರಮಾಣ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ‘ಉಳಿದವುಗಳನ್ನೆಲ್ಲಾ ಅವರಿಗೆಯೇ ಕೊಟ್ಟು ಬಿಡ್ರಿ’ ಎಂದೆ. ಯಾಕಂದರೆ ಆ ಹಿಂದಿ ಸರ್ಟಿಫಿಕೇಟ ತಗೆದುಕೊಂಡು ಏನು ಮಾಡಲಿ. ನಾನು ನೌಕರಿ ಮಾಡುತ್ತಿರುವುದರಿಂದ ಮುಂದೆ ಆ ಪ್ರಮಾಣ ಪತ್ರಗಳ ಅವಶ್ಯಕತೆ ಬೀಳಬಹುದಾದುದರಿಂದ ಅವುಗಳನ್ನು ಕೊಡಬೇಕೆಂದು ಕೇಳಿದರೆ ನಮ್ಮ ಚಿಕ್ಕಪ್ಪ ಹಠಕ್ಕೆ ಬಿದ್ದು ಕೊಡುವುದಿಲ್ಲವೆಂದು ಹೇಳಿ ಬಿಟ್ಟ. ಹೇಗಾದರೂ ಮಾಡಿ ಅವರಿಗೆ ತಿಳಿ ಹೇಳಿ ನನ್ನ ಎರಡು ಸರ್ಟಿಫಿಕೇಟುಗಳನ್ನು ಪಡೆಯಬೇಕೆಂದು ನಮ್ಮ ತಂದೆಯವರಿಗೆ ಹೇಳಿದೆ. ನಮ್ಮ ಚಿಕ್ಕಪ್ಪ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಅವರು ಇಷ್ಟೊಂದು ಹಠಕ್ಕೆ ಬಿದ್ದಿರುವುದಕ್ಕೆ ಒಂದು ಕಾರಣವಿತ್ತು. ನಮ್ಮ ಮನೆಯಲ್ಲಿ ಎರಡು ದೊಡ್ಡ ಗುಡಾರಗಳಿದ್ದವು. ಆ ಎರಡು ಗುಡಾರಗಳಲ್ಲಿ ಒಂದನ್ನೂ ನಮ್ಮ ಚಿಕ್ಕಪ್ಪನಿಗೆ ಕೊಡದೆ ಒಂದನ್ನು ನಾವೂ, ಇನ್ನೊಂದನ್ನು ನಮ್ಮ ದೊಡ್ಡಪ್ಪನವರೂ ತೆಗೆದುಕೊಂಡಿದ್ದರು. ಗುಡಾರಕ್ಕೆ ಪ್ರತಿಯಾಗಿ ಆತನಿಗೆ ಒಂದು ತಾಮ್ರದ ಹಂಡೆ ಮತ್ತು ಎರಡು ಕೊಡಲಿಗಳು ಹೋಗಿದ್ದವಂತೆ. ಆತ ಗುಡಾರವನ್ನು ಕೊಡಿರಿ ಎಂದು ಕೇಳಿದಾಗ ನಮ್ಮ ತಂದೆಯವರು ತಾಮ್ರದ ಹಂಡೆ ಮತ್ತು ಕೊಡಲಿ ಕೊಡು ಗುಡಾರ ತೆಗೆದುಕೋ ಎಂದು ಹೇಳಿದರಂತೆ. ದೊಡ್ಡ ತಾಮ್ರದ ಹಂಡೆ ಗುಡಾರಕ್ಕಿಂತಲೂ ಬೆಲೆಯುಳ್ಳದ್ದಾಗಿತ್ತು. ಅದಕ್ಕೆ ನಮ್ಮ ಚಿಕ್ಕಪ್ಪ ಗುಡಾರವನ್ನು ಬಿಟ್ಟು ಹಂಡೆ ಹೊತ್ತುಕೊಂಡು ಹೋಗಿ ಬಿಟ್ಟಿದ್ದ. ಗುಡಾರವನ್ನು ಕೊಟ್ಟರೆ ಸರ್ಟಿಫಿಕೇಟ್ ಕೊಡುತ್ತಾರೆ, ಗುಡಾರ ಕೊಟ್ಟು ಸರ್ಟಿಫಿಕೇಟ್ ತೆಗೆದುಕೊಂಡು ಬಿಡೋಣ ಎಂದು ನಮ್ಮ ತಂದೆಯವರಿಗೆ ಹೇಳಿದೆ. ಅದಕ್ಕೆ ನಮ್ಮ ತಂದೆಯವರು ಒಪ್ಪಿದರು. ಮರುದಿವಸ ‘ಗುಡಾರವನ್ನು ತೆಗೆದುಕೊಂಡು ನನ್ನ ಎರಡೂ ಸರ್ಟಿಫಿಕೇಟ್ ಕೊಟ್ಟು ಬಿಡ್ರಿ’ಎಂದೆ. ನಮ್ಮ ಚಿಕ್ಕಪ್ಪ ಬಲು ಹಠಮಾರಿಯಾಗಿದ್ದ. ‘ಒಂದು ಗುಡಾರಕ್ಕೆ ಎರಡು ಸರ್ತಿಪಿಕಲಾಟ್ ಹ್ಯಾಂಗ ಕೊಡಾಕ ಬರುತ್ತ. ಒಂದು ಸರ್ತಿಪಿಕಲಾಟ್ ಬೇಕಾದರ ತಗೋ’ ಎಂದ. ನಮ್ಮ ತಂದೆ ಅದಕ್ಕೆ ಒಪ್ಪಲಿಲ್ಲ. ‘ಒಂದು ಗುಡಾರಕ್ಕೆ ಪ್ರತಿಯಾಗಿ ಒಂದು ಹಂಡೆ ಮತ್ತು ಎರಡು ಕೊಡಲಿ ತೆಗೆದುಕೊಂಡಿದ್ದಿ ಅದಕ್ಕೆ ಎರಡೂ ಸರ್ಟಿಫಿಕೇಟು ಕೊಡು’ ಎಂದರು. ಅದಕ್ಕೆ ನಮ್ಮ ಚಿಕ್ಕಪ್ಪ ‘ಒಂದು ಕೊಡಲಿ, ಒಂದು ಸರ್ಟಿಫಿಕೇಟ್ ಕೊಡ್ತೀನಿ’ಎಂದ. ನನಗೆ ಆತನ ಕರಾರಿಗೆ ಒಪ್ಪದೆ ಗತ್ಯಂತರವಿರಲಿಲ್ಲ. ‘ಆಗಲಿ’ ಎಂದೆ.

ಮೊದಲು ಗುಡಾರಾ ತಗಂಬಾ’ಎಂದ . ನಾನು ಗುಡಾರಾ ತೆಗೆದುಕೊಂಡು ಹೋಗಿ ಅವರ ಮನೆಯ ಕಟ್ಟೆಯ ಮೇಲೆ ಹಾಕಿದೆ. ಆ ಮೇಲೆ ಒಳಗೆ ಹೋಗಿ ಆ ಎರಡೂ ಕಟ್ಟು ಹಾಕಿದ ಸರ್ಟಿಫಿಕೇಟುಗಳನ್ನು ಮತ್ತು ಎರಡು ಕೊಡಲಿಗಳನ್ನು ತಂದು ನನ್ನ ಮುಂದೆ ಹಿಡಿದು, ‘ಇದರಲ್ಲಿ ಒಂದು ಫೋಟೋ ಮತ್ತೆ ಒಂದು ಕೊಡಲಿ ಆಯ್ದುಕೋ’ ಎಂದ. “ನೀವು ಎರಡೂ ಕೊಡಲಿ ತಗೊಂಡು ಎರಡೂ ಸರ್ಟಿಫಿಕೇಟು ಕೊಟ್ಟು ಬಿಡ್ರಿ’ ಎಂದೆ. ‘ಇಲ್ಲಾ ಒಂದು ಸರ್ತಿಪಿಕಲಾಟ್ ತಗೊ,ಒಂದು ಕೊಡ್ಲಿ ತಗೋ’ಎಂದರು. ನಾನು ಎಂ.ಎ. (ಗಣಿತ)ದ ಸರ್ಟಿಫಿಕೇಟನ್ನು ಆಯ್ದುಕೊಂಡೆ. ನಮ್ಮ ತಂದೆ ಅದರಲ್ಲಿ ಒಂದು ಕೊಡಲಿಯನ್ನು ಆಯ್ದುಕೊಂಡರು. ನಾವು ಪಾಲು ಮಾಡಿಕೊಳ್ಳುವುದನ್ನು ನೋಡಿ ಜನರೆಲ್ಲಾ ನಕ್ಕಿದ್ದರು. ಎರಡು ವರ್ಷ ಕಷ್ಟ ಪಟ್ಟು ಅಭ್ಯಾಸ ಮಾಡಿ ಪಾಸಾದ ನನ್ನ ಎಂ.ಎ.(ಗಣಿತ)ದ ಸರ್ಟಿಫಿಕೇಟಿನ ಕಿಮ್ಮತ್ತು ಕೇವಲ ಒಂದು ಗುಡಾರದ ಬೆಲೆಗೆ ಸಮ ಎಂದು ಹಾವೇರಿಯ ನನ್ನ ಸಹೋದ್ಯೋಗಿಗಳಿಗೆ ಹೇಳಿದಾಗ ಎಲ್ಲರೂ ಮನ ಬಿಚ್ಚಿ ನಕ್ಕಿದ್ದರು. ಎರಡೆರಡು ಎಂ.ಎ ಮಾಡಿದ ನನ್ನ ಹತ್ತಿರ ಈಗಲೂ ಪದವಿಯ ಪ್ರಮಾಣ ಪತ್ರ ಇಲ್ಲ. ಅದಕ್ಕೆ ನನ್ನ ಡಿಗ್ರಿಯೇ ಬೋಗಸ್ ಎಂದು ಯಾರಾದರೂ ಹೇಳಿದರೆ ಅದಕ್ಕೆ ನನ್ನ ಹತ್ತಿರ ಉತ್ತರವಿಲ್ಲ.ಆದರೆ ಕಾಲೇಜಿನ ಕಟ್ಟೆಯನ್ನೇ ಹತ್ತದ ಹೆಬ್ಬೆಟ್ಟಿನ ನಮ್ಮ ಚಿಕ್ಕಪ್ಪ ಬಿ.ಎ. ಪಾಸು ಮಾಡಿದ್ದ.

ಬೇರೆ ಆಗಿ ಏಳೆಂಟು ವರ್ಷಗಳ ನಂತರ ನಮ್ಮ ಚಿಕ್ಕಪ್ಪ “ನಿನ್ನ ಸರ್ಟಿಫಿಕೇಟ್ ಒಯ್ಯಪ್ಪ” ಎಂದು ಹೇಳಿದ್ದರು. ಆದರೆ ಆ ಪಿಕಲಾಟವೇ ಬೇಡ ಬಿಡ್ರಿ ಎಂದು ನಾನು ತರಲಿಲ್ಲ. ನಮ್ಮ ಚಿಕ್ಕಪ್ಪ ತುಂಬಾ ಮುಗ್ಧ. ಆತನ ಮೇಲೆ ನನಗೆ ಸಿಟ್ಟು ಬರುವುದಿಲ್ಲ. ನನ್ನ ಈ ನೆನಪು ಅಕ್ಷರ ವಂಚಿತರಾದ ನಮ್ಮ ಹೈದರಾಬಾದ ಕರ್ನಾಟಕದ ಜನರನ್ನು ಪರಿಚಯಿಸುತ್ತದೆ.

“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಹಿಂದಿನ ಸಂಚಿಕೆಗಳು :


  • ಕೊರಗಲ್ಲ ವಿರೂಪಾಕ್ಷಪ್ಪ, ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW