ಎರಡೂವರೇ ತಿಂಗಳಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಬ್ಬರೂ, ಯಾವುದೇ ಹೆಚ್ಚಿನ ವ್ಯಾಯಾಮ ಇಲ್ಲದೇ, ಬಲಹೀನತೆಯೂ ಆಗದೇ, ತಲಾ 2 ಕೆಜಿ ದೇಹ ಭಾರ ಇಳಿಸಿದ್ದೇವೆ. ಅದು ಹೇಗೆ ಅಂತ ಗೊತ್ತಾ? ತಪ್ಪದೆ ಓದಿ…
ಈ ಬಾರಿ ಇಂಗ್ಲೆಂಡ್ ಗೆ ಬಂದಾಗಿನಿಂದ, ಆಗಾಗ ಹೊಸ ಹೊಸ ಆಹಾರ – ಸ್ವಾದ ಸಂಯೋಜನೆಯ ಪ್ರಯೋಗ ನಡೆಸಿದ್ದೇವೆ. ಸ್ವಾಹಾ ಪ್ರಮಾಣ ಕಡಿಮೆಯಾಗಬೇಕು, ಪೌಷ್ಟಿಕ ಮೌಲ್ಯ ಹೆಚ್ಚಿರಬೇಕು. ಇದೇ ಈ ಸಂಯೋಜನೆಗಳ ಉದ್ದೇಶ. ಇದು ಒಳ್ಳೇ ಕೆಲಸ ಮಾಡಿದೆ ಮಾರಾಯ್ರೆ. ಕಳೆದ ಸುಮಾರು ಎರಡೂವರೇ ತಿಂಗಳಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಬ್ಬರೂ, ಯಾವುದೇ ಹೆಚ್ಚಿನ ವ್ಯಾಯಾಮ ಇಲ್ಲದೇ, ಬಲಹೀನತೆಯೂ ಆಗದೇ, ತಲಾ 2 ಕೆಜಿ ದೇಹ ಭಾರ ಇಳಿಸಿದ್ದೇವೆ.
ನಿನ್ನೆ ರಾತ್ರಿಯ ಮೆನು :
ಸೂಪ್ :
ಮಿಶ್ರ ತರಕಾರಿಗಳು, ಮೆಕ್ಕೆ ಜೋಳ ಹಾಗೂ ಬೇಯಿಸಿದ ಮ್ಯಾಕರೋನಿ ಜೊತೆಗೆ ಯತೇಚ್ಛ ಬೆಳ್ಳುಳ್ಳಿ, ಹಸೀ ಶುಂಠಿ, ಕಾಳು ಮೆಣಸು ಹಾಕಿ ತಯಾರಿಸಿದ ಗರಂ ಸೂಪ್.
ಇದೊಂಥರಾ ಇಂಡಿಯನ್, ಚೈನೀಸ್, ಇಟಾಲಿಯನ್ ಹೈಬ್ರಿಡ್ ಸೂಪ್ !
ಪಿಜ್ಜಾ ( Pizza ) :
ಟೊಮೇಟೊ, ಬುಡ್ ಮೆಣಸಿನಕಾಯಿ, ಈರುಳ್ಳಿ, ಚೀವ್, ಮುಸುಕಿನ ಜೋಳ, ಅಣಬೆ, ಚೀಸ್ ಹಾಗೂ ಕ್ರೀಮ್ ಹಾಕಿ ಮಗಳು ತಯಾರಿಸಿದ ಪಿಜ್ಜಾ + ಕೆಂಪು ಸಿಹಿ ಮೆಣಸಿನಕಾಯಿ ಕೆಚ್ಚಪ್
ಜೊತೆಗೆ :
* ಹಲೋಮಿ ಫ್ರೈಸ್ (Halloumi Fries) – ಕೊಂಡು ತಂದವು.
ಇದು ಮೇಕೆ ಹಾಲಿನಿಂದ ತಯಾರಿಸಿದ ಅರೆ ಮೆದುವಾದ ಚೀಸ್ ಅನ್ನು ಕರಿದು ತಯಾರಿಸಿದ, ಮೇಲ್ನೋಟಕ್ಕೆ “ಫಿಶ್ ಫಿಲೆಟ್ ಫ್ರೈ” ನಂತೆ ಕಾಣುವ, ಮೂಲತಃ ಸೈಪ್ರಸ್ ದೇಶದ ಶಾಖಾಹಾರಿ ಖಾದ್ಯ. ಈ ಮೃದು ಗರಿ ಗರಿ ಫ್ರೈ, ಬಿಳೀ ಕ್ರೀಮ್ – ಚೀವ್ ಡಿಪ್ ನಲ್ಲಿ ಅದ್ದಿ ತಿನ್ನುತ್ತಿದ್ದರೆ, ಆಹಾ…. ಸ್ವಾದಾನಂದ. ಈ ಡಿಪ್, ಪಿಜ್ಜಾ ಜೊತೆಗೂ ಹೊಂದುತ್ತದೆ.
* ಗಾರ್ಲಿಕ್ ಡವ್ ಬಾಲ್ಸ್ ( Garlic dough balls) – ಕೊಂಡು ತಂದವು.
ಮೇಲ್ನೋಟಕ್ಕೆ ಓಂ ಬಿಸ್ಕೆಟ್ ಗಳಂತೆ ಕಾಣುವ ಆದರೆ ಬಲು ಮೆತ್ತಗಿರುವ ಹಾಗೂ ಘಮ ಘಮ ಬೆಳ್ಳುಳ್ಳಿ ಮಸಾಲೆ ತುಂಬಿರುವ ದುಂಡು ಮರಿ ಬನ್ ಗಳು. ಕೊನೆಗೆ ಸಮಾರೋಪ ಶಾಂತಿಗೆ ಒಂದರ್ಧ ಕಪ್ ಮೊಸರು. ಇವೆಲ್ಲವನ್ನೂ ಸವಿದೆವು ಎನ್ನುವಲ್ಲಿಗೆ ಒಂದು ಹಿತವಾದ, ಮಿತವಾದ ಇರುಳೂಟ ಸಂಪನ್ನವಾದುದು. ನೋಡಿ ಆನಂದಿಸಿ….
- ರವೀಂದ್ರ ಕೆ. ಆರ್. ಬ್ಯಾನ್ಬರಿ