ಬಂಗಾರಪ್ಪನವರು ಓರ್ವ ರಾಜಕೀಯ ಮುತ್ಸದ್ದಿಯಾಗಿದ್ದಂತೆಯೇ ಒಳ್ಳೆಯ ಸಂಗೀತಗಾರರಾಗಿದ್ದರು. ಒಬ್ಬ ವಾದ್ಯಗಾರರಾಗಿದ್ದರು, ಓರ್ವ ಒಳ್ಳೆಯ ಟೆನ್ನಿಸ್ ಪಟುವಾಗಿದ್ದರು. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಅವರು ಒಳ್ಳೆಯ ಸಂಘಟನಾ ಚತುರರಾಗಿದ್ದರು. ಅವರೊಂದಿಗೆ ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರು ಕಳೆದ ಅಮೂಲ್ಯ ಕ್ಷಣವನ್ನು “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ತಮ್ಮ ಅಂಕಣದ ಮೂಲಕ ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಓದಿ…
ನಮ್ಮ ರಾಜ್ಯದ ಮುಖ್ಯ ಮಂತ್ರಿಯಾಗಿ, ಕಾಂಗ್ರೆಸ್ ನೇತಾರನಾಗಿ ಕಾರ್ಯ ನಿರ್ವಹಿಸಿದ ಬಂಗಾರಪ್ಪ ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದರು. ಅವರೊಬ್ಬ ಒಳ್ಳೆಯ ಕಲಾವಿದರೆಂಬುದು ಬಹಳ ಜನರಿಗೆ ಗೊತ್ತಿರಲಿಲ್ಲ. ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳಲ್ಲಿಯೂ ಸಂಗೀತದ ಮೇಲಿನ ಪ್ರೀತಿಯನ್ನು ಉಳಿಸಿಕೊಂಡು ಬಂದಿದ್ದರು.
ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಚಿಂತಕರೂ, ಪತ್ರಕರ್ತರೂ ಆದ ಪಿ.ಲಂಕೇಶ ಅವರ ಜೊತೆಗೆ ಅವರನ್ನು ಕರೆಯಿಸಿದ್ದೆವು. ನಮ್ಮ ಕಾಲೇಜಿನ ಪ್ರಾಚಾರ್ಯರು ಅನಾರೋಗ್ಯದ ಕಾರಣ ತಿಂಗಳಾನುಗಟ್ಟಲೆ ರಜೆ ಹಾಕಿದ್ದರಿಂದ ವಾರ್ಷಿಕೋತ್ಸವದ ಉಸ್ತುವಾರಿ ನನ್ನ ಮೇಲೆ ಬಿದ್ದಿತ್ತು. ಪ್ರಾಚಾರ್ಯರಿದ್ದಾಲೇ ಆ ವರ್ಷದ ವಾರ್ಷಿಕೋತ್ಸವಕ್ಕೆ ಬಂಗಾರಪ್ಪನವರನ್ನು ಮತ್ತು ಸಾಹಿತಿ ಲಂಕೇಶ ಅವರನ್ನು ಕರೆಯಿಸಬೇಕೆಂದು ನಿರ್ಧಾರವಾಗಿ ಅವರಿಗೆ ಆಮಂತ್ರಣವನ್ನೂ ಕೊಟ್ಟಾಗಿತ್ತು. ವಿದ್ಯಾರ್ಥಿ ಸಮುದಾಯದಲ್ಲಿ ಒಂದಿಷ್ಟು ದ್ವೇಷ ವಾತಾವರಣವಿದ್ದುದರಿಂದ ಮತ್ತು ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯ ರಾಜಕಾರಣಿಗಳಾಗಿದ್ದ ಬಂಗಾರಪ್ಪನವರು ಬರುತ್ತಿದ್ದುದರಿಂದ ವಾರ್ಷಿಕೋತ್ಸವವನ್ನು ಬಿಗಿ ಪೋಲೀಸ ಬಂದೋಬಸ್ತಿನಲ್ಲಿ ಏರ್ಪಡಿಸಲಾಗಿತ್ತು.

ಬೆಳಗ್ಗೆ ಹಾವೇರಿಗೆ ಆಗಮಿಸಿದ ಬಂಗಾರಪ್ಪನವರು ಕಾಲೇಜಿನ ಬೆಳಗಿನ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಒಂದೆರಡು ಗಂಟೆಗಳ ವಿಶ್ರಾಂತಿಯ ನಂತರ ಮಧ್ಯಾಹ್ನನದ ಕಾರ್ಯಕ್ರಮಕ್ಕೆ ಬರಬೇಕಿತ್ತು. ಬಂಗಾರಪ್ಪನವರ ಅನುಯಾಯಿಗಳಲ್ಲೊಬ್ಬರಾಗಿದ್ದ ಹಾವೇರಿಯ ಸ್ವಾತಂತ್ರ ಹೋರಾಟಗಾರ ಪಂಚಪ್ಪ ವಳಸಂಗದ ಅವರು ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಕಾಂಗ್ರೆಸ್ಸ ಪಕ್ಷದ ನಾಯಕರೆಲ್ಲರನ್ನೂ ಪಂಚಪ್ಪನವರು ಊಟಕ್ಕೆ ಕರೆದಿದ್ದರು. ಕಾಲೇಜಿನ ಪ್ರಾಚಾರ್ಯರಿಗೂ ಊಟಕ್ಕೆ ಬರಬೇಕೆಂದು ಆಮಂತ್ರಣವಿತ್ತಿದ್ದರೂ, ಆ ರಾಜಕೀಯ ನಾಯಕರ ಜೊತೆಗೆ ಊಟಕ್ಕೆ ಕುಳಿತುಕೊಳ್ಳದೆ ಕೆಲವು ಅಧಿಕಾರಿಗಳೊಡನೆ ಮಾತಾಡುತ್ತಾ ಹೊರಗೆ ನಿಂತಿದ್ದೆ. ಅಷ್ಟರಲ್ಲಿ ಬಂಗಾರಪ್ಪನವರ ಆಪ್ತ ಕಾರ್ಯದರ್ಶಿ ಬಂದು ಅಣ್ಣಾ ಅವರು ನಿಮ್ಮನ್ನು ಊಟಕ್ಕೆ ಕರೆಯುತ್ತಿದ್ದಾರೆ ಎಂದು ಹೇಳಿದ. ನಾನು ದಡಬಡಿಸಿ ಒಳಗೆ ಹೋದೆ. ಬಂಗಾರಪ್ಪನವರು ತಮ್ಮ ಪಕ್ಕದಲ್ಲಿ ಒಂದು ಸ್ಥಳವನ್ನು ನನಗಾಗಿ ಕಾಯ್ದಿಟ್ಟುಕೊಂಡು ನನಗಾಗಿ ಕಾಯುತ್ತಿದ್ದರು. ಆದರೆ ನಾನು ಮಂತ್ರಿ ಮಹೋದಯರ ಹತ್ತಿರ ಹೋಗುತ್ತಿದ್ದಂತೆಯೇ, ಮತ್ಯಾರೋ ಹಿರಿಯ ಕಾಂಗ್ರೆಸ್ ನಾಯಕರು ಅವರ ಪಕ್ಕದಲ್ಲಿ ಖಾಲಿ ಇದ್ದ ಸ್ಥಳದಲ್ಲಿ ಬಂದು ಕುಳಿತುಕೊಂಡು ಬಿಟ್ಟರು. ಒಂದು ಕ್ಷಣ ಬಂಗಾರಪ್ಪನವರನ್ನು ನೋಡಿ ಹಿಂದಿರುಗಿ ಬರಲುಪಕ್ರಮಿಸಿದೆ. ಆಗ ಆಮಂತ್ರಣವಿಲ್ಲದ ಅತಿಥಿಯೊಬ್ಬರು ತಮ್ಮ ಪಕ್ಕದಲ್ಲಿ ಬಂದು ಕುಳಿತದ್ದು ಅವರಿಗೆ ಅರಿವಾಗಿ ಹೋಯಿತು. ಅವರು ಕೆಂಡ ಮಂಡಲವಾಗಿ ಬಿಟ್ಟರು. ಪಕ್ಕದಲ್ಲಿ ಕುಳಿತವರತ್ತ ತಿರುಗಿ “ಏಳ್ರಿಮ್ಯಾಲೆ ಈ ಸೀಟು ಇಷ್ಟೊತ್ತು ಪ್ರಿನ್ಸಿಪಾಲರ ಸಲುವಾಗಿ ನಾನು ರಿಸರ್ವ ಮಾಡಿ ಇಟ್ಟಿದ್ದೆ, ನೀವು ಹೇಳ್ದ ಕೇಳ್ದ ಬಂದು ಕುಂತು ಬಿಟ್ರೆಲ್ಲಾ. ಈಹೊತ್ತು ಒಂದು ದಿವಸದ ಮಟ್ಟಿಗೆ ನಾವು ಅವರ ಅತಿಥಿ. ಅವರ ನಮ್ಮನ್ನ ಇಲ್ಲಿಗೆ ಕರಿಸ್ಯಾರ.ಅವರನ್ನು ಬಿಟ್ಟು ನಾವು ಉಣ್ಣಾಕ ಆಗತ್ತಾ?”ಎಂದು ಪಕ್ಕದಲ್ಲಿ ಕುಳಿತ ಹಿರಿಯ ಕಾಂಗ್ರೆಸ್ ನಾಯಕರನ್ನು ಎಬ್ಬಿಸಿ ಆ ಸ್ಥಳದಲ್ಲಿ ನನ್ನನ್ನು ಕೂಡ್ರಿಸಿದರು. ಆ ಸ್ಥಳ ಬಿಟ್ಟು ಎದ್ದ ನಾಯಕರಿಗೆ ಸಿಟ್ಟು ಬಂದು ನನ್ನನ್ನು ಕೆಟ್ಟಗಣ್ಣಿನಿಂದ ನೋಡುತ್ತಾ ಎದ್ದು ಹೋದರು. “ಮೇಷ್ಟ್ರೇ! ಈ ಹೊತ್ತು ನಾವು ನಿಮ್ಮ ಗೆಸ್ಟು. ಈ ಊಟಾ ಪಂಚಪ್ಪನವರು ಹಾಕಿಸುತ್ತಿದ್ದರೂ,ಆಮಂತ್ರಣ ಕೊಟ್ಟು ಕರೆಯಿಸಿದವರು ನೀವು ಆಗಿರುವುದರಿಂದ ನೀವು ಹಾಕಿಸಿದಂತೆ. ಅದಕ್ಕ ಹೋಸ್ಟ ಆದ ನೀವು ನಮ್ಮ ಜೊತೆಗೆ ಕುಂತು ಉಣ್ಣಬೇಕು.ಹೌದಿಲ್ರಿ?” ಎಂದಾಗ ಒಂದು ಕಿರು ನಗೆಯೊಂದಿಗೆೆ ಸಮ್ಮತಿ ತೋರಿದೆ.
ಊಟಾ ಮಾಡುತ್ತಾ ಪಂಚಪ್ಪನವರು ಮಾಡಿಸಿದ್ದ ಕೊಬ್ಬರಿ ಹೋಳಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. “ಈ ಹೋಳಿಗೆ ಭಾಳ ರುಚಿ ಅದಾವು. ಇಷ್ಟು ಋಚಿ ಆಗಲಿಕ್ಕ ಕಾರಣ ಅಂದ್ರ ಕೊಬ್ರಿನ ತುಪ್ಪದಾಗ ಹರ‍್ದೀರಿ ಹೌದಿಲ್ಲ” ಎಂದು ತಮ್ಮ ಪಾಕ ಪ್ರಾವಿಣ್ಯತೆಯ ಬಗ್ಗೆ ಹೇಳುತ್ತಾ ಊಟಾ ಮಾಡಿದರು. ನಾವು ಊಟ ಮುಗಿಸಿ ಎದ್ದಾಗ ನಾಲ್ಕು ಗಂಟೆಯೇ ಆಗಿತ್ತು. ನಮ್ಮ ಕಾರ್ಯಕ್ರಮ ಶುರು ಆಗುವ ಸಮಯ. ಆರ್ಧ ಗಂಟೆಯ ವರೆಗೆ ನಮ್ಮ ಕಾಲೇಜಿನ ಬೇರೆ ಬೇರೆ ಭಾಗಗಳನ್ನು ತೋರಿಸಿ ನಮ್ಮ ವಿದ್ಯಾರ್ಥಿಗಳು ಚಿತ್ರಿಸಿದ ಚಿತ್ರಗಳನ್ನೂ,ರಂಗೋಲಿಗಳನ್ನು ತೋರಿಸಿದ ಮೇಲೆ ಕಾರ್ಯಕ್ರಮ ಚಾಲೂ ಆಗುವುದೆಂದರೆ ಐದು ಗಂಟೆಯೇ ಆಗುತ್ತದೆಯೆಂದು ಅವರನ್ನು ಕರೆದುಕೊಂಡು ಕಾಲೇಜಿಗೆ ನಡೆದುಕೊಂಡೆ ಬಂದೆವು.

ಫೋಟೋ ಕೃಪೆ : google
ಮಾರ್ಗ ಮಧ್ಯದ ಒಂದು ಕೋಣೆಯಲ್ಲಿ ನಮ್ಮ ವಿದ್ಯಾರ್ಥಿಗಳು ಅಂದು ಕಾರ್ಯಕ್ರಮದ ಆರಂಭದಲ್ಲಿ ತಾವು ಹಾಡಬೇಕಾಗಿದ್ದ ಪ್ರಾರ್ಥನಾ ಗೀತೆಯ ತಾಲೀಮು ಮಾಡುವುದರಲ್ಲಿ ತೊಡಗಿದ್ದುದು, ಮಂತ್ರಿ ಮಹೋದಯರ ಕಿವಿಗೆ ಬಿದ್ದು ಬಿಟ್ಟಿತು. ಬಂಗಾರಪ್ಪನವರು ನನ್ನ ಜೊತೆಗೆ ಬರುವುದನ್ನು ಬಿಟ್ಟು ಆ ಕೋಣೆಯನ್ನು ಹೊಕ್ಕು ಹಾಡುವ ಹುಡುಗ ಹುಡುಗೆಯರ ಜೊತೆ ಸಣ್ಣ ಮಕ್ಕಳಂತೆ ಕುಳಿತು ಬಿಟ್ಟರು. ಹಾಡುತ್ತಿದ್ದ ಹುಡುಗರಿಗೆ ಮುಜುಗರವಾದಂತೆನಿಸಿ, ಹಾಡುವುದನ್ನು ಬಿಟ್ಟು ಎದ್ದು ನಿಂತಾಗ “ ಏ! ಹಾಡ್ರಿ ನಿಮ್ಮ ಹಾಡು ಕೇಳಾಕ ಅಂತಾ ನಾವು ಬಂದ್ರ ನೀವು ಹಾಡ ಬಂದು ಮಾಡಿ ಬಿಟ್ರೆಲ್ಲಾ” ಎಂದು ಹಾಡುವಂತೆ ಪುಸುಲಾಯಿಸಿದರು. ನಮ್ಮ ವಿದ್ಯಾರ್ಥಿನಿಯೇ ಒಬ್ಬರು ಹಾರ್ಮೋನಿಯಂ ಬಾರಿಸುತ್ತಿದ್ದರು. ಬಂಗಾರಪ್ಪನವರು ತಮ್ಮ ಕೈಯಿಂದ ತಾಳ ಹಾಕಿ ಮೆಚ್ಚುಗೆ ಸೂಚಿಸುತ್ತಾ ತಲೆದೂಗಲಾರಂಭಿಸಿದರು. ಮತ್ತೊಂದು ನುಡಿ ಹೇಳಿ ಹುಡುಗರು ಹಾಡುವುದನ್ನು ಬಂದ್ ಮಾಡಿದಾಗ ಅಲ್ಲಿದ್ದ ಪೇಟಿಯನ್ನು ಮುಂದಕ್ಕೆ ಎಳೆದುಕೊಂಡು ಅದೇ ಹಾಡನ್ನು ತಾವು ಬಾರಿಸುತ್ತಾ, ಹೀಂಗ “ಬಾರಿಸಬೇಕು ನೀವು ಇಲ್ಲಿ ಬೇಸೂರ ಮಾಡ್ತೀರಿ” ಎಂದು ಪೇಟೆಯನ್ನು ಬಾರಿಸುವ ವಿದ್ಯಾರ್ಥಿನಿಗೆ ಪಾಠ ಮಾಡಲಾರಂಭಿಸಿದಾಗ ನಾವುಗಳೆಲ್ಲಾ ಬೆಕ್ಕಸ ಬೆರಗಾಗಿ ಬಿಟ್ಟೆವು. ಅವರು ಬಾರಿಸುತ್ತಿದ್ದ ನಾದಕ್ಕೆ ಮರುಳಾದ ಹುಡುಗ ಹುಡುಗೆಯರು ಮತ್ತೆ ಆ ಪ್ರಾರ್ಥನಾ ಪದ್ಯವನ್ನು ಹಾಡಲಾರಂಭಿಸಿದರು. ನಡು ನಡುವೆ ನಿಲ್ಲಿಸಿ ಅವರು ಎಲ್ಲಿ ತಪ್ಪುತ್ತಿದ್ದಾರೆ ಎಂಬುದನ್ನು ತಿಳಿಸಿಕೊಡುತ್ತಾ ಬಾರಿಸಲಾರಂಭಿಸಿದರು. ಕೋಣೆಯ ಹೊರಗಡೆಗೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಜಮಾಯಿಸಿ ಬಂಗಾರೆಪ್ಪನವರು ಹಾರ್ಮೋನಿಯಂ ಬಾರಿಸುವುದನ್ನು ನೋಡಿ ಆನಂದಿಸುತ್ತಿದ್ದರು.
ಪ್ರಾರ್ಥನೆಯ ಪದ್ಯ ಬಿಟ್ಟು ಅವರು ಬೇರೆ ಹಾಡನ್ನು ಬಾರಿಸಲಾರಂಭಿಸಿದಾಗ, ನಾನು ಅವರ ಪಕ್ಕಕ್ಕೆ ಹೋಗಿ ಟಾಯೀಮ್ ಆತು ದಯವಿಟ್ಟು ಮುಗಿಸಿ ಬಿಡ್ರಿ ಹೋಗೋಣ.” ಎಂದು ವಿನಂತಿಸಿದಾಗ, “ ಈ ಸಂಗೀತ ಅಂದ್ರಾ ಒಂದು ನಮೂನಿ ಸಾಂಕ್ರಾಮಿಕ ಸೆಳವು ನೋಡ್ರಿ. ನೀವು ಕಿವಿ ಮುಚ್ಚಿಗೊಂಡು ಹೋದರೂ ನಿಮ್ಮ ಕಿವಿಗೆ ಬಡ್ದು ನಿಮ್ಮನ್ನ ತನ್ನ ಕಡೆಗೆ ಸೆಳಕೊಂಡು ಕರಕೊಂಡು ಹೋಗುತ್ತ.” ಎನ್ನುತ್ತಾ ಎದ್ದು ನನ್ನನ್ನು ಹಿಂಬಾಲಿಸಿ ಬಂದರು. ಬಂಗಾರಪ್ಪನವರು ಓರ್ವ ರಾಜಕೀಯ ಮುತ್ಸದ್ದಿಯಾಗಿದ್ದಂತೆಯೇ ಒಳ್ಳೆಯ ಸಂಗೀತಗಾರರಾಗಿದ್ದರು. ಒಬ್ಬ ವಾದ್ಯಗಾರರಾಗಿದ್ದರು, ಓರ್ವ ಒಳ್ಳೆಯ ಟೆನ್ನಿಸ್ ಪಟುವಾಗಿದ್ದರು. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಅವರು ಒಳ್ಳೆಯ ಸಂಘಟನಾ ಚತುರರಾಗಿದ್ದರು.

“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ದೊಡ್ಡ ತಲೆಗೆ ಸಣ್ಣ ಮಾಲೆ – (ಭಾಗ ೬)
- ಉಪ್ಪಾರ ಮರಿಯಪ್ಪನ ಮಿಂಚುವ ಜಾತ್ರೆಯ ಅಂಗಿ – (ಭಾಗ ೭)
- ಹಾಲು ಕೊಟ್ಟವರ ನೆನಪಿನ ಲೋಕ – (ಭಾಗ ೮)
- ಬಬ್ರುವಾಹನನ ನಾಟಕದ ಕಥೆ – (ಭಾಗ ೯)
- ಬ್ಯಾಡಗಿ ಮೆಣಸಿನಕಾಯಿ ಮತ್ತು ಎಸ್.ಎಲ್.ಭೈರಪ್ಪನವರು – (ಭಾಗ ೧೦)
- ಸ್ವಾಮಿಗಳಿಗೆ ಸಾಷ್ಟಾಂಗ ಹಾಕದಿದ್ದರೆ ಶಾಪ ತಟ್ಟುತ್ತದೆಯೇ?
- ಕೊರಗಲ್ಲ ವಿರೂಪಾಕ್ಷಪ್ಪ – ಹಾವೇರಿ
