ಮನದ ಭಾವಗಳನ್ನು ತೆರೆದಿಡುವ ಸಾಲುಗಳು

ಶ್ರೀಮತಿ ರೂಪ ಜಿ ಎಂ ಅವರ ಎರಡನೇಯ ಕೃತಿ ‘ಚಿಪ್ಪಲಿ ಬಿರಿದ ಮುತ್ತುಗಳು’. ಇದು ಕವನ ಸಂಕಲನವಾಗಿದ್ದು, ಕವಿ ನಾರಾಯಣಸ್ವಾಮಿ .ವಿ ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮನದ ಚಿಪ್ಪಲಿ ಬಿರಿದ ಮುತ್ತುಗಳು
ಲೇಖಕರು : ರೂಪ ಜಿ ಎಂ
ಪ್ರಕಾರ : ಕವನ ಸಂಕಲನ

ಮನಸ್ಸು ಭಾವನೆಗಳ ಲೋಕ. ಆ ಭಾವನ ಲೋಕದಲ್ಲಿ ವಿರಹಿಸುವ ಜೀವಗಳು ತನ್ನೆದೆಯೊಳಗೆ ಮಿಡಿದ ಭಾವನೆಗಳನ್ನು ಹೊರ ಹಾಕಲು ಅಯ್ದುಕೊಂಡ ಕ್ಷೇತ್ರವೇ ಸಾಹಿತ್ಯಲೋಕ. ಇಲ್ಲಿ ಒಲವ ಮಿಡಿತಗಳನ್ನು ಸೃಷ್ಟಿಸಿ ಕವಿತೆ ಕಥೆ ಕಾದಂಬರಿಯ ಸಾಲುಗಳನ್ನಾಗಿ ರೂಪಿಸಿ ಓದುಗರ ಮಡಿಲಿಗೆ ಆಪಿ೯ಸಿದಾಗ, ಓದುಗ ಪ್ರಭು ಆ ಕೃತಿಯ ಬಗ್ಗೆ ಒಂದೇರಡು ಸಾಲುಗಳನ್ನು ಬರೆದಾಗ ಲೇಖಕನಿಗೆ/ಲೇಖಕಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ ಹಣ ಪ್ರಶಸ್ತಿ ಬಂದಾಗಲೂ ಕೂಡ ಅಷ್ಟು ಖುಷಿ ಸಿಗುವುದಿಲ್ಲ.

ಇತ್ತೀಚೆಗೆ ಬಹಳಷ್ಟು ಬರಹಗಾರರು ಪುಸ್ತಕಗಳನ್ನು ಹೊರತರುತ್ತಿದ್ದಾರೆ. ಪ್ರಬುದ್ಧತೆಯ ಪ್ರೌಢಿಮೆಯ ಬರಹವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅದರೂ ಖುಷಿ ಅನಿಸುತ್ತದೆ ಯಾಕೆಂದರೆ ನಮ್ಮ ಕನ್ನಡ ಸಾಹಿತ್ಯ ಬೆಳೆಯುತಿದೆ ಮತ್ತಷ್ಟು ವಿಸ್ತಾರವಾಗುತಿದೆ ಎಂಬುದು ನನ್ನ ವೈಯಕ್ತಿಕ ಭಾವನೆ.

ಇತ್ತೀಚೆಗೆ ಮಹಿಳಾ ಲೇಖಕರು ಕೂಡ ಮುಂದೆಲೇಗೆ ಬರುತ್ತಿದ್ದಾರೆ. ಮತ್ತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಹಿಳೆಯರು ಸಾಹಿತ್ಯವನ್ನು ಪ್ರವೃತ್ತಿಯಾಗಿ ಬಳಸಿಕೊಂಡು ತಮ್ಮನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಅವರಲ್ಲಿ ಶ್ರೀಮತಿ ರೂಪ ಜಿ ಎಂ ಪ್ರಮುಖರು.

ಕೆಳೆದ ತಿಂಗಳು ಬೆಂಗಳೂರಿನ ಒಂದು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಇವರ ಭಾಷಣವನ್ನು ಕೇಳಿ ಮಂತ್ರಮುಗ್ದನಾದೆ. ಅವರ ಮಾತುಗಳು ಶೈಲಿ, ಅವರ ಭಾಷಣದ ವಿಷಯ ನಿರೂಪಣೆ ಬಹಳಷ್ಟು ಸೊಗಸಾಗಿ ಮಾಡಿದರು. ಊಟದ ನಂತರ ಅವರಿಗೆ ನನ್ನ ಗಜಲ್ ಪುಸ್ತಕವನ್ನು ನೀಡಿದೆ ಅವರು ಕೂಡ ತಾನು ಬರೆದಂತಹ ಒಂದು ಕಾದಂಬರಿ ಮತ್ತು ಮನದ ಚಿಪ್ಪಲಿ ಬಿರಿದ ಮುತ್ತುಗಳು ಕವನಸಂಕಲನವನ್ನು ನೀಡಿದರು. ನನಗೆ ಯಾವುದಾದರೂ ಪ್ರೀತಿಯಿಂದ ಪುಸ್ತಕವನ್ನು ಕೊಟ್ಟಾಗ, ಅದನ್ನು ಒಂದು ಕಡೆ ಬಿಸಾಕದೇ ಪಕ್ಕದಲ್ಲಿಯೇ ಇಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಕಣ್ಣು ಆಡಿಸುತ್ತೇನೆ. ಅದಕ್ಕೆ ಕಾರಣ ಸಣ್ಣ ಬರಹಗಾರನಾಗಿ ನಾನು ಕೂಡ ಇತ್ತೀಚೆಗೆ ಈ ಸಾಹಿತ್ಯಲೋಕವನ್ನು ಪ್ರವೇಶಿಸಿದ್ದೇನೆ. ಒಂದು ಪುಸ್ತಕ ಹೊರತರಲು ಬರಹಗಾರ ಬಹಳಷ್ಟು ಶ್ರಮವನ್ನು ವ್ಯಯಿಸಿರುತ್ತೇವೆ. ನಾನು ಕೂಡ ಪುಸ್ತಕ ಹೊರತಂದಾಗ ಶ್ರಮ ಎಷ್ಟು ಅಂತ ಅಥ೯ವಾಯಿತು. ಅದಕ್ಕೆ ಆ ಶ್ರಮ ವ್ಯಥ೯ವಾಗಬಾರದು ಅಂತ ಯಾರೇ ಪುಸ್ತಕ ಕೊಟ್ಟರು ಅವರಿಗೆ ನಿಧಾನವಾಗಿಯಾದರೂ ಪ್ರತಿಕ್ರಿಯಿಸುತ್ತೇನೆ.

ಶ್ರೀಮತಿ ರೂಪ ಜಿ ಎಂ ರವರು ರಾಮನಗರ ಜಿಲ್ಲೆಯ ಹೊಸದುಗ೯ ಗ್ರಾಮದವರು. ಇವರು ಸ್ನಾತಕೋತ್ತರ ಪದವೀಧರೆ. ಬೆಂಗಳೂರಿನ ಕಿಡ್ಸ ಕುಟೀರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯವನ್ನು ನಿವ೯ಹಿಸುತ್ತಿದ್ದಾರೆ.

ಉತ್ತಮ ಭಾಷಣಗಾತಿ೯ಯಾದ ಇವರು ಕವನ ಕಥೆ ಕಾದಂಬರಿ ಚುಟುಕು ಲೇಖನಗಳನ್ನು ಬರೆಯುತ್ತಿದ್ದಾರೆ. ನಾಟಕಗಳನ್ನು ಕೂಡ ಇವರು ಬರೆದಿದ್ದಾರೆ ತಮ್ಮ ಮೊದಲ ಚೊಚ್ಚಲ ಕಾದಂಬರಿಯನ್ನು 2021 ರಲ್ಲಿ ಲೋಕಾರ್ಪಣೆ ಮಾಡಿದ ಇವರು 2022 ರಲ್ಲಿ ಮನದ ಚಿಪ್ಪಲಿ ಬಿರಿದ ಮುತ್ತುಗಳು ಎಂಬ ಕವನಸಂಕಲನವನ್ನು ಸೃಷ್ಟಿ ಪಬ್ಲಿಕೇಶನ್ಸ್ ಮುಖಾಂತರ ಬಿಡುಗಡೆ ಮಾಡಿ ಓದುಗರ ಮನವನ್ನು ತಲುಪಿದ್ದಾರೆ.

ಮನದ ಚಿಪ್ಪಲಿ ಬಿರಿದ ಮುತ್ತುಗಳು ಕವನಸಂಕಲನಕ್ಕೆ ನಮ್ಮೆಲ್ಲಾರ ಪ್ರೀತಿಯ ಗೀತಾರಚನಾಕಾರರಾದ ವಿ. ನಾಗೇಂದ್ರ ಪ್ರಸಾದ್ ಚಲನಚಿತ್ರ ಸಾಹಿತಿ ಇವರು ಮುನ್ನುಡಿಯನ್ನು ಬರೆದಿದ್ದು, ಈ ಕೃತಿಯು ರೂಪ ಜಿ ಎಂ ರವರ ಲೇಖನಿಯಿಂದ ಪಡಿಮೂಡಿದ ಭಾವದ ಮುತ್ತುಗಳ ಅನಾವರಣ. ಸಾಹಿತ್ಯವನ್ನು ಧ್ಯಾನಿಸುವ, ಬದುಕನ್ನು ಪ್ರೀತಿಸುವ, ಹೊಸ ಗ್ರಹಿಕೆಯಿಂದ ಓದುಗರನ್ನು ಬೆರಗುಗೊಳಿಸುವ, ಶಕ್ತಿಯುಳ್ಳ ಕವಯಿತ್ರಿ ಮಾತ್ರವಲ್ಲ, ಕಾದಂಬರಿಗಾತಿ೯ಯೂ ಕೂಡ, ಮನದ ಚಿಪ್ಪಲಿ ಬಿರಿದ ಮುತ್ತುಗಳು ಈ ಕವನಸಂಕಲನ ಮನ-ಮನಗಳನ್ನು, ಮನೆ ಮನೆಗಳನ್ನು ತಲುಪಲಿ ಇವರ ಸಾಹಿತ್ಯ ಕೃಷಿ ಈಗೆ ಮುಂದುವರಿಯಲಿ ಎಂದು ಹೇಳಿ ಶುಭ ಹಾರೈಸಿದ್ದಾರೆ.

ಈ ಕೃತಿಯಲ್ಲಿ ಕವಯತ್ರಿಯನ್ನು ಪರಿಚಯ ಮಾಡಿರುವ ದೇ ನಾರಾಯಣಸ್ವಾಮಿ ಚನ್ನಪಟ್ಟಣ ಇವರು ಹೇಳುತ್ತಾರೆ. ರೂಪ ಜಿ ಎಂ ರವರು ಯಾರನ್ನು ಕಡೆಗಣಿಸದೇ ಬರಿದಾದ ಎದೆಯಲ್ಲೂ ಪ್ರೀತಿಯ ಬೀಜವನ್ನು ಬಿತ್ತಿ, ಮಾನವೀಯತೆಯ ಬೆಳೆ ಬೆಳೆಯುವ ಮಾನವತಾವಾದಿ. ಇವರು ಕರುನಾಡಿನ ಸಾಹಿತ್ಯ ಸ್ವಾರಸ್ವತ ಲೋಕದ ಭರವಸೆಯ ಆಶಾಕಿರಣವೆಂದು ಹೇಳಿ ಶುಭ ಹಾರೈಸಿದ್ದಾರೆ.

ಮನದ ಚಿಪ್ಪಲಿ ಬಿರಿದ ಮುತ್ತುಗಳು ಕವನಸಂಕಲನಕ್ಕೆ ಬೆನ್ನುಡಿಯನ್ನು ಹೆಸರಾಂತ ಚಲನಚಿತ್ರ ಗೀತಾರಚನೆಕಾರರಾದ ಹೃದಯ ಶಿವ ಇವರು ಬರೆದಿದ್ದು ಈ ಕೃತಿಯಲ್ಲಿ ವಿಭಿನ್ನ ವಸ್ತುಗಳನ್ನು ಕಾವ್ಯವಾಗಿಸುವ ಇವರ ಉತ್ಸಾಹ ಮತ್ತು ಶ್ರದ್ಧೆ ನನ್ನ ಗಮನ ಸೆಳೆಯಿತು. ಭಾವಗೀತೆಗಳನ್ನು ರಚಿಸುವ ಎಲ್ಲಾ ಗುಣಗಳು ಇವರ ಬರವಣಿಗೆ ಇದೆ. ಇವರ ಅಧ್ಯಯನಶೀಲ ಗುಣ ಮತ್ತು ಶ್ರದ್ಧೆ ಹೀಗೆ ಮುಂದುವರಿದರೆ ಹಾಗೂ ಕಾವ್ಯ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಂಡರೇ ಇವರಿಂದ ಉತ್ಕೃಷ್ಟ ಕವಿತೆಗಳು ಹೊರಬರಲಿವೆ ಎಂದು ಹೇಳಿ ಶುಭ ಹಾರೈಸಿದ್ದಾರೆ.

ಈ ಮನದ ಚಿಪ್ಪಲಿ ಬಿರಿದ ಮುತ್ತುಗಳು ಕವನಸಂಕಲನದ ಒಳಹೊಕ್ಕಾಗ ಇಲ್ಲಿ ಕವಿತೆಗಳಿವೆ, ಹನಿಗವನಗಳಿವೆ, ಚುಟುಕುಗಳಿವೆ, ದೀರ್ಘವಾದ ಪದ್ಯಗಳು ಇವೆ. ಈ ಕವನ ಸಂಕಲನದೊಳಗೆ ವೈವಿಧ್ಯಮಯ ವಿಷಯಗಳು ಕವಿತೆಯಾಗಿ ಕವಯಿತ್ರಿಯ ಮನದಿಂದ ಭಾವಲಹರಿಗಳಾಗಿ ಹೊರ ಹೊಮ್ಮಿವೆ.

 

ಈ ಕೃತಿಯನ್ನು ಓದುವಾಗ ನನ್ನ ಗಮನವನ್ನು ಸೆಳೆದ ಒಂದಷ್ಟು ಕವಿತೆಗಳನ್ನು ಇಲ್ಲಿ ಪರಿಚಯ ಮಾಡಲು ಹೊರಟಿರುವೆ. ಕರುನಾಡ ವೈಭವ ಎಂಬ ಶೀರ್ಷಿಕೆಯ ಕವಿತೆಯಲ್ಲಿ ಕನ್ನಡ ನಾಡನ್ನು ವಣಿ೯ಸುತ್ತಾ ಸಾಗುತ್ತಾರೆ.

ನನ್ನ ನೆಲ ಕಪ್ಪು ಮಣ್ಣಿನ ನಾಡು ಬಂಗಾರವನ್ನು ಬೆಳೆದ ಈ ಮಣ್ಣು ಚಿನ್ನದ ನಾಡು. ಹಸಿರು ತುಂಬಿರುವ ಈ ಕಾಡಿನಲ್ಲಿ ಶ್ರೀಗಂಧವನ್ನು ಬೆಳೆಯುತ್ತಾ, ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತಹ ಗೂಡಾಗಿದೆ ನನ್ನ ನಾಡು. ಹಂಪೆಯಲ್ಲಿ ಶಿಲೆಗಳ ನತ೯ನವಿದೆ ಕಲ್ಲು ಕಲ್ಲಿನಲ್ಲಿ ಸಂಗೀತಾ ಕೇಳಿಸುತ್ತಾ, ಕವಿಗಳ ಕಾವ್ಯದಲ್ಲಿ ಕನ್ನಡವು ಸಿಂಚನವಾಗುತಿದೆ. ಎಂದು ಹೇಳಿ ಮುಂದುವರಿಯುತ್ತಾ ನಮ್ಮ ನಾಡು ಕನ್ನಡ ನಾಡಿನ ಜಿಲ್ಲೆಗಳು ಯಾವುದಕ್ಕೆ ಪ್ರಸಿಯಾಗಿವೆ. ಈ ನಾಡಿನಲ್ಲಿ ಯಾವುದೇ ಜಾತಿಭೇದವಿಲ್ಲದೆ ಭಾಷೆಯೊಂದೆ ಎಲ್ಲಾರೊಳಗಿನ ಭಾವವೂ ಕೂಡ ಒಂದೇ ಆಗಿದೆ ಈ ಕನ್ನಡದ ನೆಲದಲ್ಲಿ ಅಂತ ಕನ್ನಡ ನಾಡಿನ ಹಿರಿಮೆಯನ್ನು ಬಹು ಸೊಗಸಾಗಿ ವಣಿ೯ಸಿದ್ದಾರೆ.

ಬೆಳ್ಳಕ್ಕಿ ಹಾರ್ಯವೋ ಬಾನಕ್ಕಿ ಹಾಡ್ಯಾವೋ ಶೀರ್ಷಿಕೆಯಲ್ಲಿ ಬರೆದ ಕವಿತೆಯು ಜಾನಪದ ಶೈಲಿಯಲ್ಲಿ ಬರೆದ ಕವಿತೆಯಾಗಿದ್ದು, ಒಬ್ಬ ಹಳ್ಳಿಯ ರೈತ ಮಹಿಳೆಯು ತನ್ನ ದೊರೆಯಾದಂತಹ ಗಂಡ ಹೊಲದಲ್ಲಿ ದುಡಿಯುವಾಗ ಎನೇಲ್ಲಾ ಕಷ್ಟವನ್ನು ಪಡುತ್ತಾನೆ ಎಂಬ ಭಾವ ಊಹಿಸಿಕೊಂಡು ಆಗಸದಲ್ಲಿ ಹಕ್ಕಿಗಳು ಹಾರುತ್ತಿವೆ,ಆಕಾಶದಲ್ಲಿ ಹಾರುವ ಹಕ್ಕಿಗಳು ಹಾಡುತ್ತಾ ಸಾಗುತಿವೆ. ನನ್ನ ಗಂಡ ಹೊಲದಲ್ಲಿ ದುಡಿಯುತ್ತಿರುವಾಗ ಅವನ ಹಣೆಯ ಮೇಲೆ ಉಕ್ಕುತ್ತಿರುವ ಬೆವರ ಹನಿಗಳು ಮುತ್ತುಗಳಂತೆ ಸುರಿದು ನನ್ನ ಸೆರಗಿನ ತುದಿಯನ್ನು ಬಯಸುತ್ತಿವೆ. ಹೊಲದಲ್ಲಿ ದುಡಿದು ದುಡಿದು ನನ್ನ ಗಂಡ ದಣಿವಾಗಿ ಮಧ್ಯಾಹ್ನದ ಹೊತ್ತಿಗೆ ಅವನ ಹೊಟ್ಟೆ ಹಸಿಯುತ್ತಿದೆ. ಆಗ ನಾನು ಬರುವ ದಾರಿಯನ್ನೆ ನೋಡುತ್ತಿರುತ್ತಾನೆ. ನಾನು ಬುಟ್ಟಿಯಲ್ಲಿ ತೆಗೆದುಕೊಂಡು ಹೋಗುತ್ತಿರುವ ಆ ರೊಟ್ಟಿಯನ್ನೆ ಅವನು ಬಯಸುತ್ತಿದ್ದಾನೆ. ಕೊನೆಗೆ ದಣಿದ ದೇಹವನ್ನು ತಂಪು ಮಾಡಿಕೊಳ್ಳಲು ಮಜ್ಜಿಗೆಯನ್ನು ಕೇಳುತ್ತಾನೆ. ನಂತರ ಕವಯಿತ್ರಿ ಈ ಕವಿತೆಯ ಸಾಲುಗಳನ್ನು ಪ್ರೇಮದ ಕಡೆಗೆ ತೆಗೆದುಕೊಂಡು ಹೋಗಿದ್ದಾರೆ. ಗಂಡನ ಊಟವಾದ ನಂತರ ಅವನು ಮುತ್ತಿಗಾಗಿ ಬೇಡುತ್ತಾನೆ. ಅವನು ಖುಷಿಯಿಂದ ನಗುತ್ತಾ ಹೇಳುತ್ತಾನೆ. ಹೇ ಮಡದಿ ನಿನಗಿಂತ ಚೆಲುವ್ಯಾರೆ ಎಂದು ತನ್ನ ಪ್ರೀತಿಯ ಮಡದಿಗೆ ಒಂದು ಉಪದೇಶ ಕೂಡ ಮಾಡುತ್ತಾನೆ. ನೀನು ಬಿಸಿಲಿನಲ್ಲಿ ಬರಬೇಡ, ಬಂದರೂ ತಲೆಯ ಮೇಲೆ ಸೆರಗನ್ನು ಹೊದ್ದುಕೋ ಯಾಕೆಂದರೆ ಆ ಸೂರ್ಯ ಕೂಡ ನಿನ್ನ ನಗುವನ್ನು ಕದ್ದುಬಿಟ್ಟಾನು.ನಿನ್ನನ್ನು ನೋಡಿ ಜಾರಿ ಬಿದ್ದಾನು ಅವನು ಅಂತ ನನ್ನ ಗಂಡ ಪ್ರೀತಿಯಿಂದ ಹೊಗಳಿದಾ ಅಂತ ಕವಯಿತ್ರಿ ಬಹಳಷ್ಟು ಸೊಗಸಾಗಿ ಜಾನಪದ ಗೀತೆಯಾಗಿ ಹಾಡಲು ಬರುವಂಥಹ ಸಾಲುಗಳಾಗಿ ಈ ಕವಿತೆಯನ್ನು ಬರೆದಿದ್ದಾರೆ.

ಅಮ್ಮ ಎಂಬ ಶೀರ್ಷಿಕೆಯಲ್ಲಿ ಬರೆದ ಕವಿತೆಯು ತಾಯಿಯ ಹೃದಯ ಒಳ ಅಂತರಂಗವನ್ನು ಈ ಬದುಕಿನ ಭಾವಗಳನ್ನು ತೆರೆದಿಡುವ ಸಾಲುಗಳು ಕವಿತೆಯಲ್ಲಿ ತೆರೆದಿಟ್ಟಿದ್ದಾರೆ. ತಾಯಿ ತನ್ನ ಹೃದಯದೊಳಗೆ ಒಂದು ಗುಡಿಯನ್ನು ಸ್ಥಾಪಿಸಿಕೊಂಡು ಪೂಜೆಯ ನಿರೀಕ್ಷೆಯನ್ನೆ ಮಾಡದ ದೇವರ ಪ್ರತಿಬಿಂಬ ಅಮ್ಮ. ಯಾವುದನ್ನು ನಾವು ಕೇಳದೆಯೇ ತನ್ನ ಮಕ್ಕಳ ಮನಸ್ಥಿತಿಯನ್ನು ಅಥ೯ಮಾಡಿಕೊಂಡು ಅವರ ಇಷ್ಟಕಷ್ಟಗಳನ್ನು ಪೂರೈಸುತ್ತಾಳೆ. ನಮ್ಮಿಂದ ಯಾವುದೇ ಪ್ರತಿಫಲವನ್ನು ಬಯಸದೇ ಯಾವುದೇ ನಿರೀಕ್ಷೆಯಿಲ್ಲದೆ ಕಾಣುವ ದೇವರ ರೂಪವು ಇವಳು. ಬೆಳಗ್ಗೆಯಿಂದ ಸಂಜೆಯವರೆಗೂ ದುಡಿದು ತನ್ನ ದೇಹದೊಳಗೆ ಬೆವರು ಬತ್ತಿ ಹೋದರೂ ಕೂಡ, ಬಾಡದ ಹೂವಿನಂತೆ ಸದಾ ನಗುವನ್ನೆ ಬೀರುತ್ತಾ ತನ್ನ ಮಗುವಿಗಾಗಿ ಅರಳುವ ಮಲ್ಲಿಗೆಯ ಹೂವಿನಂಥವಳು ತಾಯಿ ಎಂದು ಅದ್ಬುತವಾದ ಸಾಲುಗಳು ಮೂಡಿಸಿ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಂದು ಕವಿತೆ ಅಪ್ಪ ಶೀರ್ಷಿಕೆಯಲ್ಲಿ ಬರೆದ ಕವಿತೆಯು ಅಪ್ಪನ ಜೀವನಸಾರದ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ. ಅಪ್ಪ ಅಮ್ಮನಿಗಿಂತ ವಿಭಿನ್ನ ಅವನು ಒಂದು ಮಗುವನ್ನು ಹೊತ್ತಾವನು ಅಲ್ಲಾ ಹೆತ್ತವನು ಅಲ್ಲ, ಹೊಟ್ಟೆಯೊಳಗೆ ಹೊರಲಾರದ ಭಾರವನ್ನು ಹೊರುತ್ತಾ ನಿಟ್ಟುಸಿರು ಬಿಟ್ಟವನು ಕೂಡ ಅಲ್ಲಾ, ಒಂಬತ್ತು ತಿಂಗಳು ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಮಗುವಿನ ಕಾಲುಗಳಿಂದ ಒದೆಸಿಕೊಂಡವನು ಅಲ್ಲಾ.ಅದರೂ ಕೂಡ ಆ ಮಗುವಿನೊಂದಿಗೆ ಬಣ್ಣಿಸಲಾಗದಂತಹ ಸಂಬಂಧವಿದೆ. ಅಪ್ಪ ತನ್ನ ಮಕ್ಕಳಿಗಾಗಿ ಕುಟುಂಬಕ್ಕಾಗಿ ತನ್ನ ಜೀವವನ್ನೆ ಸೆವೆಸುತ್ತಾನೆ. ತನ್ನ ಅಸೆಗಳನ್ನೆ ಮರೆತು, ಮಾಸಿದ ಬಟ್ಟೆಯಲ್ಲಿ ಹರಿದೋಗಿರುವ ಚಪ್ಪಲಿಯನ್ನು ತೊಟ್ಟು, ತನ್ನ ಹೊಟ್ಟೆಯ ಹಸಿವನ್ನು ಪೂತಿ೯ಯಾಗಿ ತುಂಬಿಸಿಕೊಳ್ಳದೇ ದಿನ ಪೂತಿ೯ ತನ್ನ ಮಕ್ಕಳ ಅಸೆಗಳನ್ನು ಪೂರೈಸಲು ದುಡಿಯುತ್ತಾನೆ. ಮಗುವನ್ನು ಕಣ್ಣಿಗೆ ಧೂಳು ಸೋಕದ ರೆಪ್ಪೆಯಾಗಿ ಕಾಯುತ್ತಾನೆ. ಎಂದು ಮನೋಜ್ಞವಾಗಿ ಅಪ್ಪನ ಅಂತರಂಗವನ್ನು ಈ ಕವಿತೆಯಲ್ಲಿ ತೆರೆದಿಡುತ್ತಾರೆ ಕವಯತ್ರಿ.

ಮಾನವತೆ ಎಂಬ ಶೀರ್ಷಿಕೆಯ ಕವನದಲ್ಲಿ ಬುದ್ದನ ನೀತಿಸಾರವನ್ನು ತಿಳಿಸಿದಂತೆ ತೋರುತ್ತದೆ. ಕಸವಿರದೇ ಇರದಂತ ಮನೆ ಯಾವುದಿದೆ? ಮನದಲ್ಲಿ ಕಸದಂತಹ ಕೊಳಕನ್ನು ತುಂಬಿಕೊಂಡಿರದ ಮನಸ್ಸು ಯಾವುದಿದೆ? ಅದರೆ ಮನೆಯನ್ನು, ಮನವನ್ನು ಗುಡಿಸಿ ಸ್ವಚ್ಛವಾಗಿಸುವ ಕೆಲಸ ಮಾತ್ರ ನಮ್ಮದಾಗಿರುತ್ತದೆ. ಮನದಲ್ಲಿರುವ ಕೆಟ್ಟ ಭಾವನೆಗಳನ್ನು ಮನದೊಳಗೆ ಉಕ್ಕುವ ಕೋಪವನ್ನು ನಿಯಂತ್ರಿಸಿ, ಮಾನವತೆಯ ಬಟ್ಟೆಯನ್ನುಡು ಎನ್ನುತ್ತಾ ಸಾಗುವ ಕವಯಿತ್ರಿ ಮೋಸ, ಮೋಹ, ಕಾಮ, ಕ್ರೋಧ ಎಲ್ಲವನ್ನೂ ತೊರೆದು ಮನುಷತ್ವದ ರಥವನ್ನು ಎಳೆಯುತ್ತಾ ಮಾನವತ್ವದ ಮನುಷ್ಯನಾಗಿ ಒಳಿತು ಬಯಸು ಅಂತ ಮನುಷ್ಯ ಮನದೊಳಗೆ ಆಡಗಿರುವ ದಾಹಗಳ ಬಗ್ಗೆ ಬಹು ಸೊಗಸಾಗಿ ಕವಿತೆಯನ್ನು ಬರೆದಿದ್ದಾರೆ.

ಈ ಭೂಮಿಯ ಮೇಲೆ ವಾಸಿಸುವ ಮನುಷ್ಯನೆಂಬ ಜೀವಿಯೊಳಗೆ ಬಹಳಷ್ಟು ಕೆಟ್ಟ ಗುಣಗಳಿವೆ ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಅಂದರೆ ಅವನನ್ನು ತೆಗಳಿ ಹೀಯಾಳಿಸಿ ಹಿಂದಕ್ಕೆ ಎಳೆಯಲು ಪ್ರಯತ್ನ ಪಡುತ್ತಾರೆ. ಅಂತವರ ಮನಸ್ಥಿತಿಯನ್ನು ಅರಿತ ಕವಯಿತ್ರಿ ಕುಗ್ಗದಿರು ಮನವೇ ಶೀರ್ಷಿಕೆಯ ಕವಿತೆಯಲ್ಲಿ ಮನುಜನಿಗೆ ಸಂದೇಶವನ್ನು ಕೊಡುತ್ತಾ ಸಾಗುತ್ತಾರೆ. ಈ ನಿನ್ನ ಬದುಕಿನ ಸಿಂಹಾಸನಕ್ಕೆ ನೀನೆ ರಾಜನು, ನಿಮ್ಮನ್ನು ಹೀಯಾಳಿಸುವವರ ಮುಂದೆ ಎದೆ ಹಿಗ್ಗಿಸಿ ನಡೆಯುತ್ತಿರು ನಿನ್ನನ್ನು ಕೊಂಕು ಮಾತುಗಳಿಂದ ಅಣಕಿಸುವವರು ಕುಗ್ಗಿ ಹೋಗಬೇಕು ಅದರೆ ಒಳ್ಳೆಯ ಸದ್ಗುಣರ ಮುಂದೆ ಹಿರಿಯರ ಮುಂದೆ ನಡೆಯುವಾಗ ಅವರಿಗೆ ವಿಧೇಯತೆ ತೋರುವುದನ್ನು ಮರೆಯಬೇಡ, ನೀನು ನಡೆಯುತ್ತಿರುವ ದಾರಿಯು ಒಳ್ಳೆಯದೆಂದು ನಿನ್ನ ಆತ್ಮ ಒಪ್ಪಿದರೆ ಸಾಕು, ಮಿಕ್ಕಿದೆಲ್ಲಾವನು ಭಗವಂತನಿಗೆ ಒಪ್ಪಿಸಿ ಬಿಡು.ಯಾವುದಕ್ಕೂ ಕುಗ್ಗದೇ ಜಗ್ಗದೇ ನಡೆಯುತಿರು ನಿನಗೂ ಒಳ್ಳೆಯ ಕಾಲವು ಬರಬಹುದೆಂದು ಮನುಜನಿಗೆ ಒಳ್ಳೆಯ ನೀತಿಯ ಮಾತುಗಳನ್ನು ಕವಯಿತ್ರಿ ಈ ಕವಿತೆಯಲ್ಲಿ ನುಡಿದಿದ್ದಾರೆ.

ಈ ಕವನ ಸಂಕಲನದ ವಿಶೇಷವೆಂದರೆ ಪ್ರತಿಯೊಂದು ಕವಿತೆಗೂ ಕೂಡ ಕವಿತೆಯ ಒಳಅಂತರಾಳವನ್ನು ಸೂಚಿಸುವ ಚಿತ್ರಗಳಿಂದ ಕವಿತೆಗಳು ಮತ್ತಷ್ಟು ಆಕ೯ಷಿಸುತ್ತವೆ. ಮನದ ಚಿಪ್ಪಲಿ ಬಿರಿದ ಮುತ್ತುಗಳು ಕವನಸಂಕಲನ ಕವಿತೆಗಳಲ್ಲಿ ಬರೀ ಪ್ರಕೃತಿ ನಾಡು ನುಡಿ ನೀತಿಪಾಠಗಳೇ ಅಲ್ಲದೆ ಪ್ರೀತಿ ಪ್ರೇಮದ ಕವಿತೆಗಳು ಕೂಡ ಓದುಗರ ಮನಸ್ಸನ್ನು ಸೆಳೆಯುತ್ತವೆ ಎಂಬುದು ನನ್ನ ಭಾವನೆ.

ಪ್ರೇಮಾಪರಾಧಿ ಕವನದ ಶೀರ್ಷಿಕೆಯಲ್ಲಿ ನಿನ್ನ ಬಾಹುಗಳನ್ನು ಕೊಳವಾಗಿಸಿ ಒಮ್ಮೆ ನನ್ನನ್ನು ಬಂಧಿಸಿ ಬಿಡು ಆ ಪ್ರೀತಿಯ ಬಂಧನದಲ್ಲಿಯೇ ನನಗೆ ಜೀವನಪೂತಿ೯ ನಿನ್ನ ಜೊತೆಯಲ್ಲಿಯೇ ಇರುವಂತೆ ನನಗೆ ಜೀವಾವಧಿ ಶಿಕ್ಷೆಯನ್ನು ನೀಡು. ನಿನ್ನ ಹೃದಯವನ್ನು ಕದ್ದು ನಾನು ತಪ್ಪು ಮಾಡಿದ್ದೇನೆ. ಈ ಹುಚ್ಚು ಮನಸ್ಸು ನಿನ್ನ ಪ್ರೀತಿಯನ್ನು ಕದ್ದಿದೆ. ನನ್ನನ್ನು ನಿನ್ನ ಹೃದಯದೊಳಗೆ ಬಂಧಿಸಲು ಕರೆಯೋಲೆಯನ್ನು ಕೊಟ್ಟಿದ್ದೇನೆ. ಭಾವಗಳೆಂಬ ಬೇಡಿಗಳನ್ನು ನನಗೆ ತೊಡಿಸಿ ಬಂಧಿಸಿಕೊಂಡು ಬಿಡು ನೀನೆ ನನ್ನ ಜೀವನ ಎಂದು ಪ್ರೇಮಿಯ ಮನದ ತಳಮಳದ ಹಿಂಗಿತವನ್ನು ಸುಂದರವಾದ ಕವಿತೆಯಾಗಿ ಹೆಣೆದಿದ್ದಾರೆ ಕವಯಿತ್ರಿ.

ಹೇಗೆ ಒಲಸಿಕೊಳ್ಳಲಿ ನಾ ನಿನ್ನ ? ಎಂಬ ಕವನದ ಶೀರ್ಷಿಕೆಯಲ್ಲಿ ನಾನು ನಿನ್ನ ಮನವನ್ನು ಯಾರ ರೀತಿಯಲ್ಲಿ ಒಲಸಿಕೊಳ್ಳಲಿ ಯಾವ ಹೂವಿನ ಪರಿಮಳವು ನಿನ್ನ ಮನಸ್ಸು ಸೆಳೆಯುತ್ತದೆ ಎಂಬುದು ನನಗೆ ಅರಿವಾಗುತ್ತಿಲ್ಲ.. ಯಾವ ಮಂತ್ರವನು ಪಠಿಸಿದರೆ ಯಾವ ಯಾವ ಫಲಪುಷ್ಪಗಳಿಂದ ನಿನಗೆ ನೈವೇದ್ಯವನು ಮಾಡಿ ಅಪಿ೯ಸಬೇಕೇಂದು ನನಗೆ ತಿಳಿಯುತ್ತಿಲ್ಲ. ನನ್ನೆದೆಯನ್ನು ಕಾಡುತ್ತಿರುವ ಈ ಪ್ರೀತಿ ನಿದ್ರೆಯನ್ನು ಕೂಡ ಮರೆಸುತ್ತಿದೆ. ನಿನ್ನ ನೆನಪಿನಿಂದ ಚಳಿಯಲ್ಲೂ ಕೂಡ ರೋಮಗಳು ನವಿರೇಳುತಿವೆ. ಚಳಿಗೆ ದೇಹವು ನಿನ್ನ ಉಸಿರಿನ ಬಿಸಿಯನ್ನು ಬಯಸುತಿದೆ. ಬಯಕೆಗಳಿಂದ ಈ ದೇಹವು ನಲುಗಿ ಹೋಗಿ ಕುಲುಮೆಯಂತೆ ಕಾವು ಸೋಕುತಿದೆ ಎಂದು ಶೃಂಗಾರ ರಸಮಯ ಕಾವ್ಯವನ್ನು ಬರೆದಿದ್ದಾರೆ ಕವಯಿತ್ರಿ.
ಈ ಮನದ ಚಿಪ್ಪಲಿ ಬಿರಿದ ಮುತ್ತುಗಳು ಕವನಸಂಕಲನದಲ್ಲಿ ಮರಣಿಸಿ ಮತ್ತೆ ಜನಿಸುವೆನು, ಯಾವ ರವಿಯ ಕಿರಣ, ಕುಣಿಯುತಿದೆ ಮನದ ಕಡಲು, ಒಳ್ಳೆಯದನ್ನು ಹುಡುಕು, ಪ್ರೇಮರಾಗ ಹಾಡಿದಾಗ, ಸ್ನೇಹ , ನನ್ನವನ ಪ್ರೀತಿ ಇನ್ನೂ ಮುಂತಾದ ಕವಿತೆಗಳು ಸೊಗಸಾಗಿ ಮೂಡಿ ಬಂದಿದ್ದರೂ ಎಲ್ಲಾ ಕವಿತೆಗಳನ್ನು ಪರಿಚಯ ಮಾಡಿದರೆ ಕೃತಿಯು ತನ್ನ ಘಮಲನ್ನು ಕಳೆದುಕೊಳ್ಳಬಹುದು ಎಂಬ ಭಾವನೆಯಿಂದ ಹೆಚಾಗಿ ಬರೆಯದೇ ಪ್ರತಿಯೊಬ್ಬ ಓದುಗನು ಬರಹಗಾರನು ಈ ಕೃತಿಯನ್ನು ಒಮ್ಮೆ ಓದಿ ಕವಯಿತ್ರಿಯನ್ನು ಪ್ರೋತ್ಸಾಹಿಸಬೇಕು ಯಾಕೆಂದರೆ ಈ ಕೃತಿಯಲ್ಲಿ ಕವಿತೆಗಳನ್ನು ಓದಿದಾಗ ಮನದೊಳಗೆ ಉಲ್ಲಾಸ ಮೂಡಿಸಿ ಒಂದೊಂದು ಸಂದೇಶವನ್ನು ನೀಡುತ್ತಾ ಸಾಗುತ್ತವೆ.

ಶ್ರೀಮತಿ ರೂಪ ಜಿ ಎಂ ರವರ ಎರಡನೇಯ ಕೃತಿಯಾಗಿದ್ದು ಎಲ್ಲಾರೂ ಈ ಕೃತಿಯನ್ನು ಕೊಂಡು ಓದಿ ಸಾಹಿತಿಗಳನ್ನು ಬೆಳೆಸಬೇಕಾಗಿದೆ. ಓದುಗರ ಪ್ರೋತ್ಸಾಹ ಅವರೊಳಗೆ ಮತ್ತಷ್ಟು ಹುರುಪನ್ನು ತುಂಬಿ ಇನ್ನಷ್ಟು ಉತ್ಕೃಷ್ಟವಾದ ಬರಹಗಳನ್ನು ಅವರು ಹೊರತರಬಹುದು.

ತಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.


  • ನಾರಾಯಣಸ್ವಾಮಿ.ವಿ – ಮಾಸ್ತಿ ಕೋಲಾರ ಜಿಲ್ಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW