ನೋಡು ನೋಡುತ್ತಿದ್ದ ಹಾಗೇ ರಾಮಮಂದಿರ ನಿರ್ಮಾಣವಾಯಿತು … ಹಂಪೆಯಲ್ಲಿ ! ಎಂತಹ ಅಧ್ಭುತವಾದ ಕಲಾಕೃತಿ. ರಾಮಾಯಣದ ದೃಷ್ಯಾವಳಿಗಳನ್ನು ಹೊರಮೈಯಲ್ಲಿ ಹೊದ್ದುಕೊಂಡು ವಿಜೃಂಭಣೆಯಿಂದ ಮೆರೆಯುತ್ತಿರುವ ಈ ವಿಶಾಲವಾದ ದೇವಾಲಯವನ್ನು ‘ಹಜಾರ ರಾಮಮಂದಿರ’ ಎಂದು ಕರೆಯುತ್ತಾರೆ, ವಿಂಗ್ ಕಮಾಂಡರ್ ಸುದರ್ಶನ ಅವರ ತಪ್ಪದೆ ಮುಂದೆ ಓದಿ…
ಸಾವಿರ ರಾಮರ ಚಿತ್ರಣವಿದೆ ಇಲ್ಲಿ. ದಶರಥ ಮಹರಾಜರ ಪುತ್ರ ಕಾಮೇಷ್ಟಿಯಾಗದಿಂದ ಪ್ರಾರಂಭವಾಗಿ, ಶ್ರೀರಾಮ ಸೀತೆ ಲಕ್ಷ್ಮಣರು ವನವಾಸ ಪೂರ್ಣಗೊಳಿಸಿ ಆಯೋಧ್ಯೆಗೆ ಮರಳಿ ಬರುವವರೆಗೂ ಒಂದೊಂದಾಗಿ ನೋಡುತ್ತಿದ್ದರೆ ನಾವು ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಮಾಡಿದೆವು ಎನ್ನುವ ಅರಿವೇ ಆಗುವುದಿಲ್ಲ, ಅಂತಹ ಅಪ್ರತಿಮ ಶಿಲ್ಪಕಲೆಯ ಸರಣಿ.
ಮುಂಚೆ ಹಿರಿಯ ದೇವರಾಯರು ಕಟ್ಟಿಸಿದ್ದ ರಾಮ ದೇವಸ್ಥಾನವನ್ನು ರಾಜಮನೆತನದ ಪೂಜೆಗೆಂದೇ ಚಿಕ್ಕದೊಂದು ಗರ್ಭಗುಡಿ, ಅರ್ಧ ಮಂಟಪ ಮಾತ್ರವಷ್ಟೇ ಇತ್ತು. ನಮ್ಮ ತಂದೆ ರಾಮಾಶಾಸ್ತ್ರಿಗಳು ಇಲ್ಲಿಯ ಅರ್ಚಕರು. ವಿಜಯ ವಿಠ್ಠಲನ ದೇವಸ್ಥಾನದ ಉಧ್ಗಾಟನೆಯ ಸಮಯದಲ್ಲಿ ಈ ರಾಮ ಮಂದಿರವನ್ನು ವಿಸ್ತಾರಗೊಳಿಸಿ, ಪ್ರಜೆಗಳಿಗೆಲ್ಲರಿಗೂ ಮುಕ್ತವಾಗಿ ಪ್ರವೇಶ ಕಲ್ಪಿಸುವ ಮಾತುಕತೆಗಳು ನಡೆಯುತ್ತಿವೆ ಎಂದು ನಮ್ಮ ತಂದೆಯವರು ಹೇಳಿದಾಗ ನಮಗೆಲ್ಲಾ ಸಂತಸದ ಜೊತೆಗೇ ದೊಡ್ಡ ದೇವಸ್ಥಾನದ ಜವಾಬ್ದಾರಿಗಳನ್ನು ಹೊರುವ ಉತ್ಸಾಹ. ಈ ದೇವಸ್ಥಾನದ ಆವರಣದಲ್ಲೇ ಬೆಳೆದ ನಮಗೆ ಇದು ಮನೆಯೇ ಆಗಿತ್ತು. ಈಗ ಅದು ಹಂಪೆಯಲ್ಲೇ ಅತಿ ದೊಡ್ಡ ಪ್ರಾಂಗಣವಿರುವ ದೇವಾಲಯವಾಗುತ್ತಿದೆ, ಸಾರ್ವಜನಿಕರಿಗೆ ಮುಕ್ತವಾಗಿ ದರ್ಶನಕ್ಕೆ ಅವಕಾಶವಿದೆ, ದಿನವೂ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಸುವ ಆದೇಶವೂ ಇದೆಯಂತೆ. ನಮ್ಮ ತಂದೆಯವರು, ಇತರ ಅರ್ಚಕರು ಮತ್ತು ಅವರ ಮಕ್ಕಳಿಗೆ ಇದೆಲ್ಲದರ ನಿರ್ವಹಣೆಯ ಬಗ್ಗೆ ಚರ್ಚೆ ಮಾಡಿ ಜವಾಬ್ದಾರಿಗಳನ್ನು ಅವರರವರ ಸಾಮರ್ಥ್ಯ ಮತ್ತು ಅಭಿರುಚಿಗೆ ತಕ್ಕಂತೆ ಕೆಲಸಗಳನ್ನು ಹಂಚಿದರು.

ನನಗೆ, ಪೂಜೆಗೆ ಪಂಚಾಮೃತ, ನೈವೇದ್ಯವನ್ನು ಸಿಧ್ಧಪಡಿಸುವ ಹೊಣೆ. ಬರೀ ಗಂಡುಮಕ್ಕಳೇ ಇದ್ದ ಸಂಸಾರ ನಮ್ಮದು, ಹಾಗಾಗಿ ಮನೆಕೆಲಸಗಳಲ್ಲಿ, ಅಡುಗೆಮನೆಯಲ್ಲಿ ನಮ್ಮ ತಾಯಿಗೆ ಸಹಾಯ ಮಾಡುತ್ತಿದ್ದೆವು. ಚಿಕ್ಕಂದಿನಿಂದಲೇ ನನಗೆ ಅಡುಗೆ ಮಾಡಿ, ಬಡಿಸುವುದರಲ್ಲಿ ಏನೋ ಒಂತರಾ ಆನಂದ, ಹೀಗಾಗಿ ನನಗ ಇಷ್ಟವಾದ ಕೆಲಸವೇ ಸಿಕ್ಕಿತು.
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ದೇವಸ್ಥಾನದ ಉಧ್ಗಾಟನೆ ವಿಷೇಶವಾದ ಪೂಜೆ, ಹೋಮ ಹವನಗಳಿಂದಿಗೆ ಪ್ರಾರಂಭವಾಯಿತು. ನಿರಂತರವಾಗಿ ಒಂಬತ್ತು ದಿನಗಳ ವಸಂತ ನವರಾತ್ರಿಯ ಸಂಭ್ರಮವನ್ನು ನೋಡಲು ವಿಜಯನಗರ ಸಾಮ್ರಾಜ್ಯದ ಜನಸ್ತೋಮ ಕಿಕ್ಕಿರಿದು ನೆರೆದಿತ್ತು.
ದೇವಸ್ಥಾನದ ಸುತ್ತಲೂ ಎತ್ತರದ ಪ್ರಾಕಾರವನ್ನು ಕಟ್ಟಿ ಅದರ ಹೊರಭಾಗದಲ್ಲಿ ಕುದುರೆಗಳ, ಸೈನಿಕರ, ಶಾರ್ದೂಲಗಳ ಕೆತ್ತನೆ ಮಾಡಲಾಗಿದೆ. ಪ್ರಾಕಾರದೊಳಗೆ ಆಗ್ನೇಯ ದಿಕ್ಕಿನಲ್ಲಿ ಒಂದು ಪಾಕಶಾಲೆಯನ್ನು ನಿರ್ಮಿಸಲಾಗಿದೆ, ಅದೇ ನನ್ನ ಕರ್ಮಕ್ಷೇತ್ರ. ಹಿಂದಿನ ರಾತ್ರಿಯೇ ನೆಲವನ್ನು ಗುಡಿಸಿ, ಸಗಣಿ ಸಾರಿಸಿ, ರಂಗೋಲಿ ಹಾಕಿ ಹೊರಟು ಹೋಗಿದ್ದರು ನಮ್ಮಮ್ಮ. ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ‘ ಗಂಗೇಚ ಯಮುನೇಚೈವ…’ ಎನ್ನುತ್ತಾ ಹತ್ತಿರದ ಕಾಲುವೆಯಲ್ಲಿ ಮಿಂದು ದೇವಾಲಯದೊಳಗೆ ಬರುವಷ್ಟರಲ್ಲೇ ನಮ್ಮ ತಂದೆ ಪೂಜೆಗೆ ಪೂರ್ವ ಸಿಧ್ಧತೆ ಮಾಡಿ ಮುಗಿಸಿದ್ದರು. ಪ್ರಾತಃಕಾಲದ ಪೂಜೆಗೆ ಕೃಷ್ಣದೇವರಾಯರು ರಾಣಿಯರೊಂದಿಗೆ ಮತ್ತು ವ್ಯಾಸತೀರ್ಥರು, ಪುರಂದರದಾಸರೊಂದಿಗೆ ಬರುತ್ತಿದ್ದಾರೆ.. ಬೇಗ ಪಂಚಾಮೃತ ಸಿಧ್ಧಪಡಿಸಲು ಹೇಳಿದರು.

ಪಾಕಶಾಲೆಗೆ ಬಂದು ದೀಪಹಚ್ಚಿ, ಗಂಧದಕಡ್ಡಿಗಳನ್ನು ಹಚ್ಚಿ ಸ್ವಲ್ಪ ಹೊತ್ತು ಧ್ಯಾನಕ್ಕೆ ಕುಳಿತುಕೊಂಡೆ. ಸುತ್ತಲೂ ಪಂಚಾಮೃತಕ್ಕೆ ಬೇಕಾದ ಹಾಲು, ಮೊಸರು, ತುಪ್ಪ, ಜೇನು ಮತ್ತು ಗೋಮೂತ್ರದ ಪಾತ್ರೆಗಳು. ಪುರಂದರದಾಸರು ಬರುತ್ತಿದ್ದಾರೆಂಬ ವಿಷಯ ಮನಸ್ಸಿನಲ್ಲಿತ್ತು, ಧ್ಯಾನ ಮಾಡುವಾಗ ಅವರ ಕೀರ್ತನೆಗಳೊಂದರ ಸಾಲುಗಳು ನೆನಪಿಗೆ ಬಂದವು….
ಅಪರಾಧ ಹತ್ತಕ್ಕೆ ಅಭಿಷೇಕ ಉದಕ
ಅಪರಾಧ ನೂರಕ್ಕೆ ಕ್ಷೀರ ಹರಿಗೆ
ಅಪರಾಧ ಸಹಸ್ರಕ್ಕೆಹಾಲು ಮೊಸರು ಕಾಣೋ ಅಪರಾಧ ಲಕ್ಕ್ಷಕ್ಕೆ ಜೇನು
ಅಪರಾಧ ಹತ್ತು ಲಕ್ಷಕ್ಕೆ ಬಲುಪರಿ ಕ್ಷೀರ
ಅಪರಾಧ ಕ್ಷಮೆಗೆ ಅಚ್ಚ ತೆಂಗಿನ ಹಾಲು
ಅಪರಾಧ ಕೋಟಿಗೆ ಸ್ವಚ್ಛ ಜಲ
ಅಪರಾಧ ಅನಂತ ಕ್ಷಮೆಗೆ ಗಂಧೋದಕ
ಉಪಮೆರಹಿತ ನಮ್ಮ ಪುರಂದರ ವಿಠಲಗೆ ಶಾಂತ ಮನವಯ್ಯ ಶಾಂತವಾಕ್ಯ…
ಮನ ಶಾಂತವಾಯಿತು…
ಪಂಚಾಮೃತದ ಪಧಾರ್ಥಗಳನ್ನು ಒಂದೊಂದಾಗಿ ಬೆರೆಸುತ್ತಾ ಹೋದೆ. ಅಷ್ಟರಲ್ಲೇ ದೇವಸ್ಥಾನದ ಘಂಟೆಯ ದನಿ ಭಕ್ತರ ಆಗಮನವನ್ನು ಸೂಚಿಸಿತು. ಕೃಷ್ಣದೇವರಾಯರು ದೇವಸ್ಥಾನಗಳಿಗೆ ಬರುವಾಗ ಯಾವ ರೀತಿಯ ಘೋಷಣೆಗಳಾಗಲೀ..ಬಹುಪರಾಕಿನ ಶಬ್ದಗಳನ್ನಾಗಲೀ ಮಾಡುವಹಾಗಿಲ್ಲವಂತೆ. ಒಬ್ಬ ಸಾಮಾನ್ಯ ಭಕ್ತನ ಹಾಗೆ ನಡೆದುಕೊಂಡು ಬಂದು ನೆಲದ ಮೇಲೆ ಕೂರುತ್ತಾರಂತೆ. ನಾನು ಪಂಚಾಮೃತದ ಪಂಚಪಾತ್ರೆ ಹಿಡಿದು ಪ್ರವೇಶಿಸಿದಾಗ ಅವರಾಗಲೇ ಬಂದು ಕುಳಿತಿದ್ದರು. ಪಕ್ಕದಲ್ಲೇ ವ್ಯಾಸತೀರ್ಥರು. ಪುರಂದರದಾಸರು ಏಕತಾನದ ತಂತಿಯನ್ನು ಬಿಗಿಗೊಳಿಸಿ ಹಾಡಲು ಶುರುಮಾಡಿದರು..
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ..
ವಿಠ್ಠಲನಾಮದ ತುಪ್ಪಕ್ಕೇ ಬಾಯಿ ಚಪ್ಪರಿಸಿರೋ…
ಮೈ ಪುಳಕಗೊಂಡಿತು, ಪುರಂದರದಾಸರು ಅವರೇ ರಚಿಸಿ ಅವರೇ ಹಾಡುತ್ತಿರುವರು. ಇದನ್ನು ಪ್ರತ್ಯಕ್ಷವಾಗಿ ನೋಡುವ ಸೌಭಾಗ್ಯ ಕರುಣಿಸಿದ ಶ್ರೀರಾಮನಿಗೆ ಮನಸ್ಸಿನಲ್ಲೇ ವಂದಿಸಿದೆ. ಕೃಷ್ಣದೇವರಾಯರೂ ಸಹ ಭಕ್ತಿ ಪರವಶರಾಗಿ, ಕೈಜೋಡಿಸಿ ತಲೆದೂಗುತ್ತಿದ್ದರು. ಇನ್ನೂ ನೈವೇದ್ಯದ ಸಿಧ್ಧತೆಯನ್ನು ಮಾಡಿಕೊಳ್ಳಬೇಕು ಎಂದು ನಾನು ಪಾಕಶಾಲೆಗೆ ಮನಸ್ಸಿಲ್ಲದ ಮನಸ್ಸಿನಿಂದ ಮರಳಿದೆ.

ಶ್ರೀರಾಮನಿಗೆ ಪ್ರಿಯವಾದ ನೈವೇದ್ಯವೆಂದರೆ ಪಾನಕ ಕೋಸಂಬರಿ, ನನಗೂ ಸಹಾ !. ಆದರೆ ಯಾವುದನ್ನೂ ಮೂಸದೆ, ರುಚಿ ನೋಡದೆ ಮಾಡಬೇಕಲ್ಲವಾ. ಕೋಸುಂಬರಿಗೆ ಹೆಸರುಬೇಳೆಯನ್ನು ನೆನೆಹಾಕಿದ ನಂತರ ಇನ್ನುಳಿದ ಕೆಲಸಗಳು. ಪಾನಕಕ್ಕೆ ಬೆಲ್ಲವನ್ನು ಜಜ್ಜಿ, ಜೊತೆಗೆ ಒಣ ಶುಂಠಿ ಮತ್ತು ಏಲಕ್ಕಿಗಳನ್ನು ಬೆರಸಿ, ನಿಂಬೆ ನೀರಿನಲ್ಲಿ ಚೆನ್ನಾಗಿ ಗೂರಾಡಿ, ಮೇಲೊಂದಿಷ್ಟು ಪಚ್ಚಕರ್ಪೂರ ಮತ್ತು ತುಳಸೀದಳಗಳನ್ನು ಸೇರಿಸಿದರೆ ಪಾನಕ ಸಿಧ್ಧ. ಇನ್ನು ಕೋಸುಂಬರಿಗೆ ತೆಂಗಿನಕಾಯಿ ತುರಿಯೋದೇ ಒಂದು ಮುಖ್ಯ ಕೆಲಸ. ಹೆಸರುಬೇಳಯ ನೀರನ್ನು ಬಸಿದು ಕಾಯಿತುರಿ, ಉಪ್ಪು, ಸ್ವಲ್ಪ ನಿಂಬೆಹುಳಿ ಬೆರೆಸಿದರೆ ಮುಗಿದ ಹಾಗೇ. ಇದನ್ನೆಲ್ಲಾ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗುವ ಹೊತ್ತಿಗೆ ಅಲ್ಲಾಗಲೇ ಶ್ರೀರಾಮನ ಚಿನ್ನದ ಉತ್ಸವ ಮೂರ್ತಿಯನ್ನು ಬೆಳ್ಳಿಯ ತೊಟ್ಟಿಲಲ್ಲಿ ತೂಗುತ್ತಿದ್ದರು.
ತೂಗಿರೋ ರಾಮನ..ತೂಗಿರೋ ವ್ಯಾಸನಾ ತೂಗಿರೋ ವಿಠಲನ..
ಕಾಲಲಿ ಕಿರಿಗೆಜ್ಜೆ ಮ್ಯಾಲೆ ಪೊನ್ನೊಂದಿಗೆ..ಲೋಲಾಕ್ಷಿ ಸೀತೆಯವನಾಳಿದವನಾ….
ಶ್ರೀಪಾದರಾಯರ ಕೀರ್ತನೆಯನ್ನು ನಮ್ಮಮ್ಮನ ಜತೆ ದನಿಗೂಡಿಸಿದರು ಪುರಂದರದಾಸರ ಮಕ್ಕಳಾದ, ವರದ, ಗುರುರಾಯ ಮತ್ತು ಮಧ್ವಪತಿಗಳು. ಹಾಡುತ್ತಿದ್ದುದನ್ನು ಕೇಳುತ್ತಾ ಭಕ್ತಿರಸದಲ್ಲಿ ಮಿಂದು ಹೋಗಿದ್ದ ಭಕ್ತಗಣ.
ಎಂತಹ ಧಾರ್ಮಿಕ ಸಂಪತ್ತು ನಮ್ಮದು.. ಶ್ರೀಕೃಷ್ಣದೇವರಾಯರ ಸಾಮ್ರಾಜ್ಯದಲ್ಲಿ ರಾಮರಾಜ್ಯ ನೆಲಸಿದೆ. ಹಾಗೆ ನೋಡಿದರೆ ಹಂಪೆಗೂ ರಾಮಾಯಣಕ್ಕೂ ತುಂಬಾ ಹತ್ತಿರದ ಸಂಬಂಧ. ಸೀತೆಯನ್ನು ಹುಡುಕುತ್ತಾ ಬಂದ ರಾಮ ಲಕ್ಷ್ಮಣರಿಗೆ ಇಲ್ಲಿಯ ಕಿಷ್ಕಿಂದಿಯಲ್ಲಿ ಅದ್ದೂರಿಯಾಗಿ ಸ್ವಾಗತ ಸಿಗುತ್ತದೆ. ಅವರಿಗೆ ಭಕ್ತ ಹನುಮಂತನ ಮತ್ತು ಸುಗ್ರೀವರ ಪರಿಚಯವೂ ಆಗುತ್ತದೆ. ಶ್ರೀರಾಮನಂತಹಾ ಮರ್ಯಾದಾ ಪುರುಷೋತ್ತಮ ವಾಲಿಯನ್ನು ಬಂಡೆಗಳ ಹಿಂದೆ ಮರೆಯಾಗಿ ಬಾಣಬಿಟ್ಟು ಏಕೆ ಸಾಯಿಸಬೇಕಿತ್ತು ಎನ್ನುವ ಗೊಂದಲ ಕಾಡುತ್ತಿತ್ತು ಚಿಕ್ಕಂದಿನಲ್ಲಿ. ಅದಕ್ಕೆ ನಮ್ಮ ಗುರುಗಳು ಕೊಟ್ಟ ಉತ್ತರದಿಂದ ಸ್ವಲ್ಪ ಸಮಾಧಾನವಾಯಿತು. ವಾಲಿಗೆ ಒಂದು ವರ ದೊರತಿತ್ತಂತೆ. ಅದರ ಪ್ರಕಾರ ವಾಲಿಯ ಮೇಲೆ ಯುಧ್ಧ ಮಾಡಲು ಯಾರು ಎದುರು ನಿಲ್ಲುತ್ತಿರುತ್ತಾರೋ ಅವರ ಶಕ್ತಿಯೆಲ್ಲಾ ವಾಲಿಗೆ ಹರಿದು ಹೋಗುತ್ತಿತ್ತಂತೆ. ಹೀಗಾಗಿ ಶ್ರೀರಾಮ ಹಿಂದಿನಿಂದ ಬಾಣ ಪ್ರಯೋಗ ಮಾಡಿದರಂತೆ.

ಮುಂದೆ ಮಹಭಾರತದಲ್ಲಿ ವಾಲಿಯೇ ಅರ್ಜುನನಾಗಿ ಹುಟ್ಟಿ ಬರುವಂತೆ ವರ ಕೊಟ್ಟು ಧರ್ಮಪಾಲನೆ ಮಾಡಿದರಂತೆ. ಅಂದರೆ ಹಂಪೆಯ ಕೊಂಬೆ ಮಹಭಾರತಕ್ಕೂ ಹರಡಿತ್ತು.
ಮುಂದಿನ ಒಂಬತ್ತು ದಿನಗಳ ರಾಮನವಮಿಯ ಸಮಾರೋಹದ ಅನುಭವ ಮರೆಯಲಾಗದ ಅಧ್ಯಾಯ.
ಬೆಳಗ್ಗೆ ಹೋಮ ಹವನ, ದಿನಕ್ಕೊಂದು ವಿಷೇಶ ಪೂಜೆ. ಪ್ರಸಾದ ವಿತರಣೆ. ಸಂಜೆ ರಾಮಭಜನೆ, ವಿವಿಧ ಕಲಾವಿದರಿಂದ ಹಾಡುಗಾರಿಕೆ ಕೊನೆಯಲ್ಲಿ ಅನ್ನ ಸಂತರ್ಪಣೆ. ದೇಹದಣಿದು ಹೋಗುತ್ತಿತ್ತು ಆದರೆ ಮನಸ್ಸು ಉಲ್ಲಾಸದ ಬುಗ್ಗೆಯಾಗಿತ್ತು. ಹೀಗೆ ಹಲವಾರು ರಾಮನವಮಿಗಳು ಕಳೆದವು.
ಒಮ್ಮೆ ಉತ್ತರ ಭಾರತದ ಕಡೆಯಿಂದ ಬಂದ ಸಮಾಚಾರ ನಮ್ಮೆಲ್ಲರ ಜಂಘಾಬಲವನ್ನೇ ಅದಿರಿಸಿ ಬಿಟ್ಟಿತು..ರಾಮಜನ್ಮಭೂಮಿಯಾದ ಅಯೋಧ್ಯಯಲ್ಲಿ ಮುಘಲರ ಸೇನಾದಿಪತಿ ಮೀರ್ ಬಾಕಿ ಎನ್ನುವ ದುರುಳ ರಾಮಮಂದಿರವನ್ನೇ ಕೆಡವಿ ಅದರ ಮೇಲೆ ಮಸೀದಿಯೊಂದನ್ನು ಕಟ್ಟಿದ್ದಾನಂತೆ…ಅದಕ್ಕೆ ಬಾಬರನ ಮಸೀದಿಯೆಂದು ಕರೆಯುತ್ತಾರಂತೆ.
ರೋಷದಿಂದ ಕುದ್ದು ಹೋದರಂತೆ, ಈಗಲೇ ಹೋಗಿ ಅವನ ರುಂಡವನ್ನು ಚೆಂಡಾಡುತ್ತೇನೆ ಅನ್ನುತ್ತಿದ್ದರಂತೆ ಕೃಷ್ಣದೇವರಾಯರು..ಅವರ ಆರೋಗ್ಯ ಆಗಲೇ ಕ್ಷೀಣಿಸಿತ್ತಿತ್ತು..
ದಕ್ಷಿಣದಲ್ಲಿಯ ರಾಮರಾಜ್ಯವು ಕ್ಷೀಣಿಸುತ್ತಿದೆಯೇ…ಹೆದರಿಕೆಯಾಗುತ್ತಿದೆ.
- ವಿಂಗ್ ಕಮಾಂಡರ್ ಸುದರ್ಶನ – ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ
