ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಕಾಮನೆಗಳು

“ಕೃಷ್ಣಕವಿತೆಯೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಕಾಮನೆಗಳು…”

ಕೃಷ್ಣ ಎಂದರೆ.. ಬರಿಯ ಜಪನೆಯ ನಾಮವಷ್ಟೆ ಅಲ್ಲ. ಬದುಕಿನ ಬೆಳಕಿನ ಚೈತನ್ಯಧಾಮ. ಭಕ್ತಿಯ ತಪನೆಯಷ್ಟೆ ಅಲ್ಲ. ಹೃನ್ಮನಗಳಲ್ಲಿ ದಿವ್ಯ ಶಕ್ತಿಯ ಸಂಚಲನೆಯ ಅನುಭಾವ. ಕೃಷ್ಣ ಬ್ರಹ್ಮಾಂಡದ ಜೀವ ಜೀವನಗಳ ಸತ್ಯ ತತ್ವ ಸತ್ವ ತಿಳಿಸುವ ಭಗವದ್ಗೀತೆ ಬೋಧಿಸಿದ ಮಹಾನುಭಾವ. ಏನಂತೀರಾ.. ?” – ಪ್ರೀತಿಯಿಂದ ಎ.ಎನ್. ರಮೇಶ್. ಗುಬ್ಬಿ.

ಕೃಷ್ಣಾ ಎಂದರೆ……..

ದೈತ್ಯಕುಲ ಭೀಬತ್ಸ ಚಕ್ರಾಧೀಶ್ವರ ಕಂಸಾಸುರನಿಗೇ
ಜೀವನ ಪರ್ಯಂತ ನಡುಕ ಹುಟ್ಟಿಸಿದ ನಾಮ.!
ವಸುದೇವ ದೇವಕಿಯರ ಕಣ್ಣೀರಬಂಧನ ಕಳೆದು
ಬದುಕಿನ ಬೆಳಕು ಸ್ಫುರಿಸಿ ಉದ್ಧರಿಸಿದ ಕೃಪಾಧಾಮ.!

ಕಾಳಿಂಗ ಪೂತನಿ ಅಕ್ರೂರ ಕ್ರೂರಿ ರಕ್ಕಸರಿಗೇ
ಮರಣಶಾಸನವಿಟ್ಟು ದುಷ್ಟರ ಹುಟ್ಟಡಗಿಸಿದ ನಾಮ.!
ಗೋವಳನಾಗಿ ಗೋವರ್ಧನ ಗಿರಿಯೆತ್ತಿ ಹಿಡಿದು
ಶಿಷ್ಟರಕ್ಷಣೆ ದುಷ್ಟಾಂತಗಳ ಮೆರೆದ ದಯಾಧಾಮ.!

ನಂದಗೋಕುಲದ ಯಶೋದೆಯ ಮಡಿಲೊಳಗೆ
ಆಡಿ ಪಾಡಿ ಅಮಿತಾನಂದ ಹರಿಸಿದ ಮುದ್ದುನಾಮ.!
ಮುರುಳಿಗಾನದಿ ರಾಧೆಯ ಹೃನ್ಮನ ತಣಿಸಿ ನಿಂದು
ಒಲವಿನ ಕಾವ್ಯ ಅಮರವಾಗಿಸಿದ ಅನುರಾಗಧಾಮ.!

ಗಧೆ ಹಿಡಿದು ತೊಡೆತಟ್ಟಿ ಅಟ್ಟಹಾಸಗೈದ ಕೌರವನಿಗೆ
ನಿರಾಯುಧನಾಗಿ ವಿನಾಶದ ಮುನ್ನುಡಿ ಬರೆದ ನಾಮ.!
ನಂಬಿ ಬಂದ ಪಾಂಡವರ ಸಾರಥಿಯಾಗಿ ದುಡಿದು
ಲೋಕಕೆ ಭಕ್ತಸೇವೆಯ ನಿದರ್ಶನವಾದ ಕಾರುಣ್ಯಧಾಮ.!

ಉಡಿಯಲಿ ಹಿಡಿಯವಲಕ್ಕಿ ತಂದ ಮಿತ್ರ ಕುಚೇಲನಿಗೆ
ಅಷ್ಟೈಶ್ವರ್ಯ ನೀಡಿ ಸ್ನೇಹದ ಐಸಿರಿ ತೋರಿದ ನಾಮ
ಸಭೆಯಲ್ಲಿ ಅಕ್ಷಯಾಂಬರ, ಕಾಡಲ್ಲಿ ಅಕ್ಷಯಪಾತ್ರೆಯಿಟ್ಟು
ಅಡಿಗಡಿಗೂ ಅಬಲೆ ದ್ರೌಪದಿ ತಲೆಕಾಯ್ದ ಆಶ್ರಯಧಾಮ.!

ಕೃಷ್ಣಾ ಎಂದರೆ ಬರಿಯ ಹೆಸರಲ್ಲ ಜಗದ ಜೀವದುಸಿರು
ಅಣುರೇಣು ತೃಣಕಾಷ್ಟಗಳ ಆವರಿಸಿರುವ ಚಿನ್ಮಯನಾಮ
ಕೃಷ್ಣಾ ಎಂದರೆ ಕೇವಲ ನಾಮವಲ್ಲ ನಿಸರ್ಗದ ನಿಯಮ
ಸಮಸ್ತ ಚರಾಚರಗಳ ಪೊರೆವ ನಿತ್ಯ ಸತ್ಯ ಚೈತನ್ಯಧಾಮ.!


  • ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW